Friday, November 14, 2008

ಬೀದಿಗೆ ಬಿತ್ತು ಕೈ

ಕೈ ಕೈ ಜೈ ಜೈ ಎಂದು ಘೋಷಣೆ ಕೂಗಿಕೊಂಡು ತಮ್ಮ ಕೈಯನ್ನು ಮೇಲೆತ್ತಿಕೊಂಡು ಹೋಗುತ್ತಿದ್ದವರು ಒಬ್ಬೊಬ್ಬರಾಗಿ `ಹಸ್ತ'ವನ್ನು ಬೀದಿಗೆ ಬಿಸಾಕಿ ನಡೆಯುತ್ತಿದ್ದಾರೆ. ಕಾಂಗ್ರೆಸ್‌ನ ಒಳಜಗಳ, ನಾಯಕರ ಮಧ್ಯದ ಅಸಮಾಧಾನದಿಂದಾಗಿ ಮುರಿದ ಮನೆಯಾಗಿರುವ ಕಾಂಗ್ರೆಸ್‌ನಲ್ಲಿ ಅಳಿದುಳಿದಿರುವ ನಾಯಕರು ಮಹಾಚುನಾವಣೆ ನಂತರ ಬೀದಿಯಲ್ಲಿ ಜೈಜೈ ಹೇಳುತ್ತಾ ಹರ-ತಾಳ ನಡೆಸುವ ಸನ್ನಿವೇಶ ಸೃಷ್ಟಿಯಾಗಲಿದೆ.
ವಿವಿಧ ರಾಜ್ಯ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ನ ಪ್ರಮುಖರ ತಾರಾತಿಗಡಿ ಹೇಳಿಕೆ, ಮಾತಿನ ವರಸೆ ನೋಡಿ, ಕೆಂಪುಕೋಟೆ ಮೇಲೆ ಧ್ವಜ ಹಾರಿಸುವ ಕನಸಿ ಸಂಭ್ರಮದಲ್ಲಿ ಅಡ್ವಾಣಿ ಉಲ್ಲಸಿತರಾಗುತ್ತಿದ್ದಾರೆ. ಬಡಿದಾಡಿ ಕಿತ್ತುಕೊಳ್ಳಬೇಕಾದ ಪ್ರಧಾನಿ ಪಟ್ಟ ಪ್ರಯಾಸವಿಲ್ಲದೇ ಅಡ್ವಾಣಿ ತಟ್ಟೆಗೆ ಬಂದು ಬೀಳಲಿದೆ. ಅಷ್ಟರಮಟ್ಟಿಗೆ ಕಾಂಗ್ರೆಸ್‌ ಸೋತು ಸುಣ್ಣವಾಗಿದೆ. ಆಂತರಿಕ ಕಚ್ಚಾಟ, ಸಮರ್ಥ ನಾಯಕತ್ವದ ಕೊರತೆ, ದೂರದರ್ಶಿತ್ವವಿಲ್ಲದ ಕಾರ್ಯಕ್ರಮಗಳು, ಅಡಾತಡಿ ನಿರ್ಧಾರಗಳು ಹೀಗೆ ಸಾಲುಸಾಲು ಇಳಿಮೆಟ್ಟಿಲುಗಳ ಮೇಲೆ ನಿಂತ ಕಾಂಗ್ರೆಸ್‌ನ್ನು ಸ್ವಯಂಕೃತ ಪಾಪಕೂಪಕ್ಕೆ ತಳ್ಳಲು ವಿಶ್ವದ ಆರ್ಥಿಕ ಕುಸಿತ ಭೂತದಂತೆ ಬಂದು ನಿಂತಿದೆ. ಚುನಾವಣೆ ಮನೆಯ ಗೇಟಿಗೆ ಬಂದು ನಿಂತಿರುವ ಹೊತ್ತಿನಲ್ಲಿ ಬಿಗಡಾಯಿಸಿರುವ ಆರ್ಥಿಕ ಮಹಾಕುಸಿತ ಕಾಂಗ್ರೆಸ್‌ನ ಅಧಿಕಾರದ ಗೋರಿಗೆ ಕೊನೆ ಹಿಡಿ ಮಣ್ಣು ಹಾಕಲಿದೆ.
