Sunday, November 9, 2008

ಬಾಲ್ಯವೂ ಮುಖ್ಯ : ಆದ್ರೆ ಎಚ್‌ಐವಿ ಸಖ್ಯ

ಬಾಲ್ಯ-1
ಈಕೆಯ ಹೆಸರು ಋತು. ವರ್ಷ ಹತ್ತು. ಮೆಜೆಸ್ಟಿಕ್‌ನಲ್ಲಿ ಈಕೆಯ ಅಮ್ಮ ಲೈಂಗಿಕ ಕಾರ್ಯಕರ್ತೆ. ಹೊಟ್ಟೆಪಾಡಿಗಾಗಿ ನೆಚ್ಚಿಕೊಂಡ ವೃತ್ತಿ. ಜತೆಗೆ ಬ್ರೌನ್‌ಶುಗರ್‌ ಚಟ. ತಾಯಿ ತಿನ್ನುತ್ತಿದ್ದ ಬಿಳಿಯ ಸಕ್ಕರೆ ತಿಂದು ರೂಢಿಯಾಗಿ ಮತ್ತಿನಲ್ಲೇ ಮುಳುಗಿದ್ದಾಕೆ. ವೃತ್ತಿ ಜೀವನದಲ್ಲಿ ಮುನ್ನೆಚ್ಚರಿಕೆ ವಹಿಸದೇ ಇದ್ದುದರಿಂದ ಅಂಟಿಕೊಂಡ ಎಚ್‌ಐವಿ, ಏಡ್ಸ್‌ಗೆ ತಿರುಗಿ ತಾಯಿ-ತಂದೆ ಮೃತಪಟ್ಟರು. ಅನಾಥಳಾದ ಋತುಗೆ ಆಶ್ರಯ ನೀಡಿದ್ದು ಱಅಕ್ಸೆಪ್ಟ್‌ನ ಮಕ್ಕಳ ಮನೆ. ಇಲ್ಲಿ ಸೇರಿದಾಗ ಚಿಕ್ಕವಯಸ್ಸಿನಲ್ಲೇ ಮಾದಕ ವ್ಯಸನಿಯಾಗಿದ್ದ ಋತು, ಮಂಕಾಗಿರುತ್ತಿದ್ದಳು. ತಾಯಿಯಿಂದ ಬಳುವಳಿಯಾಗಿ ಬಂದಿದ್ದ ಎಚ್‌ಐವಿ ಜತೆಗಿತ್ತು. ಮಕ್ಕಳ ಮನೆಗೆ ಸೇರಿ ಎರಡು ವರ್ಷವಾಗಿದ್ದು, ಇದೀಗ ಮಾದಕ ವ್ಯಸನ ಮುಕ್ತಳಾಗಿ ಶಾಲೆಗೂ ಹೋಗುತ್ತಿದ್ದಾಳೆ. ಎಚ್‌ಐವಿ ಕೂಡ ನಿಯಂತ್ರಣದಲ್ಲಿದೆ. ಆಕೆಯ ಮುಖದಲ್ಲಿ ನಗು ಅರಳಿದೆ.
