Monday, November 3, 2008

`ಶಾಸ್ತ್ರೀ'ಯ ಭಾಷೆ

`ಶಾಸ್ತ್ರೀ'ಯ ಭಾಷೆ

ಊರ ಗೌಡರ ಮಗಳು ಮೈನೆರೆದರೆ ಊರವರಿಗೆ ಏನು ಲಾಭ? ಹೆಚ್ಚೆಂದರೆ ಒಂದು ಹೋಳಿಗೆ ಊಟ ಸಿಗಬಹುದಷ್ಟೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಿದ್ದರ ಬಗ್ಗೆ ಇಷ್ಟು ನಿಕೃಷ್ಟವಾಗಿ ಹೇಳುವುದು ಅನೇಕರಿಗೆ ತಥ್ಯವಾಗದೇ ಇರಬಹುದು. ಆದರೆ ಶಾಸ್ತ್ರೀಯ ಭಾಷೆ ಘೋಷಣೆಯಾದ ಮೇಲೆ `ಪೋಸ್ಟ್‌ ಮಾರ್ಟಂ'ಗೆ ಹೊರಟರೆ ಇದು ಅಪಥ್ಯವಾಗಲಿಕ್ಕಿಲ್ಲ.
ಶಾಸ್ತ್ರೀಯ ಭಾಷೆಯೆಂದು ಘೋಷಣೆಯಾದ ಮಾತ್ರಕ್ಕೆ ಕನ್ನಡದಲ್ಲೇ ಕಲಿತ ಮಣ್ಣಿನ ಮಕ್ಕಳಿಗೆ ಏನು ಸಿಗುತ್ತದೆ? ಕನ್ನಡ ಬಿಟ್ಟರೆ ಬೇರಾವ ಭಾಷೆ ಬಾರದ ಕೋಟ್ಯಾಂತರ ಬಡ ಬೋರೇಗೌಡರ ಬದುಕಲ್ಲಿ ಏನು ಬದಲಾವಣೆಯಾಗುತ್ತದೆ. ಕನ್ನಡ ಎಂ.ಎ. ಮಾಡಿದವರು ಹೋಗಲಿ, ವಿವಿಧ ಮಾನವಿಕ( ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ್ತಿತ್ಯಾದಿ)ಗಳಲ್ಲಿ ಎಂ.ಎ. ಪಡೆದವರಿಗೆ ಎಲ್ಲಿ ಉದ್ಯೋಗವೇನಾದರೂ ಸಿಗುತ್ತದೆಯೇ? ಆಡಳಿತ ಭಾಷೆಯಾಗಿ ಕನ್ನಡವೊಂದೇ ಉಳಿಯುತ್ತದೆಯೇ? ಕೋರ್ಟ್‌ನಲ್ಲಿ ಕನ್ನಡ ಬಳಕೆಯಾಗುತ್ತದೆಯೇ?
ಯಕಃಶ್ಚಿತ್‌ ಈ ಶ್ರೀಸಾಮಾನ್ಯರ ಬದುಕಲ್ಲಿ ಏನು ಬದಲಾವಣೆಯಾಗುವುದಿಲ್ಲ. ತಮಿಳಿಗೆ ಕೊಟ್ಟಿದ್ದಾರೆ ನಮಗೂ ಕೊಡಬೇಕೆಂಬ ವಾದ ಬಿಟ್ಟರೆ ಮತ್ಯಾವ ಘನ ಉದ್ದೇಶ, ತಾರ್ಕಿಕ ವಾದಗಳನ್ನು ಈ ವಿಷಯದಲ್ಲಿ ಗಟ್ಟಿಧ್ವನಿಯಲ್ಲಿ ಮಾಡಲಾಗುವುದಿಲ್ಲ.
ಜಾಗತೀಕರಣದ ಬಿರುಗಾಳಿಯಲ್ಲಿ ಕನ್ನಡವೊಂದನ್ನೇ ಕಲಿತವನು ಎಲೆಯಂತೆ ಥರಗುಟ್ಟುತ್ತಿದ್ದಾನೆ. ವಿದ್ವಾಂಸರು, ಕನ್ನಡ ಹೋರಾಟಗಾರರು, ಆಷಾಢಭೂತಿ ಆಳುವವರು ಏನೇ ಮಾತನಾಡಲಿ. ಕನ್ನಡವೊಂದನ್ನೇ ಕಲಿತವನು `ತಾನು ಯಾಕಾದರೂ ಇಂಗ್ಲಿಷ್‌ ಕಲಿಯಲಿಲ್ಲ' ಎಂದು ಹಲುಬುವುದು ತಪ್ಪಲಿಲ್ಲ. ಅದು ನಿತ್ಯರೋಧನ.
