Sunday, November 16, 2008

ಉಗ್ರತೆ-ವಿಕಾರತೆ

ಮುಸ್ಲಿಂ ಉಗ್ರರ ಬಗ್ಗೆ ಭೂಮ್ಯಾಕಾಶ ಬಿರಿಯುವಂತೆ ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯ ಬಾಯಿ ಬಂದಾಗಿದೆ. ಬಿಜೆಪಿ ಪರಿವಾರದ ಆರೆಸ್ಸೆಸ್‌, ಸಂಘಪರಿವಾರ, ಎಬಿವಿಪಿ ಕಾರ್ಯಕರ್ತರು ಬಾಂಬ್‌ಸ್ಪೋಟದಂತಹ ವಿಧ್ವಂಸಕ ಕೃತ್ಯಗಳಲ್ಲಿ ಮೇಲಿಂದ ಮೇಲೆ ಬಂಧಿತರಾಗುತ್ತಿರುವುದು ಉಗ್ರತೆಯ ಹಲವು ಮುಖಗಳನ್ನು ಬಯಲುಗೊಳಿಸಿದೆ.
ದೇಶದ್ರೋಹಿಗಳಾದ ಮುಸ್ಲಿಮ್‌ ಉಗ್ರರು ಪ್ರಮುಖ ನಗರಗಳಲ್ಲಿ ಬಾಂಬ್‌ಸ್ಪೋಟಿಸುವ ಮೂಲಕ ವಿಧ್ವಂಸಕ ಕೃತ್ಯ ನಡೆಸುತ್ತಿದ್ದಾರೆ. ದೇಶದ ಸೌಹಾರ್ದತೆ, ಶಾಂತಿ, ನೆಮ್ಮದಿಗೆ ಭಂಗ ತರುತ್ತಿದ್ದಾರೆ. ಕೋಮುಗಲಭೆಗೆ ಕಾರಣರಾಗುತ್ತಿದ್ದಾರೆಂದು ಬಿಜೆಪಿ ಬೊಬ್ಬಿರಿಯುತ್ತಿತ್ತು. ಇವರನ್ನು ನಿಯಂತ್ರಿಸದ ಕೇಂದ್ರ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅಡ್ವಾಣಿ, ರಾಜನಾಥಸಿಂಗ್‌, ವೆಂಕಯ್ಯನಾಯ್ಡು ಎಲ್ಲರೂ ಹೇಳುತ್ತಿದ್ದರು. ಕರ್ನಾಟಕದ ವಿಧಾನಸಭೆ ಚುನಾವಣೆ ಹಾಗೂ ಈಗ ಆರು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಇದನ್ನೇ ಅಸ್ತ್ರವಾಗಿಸಲು ಬಿಜೆಪಿ ಹೊಂಚು ಹಾಕಿತ್ತು.
ಆದರೆ ಈಗ ಎಲ್ಲರ ಮುಖವಾಡವೂ ಬಯಲಾಗಿದೆ. ಮುಸ್ಲಿಂ ಉಗ್ರರಷ್ಟೇ ಆರೆಸ್ಸೆಸ್‌ ಪ್ರೇರಿತ ಉಗ್ರರೂ ಸಮಬಲದಲ್ಲಿ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಇತ್ತೀಚಿಗೆ ನಡೆದ ಬಂಧನ, ವಿಚಾರಣೆಗಳು ಬಹಿರಂಗಗೊಳಿಸಿವೆ.
ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ಮಸೀದಿ ಬಳಿ 2006ರಲ್ಲಿ ನಡೆದ ಸ್ಪೋಟದಲ್ಲಿ 38 ಜನ ಸಾವುಕಂಡಿದ್ದರು. ಅದರ ಜಾಡು ಹಿಡಿದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದಳದ ಸಿಬ್ಬಂದಿ ಮೊದಲು ಸಾಧ್ವಿ ಪ್ರಗ್ಯಾಳನ್ನು ಬಂಧಿಸಿದರು. ಅದರ ಬೆನ್ನಲ್ಲೆ ಕರ್ನಲ್‌ ಶ್ರೀಕಾಂತ್‌ ಪುರೋಹಿತ್‌ ಹಾಗೂ ಮಠಾಧೀಶ ಸುಧಾಕರ ದ್ವಿವೇದಿಯನ್ನು ಬಂಧಿಸಲಾಗಿದೆ. ಈ ಸಂಬಂಧ 25ಕ್ಕೂ ಹೆಚ್ಚು ಬಂಧನಗಳು ನಡೆದಿವೆ.
ಮಾಲೇಗಾಂವ್‌ನಲ್ಲಿ ಬಾಂಬ್‌ಸ್ಪೋಟಿಸಿ ಕೋಮುಗಲಭೆ ಹುಟ್ಟು ಹಾಕುವುದು ಇವರ ಆಶಯವಾಗಿತ್ತೆಂದು ಪ್ರಾಥಮಿಕ ತನಿಖೆ ಹೇಳಿದೆ. ಅಲ್ಲಿಗೆ ಮುಸ್ಲಿಮ್‌ ಉಗ್ರರು ಮಾಡುತ್ತಿದ್ದ ದೇಶದ್ರೋಹಿ ಕೃತ್ಯದಲ್ಲಿ ತಾನು ಭಾಗಿಯೆಂದು ಸಂಘಪರಿವಾರ ತೋರಿಸಿಕೊಟ್ಟಿದೆ. ಇದರ ಜತೆಗೆ ನಾಂದೇಡ್‌ನಲ್ಲಿ ಬಾಂಬ್‌ ತಯಾರಿಸುವಾಗ ಆರೆಸ್ಸೆಸ್‌ ಕಾರ್ಯಕರ್ತ ಸಾವನ್ನಪ್ಪಿದ್ದು ಬಯಲಾಗಿದೆ. ಹಾಗೆಯೇ ತಮಿಳುನಾಡಿನ ತಲಚೇರಿಯಲ್ಲಿ ಪ್ರದೀಪ, ದಿಲೀಪ ಎಂಬ ಆರೆಸ್ಸೆಸ್‌ ಕಾರ್ಯಕರ್ತರು ಕಳೆದವಾರವಷ್ಟೇ ಬಾಂಬ್‌ ತಯಾರಿಕೆಯಲ್ಲಿ ನಿರತರಾಗಿರುವಾಗ ಸಾವು ಕಂಡಿದ್ದಾರೆ.
ಮುಸ್ಲಿಮ್‌ ಉಗ್ರರು, ನಕ್ಸಲೀಯರು ಬಾಂಬ್‌ ತಯಾರಿಸಿ, ಸ್ಪೋಟಿಸುತ್ತಾರೆಂದು ಆಪಾದನೆಗಳ ಸುರಿಮಳೆಗೈಯುತ್ತಿದ್ದ ಬಿಜೆಪಿ ಈಗ ಯಾವ ರೀತಿ ಇದಕ್ಕೆ ಪ್ರತಿಕ್ರಿಯಿಸುತ್ತದೆ. ಇವರ್ಯಾರು ತಮಗೆ ಸಂಬಂಧಪಟ್ಟವರಲ್ಲ, ತಮ್ಮ ಸಂಘಟನೆಗೂ ಈ ಘಟನೆಗಳಿಗೂ ಸಂಬಂಧವಿಲ್ಲವೆಂದು ರಾಜನಾಥ್‌ಸಿಂಗ್‌ ಹೇಳಿದ್ದಾರೆ. ವಿವಿಧ ಸಂಘಪರಿವಾರದ ನಾಯಕರು ಇದನ್ನೇ ಪ್ರತಿಪಾದಿಸಿದ್ದಾರೆ.