ಬಾಲ್ಯ-2
ಹೆಸರು ಶ್ರವ್ಯ. ಏಳು ವರ್ಷ. ತಮಗೆ ಎಚ್‌ಐವಿ ಬಂದಿದೆ ಎಂದು ಗೊತ್ತಾದ ಕೂಡಲೇ ತಂದೆ-ತಾಯಿ ಇಬ್ಬರೂ ಜತೆಗೇ ನೇಣಿಗೆ ಕೊರಳೊಡ್ಡಿದರು. ತನ್ನಂತ ಹಸುಗೂಸನ್ನು ಬಿಟ್ಟು ಯಾಕೆ ಸಾವಿಗೆ ಶರಣಾದರು ಎಂಬ ಪ್ರಜ್ಞೆಯೂ ಇಲ್ಲದ ವಯಸ್ಸು ಶ್ರವ್ಯಳದು. ಹಗ್ಗಕ್ಕೆ ಕುಣಿಕೆ ಹಾಕಿಕೊಂಡ ತಂದೆ-ತಾಯಿಯರ ನೆನಪು ಆಕೆಯನ್ನು ಬಿಡಲೊಲ್ಲದು. ಸಲಹಲು ಯಾರೂ ಇಲ್ಲದ ಶ್ರವ್ಯಳಿಗೂ ಕೂಡ ಎಚ್‌ಐವಿಯನ್ನು ಉಡುಗೊರೆಯಾಗಿ ಕೊಟ್ಟು ಅವರಿಬ್ಬರು ಪರಲೋಕ ಸೇರಿದ್ದರು. ತಂದೆ ತಾಯಿಯ ಗುಂಗಿನಲ್ಲೇ ಎಚ್‌ಐವಿ ಜತೆಗೆ ಅಕ್ಸೆಪ್ಟ್‌ಗೆ ಸೇರ್ಪಡೆಗೊಂಡ ಶ್ರವ್ಯ ಇದೀಗ ಮನೆಯ ವಾತಾವರಣವನ್ನು ಅನುಭವಿಸುತ್ತಿದ್ದಾಳೆ. ತನ್ನಂತೆಯೇ ಎಚ್‌ಐವಿ ಬಾಧಿತ ಮಕ್ಕಳೊಂದಿಗೆ ಪಾಟಿ ಚೀಲ ಹೆಗಲಿಗೆ ಹಾಕಿಕೊಂಡ ಶಾಲೆಗೂ ಹೋಗುತ್ತಿದ್ದಾಳೆ. ಎಚ್‌ಐವಿ ಇರುವುದು ಆಕೆಗೂ ಗೊತ್ತಾಗಿದ್ದು, ಸುತ್ತಲ ವಾತಾವರಣ ಆಕೆಯಲ್ಲಿ ವಿಶ್ವಾಸ ಮೂಡಿಸಿದೆ.
ಬಾಲ್ಯ-3
ಹೆಸರು ಮುಸ್ತಾಫ. 2 ವರ್ಷ. ಆತನಿಗೆ ಯಾರಿಟ್ಟ ಹೆಸರೋ ಅದು ಗೊತ್ತಿಲ್ಲ. ದೂರದ ಮುಂಬೈನಿಂದ ಬೆಂಗಳೂರಿನ ಅಕ್ಸೆಪ್ಟ್‌ ಮಕ್ಕಳ ಮನೆ ಸೇರಿದೆ. ಭಾಷೆಯೇ ಗೊತ್ತಿಲ್ಲದ, ಗುರುತು ಪರಿಚಯಸ್ಥರೇ ಇಲ್ಲದ ನೆಲೆಯಲ್ಲಿ ಆಡಿಕೊಂಡು ಬೆಳೆಯುತ್ತಿದೆ. ಎಚ್‌ಐವಿ ಹೋಗಲಿ, ಜ್ವರವೆಂದರೆ ಏನೆಂಬ ಅರಿವು ಅದಕ್ಕಿಲ್ಲ. ಮಕ್ಕಳ ಮನೆಯಲ್ಲಿರುವ ನಿಸ್ಪೃಹ ಸೇವಾಕರ್ತರು, ವೈದ್ಯರ ಉಪಚಾರದಲ್ಲಿ ಅದು ಬೆಳೆಯುತ್ತಿದೆ.