ಇಂಗ್ಲಿಷು ಬ್ರಾಹ್ಮಣ ಕನ್ನಡ ಶೂದ್ರ:
ಪುರಾತನ ಕಾಲದಲ್ಲಿ ಸಂಸ್ಕೃತವೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಭಾಷೆಗಳನ್ನು ಅಪಭ್ರಂಶವೆಂದು ದಸ್ಯಗಳ(ಸೇವಕರ) ಭಾಷೆಯೆಂದು ಹೀಗಳೆಯಲಾಗುತ್ತಿತ್ತು. ಪ್ರಾಚೀನ ಸಂಸ್ಕೃತ ನಾಟಕಗಳಲ್ಲಿ ರಾಜ, ಮಂತ್ರಿ, ಕಥಾನಾಯಕ ಸಂಸ್ಕೃತದಲ್ಲಿ ಮಾತನಾಡಿದರೆ ದಸ್ಯುಗಳು ಮಾತ್ರ ಪ್ರಾಕೃತ ಅಥವಾ ಅಪಭ್ರಂಶ ಭಾಷೆಯಲ್ಲಿ ಮಾತನಾಡುವುದು ಲಿಖಿತವಾಗಿ ದಾಖಲಾಗಿದೆ.
ಈ ರೀತಿಯ ಮಡಿವಂತಿಕೆಯುಳ್ಳ ಸಂಸ್ಕೃತದ ಜಾಗದಲ್ಲಿ ಈಗ ಇಂಗ್ಲಿಷು ಬಂದು ಕುಳಿತಿದೆ. ಕನ್ನಡದಲ್ಲಿ ಓದಿದವರಿಗೆ ಕವಡೆ ಕಾಸಿನ ಬೆಲೆಯೂ ಇಲ್ಲವಾಗಿದೆ. ಸರ್ಕಾರಿ ಉಸ್ತುವಾರಿಯಲ್ಲಿ ನಡೆಯುತ್ತಿರುವ ಕನ್ನಡ ಶಾಲೆಗಳಿಗೆ ಸ್ಲಂಬಾಲರು, ಬಡ ಮಕ್ಕಳು, ಬಡ ಮತ್ತು ಮಧ್ಯಮ ವರ್ಗದ ಕೃಷಿಕರ ಮಕ್ಕಳು ಮಾತ್ರ ಹೋಗುತ್ತಿದ್ದಾರೆ. ಸರ್ಕಾರಿ ನೌಕರಿಯಲ್ಲಿರುವವರು, ಶ್ರೀಮಂತ ಕೃಷಿಕರು, ವ್ಯವಹಾರ ನಡೆಸುವವರ ಮಕ್ಕಳು ಇಂಗ್ಲಿಷು ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಕನ್ನಡ ಅವಜ್ಞೆಗೆ ತುತ್ತಾದ ಭಾಷೆಯಾಗಿರುವಾಗಲೇ ಅದಕ್ಕೆ `ವಿಶ್ವಮಾನ್ಯತೆ' ತಂದುಕೊಡುವ ಶಾಸ್ತ್ರೀಯ ಭಾಷೆಯ ಹಕ್ಕೊತ್ತಾಯ ಕೇಳಿಬಂದಿತು. ತಮ್ಮ ಮಕ್ಕಳನ್ನೆಲ್ಲಾ ಇಂಗ್ಲಿಷು ಶಾಲೆಯಲ್ಲಿ ಓದಿಸಿ, ಒಳ್ಳೆಯ ಉದ್ಯೋಗ ಕೊಡಿಸಿರುವ ಸಾಹಿತಿ, ಬುದ್ದಿ ಜೀವಿಗಳ ಮಕ್ಕಳು ಕನ್ನಡಕ್ಕಾಗಿ ಇಂದು ತಮ್ಮ ಉಪವಾಸ, ಮಾತಿನ ಖಡ್ಗ ಝಳಪಿಸುತ್ತಿದ್ದಾರೆ. ಕನ್ನಡದಲ್ಲಿ ಓದಿದವರಿಗೆ ಮಾತ್ರ ಉದ್ಯೋಗ, ಕನ್ನಡ ಬಲ್ಲವರಿಗೆ ಮಾತ್ರ ರಾಜ್ಯದಲ್ಲಿ ಪ್ರಮುಖ ಸ್ಥಾನ ಎಂಬ ಹಕ್ಕೊತ್ತಾಯ ಯಾರಿಂದಲೂ ಕೇಳಿ ಬರುತ್ತಿಲ್ಲ. ಪ್ರಾಥಮಿಕ ಶಾಲೆಯಿಂದಲೇ ಇಂಗ್ಲಿಷ್‌ನ್ನು ಒಂದು ಪಠ್ಯವಾಗಿ ಕಲಿಸಲು ಈ ಪ್ರಭೃತಿಗಳು ಬಿಡುತ್ತಿಲ್ಲ. ಎಲ್ಲಾ ಮಕ್ಕಳು ಇಂಗ್ಲಿಷು ಕಲಿತರೆ ನವ ಬ್ರಾಹ್ಮಣರ ಮಕ್ಕಳ ಉದ್ಯೋಗಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂಬ ಆತಂಕ ಇವರದು.
ಇಂಗ್ಲಿಷು ಬ್ರಾಹ್ಮಣ ಕನ್ನಡ ಶೂದ್ರ ಎಂಬುದು ಕೇವಲ ಕಲ್ಪನೆಯಲ್ಲ. ಸದ್ಯದ ಸುಡು ವಾಸ್ತವ. ಕನ್ನಡವೆಂಬುದು ಮೈಲಿಗೆಯಾಗಿ, ಯು.ಆರ್‌. ಅನಂತಮೂರ್ತಿ ಹೇಳುವಂತೆ ಕೇವಲ ಅಡುಗೆ ಮನೆ ಭಾಷೆಯಾಗಿ ಉಳಿಯಲಿರುವ ಸಂಕಟದಲ್ಲಿ ನಾವಿದ್ದೇವೆ. ಆ ಹೊತ್ತಿನಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಸಿಕ್ಕಿದೆ.
ಲಾಭವೇನು?
ತಮಿಳಿಗೆ ಸಿಕ್ಕಿತೆಂದು ನಾವೆಲ್ಲಾ ಒಕ್ಕೊರಲಿನಿಂದ ಕನ್ನಡಕ್ಕೂ ಶಾಸ್ತ್ರೀಯ ಭಾಷೆ ಸ್ಥಾನ ಮಾನ ಸಿಗಬೇಕೆಂದು ಹಕ್ಕೊತ್ತಾಯ ಮಂಡಿಸಿದೆವು. ಆಂಧ್ರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ, ಮುಂಬರಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕನ್ನಡಕ್ಕೂ ಒಂದು ಶಾಸ್ತ್ರೀಯ ಸ್ಥಾನ ಮಾನ ಘೋಷಿಸಿದೆ.
ಪ್ರಾಚೀನ ಸಾಹಿತ್ಯ ಹಾಗೂ ಭಾಷಾ ಚರಿತ್ರೆ ಬಗ್ಗೆ ಸಂಶೋಧನೆ ನಡೆಸುವ ವಿದ್ವಾಂಸರಿಗೆ 2 ರಾಷ್ಟ್ರಮಟ್ಟದ ಪ್ರಶಸ್ತಿ, ಅಧ್ಯಯನ ನಡೆಸಲು ಅನುದಾನ, ಕೇಂದ್ರೀಯ ವಿ.ವಿ.ಗಳಲ್ಲಿ ಕನ್ನಡ ಅಧ್ಯಯನ ಪೀಠ, ವಿದೇಶಿ ವಿ.ವಿ.ಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಅವಕಾಶ, ಒಂದಿಷ್ಟು ಫೆಲೋಶಿಪ್‌ಗೆ ಅವಕಾಶವಾಗಲಿದೆ. ಇದರ ಜತೆಗೆ ಕೇಂದ್ರದಿಂದ ಸರಿಸುಮಾರು 100 ಕೋಟಿ ರೂ. ಹೆಚ್ಚಿನ ಅನುದಾನ ಒದಗಿ ಬರಲಿದೆ. ಮೈಸೂರಿನಲ್ಲಿರುವ ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ಇದಕ್ಕಾಗಿ ಒಂದು ಸಮಿತಿ ರಚನೆಯಾಗಲಿದ್ದು, ಇದೆಲ್ಲದರ ಉಸ್ತುವಾರಿ ನೋಡಿಕೊಳ್ಳಲಿದೆ.
ಇವಿಷ್ಟು ಬಿಟ್ಟರೆ ಕನ್ನಡ ಉದ್ದಾರ ಅಷ್ಟರಲ್ಲೇ ಇದೆ. ಇದರಿಂದ ಸಾಮಾನ್ಯ ಕನ್ನಡಿಗರಿಗೆ ಏನು ಲಾಭ? ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಅಷ್ಟೆ. ನಮ್ಮ ನೆಲ, ಜಲ ವಿಷಯದ ಬಗ್ಗೆ ಯಾವತ್ತೂ ಚಕಾರವೆತ್ತದ ಜನ ಶಾಸ್ತ್ರೀಯ ಭಾಷೆಗಾಗಿ ಕೂಗಾಡಿ ಅರಚಿದರು. ಹೊಸ ರೈಲ್ವೆ ಮಾರ್ಗಗಳು, ಹೊಸ ರೈಲುಗಳು ಬಾರದೇ ಇದ್ದಾಗ ತೆಪ್ಪಗೆ ಕೂತಿದ್ದ ಮಂದಿ ಕೂಗಾಡಲಾರಂಭಿಸಿದರು. ನಮ್ಮ ರಾಷ್ಟ್ರೀಯ ಹೆದ್ದಾರಿಗಳು ಗುಂಡಿಗಳಾಗಿ ಕುಳಿತಿದ್ದರೂ ಯಾರೂ ಮಾತನಾಡಲಿಲ್ಲ. ಹಿಂದುಳಿದ ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ 371 ವಿಧಿಗೆ ತಿದ್ದುಪಡಿ ತರಬೇಕೆಂಬ ಒತ್ತಾಯಕ್ಕೆ ಯಾರೂ ಧ್ವನಿ ಸೇರಿಸಲಿಲ್ಲ. ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಇದೇ ಯಡಿಯೂರಪ್ಪನವರ ಬಿಜೆಪಿಯ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಬಿಜೆಪಿ ಸಂಸದರಾಗಿದ್ದ ಡಾ ಎಂ.ಆರ್‌. ತಂಗಾ ಹಾಗೂ ಬಸವರಾಜಪಾಟೀಲ್‌ ಸೇಡಂ ಅವರು ಆಗಿನ ಗೃಹ ಸಚಿವ ಎಲ್‌. ಕೆ. ಅಡ್ವಾಣಿಯವರ ಮುಂದೆ 371 ವಿಧಿಗೆ ತಿದ್ದುಪಡಿ ತರಲು ಕೋರಿದ್ದರು. ಆಗ ಅಡ್ವಾಣಿ ನಿರಾಶಾದಾಯಕ ಉತ್ತರ ನೀಡಿದ್ದರು.
ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವಿರುವಾಗ ಇದೇ ಯಡಿಯೂರಪ್ಪ 371 ವಿಧಿಗಾಗಿ ದೆಹಲಿಗೆ ನಿಯೋಗ ಹೋಗುವುದಾಗಿ ಹೇಳುತ್ತಿದ್ದಾರೆ. ಕೇಂದ್ರದ ಮೇಲೆ ಗೂಬೆ ಕೂರಿಸಿ, ಮುಂದಿನ ಲೋಕಸಭಾ ಚುನಾವಣೆಗೆ ಮತಗಳ ಇಡುಗಂಟನ್ನು ಸಂಪಾದಿಸುವುದಷ್ಟೇ ಅವರ ಆಶಯ. ರಾಜ್ಯದ ಬಗ್ಗೆ ನಿಜವಾದ ಕಳಕಳಿ ಅವರಿಗಿಲ್ಲ.