ಮ್ಯಾಗಿಚಳಿ:
ಡಿಸೆಂಬರ್‌ನಲ್ಲಿ ಕೊರೆಯುವ ಚಳಿ ಆರಂಭವಾಗುವ ಮೊದಲೇ ಸೋನಿಯಾಗಾಂಧಿಯವರ ಆಪ್ತಬಳಗದಲ್ಲಿ ಅತ್ಯಾಪ್ತರಾದ ಕರ್ನಾಟಕದ ಮಾರ್ಗರೆಟ್‌ ಆಳ್ವ, ಅಪಸ್ವರದಲ್ಲಿ ಬಾಯಿ ತೆರೆವ ಮೂಲಕ ಕಾಂಗ್ರೆಸ್‌ನಲ್ಲಿ ಚಳಿಯ ನಡುಕ ಹುಟ್ಟಿಸಿದ್ದಾರೆ. ಅವರ ಮಾತು ಹೈಕಮಾಂಡ್‌ ವಿರುದ್ಧವಲ್ಲದಿದ್ದರೂ ಕಾಂಗ್ರೆಸ್‌ನ ಪರಂಪರಾನುಗತ ಹೈಕಮಾಂಡ್‌ ಸಂಸ್ಕೃತಿಗೆ ವ್ಯತಿರಿಕ್ತವಾಗಿದೆ. ತಮ್ಮ ಮೊಮ್ಮಗನಿಗೆ ಸೀಟು ಸಿಗಲಿಲ್ಲವೆಂಬ ಅಸಮಾಧಾನದಲ್ಲಿ ವಿಧಾನಸಭೆ ಚುನಾವಣೆ ವೇಳೆ ನಿಷ್ಕ್ರಿಯತೆ ತೋರಿಸಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಜಾಫರ್‌ಷರೀಫ್‌ `ಮಾರ್ಗರೆಟ್‌ ಆಳ್ವ ತಮ್ಮ ಅಸಮಾಧಾನವನ್ನು ಈ ರೀತಿ ಬಹಿರಂಗವಾಗಿ ವ್ಯಕ್ತಪಡಿಸಬಾರದಿತ್ತು. ಪಕ್ಷದ ವಲಯದಲ್ಲಿ ಅದನ್ನು ಚರ್ಚಿಸಬಹುದಿತ್ತೆಂದು' ಹೇಳಿರುವುದನ್ನ ಈ ಹಿನ್ನೆಲೆಯಲ್ಲಿ ನೋಡಬೇಕು.
ಸೋನಿಯಾರ `ಥಿಂಕ್‌ಟ್ಯಾಂಕ್‌' ಬಳಗದ ಸದಸ್ಯೆ ಮಾರ್ಗರೆಟ್‌ ಆಳ್ವ ಬಹಿರಂಗವಾಗಿ ಕಾಂಗ್ರೆಸ್‌ ವಿರುದ್ಧ ಮಾತಾಡುವ ಮೂಲಕ ಕಾಂಗ್ರೆಸ್‌ನಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಅದರಿಂದ ಮ್ಯಾಗಿ ಎಷ್ಟು ಕಳೆದುಕೊಂಡಿದ್ದಾರೆಂಬುದಕ್ಕಿಂತ ಕಾಂಗ್ರೆಸ್‌ ಎಷ್ಟು ಕಳೆದುಕೊಳ್ಳಲಿದೆ ಎಂಬುದು ಮುಖ್ಯ.
ಅವರ ಆಪಾದನೆ ಮುಖ್ಯವಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ ಮಾರಿಕೊಳ್ಳಲಾಗಿದೆ ಎಂಬುದಾಗಿತ್ತು. ಅವರು ಬಹಿರಂಗಪಡಿಸಿರುವುದು ರಹಸ್ಯವೇನಲ್ಲ. ರಾಜ್ಯದ ಹಿರಿ-ಕಿರಿಯ ನಾಯಕರು ಚುನಾವಣೆ ಫಲಿತಾಂಶದ ನಂತರ ಅಂತರಂಗ-ಬಹಿರಂಗವಾಗಿ ಈ ರೀತಿ ಅರ್ಥ ಬರುವ ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ ಸೋತ ಹತಾಶೆಯ ಹಿನ್ನೆಲೆಯಲ್ಲಿ ಈ ರೀತಿಯ ಅಭಿಪ್ರಾಯಗಳಿಗೆ ಆಗ ಮನ್ನಣೆ ಬರಲಿಲ್ಲ.
ಆಗಲೇ ಹೈಕಮಾಂಡ್‌ ಎಚ್ಚೆತ್ತಿದ್ದರೆ ಈಗಿನಷ್ಟು ಪರಿಸ್ಥಿತಿ ಬಿಗಡಾಯಿಸುತ್ತಿರಲಿಲ್ಲ. ಸೋಲಿಗೆ ಕಾರಣರಾದ ಆಗಿನ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕನಂತಹ ಆಯಕಟ್ಟಿನ ಸ್ಥಾನ ನೀಡಿದ್ದು, ಸಿದ್ದರಾಮಯ್ಯ, ಎಸ್‌.ಎಂ. ಕೃಷ್ಣರಂತಹ ವರ್ಚಸ್ವಿ ನಾಯಕರನ್ನು ಕಡೆಗಣಿಸಿದ್ದು ಇವೆಲ್ಲವೂ ಆಕ್ರೋಶದ ಬೆಂಕಿಗೆ ತುಪ್ಪ ಸುರಿದ ಕ್ರಮವಾಗಿದ್ದವು. ಮೈಸೂರು ಹಾಗೂ ರಾಜ್ಯದ ಇತರ ಭಾಗದಲ್ಲಿ ಕನಿಷ್ಠ 15 ಸೀಟು ತರಲು ಕಾರಣರಾಗಿದ್ದ ಸಿದ್ದುಗೆ ಕೈಕೊಟ್ಟಿದ್ದು ಕಾಂಗ್ರೆಸ್‌ ಹೈಕಮಾಂಡ್‌ ಇಟ್ಟ ಮೊದಲ ತಪ್ಪು ಹೆಜ್ಜೆ.
ಇದರ ಜತೆಗೆ ವಿಧಾನಸಭೆ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರದಿಂದ ಸೋಲು ಕಂಡಿದ್ದ ಆರ್‌.ವಿ. ದೇಶಪಾಂಡೆಗೆ ಕೆಪಿಸಿಸಿ ಪಟ್ಟ ಕಟ್ಟಿದ್ದು ಮತ್ತೊಂದು ತಪ್ಪು ನಡೆ. ಹೇಳಿಕೇಳಿ ಯಾವುದೇ ಮತಬ್ಯಾಂಕ್‌ನ ಪ್ರಬಲ ಹಿನ್ನೆಲೆಯಿಲ್ಲದ ದೇಶಪಾಂಡೆಗೆ ಅಧಿಕಾರ ವಹಿಸಿಕೊಡುವ ಮೂಲಕವೇ, ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ನ ಅನಭಿಷಕ್ತ ರಾಣಿಯಂತಿದ್ದ ಮಾರ್ಗರೆಟ್‌ ಆಳ್ವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಇರುಸು ಮುರುಸು ಉಂಟು ಮಾಡಿತ್ತು. ಜತೆಗೆ ಬೆಂಗಳೂರಿನ ಸರ್ವಜ್ಞನಗರದಲ್ಲಿ ಆಳ್ವ ಪುತ್ರ ನಿವೇದಿತ್‌ ಆಳ್ವಗೆ ಟಿಕೆಟ್‌ ಕೊಡದೇ, ಕೆ.ಜೆ. ಜಾರ್ಜ್‌ಗೆ ಟಿಕೆಟ್‌ ನೀಡಿದ್ದು, ಮ್ಯಾಗಿ ಸಿಟ್ಟಿಗೆ ಕಾರಣವಾಗಿತ್ತು. ಇವರೆಡರ ಸಿಟ್ಟನ್ನು ಮ್ಯಾಗಿ ಒಮ್ಮಿಂದೊಮ್ಮೆಗೆ ಹೊರ ಹಾಕಿದ್ದೇ ಹೈಕಮಾಂಡ್‌ನ ಅವಕೃಪೆಗೆ ಕಾರಣವಾಗಬೇಕಾಯಿತು.
ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಮಾರಾಟ ಕಾಂಗ್ರೆಸ್‌ನಲ್ಲಿ ಮಾತ್ರ ನಡೆದಿಲ್ಲ. ಬಿಜೆಪಿಯಲ್ಲಿ ಕೂಡ ಅದೇ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಅನಂತಕುಮಾರ್‌, ಆರ್‌. ಅಶೋಕ್‌, ಯಡಿಯೂರಪ್ಪ ಎಲ್ಲರೂ ಸವ್ವಾಸೇರಿಗೆ ಬಿದ್ದವರಂತೆ ವ್ಯಾಪಾರ ಕುದುರಿಸಿದವರೆ. ವ್ಯಾಪಾರದ ಕಾರಣಕ್ಕೆ ದೆಹಲಿಯಲ್ಲಿ ನಡೆದ ಬಿಜೆಪಿ ಉನ್ನತ ಮಟ್ಟದ ಸಭೆಯಲ್ಲಿ ಯಡ್ಡಿ-ಅನಂತ್‌ ಮಧ್ಯೆ ತಾರಾಮಾರಿಯೇ ನಡೆದಿತ್ತು. ನೀನು-ತಾನು ಎಂಬ ಮಾತುಗಳನ್ನು ಆಡಿಕೊಂಡಿದ್ದರು. ಜೆಡಿ ಎಸ್‌ನ `ದ್ರೋಹ'ದ ಅಲೆಯಲ್ಲಿ ಕಮಲ ಅರಳಿತ್ತು. ಈಗ ಟಿಕೆಟ್‌ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಮಾರಾಟವಾದ ಬಗ್ಗೆ ಗಟ್ಟಿಯಾಗಿ ಗಂಟಲು ಹರಿದುಕೊಳ್ಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಮಾನ್‌ ಡಿ.ವಿ. ಸದಾನಂದಗೌಡರು, ಬಿಜೆಪಿಯ ಬಿ ಫಾರಂನ್ನು ತಾವೇ ನಿರ್ಧರಿಸಿ ಕೊಟ್ಟಿದ್ದರೆ ಎಂದು ಅವರೇ ನಂಬುವ ದೇವರೆದುರು ಪ್ರಮಾಣ ಮಾಡಿ ಹೇಳಲು ತಯಾರಿದ್ದಾರೆಯೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಲಾರರು.
ಕಾಂಗ್ರೆಸ್‌ನವರು ತಮ್ಮ ಪಕ್ಷದವರಿಗೆ ಟಿಕೆಟ್‌ ಮಾರಿಕೊಂಡರು. ಆದರೆ ಬಿಜೆಪಿ ಬೇರೆ ಪಕ್ಷದ ಚಿಹ್ನೆಯಡಿ ಜನರೇ ಆರಿಸಿ ಕಳಿಸಿದ್ದ ಶಾಸಕರನ್ನೇ ಖರೀದಿ ಮಾಡುವ ಮೂಲಕ ಮಾಡಿದ್ದು ಇನ್ನೇನು? ಬಿಜೆಪಿಯವರು ಶಾಸಕರನ್ನು ದುಡ್ಡುಕೊಟ್ಟು, ಮಂತ್ರಿಗಿರಿ ಆಸೆ ತೋರಿಸಿ ಖರೀದಿಸಿರುವಾಗ ಕಾಂಗ್ರೆಸ್‌ನ್ನು ಟೀಕಿಸಲು ನೈತಿಕ ಹಕ್ಕು ಎಲ್ಲಿದೆ ಸದಾನಂದಗೌಡರೆ? ರಾಜಸ್ತಾನದಲ್ಲೂ ಬಿಜೆಪಿ ಟಿಕೆಟ್‌ ಮಾರಾಟವಾಗಿದೆ ಎಂಬ ಆಪಾದನೆ ಬಗ್ಗೆ ಗೌಡರು ಏನು ಹೇಳುತ್ತಾರೆ?
ಚಳಿ ಪರಿಣಾಮ:
ಮ್ಯಾಗಿ ಹುಟ್ಟಿಸಿದ ಚಳಿಗೆ ಕಾಂಗ್ರೆಸ್‌ನಲ್ಲಿ ಉಡುರು ಶುರುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಇದ್ದ ಸಂಸದ ಆರ್‌.ಎಲ್‌. ಜಾಲಪ್ಪ, ಆಳ್ವ ಹೇಳಿದ್ದು ಸತ್ಯವೆಂದು ಪ್ರಮಾಣೀಕರಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಅವರ ಮಗ ಜೆ. ನರಸಿಂಹಸ್ವಾಮಿಗೆ ಟಿಕೆಟ್‌ ನೀಡಿ, ಕಾಂಗ್ರೆಸ್‌ ಪಕ್ಷ ಗೆಲ್ಲಿಸಿತು ತಾನೆ? ಆನಂತರ ನರಸಿಂಹಸ್ವಾಮಿ `ಕೊಳಚೆ ನಿರ್ಮೂಲನಾ ಮಂಡಳಿ' ಆಸೆಗೆ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಿದ್ದು ಯಾಕೆ? ಜಾಲಪ್ಪ ಆ ಚುನಾವಣೆಯಲ್ಲಿ ತಮ್ಮ ಮಗನಿಗೆ ಬೆಂಬಲ ನೀಡದೇ ಇದ್ದರೆ ನರಸಿಂಹಸ್ವಾಮಿ ಆಯ್ಕೆಯಾಗುತ್ತಿದ್ದರೆ? ಈ ಪ್ರಶ್ನೆಯನ್ನು ಜಾಲಪ್ಪ ಕೇಳಿಕೊಳ್ಳಬೇಕಿದೆ.
ಆದರೆ ಜಾಲಪ್ಪ ಹೀಗೆ ಮ್ಯಾಗಿಯನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್‌ ಗಾಯಕ್ಕೆ ಖಾರ ಸವರಿದ್ದಾರೆ. ಜತೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅದು ಕಾಂಗ್ರೆಸ್‌ಗೆ ನಿವೃತ್ತಿಯೋ ಅಥವಾ ಬೇರೆ ಪಕ್ಷದ ಜತೆ ಮಿಲಾಕತ್‌ಗೆ ದಾರಿಯೋ ಎಂಬುದನ್ನು ಕಾಲವೇ ಹೇಳಬೇಕಿದೆ. ಹಿಂದುಳಿದ ವರ್ಗದ ಪ್ರಮುಖ ನಾಯಕರಲ್ಲೊಬ್ಬರಾದ ಜಾಲಪ್ಪ ಕಾಂಗ್ರೆಸ್‌ನಿಂದ ನಿರ್ಗಮಿಸುತ್ತಿರುವುದು ಹೇಗೆ ಲೆಕ್ಕ ಹಾಕಿದರೂ ಪಕ್ಷಕ್ಕೆ ನಷ್ಟವೇ ಎಂಬುದರಲ್ಲಿ ಎರಡು ಮಾತಿಲ್ಲ.
ಇದರ ಜತೆಗೆ ಸಿದ್ಧರಾಮಯ್ಯ ಕೂಡ ತಮ್ಮ ಧ್ವನಿ ಸೇರಿಸಿದ್ದಾರೆ. ಮ್ಯಾಗಿ ಹೇಳಿರುವುದು ಸತ್ಯ. ಹೈಕಮಾಂಡ್‌ ಈ ಬಗ್ಗೆ ಚಿಂತಿಸಬೇಕೆಂದು ಸಲಹೆ ನೀಡಿದ್ದಾರೆ. ಜತೆಗೆ ಉಪಚುನಾವಣೆಯಲ್ಲಿ ಜೆಡಿ ಎಸ್‌ ಜತೆ ಕೈ ಜೋಡಿಸಿದ್ದೇ ಆದರೆ ತಾವು ಕೈಗೆ ಗುಡ್‌ಬೈ ಹೇಳುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲಿಗೆ ಅವರು ಒಂದು ಕಾಲು ಹೊರಗಿಟ್ಟಿರುವುದು ದಿಟ. ಮ್ಯಾಗಿಯ ನಡೆಯಿಂದ ಕಾಂಗ್ರೆಸ್‌ನ ಎರಡು ಕಂಬಗಳು ಅಲ್ಲಾಡುತ್ತಿವೆ.
ರಾಷ್ಟ್ರಮಟ್ಟದಲ್ಲೂ ಮ್ಯಾಗಿ ನಡೆ ಕಾಂಗ್ರೆಸ್‌ನ್ನ ಅದುರಿಸಿದೆ. ಬಿಹಾರ ಪ್ರತಿಪಕ್ಷ ನಾಯಕ ಆಲಂ ಖುರ್ಷಿದ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಿರಿಯ ನಾಯಕ ಪಿ. ಶಿವಶಂಕರ್‌ ಕೂಡ ಮ್ಯಾಗಿಗೆ ಬೆಂಬಲವಾಗಿ ನಿಂತಿದ್ದಾರೆ. ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಮ್ಯಾಗಿ ನೀಡಿರುವ ಆಘಾತ ಕಾಂಗ್ರೆಸ್‌ನ ಮಟ್ಟಿಗೆ ಆತ್ಮಘಾತುಕವಾದುದು. ಹಾಗೆಯೇ ಆಯಾ ರಾಜ್ಯಗಳ ಚುನಾವಣೆಗೆ ಮುನ್ನೆಚ್ಚರಿಕೆಯೂ ಹೌದು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಚಿಂತಿಸುವುದಕ್ಕೆ ಇದು ಸಕಾಲ.
ಬಿಜೆಪಿಗೆ ಅಸ್ತ್ರ:

ದೇಶದಲ್ಲಿ ನಡೆದ ಭಯೋತ್ಪಾದನಾ ವಿಧ್ವಂಸಕ ಕೃತ್ಯಗಳ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಬಿಜೆಪಿ ಮಾಲೇಗಾಂವ್‌ ಸ್ಪೋಟದ ಅಪಖ್ಯಾತಿಯಲ್ಲಿ ಮಂಕಾಗಿತ್ತು. ಭಯೋತ್ಪಾದನೆಯೆಂಬುದು ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ಬೆಂಬಲಿತ ಮುಸ್ಲಿಮರ ಕೃತ್ಯವೆಂಬ ಅಸ್ತ್ರವನ್ನು ಬಳಸುತ್ತಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿತ್ತು.
ಈ ಪರಿಸ್ಥಿತಿಯಿಂದ ಬಚಾವಾಗಲು ಸಿಕ್ಕಿದ ಪ್ರಮುಖ ಅಸ್ತ್ರವೆಂದರೆ ಕಾಂಗ್ರೆಸ್‌ನ ಟಿಕೆಟ್‌ ಮಾರಾಟ. ಮಾರ್ಗರೆಟ್‌ ಆಳ್ವರ ಹೇಳಿಕೆಯಿಂದ ಸಂತುಷ್ಟಗೊಂಡವರು ಬಿಜೆಪಿ ಮುಖಂಡರು. ಈ ಸಂಭ್ರಮದಲ್ಲಿದ್ದ ಬಿಜೆಪಿ ಮಂದಿಗೆ ಇದೀಗ ರಾಜಸ್ತಾನದಲ್ಲಿ ಬಿಜೆಪಿ ಟಿಕೆಟ್‌ ಮಾರಾಟವಾಗಿದೆ ಎಂದು ಬಿಜೆಪಿ ಸಂಸದ ವಿಶ್ವೇಂದ್ರಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಹೇಳಿಕೇಳಿ ಅಲ್ಲಿನ ಮುಖ್ಯಮಂತ್ರಿ ವಸುಂಧರರಾಜೆ ಅವರ ಆಪ್ತರು. ಬಿಜೆಪಿಯಲ್ಲಿ ಬಾಂಬ್‌ ಸಿಡಿದಿದ್ದರಿಂದ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.
ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಟಿಕೆಟ್‌ ಮಾರಾಟದ ಸಂಗತಿಯನ್ನೇ ಪ್ರಧಾನ ಅಸ್ತ್ರವಾಗಿ ಬಳಸಿಕೊಳ್ಳಬೇಕೆಂದಿದ್ದ ಬಿಜೆಪಿ ಮುಖಂಡರು ಈಗ ತಲ್ಲಣಿಸಿದ್ದಾರೆ.
ಮ್ಯಾಗಿ ಮುಂದೆ?
ಬಾಯಿ ತೆರೆಯುವ ಮೂಲಕ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಕಳೆದುಕೊಂಡ ಮಾರ್ಗರೆಟ್‌ ಆಳ್ವ ಮುಂದಿನ ಹಾದಿಯೇನು? ಎಂಬುದು ನಿಗೂಢವಾಗಿದೆ. ಬಹುಜನ ಸಮಾಜ ಪಕ್ಷ ಸೇರಲಿದ್ದಾರೆಂದು ಹೇಳಲಾಗುತ್ತಿದೆಯಾದರೂ ಆ ಪಕ್ಷಕ್ಕೆ ಕರ್ನಾಟಕದಲ್ಲಿ ಭವಿಷ್ಯವಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಉನ್ನತ ಸ್ಥಾನ ಅಲಂಕರಿಸಿ, ಪ್ರಭಾವಿ ಹುದ್ದೆ ಹೊಂದಿದ್ದ ಆಳ್ವ, ಬಿ ಎಸ್‌ಪಿಯ ಪ್ರಶ್ನಾತೀತ ನಾಯಕಿ ಮಾಯಾವತಿಯ ಮರ್ಜಿಗೆ ತಕ್ಕಂತೆ ನಡೆಯುವುದು ಕಷ್ಟ. ಹಾಗಾಗಿ ಅವರು ಅಲ್ಲಿಗೆ ಹೋಗಲಾರರು.
ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಗೆಲ್ಲಬೇಕೆಂಬ ಪಣತೊಟ್ಟಿರುವ ಬಿಜೆಪಿ ಯಾವ ರಾಜಕೀಯ ತಂತ್ರಗಾರಿಕೆ ಹೆಣೆಯಲಿದೆ ಎಂದು ನೋಡಬೇಕಿದೆ. ಉತ್ತರ ಕನ್ನಡದ ಸಂಸದ ಅನಂತಕುಮಾರ್‌ ಹೆಗಡೆ ಅಲ್ಲಿ ಎರಡು ಬಾರಿ ಗೆದ್ದವರು. ಬಿಜೆಪಿ ನಿಲುವಿಗೆ ಬೆಂಬಲವಾಗಿ ನಿಲ್ಲುತ್ತಿಲ್ಲವೆಂಬ ಕಾರಣಕ್ಕೆ ಅವರ ಬಗ್ಗೆ ಪಕ್ಷದಲ್ಲಿ ಅಸಮಾಧಾನವಿದೆ. ಹಲವು ಬಿಜೆಪಿ ಸಂಸದರು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರೂ ಅನಂತಕುಮಾರ್‌ ಹೆಗಡೆ ನಿಷ್ಕ್ರಿಯರು. ಬಿಜೆಪಿ ನಡೆಗಳ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದೂ ಇದೆ. ಇವರ ಬದಲಿಗೆ ಮಾರ್ಗರೆಟ್‌ ಆಳ್ವರನ್ನು ನಿಲ್ಲಿಸಿ, ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಹೆಚ್ಚು ಗಳಿಸಲು ಬಿಜೆಪಿ ಲೆಕ್ಕ ಹಾಕಿದರೂ ಸಂಶಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿಯ ನಡೆಯನ್ನು ನೋಡಿದ ಯಾರೂ ಇದನ್ನು ನಿರಾಕರಿಸಲಾರರು. ಸಾಂಗ್ಲಿಯಾನ, ಸುಭಾಷ್‌ಭರಣಿಯಂತವರೇ ಬಿಜೆಪಿ ಸೇರಿರುವಾಗಿ ಮಾರ್ಗರೆಟ್‌ ಆಳ್ವ ಸೇರುವುದು ಅಸಾಧ್ಯವೆಂದೇನೋ ಭಾವಿಸಬೇಕಾಗಿಲ್ಲ.

1 comment:

ಚಿತ್ರಾಕರ್ಕೇರಾ, ದೋಳ್ಪಾಡಿ said...

Beedige bithu kai.....irali sir..yaru bidru...edru labha yarige? badavru slumgalalli saithidre bjp govt ministergalige hitek mane nirmanakke horatide...! Sir....thumba udda baredre odakke time iralla...
-chitra karkera
www.sharadhi.blogspot.com