ಆದರೆ ಸಾದ್ವಿ ಪ್ರಗ್ಯಾ ಸಿಂಗ್‌ ಠಾಕೂರ್‌ ಎಬಿವಿಪಿ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾಕೆ. ಹಿಂದಿನ ಲೋಕಸಭೆ ಚುನಾವಣೆಯಲ್ಲಿ, ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ರಾಜನಾಥ್‌ಸಿಂಗ್‌, ನರೇಂದ್ರಮೋದಿ ಜತೆ ವೇದಿಕೆಯಲ್ಲಿ ಕಾಣಿಸಿಕೊಂಡವಳು. ಮುಸ್ಲಿಮರ ಬಗ್ಗೆ ಭಾಷಣ ಬಿಗಿದು ಭರ್ಜರಿ ಚಪ್ಪಾಳೆ ಗಿಟ್ಟಿಸಿದವಳು. ಇದನ್ನೆಲ್ಲಾ ಸಿ ಎನ್‌ ಎನ್‌ ಐಬಿ ಎನ್‌ ಟಿ.ವಿ. ದಾಖಲೆ ಸಹಿತ ಪ್ರದರ್ಶಿಸಿದೆ.
ದೆಹಲಿಯ ಜಾಮಿಯಾ ಮಿಲಿಯಾ ವಿ.ವಿ.ಯ ವಿದ್ಯಾರ್ಥಿಗಳನ್ನು ಅನವಶ್ಯಕವಾಗಿ ಭಯೋತ್ಪಾದಕರೆಂದು ಬಣ್ಣಿಸಿ, ಅವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವ( ಅವರು ಮುಸ್ಲಿಮರೆಂಬ ಏಕೈಕ ಕಾರಣಕ್ಕೆ) ಬಿಜೆಪಿ ಪ್ರಗ್ಯಾ ಬಗ್ಗೆ ಏನು ಹೇಳುತ್ತದೆ. ತಲಚೇರಿ, ನಾಂದೇಡ್‌ ಪ್ರಕರಣಗಳ ಬಗ್ಗೆ ಯಾಕೆ ಮಾತನಾಡುವುದಿಲ್ಲ.
ಈ ಘಟನೆಯ ಹಿಂದೆ ಸಾವರ್ಕರ್‌ ಸೊಸೆ ಹಿಮಾಂಶು ಸಾವರ್ಕರ್‌ ಸ್ಥಾಪಿತ ಅಭಿನವ ಭಾರತ ಇರುವುದು ಪತ್ತೆಯಾಗಿದೆ. ಸೇನೆಯಲ್ಲಿದ್ದ ಕರ್ನಲ್‌ ಶ್ರೀಕಾಂತ್‌ ಪುರೋಹಿತ್‌, ಅಭಿನವ ಭಾರತದ ಸಭೆಗಳಲ್ಲಿ ಪಾಲ್ಗೊಂಡು ಬಜರಂಗದಳ, ಆರೆಸ್ಸೆಸ್‌ ಕಾರ್ಯಕರ್ತರಿಗೆ ಉಪನ್ಯಾಸ ನೀಡುತ್ತಿದ್ದನೆಂಬುದು ಬಯಲಾಗಿದೆ. ಆತನ ಲ್ಯಾಪ್‌ಟಾಪ್‌ ಕೂಡ ಪೊಲೀಸರ ವಶವಾಗಿದ್ದು, ಮಾಲೇಗಾಂವ್‌ ಸ್ಪೋಟದ ರೂವಾರಿ ಈತ ಎಂಬುದು ಈಗ ಮೇಲ್ನೋಟಕ್ಕೆ ಕಂಡು ಬಂದಿರುವ ಸತ್ಯ. ಗಡ್ಡಧಾರಿ ಮುಸ್ಲಿಮರು ಮಾತ್ರ ಭಯೋತ್ಪಾದಕರಲ್ಲ, ಕಾವಿ ಬಟ್ಟೆ ಧರಿಸಿ, ಸಂನ್ಯಾಸಿ ವೇಷ ಧರಿಸಿದ ಭಯೋತ್ಪಾದಕರು ಇದ್ದಾರೆಂಬುದನ್ನು ಇತ್ತೀಚಿನ ಪ್ರಕರಣಗಳು ಬಯಲು ಮಾಡಿವೆ. ಸಾಧ್ವಿ ಪ್ರಗ್ಯಾ ಹಾಗೂ ಮಠಾಧೀಶ ಸುಧಾಕರ ದ್ವಿವೇದಿಯರ ಬಂಧನ ಇದಕ್ಕೆ ಸಾಕ್ಷಿಯಾಗಿದೆ.