* * *
ನವೆಂಬರ್‌ 14 ಮಕ್ಕಳ ದಿನಾಚರಣೆ. ಭಾರತದ ಮೊದಲ ಪ್ರಧಾನಿ ಚಾಚಾ ನೆಹರು ತಮ್ಮ ಹುಟ್ಟಿದ ದಿನವನ್ನು ತಮ್ಮ ಪ್ರೀತಿಯ ಮಕ್ಕಳ ದಿನಾಚರಣೆಯಾಗಿ ಘೋಷಿಸಿದ ದಿನ. ತಾನು ಕಟ್ಟಿದ ನಾಡಿನಲ್ಲಿ ಇಂತಹ ನತದೃಷ್ಟ, ಸಮಾಜದಲ್ಲಿ ಯಾರಿಗೂ ಬೇಡವಾಗಿ, ಒಂದರ್ಥದಲ್ಲಿ ಱಕಳಂಕಿತರಾಗಿ ಮಕ್ಕಳು ಬದುಕಬೇಕಾದ ಸ್ಥಿತಿ ಉಂಟಾಗುತ್ತದೆ ಎಂದು ಗೊತ್ತಿದ್ದರೆ ನೆಹರೂ ಹಾಗೆಂದು ಘೋಷಿಸುತ್ತಿರಲಿಲ್ಲವೇನೋ. ಸದಾ ಗುಲಾಬಿಯಂತೆ ಮಕ್ಕಳನ್ನು ಪ್ರೀತಿಸುತ್ತಿದ್ದ ನೆಹರು ಈಗ ಇಂತಹ ಮಕ್ಕಳನ್ನು ನೋಡಿದ್ದರೆ ಏನೆಂದು ಪ್ರತಿಕ್ರಿಯಿಸುತ್ತಿದ್ದರೋ ಗೊತ್ತಿಲ್ಲ.
ಬೆಂಗಳೂರಿನ ಹೊರವಲಯದಲ್ಲಿರುವ ದೊಡ್ಡಗುಬ್ಬಿ ಸಮೀಪ ಱಅಕ್ಸೆಪ್ಟ್‌ ಎಂಬ ಸಂಸ್ಥೆ ಮಕ್ಕಳ ಮನೆ ನಡೆಸುತ್ತಿದೆ. ಕೆಆರ್‌ಸಿ ರಸ್ತೆಯಲ್ಲಿರುವ ಇಲ್ಲಿ ನಿರ್ಗತಿಕರಾದ ಆದರೆ ಎಚ್‌ಐವಿಯಿಂದ ಸಮೃದ್ಧರಾದ 16 ಮಕ್ಕಳು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ತಮಗೆ ಯಾರೂ ಇಲ್ಲವೆಂಬ ನೋವನ್ನು ಮರೆತಿದ್ದಾರೆ. ಹೆತ್ತ ಮಕ್ಕಳನ್ನೇ ಕಡೆಗಣಿಸಿ, ಕೈಯಾರೆ ಕೊಲೆ ಮಾಡುವ ಈ ದಿನಗಳಲ್ಲಿ ಯಾರದೋ ಮಕ್ಕಳನ್ನು ಇಲ್ಲಿ ಪ್ರೀತಿಯಿಂದ ಸಲಹಲಾಗುತ್ತಿದೆ. ಜಾತಿ, ಧರ್ಮ, ಲಿಂಗಬೇಧವೆಂಬುದು ಇಲ್ಲಿ ಕಾಣೆಯಾಗಿದೆ. ಮನುಷ್ಯ ಪ್ರೀತಿಯ ಸಹಜ ಕಕ್ಕುಲಾತಿ ಇಲ್ಲಿ ಸಮುದ್ರದಷ್ಟು ವಿಶಾಲವಾಗಿ ಹರಡಿಕೊಂಡಿದೆ.
ಎಚ್‌ಐವಿ ಬಾಧಿತ ಮಕ್ಕಳು ಹಾಗೂ ವಯಸ್ಕರಿಗೆ ಚಿಕಿತ್ಸೆ ನೀಡಲು 9 ಸಮಾನ ಮನಸ್ಕ ಸಹೃದಯರು ಸೇರಿ ಆರಂಭಿಸಿದ ಅಕ್ಸೆಪ್ಟ್‌ ಸಂಸ್ಥೆ ಅನಾಥ ಮಕ್ಕಳ ಪಾಲಿನ ತಾಯಿ- ತಂದೆ- ಶಿಕ್ಷಕ- ವೈದ್ಯರ ಪಾತ್ರವನ್ನು ನಿರ್ವಹಿಸುತ್ತಿದೆ. ಅಕ್ಸೆಪ್ಟ್‌ನ ಅಧ್ಯಕ್ಷ ರಾಜು ಮ್ಯಾಥ್ಯೂ ಹೇಳುವುದು ಹೀಗೆ: ಇಲ್ಲಿರುವ ಮಕ್ಕಳು ಒಂದೊಂದು ವಯಸ್ಸಿನವರಿದ್ದಾರೆ. 2 ವರ್ಷದಿಂದ 15 ವರ್ಷದವರೆಗಿನ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಅವರನ್ನು ನೋಡಲು ಇಬ್ಬರು ಕೇರ್‌ಟೇಕರ್‌, ಶಿಕ್ಷಣ ಕಲಿಸಲು ಒಬ್ಬರು ಶಿಕ್ಷಕರು, ಇಬ್ಬರು ಆಪ್ತ ಸಮಾಲೋಚಕರು, ಇಬ್ಬರು ವೈದ್ಯರು ಇದ್ದಾರೆ. ಪ್ರತಿಯೊಬ್ಬರಿಗೂ ಉಳಿದುಕೊಳ್ಳಲು ವ್ಯವಸ್ಥೆ, ಊಟ, ಬಟ್ಟೆ ಉಚಿತವಾಗಿ ನೀಡಲಾಗುತ್ತಿದೆ. ಹತ್ತಿರದ ಶಾಲೆಯೊಂದರಲ್ಲಿ ಇವರೆಲ್ಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬೆಳೆಯುವ ಮನಸ್ಸು, ಬರುತ್ತಿರುವ ಹರೆಯ, ಎಚ್‌ಐವಿಯಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬಂದೊದಗುವ ಕಾಯಿಲೆ, ಪೋಷಕರಿಲ್ಲದುದರಿಂದ ಮೂಡುವ ಅನಾಥಭಾವ ಈ ಎಲ್ಲದಕ್ಕೆ ಆಪ್ತಸಮಾಲೋಚನೆ ನೀಡಬೇಕಾದ ಹೊಣೆಗಾರಿಕೆ. ಸಾಮಾನ್ಯ ಮಕ್ಕಳಂತಿಲ್ಲದ ಇವರನ್ನು ನೋಡಿಕೊಳ್ಳುವಲ್ಲಿ ತಾಳ್ಮೆ ಅಗತ್ಯ ಎನ್ನುತ್ತಾರೆ.
ದುಡಿಯುವ ದೈಹಿಕ ಸಾಮರ್ಥ್ಯ ಕಡಿಮೆ ಇರುವುದರಿಂದ ಇವರ ಭವಿಷ್ಯದ ಬಗ್ಗೆ ತಮಗೆ ಚಿಂತೆಯಾಗಿದೆ. ಹೇಗೋ ಓದಿಸಬಹುದು. ಮಾನಸಿಕ ಸದೃಢತೆ ಇಲ್ಲದೇ ಇರುವುದರಿಂದ ಓದಿನಲ್ಲಿ ಇವರು ಹೆಚ್ಚಿನದನ್ನು ಸಾಧಿಸಲಾರರು. ಹಾಗಾಗಿ ಇವರಿಗೆ ಸ್ವ ಉದ್ಯೋಗ ತರಬೇತಿ ನೀಡಲು ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ಮುಂದೆ ಬರಬೇಕಿದೆ. ತಂದೆತಾಯಂದಿರ ನೆಂಟರು ಇವರಿಗೆ ಸಹಾಯ ಹಸ್ತ ಚಾಚಬೇಕು, ಆದರೆ ಯಾರೂ ಮುಂದೆ ಬರುವುದಿಲ್ಲ ಎಂದು ಹೇಳುವ ರಾಜು ಮ್ಯಾಥ್ಯೂ, ಸಹೃದಯರು ದತ್ತು ತೆಗೆದುಕೊಳ್ಳಲು ಮುಂದೆ ಬರಬೇಕೆಂದು ಆಶಿಸುತ್ತಾರೆ. ಇಲ್ಲವಾದಲ್ಲಿ ಈ ಮಕ್ಕಳಿಗೆ ಬಟ್ಟೆ, ಊಟ, ಸ್ಕೂಲು ಬ್ಯಾಗು, ಪುಸ್ತಕ ಕೊಡಿಸಲಾದರೂ ಸಹಾಯ ಮಾಡಿದರೆ ಉಪಕಾರವಾಗುತ್ತದೆ ಎನ್ನುತ್ತಾರೆ.
ಇಲ್ಲಿ ಮಕ್ಕಳಿಗೆ ಮಾತ್ರವಲ್ಲದೇ ಎಚ್‌ಐವಿ ಬಾಧಿತ ವಯಸ್ಕರಿಗೂ ಚಿಕಿತ್ಸೆ ನೀಡುವ ಸೌಲಭ್ಯವಿದೆ. 35 ಮಂದಿ ವಯಸ್ಕರಿಗೆ ಉಳಿದುಕೊಂಡು ಚಿಕಿತ್ಸೆ ಪಡೆಯಲು ಸಾಧ್ಯವಿದೆ. ಎಚ್‌ಐವಿ ಬಾಧಿತರಿಗೆ ಸಾಮಾನ್ಯವಾಗಿ ತಗಲುವ ಟಿ.ಬಿ. ಕಾಯಿಲೆಯಿಂದ ತೊಂದರೆಗೊಳಗಾದವರಿಗೆ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.
ಎಚ್‌ಐವಿ ಬಾಧಿತ ಮಕ್ಕಳು:
ಕರ್ನಾಟಕದಲ್ಲಿ ದಾಖಲಾದ ಎಚ್‌ಐವಿ ಬಾಧಿತ ಮಕ್ಕಳ ಸಂಖ್ಯೆ 5,700. ಇವರಲ್ಲಿ 1663 ಮಕ್ಕಳು ಆ್ಯಂಟಿ ರೆಟ್ರೋ ವೈರಲ್‌ ಥೆರಪಿಗೆ ಒಳಗಾಗಿದ್ದಾರೆ. ಅಂದರೆ ಇವರಿಗೆ ಏಡ್ಸ್‌ ತಗುಲಿದೆ. ಸರ್ಕಾರಿ ಲೆಕ್ಕ ಇದಾಗಿದ್ದು ಇನ್ನೂ ಪತ್ತೆಯಾಗದವರ ಸಂಖ್ಯೆ ಹೆಚ್ಚಾಗಿಯೇ ಇರಬಹುದೆಂದು ಅಂದಾಜಿಲಾಗಿದೆ.
ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ( ನ್ಯಾಕೋ) ಪ್ರಕಾರ ಭಾರತದಲ್ಲಿ 70 ಸಾವಿರ ಮಕ್ಕಳು ಎಚ್‌ಐವಿ ಬಾಧಿತರಾಗಿದ್ದಾರೆ. ಇವರಲ್ಲಿ 10 ಸಾವಿರ ಮಂದಿ ಎ ಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಎಚ್‌ಐವಿ ಬಾಧಿತರ ಸಂಖ್ಯೆ 5.1 ಮಿಲಿಯನ್‌ ಎಂದು ಲೆಕ್ಕ ಹಾಕಲಾಗಿದೆ. 2005 ರಲ್ಲಿ ಅಂದಾಜು ಮಾಡಿದಂತೆ ಶೇ.33 ರಷ್ಟು ಮಂದಿ ಏಡ್ಸ್‌ ಬಾಧಿತರು 15 ರಿಂದ 29 ವರ್ಷದ ಒಳಗಿನವರು. ದೇಶದ ಮೂರನೇ ಒಂದು ಭಾಗದಷ್ಟು ಅಂದರೆ 10-24 ವರ್ಷ ವಯಸ್ಸಿನವರು ಸುಲಭವಾಗಿ ಎಚ್‌ಐವಿ ಸೋಂಕು ತಗಲುವ ಸಾಧ್ಯತೆಯಿರುವವರಿದ್ದಾರೆಂದು ವಿಶ್ಲೇಷಿಸಲಾಗಿದೆ. ಲೈಂಗಿಕ ಕುತೂಹಲವುಳ್ಳ ಆದರೆ ಸುರಕ್ಷಿತ ಲೈಂಗಿಕತೆ ಬಗ್ಗೆ ಪರಿಜ್ಞಾನವಿಲ್ಲದ ವಯಸ್ಸಿನವರು ಸುಲಭವಾಗಿ ಎಚ್‌ಐವಿಗೆ ತುತ್ತಾಗಬಹುದಾಗಿದ್ದು, ಇವರಲ್ಲಿ ಅರಿವು ಮೂಡಿಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ. ಇದರ ಜತೆಗೆ ಆತಂಕ ಪಡುವ ಸಂಗತಿಯೆಂದರೆ ದೇಶದಲ್ಲಿ 3 ಲಕ್ಷ ಮಕ್ಕಳನ್ನು ವ್ಯಾವಹಾರಿಕವಾಗಿ ಲೈಂಗಿಕ ಕಾರ್ಯಕರ್ತನ್ನಾಗಿಸಲಾಗಿದೆ.
ಚಿಲ್ಡ್ರನ್‌ ಅಫೆಕ್ಟಡ್‌ ಬೈ ಎಚ್‌ಐವಿ ಆರ್‌ ಏಡ್ಸ್‌(ಕಾಹಾ) ಚಾರ್ಟರ್‌ ಎಂದು ಕರೆಯಲಾದ ಕಾರ್ಯಕ್ರಮದಲ್ಲಿ 53 ಮಕ್ಕಳು ಪಾಲ್ಗೊಂಡಿದ್ದರು. ನ್ಯಾಕೋದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ 14 ಶಿಫಾರಸ್ಸುಗಳನ್ನು ಮಾಡಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಮಕ್ಕಳ ಬೆಂಬಲಿಗ ಗುಂಪು ರಚನೆ, ಎಚ್‌ಐವಿ ಬಾಧಿತ ಮಕ್ಕಳಲ್ಲಿ ಅರಿವು ಮೂಡಿಸುವುದು, ಮನೋಸಾಮಾಜಿಕ ಬೆಂಬಲವನ್ನು ಕಲ್ಪಿಸುವುದು, ಮಕ್ಕಳ ಆಪ್ತಸಮಾಲೋಚಕರನ್ನು ತರಬೇತುಗೊಳಿಸುವುದು, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು, ಪೋಷಕರಿಗೆ ಸಮಾಜೋ ಆರ್ಥಿಕ ಬೆಂಬಲ ನೀಡುವುದು, ತಪ್ಪು ಕಲ್ಪನೆ ಹಾಗೂ ತಾರತಮ್ಯ ಭಾವನೆ ತೊಲಗಿಸುವುದು, ಎಚ್‌ಐವಿ ಮಕ್ಕಳ ಬೆಂಬಲಕ್ಕೆ ನಿಲ್ಲುವ ಸಂಸ್ಥೆಗಳನ್ನು ಬಲಗೊಳಿಸುವುದು, ಶಿಕ್ಷಣ ಹಾಗೂ ವಸತಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಆಗಬೇಕಿದೆ ಎಂದು ಶಿಫಾರಸ್ಸು ಹೇಳಿದೆ.

No comments: