Monday, February 16, 2009

ಆಚಾತುರ್ಯ ಆಚಾರ್ಯ

ರಾಜ್ಯದ ಗೃಹಸಚಿವ ಹೆಸರಿಗಷ್ಟೇ ಆಚಾರ್ಯರು. ಮಾಡುವುದು ಪೂರ್ತಿ ಅವಿವೇಕದ ಕೆಲಸ. ಅವರ ಪೂರ್ತಿ ಹೆಸರು ವೇದವ್ಯಾಸ ಶ್ರೀನಿವಾಸ ಆಚಾರ್ಯ. ಗೃಹಸಚಿವ ಪದವಿ ಅಲಂಕರಿಸಿದ ಮೇಲೆ ತಮ್ಮ ಯಡವಟ್ಟು ಮಾತುಗಳು, ತಿಕ್ಕಲುತನದ ವರ್ತನೆಗಳಿಂದ `ಮುತ್ಸದ್ದಿ' ಎಂಬ ಪದಕ್ಕೆ ಕಳಂಕ ತಂದವರು.
ಯಡಿಯೂರಪ್ಪ ಸರ್ಕಾರದಲ್ಲಿ ಎರಡನೇ ಪರಮೋಚ್ಚ ಅಧಿಕಾರ ಅನುಭವಿಸುತ್ತಿರುವವರು ಸನ್ಮಾನ್ಯ ವಿ.ಎಸ್‌. ಆಚಾರ್ಯ. ಆದರೆ ಅಧಿಕಾರ ಚಲಾವಣೆಯಲ್ಲಿ ಅಷ್ಟೇ ಬುರ್ನಾಸು. ಕೇವಲ ವಿವಾದಸ್ಪದ ಮಾತುಗಾರಿಕೆಗಷ್ಟೇ ಅವರ ಅಧಿಕಾರ ಸೀಮಿತ. ನಿಜಾಧಿಕಾರ ನಡೆಸುತ್ತಿರುವವರು ಮುಖ್ಯಮಂತ್ರಿ ಪುತ್ರ ವಿಜಯೇಂದ್ರ. ಹಾಗಾಗಿಯೇ ಆಚಾರ್ಯ ಅಚಾತುರ್ಯದ ವರ್ತನೆ ಹೊರಗೆಡಹುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪದೇಪದೇ ಇಕ್ಕಟ್ಟಿಗೆ ಸಿಲುಕಿಸುತ್ತಾರೆ.
ತಮ್ಮದೇ ಕ್ಷೇತ್ರದ ಶಾಸಕ ರಘುಪತಿಭಟ್‌ರ ಪತ್ನಿ ಆತ್ಮ`ಹತ್ಯೆ' ಪ್ರಕರಣದಲ್ಲಿ ಅವರ ನಡೆದುಕೊಂಡ ರೀತಿ ಜವಾಬ್ದಾರಿಯುತ ಹುದ್ದೆಗೆ ಮಾಡಿದ ಅಪಮಾನ. ಅಧಿಕಾರದ ಹೊಸದರಲ್ಲಿ ಹಾಗೆ ಮಾತನಾಡಿದರು ಎಂದು ಜನತೆ ಕ್ಷಮಿಸಿದರು. ಮತಾಂತರ, ಚರ್ಚ್‌ಗಳ ಮೇಲೆ ದಾಳಿ, ಪಬ್‌ಮೇಲೆ ದಾಳಿ, ರೈತರ ಕಗ್ಗೊಲೆ ಹೀಗೆ ರಾಜ್ಯದಲ್ಲಿ ಸರಣಿ ಕೃತ್ಯಗಳು ಮೇಲಿಂದ ಮೇಲೆ ನಡೆಯತೊಡಗಿದಾಗ ಆಚಾರ್ಯರ ನಿಜಬಣ್ಣ ಬಯಲಾಯಿತು. ಅವರ `ಶಕ್ತಿ'ಯ ಮೇಲೆ ಸಂಶಯ ಮೂಡತೊಡಗಿತು.
ಮೂರುವರೆ ದಶಕಗಳ ಕಾಲ ವಿಧಾನಪರಿಷತ್‌ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ ಸದನದಲ್ಲಿ ನಡೆಸಿದ ವಾದವಿವಾದಗಳು ಅವರ ಗಂಟಲಿಂದ ಬಂದಿದ್ದವೇ ಎಂದು ಅನುಮಾನ ಪಡುವಷ್ಟು ಆಚಾರ್ಯರು ಎಡಬಿಡಂಗಿಯಾಗಿ ಮಾತಾಡತೊಡಗಿದ್ದರು. ಅವೆಲ್ಲವನ್ನೂ ಜನ ಕ್ಷಮಿಸಿದರು. ಅರವತ್ತರ ಅರಳುಮರುಳು ಎಂದು ಸುಮ್ಮನಾದರು. ಗುಬಾಡ್‌ ಗೃಹಸಚಿವ ಎಂದು ಬೈದು ಸಮಾಧಾನಪಟ್ಟುಕೊಂಡರು.
ಆದರೆ. . .
ಮಾಧ್ಯಮಗಳ ನಿಯಂತ್ರಣಕ್ಕೆ `ಓಂಬುಡ್ಸ್‌ಮನ್‌' ಅರ್ಥಾತ್‌ ಮಾಧ್ಯಮಾಧಿಕಾರಿ ನೇಮಕ ಕುರಿತು ಅವರು ಹರಿಯಬಿಟ್ಟ ಮಾತುಗಳು ಆಚಾರ್ಯರ ಎಳಸುತನವನ್ನು ಪ್ರದರ್ಶಿಸಿಬಿಟ್ಟಿತು. ಜತೆಗೆ ಸಂಘಪರಿವಾರದ ಫ್ಯಾಸಿಸಂ ಧೋರಣೆಗೆ ಕನ್ನಡಿಯನ್ನೂ ಹಿಡಿಯಿತು.
ಮೇಲ್ನೋಟಕ್ಕೆ ಎಳಸುತನದ ಮಾತುಗಾರಿಕೆ ಇದು ಎಂದೆನಿಸಿದರೂ ಅದರ ಆಳದಲ್ಲಿರುವುದು ಫ್ಯಾಸಿಸಂನ ಧೋರಣೆಯೇ. ಸರ್ವಾಧಿಕಾರದ ಮೊದಲ ಶತ್ರು ಎಂದರೆ ವಾಕ್‌ಸ್ವಾತಂತ್ರ್ಯ. ಇತಿಹಾಸದಲ್ಲಿ ಹಿಟ್ಲರ್‌, ಮುಸಲೋನಿ, ತಾಲಿಬಾನ್‌, ಪರ್ವೇಜ್‌ ಮುಷ್‌ರಫ್‌, ಇಂದಿರಾಗಾಂಧಿ ಎಲ್ಲರೂ ಮಾಡಿದ್ದು ಇದನ್ನೆ. ಮೊದಲು ಮಾಧ್ಯಮಗಳನ್ನು ಹದ್ದುಬಸ್ತಿನಲ್ಲಿಟ್ಟರೆ ತಮ್ಮ ನೆಲದಲ್ಲಿ ನಡೆಯವುದು ಹೊರಜಗತ್ತಿಗೆ ತಿಳಿಯುವುದಿಲ್ಲವೆಂಬ ಹುಂಬತನದಲ್ಲಿ ಎಲ್ಲಾ ಸರ್ವಾಧಿಕಾರಿಗಳು ವರ್ತಿಸುತ್ತಾರೆ. ಹಾಗೆಂದು ಅವರು ನಂಬಿರುತ್ತಾರೆ. ಹಾಗಂತ ಹಿಟ್ಲರ್‌ನಿಂದ ಇಂದಿರಾಗಾಂಧಿಯವರೆಗೆ ಎಲ್ಲಾ ಸರ್ವಾಧಿಕಾರಿಗಳು ಧೂರ್ತತನವನ್ನು ಮಾಡಿದ್ದಾರೆ. ಮೇಲ್ನೋಟಕ್ಕೆ ದಡ್ಡತನದ ವರ್ತನೆಯಂತೆ ಕಾಣಿಸುತ್ತಲೇ ಎಲ್ಲವನ್ನೂ ನಿಯಂತ್ರಿಸುವ, ನಿರ್ಬಂಧಿಸುವ ಕಠೋರ ಕಾನೂನನ್ನು ಜಾರಿಗೊಳಿಸುವ ಹುನ್ನಾರ ಇದರ ಹಿಂದಿರುತ್ತದೆ.
ಸ್ವಭಾವತಃ ಹಾಗೂ ಸೈದ್ಧಾಂತಿಕವಾಗಿ ಫ್ಯಾಸಿಸಂನ್ನು ಬೆಂಬಲಿಸುವ ಬಿಜೆಪಿ ಮತ್ತದರ ಪರಿವಾರದ ಸಂಘಟನೆಗಳು ತಮ್ಮ ಚರಿತ್ರೆಯುದ್ದಕ್ಕೂ ಸರ್ವಾಧಿಕಾರಿ ವರ್ತನೆಯನ್ನು ಪ್ರೋತ್ಸಾಹಿಸುತ್ತಲೇ ಬಂದಿವೆ. ಸಂಘಪರಿವಾರದ ಸಂವಿಧಾನವೆಂದೇ ಖ್ಯಾತವಾದ ಗೋಳ್ವಾಲ್ಕರ್‌ರ ಬಂಚ್‌ ಆಫ್‌ ಥಾಟ್ಸ್‌(ಚಿಂತನಗಂಗಾ)ನ ಮೂಲ ಆಶಯವೇ ಅದು. ಕಚ್ಚಿ ವಿಷಕಾರುವ ಹಾವನ್ನು ಕಂಡರೆ ಹಾಗೆಯೇ ಬಿಡು. ಆದರೆ ಕಮ್ಯುನಿಸ್ಟರು, ಮುಸ್ಲಿಂರು, ಕ್ರೈಸ್ತರನ್ನು ಕಂಡರೆ ಕೊಲ್ಲು ಎಂಬರ್ಥ ಮಾತುಗಳನ್ನು ಚಿಂತನಗಂಗಾ ಅನೂಚಾನವಾಗಿ ವಿವರಿಸುತ್ತದೆ. ಹಿಂದೂ ಮತಾಂಧರ ಅಧಿಕಾರವನ್ನು ಸ್ಥಾಪಿಸಿ, ಉಳಿದೆಲ್ಲಾ ಸಮುದಾಯಗಳನ್ನು ತುಳಿಯುವ ಸಂಚನ್ನು ಸಂಘಪರಿವಾರ ಹೊಂದಿದೆ. ಕೇಂದ್ರದಲ್ಲಿ ಒಮ್ಮೆ ಪೂರ್ಣ ಪ್ರಮಾಣದ ಅಧಿಕಾರವನ್ನು ಬಿಜೆಪಿ ಹಿಡಿದರೆ ಇವೆಲ್ಲಾ ಸತ್ಯವಾಗಲಿವೆ.
ತಮಗೆ ಸಹ್ಯವೆನಿಸದ್ದನ್ನು ನಾಶಗೊಳಿಸುವ, ತಮ್ಮ ಸಿದ್ಧಾಂತ ಒಪ್ಪದೇ ಇದ್ದವರನ್ನು ಹಲ್ಲೆ ನಡೆಸಿ ನಿರ್ಮೂಲನೆ ಮಾಡುವ, ತಮ್ಮದನ್ನೇ ಇನ್ನೊಬ್ಬರ ಮೇಲೆ ಹೇರುವ ಅಪ್ರಜಾಪ್ರಭುತ್ವವಾದಿ ವರ್ತನೆ ಸಂಘಪರಿವಾರದ್ದು. ಬಾಬರಿ ಮಸೀದಿ ಕೆಡವಿದ ಹಿಂದೆ, ಗುಜರಾತಿನ ನರಮೇಧ, ಜನಾಂಗೀಯ ದ್ವೇಷ, ಒರಿಸ್ಸಾದಲ್ಲಿ ಇಬ್ಬರು ಹಸುಮಕ್ಕಳ ಸಹಿತ ಪಾದ್ರಿ ಗ್ರಹಾಂಸ್ಟೈನ್‌ ಕೊಲೆ, ಹರ್ಯಾಣದ ಜಜ್ಜಾರ್‌ನಲ್ಲಿ ಸತ್ತ ದನದ ಮಾಂಸ ತಿಂದರೆಂಬ ಆರೋಪ ಹೊರಿಸಿ 7 ಜನ ದಲಿತರ ಚರ್ಮ ಸುಲಿತು ಕೊಲೆಗೈದದ್ದು, ಆದಿ ಉಡುಪಿಯಲ್ಲಿ ಗೋ ಸಾಗಿಸಿದರೆಂದು ಇಬ್ಬರು ಮುಸ್ಲಿಮರನ್ನು ಬೆತ್ತಲು ಗೊಳಿಸಿದ್ದು, ಇತ್ತೀಚೆಗೆ ಒರಿಸ್ಸಾದಲ್ಲಿ ಕ್ರೈಸ್ತ ಸಂನ್ಯಾಸಿನಿಯ ಮೇಲೆ ಸಾಮೂಹಿಕ ಅತ್ಯಾಚಾರ, ಜತೆಗೆ ನಡೆದ ಬರ್ಬರ ದಾಳಿ, ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ನಡೆದ ಸರಣಿ ದಾಳಿ, ಪಬ್‌ನಲ್ಲಿ ಯುವತಿಯರಿಗೆ ಹಿಗ್ಗಾಮುಗ್ಗಾ ಹೊಡೆದಿದ್ದು, ಕೇರಳದ ಶಾಸಕ ಪುತ್ರಿ ಮುಸ್ಲಿಮ್‌ ಸ್ನೇಹಿತನ ಜತೆಗೆ ಹೋಗುತ್ತಿದ್ದಳೆಂದು ಹಿಂಸಿಸಿದ್ದು. . . ಹೀಗೆ ಉದ್ದಕ್ಕೆ ಹೇಳುತ್ತಾ ಹೋಗಬಹುದು.
ಗೃಹಸಚಿವ ವಿ.ಎಸ್‌. ಆಚಾರ್ಯರು ಮಾಧ್ಯಮಾಧಿಕಾರಿ ನೇಮಿಸಬೇಕೆಂಬ ಹೇಳಿಕೆಯನ್ನು ಈ ಎಲ್ಲದನ್ನೂ ಹಿಂದಿಟ್ಟುಕೊಂಡು ನೋಡಬೇಕು. ಸಂಘಪರಿವಾರದ ಎಲ್ಲಾ ದುಷ್ಕೃತ್ಯಗಳು ಇಡೀ ಭಾರತಕ್ಕೆ, ಜಗತ್ತಿಗೆ ಗೊತ್ತಾಗಿದ್ದು ಮಾಧ್ಯಮಗಳ ಮೂಲಕವೇ. ಮಾಧ್ಯಮಗಳ ಧ್ವನಿಯಿಲ್ಲದಿದ್ದರೆ ಇವ್ಯಾವ ಅನಾಹುತಗಳು ವಿಶ್ವಕ್ಕೆ ಗೊತ್ತಾಗುತ್ತಿರಲಿಲ್ಲ. ಬಿಜೆಪಿ ಸರ್ಕಾರ ಸರ್ವಜನಾದರಣೀಯವಾಗಿ, ಜನರಿಗೆ ನೆಮ್ಮದಿ ಕೊಡುತ್ತಾ ಅಧಿಕಾರ ನಡೆಸುತ್ತಿದೆ ಎಂದು ಎಲ್ಲರೂ ನಂಬುತ್ತಿದ್ದರು.
ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೋಕಾಲ್ಡ್‌ ಸಂಘಪರಿವಾರದ ಸಂಘಟನೆಗಳು ನಡೆಸುತ್ತಿರುವ ದುಷ್ಟತನಗಳು ಇಡೀ ಜಗತ್ತಿಗೆ ಗೊತ್ತಾಗಿ, ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಿವೆ. ಮಾಧ್ಯಮಗಳ ಗಂಟಲನ್ನೇ ಕಟ್ಟಿ ಬಿಟ್ಟರೆ ಧ್ವನಿಯೇ ಹೊರಡದಂತಾಗಿ ಎಲ್ಲವೂ ಗಪ್‌ಚುಪ್‌ ಆಗುತ್ತವೆ. ಆಗ ಸರ್ಕಾರ, ಸಂಘಪರಿವಾರ ಆಡಿದ್ದೇ ಆಟವಾಗಿ ಬಿಡುತ್ತದೆ ಎಂಬ ಲೆಕ್ಕಾಚಾರ ಆಚಾರ್ಯರದ್ದು.
ಪಬ್‌ದಾಳಿ ಮಹಿಳೆಯರ ಬಗ್ಗೆ ಸಂಘಪರಿವಾರ ಧೋರಣೆಯನ್ನು ಬಹಿರಂಗಪಡಿಸಿದೆ. ಈ ಘಟನೆ ಕುರಿತು ಮಾಧ್ಯಮಗಳು ಅತಿರಂಜಿತವಾದ ವರದಿಯನ್ನು ಪ್ರಕಟಿಸಿದ್ದೂ ಸುಳ್ಳಲ್ಲ. ಒಟ್ಟಾರೆ ಸುದ್ದಿ ಶ್ರೀರಾಮಸೇನೆಯ ವಿರುದ್ಧವೆನಿಸಿದರೂ ಅದರ ಆಂತ್ಯಿಕ ಪರಿಣಾಮ ಪ್ರಮೋದ ಮುತಾಲಿಕ್‌ಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟು ಬಿಟ್ಟಿತು. ಒಂದೇ ರಾತ್ರಿಯಲ್ಲಿ ಮುತಾಲಿಕ್‌ ಹೀರೋ ಆಗಿಬಿಟ್ಟ. ನರೇಂದ್ರ ಮೋದಿಗೆ ಸಿಕ್ಕಷ್ಟೇ ಪ್ರಚಾರ ಮುತಾಲಿಕ್‌ಗೂ ಸಿಕ್ಕಿಬಿಟ್ಟಿತು.
ಮಾಧ್ಯಮಗಳು ಅನಗತ್ಯವೆನ್ನುವಷ್ಟು ವೈಭವೀಕರಣವನ್ನು ಮುತಾಲಿಕ್‌ಗೆ ಕೊಟ್ಟುಬಿಟ್ಟವು. ಅದು ತಪ್ಪಬೇಕು. ನೆಗೆಟಿವ್‌ ಸುದ್ದಿ ಮಾಡುತ್ತಲೇ ಪಾಸಿಟಿವ್‌ ಇಮೇಜ್‌ ಕ್ರಿಯೇಟ್‌ ಮಾಡುವುದು ಮಾಧ್ಯಮಗಳ ದೌರ್ಬಲ್ಯ ಕೂಡ. ಆದರೆ ಮಂಗಳೂರಿನಲ್ಲಿ ನಡೆದ ಯುವತಿಯರ ಮೇಲಿನ ಹಿಂಸಾಚಾರ, ಸಂಘಪರಿವಾರದ ನಿಜಬಣ್ಣ ಹಾಗೂ ಇಲ್ಲಿಯವರೆಗೆ ಬಿಜೆಪಿ ಬೆಂಬಲಕ್ಕಿದ್ದ ಸಮಾಜದ ದೊಡ್ಡ ಹಾಗೂ ಪ್ರಭಾವಿ ಸಮೂಹವಾದ ಮಧ್ಯಮವರ್ಗಕ್ಕೂ ಹೇಗೆ ಬಿಜೆಪಿ ವಿರುದ್ಧವಾದುದು ಎಂಬುದು ಇದರಿಂದ ಸ್ವತಃ ಮಧ್ಯಮವರ್ಗದವರಿಗೂ ಗೊತ್ತಾಯ್ತು.
ಮಾಧ್ಯಮದವರಿಗೆ ಸ್ವಯಂ ನಿಯಂತ್ರಣ ಬೇಕೆಂಬುದರ ಬಗ್ಗೆ ಯಾರದ್ದೂ ವಿರೋಧವಿಲ್ಲ. ಸದ್ಯದ ವಿದ್ಯುನ್ಮಾನ ಮಾಧ್ಯಮಗಳ ಸುದ್ದಿಯ ಆತುರಗಾರಿಕೆಯಲ್ಲಿ ಅನೇಕ ಅಪಾಯಗಳು ಸಂಭವಿಸುತ್ತಿವೆ. ಅದರ ನಿಯಂತ್ರಣಕ್ಕೆ ಪ್ರೆಸ್‌ಕೌನ್ಸಿಲ್‌ ಇದೆ. ಪತ್ರಕರ್ತರದ್ದೇ ಆದ ಸಂಘಟನೆಗಳಿವೆ. ಅದನ್ನು ಆಂತರಿಕವಾಗಿ ರೂಪಿಸಿಕೊಳ್ಳಬೇಕಾದ ದರ್ದು ಮಾಧ್ಯಮಗಳಿಗಿದೆ.
ಹಾಗಂತ ವಿ.ಎಸ್‌. ಆಚಾರ್ಯ, ಪ್ರಮೋದಮುತಾಲಿಕ್‌ ಈ ರೀತಿ ಮಾತನಾಡಿದರೆ ಅದನ್ನು ಬೇರೆಯದೇ ಆದ ಆಯಾಮ, ಅನುಮಾನಗಳಿಂದ ನೋಡಬೇಕಾಗುತ್ತದೆ. ಸಂಘಪರಿವಾರದ ಆಶಯಗಳನ್ನು ಕಾರ್ಯರೂಪಕ್ಕೆ ಇಳಿಸುವ ಹಿಡೆನ್‌ ಅಜೆಂಡ್‌ ಇದರ ಹಿಂದಿರುತ್ತದೆ. ಹಾಗಾಗಿಯೇ ಆಚಾರ್ಯರ ಓಂಬುಡ್ಸ್‌ಮನ್‌ ಖಂಡಿತಾ ಬೇಡ. ಇವತ್ತು ಅದಕ್ಕೆ ಒಪ್ಪಿಗೆ ಸೂಚಿಸಿದ ತಕ್ಷಣವೇ ನಾಳೆ ಮಾಧ್ಯಮದವರು ಸರ್ಕಾರಕ್ಕೆ ತೋರಿಸಿಯೇ ಸುದ್ದಿಯನ್ನು ಬಿತ್ತರ ಮಾಡಬೇಕು. ಜನರ ಓಡಾಡುವುದಕ್ಕೂ ಸರ್ಕಾರದ ಪರ್ಮಿಶನ್‌ ತೆಗೆದುಕೊಳ್ಳಬೇಕು. ನ್ಯಾಯಾಲಯ ತೀರ್ಪು ಕೊಡುವುದಕ್ಕೂ ಸರ್ಕಾರದ ಒಪ್ಪಿಗೆ ಪಡೆಯಬೇಕು. ಕೊನೆಗೆ ಮತಗಟ್ಟೆಗೆ ಹೋಗಲು ನಮ್ಮ ಒಪ್ಪಿಗೆ ಬೇಕೆಂಬ ನಿಲುವಿಗೆ ಸರ್ಕಾರ, ಸಂಘಪರಿವಾರ ಬಂದು ನಿಲ್ಲುತ್ತದೆ.
ಏಕೆಂದರೆ ಪಬ್‌ಗೆ ಹೋಗಬಾರದು, ಪ್ರೇಮಿಗಳ ದಿನಾಚರಣೆ ಆಚರಿಸಬಾರದು, ಮುಸ್ಲಿಮ್‌ ಹುಡುಗರ ಜತೆ ಓಡಾಡಬಾರದು, ಕ್ರೈಸ್ತ ಶಿಕ್ಷಣಸಂಸ್ಥೆಗಳು ಪ್ರತಿಭಟನೆ ಮಾಡಬಾರದು ಎಂದು ಫರ್ಮಾನು ಹೊರಡಿಸಿರುವ ಸಂಘಪರಿವಾರ/ಸರ್ಕಾರ ಇವೆಲ್ಲವನ್ನೂ ಮಾಡುವುದಿಲ್ಲವೆಂದು ಹೇಗೆ ನಂಬುವುದು? ಓಂಬುಡ್ಸ್‌ಮನ್‌ನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು.

ಕನ್ನಡಪ್ರಭದ ಬಾರುಕೋಲು

ಪತ್ರಕರ್ತರು ಇತರರು ಹೇಳಿದ್ದನ್ನು ಯಥಾವತ್ತಾಗಿ ಅಕ್ಷರರೂಪಕ್ಕೆ ಇಳಿಸುವ ಗುಮಾಸ್ತರೇ? ಆತ/ಆಕೆಗೆ ತನ್ನದೇ ಆದ ಧೋರಣೆ ಇರಬಾರದೇ? ಪತ್ರಿಕೆ/ಮಾಧ್ಯಮಗಳ ಮುಖೇನ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕೇ?
ಈ ಪ್ರಶ್ನೆಗಳಿಗೆ ಹಲವು ರೀತಿಯ ಅಭಿಪ್ರಾಯ ಬೇಧಗಳು ಇರಲು ಸಾಧ್ಯ. ಒಬ್ಬೊಬ್ಬರು ಒಂದೊಂದು ರೀತಿಯಾಗಿಯೂ ಹೇಳಬಹುದು. `ಆ್ಯಕ್ಟಿವಿಸಂ' ಎಂಬುದು ಅನೇಕ ಪತ್ರಕರ್ತರಿಗೆ ತಥ್ಯವಾಗದ ಸಂಗತಿ. ಅದರಿಂದ ದೂರವುಳಿದ ಗುಮಾಸ್ತಿಕೆ ಮಾಡುವವರೇ ಜಾಸ್ತಿ. ಕನ್ನಡ, ನೆಲ-ಜಲ, ಸೌಹಾರ್ದ, ಜಾತಿ ಕ್ರೌರ್ಯ ಮತ್ತಿತರ ಸಂಗತಿಗಳು ಉದ್ಭವವಾದಾಗಲಾದರೂ ಪತ್ರಕರ್ತರೊಳಗಿನ `ನಿಜ ಮನುಷ್ಯ' ಎದ್ದು ಪ್ರಖರಗೊಳ್ಳುತ್ತಾನಾ? `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ' ಎಂಬ ರಾಷ್ಟ್ರಕವಿ ಕುವೆಂಪುರವರ ವಾದವನ್ನು ಒಪ್ಪುತ್ತಾರಾ? ಎಂಬಿತ್ಯಾದಿ ಉಸಾಬರಿಯೇ ಬೇಡ ಎನ್ನುವ ಪತ್ರಕರ್ತರೇ ಹೆಚ್ಚು.
ಅಂತಹ ಹೊತ್ತಿನಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಕಾರ್ಯಶೀಲ ಪತ್ರಕರ್ತನ ನಿಜ ಹೊಣೆಯನ್ನು ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಅಪ್ರತ್ಯಕ್ಷವಾಗಿ ಪ್ರತಿಬಿಂಬಿಸಿರುತ್ತಾರೆ. ಅಂತಹದೊಂದು ಘಟನೆ ಇತ್ತೀಚೆಗೆ ನಡೆಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಮಾಧ್ಯಮದಲ್ಲಿ ಓದಿ ಪಿಯುಸಿ/ಎಸ್ಸೆಸ್ಸೆಲ್ಸಿಯಲ್ಲಿ ಅತೀಹೆಚ್ಚು ಅಂಕಪಡೆವರಿಗೆ 15-10 ಸಾವಿರ ರೂ. ನಗದು ಬಹುಮಾನ ನೀಡುವ ಸಮಾರಂಭವದು. ಬೆಂಗಳೂರಿನ ಶಿಕ್ಷಕರ ಸದನಲ್ಲಿ ಇದು ಏರ್ಪಾಟಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಕನ್ನಡಪ್ರಭ ಸಂಪಾದಕ ಎಚ್‌.ಆರ್‌. ರಂಗನಾಥ್‌ ಅಂದು ವೇದಿಕೆಯಲ್ಲಿದ್ದ ಸರ್ಕಾರಿ ವರಿಷ್ಠರಿಗೆ ಬಾರುಕೋಲು ಬೀಸಿದ್ದರು. ಚಾಟಿಯಂತ ಅವರ ಮೊನಚು ನಾಲಿಗೆ ಅಧಿಕಾರವಂತರಿಗೆ ದಿಗಿಲು ಹುಟ್ಟಿಸಿತ್ತು. ಸಚಿವರು, ಅಧಿಕಾರಿಗಳು ತಲೆ ಕೆಳಗೆ ಹಾಕಿ ಕುಳಿತಿದ್ದರು. ರಂಗನಾಥ ಮಾತನಾಡುವ ಧಾಟಿ ರೈತಸಂಘದ ಧುರೀಣ ಪ್ರೊ ಎಂ.ಡಿ. ನಂಜುಂಡಸ್ವಾಮಿಯವರ ಮಾತಿನ ಹರಿತ ನೆನಪಾಗುತ್ತಿತ್ತು. ವೇದಿಕೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ, ವಕ್ಫ್‌ಸಚಿವ ಮುಮ್ತಾಜ್‌ ಅಲಿಖಾನ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್‌ ಇದ್ದರು.
ರಂಗನಾಥ್‌ ಮಾತನಾಡಿದ್ದು ಯಥಾವತ್ತು ಇಲ್ಲಿದೆ.
ಇದು ನಾಚಿಕೆಗೇಡಿನ ಸಮಾರಂಭ. ಖಂಡಿತಾ ಸಂಭ್ರಮ ಪಡುವ ಸಮಾರಂಭವಿದಲ್ಲ. ಕನ್ನಡ ಮಾಧ್ಯಮದಲ್ಲಿ ಅನಿವಾರ್ಯವಾಗಿ ಓದುತ್ತಿರುವವರು ಕರೆತಂದು 10 ಸಾವಿರ ಕೊಟ್ಟು ಸನ್ಮಾನಿಸುತ್ತಿದ್ದೀರಲ್ಲಾ ನಿಮಗೆ ನಾಚಿಕೆಯಾಗಬೇಕು. ಕನ್ನಡ ಅನುಷ್ಠಾನ ಮಾಡದ ಸರ್ಕಾರಗಳು ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಈ ರೀತಿಯ ಸಂಭ್ರಮ ಆಚರಣೆಗೆ ಒಡ್ಡಿಕೊಳ್ಳೊತ್ತದೆ ಎಂಬುದು ತಮ್ಮ ಅನಿಸಿಕೆ.
ಕನ್ನಡವನ್ನೇ ಓದೋಲ್ಲ ಎನ್ನುವವರಿಗೆ ಏನೂ ಮಾಡದ ಪರಿಸ್ಥಿತಿಯಲ್ಲಿರುವ ಸರ್ಕಾರ ಅನಿವಾರ್ಯವಾಗಿ ತಮ್ಮ ಪಾಡಿಗೆ ಕನ್ನಡದಲ್ಲಿ ಓದುತ್ತಿರುವವರಿಗೆ ಸನ್ಮಾನ ಮಾಡುತ್ತಿರುವುದಕ್ಕೆ ನಾಚಿಕೆಪಡಬೇಕು.
ಕನ್ನಡದ ಬಗ್ಗೆ ಮಾತನಾಡಿದರೆ, ಕನ್ನಡದ ಪರವಾಗಿ ಹೋರಾಟ ಮಾಡಿದರೆ, ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಬೀದಿಯಲ್ಲಿ ನಿಂತು ಘೋಷಿಸಿದರೆ `ರೌಡಿ'ಗಳು ಎಂದು ಕರೆಯುತ್ತೀರಿ. ಸರ್ಕಾರದವ್ರು ಗೂಂಡಾಕಾಯ್ದೆ ಬಳಸುತ್ತಾರೆ. ಹಾಗಾದರೆ ಇನ್ನೂ ಕನ್ನಡ ಅನುಷ್ಠಾನವಾಗದೇ ಇರುವ ಬಗ್ಗೆ ಕನ್ನಡಿಗರು ಸುಮ್ಮನೇ ಕೂರಬೇಕೇ?
ಕನ್ನಡದ ಪರವಾಗಿ ಸ್ವಲ್ಪ ಗಟ್ಟಿಧ್ವನಿಯಲ್ಲಿ ಕನ್ನಡಪ್ರಭ ಬರೆದಾಗ ಮಾರನೇ ದಿನ ಫೋನು ಬರುತ್ತದೆ. ರಂಗನಾಥ್‌, ತುಂಬಾ ಉದ್ವೇಗಗೊಂಡಿದ್ದೀರಿ, ಅಷ್ಟು ಉದ್ವೇಗ ಕನ್ನಡಪ್ರಭಕ್ಕೆ ಏಕೆ? ಎಂದು ಪ್ರಶ್ನೆ ಕೇಳುತ್ತಾರೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡ ಪ್ರಭ ಬರೆಯದೇ ವಾಷಿಂಗ್‌ಟನ್‌ ಪೋಸ್ಟ್‌ ಬರೆಯಲು ಸಾಧ್ಯವೇ? ಕನ್ನಡದ ಪತ್ರಿಕೆಗಳು ಈ ಬದ್ಧತೆ ತೋರಿಸಬೇಕಲ್ಲವೆ?
ಸರ್ಕಾರಗಳು, ರಾಜಕಾರಣಿಗಳು ಕನ್ನಡ ಪರವಾಗಿರುವಂತೆ ಪತ್ರಿಕೆಗಳು ಎಷ್ಟು ಬರೆದರೂ ಪ್ರಯೋಜನವಾಗಿಲ್ಲ. ವಿವಿಧ ರೀತಿಯ ಹೋರಾಟಗಾರರು ತರಹೇವಾರಿ ಹೋರಾಟ ಮಾಡಿದರೂ ಸರ್ಕಾರ ಏನೂ ಮಾಡಿಲ್ಲ. ಸಾಹಿತಿ, ಬುದ್ದಿಜೀವಿಗಳು ಹೇಳಿದ್ದಾಯ್ತು. ಆದರೂ ಇಲ್ಲಿಯವರೆಗಿನ ಯಾವುದೇ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ. ಈ ಸರ್ಕಾರ ಒಂದುಮಟ್ಟಿಗೆ ಮಠಾಧೀಶರು ಹೇಳಿದ್ದನ್ನೂ ಕೇಳುತ್ತಿದೆ. ವೇದಿಕೆಯಲ್ಲಿ ಸುತ್ತೂರು ಮಠಾಧೀಶರು ಈ ಬಗ್ಗೆ ಸರ್ಕಾರಕ್ಕೆ ತಿಳಿಹೇಳಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ದೂರದೂರದ ಜಿಲ್ಲೆಗಳಿಂದ ಬಂದಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸರ್ಕಾರಕ್ಕೆ ಸರಿಯಾಗಿ ಪಾಠ ಕಲಿಸಬೇಕು. ಇಡೀ ಜನ ಸರ್ಕಾರಕ್ಕೆ ತಿಳಿಹೇಳಬೇಕು.
ರಾಜಕಾರಣಿಗಳು ವೋಟುಬ್ಯಾಂಕ್‌ ರಾಜಕಾರಣ ಮಾಡುತ್ತಾರೆಂದು ನಾವು ಹೇಳುತ್ತೇವೆ. ಹಾಗಿದ್ದರೆ ಕರ್ನಾಟಕದಲ್ಲಿ ಇಲ್ಲಿಯವರೆಗೆ ಆಳಿದ ಸರ್ಕಾರಗಳು ಕನ್ನಡಿಗರ ವೋಟು ಬ್ಯಾಂಕ್‌ ಆಧಾರದ ಮೇಲೆ ತಾನೇ ಗೆದ್ದಿರುವುದು. ಕೆಲವೇ ಜನ ಕನ್ನಡೇತರರಿಗೆ ಹೆದರಿ ಕನ್ನಡ ಅನುಷ್ಠಾನ ಮಾಡದೇ ಇರುವುದು ಕನ್ನಡಿಗರಿಗೆ ಬಗೆವ ದ್ರೋಹ.
ಬೆಂಗಳೂರಿನಲ್ಲಿ ಕನ್ನಡ ಸತ್ತುಹೋಗಿ ಬಹಳ ದಿನಗಳಾಗಿವೆ. ಹಾಗಿದ್ದೂ ಕನ್ನಡ ಕಲಿಯದ ಅಧಿಕಾರಿಗಳನ್ನು ಇನ್ನೂ ಯಾಕೆ ಇಟ್ಟುಕೊಂಡಿದ್ದೀರಿ. ಕನ್ನಡವನ್ನೇ ಕಲಿಯದ ಅಧಿಕಾರಿಗಳು ಕನ್ನಡ ಉದ್ದಾರವನ್ನೇನು ಮಾಡಿಯಾರು? ಇಲ್ಲಿಯವರೆಗೆ ಆಳಿದ ಯಾವ ಸರ್ಕಾರಗಳು ಕನ್ನಡದ ಸರ್ಕಾರಗಳಲ್ಲ. ಏಕೆಂದರೆ ಅವು ಕನ್ನಡಿಗರಿಗಾಗಿ ಏನೂ ಮಾಡಿಲ್ಲ.
ನಾನು ಇಷ್ಟೆಲ್ಲಾ ಹೇಳಿದ್ದರಿಂದ ಮುಖ್ಯಮಂತ್ರಿ ಚಂದ್ರು ಅಂದುಕೊಳ್ಳುತ್ತಿದ್ದಾರೆ. ಈ ರಂಗನ್ನ ಯಾಕೆ ಕರೆದನಪ್ಪಾಂತ. ಆದರೆ ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸಿದಾಗಲೇ ಇದೇ ರೀತಿ ಮಾತನಾಡಬೇಕೆಂದುಕೊಂಡು ಬಂದಿದ್ದೆ. ಕನ್ನಡದ ವಿಷಯದಲ್ಲಿ ಈ ರೀತಿ ಮಾತನಾಡದೇ ಇನ್ನು ಹೇಗೆ ಮಾತನಾಡಬೇಕು?
ಒಬ್ಬರು ಮುಖ್ಯಮಂತ್ರಿಗಳು ತಮ್ಮ ಬಳಿಬಂದು ದೆಹಲಿಗೆ ಹೋದರೆ ಅಲ್ಲಿನ ಪತ್ರಕರ್ತರು `ಕೆನ್‌ ಯು ಸ್ಪೀಕ್‌ ಇನ್‌ ಇಂಗ್ಲಿಷ್‌' ಎಂದು ಕೇಳುತ್ತಾರೆ ಎಂದಿದ್ದರು. ಹಾಗನ್ನಿಸಿಕೊಂಡು ಸುಮ್ಮನೆ ಬಂದಿದ್ದೀರಲ್ಲಾ, ನಿಮ್ಮ ಮೂರ್ಖತನಕ್ಕಿಷ್ಟು ಎಂದು ಬೈದಿದ್ದಲ್ಲದೇ, `ರಷ್ಯದ, ಚೀನಾದ ಪ್ರಧಾನಿ ಬಂದರೆ ಇದೇ ಪ್ರಶ್ನೆ ಕೇಳುತ್ತೀರಾ'ಎಂದು ಮರುಪ್ರಶ್ನೆ ಹಾಕಬೇಕಿತ್ತು ಎಂದು ಸಲಹೆ ನೀಡಿದ್ದೆ. ಮತ್ತೊಂದು ಬಾರಿ ದೆಹಲಿಗೆ ಹೋದಾಗ ಅವರು ಹಾಗೆಯೇ ಕೇಳಿದ್ದರಂತೆ. ಕನ್ನಡ ಮಾತನಾಡುವುದನ್ನು ನಾವೇ ಕಲಿಯದಿದ್ದರೆ ಹೇಗೆ?
ಮುಂದೆ ಮಾತನಾಡುವವರು ಕನ್ನಡದ ಬಗ್ಗೆ ಹೀಗೆ ಮಾತನಾಡಲಿ ಎಂದು ಖಾರವಾಗಿಯೇ ಮಾತನಾಡಿದ್ದೇನೆ. ವೇದಿಕೆಯ ಮೇಲಿದ್ದವರಿಗೆ ನನ್ನ ಮಾತುಗಳಿಂದ ಮುಜುಗರವಾಗಿರಬಹುದು. ಆದರೂ ಪರವಾಗಿಲ್ಲ. ನನ್ನ ಮಾತಿನ ಧಾಟಿಯೇ ಇದು.
ರಂಗನಾಥ್‌ ಮಾತುಕೇಳಿ ಮುಖ್ಯಮಂತ್ರಿ ಚಂದ್ರು ಒಳಗೊಳಗೆ ಖುಷಿಗೊಂಡರೆ ಸಚಿವೆ ಶೋಭಾ ತುಂಬಾ ಮುಜುಗರಕ್ಕೀಡಾಗಿದ್ದರು. ಆನಂತರದ ಮಾತುಗಳಲ್ಲಿ ರಂಗನಾಥರವರ ಮಾತುಗಳನ್ನು ಅವರು ಸಮರ್ಥಿಸಿಕೊಂಡರು.

ಅಕ್ಷರ ವಂಚಿತರಿಂದ `ಅಕ್ಷರಸ್ಥ'ರಿಗೆ ಕಾವ್ಯಸ್ಪರ್ಧೆ

*ಬೆಂಗಳೂರಿನ ಸ್ಲಮ್‌ನಿವಾಸಿಗಳ ಸಾಹಸ
*ಸ್ಪರ್ಧೆಗೆ ಬಂದ ಕವನಗಳ ಸಂಖ್ಯೆ ಇನ್ನೂರು

ಅನಿವಾರ್ಯ ಕಾರಣದಿಂದಲೋ, ಹುಡುಗಾಟಿಕೆಯ ಉಮೇದಿನಿಂದಲೋ ಶಾಲೆ ಬಿಟ್ಟು, ಅಕ್ಷರವಂಚಿತರಾದ ಯುವಕ/ಯುವತಿಯ ಕೂಟವೊಂದು ಕಾಲೇಜು ಅಧ್ಯಾಪಕರಿಗೆ, ಪ್ರೌಢಶಾಲೆ ಶಿಕ್ಷಕರಿಗೆ ಕಾವ್ಯಸ್ಪರ್ಧೆ ಏರ್ಪಡಿಸಿ ದಾಖಲೆ ನಿರ್ಮಿಸಿದೆ.
ಕೊಳಗೇರಿಯಲ್ಲಿ ಜೀವನ ಸಾಗಿಸುತ್ತಾ ಹೊಟ್ಟೆ ಪಾಡಿಗೆ ಗಾರೆ ಕೆಲಸ, ಮೂಟೆ ಹೋರುವುದು, ಕಾರು ತೊಳೆಯುವುದು, ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವವರೇ ಸೇರಿಕೊಂಡು ಇಂತಹವೊಂದು ಸಾಹಸವನ್ನು ಮೆರೆದಿದ್ದಾರೆ. ಅಕ್ಷರವಂಚಿತರು ಸೇರಿಕೊಂಡು ರೂಪಿಸಿದ ಕಾವ್ಯಸ್ಪರ್ಧೆಗೆ ಬಂದ ಪ್ರವೇಶಗಳ ಸಂಖ್ಯೆ ಬರೋಬ್ಬರಿ ಇನ್ನೂರು.
ರಾಜ್ಯದ ಮೂಲೆಮೂಲೆಯ ವಿವಿಧ ಕಾಲೇಜುಗಳಲ್ಲಿ, ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರು, ಡಾಕ್ಟರೇಟ್‌ ಪಡೆದವರು, ಸಂಶೋಧನೆಯಲ್ಲಿ ತೊಡಗಿರುವವರು, ಕಾವ್ಯಕಸುಬು ಮಾಡುತ್ತಿರುವವರು ಸ್ಪರ್ಧೆಗೆ ತಮ್ಮ ರಚನೆಗಳನ್ನು ಕಳಿಸಿದ್ದಾರೆ. ಅಕ್ಷರವನ್ನೇ ಪ್ರೀತಿಸಲು ಮರೆತು, ಕಾಯಕವನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ಯುವಕ/ಯುವತಿಯರು `ಸ್ತ್ರೀಯರ ಕುರಿತು ಕವನ ಕಳಿಸಿ' ಎಂಬ ತಮ್ಮ ಕರೆ ಮನ್ನಿಸಿ ಹರಿದು ಬಂದ ಕವನಗಳ ಮಹಾಪೂರ ಕಂಡು ಬೆರಗಾಗಿದ್ದಾರೆ.
ಎಲ್ಲಾ ಕವನಗಳನ್ನು ಪೇರಿಸಿ ಕವಿಗಳಾದ ಎಲ್‌.ಎನ್‌. ಮುಕುಂದರಾಜ್‌ ಹಾಗೂ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಮೇಷ್ಟ್ರಾಗಿರುವ ಡೊಮಿನಿಕ್‌ ಅವರ ಮುಂದೆ ಹರಡಿ ಆಯ್ಕೆ ಮಾಡಿ ಕೊಡಿ ಎಂದು ಕೋರಿದ್ದಾರೆ. ಅವರಿಬ್ಬರು ಬಹುಮಾನಿತ ಕವಿಗಳನ್ನು ಆಯ್ಕೆ ಮಾಡಿದ್ದಾರೆ. ಅರಸೀಕೆರೆಯ ಮಮತಾ ಹಾಗೂ ಬಿಜಾಪುರದ ಗೀತಾ ಸನದಿ ಕ್ರಮವಾಗಿ ಮೊದಲೆರಡು ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಬೆಟ್ಟದ ನೆಲ್ಲಿಕಾಯಿ, ಸಮುದ್ರದ ಉಪ್ಪು:
ಇದೊಂಥರ ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎತ್ತಿಣಿಂದೆತ್ತ ಸಂಬಂಧವಯ್ಯಾ ಎಂಬ ಮಾದರಿಯದು. ಅಕ್ಷರದ ಅರಿವೇ ಇಲ್ಲದ ಸಮುದಾಯ ಒಂದು ಕಡೆ. ಅಕ್ಷರವನ್ನೇ ಹೊಟ್ಟೆ ಪಾಡಿಗೆ ನೆಚ್ಚಿಕೊಂಡ ಸಮುದಾಯ ಮತ್ತೊಂದು ಕಡೆ. ಇಬ್ಬರನ್ನೂ ಸೇರಿಸಿದ್ದು ಕಾವ್ಯ ಸ್ಪರ್ಧೆ.
ಅದನ್ನು ಆಗು ಮಾಡಿದ್ದು ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನ ಸಣ್ಣ ಸ್ಲಮ್ಮೊಂದರ ಕ್ರಿಯಾಶೀಲರು. ಇಸ್ಕಾನ್‌ ಎದುರಿಗೆ ಇರುವ ಈ ಸ್ಲಮ್‌ನಲ್ಲಿ ಹುಟ್ಟಿಕೊಂಡ ಚೇತನಧಾರೆ ಟ್ರಸ್ಟ್‌ ಹಾಗೂ ಜನಾಸ್ತ್ರ ಸಂಘಟನೆ ಕಾವ್ಯ ಸ್ಪರ್ಧೆಯ ಕನಸಿಗೆ ಬೀಜಾಂಕುರ ಮಾಡಿದ್ದು.
ಕಾವ್ಯಸ್ಪರ್ಧೆಯ ರೂವಾರಿಗಳಲ್ಲಿ ಆದಿತ್ಯ ಮಾತ್ರ ಪಿಯುಸಿವರೆಗೆ ಓದಿದ್ದು, ಕಪ್ಪು ಹಕ್ಕಿಯ ಹಾಡು ಎಂಬ ಕವನ ಸಂಕಲನ ತರುವ ಉತ್ಸಾಹದಲ್ಲಿದ್ದಾರೆ. ಉಳಿದವರೆಲ್ಲಾ ಐದನೇ ತರಗತಿ ಓದಿದವರಲ್ಲ.
ಕೆಲವರು ಟಯೋಟ ಫ್ಯಾಕ್ಟರಿಗೆ ಕಾರು ತೊಳಿಯಲು ಹೋಗುತ್ತಾರೆ. ಇನ್ನು ಕೆಲವರು ಮೂಟೆ ಹೊರಲು ಎಪಿ ಎಂಸಿ ಯಾರ್ಡ್‌ಗೆ ತೆರಳುತ್ತಾರೆ. ಮತ್ತೊಂದಿಷ್ಟು ಜನ ಗಾರೆ ಕೆಲಸ, ಸೆಂಟ್ರಿಂಗ್‌,ಮರಗೆಲಸ, ವೈಟ್‌ವಾಷಿಂಗ್‌ ಮಾಡುತ್ತಾರೆ. ಯುವತಿಯರು ಬೆಳಗಾನೆದ್ದು ಬ್ಯೂಟಿ ಪಾರ್ಲರ್‌ಗಳಲ್ಲಿ ಸಹಾಯಕಿಯರಾಗಿ ದುಡಿಯುತ್ತಾರೆ. ರಜೆಯೂ ಇಲ್ಲದೇ ಹೊಟ್ಟೆ ಪಾಡಿಗೆ ದುಡಿಯುವ ಇವರೆಲ್ಲಾ ಸೇರುವುದು ದುಡಿಮೆ ಹೊತ್ತು ಮುಗಿದ ಮೇಲೆಯೇ.
ಇದರ ಜತೆಗೆ ಕಾರ್ಡಿನಲ್ಲಿ ರಂಗೋಲಿ ಸ್ಪರ್ಧೆಯನ್ನೂ ನಡೆಸಿದ್ದು, ಇದಕ್ಕೆ ಬಂದ ಪ್ರವೇಶಗಳ ಸಂಖ್ಯೆ 150.
ಸ್ಲಮ್‌ ನಿವಾಸಿಗಳು ಯಾತಕ್ಕೂ ಬರುವುದಿಲ್ಲ, ಅವರಿಗೆ ತಿಳಿವಳಿಕೆ, ಸಂವೇದನೆಗಳೇ ಇರುವುದಿಲ್ಲ, ಪುಂಡರು ಎಂಬ ಭಾವನೆ ಹೊರಜಗತ್ತಿನವರಲ್ಲಿ ಸಾಮಾನ್ಯ. ಅದನ್ನು ಹೋಗಲಾಡಿಸಬೇಕೆಂಬ ತವಕದಿಂದ ಕಾವ್ಯಸ್ಪರ್ಧೆ ಮಾಡಿದೆವು. ಅದರಲ್ಲಿ ಯಶಸ್ವಿಯಾದೆವು ಎಂಬ ವಿಶ್ವಾಸ ಆದಿತ್ಯ ಅವರದ್ದು.

ಶಾಸ್ತ್ರೀಯ ಸ್ಥಾನ ಅನಿಶ್ಚಿತ: ಸರ್ಕಾರದ ಮೀನಾಮೇಷ

ಇನ್ನೂ ಸಲ್ಲಿಕೆಯಾಗದ ಇಂಪ್ಲೀಡಿಂಗ್‌
ಸಂಭ್ರಮದ ಮಧ್ಯೆ ವಾಸ್ತವ ಮರೆತ ಸರ್ಕಾರ
ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ಧತೆ

ಕನ್ನಡಕ್ಕೆ ಅಭಿಜಾತ ಸ್ಥಾನ(ಶಾಸ್ತ್ರೀಯ) ನೀಡಿದ್ದನ್ನು ಪ್ರಶ್ನಿಸಿ ತಮಿಳುನಾಡಿನ ಆರ್‌ ಗಾಂಧಿ ರಿಟ್‌ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದಿದ್ದರೂ, ರಾಜ್ಯ ಸರ್ಕಾರ ಇದರ ಬಗ್ಗೆ ಉದಾಸೀನ ಧೋರಣೆ ತಾಳಿರುವುದರಿಂದ ಕನ್ನಡ ಶಾಸ್ತ್ರೀಯ ಭಾಷೆಯಾಗಿ ಉಳಿಯುವುದು ಅನಿಶ್ಚಿತವಾಗಿದೆ.
ಈ ಬಗ್ಗೆ ಸರ್ಕಾರದ ಪ್ರಮುಖ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ಕಡೆಯಿಂದ ನಿರೀಕ್ಷಿತ ಮಟ್ಟದ ಪ್ರಕ್ರಿಯೆ ನಡೆದಿಲ್ಲದಿರುವುದನ್ನು ಸೂಚಿಸುತ್ತದೆ.
ಶಾಸ್ತ್ರೀಯ ಭಾಷೆ ಸ್ಥಾನ ಕೊಡಿಸುವಲ್ಲಿ ಪ್ರಮುಖ ರೂವಾರಿಯಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಡಾಅಗ್ರಹಾರ ಕೃಷ್ಣಮೂರ್ತಿ ಹೇಳಿದ್ದು ಹೀಗೆ: `ಕೇಂದ್ರ ಸರ್ಕಾರಕ್ಕಾಗಲಿ, ಶಿಫಾರಸ್ಸು ಸಮಿತಿಗಾಗಲಿ ಇದರಲ್ಲಿ ಆಸಕ್ತಿಯಿಲ್ಲ. ಅಷ್ಟಕ್ಕೂ ಅವರು ಯಾಕೆ ರಿಟ್‌ ಅರ್ಜಿ ಸಂಬಂಧ ತಲೆ ಕೆಡಿಸಿಕೊಳ್ಳುತ್ತಾರೆ. ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ಮಾತ್ರ ಇದರ ಬಗ್ಗೆ ಮುತುವರ್ಜಿ ವಹಿಸಬೇಕು. ಶಾಸ್ತ್ರೀಯ ಸ್ಥಾನ ಸಿಕ್ಕೇ ಹೋಯಿತೆಂಬ ಸಂಭ್ರಮದಲ್ಲಿರುವ ಸರ್ಕಾರಕ್ಕೆ ವಾಸ್ತವ ಸ್ಥಿತಿ ಗೊತ್ತಾಗುತ್ತಿಲ್ಲ'.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್‌ ಹೇಳಿದ್ದು ಹೀಗೆ: ರಿಟ್‌ ಅರ್ಜಿಗೆ ಪ್ರತಿವಾದಿಯಾಗಿಸಲು ಕೋರಿ ಮದ್ರಾಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದರಿಂದ ಆಗುವ ಅನುಕೂಲ-ಅನಾನುಕೂಲಗಳ ಬಗ್ಗೆ, ರಾಜ್ಯ ಸರ್ಕಾರವೇ ಪ್ರತಿವಾದಿಯಾಗಿ ಪಾಲ್ಗೊಂಡರೆ ಆಗಬಹುದಾದ ಸಮಸ್ಯೆಗಳ ಬಗ್ಗೆ ಆಲೋಚಿಸಲಾಗುತ್ತಿದೆ. ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರಿಗೆ ಈ ಬಗ್ಗೆ ಜವಾಬ್ದಾರಿ ವಹಿಸಲಾಗಿದೆ. ಕಾನೂನು ತಜ್ಞರ ಜತೆ ಅವರು ಚರ್ಚಿಸಿ, ಮುಖ್ಯಮಂತ್ರಿಗಳ ಬಳಿ ಮಾತಾಡುವುದಾಗಿ ತಿಳಿಸಿದ್ದಾರೆ. ಇಂಪ್ಲೀಡಿಂಗ್‌ ಅವರಿಗೆ ಬಿಟ್ಟ ಸಂಗತಿ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದು ಹೀಗೆ: ಅಭಿವೃದ್ಧಿ ಪ್ರಾಧಿಕಾರದ ಕಡೆಯಿಂದ ಮದ್ರಾಸ್‌ ಉಚ್ಚನ್ಯಾಯಾಲಯಕ್ಕೆ ಪ್ರತಿವಾದಿಯಾಗಿಸಲು ಹಾಗೂ ಗಾಂಧಿಯವರ ರಿಟ್‌ ಅರ್ಜಿ ವಜಾ ಮಾಡಲು ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ. ಈ ಸಂಬಂಧ ಅಗತ್ಯವಿರುವ ಅಫಿಡವಿಟ್‌ಗೆ ತಾನು ಸಹಿ ಹಾಕಿದ್ದೇನೆ. ಅಡ್ವೋಕೇಟ್‌ ಜನರಲ್‌ ಉದಯಹೊಳ್ಳ ಅವರು ಕಾನೂನು ತಜ್ಞರ ಜತೆ ಚರ್ಚಿಸಿ, ನ್ಯಾಯವಾದಿಗಳನ್ನು ನೇಮಿಸಲಿದ್ದಾರೆ. ರಿಟ್‌ ಅರ್ಜಿ ವಜಾ ಮಾಡಿಸಲು ಬೇಕಾದ ಎಲ್ಲಾ ಪುರಾವೆಗಳನ್ನು ಪ್ರಾಧಿಕಾರ ಒದಗಿಸಲಿದೆ.
ಈ ಎಲ್ಲಾ ಹೇಳಿಕೆ, ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಶಾಸ್ತ್ರೀಯ ಸ್ಥಾನದ ಅಸ್ತಿತ್ವವನ್ನು ವಿವೇಚಿಸಬೇಕಿದೆ. ಕನ್ನಡಿಗರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರವು 31-10-08ರಂದು ಗೆಜೆಟ್‌ ಪ್ರಕಟಣೆ ಹೊರಡಿಸಿ ಕನ್ನಡ ಮತ್ತು ತೆಲುಗು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು. ಆದರೆ ಸದರಿ ಪ್ರಕಟಣೆಯಲ್ಲಿನ ಕೊನೆಯ ಒಕ್ಕಣಿಕೆ `ಮದ್ರಾಸ್‌ ಉಚ್ಚ ನ್ಯಾಯಾಲಯದಲ್ಲಿರುವ ರಿಟ್‌ ಅರ್ಜಿ(ಆಗಸ್ಟ್‌ನಲ್ಲಿ ಗಾಂಧಿ ಸಲ್ಲಿಸಿದ ರಿಟ್‌) ಪ್ರಕರಣದ ತೀರ್ಮಾನಕ್ಕೆ ಒಳಪಟ್ಟೇ ಗೆಜೆಟ್‌ ಪ್ರಕಟಣೆ ಹೊರಡಿಸಲಾಗಿದೆ' ಎಂದಿದ್ದು, ರಿಟ್‌ ಅರ್ಜಿ ವಜಾಗೊಳ್ಳದೇ ಶಾಸ್ತ್ರೀಯ ಸ್ಥಾನ ಮಾನ ದಕ್ಕುವುದೇ ಇಲ್ಲ.
ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಕೇಂದ್ರ ಸರ್ಕಾರವು ಗೆಜೆಟ್‌ ಪ್ರಕಟಣೆ ಹೊರಡಿಸಿರುವುದರ ಸಿಂಧುತ್ವ ಪ್ರಶ್ನಿಸಿ 27-11-08ರಂದು ಗಾಂಧಿ ಅವರು 40 ಅಡಕಗಳುಳ್ಳ ಮತ್ತೊಂದು ರಿಟ್‌ ಅರ್ಜಿ ಸಲ್ಲಿಸಿದ್ದರು. ಕೇಂದ್ರದ ಇಬ್ಬರು ಸಚಿವರು, ಶಿಫಾರಸ್ಸು ಸಮಿತಿಯ 9 ಮಂದಿ ಸದಸ್ಯರನ್ನು ಪ್ರತಿವಾದಿಯಾಗಿ ಉಲ್ಲೇಖಿಸಲಾಗಿತ್ತು. ಈ ರಿಟ್‌ ಸಲ್ಲಿಕೆಯಾಗಿ 2 ತಿಂಗಳು ಕಳೆದಿದ್ದರೂ `ಶಾಸ್ತ್ರೀಯ ಸ್ಥಾನ ಸಿಕ್ಕಿದ ಸಂಭ್ರಮ'ದಲ್ಲಿರುವ ರಾಜ್ಯ ಸರ್ಕಾರ ಈ ಬಗ್ಗೆ ಪ್ರತಿವಾದಿಯಾಗಿ ಪಾಲ್ಗೊಳ್ಳಲು ಮದ್ರಾಸ್‌ ನ್ಯಾಯಾಲಯಕ್ಕೆ ಯಾವುದೇ ಅರ್ಜಿ ಸಲ್ಲಿಸಿಲ್ಲ.
ಇಂಪ್ಲೀಡಿಂಗ್‌(ಪ್ರತಿವಾದಿಯಾಗಿಸಲು ಕೋರಿ) ಮಾಡಿಕೊಳ್ಳಲು ಕೋರಿ ಅರ್ಜಿ ಸಲ್ಲಿಸಬೇಕಾದ ಸರ್ಕಾರ ಮೀನಮೇಷ ಎಣಿಸುತ್ತಿರುವುದರಿಂದ ಶಾಸ್ತ್ರೀಯ ಸ್ಥಾನ ಉಳಿಯುವುದು ಅನುಮಾನವಾಗಿದೆ. ಈ ರಿಟ್‌ ಅರ್ಜಿ ಕೇಂದ್ರ ಸರ್ಕಾರಕ್ಕೆ ಯಾವುದೇ ಆಸ್ಥೆ ಇಲ್ಲ. ಪ್ರತಿವಾದಿಗಳಾಗಿರುವ ಕೇಂದ್ರ ಮಾನವ ಸಂಪನ್ಮೂಲ ಮತ್ತು ಗೃಹಸಚಿವರಿಗೆ ಇದು ಬೇಕಾಗಿಲ್ಲ. ಯಾರೂ ಕನ್ನಡದವರಿಲ್ಲದೇ ಇರುವುದರಿಂದ ಶಿಫಾರಸ್ಸು ಸಮಿತಿ ಸದಸ್ಯರಿಗೆ ಇದರ ಉಸಾಬರಿ ಬೇಕಿಲ್ಲ.
ಗಾಂಧಿ ಸಲ್ಲಿಸಿದ ರಿಟ್‌ ಅರ್ಜಿಯಲ್ಲಿ ಶಿಫಾರಸ್ಸು ಸಮಿತಿಯ ಸಿಂಧುತ್ವವನ್ನೆ ಪ್ರಶ್ನಿಸಲಾಗಿದೆಯಲ್ಲದೇ, ಒತ್ತಡ, ಬೆದರಿಕೆಗೆ ಮಣಿದು ಶಿಫಾರಸ್ಸು ಮಾಡಲಾಗಿದೆ ಎಂದು ನ್ಯಾಯಾಲಯ ಬಯಸುವ ಪುರಾವೆಗಳನ್ನು ಮಂಡಿಸಲಾಗಿದೆ. ಕರ್ನಾಟಕ ಪ್ರತಿವಾದಿಯಾಗಿ ಸೇರಿಕೊಂಡು ಸಮರ್ಥವಾಗಿ ವಾದ ಮಂಡಿಸುವುದರಿಂದಲೇ ಮಾತ್ರ ಇದನ್ನು ಉಳಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ತಜ್ಞರು.

ಶರಣರ ದರ್ಶನಗಳಿಗೆ ಶರಧಿ ದಾಟುವ ಭಾಗ್ಯ

*25 ಭಾಷೆಗಳಿಗೆ ವಚನಾನುವಾದ
*900 ಪುಟಗಳಲ್ಲಿ 2500 ವಚನ
*ಫ್ರೆಂಚ್‌, ಸ್ಪ್ಯಾನಿಷ್‌, ಚೈನೀಸ್‌ಗೆ
*ಮೂರು ವರ್ಷದಲ್ಲಿ ಶರಣದರ್ಶನ
ಅಚ್ಚ ಕನ್ನಡದ ಸೊಗಡು, ಗ್ರಾಮ್ಯ ಜೀವನಶೈಲಿಯನ್ನು ಹೊಸ ಶೈಲಿಯಲ್ಲಿ ಬರೆದು ಕನ್ನಡವನ್ನು ಶ್ರೀಮಂತಗೊಳಿಸಿದ ಶರಣರ ವಚನಗಳು ಇದೀಗ ನಾಡಿನ ಎಲ್ಲೆಯನ್ನೂ ದಾಟಿ, ದೇಶ-ವಿಶ್ವಭಾಷೆಗಳನ್ನು ಸಮೃದ್ಧಗೊಳಿಸಲಿವೆ.
ಬೆಂಗಳೂರಿನ ಬಸವಸಮಿತಿಯು ರಾಜ್ಯ ಸರ್ಕಾರದ ಸಹಾಯದಡಿ ಕೈಗೊಂಡ ಮಹತ್ವ ಪೂರ್ಣ ಯೋಜನೆ ಮುಕ್ತಾಯಗೊಂಡರೆ 25 ಭಾಷೆಗಳಲ್ಲಿ ವಚನದ ಸಾರಸತ್ವ ಪರಿಚಿತಗೊಳ್ಳಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಒಂದು ಕೋಟಿ ರೂ. ನೀಡಿದ್ದು, ಅನುವಾದ ಕಾರ್ಯ ಭರದಿಂದ ಸಾಗುತ್ತಿದೆ.
12 ಶತಮಾನದ ಕಾಯಕ ಜೀವಿಗಳ ಚಳವಳಿ ಕನ್ನಡ ಸಾಹಿತ್ಯಕ್ಕೆ, ಸಂಸ್ಕೃತಿಗೆ ಹೊಸತನ ತಂದುಕೊಟ್ಟಿತು. ಸಾಮಾಜಿಕ ಉತ್ಕ್ರಾಂತಿಗೂ ಕಾರಣವಾಯಿತು. ಅಂತಹ ವಚನಗಳು ಕನ್ನಡಿಗರ ಆಡುಮಾತಿನ ಲಯದಲ್ಲಿ ಸೇರಿಕೊಂಡು ಬಿಟ್ಟವು. ಆದರೆ ಸೋದರ ಭಾಷೆಗಳಿಗೆ, ವಿದೇಶಿ ಭಾಷೆಗಳಿಗೆ ಅವನ್ನು ಅನುವಾದ ಮಾಡುವ ಗೊಡವೆಗೆ ಯಾರೂ ಹೋಗಲಿಲ್ಲ. ಇಂಗ್ಲಿಷಿಗೆ ಕೆಲವು ವಚನಗಳು ಅನುವಾದಗೊಂಡರೂ ಅದರಲ್ಲಿ ಸಮಗ್ರ ವಚನಗಳಿರಲಿಲ್ಲ. ಆ ಕೊರತೆಯನ್ನು ತುಂಬುವ ಕೆಲಸವನ್ನು ಬಸವ ಸಮಿತಿ ಮಾಡಲಿದೆ.
ಈಗ ಸಂಗ್ರಹಿತಗೊಂಡಿರುವ 23 ಸಾವಿರ ವಚನಗಳ ಪೈಕಿ 2500 ವಚನಗಳನ್ನು ಆಯ್ದು ಎಲ್ಲಾ ಭಾಷೆಯಲ್ಲೂ ಪ್ರಕಟಿಸುವ ಮಹತ್ವಾಕಾಂಕ್ಷಿ ಯೋಜನೆಯಿದು. ಸಂವಿಧಾನ ಅಂಗೀಕರಿಸಿದ ದೇಶದ 22 ಭಾಷೆಗಳಿಗೆ(ಕನ್ನಡ ಸೇರಿ) ಹಾಗೂ ವಿದೇಶ 4 ಭಾಷೆಗಳಿಗೆ ಇವಿಷ್ಟು ವಚನಗಳನ್ನು ಹಂತಹಂತವಾಗಿ ಅನುವಾದಿಸಲಾಗುತ್ತದೆ.
900 ಪುಟಗಳಷ್ಟು ೃಹತ್‌ಗ್ರಂಥವಾಗಿ ಇದು ಹೊರಹೊಮ್ಮಲಿದ್ದು, ವಚನ ಸಾಹಿತ್ಯದ ಹಿನ್ನೆಲೆಯನ್ನು ಪರಿಚಯಿಸುವ 110 ಪುಟಗಳ ಪೂರ್ವ ಪೀಠಿಕೆ ಇರಲಿದೆ. ವಚನಕಾರರ ಕಾಲದೇಶ, ಹಿನ್ನೆಲೆ ಸಹಿತ ಮುದ್ರಣಗೊಳ್ಳಲಿದೆ.
ಇಂಗ್ಲಿಷ್‌, ಫ್ರೆಂಚ್‌, ಸ್ಪ್ಯಾನಿಷ್‌, ಚೈನೀಸ್‌ ಭಾಷೆಗಳಿಗೂ ವಚನಗಳು ಅನುವಾದಗೊಳ್ಳಲಿವೆ. ಧಾರ್ಮಿಕ ವಚನಗಳಿಗಿಂತ ಸಾಮಾಜಿಕ ವಚನಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಕನ್ನಡ ವಿ.ವಿ. ವಿಶ್ರಾಂತ ಕುಲಪತಿ, ಪ್ರಾಧಿಕಾರದ ಸಮಗ್ರ ವಚನ ಸಂಪುಟಗಳ ಪ್ರಧಾನ ಸಂಪಾದಕರಾಗಿದ್ದ ಡಾ ಎಂ. ಎಂ. ಕಲಬುರ್ಗಿ ಈ ಅನುವಾದ ಕೈಂಕರ್ಯಕ್ಕೂ ಪ್ರಧಾನ ಸಂಪಾದಕರಾಗಿದ್ದಾರೆ. ಡಾವೀರಣ್ಣ ರಾಜೂರ, ಡಾಜಯಶ್ರೀ ದಂಡೆ ಇವರ ಜತೆಗಿದ್ದಾರೆ. ಕಲಬುರ್ಗಿ, ದೇಜಗೌ, ಪ್ರಧಾನಗುರುದತ್ತ, ಲಿಂಗದೇವರು ಹಳೆಮನೆ, ಉದಯನಾರಾಯಣಸಿಂಗ್‌, ಅರವಿಂದ ಜತ್ತಿ ಅವರನ್ನೊಳಗೊಂಡ ಮಾರ್ಗದರ್ಶಕ ಸಮಿತಿ ಜತೆಗೆ ನಿಂತಿದೆ.
ಸದ್ಯ 8 ಭಾಷೆಗೆ:
ಮೂರು ವರ್ಷದ ಅವಧಿಯಲ್ಲಿ 25 ಭಾಷೆಗಳಿಗೆ ಅನುವಾದಗೊಳ್ಳಲಿದ್ದರೂ ಆರಂಭದಲ್ಲಿ 8 ಭಾಷೆಗಳಿಗೆ ಅನುವಾದಿಸುವ ಕಾರ್ಯ ಭರದಿಂದ ಸಾಗಿದೆ. ಇಂಗ್ಲಿಷ್‌, ಹಿಂದಿ, ಸಂಸ್ಕೃತ, ತಮಿಳು, ತೆಲುಗು, ಪಂಜಾಬಿ, ಬಂಗಾಲಿ, ಮರಾಠಿ ಭಾಷೆಗಳಿಗೆ ಅನುವಾದಿಸಲು ಉಭಯ ಭಾಷಾ ತಜ್ಞರ ಪ್ರಧಾನ ಸಂಪಾದಕತ್ವದಲ್ಲಿ ಸಮಿತಿ ರಚಿಸಲಾಗಿದೆ. ಅನುವಾದಕರಿಗಾಗಿ ಕಮ್ಮಟಗಳು ನಡೆದಿವೆ. ಇವರು ಡಿಸೆಂಬರ್‌ ಅಂತ್ಯದೊಳಗೆ ಅನುವಾದಿಸಿ ಕೊಡಲಿದ್ದು, ಆನಂತರ ಆಯಾ ಭಾಷೆಯ ತಜ್ಞರು ಅನುವಾದಗಳ ಗುಣಮಟ್ಟವನ್ನು ಪರೀಕ್ಷಿಸಲಿದ್ದಾರೆ. ಆನಂತರವೇ ಮುದ್ರಣಕ್ಕೆ ಹೋಗಲಿದೆ.
136 ಶರಣರು:
12 ನೇ ಶತಮಾನದಿಂದೀಚಿಗೆ ವಿವಿಧ ಸಂಪಾದನಾಕಾರರು ಸುಮಾರು 136 ವಚನಕಾರರು ರಚಿಸಿದ 23 ಸಾವಿರ ವಚನಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಇಲ್ಲಿಯವರೆಗೆ ದಾಖಲೆಗೊಂಡಿರುವ ಎಲ್ಲಾ ವಚನಕಾರರನ್ನು ಒಳಗೊಳ್ಳುವ ಸಮಗ್ರ ಸಂಪುಟ ಇದಾಗಲಿದೆ. 900 ವರ್ಷಗಳ ಹಿಂದೆಯೇ ಆಗಬೇಕಾಗಿದ್ದ ಕೆಲಸವನ್ನು ಈಗ ಕೈಗೆತ್ತಿಕೊಂಡಿರುವುದ ತಮಗೆ ಸಮಾಧಾನ ತಂದಿದೆ. ಇಂಗ್ಲಿಷ್‌ ಹಾಗೂ ಹಿಂದಿಗೆ ಅನುವಾದಗೊಂಡರೆ ಉಳಿದ ಭಾಷೆಗೆ ಅನುವಾದ ಸುಲಭವೆಂಬ ಕಾರಣಕ್ಕೆ ಆ ಎರಡು ಭಾಷೆಗಳ ಅನುವಾದಕ್ಕೆ ಆದ್ಯತೆ ನೀಡಲಾಗಿದೆ ಎನ್ನುತ್ತಾರೆ ಅರವಿಂದ ಜತ್ತಿ.