ಹಿಂದೂಧರ್ಮದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಶಾಂತಿಯುತ ಮಾರ್ಗಗಳಿಂದ ತಡೆಯಲಾಗದೆಂಬ ಹತಾಶೆಯಲ್ಲಿ ಇವರು ಭಯೋತ್ಪಾದನೆಗೆ ಇಳಿದಿದ್ದಾರೆಂದು ಕೆಲವರು ಸಮರ್ಥಿಸುತ್ತಿದ್ದಾರೆ. ಆದರೆ ಮುಸ್ಲಿಮ್‌ ಭಯೋತ್ಪಾದನೆಗೂ ಹೀಗೆ ಸಮರ್ಥನೆ ನೀಡಬಹುದು. ಬಾಬರಿ ಮಸೀದಿ, ಮುಂಬೈ ಸ್ಪೋಟ, ಗುಜರಾತ್‌ ಮಾರಣಹೋಮ ಹೀಗೆ ಸಾಲು ಸಾಲು ಹಿಂಸೆಯಿಂದ ನಲುಗಿದ ಮುಸ್ಲಿಮ್‌ ಯುವಕರು ಹತಾಶೆಯಿಂದ ಭಯೋತ್ಪಾದನೆಗೆ ಇಳಿದಿದ್ದಾರೆಂದು ಮತ್ತೊಂದು ವರ್ಗ ಪ್ರತಿಪಾದಿಸುತ್ತದೆ.
ದೇಶದ್ರೋಹ:
ಆದರೆ ಯಾವುದೇ ಭಯೋತ್ಪಾದನೆಯೂ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಅದೊಂದು ದೇಶದ್ರೋಹದ ಕೃತ್ಯ. ವ್ಯವಸ್ಥೆಯ ಹಿಂಸೆಯಿಲ್ಲದೇ ವ್ಯವಸ್ಥಿತವಾಗಿ ಹಿಂಸಾಕೃತ್ಯ ಆಯೋಜಿಸುವುದು, ನಡೆಸುವುದು ಅಪರಾಧ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ. ಸಂವಿಧಾನದ ಹಾಗೂ ಪ್ರಜಾತಂತ್ರದ ಆಶಯಕ್ಕೆ ಸಂಪೂರ್ಣ ವಿರೋಧ.
ಇದನ್ನು ಯಾರೇ ಮಾಡಿದರೂ ಒಕ್ಕೊರಲ ಖಂಡನೆ ಮೂಡಿ ಬರಬೇಕಾಗಿದೆ. ಮುಸ್ಲಿಮರು ಮಾಡಿದಾಗ ಒಂದು, ಹಿಂದುಗಳು ಮಾಡಿದಾಗ ಮತ್ತೊಂದೆಂಬ ಭಾವನೆಯೇ ಭಯೋತ್ಪಾದನೆ ಹಬ್ಬಲು, ಅದು ರಾಕ್ಷಸೀರೂಪದಲ್ಲಿ ಬೆಳೆಯಲು ಕಾರಣವಾಗುತ್ತದೆ. ಈಗ ದೇಶದಲ್ಲಿ ನಡೆದಿರುವುದು ಇದೆ.
ಅಹಮದಾಬಾದ್‌, ಬೆಂಗಳೂರು, ದೆಹಲಿ ಮತ್ತಿತರ ಕಡೆ ನಡೆಯವ ಭಯೋತ್ಪಾದನೆಯನ್ನು ಖಂಡಿಸುವವರು ಗುಜರಾತ್‌ನಲ್ಲಿ ನಡೆದ ನರಮೇಧ, ಇತ್ತೀಚಿಗೆ ಒರಿಸ್ಸಾದಲ್ಲಿ ನಡೆದ ಬರ್ಬರ ಹಿಂಸೆ, ಕರ್ನಾಟಕದಲ್ಲಿ ಕ್ರೈಸ್ತರ ಮೇಲಿನ ದಾಳಿಗಳಿಗೆ ಕಾರಣ ಹುಡುಕುತ್ತಾರೆ. ಅದು ಯಾಕೆ ಆಗಿದೆ ಎಂದು ವಿವರಣೆ ನೀಡಲು ಮುಂದಾಗುತ್ತಾರೆ. ಅದು ಖಂಡನೀಯವೆಂಬ ಘೋಷಣೆ ಕೇಳುವುದಕ್ಕಿಂತ ಆಂತರ್ಯದಲ್ಲಿ ಅದರ ಸಮರ್ಥನೆಯೇ ಗಟ್ಟಿಯಾಗಿ ಪ್ರತಿಧ್ವನಿಸುತ್ತಿರುತ್ತದೆ.
ರಾಜಕಾರಣಿಗಳು ಹೋಗಲಿ, ಭೈರಪ್ಪ, ಚಿದಾನಂದಮೂರ್ತಿ, ಸುಮತೀಂದ್ರನಾಡಿಗರಂತಹ ಸೂಕ್ಷ್ಮ ಮನಸ್ಸಿನ ಸಾಹಿತಿಗಳು ಹೀಗೆ ಮಾತಾಡುವುದು ನಾಚಿಕೆಗೇಡು. ಮುತ್ಸದ್ದಿ ಎಂದು ಕರೆಸಿಕೊಂಡ, ರಾಜಕಾರಣಿಗಳಿಗೆ ನೀತಿ ಸಂಹಿತೆ ಬೋಧಿಸುವ ರಾಮಾಜೋಯಿಸ್‌ರಂತಹವರು ಇದರ ಬೆನ್ನಿಗೆ ನಿಲ್ಲುವುದು ಅಸಹ್ಯ.
ಯಾಕೆ ಭಯೋತ್ಪಾದನೆ:
ಭಯೋತ್ಪಾದನೆ ಹಿಂದೆ ಎರಡು ಕಾರಣಗಳಿವೆ. ಒಂದು ಇದೊಂದು ಮನೋವಿಕಲ್ಪ. ಉಗ್ರತೆಯಲ್ಲಿ ವಿಕಾರತೆ. ಇನ್ನೊಬ್ಬರು ಹಿಂಸೆಯಿಂದ ಒದ್ದಾಡುತ್ತಾ ಸಾಯಲೂ ಆಗದೇ ಬದುಕಲೂ ಆಗದೇ ಇರುವ ಸ್ಥಿತಿಯನ್ನು ನೋಡಿ ಸಂಭ್ರಮಿಸುವುದು ಇಂತಹವರ ದುಶ್ಚಟ. ಇದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ. ಹಿಂಸಾಮೋಹಿಗಳು, ಹಿಂಸೆಯನ್ನು ವಿೃಂಭಿಸಿ, ಆನಂದಿಸುವ ವಿಕಾರಿಗಳು ಇವರು. ಈಗ ನಡೆಯುತ್ತಿರುವ ಎಲ್ಲಾ ರೀತಿಯ ಭಯೋತ್ಪಾದನೆಯ ಹಿಂದೆ ಇರುವುದು ಇದೆ.
ಇನ್ನೊಂದು ತಮ್ಮ ಅಧಿಕಾರ ಸ್ಥಾಪಿಸುವ ಭಯೋತ್ಪಾದನೆ. ಹಿಜ್ಬುಲ್‌ ಮುಜಾಹಿದ್ದೀನ್‌, ತಾಲಿಬಾನ್‌, ಆರೆಸ್ಸೆಸ್‌, ಬಜರಂಗದಳ, ಶಿವಸೇನೆಯ ಹಿಂಸಾ ಮಾರ್ಗಗಳು.
ಇಲ್ಲಿ ತಮ್ಮ ಅಧಿಕಾರ ಸ್ಥಾಪಿಸುವುದೇ ಭಯೋತ್ಪಾದನೆಗೆ ಕಾರಣ. ಹಿಂಸೆಯನ್ನು ಹುಟ್ಟಿಸುವ ಮೂಲಕ ಅಧಿಕಾರವನ್ನು ಹಡೆಯಬಹುದೆಂಬುದು ಇವರ ಭ್ರಮೆ. ಗುಜರಾತ್‌ನಲ್ಲಿ ನಡೆದ ಹಿಂಸೆಯ ಮೇಲೆಯೇ ಮೋದಿ ಅಧಿಕಾರ ಸ್ಥಾಪಿಸಿದರು. ಜನಾಂಗೀಯ ದ್ವೇಷದ ಅಮಲನ್ನು ಹುಟ್ಟಿಸಿ, ತಮ್ಮ ಶ್ರೇಷ್ಠತೆಯನ್ನು ಪ್ರಜ್ವಲಿಸಿ ಅಧಿಕಾರ ಸ್ಥಾಪನೆ ಇದರ ಗುರಿ. ಇತಿಹಾಸದಲ್ಲಿ ಹಿಟ್ಲರ್‌, ಮುಸಲೋನಿಯಂತ ಫ್ಯಾಸಿಸ್ಟರು ಮಾಡಿದ್ದು ಇದನ್ನೆ.
ನಕ್ಸಲೀಯರು ಹಿಂಸೆಯನ್ನು ಪ್ರತಿಪಾದಿಸುತ್ತಾರಾದರೂ ಅದು ಜನಾಂಗೀಯ, ಧರ್ಮದ ಹಿಂಸೆಯಲ್ಲ. ಅವರ ಹಿಂಸೆಗೆ ಒಂದು ಮಟ್ಟಿಗಿನ ತಾತ್ವಿಕತೆಯಿದೆ. ಪ್ರಭುತ್ವದ(ಸರ್ಕಾರ- ಭೂಮಾಲೀಕರು) ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರವಿದೆ. ಪ್ರಜಾಸತ್ತಾತ್ಮಕ, ಸರ್ವಸಮಾನತೆಯ, ಕ್ರಾಂತಿಕಾರಿ ಸಮಾಜ ಸ್ಥಾಪಿಸಲು ಮುಂದಾಗುವ ಹೋರಾಟಗಾರರನ್ನು ಸರ್ಕಾರ ಬಗ್ಗು ಬಡಿಯಲು ಮುಂದಾಗುತ್ತದೆ. ಇಂತಹ ಸರ್ಕಾರವನ್ನು ತೊಲಗಿಸಿ, ಜನರ ಸರ್ಕಾರ ಸ್ಥಾಪಿಸಲು ಸುದೀರ್ಘ ಪ್ರಜಾ ಸಮರ ಮಾಡಬೇಕು. ಆತ್ಮರಕ್ಷಣೆ ಹಾಗೂ ಜನಾಧಿಕಾರ ಸ್ಥಾಪನೆಗೆ ಅಗತ್ಯವಾದಷ್ಟು ಹಿಂಸೆ ಅಗತ್ಯ ಎಂದು ಇವರು ಹೇಳುತ್ತಾರೆ. ಬಡವರ, ದಲಿತರ, ಭೂಮಿ- ಅನ್ನವಿಲ್ಲದವರ ಪರವಾದ ಹೋರಾಟದಲ್ಲಿ ಹೊಸ ವ್ಯವಸ್ಥೆಯ ಸ್ಥಾಪನೆಯ ಅನಿವಾರ್ಯ ಹಿಂಸೆ ಎಂದು ಹೇಳುತ್ತಾರೆ. ಇವರ ಹಿಂಸೆಯ ಮಾರ್ಗವೂ ಒಪ್ಪತಕ್ಕದ್ದಾಗಲಿ, ಬೆಂಬಲಿಸ ತಕ್ಕದ್ದಾಗಲಿ ಅಲ್ಲ. ಈ ಹಿಂಸೆಯೂ ಕೂಡ ಅಧಿಕಾರ ಸ್ಥಾಪನೆಯ ಉದ್ದೇಶದಿಂದ ಹುಟ್ಟಿದ್ದೆ ಆಗಿದೆ. ಆದರೆ ಇವೆಲ್ಲವನ್ನೂ ಪ್ರತ್ಯೇಕಿಸಿ ನೋಡುವ ಅಗತ್ಯವಿದೆ. ಹಾಗೆಯೇ ಎಲ್ಲಾ ವಿಧದ ಹಿಂಸೆಯನ್ನು ಖಂಡಿಸಬೇಕಾದ ಪರಿಸ್ಥಿತಿಯೂ ಇದೆ.
ಒಟ್ಟಿನಲ್ಲಿ ಹಿಂಸೆಯೆಂಬ ಮನೋವಿಕಾರವನ್ನು ಬದಲಿಸಿ, ಶಾಂತಿ- ಸಹಬಾಳ್ವೆಯತ್ತ ಸಮಾಜವನ್ನು ಮುನ್ನಡೆಸುವುದು ಎಲ್ಲರ ಕರ್ತವ್ಯ. ಪರಸ್ಪರರ ಮೇಲೆ ಗೂಬೆ ಕೂರಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳನ್ನು ದೂರವಿಟ್ಟು, ಶಾಂತಿ ಸಹನೆ ಸಮಾಜ ಎಲ್ಲರ ಗುರಿಯಾಗಬೇಕಿದೆ. ಎಲ್ಲಾ ಬಗೆಯ ಹಿಂಸೆಯ ಬೆಂಬಲಿಸುವವರ ಮನಃಪರಿವರ್ತನೆಯಿಂದ ಮಾತ್ರ ಇದು ಸಾಧ್ಯ.

1 comment:

Anonymous said...

ಸಾರ್‌, ನಿಮ್ಮ ರಾಜ­ಕೀಯ, ಸ್ತ್ರೀವಾದ, ಏಡ್ಸು, ಮತಾಂ­ಧತೆ ಮತ್ತಿ­ತರ ಪುರಾ­ಣ­ಗ­ಳೆಲ್ಲ ಏಕೆ? ನಮಗೆ ನಿಮ್ಮೊ­ಳ­ಗಿನ ಕತೆ­ಗಾರ ಬೇಕು. ಅದೇ ಇದು­ವ­ರೆಗೆ ಬರೆ­ದಿ­ರುವ ಕೆಲ­ವಲ್ಲಿ ಒಂದ­ನಾ­ದರೂ ಹಾಕಿ ಬಾಸ್‌. ಅದೇ ರಾಜ­ಕೀಯ, ಅದೇ ವಾದ-ವಿ­ವಾದ, ಅಂಧ-ಮ­ತಾಂಧ ಓದಿ ಸಾಕಾ­ಗಿದೆ. ಇನ್ನಾ­ದರೂ ಅದ­ನ್ನೆಲ್ಲ ಬಿಟ್ಟು ಒಂದಷ್ಟು ಬೇರೆ ರೀತಿಯ ಲೇಖ­ನ­ಗ­ಳತ್ತ ಗಮನ ಹರಿಸಿ ಸಾರ್‌. ಅಂದ ಹಾಗೆ ನಿಮ್ಮ ಕತೆ­ಗ­ಳನ್ನ ಯಾವಾಗ ಬ್ಲಾಗ್‌­ನಲ್ಲಿ ಹಾಕ್ತಿರಿ ತಿಳಿಸಿ ಸಾರ್‌.