ಶಾಸ್ತ್ರೀಯ ಭಾಷೆಯ ವಿಷಯದಲ್ಲಿ ಕೂಡ ಅವರ ಅಬ್ಬರ ಇದೇ ರೀತಿಯದು. ಭಾವನಾತ್ಮಕ ವಿಷಯಗಳತ್ತ ಜನರ ಗಮನವನ್ನ ಕೇಂದ್ರೀಕರಿಸಿ, ರಾಜಕೀಯ ಮಾಡಿಕೊಳ್ಳುವ ಹುನ್ನಾರವಿದು. ಶಾಸ್ತ್ರೀಯ ಭಾಷೆಗಾಗಿ ದೆಹಲಿ ಚಲೋ ಮಾಡಲು, ಗಾಂಧಿ ಸಮಾಧಿ ಎದುರು ಧರಣಿ ಕೂರಲು ಸಿದ್ಧರಿರುವ ಯಡಿಯೂರಪ್ಪ, ರೈಲ್ವೆ, ರಸ್ತೆಯಂತಹ ಸಾಮಾನ್ಯ ಬೇಡಿಕೆಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಕೇಂದ್ರದ ಮೇಲೆ ಸೇಡಿನ ಹೋರಾಟಕ್ಕಿಂತ ರಚನಾತ್ಮಕ ಹೋರಾಟವನ್ನು ಮಾಡುವುದು ತುರ್ತಾಗಿ ಆಗಬೇಕಾಗಿರುವ ಕೆಲಸ.
ಇತ್ತೀಚೆಗೆ ಮುಂಬೈನಲ್ಲಿ ಬಿಹಾರಿ ಯುವಕ ಹತ್ಯೆಯಾದಾಗ ಮುಖ್ಯಮಂತ್ರಿ ನಿತೀಶ್‌ಕುಮಾರ್‌, ಲಾಲು ಪ್ರಸಾದ್‌ ಯಾದವ್‌, ರಾಮವಿಲಾಸ್‌ಪಾಸ್ವಾನ್‌ ಹೀಗೆ ಎಲ್ಲಾ ಪಕ್ಷದ ನಾಯಕರು ಒಂದೇ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡರು. ರಾಜ್ಯದ ವಿಷಯ ಬಂದಾಗ ರಾಜಕೀಯ ತಲೆ ಹಾಕಬಾರದು. ರಾಜ್ಯದ ಏಳ್ಗೆ ಮುಖ್ಯವಾಗಬೇಕು. ಇದು ನಮ್ಮ ರಾಜಕಾರಣಿಗಳಿಗೆ ಅರ್ಥವಾಗುವುದು ಯಾವಾಗ?
ರಾಜ್ಯದ ಸ್ಥಿತಿ?
ಶಾಸ್ತ್ರೀಯ ಭಾಷೆಗಾಗಿ ದೆಹಲಿಗೆ ಹೋಗುವುದಾಗಿ ಘರ್ಜಿಸಿದ ಯಡಿಯೂರಪ್ಪನವರ ತವರು ರಾಜ್ಯದಲ್ಲಿ ಕನ್ನಡ ಏನಾಗಿದೆ. ಆಡಳಿತ ಭಾಷೆ ಕನ್ನಡ ಎಂಬ ವಿಷಯ ಕುರಿತು ಈವರೆಗೆ 300 ಸುತ್ತೋಲೆಗಳು ಬಂದಿವೆ. ಆದರೆ ಇನ್ನೂ ಕೂಡ ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವಾಗಿಲ್ಲ. ಪ್ರಮುಖ ಸರ್ಕಾರಿ ಆದೇಶಗಳು, ರಾಜ್ಯ ಗೆಜೆಟ್‌, ಹಿರಿಯ ಅಧಿಕಾರಿಗಳ ವ್ಯವಹಾರ ಎಲ್ಲವೂ ಇಂಗ್ಲಿಷ್‌ನಲ್ಲಿ ನಡೆಯುತ್ತವೆ. ಇದಕ್ಕೆ ಕಾರಣಗಳನ್ನು ಸಾವಿರ ಹೇಳಬಹುದು. ಆದರೆ ಕನ್ನಡ ಜಾರಿಯಾಗದೇ ಇರುವುದು ಸತ್ಯ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಎಂಬ ಸರೋಜಿನಿ ಮಹಿಷಿ ವರದಿ ಸಂಪೂರ್ಣ ಜಾರಿಯಾಗದೇ ಧೂಳು ಹಿಡಿಯುತ್ತಿದೆ. ಕೇಂದ್ರ ಸರ್ಕಾರ, ಖಾಸಗಿ ಉದ್ಯಮ ಸಂಸ್ಥೆಗಳ ವಿಷಯ ಹೋಗಲಿ. ಕರ್ನಾಟಕ ಲೋಕ ಸೇವಾ ಆಯೋಗದ ನೇಮಕಾತಿಯಲ್ಲೂ ಕೂಡ ಕನ್ನಡಿಗರಿಗೆ ಮಾತ್ರ ಉದ್ಯೋಗವೆಂಬ ಷರತ್ತು ಇಲ್ಲ. ದೇಶದ ಯಾವುದೇ ಅಂಗೀಕೃತ ವಿ.ವಿ.ಯಿಂದ ಪದವಿ ಪಡೆದವರು ಉಪನ್ಯಾಸಕ, ಪ್ರಥಮ ದರ್ಜೆ ಗುಮಾಸ್ತ, ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಬಹುದು. ಅಷ್ಟರಮಟ್ಟಿಗೆ ಕನ್ನಡಿಗರು ಉದಾರ ಹೃದಯಗಳಾಗಿದ್ದಾರೆ.
ಇನ್ನು ಕನ್ನಡ ಕಲಿಸುವ ಸರ್ಕಾರಿ ಶಾಲೆಗಳಲ್ಲಿ ಆಧುನಿಕತೆ ಎಂಬುದು ಹೇಳ ಹೆಸರಿಲ್ಲವಾಗಿದೆ. ನಮ್ಮ ಶಿಕ್ಷಣ ಪದ್ಧತಿ ಕೂಡ ಓಬಿರಾಯನ ಕಾಲದಲ್ಲಿಯೇ ಇದೆ. ಉದ್ಯೋಗ ಕಲ್ಪಿಸುವುದಕ್ಕೆ ಪೂರಕವಾದ ಶಿಕ್ಷಣ ಪದ್ಧತಿ ಜಾರಿಗೆ ತಂದಿಲ್ಲ. ಕನ್ನಡ ಮಾಧ್ಯಮದಲ್ಲಿ ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಪಡೆದವರಿಗೆ ಮಾತ್ರ ಸರ್ಕಾರದ ವತಿಯಿಂದ ಸನ್ಮಾನಿಸಲಾಗುತ್ತಿದೆ ವಿನಃ ಕನ್ನಡಿಗರಿಗೆ ಮೀಸಲು ಪರಿಪಾಠವೇ ಇಲ್ಲ. ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಶಾಲೆಯಲ್ಲಿ ಕಲಿತವರಿಗೆ ಶೇ.15 ರಷ್ಟು ಗ್ರೇಸ್‌ ಮಾರ್ಕ್ಸ್‌ ನೀಡುವ ಆದೇಶ ಜಾರಿಗೊಳಿಸಿದ್ದರು. ಆದರೀಗ ಅದನ್ನು ತೆಗೆದು ಹಾಕಲಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಶಾಸ್ತ್ರೀಯ ಭಾಷೆಯೆಂಬುದು ಶಾಸ್ತ್ರೀಗಳ ಭಾಷೆಯಾಗಲಿದೆಯೇ ಹೊರತು ಕನ್ನಡದ ಮಣ್ಣಿನ ಮಕ್ಕಳಿಗೆ ಪ್ರಯೋಜನವಾಗುವ ಸಂಗತಿಯಲ್ಲ. ಹಾಗಿದ್ದೂ ಶಾಸ್ತ್ರೀಯ ಭಾಷೆ ಸ್ಥಾನಮಾನ ಬೇಡವೆಂದಲ್ಲ. ಅದರ ಜತೆಗೆ ಕನ್ನಡ ಕಲಿತರೆ ಸ್ವಾಭಿಮಾನದ ಬಾಳ್ವೆ ಸಾಧ್ಯವೆಂಬ ವಾತಾವರಣ ನಿರ್ಮಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಯಡಿಯೂರಪ್ಪನವರು ಆ ನಿಟ್ಟಿನಲ್ಲಿ ಯೋಚಿಸಿ, ಕಾರ್ಯಪ್ರವೃತ್ತವಾಗಬೇಕಿದೆ.

No comments: