Sunday, May 3, 2009
ದುಡ್ಡೇ ದೊಡ್ಡಪ್ಪ :ಜನ ಸತ್ರಪ್ಪ
ಘೋಷಿತ ಆಸ್ತಿಯೆಲ್ಲವೂ ಕೇವಲ ಶೋಕೇಸ್. ರಾಜಕಾರಣಿಗಳ ಹೆಸರಿನಲ್ಲಿಲ್ಲದ ಆಸ್ತಿಗೆ ಲೆಕ್ಕವೇ ಇಲ್ಲ. ಸಂಸ್ಥೆ, ಮಕ್ಕಳು, ಮೊಮ್ಮಕ್ಕಳು, ಅಳಿಯ, ದೂರದ ಬಂಧು, ನಂಬಿಗಸ್ತ ಭಂಟರ ಹೆಸರಿನಲ್ಲಿ ಮಾಡಿರುವ ಆಸ್ತಿ ಲೆಕ್ಕಕ್ಕೆ ನಿಲುಕುವುದಿಲ್ಲ. ಅಷ್ಟರಮಟ್ಟಿಗೆ ಆಸ್ತಿ ಕ್ರೋಢೀಕರಣ ರಾಜಕಾರಣಿಗಳಿಂದ ನಡೆಯುತ್ತಿದೆ. ತಮ್ಮ ಮುಂದಿನ 10 ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿಯನ್ನು ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧ್ಯವಿದೆ.
ಸರ್ಕಾರಿ ಗುತ್ತಿಗೆ ಮಾಡಲು ಬೇರೆಯವರಿಂದ ಸಾಲ ಪಡೆದವರು, ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡವರು, ರಾಜಕೀಯ ಪಕ್ಷಗಳಲ್ಲಿ ಬಾವುಟ ಕಟ್ಟಲು ಸೇರಿಕೊಂಡವರು ಇಂದು ಏನೇನೋ ಆಗಿ ಹೋಗಿದ್ದಾರೆ. ಪ್ರಧಾನಿ, ಮುಖ್ಯಮಂತ್ರಿ, ಸಚಿವ, ಶಾಸಕ, ಸಂಸದ ಹೀಗೆ ಯಾವುದಾದರೊಂದು ಪ್ರಾತಿನಿಧ್ಯವನ್ನು ಒಂದು ಅವಧಿ ಅನುಭವಿಸಿದವರು ಕರೋಡಪತಿ ಆಗಿದ್ದಾರೆ. ಇದು ಹೇಗೆ ಸಾಧ್ಯವಾಯಿತು?
ಅವರಿಗೆ ಬರುವ ಸಂಬಳದಲ್ಲಿ ಪೈಸೆ ಪೈಸೆ ಉಳಿಸಿದರೂ ಐದು ವರ್ಷದ ಅವಧಿ ಮುಗಿಯುವಷ್ಟರಲ್ಲಿ ಅಮ್ಮಮ್ಮಾ ಅಂದರೂ 10 ಲಕ್ಷ ಉಳಿತಾಯ ಮಾಡಬಹುದು. ಆದರೆ ಶಾಸಕ/ ಸಂಸದರಾದವರ ಆಸ್ತಿ ಅವರೇ ಘೋಷಿಸಿದಂತೆ ಕೋಟಿಗೆ ಮೀರಿರುತ್ತದೆ. ತೋಟ, ಐಷಾರಾಮಿ ಕಾರು, ಭರ್ಜರಿ ಬಂಗಲೆ ಎಲ್ಲವೂ ಅವರ ಬಳಿ ಸಂಗ್ರಹಿತಗೊಂಡಿರುತ್ತದೆ. ಆದರೆ ಲೆಕ್ಕಕ್ಕೆ ಸಿಗದ ಆಸ್ತಿ ಮೌಲ್ಯ ಅದೆಷ್ಟು ಕೋಟಿಗಳೋ ಬಲ್ಲವರಾರು?
ಅತೀ ಶ್ರೀಮಂತರು:
ಚುನಾವಣೆಗೆ ಸಲ್ಲಿಸಲಾದ ನಾಮಪತ್ರ ಜತೆ ಸಲ್ಲಿಸಿ ಆಸ್ತಿ ವಿವರ ನೋಡಿದರೆ ರಾಜಕಾರಣಿಗಳ ಶ್ರೀಮಂತಿಕೆ ಗೊತ್ತಾಗುತ್ತದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಾಜಗೋಪಾಲ್ ಆಸ್ತಿ ಮೌಲ್ಯ 299 ಕೋಟಿ ರೂ. ಎರಡನೇ ಸ್ಥಾನದಲ್ಲಿ ದೆಹಲಿ ದಕ್ಷಿಣದಿಂದ ಸ್ಪರ್ಧಿಸಿರುವ ಬಿ ಎಸ್ಪಿ ಅಭ್ಯರ್ಥಿ ಕರಣಸಿಂಗ್ ಇದ್ದು ಇವರ ಆಸ್ತಿ 150 ಕೋಟಿ ರೂ. ವಾಯುವ್ಯ ಮುಂಬೈನ ಎಸ್‌ಪಿ ಅಭ್ಯರ್ಥಿ 124 ಕೋಟಿ ಒಡೆಯರಾಗಿದ್ದರೆ, ತಿರುಪತಿಯಲ್ಲಿ ಕಣಕ್ಕೆ ಇಳಿದಿರುವ ಚಿರಂಜೀವಿ 88 ಕೋಟಿ ಆಸ್ತಿ ಮಾಲೀಕರಾಗಿದ್ದಾರೆ.
ಆಂಧ್ರದ ಹಾಲಿ ಸಿ ಎಂ ರಾಜಶೇಖರ ರೆಡ್ಡಿ 77 ಕೋಟಿ ಆಸ್ತಿ ಹೊಂದಿದ್ದರೆ, ಮಾಜಿ ಸಿ ಎಂ ಚಂದ್ರಬಾಬು ನಾಯ್ಡು 69 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಇದು ಇಡೀ ದೇಶದ ಶ್ರೀಮಂತ ಅಭ್ಯರ್ಥಿಗಳ ಯಾದಿ.
ಕರ್ನಾಟಕ ಮಟ್ಟದಲ್ಲಿ ಅತಿ ಹೆಚ್ಚು ಆಸ್ತಿ ಘೋಷಿಸಿಕೊಂಡಿರುವುದು ಬೆಂಗಳೂರು ಉತ್ತರ ಕ್ಷೇತ್ರದ ಜೆಡಿ ಎಸ್ ಅಭ್ಯರ್ಥಿ ಸುರೇಂದ್ರಬಾಬು. ಇವರದ್ದು ಪಿತ್ರಾರ್ಜಿತ ಆಸ್ತಿಯಾಗಿದ್ದು 239 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಬೆಂಗಳೂರು ದಕ್ಷಿಣದ ಪಕ್ಷೇತರ ಅಭ್ಯರ್ಥಿ ಕ್ಯಾಪ್ಟನ್ ಗೋಪಿನಾಥ್ 69 ಕೋಟಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 44 ಕೋಟಿ, ಮಾಜಿ ಸಚಿವ ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ 34 ಕೋಟಿ ಆಸ್ತಿ ಮೌಲ್ಯ ಘೋಷಿಸಿಕೊಂಡಿದ್ದಾರೆ. ಸುರೇಂದ್ರಬಾಬು, ಕ್ಯಾಪ್ಟನ್ ಗೋಪಿನಾಥ್ ರಾಜಕಾರಣಕ್ಕೆ ಹೊಸಬರು. ಒಬ್ಬರು ರಿಯಲ್ ಎಸ್ಟೇಟ್ ಮತ್ತೊಬ್ಬರು ವಿಮಾನಯಾನದಿಂದ ಸಂಪಾದಿಸಿದ ಹಣವನ್ನು ತೋರಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ರಾಘವೇಂದ್ರ 6 ಕೋಟಿ ಆಸ್ತಿ ಹೊಂದಿರುವುದಾಗಿ ಹೇಳಿದ್ದಾರೆ.
ಕೈಸೋತ ಜನ:
3-4 ಲಕ್ಷ ಜನಸಂಖ್ಯೆಯ ಪ್ರತಿನಿಧಿಯಾಗಿ ಶಾಸನಸಭೆಗೆ ಆಯ್ಕೆಯಾಗುವ ಶಾಸಕ, 10-19 ಲಕ್ಷ ಮತದಾರರ ಪ್ರತಿನಿಧಿಯಾಗಿ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಆಸ್ತಿ ಗಳಿಕೆ ಕೋಟಿ ಕೋಟಿಗಳಿದ್ದರೆ `ಮತದಾರ ಪ್ರಭು' ನಿಜಕ್ಕೂ ಕುಚೇಲನಾಗಿದ್ದಾನೆ. ಆತನ ಬಳಿ ಅವಲಕ್ಕಿಯಾಗಲಿ, ಗಂಟಲೊಣಗಿಸಿ, ಹಸಿವು ಇಂಗಿಸುವ ಗಂಜಿಯಾಗಲಿ ಇಲ್ಲ. ಅಷ್ಟು ಬರ್ಬಾದ್ ಎದ್ದು ಹೋಗಿದ್ದಾನೆ ಮತದಾರ.
ದೇಶದ ಶೇ.62 ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಭವಿಷ್ಯದ ಯಾವ ಕನಸುಗಳೂ ಇಲ್ಲ. ಕೃಷಿಯಲ್ಲಿ ತೊಡಗಿರುವ ಶೇ.40 ರಷ್ಟು ರೈತರು ಕೃಷಿಯಿಂದ ದೂರ ಹೋಗಲು ಹವಣಿಸುತ್ತಿದ್ದಾರೆ. ಶೇ.49 ರಷ್ಟು ಗ್ರಾಮೀಣ ಕುಶಲಕರ್ಮಿಗಳು ತಮ್ಮ ಉದ್ಯೋಗ ಬಿಟ್ಟು ಹೊಟ್ಟೆ ಪಾಡಿಗೆ ಪೇಟೆಯತ್ತ ಮುಖಮಾಡಿದ್ದಾರೆ.
ಇನ್ನೂ ಕೂಡ ದೇಶದ ಶೇ.56 ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿ ಈ ಪ್ರಮಾಣ ಶೇ.8 ರಷ್ಟು ಹೆಚ್ಚಳವಾಗಿದೆ. ಶೇ.63 ಗರ್ಭಿಣಿಯರು ರಕ್ತಿಹೀನತೆಗೆ ತುತ್ತಾಗಿದ್ದು ಭವಿಷ್ಯದ ಪ್ರಜೆಗಳ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ. ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಶೇ.82.7 ರಷ್ಟಿದ್ದು ದಂಗು ಬಡಿಸುವ ರೀತಿಯಲ್ಲಿದೆ. 1998ರಲ್ಲಿ 70 ರಷ್ಟಿದ್ದ ಈ ಪ್ರಮಾಣ 2006 ರಲ್ಲಿ 82 ಕ್ಕೇರಿದೆ.
15-49ವರ್ಷ ವಯೋಮಿತಿಯ ಶೇ.60 ರಷ್ಟು ಮಹಿಳೆಯರು ಆರನೇ ತರಗತಿಯವರೆಗೆ ಹಾಗೂ ಹೀಗೂ ಓದಿದ್ದಾರೆ. ಇವರ ಪೈಕಿ ಶೇ.28 ರಷ್ಟು ಮಹಿಳೆಯರು ಮಾತ್ರ 10 ತರಗತಿಯವರೆಗೆ ಓದಿದ್ದಾರೆ. ಶೇ.34 ರಷ್ಟು ಮಹಿಳೆಯರು ಶಾಲೆ ಮೆಟ್ಟಿಲು ಹತ್ತಿಲ್ಲ. ಇವೆಲ್ಲವೂ ಸ್ವಾತಂತ್ರ್ಯ 60 ವರ್ಷಗಳಲ್ಲಾಗಿರುವ ಸಾಧನೆ.
1995 ರಿಂದ 2007ರ ಅವಧಿಯಲ್ಲಿ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1,66,304. 1991ರಲ್ಲಿ ಶೇ.26 ರಷ್ಟು ರೈತರು ಸಾಲಗಾರರಾಗಿದ್ದರೆ, 2003ರಲ್ಲಿ ಈ ಪ್ರಮಾಣ ಶೇ.48.6 ರಷ್ಟಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮಿಕ್ಷೆ ವಿವರಿಸಿದೆ. 2006-07ರಲ್ಲಿ ದೇಶದ 200 ಜಿಲ್ಲೆಗಳಲ್ಲಿ 2.11 ಕೋಟಿ ಕುಟುಂಬದವರು ತಮಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಒದಗಿಸಿದೆ ಎಂದು ಕೋರಿದ್ದಾರೆ.
ಇಡೀ ದೇಶದ ಶೇ.47 ರಷ್ಟು ಜನರು ದಿನಕ್ಕೆ ಕನಿಷ್ಠ 20 ರೂ. ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜೀವನನಿರ್ವಹಣಾ ವೆಚ್ಚ ದುಪ್ಪಟ್ಟಾಗಿದ್ದರೂ ಆದಾಯ ಮಧ್ಯಮ ವರ್ಗದವರ ಆದಾಯದ ಮಟ್ಟ ಏರಿಕೆಯಾಗಿಲ್ಲ.
ಯುಪಿ ಎ ಸರ್ಕಾರದ ಅವಧಿಯಲ್ಲಿ 400 ವಿಶೇಷ ಆರ್ಥಿಕ ವಲಯ ಮಂಜೂರು ಮಾಡಲಾಗಿದೆ. ತಮ್ಮ ಗಂಜಿಗೆ ಅಕ್ಕಿ, ಮುದ್ದೆಗೆ ರಾಗಿ, ರೊಟ್ಟಿಗೆ ಗೋಧಿ,ಜೋಳ ಬೆಳೆಯುತ್ತಿದ್ದ ಭೂಮಿಯನ್ನು ಕಳೆದುಕೊಂಡ ರೈತರು ನಗರದತ್ತ ಗುಳೆ ಹೊರಟಿದ್ದಾರೆ. ಸ್ವಾಭಿಮಾನಿ ಬದುಕು ನಡೆಸುತ್ತಿದ್ದ ರೈತರು, ಕುಶಲಕರ್ಮಿಗಳು ಹಳ್ಳಿ ತೊರೆದು ನಗರ ಪ್ರದೇಶಗಳಲ್ಲಿ ಕಟ್ಟಡನಿರ್ಮಾಣ, ಸೆಕ್ಯುರಿಟಿ ಗಾರ್ಡ್‌ನಂತಹ ಕೆಲಸಗಳಲ್ಲಿ ಅನಿವಾಯವಾಗಿ ತೊಡಗಿಕೊಂಡಿದ್ದಾರೆ. ಹಳ್ಳಿಗಳು ವೃದ್ಧಾಶ್ರಮಗಳಾಗಿ ಪರಿವರ್ತನೆಯಾಗಿವೆ.
ಯಾರ ಅಭಿವೃದ್ಧಿ:
ದೇಶದ ಕೃಷಿ ಬೆಳವಣಿಗೆ ದರ ಶೇ.4 ರಷ್ಟು ಆಗಬೇಕೆಂಬ ಗುರಿಯಿದ್ದರೂ ಆಗಿರುವು ಶೇ.1.85 ಮಾತ್ರ. ಆರ್ಥಿಕ ಬೆಳವಣಿಗೆ ದರ 9 ಆಗಬೇಕೆಂದಿದ್ದರೂ ಶೇ.7 ರ ಗಟಿ ದಾಟಿಲ್ಲ. ಮುಂದಿನ ದಿನಗಳಲ್ಲಿ ಅದು 5.6 ಕ್ಕೆ ಇಳಿಯಲಿದೆ.
ಸ್ವಾತಂತ್ರ್ಯ ಇಷ್ಟು ವರ್ಷಗಳಲ್ಲಿ ಯಾರ ಅಭಿವೃದ್ಧಿಯಾಗಿದೆ. ಶೇ.15 ರಷ್ಟು ಮಂದಿ ಮಾತ್ರ ಅಭಿವೃದ್ಧಿಯ ಫಲವುಂಡಿದ್ದು ಉಳಿದೆಲ್ಲಾ ಮಂದಿ ದೈನೇಸಿ ಸ್ಥಿತಿಯಲ್ಲಿದ್ದಾರೆ. ಪಿತ್ರಾರ್ಜಿತ ಆಸ್ತಿ ಹೊಂದಿದವರು ರಿಯಲ್ ಎಸ್ಟೇಟ್‌ನಿಂದಾಗಿ ದಿಢೀರ್ ಶ್ರೀಮಂತರಾಗಿದ್ದಾರೆ. ಬಂಡವಾಳಶಾಹಿಗಳು ಹಣ ಹೂಡಿ ಲಾಭ ಗಳಿಸಿದ್ದಾರೆ. ಆದರೆ ನಮ್ಮಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಹಣ ಹೂಡಿ, ಗೆದ್ದ ಮೇಲೆ ಭ್ರಷ್ಟಾಚಾರದಿಂದ ಹಣ ಗಳಿಸುವ ಹೊಸ ಬಂಡವಾಳ ಪದ್ಧತಿಯನ್ನು ಕಂಡು ಹಿಡಿದಿದ್ದಾರೆ. ಪ್ರತಿ ಚುನಾವಣೆಯಲ್ಲೂ ಮತದಾರ ಶಪಿಸುತ್ತಾ ಮತ ಹಾಕುತ್ತಿದ್ದಾನೆ. ಮತ ಪಡೆದು ಆಯ್ಕೆಯಾದವರು ನಿತ್ಯವೂ ತಮ್ಮ ಬೊಕ್ಕಸ ತುಂಬಿಸಿ ಕೊಳ್ಳುತ್ತಾ, ಆಸ್ತಿಯ ಅಗಲವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.
ಶಾಸಕರು, ಸಂಸದರೇ ಜನರ ನಿಜವಾದ ಪ್ರತಿನಿಧಿಗಳು. ಅವರು ಶ್ರೀಮಂತರಾದರೆ ಜನರೂ ಶ್ರೀಮಂತರಾದಾರು ಎಂದು ಭಾವಿಸಿದರೆ ತಪ್ಪಾಗಲಿಕ್ಕಿಲ್ಲವಲ್ಲವೇ?
ಮತಸಮರ-ಪ್ರಗತಿಗೆ ಜ್ವರ
ಐದು ವರ್ಷಕ್ಕೊಮ್ಮೆ ಕಿವಿಗಮರುತ್ತಿದ್ದ ಇಂತಹ ಸವಕಲು ಘೋಷಣೆಗಳು ಈಗ ಮೂರು-ಆರು ತಿಂಗಳಿಗೊಮ್ಮೆ ಕೇಳುತ್ತಿವೆ. ಘೋಷಣೆಗಳು-ಭರವಸೆಗಳು ಆಕರ್ಷಣೆ ಕಳೆದುಕೊಳ್ಳುತ್ತಿವೆ. ದಿನಾ ಸಾಯೋರಿಗೆ ಅಳೋರ್ಯಾರು ಎಂಬುದು ಚುನಾವಣೆ ಬಗ್ಗೆ ಜನರಾಡುತ್ತಿರುವ ಕ್ಲೀಶೆಯಾಗಿರುವ ಟೀಕೆ. ಹೋದೆಯಾ ಪಿಶಾಚಿ ಅಂದ್ರೆ ಬಂದೇ ಗವಾಕ್ಷಿಲಿ ಎಂಬಂತೆ ಮತ್ತೆ ಮತ್ತೆ ಬರುತ್ತಲೇ ಇದೆ.
ಚುನಾವಣೆ: ಇದು ಮುಗಿಯುವುದಲ್ಲ, ನಡೆಯುತ್ತಿರುವುದು, ನಡೆಯುತ್ತಲೇ ಇರುವುದು ಎಂಬುದು ಇತ್ತೀಚಿನ ವಿದ್ಯಮಾನ. 2008ರ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದ ನಂತರ ಈಗ ಎರಡನೇ ಬಾರಿ ಇಡೀ ರಾಜ್ಯದಲ್ಲಿ ಮತ ಸಮರ ನಡೆಯುತ್ತಿದೆ. ಈಗಿನ ಫಲಿತಾಂಶ ಆಧರಿಸಿ ಇನ್ನಾರು ತಿಂಗಳೊಳಗೆ ಮತ್ತೆ ಚುನಾವಣೆ ಬರಲಿದೆ. ಅದಕ್ಕೆ ಅಂಟಿಕೊಂಡೇ ಎರಡು ವರ್ಷದಿಂದ ಬಾಕಿಯುಳಿದಿರುವ ಬೆಂಗಳೂರು ಮಹಾನಗರ ಪಾಲಿಕೆಗೂ ಚುನಾವಣೆ ನಡೆಯಬೇಕಿದೆ.
ಹೀಗೆ ವರ್ಷದುದ್ದಕ್ಕೂ ಮತಕ್ಕಾಗಿ ರಾಜಕಾರಣಿಗಳು ಮುಗಿಬೀಳುವುದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಬೀಳುವುದಿಲ್ಲವೇ ಎಂಬುದು ನಾಗರಿಕರು ರಾಜಕಾರಣಿಗಳಿಗೆ ಕೇಳಬೇಕಾದ ಪ್ರಶ್ನೆ.
2004ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಆಗ ಯಾವ ಪಕ್ಷವೂ ಸ್ಪಷ್ಟ ಬಹುಮತ ಗಳಿಸಲಿಲ್ಲ. ಕಾಂಗ್ರೆಸ್-ಜೆಡಿ ಎಸ್, ಜೆಡಿ ಎಸ್-ಬಿಜೆಪಿ ಪಕ್ಷಗಳ `ಕೂಡಿಕೆ' ಸರ್ಕಾರಗಳನ್ನು ಜನ ನೋಡಿದರು. ಏನೆಲ್ಲಾ ಸರ್ಕಸ್ ಮಧ್ಯೆಯೂ ಐದು ವರ್ಷವನ್ನು ಪೂರ್ಣಗೊಳಿಸಲು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗಲೇ ಇಲ್ಲ. ವಿಧಾನಸಭೆ ವಿಸರ್ಜನೆಯಾಗಿ ಮತ್ತೆ ಚುನಾವಣೆ ಎದುರಾಯಿತು.
ಮಾಯಗಾರರು ಜನರ ಮುಂದೆ ಮೋಡಿ ಮಾಡಿದರೂ ಮತದಾರ ಸ್ಪಷ್ಟ ಬಹುಮತ ಕೊಡಲಿಲ್ಲ. ಆದರೆ ಜನರ ನಿಜವಾದ ಆಯ್ಕೆ ಬಿಜೆಪಿಯಾಗಿತ್ತು. 110 ಸ್ಥಾನಗಳಿಸಿದ್ದ ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಮೂರು ಸ್ಥಾನ ಕಡಿಮೆಯಿತ್ತು. `ಸುಭದ್ರ' ಸರ್ಕಾರ ಸ್ಥಾಪನೆಯ ದೃಷ್ಟಿಯಿಂದ ಆಪರೇಶನ್ ಕಮಲ ಶುರುವಾಯಿತು. ದುಪುದುಪು ಅಂತ ಒಬ್ಬೊಬ್ಬ ಶಾಸಕರೇ ರಾಜೀನಾಮೆ ಕೊಟ್ಟು ಚುನಾವಣೆಗೆ ಅನುವು ಮಾಡಿಕೊಟ್ಟರು. ಕೆಲವರು ಮಂತ್ರಿ ಮಹೋದಯರಾದರು, ಮತ್ತೆ ಕೆಲವರು ನಿಗಮ ಮಂಡಳಿಗೆ ಬಂದು ಕೂತರು. ರಾಜೀನಾಮೆ ಕೊಟ್ಟು `ಜನರಾಯ್ಕೆ'ಯನ್ನು ತಾವೇ ತಿರಸ್ಕರಿಸಿದರೂ ಸರ್ಕಾರಿ ಸವಲತ್ತುಗಳು ಅನುಭವಿಸಿದರು.
ಯಡಿಯೂರಪ್ಪನವರ ಕುರ್ಚಿ ಭದ್ರವಾಗಿಲು ಬೇಕಿದ್ದ ಮೂರು ಶಾಸಕರ ಬದಲಿಗೆ ಏಳು ಮಂದಿ ರಾಜೀನಾಮೆ ಕೊಟ್ಟರು. ಅಭಿವೃದ್ಧಿಗೆ ಬೆಂಬಲಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದರು.
ಮಧುಗಿರಿಯಲ್ಲಿ ಗೌರಿಶಂಕರ್, ತುರುವೇಕೆರೆಯಲ್ಲಿ ಜಗ್ಗೇಶ್, ದೊಡ್ಡಬಳ್ಳಾಪುರದಲ್ಲಿ ಜೆ.ನರಸಿಂಹಸ್ವಾಮಿ, ಹುಕ್ಕೇರಿಯಲ್ಲಿ ಉಮೇಶ ಕತ್ತಿ, ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ, ಕಾರವಾರದಲ್ಲಿ ಆನಂದ ಆಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ್ ರಾಜೀನಾಮೆಯಿತ್ತು ಬಿಜೆಪಿಯಿಂದ ಮರು ಆಯ್ಕೆ ಬಯಸಿದ್ದರು. ಮದ್ದೂರಿನಲ್ಲಿ ಶಾಸಕ ಸಿದ್ದರಾಜು ಆಕಸ್ಮಿಕ ಮರಣದಿಂದ ಅಲ್ಲೂ ಚುನಾವಣೆ ನಡೆಯಿತು. ಈ ಎಂಟು ಸ್ಥಾನಗಳ ಪೈಕಿ ಬಿಜೆಪಿಯ ಐವರು ಹಾಗೂ ಜೆಡಿ ಎಸ್‌ನ ಮೂವರು ಗೆದ್ದರು. ಅಲ್ಲಿಗೆ ಸರ್ಕಾರ ಭದ್ರ, ಸುಭದ್ರವಾಯಿತು.
ಅಷ್ಟರಲ್ಲೇ ಮತ್ತೆ ಲೋಕಸಭೆ ಚುನಾವಣೆ ಎದುರಾಯಿತು. ರಾಜ್ಯದ 28 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ಮೇ 16 ರವರೆಗೂ ರಾಜಕಾರಣಿಗಳು, ಸರ್ಕಾರಿ ಯಂತ್ರಾಂಗ, ಸರ್ಕಾರಿ ನೌಕರರು ಇದರಲ್ಲಿ ತಲ್ಲೀನರಾಗಿದ್ದಾರೆ.
ಹಾಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ಬೆನ್ನಲ್ಲೇ ವಿಧಾನಸಭೆಗೆ ಮತ್ತೆ ಉಪ ಚುನಾವಣೆ ಬರಲಿದೆ. ಔರಾದ್ ಕಾಂಗ್ರೆಸ್ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ರಾಜೀನಾಮೆ ನೀಡ ಬೀದರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಚುನಾವಣೆ ದಿನಾಂಕಕ್ಕೆ 45 ದಿನಗಳ ಮೊದಲೇ ಇವರು ರಾಜೀನಾಮೆ ಸಲ್ಲಿಸಿದ್ದರಿಂದಾಗಿ ಲೋಕಸಭೆ ಚುನಾವಣೆ ಜತೆಗೆ ಅವರು ರಾಜೀನಾಮೆ ನೀಡಿದ ವಿಧಾನಸಭಾ ಕ್ಷೇತ್ರಕ್ಕೂ ಚುನಾವಣೆ ನಡೆಯುತ್ತಿದೆ. ಹಾಗಾಗಿ ಅದರಿಂದ ಹೆಚ್ಚಿನ ಹೊರೆಯಿಲ್ಲ.
ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಲು ಚನ್ನಪಟ್ಟಣದ ಕಾಂಗ್ರೆಸ್ ಶಾಸಕ ಸಿ.ಪಿ. ಯೋಗೀಶ್ವರ್ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಬೆಂಬಲಿಸಲು ಗೋವಿಂದರಾಜನಗರದ ಕಾಂಗ್ರೆಸ್ ಶಾಸಕ ವಿ.ಸೋಮಣ್ಣ ರಾಜೀನಾಮೆ ನೀಡಿದ್ದಾರೆ. ಇವರೆಡೂ ಕ್ಷೇತ್ರಕ್ಕೆ ಮತ್ತೆ ಉಪಚುನಾವಣೆ ನಡೆಯಲೇಬೇಕಿದೆ.
ಇದರ ಜತೆಗೆ ಬೆಂಗಳೂರು ಗ್ರಾಮಾಂತರದಲ್ಲಿ ರಾಮನಗರ ಶಾಸಕ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು ಕೇಂದ್ರದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್‌ಅಹಮದ್‌ಖಾನ್, ಬೆಂಗಳೂರು ದಕ್ಷಿಣದಲ್ಲಿ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ, ಗುಲ್ಬರ್ಗಾದಲ್ಲಿ ಶಾಸಕ ಮಲ್ಲಿಕಾರ್ಜುನ ಖರ್ಗೆ, ಸಚಿವ ರೇವುನಾಯಕ್ ಬೆಳಮಗಿ, ಚಾಮರಾಜನಗರದಲ್ಲಿ ಕೊಳ್ಳೇಗಾಲ ಶಾಸಕ ಆರ್.ಧ್ರುವನಾರಾಯಣ್ ಸ್ಫರ್ಧೆಯಲ್ಲಿದ್ದಾರೆ.
ಇವರ ಪೈಕಿ ಯಾರೇ ಲೋಕಸಭೆಗೆ ಆರಿಸಿ ಹೋದರೂ ಆ ಕ್ಷೇತ್ರದಲ್ಲಿ ಮತ್ತೆ ಶಾಸಕರ ಆಯ್ಕೆಗಾಗಿ ಉಪ ಚುನಾವಣೆಯ ಭೂತ ಕಾಡಲಿದೆ. ಮತ್ತೆ ಹಳೇ ಸವಕಲು ಘೋಷಣೆಗಳು, ಹಣ-ಹೆಂಡದ ಹೊಳೆ, ಈಡೇರದ ಭರವಸೆಗಳ ಠೇಂಕಾರ ಕೇಳಿಸಲಿದೆ.
ಪರಸ್ಪರ ಆರೋಪ, ಪ್ರತ್ಯಾರೋಪ, ದೂಷಣೆ, ಕೈ ಕಡೀತಿನಿ, ಕಾಲು ಕಡಿತೀನಿ, ತಲೆ ಕತ್ತರಿಸುವಿಕೆಯ ಬೂಟಾಟಿಕೆಗಳ ಅಬ್ಬರವನ್ನು ಮುಗ್ಧ ಮತದಾರ ತಣ್ಣಗೆ ಕೇಳಿಸಿಕೊಳ್ಳಬೇಕಿದೆ. ಮತ್ತೆ ಅದೇ ಹಣವಂತರು, ರಿಯಲ್ ಎಸ್ಟೇಟ್ ಕುಳಗಳು ವಿಧಾನಸಭೆಗೆ ಆರಿಸಲಿದ್ದಾರೆ. ರಾಜಕೀಯ ಚದುರಂಗದಾಟದಲ್ಲಿ ಸಾಮಾನ್ಯ ಮತದಾರನಿಗೆ ಪೊಳ್ಳು ಘೋಷಣೆಗಳ ಹೊರತು ಮತ್ತೇನು ಸಿಗದು.
ಪ್ರಗತಿಗೆ ಜ್ವರ:
ಹೀಗೆ ಮೇಲಿಂದ ಮೇಲೆ ಚುನಾವಣೆಗಳು ಬರುತ್ತಿದ್ದರೆ ಅದರ ಪರಿಣಾಮ ರಾಜ್ಯದ ಅಭಿವೃದ್ಧಿಯ ಮೇಲೆ ಆಗುತ್ತದೆ. ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಸಚಿವ ಸಂಪುಟ ಸದಸ್ಯರು, ಹಿರಿ-ಕಿರಿ ಅಧಿಕಾರಿಗಳು ಚುನಾವಣೆಯಲ್ಲಿ ನಿರತರಾಗುವುದರಿಂದ ಯಾವ ಸರ್ಕಾರಿ ಕಡತಗಳು ಧೂಳಿಂದ ಮೇಲೇಳುವುದಿಲ್ಲ.
ಲೋಕಸಭೆ ಚುನಾವಣೆ ಘೋಷಣೆಯಾದ ಮಾರ್ಚ್ 2 ರಿಂದ ನೀತಿ ಸಂಹಿತೆ ಜಾರಿಯಿದ್ದು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಹೊಸದಾಗಿ ಅನುಷ್ಠಾನ ಮಾಡುವಂತಿಲ್ಲ. ಘೋಷಣೆ ದಿನಾಂಕಕ್ಕಿಂತ ಮೊದಲು ಮಂಜೂರಾದ ಕಾಮಗಾರಿಗಳನ್ನು ಮಾತ್ರ ಮಾಡಬಹುದಾಗಿದೆ ವಿನಃ ಹೊಸ ಕಾಮಗಾರಿಗಳಿಗೆ ಚಾಲೂ ನೀಡುವಂತಿಲ್ಲ.
ಜಾನಪದ ಜಾತ್ರೆ, ಸರ್ಕಾರದಿಂದ ನೀಡುವ ವಿವಿಧ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುವ ಅನುದಾನ, ಕಲಾವಿದರಿಗೆ ಬೇಕಾದ ಅನುಕೂಲ ಇವ್ಯಾವನ್ನು ಮಾಡುವಂತಿಲ್ಲ. ಎಲ್ಲದಕ್ಕೂ ನೀತಿ ಸಂಹಿತೆ ಅಡ್ಡಿ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಲಭ್ಯವಾಗುವ ಅನುದಾನವನ್ನು ಬಿಡುಗಡೆ ಮಾಡುವಂತಿಲ್ಲ.
ರಸ್ತೆ, ಬೀದಿದೀಪ, ಕುಡಿಯುವ ನೀರಿನಂತ ಮೂಲಭೂತ ಸೌಲಭ್ಯಗಳನ್ನು ಮರೆತು ಬಿಡೋಣ. ಆದರೆ ಹೃದ್ರೋಗ, ಕಿಡ್ನಿ ಕಾಯಿಲೆಯಂತ ಗಂಭೀರ ಸ್ವರೂಪದಲ್ಲಿ ತುರ್ತು ಚಿಕಿತ್ಸೆ ಬಯಸುವ ಬಡರೋಗಿಗಳು ಮುಖ್ಯಮಂತ್ರಿಯಿಂದ ಹಣ ಯಾಚಿಸುವಂತಿಲ್ಲ. ಎಲ್ಲವೂ ನೀತಿ ಸಂಹಿತೆಯ ವ್ಯಾಪ್ತಿಗೆ ಒಳಪಡುವುದರಿಂದ ಯಾವುದೇ ಸಹಾಯವೂ ಲಭ್ಯವಿಲ್ಲ.
ಅನಿವಾರ್ಯ ಸಂದರ್ಭದಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲೇಬೇಕಾದ ತುರ್ತಿರುವ ಸರ್ಕಾರಿ ನೌಕರರು ಪದೇ ಪದೇ ಬರುವ ಚುನಾವಣೆಯಿಂದ ಸಂತ್ರಸ್ತರಾಗಿದ್ದಾರೆ. ಸರ್ಕಾರದ ಮಟ್ಟದಲ್ಲಿ ಲಾಬಿ ಮಾಡುವ ಛಾತಿಯುಳ್ಳ ನೌಕರರದ್ದು ಒಂದು ಪಾಡು. ಹಣ, ರಾಜಕೀಯ ಪ್ರಭಾವ ಇಲ್ಲದ ನೌಕರರದ್ದು ಮತ್ತೊಂದು ಪಾಡು. ಪ್ರತಿವರ್ಷ ಏಪ್ರಿಲ್-ಮೇ ನಲ್ಲಿ ಸಾಮಾನ್ಯ ವರ್ಗಾವಣೆ ನಡೆಯುತ್ತದೆ. ಆದರೆ ಈ ಬಾರಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಯಾವುದೇ ವರ್ಗಾವಣೆ ಮಾಡುವಂತಿಲ್ಲ. ಮೇ 16 ಕ್ಕೆ ಚುನಾವಣೆ ಮುಗಿಯುತ್ತದಾದರೂ ಶೈಕ್ಷಣಿಕ ವರ್ಷ ಆರಂಭವಾಗುವುದರಿಂದ ಆಗಲೂ ವರ್ಗಾವಣೆ ಕನಸನ್ನು ನೌಕರರು ಮಡಿಚಿಡಬೇಕು. ವೃದ್ಧ ತಂದೆತಾಯಿ ಹೊಂದಿರುವವರು, ಸತಿ-ಪತಿ ಪ್ರಕರಣ, ಅನಾರೋಗ್ಯ ಮಕ್ಕಳನ್ನು ಹೊಂದಿರುವವರು, ವ್ಕ್ರೆಯಕ್ತಿಕವಾಗಿ ಕಾಯಿಲೆಯಿಂದ ಬಸವಳಿದ ಸರ್ಕಾರಿ ನೌಕರರು ವರ್ಗಾವಣೆಗೆ ಪರದಾಡಬೇಕಾಗಿದೆ.
ಲೋಕಸಭೆ ಚುನಾವಣೆಯಿರುವುದರಿಂದ ಇಡೀ ರಾಜ್ಯಕ್ಕೆ ನೀತಿ ಸಂಹಿತೆ ಅನ್ವಯವಾಗಿದೆ. ಆದರೆ ಉಪಚುನಾವಣೆ ಕೆಲವೇ ಕ್ಷೇತ್ರಗಳಿಗೆ ಸೀಮಿತವಾಗುವುದರಿಂದ ಆಗಲೂ ಆಯಾ ಪ್ರದೇಶಕ್ಕೆ ನೀತಿ ಸಂಹಿತೆ ಜಾರಿಯಾಗುತ್ತದೆ. ಇದು ಆಯಾ ಕ್ಷೇತ್ರದ ಅಭಿವೃದ್ಧಿಗೆ ಹೊಡೆತ ನೀಡುತ್ತದೆ.
ಚುನಾವಣೆಗೆ ಸರ್ಕಾರ ವೆಚ್ಚ ಮಾಡುವ ಹಣ ಕೂಡ ಸಾರ್ವಜನಿಕರು ತಮ್ಮ ಬೆವರು ಬಸಿದು ಕಟ್ಟುವ ತೆರಿಗೆ ಮೂಲದ್ದು. ಅದು ಯಾರದ್ದೋ ದುಡ್ಡಲ್ಲ. ಸಾರ್ವಜನಿಕರ ಪ್ರತಿಯೊಂದು ಪೈಸೆಯನ್ನು ಎಚ್ಚರದಿಂದ ಖರ್ಚು ಮಾಡಬೇಕಾದ ಹೊಣೆಗಾರಿಕೆ ಹೊಂದಿರುವ ಸರ್ಕಾರ ಈ ರೀತಿ ದುಂದು ಮಾಡುವುದುದು ಎಷ್ಟು ಸರಿ?
ಚುನಾವಣೆ ಬಂದರೆ ಆಗಲಾದರೂ ರಸ್ತೆ, ನೀರು, ಚರಂಡಿ, ವಿದ್ಯುದ್ದೀಪ, ಅಗತ್ಯ ಕಾಮಗಾರಿಗಳನ್ನು ಸ್ಥಳೀಯ ರಾಜಕಾರಣಿಗಳು ಮಾಡಿಸುತ್ತಾರೆಂಬ ಎಂಬ ಮತ್ತೊಂದು ವಾದವೂ ಇದೆ. ಮತ ಯಾಚಿಸಲು ಹೋದಾಗ ಮತದಾರ ಪ್ರಭುವಿನ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸುವುದಕ್ಕಿಂತ ಮೊದಲೇ ಅಭಿವೃದ್ಧಿ ಕಾಮಗಾರಿ ಮಾಡಿಸಿ, ನಂತರ ಮತ ಕೇಳಲು ಹೋಗುವ ಹುನ್ನಾರದಿಂದಲೂ ಚುನಾವಣೆ ಬಂದರೆ ಒಳ್ಳೆಯದೆಂಬ ಮಾತೂ ಇದೆ.
ಆದರೆ ಒಟ್ಟಾರೆ ಚುನಾವಣೆ ಯಾರ ಸ್ವಾರ್ಥಕ್ಕೆ, ಯಾರ ಅನುಕೂಲಕ್ಕೆ ಎಂಬ ಪ್ರಶ್ನೆ ಮತದಾರನದು. ಅಲ್ಲಿಂದ ಇಲ್ಲಿಗೆ ಮರಕೋತಿಯಾಟವಾಡುವ, ಅಭಿವೃದ್ಧಿ ಮುಖವಾಡದಡಿ ತಮ್ಮ ಹಿತಾಸಕ್ತಿಯನ್ನು ಪೂರೈಸಿಕೊಳ್ಳುವ ರಾಜಕಾರಣಿಗಳು ಆಡುವ ಆಟಕ್ಕೆ ಚುನಾವಣಾ ಆಯೋಗವಾದರೂ ಕಡಿವಾಣ ಹಾಕಬೇಕಾಗಿದೆ. ಒಂದು ಚಿಹ್ನೆ, ಪಕ್ಷದಡಿ ಗೆದ್ದ ಅಭ್ಯರ್ಥಿ ಒಂದು- ಎರಡು-ಆರು ತಿಂಗಳಲ್ಲಿ ರಾಜೀನಾಮೆ ನೀಡಿ, ಮತ್ತೊಂದು ಪಕ್ಷದಿಂದ ಸ್ಪರ್ಧಿಸುವುದು, ಚುನಾವಣೆ ವೆಚ್ಚವನ್ನು ಜನರ ಮೇಲೆ ಹೇರುವುದು ಪ್ರಜಾತಂತ್ರ ವಿರೋಧಿಯಲ್ಲವೇ ಎಂಬ ಚರ್ಚೆಯನ್ನು ಆರಂಭಿಸಲಂತೂ ಇದು ಸಕಾಲ.
ಕುರುಡು ಕಾಂಚಾಣ
ಕಾಲಿಗೆ ಬಿದ್ದವರ ತುಳಿಯುತಲಿತ್ತು'
ಚುನಾವಣೆಯಲ್ಲಿ ಒಂದು ಮತಕ್ಕಾಗಿ ಕಾಲಿಗೆ ಬೀಳುವವರು ಗೆದ್ದ ನಂತರ ತಲೆಮಾರಿಗಾಗುವಷ್ಟು ಸಂಪತ್ತು ಸಂಗ್ರಹಿಸಿ, ಕಾಂಚಾಣದ ಸುಪ್ಪತ್ತಿಗೆಯಲ್ಲೇ ಮರೆತು ಬಿಡುತ್ತಾರೆ.
ವಿಧಾಯಕ ರಾಜಕಾರಣದಲ್ಲಿ ಅಮೂಲ್ಯ `ಮತ' ಗಳಿಸಲು ಕುರುಡು ಕಾಂಚಾಣ ದೆವ್ವಂಗುಣಿತ ಮಾಡಿದೆ. ಚುನಾವಣೆ ಮುಖೇನ `ವಿಧೇಯಕ'ರಾಗುವವರು ಹಣದ ಆಮಿಷಕ್ಕೆ ಮತವನ್ನು ಖರೀದಿಸುವುದರಿಂದ ಅವರು ರೂಪಿಸುವ ನಿಯಮ, ಶಾಸನಗಳೆಲ್ಲ ಹಣಾವಲಂಬಿಯೇ ಆಗುತ್ತದೆ.
`ಜ್ಯೋತಿಯ ಮಣಿ ದೀಪಗಳಲ್ಲಿ
ಕತ್ತಲು ಕಗ್ಗತ್ತಲು ಇಲ್ಲಿ
ಕೂಳನು ಹೆಮ್ಮೆಗೆ ಬಿಸುಡುವರಲ್ಲಿ
ಹೊಟ್ಟೆಗೆ ಇಲ್ಲದೆ ಕೊರಗುವರಿಲ್ಲಿ'
ಎಂಬ ಪರಿಸ್ಥಿತಿ ಅರವತ್ತು ವರ್ಷಗಳಲ್ಲಿ ಬದಲಾಗಲೇ ಇಲ್ಲ. ಹಣದ ಥೈಲಿ ಅಷ್ಟು ಭರ್ಜರಿಯಾಗಿ ನರ್ತನ ಮಾಡುತ್ತಿದ್ದರೆ, ಬಡವರು ಮತ್ತಷ್ಟು ಸೊರಗುತ್ತಿದ್ದಾರೆ.
ಮೊದಲ ಹಂತದಲ್ಲಿ ನಡೆದ 17 ಲೋಕಸಭಾ ಕ್ಷೇತ್ರಗಳ ಚುನಾವಣೆ ಹೊತ್ತಿಗೆ ಸುಮಾರು 23 ಕೋಟಿ ರೂ. ಮೌಲ್ಯದ ನಗದು, ಆಭರಣಗಳು ವಶವಾಗಿವೆ.
ಮತದಾರನಿಗೆ ಹಂಚಲು ತಂದಿದ್ದ ಒಂದು ಕೋಟಿ ಮೌಲ್ಯದ ಚಿನ್ನಾಭರಣ, 80 ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಈವರೆಗೆ ವಶಪಡಿಸಿಕೊಳ್ಳಲಾಗಿದೆ. ಅಧಿಕೃತ ಲೆಕ್ಕವಿದಾದರೂ ಪೊಲೀಸರ ಕರಾಮತ್ತನ್ನು ಬಲ್ಲವರು ಹೇಳುವಂತೆ ಇದು ಸರಿಸುಮಾರು ದುಪ್ಪಟ್ಟಾಗಿರುತ್ತದೆ.
ಐನೂರು, ಸಾವಿರದ ಮುಖಬೆಲೆ ಹೊಂದಿದ ಸುಮಾರು 17.31 ಕೋಟಿ ರೂ. ನಗದು, 2.10 ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳು ಪೊಲೀಸರ ವಶವಾಗಿವೆ. ವಶಕ್ಕೆ ಪಡೆಯಲಾದ ಮದ್ಯದ ಪ್ರಮಾಣ 1.63 ಕೋಟಿ ರೂ. ಬೆಲೆಯುಳ್ಳದ್ದು.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಒಂದೇ ಪ್ರಕರಣದಲ್ಲಿ 5 ಕೋಟಿ ಪೊಲೀಸರ ವಶವಾಗಿದ್ದರೆ, ಬೆಂಗಳೂರಿನಲ್ಲಿ 7.5 ಕೆ.ಜಿ. ಚಿನ್ನ ವಶವಾಗಿದೆ. ಬೀದರ್, ಕೋಲಾರ, ಬಾಗಲಕೋಟೆ ಹೀಗೆ ಮೊದಲ ಹಂತದ ಚುನಾವಣೆ ನಡೆದ ಎಲ್ಲಾ ಕ್ಷೇತ್ರಗಳು `ಲಕ್ಷ್ಮಿ' ಕಾಲು ಮುರಿದುಕೊಂಡು ಬಿದ್ದಿದ್ದಾಳೆ. ಎಲ್ಲೆಲ್ಲೂ ಹಣದ ಹೊಳೆಯೇ ಹರಿದಾಡಿದೆ. ಇದು ಯಾವ ಪಕ್ಷದ ಅಭ್ಯರ್ಥಿಗಳಿಗೆ ಸೇರಿದ್ದೆಂದು ಬಹಿರಂಗವಾಗದಿದ್ದರೂ ಸೇರಿಗೆ ಸವ್ವಾಸೇರು ಎಂಬಂತೆ ಎಲ್ಲರೂ ಹಣದ ಬೆನ್ನು ಬಿದ್ದಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅಭ್ಯರ್ಥಿಯೊಬ್ಬರು `ನೋ ವೋಟ್ ನೋ ಕ್ಯಾಶ್' ಎಂಬ ಮಾದರಿ ಅನುಸರಿಸಿದ್ದು ವರದಿಯಾಗಿದೆ. ಮೇ 16ರ ದಿನಾಂಕ ನಮೂದಿಸಿ ಕೊಟ್ಟ ಚೆಕ್, ಅಭ್ಯರ್ಥಿ ಗೆದ್ದರೆ ಮಾತ್ರ ಕ್ಯಾಶ್ ಆಗುತ್ತದೆ. ಸೋತರೆ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೇ ಚೆಕ್ ವಾಪಸ್ಸಾಗುತ್ತದೆ. 50 ಸಾವಿರ ರೂ. ಗಳಿಂದ ಒಂದು ಲಕ್ಷ ರೂ. ವರೆಗಿನ ಚೆಕ್‌ಗಳು ಪಾವತಿಯಾಗಿದೆ. ಹೇಗಿದೆ ರಾಜಕಾರಣಿಯ ಬುದ್ದಿವಂತಿಕೆ.
ಹಣದ ಆಮಿಷಕ್ಕೆ `ಮಾರಿಕೊಂಡವರು' ಈ ಚುನಾವಣೆಯಲ್ಲಿ ಬಾರೀ ಸಂಖ್ಯೆಯಲ್ಲಿದ್ದಾರೆ. ವಿಧಾನಸಭೆಯ ಉಪ ಚುನಾವಣೆಯಲ್ಲಿಯೇ ಇಂತಹದೊಂದು ಪ್ರಯೋಗವನ್ನು ರಾಜಕಾರಣಿಗಳು ಮಾಡಿದ್ದರು. ಉಪಚುನಾವಣೆಯಲ್ಲಿ ಕನಕಾಂಬರ, ವೀಳ್ಯದೆಲೆಯ ಸಾಂಕೇತಿಕವಾಗಿ ಬಳಕೆಯಾಗಿತ್ತು. ಕನಕಾಂಬರವೆಂದರೆ ಸಾವಿರದ ನೋಟು, ವೀಳ್ಯದೆಲೆಯೆಂದರೆ ಐನೂರರ ನೋಟೆಂಬುದು ಮತದಾರರಿಗೆ ಅರ್ಥವಾಗಿತ್ತು. ವೀಳ್ಯದೆಲೆಯೂ ಇಲ್ಲ, ಕನಕಾಂಬರವೂ ಇಲ್ಲ, ಯಾಕೆ ಓಟು ಹಾಕೋಣ ಎಂಬ ಪ್ರಶ್ನೆಯನ್ನು `ಮುಗ್ಧ' ಮತದಾರರು ಕೇಳುತ್ತಿದ್ದರು.
ಲೋಕಸಭೆಗೆ ಸ್ಪರ್ಧಿಸಲು ಪೂರ್ವ ಸಿದ್ದತೆ ಮಾಡಿಕೊಂಡಿದ್ದ ಅಭ್ಯರ್ಥಿಯೊಬ್ಬರು ತಮ್ಮ ತಂದೆಯನ್ನು ಆಯ್ಕೆ ಮಾಡಿದ ವಿಧಾನಸಭಾ ಕ್ಷೇತ್ರದಲ್ಲಿ ಸಂಕ್ರಾಂತಿ ಸಡಗರಕ್ಕೆ ಸೀರೆ ಹಂಚಿ ತಮಗೆ ಬರಬೇಕಾದ ಮತಕ್ಕೆ ಪೂರ್ವಭಾವಿ `ವ್ಯವಸ್ಥೆ' ಮಾಡಿಕೊಂಡಿದ್ದರು.
ಮಾರಿಕೊಂಡವರು
ಮತಕ್ಕಾಗಿ ಮಾರಿಕೊಂಡವರು ಐದು ವರ್ಷಗಳ ಕಾಲ ಮತ್ತೆಂದು ರಾಜಕಾರಣಿಗಳನ್ನು ಪ್ರಶ್ನಿಸುವಂತಿಲ್ಲ. ಯಾಕೆಂದರೆ ತಮ್ಮ ಹಕ್ಕನ್ನೂ ಅತ್ಯಲ್ಪ ಹಣಕ್ಕಾಗಿ `ಜಿಪಿಎ' ಬರೆದುಕೊಟ್ಟು ಬಿಟ್ಟಿರುತ್ತಾರೆ. ಪ್ರಶ್ನಿಸಿದರೆ ಹಣಕೊಟ್ಟಿಲ್ವಾ ಮತ್ತೇನು ಕೇಳೋದು ಎಂಬ ಜಬರ್ದಸ್ತು ಮಾಡಲು ರಾಜಕಾರಣಿಗಳು ಅಂಜುವುದಿಲ್ಲ, ಅಳುಕುವುದಿಲ್ಲ.
ಆಯ್ಕೆಯಾಗುವ ಅಭ್ಯರ್ಥಿಗಳು ಜಾಗತೀಕರಣ ಪರವಾದ ನಿಲುವು ತೆಗೆದುಕೊಳ್ಳಲಿ, ವಿಶೇಷ ಆರ್ಥಿಕ ವಲಯಗಳನ್ನು ಜಾರಿ ಮಾಡಲಿ, ಸಾರ್ವಜನಿಕ ವಲಯದ ಲಾಭಕರ ಉದ್ಯಮಗಳನ್ನು ಮಾರಿಕೊಳ್ಳಲಿ, ಬಡವರ ವಿರೋಧಿ ನಿಲುವು ಅನುಷ್ಠಾನಗೊಳಿಸಲಿ, ಅಭಿವೃದ್ಧಿ ಮಾಡದೇ ಇರಲಿ. ಅವರು ಪ್ರಶ್ನಾತೀತ. ಯಾಕೆಂದರೆ ಹಣಕೊಟ್ಟು ಮತ ಖರೀದಿಸಿದ್ದಾರೆ. ಖರೀದಿಗಾಗಿ ಖರ್ಚು ಮಾಡಿದ ಹಣವನ್ನು ಮತ್ತೆ ಸಂಪಾದಿಸುವ ದರ್ದು ಅವರಿಗೆ ಇರುತ್ತದೆ. ಮಾರಿಕೊಂಡವರು ಸುಮ್ಮನೇ ಮತ್ತೊಂದು ಚುನಾವಣೆಗೆ ಕಾಯುವುದಷ್ಟೇ ಕರ್ಮ.
ಸಿರಿಗರ
ಹಾವು ತಿಂದವರ ನುಡಿಸಬಹುದು, ಗರ ಬಡಿದವರ ನುಡಿಸಬಹುದು, ಸಿರಿಗರ ಬಡಿದವರ ನುಡಿಸಲು ಬಾರದು ನೋಡಯ್ಯಾ ಎಂಬ ಬಸವಣ್ಣನವರ ವಚನ ಹಣದ ದರ್ಪ-ಅಹಂಕಾರ ಕುರಿತು ಅರ್ಥಪೂರ್ಣ ಮಾತು. ಹಣದ ಹೊಳೆ ಹರಿಸಿ, ಮತವನ್ನು ಖರೀದಿಸುವವರು ಬಂಡವಾಳ ಹೂಡಿ ಬಂಡವಾಳ ತೆಗೆಯುವ ಉದ್ಯಮಿಯಂತೆ. ಸಿರಿಗರ ಬಡಿದವರನ್ನು ನುಡಿಸಲು ಬಾರದು. ವಿಧೇಯಕರನ್ನು ಆರಿಸುವ ಚುನಾವಣೆ ಬಂಡವಾಳಶಾಹಿಯ ಎಲ್ಲ ಲಕ್ಷಣವನ್ನು ಮೈಗೂಡಿಸಿಕೊಂಡಿದೆ. ಹೂಡುವವನು ಮುಂದಿನ ಐದು ವರ್ಷದ ಲೆಕ್ಕಾಚಾರ ಹಾಕಿಯೇ ಹೂಡುತ್ತಾನೆ. ಅದಕ್ಕಾಗಿ ಬೇಕಾದ ಹೂಡಿಕೆಯನ್ನು ಅಳೆದು ತೂಗಿ ಮಾಡುತ್ತಾನೆ.
ಹೀಗೆ ಬಂಡವಾಳ ಪದ್ಧತಿ ಚುನಾವಣೆಯಲ್ಲಿ ಅಳವಟ್ಟಿರುವುದರಿಂದಲೇ ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಚುನಾವಣೆ ಅವಧಿಯಲ್ಲಿ 23 ಕೋಟಿ ರೂ.ಗಳಷ್ಟು ಅಕ್ರಮ ಹಣ, ಬಂಗಾರ ಪೊಲೀಸರ ವಶವಾಗಿದೆ. ಶೋಕೇಸ್‌ನಲ್ಲಿಯೇ ಇಷ್ಟು ಕಂಡಿರಬೇಕಾದರೆ ಇನ್ನು ರಹಸ್ಯವಾಗಿ ಗೋಡನ್‌ನಲ್ಲಿ ಕೂಡಿಟ್ಟಿದ್ದು ಎಷ್ಟಿದ್ದೀತು? ಒಂದು ಲೋಕಸಭಾ ಕ್ಷೇತ್ರಕ್ಕೆ ಸರಾಸರಿ ಲೆಕ್ಕ ಹಾಕಿದರೆ ಒಂದು ಕಾಲು ಕೋಟಿ ಯಷ್ಟಾಗುತ್ತದೆ. ಚುನಾವಣೆ ಆಯೋಗ ಒಬ್ಬ ಅಭ್ಯರ್ಥಿಗೆ ನಿಗದಿ ಮಾಡಿರುವ ಖರ್ಚಿ ಬಾಬ್ತು ಕೇವಲ 25 ಲಕ್ಷ ರೂ. ಆದರೆ ಅಕ್ರಮವಾಗಿ ಸಂಗ್ರಹವಾಗಿರುವುದೇ ಒಂದೂಕಾಲು ಕೋಟಿ ದಾಟಿದೆ. ಅಬ್ಬಾ ಹಣವೇ ಏನು ನಿನ್ನ ಮಹಿಮೆಗಳ ಲೀಲೆ?
ಒಂದೇ ವೋಟು
ಚುನಾವಣೆ ಬಗ್ಗೆ ಸವಕಲಾದ ಮಾತೊಂದಿದೆ; ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೋಟ್ಯಾಧೀಶನಿಗೂ ಒಂದೇ ವೋಟು, ನಿರ್ಗತಿಕನಿಗೂ ಒಂದೇ ವೋಟು. ಪ್ರತಿ ಚುನಾವಣೆಯಲ್ಲಿ ಇಬ್ಬರೂ ಮತ ಚಲಾಯಿಸುತ್ತಾರೆ. ಪ್ರತಿ ಬಾರಿ ಫಲಿತಾಂಶ ಬಂದಾಗಲೂ ಕೋಟ್ಯಧೀಶ ಗೆಲ್ಲುತ್ತಾನೆ. ನಿರ್ಗತಿಕ ಸೋಲುತ್ತಾನೆ.
ಕುರುಡು ಕಾಂಚಾಣ ಮೊದಲ ಹಂತದಲ್ಲಿ ತನ್ನ ನರ್ತನ ಮುಗಿಸಿದೆ. ಥೈ ಥೈ ಕುಣಿದು ಮತವನ್ನು ವಶೀಕರಣ ಮಾಡಿದೆ. ಫಲಿತಾಂಶವೊಂದು ಬಾಕಿಯಿದೆ.
`ಹೆಂಗಾರ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತು
ಹೆಗಲಾಲಿ ಎತ್ತೋ'
ಹೌದು; ಕುರುಡು ಕಾಂಚಾಣದ ಮೈಮರೆಸುವ ಕುಣಿತದಲ್ಲಿ ಇಲ್ಲಿವರೆಗೆ ಅಭ್ಯರ್ಥಿ ಗೆದ್ದಿದ್ದಾನೆ. ಪ್ರಜಾಪ್ರಭುತ್ವ ಅಂಗಾತ ಬಿದ್ದಿದೆ. ಮತದಾರರ ಅದನ್ನು ಹೆಗಲಲ್ಲಿ ಹೊತ್ತುಕೊಂಡು ಐದು ವರ್ಷ ಓಡಾಡುತ್ತಿದ್ದಾನೆ. ಹದಿನೈದನೇ ಚುನಾವಣೆಯಲ್ಲಾದರೂ ಕುರುಡು ಕಾಂಚಾಣ ಅಂಗಾತ ಬಿದ್ದು, ಹೆಗಲಾಲಿ ಎತ್ತುವಂತಹ ಸ್ಥಿತಿಗೆ ತಲುಪಲಿ. ಪ್ರಜಾಪ್ರಭುತ್ವ ಎದ್ದು ನಿಂತು ಜನಾಧಿಕಾರ ಸ್ಥಾಪಿತವಾಗಲಿ. . .
Sunday, April 19, 2009
ತಲ್ಲಣ ತಳಮಳ
ಕೈತುಂಬಿ ಚೆಲ್ಲುವಷ್ಟು ಸಂಬಳ ಗಿಟ್ಟಿಸಿ, ಊಹೆಗೂ ನಿಲುಕದಂತಹ ಐಷಾರಾಮಿ ಜೀವನ ಮಾಡುತ್ತಿದ್ದವರ ಪಾಡು ಒಂದು ರೀತಿಯದು. ಹೊಟ್ಟೆ ತುಂಬುವ ಹಿಟ್ಟಿಗೂ ಪರದಾಡುತ್ತಾ ನಿತ್ಯದ ಅವಶ್ಯಕತೆಗೂ ಎಟುಕದ ಸಂಬಳ ಪಡೆಯುತ್ತಿದ್ದವರದ್ದು ಮತ್ತೊಂದು ಬಗೆಯ ಯಾತನೆ. ಆದರೆ ಎರಡರ ಪರಿಣಾಮವೊಂದೇ. ಸಾಮಾಜಿಕ, ಮಾನಸಿಕ ಆಘಾತ; ಹೆಚ್ಚುತ್ತಿರುವ ವಿಚ್ಛೇದನ; ಆತ್ಮಹತ್ಯೆಯ ಹೆಚ್ಚಳ; ಮನೋರೋಗಿಗಳ ಸಂಖ್ಯೆ ಅಧಿಕ; ಅಪರಾಧ ಪ್ರಕರಣಗಳ ಪುನರಾವೃತ್ತಿ; ಎಲ್ಲೆಲ್ಲೂ ಕಾಡುತ್ತಿರುವ ಅಭದ್ರತೆ.
ಆಘಾತ 1:
ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವೊಂದರಲ್ಲಿ ಹೆಸರಾಂತ ಹೋಟೆಲ್‌ನಲ್ಲಿ ಮಧ್ಯಾಹ್ನ ಹಾಗೂ ಸಂಜೆಯ ಹೊತ್ತು ಕಾಲಿಕ್ಕಲು ಜಾಗವಿರುತ್ತಿರಲಿಲ್ಲ. ಊಟ ಮಾಡಲು ಹೋದರೆ ಬಟ್ಟೆಗೆಲ್ಲಾ ಅನ್ನಸಾಂಬಾರು ಮೆತ್ತಿಕೊಳ್ಳುತ್ತಿತ್ತು. ಕೊರಳಿಗೆ ಐಡಿ ಕಾರ್ಡ್‌ನ ಟ್ಯಾಗ್ ನೇತು ಹಾಕಿಕೊಂಡ ಯುವಕ-ಯುವತಿಯ ಮೇಜುಬಾನಿ ಅಲ್ಲಿರುತ್ತಿತ್ತು. ಅವರೆಲ್ಲರೂ ಕಂಪನಿ ಕೊಡುವ ಕೂಪನ್ ಖಾಲಿ ಮಾಡಲು ಅತ್ತ ಚಿತ್ತೈಸುತ್ತಿದ್ದರು. ಆದರೆ ಈಗ್ಗೆ 2 ತಿಂಗಳಿಂದ ಹೋಟೆಲು ಬಣಬಣ. ಕೊರಳಿಗೆ ಟ್ಯಾಗ್ ಹಾಕಿಕೊಂಡು, ಕೂಪನ್ ಹಿಡಿದು ಬರುತ್ತಿದ್ದವರು ಪತ್ತೆಯಿಲ್ಲ. ಏಕೆಂದರೆ ಆ ಸುತ್ತಮುತ್ತಲಿದ್ದ ಬಹುತೇಕ ಬಿಪಿಓಗಳು ಅರ್ಧ ಬಾಗಿಲು ಹಾಕಿವೆ. ಇನ್ನೂ ಕೆಲವು ಉದ್ಯೋಗಸ್ಥರ ಕಡಿತ ಮಾಡಿವೆ. ಕೂಪನ್ ಕೂಡ ಕೊಡುತ್ತಿಲ್ಲ.
ಆಘಾತ2:
ತಿಂಗಳಿಗೆ ಒಂದು ಲಕ್ಷಕ್ಕೂ ಜಾಸ್ತಿ ಸಂಬಳ ಪಡೆಯುತ್ತಿದ್ದ ಅನೇಕ ಐಟಿ ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಸಂಬಳ ಬರುತ್ತಿದ್ದಾಗ 25-30 ಸಾವಿರ ಬಾಡಿಗೆ, ಸ್ಟಾರ್ ಹೋಟೆಲುಗಳಲ್ಲಿ ಊಟ, ಕಾಫಿ ಡೇನಲ್ಲಿ ಕಾಫಿ ಹೀಗೆ ಜೀವನ ಸಾಗುತ್ತಿತ್ತು. ಆದರೆ ಈಗ ಕೆಲಸವೂ ಇಲ್ಲ, ಸಂಬಳವೂ ಇಲ್ಲ. ಮಾನಸಿಕ ಹಾಗೂ ಕೌಟುಂಬಿಕ ಸಂಘರ್ಷ ಹೆಚ್ಚಾಗಿ ದಾಂಪತ್ಯ ವಿಚ್ಛೇದನೆಯ ಹೊಸ್ತಿಲಲ್ಲಿ ಬಂದು ನಿಂತಿದೆ. ಇದು ಅಸಂಖ್ಯಾತ ಯುವ ಜೋಡಿಗಳ ಸಮಸ್ಯೆ.
ಆಘಾತ 3:
ಉದ್ಯೋಗ ಕಳೆದುಕೊಂಡ ಅಥವಾ ಕಳೆದುಕೊಳ್ಳುವ ಭೀತಿಯಲ್ಲಿ ಮಾನಸಿಕ ಸಮಸ್ಯೆ ಉಲ್ಬಣ. ಒಂದು ಅಧ್ಯಯನದ ಪ್ರಕಾರ ಇಡೀ ವಿಶ್ವದಲ್ಲಿ ಮಾನಸಿಕ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಶೇ.20 ರಷ್ಟು ಜಾಸ್ತಿಯಾಗಿದ್ದರೆ, ಬೆಂಗಳೂರಿನಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ. ಮನಃಶ್ಯಾಸ್ತ್ರಜ್ಞರು, ಮಾನಸಿಕ ಚಿಕಿತ್ಸಕರಿಗೆ ಭಾರೀ ಬೇಡಿಕೆ. ಮನೋಕ್ಲೇಶ ನೀಗಿಸುವ ಔಷಧ ವಸ್ತುಗಳಿಗೆ ಗಮನಾರ್ಹ ಬೇಡಿಕೆ ಉಂಟಾಗಿದೆಯಂತೆ.
ಆಘಾತ 4:
ಒಂದು ಬಿಪಿಓ ಕಂಪನಿ. ಇಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಯೊಬ್ಬಳಿಗೆ ಸದಾ ಮೊಬೈಲ್ ನೋಡುವ ಕೆಲಸ. ಏಕೆಂದರೆ `ನಾಳೆಯಿಂದ ನೀವು ಕೆಲಸಕ್ಕೆ ಬರುವುದು ಬೇಡ'ವೆಂಬ ಸಂದೇಶ ಆಕೆಯ ಹಲವು ಸಹೋದ್ಯೋಗಿಗಳಿಗೆ ಬಂದಿದೆ. ತನಗೂ ಬರಬಹುದೆಂಬ ಆತಂಕ ಆಕೆಯದು. ಇನ್ನೂ ಕೆಲವರು ಕಚೇರಿಗೆ ಹೋದಾಗ ಪಂಚ್ ಕಾರ್ಡ್ ತೋರಿಸಿದರೆ ಕಚೇರಿಯ ಬಾಗಿಲೇ ತೆರೆದುಕೊಳ್ಳಲಿಲ್ಲವಂತೆ. ಸೆಕ್ಯುರಿಟಿ ಗಾರ್ಡ್ ಕೇಳಿದರೆ ನಿಮ್ಮನ್ನು ಕೆಲಸಕ್ಕೆ ತೆಗೆದು ನಿಮ್ಮ ಪಂಚ್ ಕಾರ್ಡ್ ರದ್ದಾಗಿದೆ ಎಂಬ ಉತ್ತರ. ಅಂತಹವರ ಮನಃಸ್ಥಿತಿ ಹೇಗಿರಬೇಡ.
ಆಘಾತ 5:
ಇದ್ದಕ್ಕಿದ್ದಂತೆ ಸಂಬಳ ಕಡಿತ, ಸೌಲಭ್ಯ ಕಡಿತ. ದುಡಿಮೆಯ ಸಮಯ ಹೆಚ್ಚಳ. ಇಲ್ಲದಿದ್ದರೆ ಅವರು ಕೆಲಸ ಮಾಡುತ್ತಿದ್ದ ವಿಭಾಗವೇ ರದ್ದು. ಯಾರನ್ನೂ ಕೇಳುವಂತೆಯೂ ಇಲ್ಲ, ಪರಿಸ್ಥಿತಿಯನ್ನು ಇನ್ನೊಬ್ಬರಿಗೆ ಹೇಳಿಕೊಳ್ಳುವಂತೆಯೂ ಇಲ್ಲ.
ಆಘಾತ 6: ಜವಳಿ ಮತ್ತು ಗಾರ್ಮೆಂಟ್ಸ್ ಉದ್ಯಮ ತತ್ತರಿಸುತ್ತಿದ್ದು 2-3 ಸಾವಿರ ರೂ. ಗೆ ದಿನವಿಡೀ ಕಿರುಕುಳ ಸಹಿಸಿ ಕೆಲಸ ಮಾಡುತ್ತಿದ್ದವರಿಗೆ ಆ ಕೆಲಸವೂ ಇಲ್ಲ. ಕೈಯಲ್ಲಿ ಕಾಸೂ ಇಲ್ಲ. ಒಂದು ಅಂದಾಜಿನಂತೆ 2009ರ ಮಾರ್ಚ್ ವೇಳೆಗೆ ಇಡೀ ಭಾರತದ ಜವಳಿ ಉದ್ಯಮದಲ್ಲಿ 6 ಲಕ್ಷ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಗಾರ್ಮೆಂಟ್ಸ್ ಉದ್ಯಮ ಬಲಿಷ್ಠವಾಗಿರುವ ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ ಲಕ್ಷ ದಾಟುತ್ತದೆ. ಮುಳುಗುವವನಿಗೆ ಸಿಕ್ಕಿದ್ದ ಹುಲ್ಲುಕಡ್ಡಿಯೂ ಕೈತಪ್ಪಿ ಹೋದ ಅನುಭವ.
* * * * *
ಆರ್ಥಿಕ ಬಿಕ್ಕಟ್ಟಿನ ಪರೋಕ್ಷ ಪರಿಣಾಮವಿದು. ಎಲ್ಲಿ ನೋಡಿದರಲ್ಲಿ ಉದ್ಯೋಗ ಕಡಿತದ ಭೀತಿ. ವಿಶ್ವಸಂಸ್ಥೆಯ ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಷನ್(ಐ ಎಲ್‌ಓ) ಬಿಡುಗಡೆ ಮಾಡಿದ ವರದಿ ಇದು. 2008ರಲ್ಲಿ ಶೇ.6.3 ರಷ್ಟಿದ್ದ ನಿರುದ್ಯೋಗ ಏರಿಕೆ ಪ್ರಮಾಣ 2009ರಲ್ಲಿ ಶೇ.7.1ರಷ್ಟಾಗಲಿದೆ. 2007ರಲ್ಲಿ ಈ ಪ್ರಮಾಣ ಶೇ.5.7ರಷ್ಟಿತ್ತು. ನಿರುದ್ಯೋಗಿಗಳ ಸಂಖ್ಯೆಗೆ 1.8 ಕೋಟಿ ಸೇರ್ಪಡೆಯಾಗಲಿದ್ದಾರೆಂಬ ಲೆಕ್ಕಾಚಾರ ಇದೀಗ 3 ಕೋಟಿ ಆಗಬಹುದೆಂದು ಈ ವರದಿ ಉಲ್ಲೇಖಿಸಿದೆ. ಉದ್ಯೋಗ ಕ್ಷೀಣತೆ ಪ್ರಮಾಣ 5 ಕೋಟಿಗೆ ತಲುಪಲಿದೆ ಎಂದು ವರದಿ ಆತಂಕಿಸಿದೆ.
ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ, ಬಿಪಿಓ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು, ಹಣಕಾಸು ಸಂಸ್ಥೆಗಳನ್ನು ಮಾತ್ರ ಈ ಲೆಕ್ಕಾಚಾರ ಒಳಗೊಂಡಿದೆ. ಕೃಷಿ ಸಂಸ್ಕರಣೆ, ಗಾರ್ಮೆಂಟ್ಸ್ ಮತ್ತಿತರ ಕ್ಷೇತ್ರಗಳನ್ನು ಇದು ಲೆಕ್ಕಕ್ಕಿಟ್ಟಿಲ್ಲ.
2008ರಲ್ಲಿ ಅಮೆರಿಕದಲ್ಲಿ 28 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದರೆ, ಕೇವಲ ಜನವರಿ ತಿಂಗಳಿನಲ್ಲಿ ಈ ಸಂಖ್ಯೆ 20 ಲಕ್ಷ ದಾಟಿದೆ. 1945ರ ನಂತರ ಮೊದಲ ಬಾರಿಗೆ ಈ ಪ್ರಮಾಣದ ನಿರುದ್ಯೋಗ ಅಮೆರಿಕದಲ್ಲಿ ಕಾಣಿಸಿಕೊಂಡಿದೆ. ಕಡಿಮೆ ಜನಸಂಖ್ಯೆಯಿರುವ ಅಮೆರಿಕೆಯ ಪರಿಸ್ಥಿತಿಯೇ ಹೀಗಾದರೆ ಕೇವಲ ಮಾನವಸಂಪನ್ಮೂಲವೇ ದೇಶದ ಶಕ್ತಿಯಾಗಿರುವ ಭಾರತ ಪ್ರಮಾಣ ಎಷ್ಟು ಭೀಕರವಾಗಿರಬೇಡ.
ಉದ್ಯೋಗ ಸೃಷ್ಟಿಯ ಸಾಧ್ಯತೆಯೇ ಇಲ್ಲವಾಗಿದೆ. ಸರ್ಕಾರಿ ಉದ್ಯೋಗಿಗಳ ನಿವೃತ್ತಿಯ ವಯಸ್ಸನ್ನು 58ರಿಂದ 60ಕ್ಕೆ ಏರಿಸಿದ್ದರಿಂದ ನಿವೃತ್ತಿಯಾಗುವವರ ಸೇವೆ 2 ವರ್ಷ ಮುಂದಕ್ಕೆ ಹೋಗಲಿದೆ. ಅಲ್ಲೂ ಉದ್ಯೋಗ ಸೃಷ್ಟಿಯಾಗುತ್ತಿಲ್ಲ.
ಬರಲಿರುವ ಭರ್ಜರಿ ಸಂಬಳ ನೆಚ್ಚಿಕೊಂಡು ಮನೆ, ನಿವೇಶನ, ಅಪಾರ್ಟ್‌ಮೆಂಟ್, ಕಾರು, ಬಂಗಲೆಗಳನ್ನು ಸಾಲ ಖರೀದಿ ಮಾಡಿದವರ ಆರ್ಥಿಕ ಪರಿಸ್ಥಿತಿ ಹೇಗಾಗಿರಬೇಡ. ಜತೆಗೆ ಪಡೆದ ಸಾಲವನ್ನು ತೀರಿಸುವುದು ಹೇಗೆ? ಸಾಲವನು ಕೊಂಬಾಗ ಹಾಲೋಗರುಂಬಂತೆ, ಸಾಲಿಗರು ಬಂದು ಒದೆವಾಗ ಇಬ್ಬದಿಯ ಕೀಲು ಮುರಿದಂತೆ ಸರ್ವಜ್ಞನೆಂಬ ಸ್ಥಿತಿ ಉಂಟಾಗಿದೆ. ಹಾಗಾಗಿಯೇ ಆತ್ಮಹತ್ಯೆಗಳು ಹೆಚ್ಚುತ್ತಿವೆ.
ಅಮೆರಿಕೆಯಲ್ಲಿ ಹೊರಗುತ್ತಿಗೆ ರದ್ದು ಮಾಡುವುದಾಗಿ ಅಲ್ಲಿನ ಅಧ್ಯಕ್ಷ ಒಬಾಮ ಹೇಳಿದ್ದಾರೆ. ಅದಾದರೆ ಬೆಂಗಳೂರು, ಹೈದರಾಬಾದ್‌ನಂತಹ ಪ್ರಮುಖ ನಗರಗಳ ಯುವ ಸಮುದಾಯ ತತ್ತರಿಸಲಿದೆ. ಅಮೆರಿಕೆಯ ಕೆಲಸವನ್ನೇ ನೆಚ್ಚಿಕೊಂಡು ಶುರುಮಾಡಿದ ಬಿಪಿ ಓಗಳು ಬಾಗಿಲು ಹಾಕಿದರೆ ಇನ್ನಷ್ಟು ಸಾಮಾಜಿಕ, ಆರ್ಥಿಕ ಬಿಕ್ಕಟ್ಟು ನಿರ್ಮಾಣಗೊಳ್ಳಲಿದೆ.
ಬದಲಾದ ಎಚ್ ಆರ್:
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಎಲ್ಲಾ ಐಟಿ, ಬಿಪಿಓ, ಉದ್ದಿಮೆಗಳಿಗೆ ಉದ್ಯೋಗಸ್ಥರ ನೇಮಕ ಮಾಡಲು ನೆರವಾಗುತ್ತಿದ್ದ ಮಾನವ ಸಂಪನ್ಮೂಲ ವಿಭಾಗದ ಕಾರ್ಯವೈಖರಿಯೇ ಬದಲಾಗಿದೆ. ಪ್ಲೇಸ್‌ಮೆಂಟ್‌ಗೆ ಸಹಕರಿಸುತ್ತಿದ್ದವರು ಇದೀಗ ಔಟ್‌ಪ್ಲೇಸ್‌ಮೆಂಟ್ ಎಂಬ ಹೊಸ ಪದ್ಧತಿ ಶುರು ಹಚ್ಚಿಕೊಂಡಿದ್ದಾರೆ.
ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳು ಸಂಸ್ಥೆಯ ಬಗ್ಗೆ ಕಹಿ ಅಥವಾ ದ್ವೇಷ ಭಾವನೆ ತಾಳದೇ ಇರುವಂತೆ ನೋಡಿಕೊಳ್ಳುವುದು. ಕೆಲಸದಿಂದ ನೂರಾರು ಮಂದಿಯನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೊಗೆದರೂ ಅದರ ಬ್ರಾಂಡ್ ನೇಮ್ ಹಾಳಾಗದಂತೆ ನೋಡಿಕೊಳ್ಳುವುದು ಎಚ್‌ಆರ್‌ಗಳ ನೂತನ ಕಾಯಕ.
ಕೆಲಸದಿಂದ ತೆಗೆಯುವ ಕಾರಣಗಳನ್ನು ಉದ್ಯೋಗಿಗಳಿಗೆ ಮನವರಿಕೆ ಮಾಡಿಕೊಡುವ ಕೌನ್ಸಿಲಿಂಗ್, ಮುಂದಿನ ಹಾದಿಯ ಬಗ್ಗೆ ಕೋಚಿಂಗ್, ಉದ್ಯೋಗ ಬದಲಿಸಲು ಬೇಕಾದ ಮಾರ್ಗದರ್ಶನ, ಮೆಡಿಟೇಶನ್ ಮಾಡುವುದರಿಂದ ಹತಾಶೆಯಿಂದ ಹೊರಬರುವುದು, ಹೆಚ್ಚಿನ ಓದಿಗೆ ಪುಕ್ಕಟೆ ಸಲಹೆ ನೀಡುವುದು, ಸ್ನೇಹಿತರ ನೆಟ್‌ವರ್ಕ್ ಗಳಿಸಿಕೊಳ್ಳಿ ಎಂದು ಬೋಧನೆ ಮಾಡುವುದು ಇಂತಹವು ಸೇರಿವೆಯಂತೆ. ಇಂತಹ ಕೆಲಸದಲ್ಲಿ ಕೆಲವು ಕಂಪನಿಗಳು ಥರೋ ಆಗಿದ್ದು, ಅವಕ್ಕೆ ಮಾತ್ರ ಈ ಜವಾಬ್ದಾರಿ ವಹಿಸಲಾಗುತ್ತದೆ. ಹೇಗಿದೆ ನೋಡಿ; ಉದ್ಯೋಗಕ್ಕೆ ತೆಗೆದುಕೊಳ್ಳುವುದಕ್ಕೂ ಉದ್ಯೋಗ ಕಳೆಯುವುದಕ್ಕೂ ಎರಡೂ ಎಚ್‌ಆರ್ ಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ.
Saturday, March 21, 2009
ಬಿಜೆಪಿ ಶಸ್ತ್ರಸನ್ಯಾಸ
ಚುನಾವಣೆಯಲ್ಲಿ ಗೆಲ್ಲಲು ಹಣ-ಹೆಂಡದಂತಹ ಆಮಿಷವನ್ನೇ ನೆಚ್ಚಿಕೊಳ್ಳಬೇಕಾದ ದುರ್ಗತಿ ಬಿಜೆಪಿಗೆ ಬಂದೊದಗಿದೆ. ಯಾವ ದೇಶಭಕ್ತಿ, ರಾಷ್ಟ್ರಪ್ರೇಮ, ಸೈದ್ಧಾಂತಿಕ ರಾಜಕಾರಣ ಎಂದೆಲ್ಲಾ ಮಾತನಾಡುತ್ತಿದ್ದ ಬಿಜೆಪಿ ಈಗ ಅವೆಲ್ಲವನ್ನು ಬಂಗಾಳಕೊಲ್ಲಿಗೆ ಎಸೆದು ಕುಟಿಲ ರಾಜಕಾರಣದ ಬೆನ್ನುಬಿದ್ದಿದೆ. ಬಿಜೆಪಿಯ ಹಿಂದಿದ್ದ `ದೇಶಭಕ್ತ'ರೂ ಕೂಡ ಮುಜುಗರ ಪಟ್ಟುಕೊಳ್ಳಬೇಕಾದ ವಾತಾವರಣ ನಿರ್ಮಾಣವಾಗಿದೆ.
ಕಳೆದ ವಿಧಾನಸಭೆ ಚುನಾವಣೆ ಸಮಯ ನೆನಪಿಸಿಕೊಳ್ಳಿ. ಅದಕ್ಕೂ ಮೊದಲು ಕುಮಾರಸ್ವಾಮಿಯವರು ಮಾತಿಗೆ ತಪ್ಪಿ, ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡದೇ ಇದ್ದಾಗ ಯಡಿಯೂರಪ್ಪರಾದಿಯಾಗಿ ಬಿಜೆಪಿ ಪ್ರಮುಖರು ಆಡಿದ ಮಾತುಗಳನ್ನು ಮೆಲುಕು ಹಾಕಿ.
ಜನತಾದಳ, ಕಾಂಗ್ರೆಸ್ಗಳು `ಅಪ್ಪ-ಮಕ್ಕಳ, ಅವ್ವ-ಮಕ್ಕಳ' ಪಕ್ಷಗಳಾಗಿವೆ. ದೇಶದ ಹಿತದೃಷ್ಟಿಗಿಂತ ಕುಟುಂಬದ ಆಸ್ತಿಯನ್ನು ಕ್ರೋಢೀಕರಿಸುವುದು, ತಮ್ಮ ಮಕ್ಕಳನ್ನು ರಾಜಕೀಯದಲ್ಲಿ ಮೇಲೆ ತರುವುದು ಮಾತ್ರ ಇವೆರೆಡು ಪಕ್ಷಗಳು ಮಾಡಿಕೊಂಡು ಬಂದಿವೆ. ಅಪ್ಪ-ಮಕ್ಕಳ ಪಕ್ಷದ ಸರ್ವನಾಶವೇ ತಮ್ಮ ಗುರಿ. ಕುಟುಂಬ ರಾಜಕಾರಣ ಇಲ್ಲಿಗೆ ಕೊನೆಯಾಗಬೇಕು. ಇನ್ನೆಂದೂ ರಾಜ್ಯದಲ್ಲಿ ಕುಟುಂಬ ರಾಜಕಾರಣ ದೈನೇಸಿ ಸ್ಥಿತಿಗೆ ರಾಜ್ಯ ಬರಬಾರದು. ಅಂತಹ ಉತ್ತಮ ಆಡಳಿತ ನೀಡುತ್ತೇವೆ ಎಂದು ಯಡಿಯೂರಪ್ಪ ಘರ್ಜಿಸಿದ್ದರು.
ಕೇವಲ 8 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೇ ಇದ್ದಾಗ ಬೆಂಗಳೂರಿನ ಮಹಾತ್ಮಗಾಂಧಿ ಪ್ರತಿಮೆ ಬಳಿ ಯಡಿಯೂರಪ್ಪ, ಅನಂತಕುಮಾರ್ ಘರ್ಜಿಸಿದ ಪರಿ ಇದೇ ಮಾದರಿಯಲ್ಲಿತ್ತು. ಮಾರನೇ ದಿನದ ಎಲ್ಲಾ ಪತ್ರಿಕೆಗಳು, ಟಿ.ವಿ. ಮಾಧ್ಯಮಗಳು ಅದನ್ನೇ ಬಿತ್ತರಿಸಿದ್ದವು. ಅವೆಲ್ಲವನ್ನೂ ಯಡಿಯೂರಪ್ಪ ಇದೀಗ ಮರೆತು ಬಿಟ್ಟಿದ್ದಾರೆ.
`ತಾವೆಂದು ಕುಟುಂಬ ರಾಜಕಾರಣವನ್ನು ವಿರೋಧಿಸಿರಲಿಲ್ಲ, ಆ ಬಗ್ಗೆ ನಾನ್ಯಾವತ್ತು ಟೀಕೆ ಮಾಡಿಲ್ಲ' ಎಂದು ಯಡಿಯೂರಪ್ಪ ಹೇಳಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ ಕೂಡ, ಬಿಜೆಪಿ ಅದರ ವಿರುದ್ಧ ಎಂದೂ ಹೋರಾಟ ಮಾಡಿಲ್ಲ. ಅಪ್ಪ-ಮಗ ರಾಜಕೀಯದಲ್ಲಿ ಇರಬಾರದೆಂದೇನೋ ಕಾನೂನಿಲ್ಲ ಎಂದು ಘೋಷಿಸಿದ್ದಾರೆ.
ನೆಹರೂ ಕುಟುಂಬ ರಾಜಕಾರಣವನ್ನು ಆದಿಯಿಂದಲೂ ಬಿಜೆಪಿ ವಿರೋಧಿಸಿಕೊಂಡು ಬಂದಿದ್ದು ಸುಳ್ಳೇ? ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಮುಖಂಡ ಎಲ್.ಕೆ. ಆಡ್ವಾಣಿ ಪ್ರತಿಪಾದಿಸಿದ್ದು, ಹೋರಾಡಿ ಕೊಂಡು ಬಂದಿದ್ದು ಎಲ್ಲವೂ ಸುಳ್ಳೇ? ತುರ್ತು ಪರಿಸ್ಥಿತಿಯ ನಂತರ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ಸೇತರ ಮೊದಲ ಸರ್ಕಾರದಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗುವಾಗ ಇದೇ ಜನಸಂಘ ಯಾವ ಧ್ಯೇಯದ ಮೇಲೆ ಅವರಿಗೆ ಬೆಂಬಲ ನೀಡಿತ್ತು. ನೆಹರೂ ಕುಟುಂಬದ ಸರ್ವಾಧಿಕಾರವನ್ನು ಕೊನೆಗಾಣಿಸಬೇಕೆಂಬ ಆಶೆಯಲ್ಲಿಯೇ ತಾನೆ? ಚರಿತ್ರೆಯ ಅರಿವಿಲ್ಲದವರು, ಸ್ವಾರ್ಥಕ್ಕಾಗಿ ರಾಜಕೀಯವನ್ನು ಹಾಯಿದೋಣಿ ಮಾಡಿಕೊಂಡವರು ಮಾತ್ರ ಹೀಗೆಲ್ಲಾ ಮಾತನಾಡಲು ಸಾಧ್ಯ.
ರಾಮಮನೋಹರ್ ಲೋಹಿಯಾ, ಮಧು ಲಿಮೆಯೆ, ಜಾರ್ಜ್ ಫರ್ನಾಂಡೀಸ್, ವಿ.ಪಿ.ಸಿಂಗ್ರಂತಹ ಸಮಾಜವಾದಿ ಮುಖಂಡರು ಇದನ್ನೇ ಪ್ರತಿಪಾದಿಸುತ್ತಾ ಕಾಂಗ್ರೆಸ್ನ್ನು ಹೀನಾಮಾನ ಬಯ್ಯುತ್ತಾ ಹೋರಾಟ ನಡೆಸಿಕೊಂಡು ಬಂದರು. ಅದೆಲ್ಲಾ ಒತ್ತಟ್ಟಿಗಿರಲಿ. ಬಿಜೆಪಿ ಕೂಡ ಕಳೆದ 50-60 ವರ್ಷಗಳಲ್ಲಿ ಕುಟುಂಬ ರಾಜಕಾರಣ ವಿರೋಧಿಸುವುದನ್ನೇ ಪ್ರಧಾನ ಅಸ್ತ್ರವಾಗಿಸಿಕೊಂಡು ಚುನಾವಣೆಯಲ್ಲಿ ಹೆಚ್ಚೆಚ್ಚು ಸೀಟು ಗಳಿಸುತ್ತಾ ಹೋಯಿತು.
ನೆಹರು, ಇಂದಿರಾ, ರಾಜೀವ, ಸೋನಿಯಾ, ರಾಹುಲ್ ಹೀಗೆ ಕಾಂಗ್ರೆಸ್ ಒಂದು ಕುಟುಂಬದ ಸ್ವತ್ತಾಗಿದೆ ಎಂಬ ಕಾರಣಕ್ಕೆ ಜನ ಅದರ ವಿರುದ್ಧ ನಿಂತರು. ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಪರಿವರ್ತಿತವಾದ ಮೇಲೂ ಒಂದೇ ಕುಟುಂಬದ(ರಾಜಮನೆತನದಂತೆ) ರಾಜಕಾರಣವನ್ನು ತೊಲಗಿಸಲು ನೂರಾರು ನಾಯಕರು ಹಗಲು ರಾತ್ರಿಯೆನ್ನದೇ ದುಡಿದಿದ್ದಾರೆ. ಅದೆಲ್ಲದರ ಫಲಿತವಾಗಿಯೇ ಬಿಜೆಪಿ ಇಂದು ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಗಿದೆ. ಈಗ ಅದೆನ್ನೆಲ್ಲಾ ನಾವು ಮಾಡಿಯೇ ಇಲ್ಲವೆಂದು ಯಡಿಯೂರಪ್ಪನವರು ಹೇಳುತ್ತಾರೆಂದು ಜನ ಏನೆಂದು ಕೊಳ್ಳಬೇಕು.
ಹಾಗೆಯೇ ಯಡಿಯೂರಪ್ಪನವರು ದೇವರಾಣೆಗೂ ತನ್ನ ಮಗ ಚುನಾವಣೆಗೆ ನಿಲ್ಲುವುದಿಲ್ಲವೆಂದು ಘಂಟಾಘೋಷವಾಗಿ ಹೇಳಿದ್ದರು. ಕಡೆಗೆ ಶಿವಮೊಗ್ಗದ ಹಿರಿಯ ಬಿಜೆಪಿ ಮುಖಂಡರನ್ನು ಕಡೆಗಣಿಸಿ ತಮ್ಮ ಮಗ ಬಿ.ವೈ. ರಾಘವೇಂದ್ರನಿಗೆ ಲೋಕಸಭೆಗೆ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದ್ದಾರೆ.
ಹಾಗಂತ ಅವರ ಮಗ ರಾಜಕೀಯಕ್ಕೆ ಬರಬಾರದು ಎಂಬುದು ಇಲ್ಲಿನ ವಾದವಲ್ಲ. ರಾಜಕಾರಣ ಪ್ರತಿಯೊಬ್ಬರ ಹಕ್ಕು. ಭಾರತೀಯ ಪ್ರಜೆಯಾಗಿ ರಾಘವೇಂದ್ರ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯುವುದು ಸ್ವತಃ ಯಡಿಯೂರಪ್ಪನವರಿಗೆ ಸಾಧ್ಯವಿಲ್ಲ. ಆದರೆ ತಮ್ಮ ಮಗ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ದೇವರ ಮೇಲೆ ಆಣೆ ಮಾಡಬೇಕಾಗಿರಲಿಲ್ಲ. ಅದು ಅವನ ಹಕ್ಕು, ಸ್ಪರ್ಧಿಸುತ್ತಾನೆಂದು ಅವರು ನೇರವಾಗಿ ಹೇಳಬಿಡಬಹುದಿತ್ತು. ನಾಟಕವಾಡಲು ಹೋಗಿ, ನಾಟಕಕ್ಕಾಗಿ ಹೆಣೆದ ಬಲೆಗೆ ತಾವೇ ಸಿಕ್ಕಿಬಿದ್ದಿರುವ ಸ್ಥಿತಿ ಯಡಿಯೂರಪ್ಪನವರದು.
ಸೂಕ್ತವಲ್ಲ:
ಯಾವುದೇ ಪಕ್ಷವೂ ಕುಟುಂಬ ರಾಜಕಾರಣವನ್ನು ಬೆಂಬಲಿಸುವುದು ಸೂಕ್ತವಲ್ಲ. ದೇವೇಗೌಡರು, ಸೋನಿಯಾಗಾಂಧಿ ಮಾಡುತ್ತಾರೆಂದು ಬಿಜೆಪಿಯವರು ಮಾಡುವುದು ದಳ-ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಏನು ವ್ಯತ್ಯಾಸವುಳಿದಂತಾಯಿತು?
ರಾಜಕಾರಣಿಯ ಮಗನೇ ಇರಲಿ, ಯಾವಾತನೇ ಇರಲಿ. ಚುನಾವಣೆಗೆ ಸ್ಪರ್ಧಿಸಲು ರಾಜಕೀಯ ಅನುಭವ, ಜನರ ಒಡನಾಟ ಮುಖ್ಯ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವ ರಾಘವೇಂದ್ರನಿಗೆ ಯಡಿಯೂರಪ್ಪನ ಮಗ ಎಂಬ ಹೆಗ್ಗಳಿಕೆಯ ಹೊರತಾಗಿ ಯಾವುದೇ ರಾಜಕೀಯ ಅರ್ಹತೆಯಿಲ್ಲ. ಹಾಗಂದರೆ ಮುಖ್ಯಮಂತ್ರಿಯಾಗಲು ಕುಮಾರಸ್ವಾಮಿಗೆ ಏನಿತ್ತು ಎಂಬ ಮಾರುಪ್ರಶ್ನೆ ಕೇಳಬಹುದು? ಅದಕ್ಕೆ ಯಡಿಯೂರಪ್ಪನವರೇ ಉತ್ತರಿಸಬೇಕಾಗುತ್ತದೆ!
ಯಡಿಯೂರಪ್ಪ ಉಪಮುಖ್ಯಮಂತ್ರಿಯಾದ ನಂತರ ಪ್ರವರ್ಧಮಾನಕ್ಕೆ ಬಂದವರು ರಾಘವೇಂದ್ರ. ಅಲ್ಲಿಯವರೆಗೆ ಶಿಕಾರಿಪುರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು(ಯಡಿಯೂರಪ್ಪ ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ 30 ವರ್ಷ ರಾಜಕೀಯ ಜೀವನ ಅನುಭವಿಸಿದಾಗ) ಅವರ ಆಪ್ತ ಗುರುಮೂರ್ತಿ ಹಾಗೂ ಪದ್ಮನಾಭಭಟ್. ರಾಘವೇಂದ್ರ ಬೆಂಗಳೂರಿನಲ್ಲಿದ್ದಿದ್ದು ಬಿಟ್ಟರೆ ಶಿವಮೊಗ್ಗ ರಾಜಕಾರಣದ ಗಂಧಗಾಳಿ ಗೊತ್ತಿರಲಿಲ್ಲ.
ತಮ್ಮ ಮಗನನ್ನು ರಾಜಕಾರಣಕ್ಕೆ ತರಬೇಕೆಂದು ನಿಶ್ಚಯಿಸಿದ ಯಡಿಯೂರಪ್ಪ ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಶಿಕಾರಿಪುರ ಪುರಸಭೆ ಚುನಾವಣೆಗೆ ನಿಲ್ಲಿಸಿದರು. ಅಲ್ಲಿ ಗೆದ್ದ ರಾಘವೇಂದ್ರ ಕೆಲ ದಿನ ಅಧ್ಯಕ್ಷರೂ ಆದರು. ಅದರ ಜತೆಗೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯೂ ಆಗಿ ಕಾರ್ಯನಿರ್ವಹಿಸತೊಡಗಿದರು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾದ ನಂತರ, ಅಂದರೆ ಅಧಿಕಾರ ಅನುಭವಿಸತೊಡಗಿದ ಮೇಲೆ ರಾಘವೇಂದ್ರ ಮೇಲೇರುತ್ತಾ ಬಂದರು. ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಮೂಗು ತೂರಿಸಲಾರಂಭಿಸಿದ ರಾಘು, ನಂತರ ಅಧಿಕಾರಿಗಳ ವರ್ಗಾವಣೆಯಂತಹ ಕೆಲಸವನ್ನೂ ಮಾಡತೊಡಗಿದರು. ಇದು ರಾಘು ಚರಿತ್ರೆ.
ಆದರೆ ಶಿವಮೊಗ್ಗದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಯಡಿಯೂರಪ್ಪನವರ ಜತೆಗೆ ಡಿ.ಎಚ್. ಶಂಕರಮೂರ್ತಿ, ಕೆ.ಎಸ್. ಈಶ್ವರಪ್ಪ, ಆಯನೂರು ಮಂಜುನಾಥ್, ಆರಗ ಜ್ಞಾನೇಂದ್ರ, ಪಿ.ವಿ. ಕೃಷ್ಣಭಟ್, ರಾಮಚಂದ್ರ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಬಿಗಿಮುಷ್ಟಿಯಲ್ಲಿದ್ದ ಶಿವಮೊಗ್ಗ ಜಿಲ್ಲೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಯಡಿಯೂರಪ್ಪ, ಕ್ರಮೇಣವಾಗಿ ಬಂಗಾರಪ್ಪನವರನ್ನೇ ಬದಿಗೊತ್ತುವಷ್ಟು ಸಾಮರ್ಥ್ಯ ಬೆಳೆಸಿಕೊಂಡರು. ಅದಕ್ಕೆ ಬಂಗಾರಪ್ಪ ಕೂಡ ಕಾರಣರಾದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದ ಬಂಗಾರಪ್ಪ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಲು ಕಾರಣರಾದರು. ಸೊರಬ, ಭದ್ರಾವತಿ ಹೊರತಾಗಿ ಉಳಿದ 5 ಕಡೆ ಬಿಜೆಪಿ ಶಾಸಕರನ್ನು ಗೆಲ್ಲಿಸಲು ಬಂಗಾರಪ್ಪ ಕಾರಣರಾದರು. ನಂತರ ಬಂಗಾರಪ್ಪ ಬಿಜೆಪಿ ತೊರೆದು, ಸಮಾಜವಾದಿ ಪಕ್ಷದಿಂದ ಸಂಸದರಾಗಿ, ನಂತರ ಅಲ್ಲೂ ಬಿಟ್ಟು ಈಗ ಕಾಂಗ್ರೆಸಿಗೆ ಬಂದು ಸೇರಿದ್ದಾರೆ.
ಸೋಲಿಲ್ಲದ ಸರದಾರನೆಂಬ ಕೀರ್ತಿಗೆ ಪಾತ್ರರಾಗಿದ್ದ ಬಂಗಾರಪ್ಪರಿಗೆ ಸೋಲಿನ ರುಚಿ ತೋರಿಸಿದವರು ಬಿಜೆಪಿ ಮುಖಂಡ ಆಯನೂರು ಮಂಜುನಾಥ. ಒಮ್ಮೆ ಲೋಕಸಭೆಗೆ ಆರಿಸಿಹೋದ ಆಯನೂರು ಪಕ್ಷದ ಆಂತರಿಕ ಜಗಳದ ಕಾರಣದಿಂದ ಬಿಜೆಪಿ ತೊರೆದು ಕಾಂಗ್ರೆಸ್ಗೆ ಹೋದರು. ಬಂಗಾರಪ್ಪ ಬಿಜೆಪಿಯಿಂದ ಸ್ಪರ್ಧಿಸಿದಾಗ ಆಯನೂರು ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದರು. ಬಂಗಾರಪ್ಪ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಾಗಲೂ ಆಯನೂರು ಕಾಂಗ್ರೆಸ್ ಅಭ್ಯರ್ಥಿ. ಬಂಗಾರಪ್ಪರನ್ನು ಸೋಲಿಸಲು ಆಯನೂರ್ಗೆ ಆಗಲಿಲ್ಲವಾದರೂ ಸಮಬಲದ ಸ್ಪರ್ಧೆಯೊಡ್ಡಿದ್ದರು. ಬಂಗಾರಪ್ಪ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದಾಗ ಬಿಜೆಪಿಯಿಂದ ಭಾನುಪ್ರಕಾಶ್ ಸ್ಪರ್ಧಿಸಿದ್ದರು. ಅವರು ಕೂಡ ಸಮರ್ಥ ಸ್ಪರ್ಧೆಯೊಡ್ಡಿದ್ದರು.
ಹೀಗೆ ಇಬ್ಬರು ಗರಡಿಯಾಳುಗಳು ಬಿಜೆಪಿಯಲ್ಲಿದ್ದರೂ ತಮ್ಮ ಮಗನನ್ನೇ ಕಣಕ್ಕೆ ಇಳಿಸಲು ಯಡಿಯೂರಪ್ಪ ಮುಂದಾಗಿದ್ದು ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎಬ್ಬಿಸಿದೆ. ಆರಂಭದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತಾದರೂ ನಂತರ ಯಡಿಯೂರಪ್ಪ ಅದನ್ನು ಶಮನ ಮಾಡಿದ್ದಾರೆ. ಬೇರೆ ಜಿಲ್ಲೆಯಲ್ಲಿ ಗೆಲ್ಲುವ ಅಭ್ಯರ್ಥಿ ಇಲ್ಲದೇ ಇರುವುದರಿಂದ ಅನ್ಯ ಪಕ್ಷದಿಂದ ಕರೆತಂದು ಮಣೆ ಹಾಕುತ್ತಿದ್ದೇವೆ ಎಂದು ಬಿಜೆಪಿ ನೇತಾರರು ಹೇಳುತ್ತಿದ್ದಾರಾದರೂ ಶಿವಮೊಗ್ಗ ಜಿಲ್ಲೆಯಲ್ಲಿ ಇದ್ದವರನ್ನು ಬಿಟ್ಟು ತಮ್ಮ ಮಗನಿಗೆ ಮಣೆ ಹಾಕಿದ್ದು ಯಾಕೆ ಎಂಬ ಪ್ರಶ್ನೆಗೆ ಬಿಜೆಪಿಯಲ್ಲಿ ಸದ್ಯವಂತೂ ಉತ್ತರವಿಲ್ಲ.
ವಿಸ್ತರಣೆ:
ಕುಟುಂಬ ರಾಜಕಾರಣ ಯಡಿಯೂರಪ್ಪನವರ ಮನೆಯಲ್ಲಿ ಮಾತ್ರ ಬೇರು ಬಿಟ್ಟಿಲ್ಲ. ಬಿಜೆಪಿಗೆ ವ್ಯಾಧಿಯಂತೆ ಅಂಟಿಕೊಂಡಿದೆ. ಇಡೀ ಬಳ್ಳಾರಿ ಜಿಲ್ಲೆಯೇ ಕುಟುಂಬ ರಾಜಕಾರಣದ ಬಿರುಬಿಸಿಲಿನಿಂದ ಕಂಗೆಟ್ಟಿದ್ದರೆ ಇದೀ ಮತ್ತೊಬ್ಬರು ಅದಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಜನಾರ್ದನರೆಡ್ಡಿ, ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ ಹೀಗೆ ಒಂದೇ ಕುಟುಂಬದ ಮೂವರು ಶಾಸಕರು, ಮಂತ್ರಿಗಳು ಬಳ್ಳಾರಿಯಲ್ಲಿದ್ದಾರೆ. ಇವರ ಕುಟುಂಬದ ಸೋದರನಂತಿರುವ ಶ್ರೀರಾಮುಲು ಸಚಿವರಾಗಿದ್ದರೆ, ಅವರ ಅಳಿಯ ಸುರೇಶಬಾಬು ಶಾಸಕರಾಗಿದ್ದಾರೆ. ಇದೀಗ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಶ್ರೀರಾಮುಲು ಸೋದರಿ ಜೆ. ಶಾಂತ ಕಣಕ್ಕಿಳಿದಿದ್ದಾರೆ. ಅಲ್ಲಿಗೆ ಇಡೀ ಒಂದು ಜಿಲ್ಲೆ ರೆಡ್ಡಿಗಳ ಒಕ್ಕಲಿಗೆ ಸೇರಿದಂತಾಗುತ್ತದೆ.
ಹಾವೇರಿಯಲ್ಲಿ ಸಚಿವ ಸಿ.ಎಂ. ಉದಾಸಿ ಪುತ್ರ ಶಿವಕುಮಾರ ಉದಾಸಿ, ಚಿಕ್ಕೋಡಿಯಲ್ಲಿ ಸಚಿವ ಉಮೇಶ ಕತ್ತಿ ಸೋದರ ರಮೇಶ ಕತ್ತಿ ಸ್ಪರ್ಧಿಸುತ್ತಿದ್ದಾರೆ. ಕುಟುಂಬ ರಾಜಕಾರಣವನ್ನು ಪ್ರಬಲವಾಗಿ ವಿರೋಧಿಸುತ್ತಾ ಬಂದಿದ್ದ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಅದನ್ನೇ ಮಾಡುತ್ತಾ ಬಂದಿದ್ದು, ಒಂದು ಪ್ರಮುಖ ಅಸ್ತ್ರ ಗೊಟಕ್ ಎಂದಿದೆ.
ಸಂಪಂಗಿ ಪ್ರಕರಣ:
ಬಿಜೆಪಿಯ ಇನ್ನೊಂದು ಅಸ್ತ್ರ ಭ್ರಷ್ಟಾಚಾರ ವಿರೋಧ. ಚುನಾವಣೆ ವೇಳೆ ಬಿಜೆಪಿ ಸಿದ್ಧಪಡಿಸಿದ್ದ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ವಿರೋಧ ಹಾಗೂ ನಿರ್ಮೂಲನೆ ತಮ್ಮ ಪ್ರಮುಖ ಧ್ಯೇಯವೆಂದು ಘೋಷಿಸಲಾಗಿತ್ತು.
ಬಿಜೆಪಿ ಅಧಿಕಾರಕ್ಕೇರಿ ಕೇವಲ ಐದು ತಿಂಗಳು ಕಳೆಯುವಷ್ಟರಲ್ಲಿ ಬಿಜೆಪಿ ಶಾಸಕ ಸಂಪಂಗಿ, ಶಾಸಕರ ಭವನದಲ್ಲಿ 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದರು. ಇದು ದೇಶದ ಇತಿಹಾಸದಲ್ಲೇ ಪ್ರಪ್ರಥಮ ಎನ್ನುವಂತಹ ಪ್ರಕರಣ. ಇಲ್ಲಿಯವರೆಗೆ ಯಾವುದೇ ಶಾಸಕ, ಸಂಸದ ತಮ್ಮ ಭವನದಲ್ಲೆ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿರಲಿಲ್ಲ. ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಪ್ರಕರಣ, ಮತ ಹಾಕಲು ಹಣ ಪಡೆದ ಪ್ರಕರಣ ದೊಡ್ಡ ಸುದ್ದಿಯಾಗಿತ್ತಾದರೂ ಅದಕ್ಕೆ ಸಾಕ್ಷ್ಯವಿರಲಿಲ್ಲ. ಆದರೆ ಸಂವಿಧಾನಬದ್ಧವಾದ, ನ್ಯಾಯಮೂರ್ತಿಗಳ ನೇತೃತ್ವದ ಲೋಕಾಯುಕ್ತವೇ ಶಾಸಕರನ್ನು ಬಲೆಗೆ ಕೆಡವಿದೆ. ಅಲ್ಲಿಗೆ ಭ್ರಷ್ಟಾಚಾರ ವಿರೋಧಿಸುವುದಾಗಿ ಹೇಳುತ್ತಾ ಬಂದಿದ್ದ ಬಿಜೆಪಿಯ ಬಣ್ಣ ನಡುಬೀದಿಯಲ್ಲಿ ಹರಾಜಿಗೆ ಬಿತ್ತು.
ಸರ್ಕಾರ ರಚನೆಯಾದ ಕೇವಲ ಒಂಭತ್ತು ತಿಂಗಳಲ್ಲೇ ಸಚಿವರು ಮಾಡುತ್ತಿರುವ ದುಡ್ಡು ಸ್ವತಃ ಬಿಜೆಪಿ ಕಾರ್ಯಕರ್ತರನ್ನೇ ದಂಗು ಬಡಿಸಿದೆ. ಸಹಕಾರ ಇಲಾಖೆಯ ಭ್ರಷ್ಟಾಚಾರವನ್ನು ಮಹಾಲೇಖಪಾಲರ ವರದಿ ಬಯಲಿಗೆಳೆದಿದೆ.
ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಝಳಪಿಸುತ್ತಿದ್ದ ಅಸ್ತ್ರಗಳು ಈಗ ಮಕಾಡೆ ಮಲಗಿವೆ. ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರವನ್ನು ವಿರೋಧಿಸಲು ಅದನ್ನು ಕಾಂಗ್ರೆಸ್ ಮತ್ತು ಜೆಡಿ ಎಸ್‌ಗೆ ಆಪಾದಿಸಲು ಈಗ ಬಿಜೆಪಿಗೆ ಜಂಘಾಬಲವಿಲ್ಲ. ಈಗೇನಿದ್ದರೂ ಹಣ, ಆಮಿಷ, ಜಾತಿಯಷ್ಟೇ ಉಳಿದಿರುವುದು.
Wednesday, March 18, 2009
ಕನ್ನಡದ ಮೊದಲ ಕೇಳು ಕಾದಂಬರಿ `ಸಂಧ್ಯಾರಾಗ'
* ಎಂಪಿ-3 ರೂಪದಲ್ಲಿ ಕಾದಂಬರಿ ಲಭ್ಯ
* ಡಾಬಿ.ವಿ. ರಾಜಾರಾಂ ನಿರ್ದೇಶನ
ಓದು ಕಾದಂಬರಿ, ದೃಶ್ಯಕ್ಕೆ ಅಳವಡಿಸಲ್ಪಟ್ಟ ನೋಡು ಕಾದಂಬರಿ ಕೇಳಿದ್ದೀರಿ. ಆದರೆ ಇದು ಕೇಳುವ ಕಾದಂಬರಿ. ಕನ್ನಡದಲ್ಲಿ ಇಂತಹದೊಂದು ಮೊದಲ ಪ್ರಯೋಗ ಮಾಡಿದ್ದು ಅನಕೃ ಪ್ರತಿಷ್ಠಾನ.
ಕಾದಂಬರಿ ಸಾರ್ವಭೌಮರೆಂದೇ ಖ್ಯಾತರಾದ ಅ.ನ. ಕೃಷ್ಣರಾಯರ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲೊಂದಾದ `ಸಂಧ್ಯಾರಾಗ' ಕೇಳು ಕಾದಂಬರಿಯಾಗಿ ರೂಪಿತವಾಗಿದೆ. ಸಂಗೀತಕಾರನೊಬ್ಬನ ಏಳುಬೀಳು, ಸಂಕಷ್ಟ ಸಲ್ಲಾಪಗಳನ್ನೊಳಗೊಂಡ ಜೀವನ ದರ್ಶನ ಹೊಂದಿರುವ ಈ ಕಾದಂಬರಿ ಸಿನಿಮಾವಾಗಿ ಕೂಡ ಯಶಸ್ವಿಯಾಗಿತ್ತು.
ಅನಕೃ ಶತಮಾನೋತ್ಸವ ಸಂದರ್ಭದಲ್ಲಿ ಪ್ರತಿಷ್ಠಾನವು ಇಂತಹದೊಂದು ಸಾರ್ಥಕ ಪ್ರಯತ್ನಕ್ಕೆ ಕೈಹಾಕಿತು. ಮಾರುಕಟ್ಟೆಯಲ್ಲಿ ಅಲಭ್ಯವಾಗಿದ್ದ ಎಲ್ಲಾ ಕೃತಿಗಳನ್ನು ಮುದ್ರಿಸಿದ ಪ್ರತಿಷ್ಠಾನ, ಜನಪ್ರಿಯ ಕಾದಂಬರಿಯನ್ನು ಸಿ.ಡಿ. ರೂಪಕ್ಕೆ ಅಳವಡಿಸಲು ಮುಂದಾಯಿತು.
ಆಧುನಿಕ ಜಗತ್ತಿನಲ್ಲಿ ಎಲ್ಲರೂ ಕೇಳುವುದಕ್ಕೆ ಆದ್ಯತೆ ನೀಡುವಾಗ, ಕಾದಂಬರಿಯನ್ನು ಕೇಳಿಸುವ ಪ್ರಯತ್ನ ಇದಾಗಿತ್ತು.
ಹೇಗಿದೆ ಇದು?:
ಸುಮಾರು 2 ಗಂಟೆಗಳು ಕುಳಿತು ಆಲಿಸಬಹುದಾದ ಕಾದಂಬರಿ ಇದಾಗಿದೆ. ಕಾದಂಬರಿಯಲ್ಲಿ ಸುಮಾರು 20 ಪಾತ್ರಗಳಿದ್ದು ಅವೆಲ್ಲವೂ ಪಾತ್ರರೂಪದಲ್ಲಿ ಮಾತನಾಡುತ್ತವೆ. ಆಯಾ ಪಾತ್ರಕ್ಕೆ ತಕ್ಕನಾದ ಭಾವಾಭಿವ್ಯಕ್ತಿ ಇಲ್ಲಿದ್ದು, ಕೇಳುಗರಿಗೆ ಆಪ್ತವಾಗುವ ಶೈಲಿಯನ್ನು ಇದು ಹೊಂದಿದೆ.
ಕಾದಂಬರಿಯ ಏಕತಾನ ಓದಿಗೆ ಬದಲಾಗಿ, ಬಹುಪಾತ್ರಗಳು ತಾವಾಗೇ ಮಾತನಾಡುವ ವಿನ್ಯಾಸ ಇಲ್ಲಿ ನಿರೂಪಿತವಾಗಿದೆ. ಆಯಾ ಪಾತ್ರಗಳಿಗೆ ವಿವಿಧ ಕಲಾವಿದರು, ಸಾಹಿತಿಗಳು, ನಿರೂಪಕರು ಕಂಠದಾನ ಮಾಡಿದ್ದಾರೆ. ಕಾದಂಬರಿಯೊಳಗೆ ಮೈಗೂಡಿರುವ ನಾಟಕೀಯತೆ ಇಲ್ಲಿ ವಾಸ್ತವವಾಗಿದ್ದು, ಓದುವ `ಕಷ್ಟ'ವನ್ನು ತಪ್ಪಿಸುತ್ತದೆ.
ಕೇಳು ಕಾದಂಬರಿಯ ಇನ್ನೊಂದು ವಿಶಿಷ್ಟತೆಯೆಂದರೆ ಸಂಧ್ಯಾರಾಗ ಕಾದಂಬರಿಯಲ್ಲಿ ಲಿಖಿತ ರೂಪದಲ್ಲಿ ಹಾಡುಗಳು ಇಲ್ಲಿ ಗೇಯರೂಪ ಪಡೆದಿವೆ. ಹೆಸರಾಂತ ಶಾಸ್ತ್ರೀಯ ಕಲಾವಿದರು ತಮ್ಮ ಸುಮಧುರ ಕಂಠದ ಮೂಲಕ ಇಲ್ಲಿನ ಹಾಡುಗಳಿಗೆ ಗಾಯನ ರೂಪ ನೀಡಿದ್ದಾರೆ. ಹೀಗಾಗಿ ಕೇಳು ಕಾದಂಬರಿಗೆ ಏಕಕಾಲಕ್ಕೆ ನಾಟಕೀಯ ಹಾಗೂ ಸಂಗೀತಾತ್ಮಕ ಗುಣವೂ ಬಂದೊದಗಿದೆ.
ಅನಕೃ ಜೀವನ ಚರಿತ್ರೆಯನ್ನು ಬರೆದ ಸಾಹಿತಿ ಬಿ.ಎಸ್. ಕೇಶವರಾವ್, ಅಪರ್ಣಾ, ಪ್ರದೀಪ ಕುಮಾರ್ ಸೇರಿ ಸುಮಾರು 20 ಮಂದಿ ಕಂಠದಾನ ಮಾಡಿದ್ದಾರೆ. ಸದ್ಯ ನಾಟಕ ಅಕಾಡೆಮಿ ಅಧ್ಯಕ್ಷರಾಗಿರುವ, ರಂಗಕರ್ಮಿ ಡಾಬಿ.ವಿ. ರಾಜಾರಾಂ, ಕಂಠದಾನ ಮಾಡುವ ಜತೆಗೆ ಇದನ್ನು ನಿರ್ದೇಶಿಸಿದ್ದಾರೆ.
ಎಂಪಿ 3 ರೂಪದಲ್ಲಿ ಈ ಕೇಳು ಕಾದಂಬರಿ ಮಾರಾಟಕ್ಕೆ ಲಭ್ಯವಿದೆ. ಜೆ.ಪಿ. ನಗರದ ರಂಗಶಂಕರದಲ್ಲಿರುವ ಪುಸ್ತಕದಂಗಡಿ ಹಾಗೂ ಅನಕೃ ಪ್ರತಿಷ್ಠಾನ, ನಂ.57, ಐಟಿಐ ಲೇ ಔಟ್, ವಿದ್ಯಾಪೀಠ, ಬನಶಂಕರಿ 3 ನೇ ಹಂತ, ಬೆಂಗಳೂರು-85 ಇಲ್ಲಿ ಸಂಪರ್ಕಿಸಬಹುದು. ಮಾಹಿತಿಗೆ ದೂ:080-26692694ಗೆ ಕರೆ ಮಾಡಬಹುದು.
Tuesday, March 3, 2009
ಸಂಸ್ಕೃತಿ ವಿರೂಪ
ಒಂದು ಜನಾಂಗ, ಸಮುದಾಯ ಅಥವಾ ಒಟ್ಟಾಗಿ ವಾಸಿಸುವ ಒಂದು ಗುಂಪಿನ ಆಚರಣೆ, ಭಾಷೆ, ನಡಾವಳಿ, ಊಟೋಪಚಾರ, ವಿವಿಧ ವರ್ತನೆಗಳ ಬಗ್ಗೆ ಆ ಸಮುದಾಯ ಕಟ್ಟಿಕೊಂಡು ಬಂದ ಭಾವನಾತ್ಮಕ ಅಥವಾ ವೈಚಾರಿಕ ನಂಬಿಕೆ ಹಾಗೂ ರೂಢಿಗತ ಪದ್ಧತಿಗಳು ಹೀಗೆ ಎಲ್ಲವನ್ನೂ ಸೇರಿಸಿ ಸಂಸ್ಕೃತಿ ಎನ್ನಬಹುದು. ಆದರೆ ಬಿಜೆಪಿ ಹಾಗೂ ಅದರ ಬೆನ್ನೆಲುಬಾಗಿರುವ ಸಂಘಪರಿವಾರಿಗಳು ಪ್ರತಿಪಾದಿಸುವ `ಸಂಸ್ಕೃತಿ'ಯ ನಿರ್ವಚನವೇ ಬೇರೆ ರೀತಿಯದ್ದು. ಅವರು ಸಂಸ್ಕೃತಿಗೆ ಫೋಟೋ ಫ್ರೇಮ್ ಹಾಕಿಸಿ ಇಟ್ಟಿರುತ್ತಾರೆ. ಒಳಗಿನ ಫೋಟೋ ಗೆದ್ದಲು ಹಿಡಿದು ಕಾಣದಂತಾಗಿದ್ದರೂ, ಹೊರಗಡೆ ಎಲ್ಲರೂ ಆಸ್ವಾದಿಸಬಲ್ಲ ಸೌಂದರ್ಯ ಹೊಂದಿರುವ ಸ್ಫುರದ್ರೂಪವಿದ್ದರೂ ಅವರಿಗದು ಸಂಸ್ಕೃತಿ ಎಂದು ಭಾಸವಾಗುವುದೇ ಇಲ್ಲ. ಗೆದ್ದಲು ಹಿಡಿದ ಫೋಟೋವೇ ಅವರಿಗೆ ಸಂಸ್ಕೃತಿಯ ಸ್ವರೂಪ/ವಿರೂಪವಾಗುತ್ತದೆ.
ಈ ದೇಶದಲ್ಲಿ ಸಸ್ಯಾಹಾರಿಗಳು ಹಾಗೂ ಮಾಂಸಹಾರಿಗಳು ಇಬ್ಬರೂ ಇದ್ದಾರೆ. ಲೆಕ್ಕಾಚಾರ ಪ್ರಕಾರ ಹೇಳಬೇಕೆಂದರೆ `ಘೋಷಿತ' ಸಸ್ಯಾಹಾರಿಗಳ ಸಂಖ್ಯೆ ಅಮ್ಮಮ್ಮಾ ಎಂದರೂ ಈ ದೇಶದ ಜನಸಂಖ್ಯೆಯ ಶೇ.15 ರಷ್ಟು ಇರಬಹುದು. ಅಂದರೆ ನೂರಾಹತ್ತು ಕೋಟಿಯಲ್ಲಿ ಕೇವಲ 15 ಕೋಟಿ ಜನರು ಮಾತ್ರ ಸಸ್ಯಾಹಾರಿಗಳು. ಹಾಗಿದ್ದೂ ಸಸ್ಯಾಹಾರವೇ ಶ್ರೇಷ್ಠ, ಮಾಂಸಹಾರ ಕನಿಷ್ಠವೆಂಬ ತಥಾಕಥಿತ ಆದರೆ ಉದ್ದೇಶಿತ ಮೌಲ್ಯವೊಂದನ್ನು ಬಿತ್ತಿಬೆಳೆಸಲಾಗುತ್ತಿದೆ. ಅದನ್ನೇ ಸಂಸ್ಕೃತಿಯ ಲಕ್ಷಣವೆಂದು ಪರಿಭಾವಿಸಲಾಗುತ್ತಿದೆ. ದೇವರಿಗೆ ಕೋಣ, ಕುರಿ ಬಲಿ ಕೊಡುವುದು ಅಪರಾಧವೆಂದು ಭಾವಿಸಲಾಗುತ್ತಿದೆ. ಹಿಂಸೆ ಸಮರ್ಥನೆ/ವಿರೋಧ ಒತ್ತಟ್ಟಿಗಿರಲಿ. ಆದರೆ ಸಾವಿರಾರು ವರ್ಷಗಳ ಆಹಾರಪದ್ಧತಿಯೊಂದನ್ನೇ ನಿರಾಕರಿಸುವ ವೈದಿಕ ಶಾಹಿ ಹುನ್ನಾರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು ಸಂಸ್ಕೃತಿಯ ಹೆಸರಿನಲ್ಲೇ ಎಂಬುದನ್ನು ಗಮನಿಸಬೇಕು.
ರಾಮ ಮಾತ್ರ ಇರಬೇಕು ಬಾಬರ್ ಸ್ಥಾಪಿಸಿದ ಮಸೀದಿ ಇರಬಾರದೆಂಬ ಅಯೋಧ್ಯೆ ದುರ್ಘಟನೆ, ಗುಜ್ಜಾರ್‌ನಲ್ಲಿ ಸತ್ತ ದನದ ಮಾಂಸತಿಂದರೆಂದಬ 9 ಜನ ದಲಿತರ ಚರ್ಮ ಸುಲಿದು ಸಾಯಿಸಿದ ಬರ್ಬರ ಕೃತ್ಯ, ಒರಿಸ್ಸಾದಲ್ಲಿ ಏನೂ ಅರಿಯದ 2 ಮುಗ್ದ ಕಂದಮ್ಮಗಳ ಜತೆ ಪಾದ್ರಿ ಗ್ರಹಾಂಸ್ಟೈನ್ ಜೀವಂತ ದಹನ, ಗುಜರಾತ್‌ನಲ್ಲಿ ಮೋದಿ ನಡೆಸಿದ ಜನಾಂಗೀಯ ಹತ್ಯೆ, ಕಂಬಾಲಪಲ್ಲಿಯಲ್ಲಿ 7 ಜನ ದಲಿತರನ್ನು ಜೀವಸಹಿತ ಸುಟ್ಟಿದ್ದು, ಕರ್ನಾಟಕದಲ್ಲಿ ಕ್ರೈಸ್ತ ಚರ್ಚುಗಳ ಮೇಲೆ ದಾಳಿ, ದೇಶದ ಅನುಪಮ ಸೌಹಾರ್ದ ಕೇಂದ್ರ ಬಾಬಾಬುಡನ್‌ಗಿರಿಯಲ್ಲಿ ವೈದಿಕ ವಿರೋಧಿ ದತ್ತಾತ್ರೇಯನನ್ನು ವಶಪಡಿಸಿಕೊಳ್ಳಲು ನಡೆಸಿರುವ ಹುನ್ನಾರ. . . ಹೀಗೆ ಪಟ್ಟಿ ಮಾಡುತ್ತಾ ಹೋದರೆ `ಅಸಂಸ್ಕೃತಿ'ಯೊಂದನ್ನು ಸಂಸ್ಕೃತಿಯೆಂದು ಪ್ರತಿಪಾದಿಸಿ, ಅದನ್ನೇ ಹೇರುವ ಧಾರ್ಷ್ಟ್ಯವನ್ನು ಪರಿವಾರ ಮಾಡುತ್ತಾ ಬಂದಿದೆ.
ಇಂಡಿಯಾವು ಏಳೆಂಟು ಧರ್ಮಗಳ, ಧರ್ಮಗಳ ಕತ್ತರಿಗೇ ನಿಲುಕದ ಸುಮಾರು 5 ಸಾವಿರದಷ್ಟು ಜಾತಿಗಳ, ಧರ್ಮ/ಜಾತಿಗಳ ಕಟ್ಟುಪಾಡಿಗೆ ಇನ್ನೂ ಒಳಗಾಗದ ನೂರಾರು ಬುಡುಕಟ್ಟುಗಳ ಸಂಸ್ಕೃತಿಯನ್ನು ಒಳಗೊಂಡ ದೇಶ. ತನ್ನದೇ ಆದ ಸಂಸ್ಕೃತಿ, ಭಾಷೆ, ಜೀವನ, ಆಹಾರಪದ್ಧತಿಯನ್ನು ಈ ಎಲ್ಲಾ ಸಮುದಾಯಗಳು ಅನೂಚಾನವಾಗಿ ಆಚರಿಸಿಕೊಂಡು ಬರುತ್ತಿವೆ. ಪರಸ್ಪರರ ಮಧ್ಯೆ ಕೊಡುಕೊಳ್ಳುವಿಕೆ ನಡೆದರೂ ತನ್ನದೇ ಆದ ಅಸ್ಮಿತೆಯನ್ನು ಇನ್ನೂ ಉಳಿಸಿಕೊಂಡಿರುವುದು ಅವುಗಳ ವೈಶಿಷ್ಟ್ಯ. ಕ್ರೈಸ್ತ ಹಾಗೂ ಮುಸ್ಲಿಮ್ ಮಹಿಳೆಯರು ತಾಳಿ, ಕಾಲುಂಗುರ, ಹೂವು ಮುಡಿಯುವುದು ಇಂಡಿಯಾದಲ್ಲಲ್ಲದೇ ಬೇರೆಲ್ಲೂ ಸಿಗದು. ಬ್ರಾಹ್ಮಣರ ಮನೆಗಳಲ್ಲಿ ಎಲೆ ಅಡಿಕೆ ತಟ್ಟೆಗೆ `ತಬಕು' ಎನ್ನುತ್ತಾರೆ. ಈ ಪದ ಮೂಲತಃ ಉರ್ದುವಿನದಾಗಿದ್ದು, ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯಲ್ಲಿ ಹೇಗೆ ಬಳಕೆಗೆ ಬಂದಿತೆಂಬುದು ಇನ್ನೂ ಶೋಧನೆಯಾಗಬೇಕಾದ ಸಂಗತಿ.
ಕನ್ನಡ ಜಾತಿ:
ಮೂಡಿಗೆರೆ ತಾಲೂಕಿನ ಎಸ್ಟೇಟ್ ಒಂದರಲ್ಲಿ ಅಧ್ಯಯನ ನಡೆಸಲು ಹೋದಾಗ 1/2 ನೇ ತರಗತಿ ಓದುವ ವಿದ್ಯಾರ್ಥಿನಿಗೆ ನೀನು ಯಾವ ಜಾತಿ ಎಂದು ಕುತೂಹಲಕ್ಕೆ ಕೇಳಿದೆ. ಆಗ ಆಕೆ ಹೇಳಿದ್ದು ನಾನು `ಕನ್ನಡ ಜಾತಿ' ಅಂತ. ಇದ್ಯಾವುದಪ್ಪ ಕನ್ನಡ ಜಾತಿ ಎಂದು ಪ್ರಶ್ನಿಸಿದಾಗ ಆಕೆ ನೀಡಿದ ಉತ್ತರ ವಿಶೇಷವಾಗಿತ್ತು. `ತುಳು, ತೆಲುಗು, ತಮಿಳು, ಕೊಂಕಣಿ, ಸಾಬರು ಹೀಗೆ ಬೇರೆ ಬೇರೆ ಜಾತಿಗಳವರು ಇದ್ದಾರೆ. ನಾವು ಸ್ವಲ್ಪ ಜನ ಮಾತ್ರ ಕನ್ನಡ ಜಾತಿಯವರು ಇದ್ದೇವೆ' ಎಂದು ವಯೋಸಹಜವಾಗಿ ಆಕೆ ಪೆದ್ದುಪೆದ್ದಾಗಿ ಹೇಳಿದಳು.
ಕನ್ನಡ ಜಾತಿ ಎಂಬ ಪದ ಎಷ್ಟು ಚೆನ್ನಾಗಿದೆಯಲ್ಲಾ ಎಂದು ಆಗ ಅನಿಸಿತ್ತು.
ಇಷ್ಟೆಲ್ಲಾ ವೈವಿಧ್ಯತೆ ಇರುವ ಇಂಡಿಯಾದಲ್ಲಿ ಏಕ ಸಂಸ್ಕೃತಿಯನ್ನು ಹೇರುವ ಪಟ್ಟಭದ್ರ ಯತ್ನ ನಿರಂತರವಾಗಿ ನಡೆಯುತ್ತಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಮೇಲೆ ನಡೆಯುತ್ತಿರುವ ಅವಘಡಗಳು ಇದನ್ನು ಪುಷ್ಟೀಕರಿಸುತ್ತವೆ. ಚರ್ಚ್ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಪ್ರತಿಭಟನೆಗಳು ಮೊದಲಾದವು. ಕ್ರೈಸ್ತರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಬಂದ್ ಕರೆಗೆ ಸ್ಪಂದಿಸಿ ಶಾಲೆಗೆ ರಜೆ ನೀಡಿದವು. ಆಗಷ್ಟೇ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಲಾ ಮಾನ್ಯತೆಯನ್ನು ರದ್ದು ಪಡಿಸುವುದಾಗಿ ಗುಟುರು ಹಾಕಿದರು. ಶಾಲೆಗಳಿಗೆ ನೋಟೀಸ್ ಜಾರಿ ಮಾಡಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಹಕ್ಕು ಸಾಂವಿಧಾನಿಕವಾಗಿ ಬಂದಿದ್ದು, ಅದನ್ನು ಪ್ರಶ್ನಿಸುವ ಮೂಲಕ ತಮ್ಮ ಸಿದ್ಧಾಂತ ಒಪ್ಪದ ಜನರ ಮೇಲೆ ಕಾನೂನುನ್ನು ಹೇರಲು ಕಾಗೇರಿ ಮುಂದಾದರು. ಅದೇ ಸಂಘಪರಿವಾರದ ಸಂಘಟನೆಗಳು ಅಥವಾ ಉನ್ನತ ಶಿಕ್ಷಣ ಇಲಾಖೆ ಭಯೋತ್ಪಾದನೆ ವಿರೋಧದ ಹೆಸರಿನಲ್ಲಿ ಶಾಲೆ ರಜೆ ಕೊಡಿಸಿದಾಗ ಈ ಪ್ರಶ್ನೆ ಎದ್ದೇಳಲೇ ಇಲ್ಲ.
ಕಾಗೇರಿಗೆ ನಿಜವಾಗಿಯೂ ಕಾಳಜಿಯಿದ್ದರೆ ಶಾಲಾ ಬಂದ್‌ಗೆ ಬೆಂಬಲ ಸೂಚಿಸುವ ಎಲ್ಲಾ ಸಂಸ್ಥೆಗಳ ವಿರುದ್ಧವೂ ಈ ನೋಟೀಸ್ ಜಾರಿ ಮಾಡಬಹುದಿತ್ತು. ಮಂಗಳೂರು-ಉಡುಪಿಯಲ್ಲಿ ವಾರಕ್ಕೊಮ್ಮೆ ಶಾಲಾ ಬಂದ್ ನಡೆಸುವುದು ಸಾಮಾನ್ಯವಾಗಿ ಹೋಗಿದ್ದು, ಆಗೆಲ್ಲಾ ಕಾಗೇರಿ ಮಾತನಾಡುವುದಿಲ್ಲ.
ಇದೇ ಮಾದರಿಯಲ್ಲಿ ಮುಜರಾಯಿ ಇಲಾಖೆ ಕೃಷ್ಣಯ್ಯ ಶೆಟ್ಟಿ ವರ್ತನೆಯೂ ಇದೆ. ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಲಾಡು ಹಂಚುವುದು, ಗಂಗಾಜಲ ಹಂಚುವುದು ಏನನ್ನು ಸೂಚಿಸುತ್ತದೆ. ಹಾಗಾದರೆ ಮಾರಿಹಬ್ಬದಲ್ಲಿ ಕುರಿ ಹಂಚುವುದು, ಹೆಂಡ ಹಂಚುವುದು, ಈದ್ ಮಿಲಾದ್, ಬಕ್ರೀದ್‌ನಲ್ಲಿ ಬಿರ್ಯಾನಿ ವಿತರಿಸಲು ಅವರು ಮುಂದಾಗುತ್ತಾರೆಯೇ? ಸಂವಿಧಾನ ರೀತ್ಯ ಜಾತ್ಯತೀತ, ಸಮಾನತೆ ಪ್ರತಿಪಾದಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರು ಒಂದು ಜನಾಂಗ ಸಂಪ್ರದಾಯವನ್ನು ಸರ್ಕಾರ/ ಸಾರ್ವಜನಿಕರ ದುಡ್ಡಲ್ಲಿ ಜಾರಿಗೊಳಿಸುವುದು ಸಂಸ್ಕೃತಿಯೊಂದನ್ನು ಹೇರುವ ಪದ್ಧತಿಯಲ್ಲವೇ?
ಯಡಿಯೂರಪ್ಪನವರು ಮಂಡಿಸಿದ ಬಜೆಟ್‌ನಲ್ಲಿ ಕೇಳಿದ/ ಕೇಳದ ಮಠಗಳಿಗೆಲ್ಲಾ ಅನುದಾನವನ್ನು ಹರಿಯಿಸಿದ್ದಾರೆ. ಮಠಗಳು ಕೋಟಿಗಟ್ಟಲೆ ಆಸ್ತಿ ಹೊಂದಿ, ಭಕ್ತರ ಧಾರಾಳ ನೆರವಿನಿಂದ ನಡೆಯುತ್ತಿರುವ ಸಂಸ್ಥೆಗಳು. ಅವರಿಗೆ ಸರ್ಕಾರ ಹಣ ಕೊಡಬೇಕಿಲ್ಲ. ತಮಗೆ ಬೇಕಾದ ಹಣ ಸಂಪಾದಿಸುವ ಶಕ್ತಿ ಅವಕ್ಕಿದೆ. ಹಾಗೆ ಕೊಡಲು ಸರ್ಕಾರದ ಅನುದಾನ ಯಡಿಯೂರಪ್ಪನವರ ಸ್ವಂತ ಆಸ್ತಿಯೂ ಅಲ್ಲ. ನಮ್ಮೆಲ್ಲರ ತೆರಿಗೆ ಹಣದಿಂದ ಕ್ರೋಢೀಕರಣವಾದ ಹಣವದು. ಜಾತಿವಾರು ಮಠಗಳಿಗೆ ಹಣವನ್ನು ನೀಡುತ್ತಾ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿರುವುದು ಸಂವಿಧಾನ ವಿರೋಧಿ. ಪ್ರಜಾಪ್ರಭುತ್ವ ವಿರೋಧಿ. ಬಡವರಿಗೆ, ಕೂಲಿಕಾರ್ಮಿಕರಿಗೆ, ಕೃಷಿಕರಿಗೆ, ಮಹಿಳೆಯರಿಗೆ ನೀಡಬೇಕಾದ ಪಾಲಿನಲ್ಲಿ ಮಠವನ್ನು ಸಾಕುತ್ತಿರುವುದು ಸರ್ವಥಾ ಖಂಡನೀಯ.
ಸಚಿವರೆಲ್ಲರ ದುಂಡಾ ಮಾತುಗಾರಿಕೆ ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದೆ. ಬೆಂಗಳೂರಿನಲ್ಲಿ ನ್ಯಾಷನಲ್ ಗ್ಯಾಲರಿ ಫಾರ್ ಮಾಡ್ರನ್ ಆರ್ಟ್ಸ್ ಉದ್ಘಾಟನೆ ಸಂದರ್ಭದಲ್ಲಿ ವೈದ್ಯ ಶಿಕ್ಷಣ ಸಚಿವ ರಾಮಚಂದ್ರಗೌಡರ ವರ್ತನೆಯಂತೂ ಸಂಸ್ಕೃತಿ ವಿರೂಪವೇ ಆಗಿದೆ.
ಆಧುನಿಕ ಕಲೆ ಹೆಸರಿನಲ್ಲಿ ನಮ್ಮ ಸಂಪ್ರದಾಯ, ಪ್ರಾಚೀನ ಪರಂಪರೆಗೆ ಅವಮಾನ ಮಾಡಲಾಗುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಸಂಸ್ಕೃತಿ/ ಕಲೆಯನ್ನು ವಿರೂಪಗೊಳಿಸುತ್ತಿದ್ದಾರೆಂದು ಸಚಿವರು ಹೇಳಿದರು. ಕಲೆಯ ಬಗ್ಗೆ ಏನೂ ಗೊತ್ತಿಲ್ಲ, ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಕಲಾವಿದರು ಆಕ್ಷೇಪಿಸಿದರು. ಗೌರವಾನ್ವಿತ ಸ್ಥಾನದಲ್ಲಿರುವ ಸಚಿವ ರಾಮಚಂದ್ರಗೌಡ ಇದನ್ನು ನಿರ್ಲಕ್ಷಿಸುವ ಬದಲು, ಐ ಆ್ಯಮ್ ಗೌರ್ನಮೆಂಟ್ ಸ್ಪೀಕಿಂಗ್, ಫುಲ್ ಹಿಮ್ ಔಟ್ ಎಂದು ಆದೇಶಿಸಿದರು. ಸಿಕ್ಕಿದ್ದೇ ಅವಕಾಶವೆಂದು ಪೊಲೀಸರು ಕಲಾವಿದರನ್ನು ಹೊರಗೆ ದಬ್ಬಿದರು. ಹಾಗಂತ ಅದೇನು ರಾಜ್ಯ ಸರ್ಕಾರದ ಕಾರ್ಯಕ್ರಮವಲ್ಲ, ಕೇಂದ್ರ ಸರ್ಕಾರದ ಕಾರ್ಯಕ್ರಮ, ಕೇಂದ್ರ ಸಚಿವರು ಉಪಸ್ಥಿತರಿದ್ದರು. ತಾನೇ ಸರ್ಕಾರ ಎನ್ನುವ ಅಧಿಕಾರವನ್ನು ಗೌಡರಿಗೆ ಕೊಟ್ಟಿದ್ದು ಯಾರು? ಹಾಗಂತ ಅವರೇನು ಜನರಿಂದ ಚುನಾಯಿತರಾದ ಶಾಸಕರೂ ಅಲ್ಲ. ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿ. ಅದಕ್ಕೆ ಪಶ್ಚಾತ್ತಾಪ ಪಡುವ ಬದಲಿಗೆ ಸಚಿವರು ಅದನ್ನು ಸಮರ್ಥಿಸಿಕೊಂಡಿದ್ದಾರಲ್ಲದೇ, ತಾನೂ ಮಾಡ್ರನ್ ಆರ್ಟಿಸ್ಟ್, ಕಲಾತ್ಮಕ ಚಿತ್ರವೊಂದನ್ನು ತೆಗೆದಿದ್ದು, 5 ಪ್ರಶಸ್ತಿಗಳು ಬಂದಿವೆ ಎಂದು ಹೇಳಿಕೊಂಡಿದ್ದಾರೆ. ಗೌಡರ ವರ್ತನೆ ಸಂಘಪರಿವಾರದ ದಬ್ಬಾಳಿಕೆ, ಹೇರುವಿಕೆಯ ದ್ಯೋತಕವಾಗಿದೆ.
ಗೌಡರು ಮಾತನಾಡಿರುವುದಕ್ಕೂ ಮಂಗಳೂರಿನಲ್ಲಿ ಪಬ್ ಮೇಲೆ ದಾಳಿ ನಡೆಸಿ, ಯುವತಿಯರ ಮೇಲೆ ದೌರ್ಜನ್ಯ ನಡೆಸಿದ ಶ್ರೀರಾಮಸೇನೆಯ ವರ್ತನೆಗೂ ಯಾವುದೇ ವ್ಯತ್ಯಾಸವಿಲ್ಲ. ಕಲೆ, ಸಂಸ್ಕೃತಿಯನ್ನು ಇವರು ನೋಡುವ ಪರಿಯೇ ಇಂತದ್ದು. ಪಬ್‌ಗೆ ಹೋಗಬಾರದು, ಪ್ರೇಮಿಗಳ ದಿನಾಚರಣೆ ಮಾಡಬಾರದು, ಸ್ಕರ್ಟ್, ಚೂಡಿದಾರ್ ಹಾಕಬಾರದು ಎಂಬ ಆದೇಶ ಹೊರಡಿಸುವ ಪ್ರಮೋದ ಮುತಾಲಿಕ್‌ನಂತಹ ಮೂರ್ಖನಿಗೂ, ಸಚಿವರ ರಾಮಚಂದ್ರಗೌಡರಿಗೆ ಏನಾದರೂ ವ್ಯತ್ಯಾಸವಿದೆ ಎಂದು ನಾವು ಅಂದುಕೊಂಡರೇ ನಾವೇ ಮೂರ್ಖರು.
ಇದರ ಜತೆಗೆ ಸಾರಿಗೆ ಸಚಿವ ಆರ್. ಅಶೋಕ್ ಶಿವಮೊಗ್ಗದಲ್ಲಿ ಮಾತನಾಡುತ್ತಾ ಸರ್ಕಾರಿ ಬಸ್‌ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳದ ಚಾಲಕ/ ನಿರ್ವಾಹಕರಿಗೆ ಒದೆಯಿರಿ ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಹಾಗೆ ಹೇಳಿಲ್ಲವೆಂದು ಸ್ಪಷ್ಟನೆ ಕೂಡ ನೀಡಿದ್ದಾರೆ. ಮೊದಲೊಂದು ಹೇಳಿ ಆಮೇಲೆ ಮಾಧ್ಯಮದವರು ತಪ್ಪು ಮಾಡಿದ್ದಾರೆಂದು ಜಾರಿ ಕೊಳ್ಳುವುದು ರೂಢಿಯಾಗಿ ಬಿಟ್ಟಿದೆ. ಸಚಿವರೊಬ್ಬರೇ ಈ ರೀತಿ ಕರೆ ನೀಡಿದರೆ ಇನ್ನು ಸಾರ್ವಜನಿಕರು ಏನು ಮಾಡಿಯಾರು? ದುಡಿಮೆಯಲ್ಲೇ ಹೈರಾಣಾಗಿ ಹೋಗಿರುವ ಚಾಲಕರು/ ನಿರ್ವಾಹಕರನ್ನು ಕಾಪಾಡುವುದು ಯಾರು?
ಇಷ್ಟು ಸಾಲದೆಂಬಂತೆ ವಕ್ಫ್ ಸಚಿವ ಮುಮ್ತಾಜ್ ಆಲಿಖಾನ್, ಸಚಿವ ಶ್ರೀರಾಮುಲು ಅವರನ್ನು ಪ್ರವಾದಿ ಎಂದು ಕರೆದಿದ್ದಾರೆ. ಪ್ರವಾದಿಗೂ, ಗಣಿ ಹಣದ ಅಹಂಕಾರದಿಂದ ಮೆರೆಯುತ್ತಿರುವ ರಾಮುಲುಗೂ ಎಲ್ಲಿಯ ಹೋಲಿಕೆ.
ಯಡಿಯೂರಪ್ಪನವರ ಸಚಿವ ಸಂಪುಟದ ಒಬ್ಬೊಬ್ಬರದೂ ಒಂದೊಂದು ಯಡವಟ್ಟು. ಅಲ್ಪನಿಗೆ ಅಧಿಕಾರ ಸಿಕ್ಕಿದರೆ ಅರ್ಧ ರಾತ್ರಿಲಿ ಕೊಡೆ ಹಿಡಿಸಿಕೊಂಡಿದ್ದನಂತೆ ಎಂಬಂತಾಗಿದೆ. ಆಡಿದ್ದೇ ಮಾತು, ನಡೆದದ್ದೇ ದಾರಿ ಎಂಬಂತಾಗಿದೆ ಸರ್ಕಾರದ ವರ್ತನೆ. ಸಚಿವರು ಹೀಗೆ ಹುಚ್ಚಾಪಟ್ಟೆ ಆಡುತ್ತಾ, ತಮ್ಮದೇ ಆದ ಸಿದ್ಧಾಂತವನ್ನು ಹೇರತೊಡಗಿದರೆ ಜನರೇ ಮೂಗುದಾರವನ್ನು ಜಗ್ಗುವ ದಿನ ದೂರವಿಲ್ಲ. ಯಡಿಯೂರಪ್ಪನವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಕಿವಿಹಿಂಡಿ ಬುದ್ದಿ ಹೇಳದೇ ಇದ್ದರೆ ಜನರೇ ಯಡಿಯೂರಪ್ಪನವರ ಕಿವಿಹಿಂಡುವ ದಿನ ಬರುತ್ತದೆ.
Monday, February 16, 2009
ಆಚಾತುರ್ಯ ಆಚಾರ್ಯ
ಯಡಿಯೂರಪ್ಪ ಸರ್ಕಾರದಲ್ಲಿ ಎರಡನೇ ಪರಮೋಚ್ಚ ಅಧಿಕಾರ ಅನುಭವಿಸುತ್ತಿರುವವರು ಸನ್ಮಾನ್ಯ ವಿ.ಎಸ್. ಆಚಾರ್ಯ. ಆದರೆ ಅಧಿಕಾರ ಚಲಾವಣೆಯಲ್ಲಿ ಅಷ್ಟೇ ಬುರ್ನಾಸು. ಕೇವಲ ವಿವಾದಸ್ಪದ ಮಾತುಗಾರಿಕೆಗಷ್ಟೇ ಅವರ ಅಧಿಕಾರ ಸೀಮಿತ. ನಿಜಾಧಿಕಾರ ನಡೆಸುತ್ತಿರುವವರು ಮುಖ್ಯಮಂತ್ರಿ ಪುತ್ರ ವಿಜಯೇಂದ್ರ. ಹಾಗಾಗಿಯೇ ಆಚಾರ್ಯ ಅಚಾತುರ್ಯದ ವರ್ತನೆ ಹೊರಗೆಡಹುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪದೇಪದೇ ಇಕ್ಕಟ್ಟಿಗೆ ಸಿಲುಕಿಸುತ್ತಾರೆ.
ತಮ್ಮದೇ ಕ್ಷೇತ್ರದ ಶಾಸಕ ರಘುಪತಿಭಟ್‌ರ ಪತ್ನಿ ಆತ್ಮ`ಹತ್ಯೆ' ಪ್ರಕರಣದಲ್ಲಿ ಅವರ ನಡೆದುಕೊಂಡ ರೀತಿ ಜವಾಬ್ದಾರಿಯುತ ಹುದ್ದೆಗೆ ಮಾಡಿದ ಅಪಮಾನ. ಅಧಿಕಾರದ ಹೊಸದರಲ್ಲಿ ಹಾಗೆ ಮಾತನಾಡಿದರು ಎಂದು ಜನತೆ ಕ್ಷಮಿಸಿದರು. ಮತಾಂತರ, ಚರ್ಚ್‌ಗಳ ಮೇಲೆ ದಾಳಿ, ಪಬ್‌ಮೇಲೆ ದಾಳಿ, ರೈತರ ಕಗ್ಗೊಲೆ ಹೀಗೆ ರಾಜ್ಯದಲ್ಲಿ ಸರಣಿ ಕೃತ್ಯಗಳು ಮೇಲಿಂದ ಮೇಲೆ ನಡೆಯತೊಡಗಿದಾಗ ಆಚಾರ್ಯರ ನಿಜಬಣ್ಣ ಬಯಲಾಯಿತು. ಅವರ `ಶಕ್ತಿ'ಯ ಮೇಲೆ ಸಂಶಯ ಮೂಡತೊಡಗಿತು.
ಮೂರುವರೆ ದಶಕಗಳ ಕಾಲ ವಿಧಾನಪರಿಷತ್ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ ಸದನದಲ್ಲಿ ನಡೆಸಿದ ವಾದವಿವಾದಗಳು ಅವರ ಗಂಟಲಿಂದ ಬಂದಿದ್ದವೇ ಎಂದು ಅನುಮಾನ ಪಡುವಷ್ಟು ಆಚಾರ್ಯರು ಎಡಬಿಡಂಗಿಯಾಗಿ ಮಾತಾಡತೊಡಗಿದ್ದರು. ಅವೆಲ್ಲವನ್ನೂ ಜನ ಕ್ಷಮಿಸಿದರು. ಅರವತ್ತರ ಅರಳುಮರುಳು ಎಂದು ಸುಮ್ಮನಾದರು. ಗುಬಾಡ್ ಗೃಹಸಚಿವ ಎಂದು ಬೈದು ಸಮಾಧಾನಪಟ್ಟುಕೊಂಡರು.
ಆದರೆ. . .
ಮಾಧ್ಯಮಗಳ ನಿಯಂತ್ರಣಕ್ಕೆ `ಓಂಬುಡ್ಸ್‌ಮನ್' ಅರ್ಥಾತ್ ಮಾಧ್ಯಮಾಧಿಕಾರಿ ನೇಮಕ ಕುರಿತು ಅವರು ಹರಿಯಬಿಟ್ಟ ಮಾತುಗಳು ಆಚಾರ್ಯರ ಎಳಸುತನವನ್ನು ಪ್ರದರ್ಶಿಸಿಬಿಟ್ಟಿತು. ಜತೆಗೆ ಸಂಘಪರಿವಾರದ ಫ್ಯಾಸಿಸಂ ಧೋರಣೆಗೆ ಕನ್ನಡಿಯನ್ನೂ ಹಿಡಿಯಿತು.
ಮೇಲ್ನೋಟಕ್ಕೆ ಎಳಸುತನದ ಮಾತುಗಾರಿಕೆ ಇದು ಎಂದೆನಿಸಿದರೂ ಅದರ ಆಳದಲ್ಲಿರುವುದು ಫ್ಯಾಸಿಸಂನ ಧೋರಣೆಯೇ. ಸರ್ವಾಧಿಕಾರದ ಮೊದಲ ಶತ್ರು ಎಂದರೆ ವಾಕ್‌ಸ್ವಾತಂತ್ರ್ಯ. ಇತಿಹಾಸದಲ್ಲಿ ಹಿಟ್ಲರ್, ಮುಸಲೋನಿ, ತಾಲಿಬಾನ್, ಪರ್ವೇಜ್ ಮುಷ್‌ರಫ್, ಇಂದಿರಾಗಾಂಧಿ ಎಲ್ಲರೂ ಮಾಡಿದ್ದು ಇದನ್ನೆ. ಮೊದಲು ಮಾಧ್ಯಮಗಳನ್ನು ಹದ್ದುಬಸ್ತಿನಲ್ಲಿಟ್ಟರೆ ತಮ್ಮ ನೆಲದಲ್ಲಿ ನಡೆಯವುದು ಹೊರಜಗತ್ತಿಗೆ ತಿಳಿಯುವುದಿಲ್ಲವೆಂಬ ಹುಂಬತನದಲ್ಲಿ ಎಲ್ಲಾ ಸರ್ವಾಧಿಕಾರಿಗಳು ವರ್ತಿಸುತ್ತಾರೆ. ಹಾಗೆಂದು ಅವರು ನಂಬಿರುತ್ತಾರೆ. ಹಾಗಂತ ಹಿಟ್ಲರ್‌ನಿಂದ ಇಂದಿರಾಗಾಂಧಿಯವರೆಗೆ ಎಲ್ಲಾ ಸರ್ವಾಧಿಕಾರಿಗಳು ಧೂರ್ತತನವನ್ನು ಮಾಡಿದ್ದಾರೆ. ಮೇಲ್ನೋಟಕ್ಕೆ ದಡ್ಡತನದ ವರ್ತನೆಯಂತೆ ಕಾಣಿಸುತ್ತಲೇ ಎಲ್ಲವನ್ನೂ ನಿಯಂತ್ರಿಸುವ, ನಿರ್ಬಂಧಿಸುವ ಕಠೋರ ಕಾನೂನನ್ನು ಜಾರಿಗೊಳಿಸುವ ಹುನ್ನಾರ ಇದರ ಹಿಂದಿರುತ್ತದೆ.
ಸ್ವಭಾವತಃ ಹಾಗೂ ಸೈದ್ಧಾಂತಿಕವಾಗಿ ಫ್ಯಾಸಿಸಂನ್ನು ಬೆಂಬಲಿಸುವ ಬಿಜೆಪಿ ಮತ್ತದರ ಪರಿವಾರದ ಸಂಘಟನೆಗಳು ತಮ್ಮ ಚರಿತ್ರೆಯುದ್ದಕ್ಕೂ ಸರ್ವಾಧಿಕಾರಿ ವರ್ತನೆಯನ್ನು ಪ್ರೋತ್ಸಾಹಿಸುತ್ತಲೇ ಬಂದಿವೆ. ಸಂಘಪರಿವಾರದ ಸಂವಿಧಾನವೆಂದೇ ಖ್ಯಾತವಾದ ಗೋಳ್ವಾಲ್ಕರ್‌ರ ಬಂಚ್ ಆಫ್ ಥಾಟ್ಸ್(ಚಿಂತನಗಂಗಾ)ನ ಮೂಲ ಆಶಯವೇ ಅದು. ಕಚ್ಚಿ ವಿಷಕಾರುವ ಹಾವನ್ನು ಕಂಡರೆ ಹಾಗೆಯೇ ಬಿಡು. ಆದರೆ ಕಮ್ಯುನಿಸ್ಟರು, ಮುಸ್ಲಿಂರು, ಕ್ರೈಸ್ತರನ್ನು ಕಂಡರೆ ಕೊಲ್ಲು ಎಂಬರ್ಥ ಮಾತುಗಳನ್ನು ಚಿಂತನಗಂಗಾ ಅನೂಚಾನವಾಗಿ ವಿವರಿಸುತ್ತದೆ. ಹಿಂದೂ ಮತಾಂಧರ ಅಧಿಕಾರವನ್ನು ಸ್ಥಾಪಿಸಿ, ಉಳಿದೆಲ್ಲಾ ಸಮುದಾಯಗಳನ್ನು ತುಳಿಯುವ ಸಂಚನ್ನು ಸಂಘಪರಿವಾರ ಹೊಂದಿದೆ. ಕೇಂದ್ರದಲ್ಲಿ ಒಮ್ಮೆ ಪೂರ್ಣ ಪ್ರಮಾಣದ ಅಧಿಕಾರವನ್ನು ಬಿಜೆಪಿ ಹಿಡಿದರೆ ಇವೆಲ್ಲಾ ಸತ್ಯವಾಗಲಿವೆ.
ತಮಗೆ ಸಹ್ಯವೆನಿಸದ್ದನ್ನು ನಾಶಗೊಳಿಸುವ, ತಮ್ಮ ಸಿದ್ಧಾಂತ ಒಪ್ಪದೇ ಇದ್ದವರನ್ನು ಹಲ್ಲೆ ನಡೆಸಿ ನಿರ್ಮೂಲನೆ ಮಾಡುವ, ತಮ್ಮದನ್ನೇ ಇನ್ನೊಬ್ಬರ ಮೇಲೆ ಹೇರುವ ಅಪ್ರಜಾಪ್ರಭುತ್ವವಾದಿ ವರ್ತನೆ ಸಂಘಪರಿವಾರದ್ದು. ಬಾಬರಿ ಮಸೀದಿ ಕೆಡವಿದ ಹಿಂದೆ, ಗುಜರಾತಿನ ನರಮೇಧ, ಜನಾಂಗೀಯ ದ್ವೇಷ, ಒರಿಸ್ಸಾದಲ್ಲಿ ಇಬ್ಬರು ಹಸುಮಕ್ಕಳ ಸಹಿತ ಪಾದ್ರಿ ಗ್ರಹಾಂಸ್ಟೈನ್ ಕೊಲೆ, ಹರ್ಯಾಣದ ಜಜ್ಜಾರ್‌ನಲ್ಲಿ ಸತ್ತ ದನದ ಮಾಂಸ ತಿಂದರೆಂಬ ಆರೋಪ ಹೊರಿಸಿ 7 ಜನ ದಲಿತರ ಚರ್ಮ ಸುಲಿತು ಕೊಲೆಗೈದದ್ದು, ಆದಿ ಉಡುಪಿಯಲ್ಲಿ ಗೋ ಸಾಗಿಸಿದರೆಂದು ಇಬ್ಬರು ಮುಸ್ಲಿಮರನ್ನು ಬೆತ್ತಲು ಗೊಳಿಸಿದ್ದು, ಇತ್ತೀಚೆಗೆ ಒರಿಸ್ಸಾದಲ್ಲಿ ಕ್ರೈಸ್ತ ಸಂನ್ಯಾಸಿನಿಯ ಮೇಲೆ ಸಾಮೂಹಿಕ ಅತ್ಯಾಚಾರ, ಜತೆಗೆ ನಡೆದ ಬರ್ಬರ ದಾಳಿ, ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ನಡೆದ ಸರಣಿ ದಾಳಿ, ಪಬ್‌ನಲ್ಲಿ ಯುವತಿಯರಿಗೆ ಹಿಗ್ಗಾಮುಗ್ಗಾ ಹೊಡೆದಿದ್ದು, ಕೇರಳದ ಶಾಸಕ ಪುತ್ರಿ ಮುಸ್ಲಿಮ್ ಸ್ನೇಹಿತನ ಜತೆಗೆ ಹೋಗುತ್ತಿದ್ದಳೆಂದು ಹಿಂಸಿಸಿದ್ದು. . . ಹೀಗೆ ಉದ್ದಕ್ಕೆ ಹೇಳುತ್ತಾ ಹೋಗಬಹುದು.
ಗೃಹಸಚಿವ ವಿ.ಎಸ್. ಆಚಾರ್ಯರು ಮಾಧ್ಯಮಾಧಿಕಾರಿ ನೇಮಿಸಬೇಕೆಂಬ ಹೇಳಿಕೆಯನ್ನು ಈ ಎಲ್ಲದನ್ನೂ ಹಿಂದಿಟ್ಟುಕೊಂಡು ನೋಡಬೇಕು. ಸಂಘಪರಿವಾರದ ಎಲ್ಲಾ ದುಷ್ಕೃತ್ಯಗಳು ಇಡೀ ಭಾರತಕ್ಕೆ, ಜಗತ್ತಿಗೆ ಗೊತ್ತಾಗಿದ್ದು ಮಾಧ್ಯಮಗಳ ಮೂಲಕವೇ. ಮಾಧ್ಯಮಗಳ ಧ್ವನಿಯಿಲ್ಲದಿದ್ದರೆ ಇವ್ಯಾವ ಅನಾಹುತಗಳು ವಿಶ್ವಕ್ಕೆ ಗೊತ್ತಾಗುತ್ತಿರಲಿಲ್ಲ. ಬಿಜೆಪಿ ಸರ್ಕಾರ ಸರ್ವಜನಾದರಣೀಯವಾಗಿ, ಜನರಿಗೆ ನೆಮ್ಮದಿ ಕೊಡುತ್ತಾ ಅಧಿಕಾರ ನಡೆಸುತ್ತಿದೆ ಎಂದು ಎಲ್ಲರೂ ನಂಬುತ್ತಿದ್ದರು.
ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೋಕಾಲ್ಡ್ ಸಂಘಪರಿವಾರದ ಸಂಘಟನೆಗಳು ನಡೆಸುತ್ತಿರುವ ದುಷ್ಟತನಗಳು ಇಡೀ ಜಗತ್ತಿಗೆ ಗೊತ್ತಾಗಿ, ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಿವೆ. ಮಾಧ್ಯಮಗಳ ಗಂಟಲನ್ನೇ ಕಟ್ಟಿ ಬಿಟ್ಟರೆ ಧ್ವನಿಯೇ ಹೊರಡದಂತಾಗಿ ಎಲ್ಲವೂ ಗಪ್‌ಚುಪ್ ಆಗುತ್ತವೆ. ಆಗ ಸರ್ಕಾರ, ಸಂಘಪರಿವಾರ ಆಡಿದ್ದೇ ಆಟವಾಗಿ ಬಿಡುತ್ತದೆ ಎಂಬ ಲೆಕ್ಕಾಚಾರ ಆಚಾರ್ಯರದ್ದು.
ಪಬ್‌ದಾಳಿ ಮಹಿಳೆಯರ ಬಗ್ಗೆ ಸಂಘಪರಿವಾರ ಧೋರಣೆಯನ್ನು ಬಹಿರಂಗಪಡಿಸಿದೆ. ಈ ಘಟನೆ ಕುರಿತು ಮಾಧ್ಯಮಗಳು ಅತಿರಂಜಿತವಾದ ವರದಿಯನ್ನು ಪ್ರಕಟಿಸಿದ್ದೂ ಸುಳ್ಳಲ್ಲ. ಒಟ್ಟಾರೆ ಸುದ್ದಿ ಶ್ರೀರಾಮಸೇನೆಯ ವಿರುದ್ಧವೆನಿಸಿದರೂ ಅದರ ಆಂತ್ಯಿಕ ಪರಿಣಾಮ ಪ್ರಮೋದ ಮುತಾಲಿಕ್‌ಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟು ಬಿಟ್ಟಿತು. ಒಂದೇ ರಾತ್ರಿಯಲ್ಲಿ ಮುತಾಲಿಕ್ ಹೀರೋ ಆಗಿಬಿಟ್ಟ. ನರೇಂದ್ರ ಮೋದಿಗೆ ಸಿಕ್ಕಷ್ಟೇ ಪ್ರಚಾರ ಮುತಾಲಿಕ್‌ಗೂ ಸಿಕ್ಕಿಬಿಟ್ಟಿತು.
ಮಾಧ್ಯಮಗಳು ಅನಗತ್ಯವೆನ್ನುವಷ್ಟು ವೈಭವೀಕರಣವನ್ನು ಮುತಾಲಿಕ್‌ಗೆ ಕೊಟ್ಟುಬಿಟ್ಟವು. ಅದು ತಪ್ಪಬೇಕು. ನೆಗೆಟಿವ್ ಸುದ್ದಿ ಮಾಡುತ್ತಲೇ ಪಾಸಿಟಿವ್ ಇಮೇಜ್ ಕ್ರಿಯೇಟ್ ಮಾಡುವುದು ಮಾಧ್ಯಮಗಳ ದೌರ್ಬಲ್ಯ ಕೂಡ. ಆದರೆ ಮಂಗಳೂರಿನಲ್ಲಿ ನಡೆದ ಯುವತಿಯರ ಮೇಲಿನ ಹಿಂಸಾಚಾರ, ಸಂಘಪರಿವಾರದ ನಿಜಬಣ್ಣ ಹಾಗೂ ಇಲ್ಲಿಯವರೆಗೆ ಬಿಜೆಪಿ ಬೆಂಬಲಕ್ಕಿದ್ದ ಸಮಾಜದ ದೊಡ್ಡ ಹಾಗೂ ಪ್ರಭಾವಿ ಸಮೂಹವಾದ ಮಧ್ಯಮವರ್ಗಕ್ಕೂ ಹೇಗೆ ಬಿಜೆಪಿ ವಿರುದ್ಧವಾದುದು ಎಂಬುದು ಇದರಿಂದ ಸ್ವತಃ ಮಧ್ಯಮವರ್ಗದವರಿಗೂ ಗೊತ್ತಾಯ್ತು.
ಮಾಧ್ಯಮದವರಿಗೆ ಸ್ವಯಂ ನಿಯಂತ್ರಣ ಬೇಕೆಂಬುದರ ಬಗ್ಗೆ ಯಾರದ್ದೂ ವಿರೋಧವಿಲ್ಲ. ಸದ್ಯದ ವಿದ್ಯುನ್ಮಾನ ಮಾಧ್ಯಮಗಳ ಸುದ್ದಿಯ ಆತುರಗಾರಿಕೆಯಲ್ಲಿ ಅನೇಕ ಅಪಾಯಗಳು ಸಂಭವಿಸುತ್ತಿವೆ. ಅದರ ನಿಯಂತ್ರಣಕ್ಕೆ ಪ್ರೆಸ್‌ಕೌನ್ಸಿಲ್ ಇದೆ. ಪತ್ರಕರ್ತರದ್ದೇ ಆದ ಸಂಘಟನೆಗಳಿವೆ. ಅದನ್ನು ಆಂತರಿಕವಾಗಿ ರೂಪಿಸಿಕೊಳ್ಳಬೇಕಾದ ದರ್ದು ಮಾಧ್ಯಮಗಳಿಗಿದೆ.
ಹಾಗಂತ ವಿ.ಎಸ್. ಆಚಾರ್ಯ, ಪ್ರಮೋದಮುತಾಲಿಕ್ ಈ ರೀತಿ ಮಾತನಾಡಿದರೆ ಅದನ್ನು ಬೇರೆಯದೇ ಆದ ಆಯಾಮ, ಅನುಮಾನಗಳಿಂದ ನೋಡಬೇಕಾಗುತ್ತದೆ. ಸಂಘಪರಿವಾರದ ಆಶಯಗಳನ್ನು ಕಾರ್ಯರೂಪಕ್ಕೆ ಇಳಿಸುವ ಹಿಡೆನ್ ಅಜೆಂಡ್ ಇದರ ಹಿಂದಿರುತ್ತದೆ. ಹಾಗಾಗಿಯೇ ಆಚಾರ್ಯರ ಓಂಬುಡ್ಸ್‌ಮನ್ ಖಂಡಿತಾ ಬೇಡ. ಇವತ್ತು ಅದಕ್ಕೆ ಒಪ್ಪಿಗೆ ಸೂಚಿಸಿದ ತಕ್ಷಣವೇ ನಾಳೆ ಮಾಧ್ಯಮದವರು ಸರ್ಕಾರಕ್ಕೆ ತೋರಿಸಿಯೇ ಸುದ್ದಿಯನ್ನು ಬಿತ್ತರ ಮಾಡಬೇಕು. ಜನರ ಓಡಾಡುವುದಕ್ಕೂ ಸರ್ಕಾರದ ಪರ್ಮಿಶನ್ ತೆಗೆದುಕೊಳ್ಳಬೇಕು. ನ್ಯಾಯಾಲಯ ತೀರ್ಪು ಕೊಡುವುದಕ್ಕೂ ಸರ್ಕಾರದ ಒಪ್ಪಿಗೆ ಪಡೆಯಬೇಕು. ಕೊನೆಗೆ ಮತಗಟ್ಟೆಗೆ ಹೋಗಲು ನಮ್ಮ ಒಪ್ಪಿಗೆ ಬೇಕೆಂಬ ನಿಲುವಿಗೆ ಸರ್ಕಾರ, ಸಂಘಪರಿವಾರ ಬಂದು ನಿಲ್ಲುತ್ತದೆ.
ಏಕೆಂದರೆ ಪಬ್‌ಗೆ ಹೋಗಬಾರದು, ಪ್ರೇಮಿಗಳ ದಿನಾಚರಣೆ ಆಚರಿಸಬಾರದು, ಮುಸ್ಲಿಮ್ ಹುಡುಗರ ಜತೆ ಓಡಾಡಬಾರದು, ಕ್ರೈಸ್ತ ಶಿಕ್ಷಣಸಂಸ್ಥೆಗಳು ಪ್ರತಿಭಟನೆ ಮಾಡಬಾರದು ಎಂದು ಫರ್ಮಾನು ಹೊರಡಿಸಿರುವ ಸಂಘಪರಿವಾರ/ಸರ್ಕಾರ ಇವೆಲ್ಲವನ್ನೂ ಮಾಡುವುದಿಲ್ಲವೆಂದು ಹೇಗೆ ನಂಬುವುದು? ಓಂಬುಡ್ಸ್‌ಮನ್‌ನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು.
ಕನ್ನಡಪ್ರಭದ ಬಾರುಕೋಲು
ಈ ಪ್ರಶ್ನೆಗಳಿಗೆ ಹಲವು ರೀತಿಯ ಅಭಿಪ್ರಾಯ ಬೇಧಗಳು ಇರಲು ಸಾಧ್ಯ. ಒಬ್ಬೊಬ್ಬರು ಒಂದೊಂದು ರೀತಿಯಾಗಿಯೂ ಹೇಳಬಹುದು. `ಆ್ಯಕ್ಟಿವಿಸಂ' ಎಂಬುದು ಅನೇಕ ಪತ್ರಕರ್ತರಿಗೆ ತಥ್ಯವಾಗದ ಸಂಗತಿ. ಅದರಿಂದ ದೂರವುಳಿದ ಗುಮಾಸ್ತಿಕೆ ಮಾಡುವವರೇ ಜಾಸ್ತಿ. ಕನ್ನಡ, ನೆಲ-ಜಲ, ಸೌಹಾರ್ದ, ಜಾತಿ ಕ್ರೌರ್ಯ ಮತ್ತಿತರ ಸಂಗತಿಗಳು ಉದ್ಭವವಾದಾಗಲಾದರೂ ಪತ್ರಕರ್ತರೊಳಗಿನ `ನಿಜ ಮನುಷ್ಯ' ಎದ್ದು ಪ್ರಖರಗೊಳ್ಳುತ್ತಾನಾ? `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ' ಎಂಬ ರಾಷ್ಟ್ರಕವಿ ಕುವೆಂಪುರವರ ವಾದವನ್ನು ಒಪ್ಪುತ್ತಾರಾ? ಎಂಬಿತ್ಯಾದಿ ಉಸಾಬರಿಯೇ ಬೇಡ ಎನ್ನುವ ಪತ್ರಕರ್ತರೇ ಹೆಚ್ಚು.
ಅಂತಹ ಹೊತ್ತಿನಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಕಾರ್ಯಶೀಲ ಪತ್ರಕರ್ತನ ನಿಜ ಹೊಣೆಯನ್ನು ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಅಪ್ರತ್ಯಕ್ಷವಾಗಿ ಪ್ರತಿಬಿಂಬಿಸಿರುತ್ತಾರೆ. ಅಂತಹದೊಂದು ಘಟನೆ ಇತ್ತೀಚೆಗೆ ನಡೆಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಮಾಧ್ಯಮದಲ್ಲಿ ಓದಿ ಪಿಯುಸಿ/ಎಸ್ಸೆಸ್ಸೆಲ್ಸಿಯಲ್ಲಿ ಅತೀಹೆಚ್ಚು ಅಂಕಪಡೆವರಿಗೆ 15-10 ಸಾವಿರ ರೂ. ನಗದು ಬಹುಮಾನ ನೀಡುವ ಸಮಾರಂಭವದು. ಬೆಂಗಳೂರಿನ ಶಿಕ್ಷಕರ ಸದನಲ್ಲಿ ಇದು ಏರ್ಪಾಟಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಕನ್ನಡಪ್ರಭ ಸಂಪಾದಕ ಎಚ್.ಆರ್. ರಂಗನಾಥ್ ಅಂದು ವೇದಿಕೆಯಲ್ಲಿದ್ದ ಸರ್ಕಾರಿ ವರಿಷ್ಠರಿಗೆ ಬಾರುಕೋಲು ಬೀಸಿದ್ದರು. ಚಾಟಿಯಂತ ಅವರ ಮೊನಚು ನಾಲಿಗೆ ಅಧಿಕಾರವಂತರಿಗೆ ದಿಗಿಲು ಹುಟ್ಟಿಸಿತ್ತು. ಸಚಿವರು, ಅಧಿಕಾರಿಗಳು ತಲೆ ಕೆಳಗೆ ಹಾಕಿ ಕುಳಿತಿದ್ದರು. ರಂಗನಾಥ ಮಾತನಾಡುವ ಧಾಟಿ ರೈತಸಂಘದ ಧುರೀಣ ಪ್ರೊ ಎಂ.ಡಿ. ನಂಜುಂಡಸ್ವಾಮಿಯವರ ಮಾತಿನ ಹರಿತ ನೆನಪಾಗುತ್ತಿತ್ತು. ವೇದಿಕೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ, ವಕ್ಫ್‌ಸಚಿವ ಮುಮ್ತಾಜ್ ಅಲಿಖಾನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್ ಇದ್ದರು.
ರಂಗನಾಥ್ ಮಾತನಾಡಿದ್ದು ಯಥಾವತ್ತು ಇಲ್ಲಿದೆ.
ಇದು ನಾಚಿಕೆಗೇಡಿನ ಸಮಾರಂಭ. ಖಂಡಿತಾ ಸಂಭ್ರಮ ಪಡುವ ಸಮಾರಂಭವಿದಲ್ಲ. ಕನ್ನಡ ಮಾಧ್ಯಮದಲ್ಲಿ ಅನಿವಾರ್ಯವಾಗಿ ಓದುತ್ತಿರುವವರು ಕರೆತಂದು 10 ಸಾವಿರ ಕೊಟ್ಟು ಸನ್ಮಾನಿಸುತ್ತಿದ್ದೀರಲ್ಲಾ ನಿಮಗೆ ನಾಚಿಕೆಯಾಗಬೇಕು. ಕನ್ನಡ ಅನುಷ್ಠಾನ ಮಾಡದ ಸರ್ಕಾರಗಳು ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಈ ರೀತಿಯ ಸಂಭ್ರಮ ಆಚರಣೆಗೆ ಒಡ್ಡಿಕೊಳ್ಳೊತ್ತದೆ ಎಂಬುದು ತಮ್ಮ ಅನಿಸಿಕೆ.
ಕನ್ನಡವನ್ನೇ ಓದೋಲ್ಲ ಎನ್ನುವವರಿಗೆ ಏನೂ ಮಾಡದ ಪರಿಸ್ಥಿತಿಯಲ್ಲಿರುವ ಸರ್ಕಾರ ಅನಿವಾರ್ಯವಾಗಿ ತಮ್ಮ ಪಾಡಿಗೆ ಕನ್ನಡದಲ್ಲಿ ಓದುತ್ತಿರುವವರಿಗೆ ಸನ್ಮಾನ ಮಾಡುತ್ತಿರುವುದಕ್ಕೆ ನಾಚಿಕೆಪಡಬೇಕು.
ಕನ್ನಡದ ಬಗ್ಗೆ ಮಾತನಾಡಿದರೆ, ಕನ್ನಡದ ಪರವಾಗಿ ಹೋರಾಟ ಮಾಡಿದರೆ, ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಬೀದಿಯಲ್ಲಿ ನಿಂತು ಘೋಷಿಸಿದರೆ `ರೌಡಿ'ಗಳು ಎಂದು ಕರೆಯುತ್ತೀರಿ. ಸರ್ಕಾರದವ್ರು ಗೂಂಡಾಕಾಯ್ದೆ ಬಳಸುತ್ತಾರೆ. ಹಾಗಾದರೆ ಇನ್ನೂ ಕನ್ನಡ ಅನುಷ್ಠಾನವಾಗದೇ ಇರುವ ಬಗ್ಗೆ ಕನ್ನಡಿಗರು ಸುಮ್ಮನೇ ಕೂರಬೇಕೇ?
ಕನ್ನಡದ ಪರವಾಗಿ ಸ್ವಲ್ಪ ಗಟ್ಟಿಧ್ವನಿಯಲ್ಲಿ ಕನ್ನಡಪ್ರಭ ಬರೆದಾಗ ಮಾರನೇ ದಿನ ಫೋನು ಬರುತ್ತದೆ. ರಂಗನಾಥ್, ತುಂಬಾ ಉದ್ವೇಗಗೊಂಡಿದ್ದೀರಿ, ಅಷ್ಟು ಉದ್ವೇಗ ಕನ್ನಡಪ್ರಭಕ್ಕೆ ಏಕೆ? ಎಂದು ಪ್ರಶ್ನೆ ಕೇಳುತ್ತಾರೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡ ಪ್ರಭ ಬರೆಯದೇ ವಾಷಿಂಗ್‌ಟನ್ ಪೋಸ್ಟ್ ಬರೆಯಲು ಸಾಧ್ಯವೇ? ಕನ್ನಡದ ಪತ್ರಿಕೆಗಳು ಈ ಬದ್ಧತೆ ತೋರಿಸಬೇಕಲ್ಲವೆ?
ಸರ್ಕಾರಗಳು, ರಾಜಕಾರಣಿಗಳು ಕನ್ನಡ ಪರವಾಗಿರುವಂತೆ ಪತ್ರಿಕೆಗಳು ಎಷ್ಟು ಬರೆದರೂ ಪ್ರಯೋಜನವಾಗಿಲ್ಲ. ವಿವಿಧ ರೀತಿಯ ಹೋರಾಟಗಾರರು ತರಹೇವಾರಿ ಹೋರಾಟ ಮಾಡಿದರೂ ಸರ್ಕಾರ ಏನೂ ಮಾಡಿಲ್ಲ. ಸಾಹಿತಿ, ಬುದ್ದಿಜೀವಿಗಳು ಹೇಳಿದ್ದಾಯ್ತು. ಆದರೂ ಇಲ್ಲಿಯವರೆಗಿನ ಯಾವುದೇ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ. ಈ ಸರ್ಕಾರ ಒಂದುಮಟ್ಟಿಗೆ ಮಠಾಧೀಶರು ಹೇಳಿದ್ದನ್ನೂ ಕೇಳುತ್ತಿದೆ. ವೇದಿಕೆಯಲ್ಲಿ ಸುತ್ತೂರು ಮಠಾಧೀಶರು ಈ ಬಗ್ಗೆ ಸರ್ಕಾರಕ್ಕೆ ತಿಳಿಹೇಳಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ದೂರದೂರದ ಜಿಲ್ಲೆಗಳಿಂದ ಬಂದಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸರ್ಕಾರಕ್ಕೆ ಸರಿಯಾಗಿ ಪಾಠ ಕಲಿಸಬೇಕು. ಇಡೀ ಜನ ಸರ್ಕಾರಕ್ಕೆ ತಿಳಿಹೇಳಬೇಕು.
ರಾಜಕಾರಣಿಗಳು ವೋಟುಬ್ಯಾಂಕ್ ರಾಜಕಾರಣ ಮಾಡುತ್ತಾರೆಂದು ನಾವು ಹೇಳುತ್ತೇವೆ. ಹಾಗಿದ್ದರೆ ಕರ್ನಾಟಕದಲ್ಲಿ ಇಲ್ಲಿಯವರೆಗೆ ಆಳಿದ ಸರ್ಕಾರಗಳು ಕನ್ನಡಿಗರ ವೋಟು ಬ್ಯಾಂಕ್ ಆಧಾರದ ಮೇಲೆ ತಾನೇ ಗೆದ್ದಿರುವುದು. ಕೆಲವೇ ಜನ ಕನ್ನಡೇತರರಿಗೆ ಹೆದರಿ ಕನ್ನಡ ಅನುಷ್ಠಾನ ಮಾಡದೇ ಇರುವುದು ಕನ್ನಡಿಗರಿಗೆ ಬಗೆವ ದ್ರೋಹ.
ಬೆಂಗಳೂರಿನಲ್ಲಿ ಕನ್ನಡ ಸತ್ತುಹೋಗಿ ಬಹಳ ದಿನಗಳಾಗಿವೆ. ಹಾಗಿದ್ದೂ ಕನ್ನಡ ಕಲಿಯದ ಅಧಿಕಾರಿಗಳನ್ನು ಇನ್ನೂ ಯಾಕೆ ಇಟ್ಟುಕೊಂಡಿದ್ದೀರಿ. ಕನ್ನಡವನ್ನೇ ಕಲಿಯದ ಅಧಿಕಾರಿಗಳು ಕನ್ನಡ ಉದ್ದಾರವನ್ನೇನು ಮಾಡಿಯಾರು? ಇಲ್ಲಿಯವರೆಗೆ ಆಳಿದ ಯಾವ ಸರ್ಕಾರಗಳು ಕನ್ನಡದ ಸರ್ಕಾರಗಳಲ್ಲ. ಏಕೆಂದರೆ ಅವು ಕನ್ನಡಿಗರಿಗಾಗಿ ಏನೂ ಮಾಡಿಲ್ಲ.
ನಾನು ಇಷ್ಟೆಲ್ಲಾ ಹೇಳಿದ್ದರಿಂದ ಮುಖ್ಯಮಂತ್ರಿ ಚಂದ್ರು ಅಂದುಕೊಳ್ಳುತ್ತಿದ್ದಾರೆ. ಈ ರಂಗನ್ನ ಯಾಕೆ ಕರೆದನಪ್ಪಾಂತ. ಆದರೆ ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸಿದಾಗಲೇ ಇದೇ ರೀತಿ ಮಾತನಾಡಬೇಕೆಂದುಕೊಂಡು ಬಂದಿದ್ದೆ. ಕನ್ನಡದ ವಿಷಯದಲ್ಲಿ ಈ ರೀತಿ ಮಾತನಾಡದೇ ಇನ್ನು ಹೇಗೆ ಮಾತನಾಡಬೇಕು?
ಒಬ್ಬರು ಮುಖ್ಯಮಂತ್ರಿಗಳು ತಮ್ಮ ಬಳಿಬಂದು ದೆಹಲಿಗೆ ಹೋದರೆ ಅಲ್ಲಿನ ಪತ್ರಕರ್ತರು `ಕೆನ್ ಯು ಸ್ಪೀಕ್ ಇನ್ ಇಂಗ್ಲಿಷ್' ಎಂದು ಕೇಳುತ್ತಾರೆ ಎಂದಿದ್ದರು. ಹಾಗನ್ನಿಸಿಕೊಂಡು ಸುಮ್ಮನೆ ಬಂದಿದ್ದೀರಲ್ಲಾ, ನಿಮ್ಮ ಮೂರ್ಖತನಕ್ಕಿಷ್ಟು ಎಂದು ಬೈದಿದ್ದಲ್ಲದೇ, `ರಷ್ಯದ, ಚೀನಾದ ಪ್ರಧಾನಿ ಬಂದರೆ ಇದೇ ಪ್ರಶ್ನೆ ಕೇಳುತ್ತೀರಾ'ಎಂದು ಮರುಪ್ರಶ್ನೆ ಹಾಕಬೇಕಿತ್ತು ಎಂದು ಸಲಹೆ ನೀಡಿದ್ದೆ. ಮತ್ತೊಂದು ಬಾರಿ ದೆಹಲಿಗೆ ಹೋದಾಗ ಅವರು ಹಾಗೆಯೇ ಕೇಳಿದ್ದರಂತೆ. ಕನ್ನಡ ಮಾತನಾಡುವುದನ್ನು ನಾವೇ ಕಲಿಯದಿದ್ದರೆ ಹೇಗೆ?
ಮುಂದೆ ಮಾತನಾಡುವವರು ಕನ್ನಡದ ಬಗ್ಗೆ ಹೀಗೆ ಮಾತನಾಡಲಿ ಎಂದು ಖಾರವಾಗಿಯೇ ಮಾತನಾಡಿದ್ದೇನೆ. ವೇದಿಕೆಯ ಮೇಲಿದ್ದವರಿಗೆ ನನ್ನ ಮಾತುಗಳಿಂದ ಮುಜುಗರವಾಗಿರಬಹುದು. ಆದರೂ ಪರವಾಗಿಲ್ಲ. ನನ್ನ ಮಾತಿನ ಧಾಟಿಯೇ ಇದು.
ರಂಗನಾಥ್ ಮಾತುಕೇಳಿ ಮುಖ್ಯಮಂತ್ರಿ ಚಂದ್ರು ಒಳಗೊಳಗೆ ಖುಷಿಗೊಂಡರೆ ಸಚಿವೆ ಶೋಭಾ ತುಂಬಾ ಮುಜುಗರಕ್ಕೀಡಾಗಿದ್ದರು. ಆನಂತರದ ಮಾತುಗಳಲ್ಲಿ ರಂಗನಾಥರವರ ಮಾತುಗಳನ್ನು ಅವರು ಸಮರ್ಥಿಸಿಕೊಂಡರು.
ಅಕ್ಷರ ವಂಚಿತರಿಂದ `ಅಕ್ಷರಸ್ಥ'ರಿಗೆ ಕಾವ್ಯಸ್ಪರ್ಧೆ
*ಬೆಂಗಳೂರಿನ ಸ್ಲಮ್‌ನಿವಾಸಿಗಳ ಸಾಹಸ
*ಸ್ಪರ್ಧೆಗೆ ಬಂದ ಕವನಗಳ ಸಂಖ್ಯೆ ಇನ್ನೂರು
ಅನಿವಾರ್ಯ ಕಾರಣದಿಂದಲೋ, ಹುಡುಗಾಟಿಕೆಯ ಉಮೇದಿನಿಂದಲೋ ಶಾಲೆ ಬಿಟ್ಟು, ಅಕ್ಷರವಂಚಿತರಾದ ಯುವಕ/ಯುವತಿಯ ಕೂಟವೊಂದು ಕಾಲೇಜು ಅಧ್ಯಾಪಕರಿಗೆ, ಪ್ರೌಢಶಾಲೆ ಶಿಕ್ಷಕರಿಗೆ ಕಾವ್ಯಸ್ಪರ್ಧೆ ಏರ್ಪಡಿಸಿ ದಾಖಲೆ ನಿರ್ಮಿಸಿದೆ.
ಕೊಳಗೇರಿಯಲ್ಲಿ ಜೀವನ ಸಾಗಿಸುತ್ತಾ ಹೊಟ್ಟೆ ಪಾಡಿಗೆ ಗಾರೆ ಕೆಲಸ, ಮೂಟೆ ಹೋರುವುದು, ಕಾರು ತೊಳೆಯುವುದು, ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವವರೇ ಸೇರಿಕೊಂಡು ಇಂತಹವೊಂದು ಸಾಹಸವನ್ನು ಮೆರೆದಿದ್ದಾರೆ. ಅಕ್ಷರವಂಚಿತರು ಸೇರಿಕೊಂಡು ರೂಪಿಸಿದ ಕಾವ್ಯಸ್ಪರ್ಧೆಗೆ ಬಂದ ಪ್ರವೇಶಗಳ ಸಂಖ್ಯೆ ಬರೋಬ್ಬರಿ ಇನ್ನೂರು.
ರಾಜ್ಯದ ಮೂಲೆಮೂಲೆಯ ವಿವಿಧ ಕಾಲೇಜುಗಳಲ್ಲಿ, ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರು, ಡಾಕ್ಟರೇಟ್ ಪಡೆದವರು, ಸಂಶೋಧನೆಯಲ್ಲಿ ತೊಡಗಿರುವವರು, ಕಾವ್ಯಕಸುಬು ಮಾಡುತ್ತಿರುವವರು ಸ್ಪರ್ಧೆಗೆ ತಮ್ಮ ರಚನೆಗಳನ್ನು ಕಳಿಸಿದ್ದಾರೆ. ಅಕ್ಷರವನ್ನೇ ಪ್ರೀತಿಸಲು ಮರೆತು, ಕಾಯಕವನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ಯುವಕ/ಯುವತಿಯರು `ಸ್ತ್ರೀಯರ ಕುರಿತು ಕವನ ಕಳಿಸಿ' ಎಂಬ ತಮ್ಮ ಕರೆ ಮನ್ನಿಸಿ ಹರಿದು ಬಂದ ಕವನಗಳ ಮಹಾಪೂರ ಕಂಡು ಬೆರಗಾಗಿದ್ದಾರೆ.
ಎಲ್ಲಾ ಕವನಗಳನ್ನು ಪೇರಿಸಿ ಕವಿಗಳಾದ ಎಲ್.ಎನ್. ಮುಕುಂದರಾಜ್ ಹಾಗೂ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಮೇಷ್ಟ್ರಾಗಿರುವ ಡೊಮಿನಿಕ್ ಅವರ ಮುಂದೆ ಹರಡಿ ಆಯ್ಕೆ ಮಾಡಿ ಕೊಡಿ ಎಂದು ಕೋರಿದ್ದಾರೆ. ಅವರಿಬ್ಬರು ಬಹುಮಾನಿತ ಕವಿಗಳನ್ನು ಆಯ್ಕೆ ಮಾಡಿದ್ದಾರೆ. ಅರಸೀಕೆರೆಯ ಮಮತಾ ಹಾಗೂ ಬಿಜಾಪುರದ ಗೀತಾ ಸನದಿ ಕ್ರಮವಾಗಿ ಮೊದಲೆರಡು ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಬೆಟ್ಟದ ನೆಲ್ಲಿಕಾಯಿ, ಸಮುದ್ರದ ಉಪ್ಪು:
ಇದೊಂಥರ ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎತ್ತಿಣಿಂದೆತ್ತ ಸಂಬಂಧವಯ್ಯಾ ಎಂಬ ಮಾದರಿಯದು. ಅಕ್ಷರದ ಅರಿವೇ ಇಲ್ಲದ ಸಮುದಾಯ ಒಂದು ಕಡೆ. ಅಕ್ಷರವನ್ನೇ ಹೊಟ್ಟೆ ಪಾಡಿಗೆ ನೆಚ್ಚಿಕೊಂಡ ಸಮುದಾಯ ಮತ್ತೊಂದು ಕಡೆ. ಇಬ್ಬರನ್ನೂ ಸೇರಿಸಿದ್ದು ಕಾವ್ಯ ಸ್ಪರ್ಧೆ.
ಅದನ್ನು ಆಗು ಮಾಡಿದ್ದು ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನ ಸಣ್ಣ ಸ್ಲಮ್ಮೊಂದರ ಕ್ರಿಯಾಶೀಲರು. ಇಸ್ಕಾನ್ ಎದುರಿಗೆ ಇರುವ ಈ ಸ್ಲಮ್‌ನಲ್ಲಿ ಹುಟ್ಟಿಕೊಂಡ ಚೇತನಧಾರೆ ಟ್ರಸ್ಟ್ ಹಾಗೂ ಜನಾಸ್ತ್ರ ಸಂಘಟನೆ ಕಾವ್ಯ ಸ್ಪರ್ಧೆಯ ಕನಸಿಗೆ ಬೀಜಾಂಕುರ ಮಾಡಿದ್ದು.
ಕಾವ್ಯಸ್ಪರ್ಧೆಯ ರೂವಾರಿಗಳಲ್ಲಿ ಆದಿತ್ಯ ಮಾತ್ರ ಪಿಯುಸಿವರೆಗೆ ಓದಿದ್ದು, ಕಪ್ಪು ಹಕ್ಕಿಯ ಹಾಡು ಎಂಬ ಕವನ ಸಂಕಲನ ತರುವ ಉತ್ಸಾಹದಲ್ಲಿದ್ದಾರೆ. ಉಳಿದವರೆಲ್ಲಾ ಐದನೇ ತರಗತಿ ಓದಿದವರಲ್ಲ.
ಕೆಲವರು ಟಯೋಟ ಫ್ಯಾಕ್ಟರಿಗೆ ಕಾರು ತೊಳಿಯಲು ಹೋಗುತ್ತಾರೆ. ಇನ್ನು ಕೆಲವರು ಮೂಟೆ ಹೊರಲು ಎಪಿ ಎಂಸಿ ಯಾರ್ಡ್‌ಗೆ ತೆರಳುತ್ತಾರೆ. ಮತ್ತೊಂದಿಷ್ಟು ಜನ ಗಾರೆ ಕೆಲಸ, ಸೆಂಟ್ರಿಂಗ್,ಮರಗೆಲಸ, ವೈಟ್‌ವಾಷಿಂಗ್ ಮಾಡುತ್ತಾರೆ. ಯುವತಿಯರು ಬೆಳಗಾನೆದ್ದು ಬ್ಯೂಟಿ ಪಾರ್ಲರ್‌ಗಳಲ್ಲಿ ಸಹಾಯಕಿಯರಾಗಿ ದುಡಿಯುತ್ತಾರೆ. ರಜೆಯೂ ಇಲ್ಲದೇ ಹೊಟ್ಟೆ ಪಾಡಿಗೆ ದುಡಿಯುವ ಇವರೆಲ್ಲಾ ಸೇರುವುದು ದುಡಿಮೆ ಹೊತ್ತು ಮುಗಿದ ಮೇಲೆಯೇ.
ಇದರ ಜತೆಗೆ ಕಾರ್ಡಿನಲ್ಲಿ ರಂಗೋಲಿ ಸ್ಪರ್ಧೆಯನ್ನೂ ನಡೆಸಿದ್ದು, ಇದಕ್ಕೆ ಬಂದ ಪ್ರವೇಶಗಳ ಸಂಖ್ಯೆ 150.
ಸ್ಲಮ್ ನಿವಾಸಿಗಳು ಯಾತಕ್ಕೂ ಬರುವುದಿಲ್ಲ, ಅವರಿಗೆ ತಿಳಿವಳಿಕೆ, ಸಂವೇದನೆಗಳೇ ಇರುವುದಿಲ್ಲ, ಪುಂಡರು ಎಂಬ ಭಾವನೆ ಹೊರಜಗತ್ತಿನವರಲ್ಲಿ ಸಾಮಾನ್ಯ. ಅದನ್ನು ಹೋಗಲಾಡಿಸಬೇಕೆಂಬ ತವಕದಿಂದ ಕಾವ್ಯಸ್ಪರ್ಧೆ ಮಾಡಿದೆವು. ಅದರಲ್ಲಿ ಯಶಸ್ವಿಯಾದೆವು ಎಂಬ ವಿಶ್ವಾಸ ಆದಿತ್ಯ ಅವರದ್ದು.
ಶಾಸ್ತ್ರೀಯ ಸ್ಥಾನ ಅನಿಶ್ಚಿತ: ಸರ್ಕಾರದ ಮೀನಾಮೇಷ
ಇನ್ನೂ ಸಲ್ಲಿಕೆಯಾಗದ ಇಂಪ್ಲೀಡಿಂಗ್
ಸಂಭ್ರಮದ ಮಧ್ಯೆ ವಾಸ್ತವ ಮರೆತ ಸರ್ಕಾರ
ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ಧತೆ
ಕನ್ನಡಕ್ಕೆ ಅಭಿಜಾತ ಸ್ಥಾನ(ಶಾಸ್ತ್ರೀಯ) ನೀಡಿದ್ದನ್ನು ಪ್ರಶ್ನಿಸಿ ತಮಿಳುನಾಡಿನ ಆರ್ ಗಾಂಧಿ ರಿಟ್ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದಿದ್ದರೂ, ರಾಜ್ಯ ಸರ್ಕಾರ ಇದರ ಬಗ್ಗೆ ಉದಾಸೀನ ಧೋರಣೆ ತಾಳಿರುವುದರಿಂದ ಕನ್ನಡ ಶಾಸ್ತ್ರೀಯ ಭಾಷೆಯಾಗಿ ಉಳಿಯುವುದು ಅನಿಶ್ಚಿತವಾಗಿದೆ.
ಈ ಬಗ್ಗೆ ಸರ್ಕಾರದ ಪ್ರಮುಖ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ಕಡೆಯಿಂದ ನಿರೀಕ್ಷಿತ ಮಟ್ಟದ ಪ್ರಕ್ರಿಯೆ ನಡೆದಿಲ್ಲದಿರುವುದನ್ನು ಸೂಚಿಸುತ್ತದೆ.
ಶಾಸ್ತ್ರೀಯ ಭಾಷೆ ಸ್ಥಾನ ಕೊಡಿಸುವಲ್ಲಿ ಪ್ರಮುಖ ರೂವಾರಿಯಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಡಾಅಗ್ರಹಾರ ಕೃಷ್ಣಮೂರ್ತಿ ಹೇಳಿದ್ದು ಹೀಗೆ: `ಕೇಂದ್ರ ಸರ್ಕಾರಕ್ಕಾಗಲಿ, ಶಿಫಾರಸ್ಸು ಸಮಿತಿಗಾಗಲಿ ಇದರಲ್ಲಿ ಆಸಕ್ತಿಯಿಲ್ಲ. ಅಷ್ಟಕ್ಕೂ ಅವರು ಯಾಕೆ ರಿಟ್ ಅರ್ಜಿ ಸಂಬಂಧ ತಲೆ ಕೆಡಿಸಿಕೊಳ್ಳುತ್ತಾರೆ. ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ಮಾತ್ರ ಇದರ ಬಗ್ಗೆ ಮುತುವರ್ಜಿ ವಹಿಸಬೇಕು. ಶಾಸ್ತ್ರೀಯ ಸ್ಥಾನ ಸಿಕ್ಕೇ ಹೋಯಿತೆಂಬ ಸಂಭ್ರಮದಲ್ಲಿರುವ ಸರ್ಕಾರಕ್ಕೆ ವಾಸ್ತವ ಸ್ಥಿತಿ ಗೊತ್ತಾಗುತ್ತಿಲ್ಲ'.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್ ಹೇಳಿದ್ದು ಹೀಗೆ: ರಿಟ್ ಅರ್ಜಿಗೆ ಪ್ರತಿವಾದಿಯಾಗಿಸಲು ಕೋರಿ ಮದ್ರಾಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದರಿಂದ ಆಗುವ ಅನುಕೂಲ-ಅನಾನುಕೂಲಗಳ ಬಗ್ಗೆ, ರಾಜ್ಯ ಸರ್ಕಾರವೇ ಪ್ರತಿವಾದಿಯಾಗಿ ಪಾಲ್ಗೊಂಡರೆ ಆಗಬಹುದಾದ ಸಮಸ್ಯೆಗಳ ಬಗ್ಗೆ ಆಲೋಚಿಸಲಾಗುತ್ತಿದೆ. ರಾಜ್ಯದ ಅಡ್ವೋಕೇಟ್ ಜನರಲ್ ಅವರಿಗೆ ಈ ಬಗ್ಗೆ ಜವಾಬ್ದಾರಿ ವಹಿಸಲಾಗಿದೆ. ಕಾನೂನು ತಜ್ಞರ ಜತೆ ಅವರು ಚರ್ಚಿಸಿ, ಮುಖ್ಯಮಂತ್ರಿಗಳ ಬಳಿ ಮಾತಾಡುವುದಾಗಿ ತಿಳಿಸಿದ್ದಾರೆ. ಇಂಪ್ಲೀಡಿಂಗ್ ಅವರಿಗೆ ಬಿಟ್ಟ ಸಂಗತಿ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದು ಹೀಗೆ: ಅಭಿವೃದ್ಧಿ ಪ್ರಾಧಿಕಾರದ ಕಡೆಯಿಂದ ಮದ್ರಾಸ್ ಉಚ್ಚನ್ಯಾಯಾಲಯಕ್ಕೆ ಪ್ರತಿವಾದಿಯಾಗಿಸಲು ಹಾಗೂ ಗಾಂಧಿಯವರ ರಿಟ್ ಅರ್ಜಿ ವಜಾ ಮಾಡಲು ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ. ಈ ಸಂಬಂಧ ಅಗತ್ಯವಿರುವ ಅಫಿಡವಿಟ್‌ಗೆ ತಾನು ಸಹಿ ಹಾಕಿದ್ದೇನೆ. ಅಡ್ವೋಕೇಟ್ ಜನರಲ್ ಉದಯಹೊಳ್ಳ ಅವರು ಕಾನೂನು ತಜ್ಞರ ಜತೆ ಚರ್ಚಿಸಿ, ನ್ಯಾಯವಾದಿಗಳನ್ನು ನೇಮಿಸಲಿದ್ದಾರೆ. ರಿಟ್ ಅರ್ಜಿ ವಜಾ ಮಾಡಿಸಲು ಬೇಕಾದ ಎಲ್ಲಾ ಪುರಾವೆಗಳನ್ನು ಪ್ರಾಧಿಕಾರ ಒದಗಿಸಲಿದೆ.
ಈ ಎಲ್ಲಾ ಹೇಳಿಕೆ, ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಶಾಸ್ತ್ರೀಯ ಸ್ಥಾನದ ಅಸ್ತಿತ್ವವನ್ನು ವಿವೇಚಿಸಬೇಕಿದೆ. ಕನ್ನಡಿಗರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರವು 31-10-08ರಂದು ಗೆಜೆಟ್ ಪ್ರಕಟಣೆ ಹೊರಡಿಸಿ ಕನ್ನಡ ಮತ್ತು ತೆಲುಗು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು. ಆದರೆ ಸದರಿ ಪ್ರಕಟಣೆಯಲ್ಲಿನ ಕೊನೆಯ ಒಕ್ಕಣಿಕೆ `ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿರುವ ರಿಟ್ ಅರ್ಜಿ(ಆಗಸ್ಟ್‌ನಲ್ಲಿ ಗಾಂಧಿ ಸಲ್ಲಿಸಿದ ರಿಟ್) ಪ್ರಕರಣದ ತೀರ್ಮಾನಕ್ಕೆ ಒಳಪಟ್ಟೇ ಗೆಜೆಟ್ ಪ್ರಕಟಣೆ ಹೊರಡಿಸಲಾಗಿದೆ' ಎಂದಿದ್ದು, ರಿಟ್ ಅರ್ಜಿ ವಜಾಗೊಳ್ಳದೇ ಶಾಸ್ತ್ರೀಯ ಸ್ಥಾನ ಮಾನ ದಕ್ಕುವುದೇ ಇಲ್ಲ.
ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಕೇಂದ್ರ ಸರ್ಕಾರವು ಗೆಜೆಟ್ ಪ್ರಕಟಣೆ ಹೊರಡಿಸಿರುವುದರ ಸಿಂಧುತ್ವ ಪ್ರಶ್ನಿಸಿ 27-11-08ರಂದು ಗಾಂಧಿ ಅವರು 40 ಅಡಕಗಳುಳ್ಳ ಮತ್ತೊಂದು ರಿಟ್ ಅರ್ಜಿ ಸಲ್ಲಿಸಿದ್ದರು. ಕೇಂದ್ರದ ಇಬ್ಬರು ಸಚಿವರು, ಶಿಫಾರಸ್ಸು ಸಮಿತಿಯ 9 ಮಂದಿ ಸದಸ್ಯರನ್ನು ಪ್ರತಿವಾದಿಯಾಗಿ ಉಲ್ಲೇಖಿಸಲಾಗಿತ್ತು. ಈ ರಿಟ್ ಸಲ್ಲಿಕೆಯಾಗಿ 2 ತಿಂಗಳು ಕಳೆದಿದ್ದರೂ `ಶಾಸ್ತ್ರೀಯ ಸ್ಥಾನ ಸಿಕ್ಕಿದ ಸಂಭ್ರಮ'ದಲ್ಲಿರುವ ರಾಜ್ಯ ಸರ್ಕಾರ ಈ ಬಗ್ಗೆ ಪ್ರತಿವಾದಿಯಾಗಿ ಪಾಲ್ಗೊಳ್ಳಲು ಮದ್ರಾಸ್ ನ್ಯಾಯಾಲಯಕ್ಕೆ ಯಾವುದೇ ಅರ್ಜಿ ಸಲ್ಲಿಸಿಲ್ಲ.
ಇಂಪ್ಲೀಡಿಂಗ್(ಪ್ರತಿವಾದಿಯಾಗಿಸಲು ಕೋರಿ) ಮಾಡಿಕೊಳ್ಳಲು ಕೋರಿ ಅರ್ಜಿ ಸಲ್ಲಿಸಬೇಕಾದ ಸರ್ಕಾರ ಮೀನಮೇಷ ಎಣಿಸುತ್ತಿರುವುದರಿಂದ ಶಾಸ್ತ್ರೀಯ ಸ್ಥಾನ ಉಳಿಯುವುದು ಅನುಮಾನವಾಗಿದೆ. ಈ ರಿಟ್ ಅರ್ಜಿ ಕೇಂದ್ರ ಸರ್ಕಾರಕ್ಕೆ ಯಾವುದೇ ಆಸ್ಥೆ ಇಲ್ಲ. ಪ್ರತಿವಾದಿಗಳಾಗಿರುವ ಕೇಂದ್ರ ಮಾನವ ಸಂಪನ್ಮೂಲ ಮತ್ತು ಗೃಹಸಚಿವರಿಗೆ ಇದು ಬೇಕಾಗಿಲ್ಲ. ಯಾರೂ ಕನ್ನಡದವರಿಲ್ಲದೇ ಇರುವುದರಿಂದ ಶಿಫಾರಸ್ಸು ಸಮಿತಿ ಸದಸ್ಯರಿಗೆ ಇದರ ಉಸಾಬರಿ ಬೇಕಿಲ್ಲ.
ಗಾಂಧಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಶಿಫಾರಸ್ಸು ಸಮಿತಿಯ ಸಿಂಧುತ್ವವನ್ನೆ ಪ್ರಶ್ನಿಸಲಾಗಿದೆಯಲ್ಲದೇ, ಒತ್ತಡ, ಬೆದರಿಕೆಗೆ ಮಣಿದು ಶಿಫಾರಸ್ಸು ಮಾಡಲಾಗಿದೆ ಎಂದು ನ್ಯಾಯಾಲಯ ಬಯಸುವ ಪುರಾವೆಗಳನ್ನು ಮಂಡಿಸಲಾಗಿದೆ. ಕರ್ನಾಟಕ ಪ್ರತಿವಾದಿಯಾಗಿ ಸೇರಿಕೊಂಡು ಸಮರ್ಥವಾಗಿ ವಾದ ಮಂಡಿಸುವುದರಿಂದಲೇ ಮಾತ್ರ ಇದನ್ನು ಉಳಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ತಜ್ಞರು.
ಶರಣರ ದರ್ಶನಗಳಿಗೆ ಶರಧಿ ದಾಟುವ ಭಾಗ್ಯ
*900 ಪುಟಗಳಲ್ಲಿ 2500 ವಚನ
*ಫ್ರೆಂಚ್, ಸ್ಪ್ಯಾನಿಷ್, ಚೈನೀಸ್‌ಗೆ
*ಮೂರು ವರ್ಷದಲ್ಲಿ ಶರಣದರ್ಶನ
ಅಚ್ಚ ಕನ್ನಡದ ಸೊಗಡು, ಗ್ರಾಮ್ಯ ಜೀವನಶೈಲಿಯನ್ನು ಹೊಸ ಶೈಲಿಯಲ್ಲಿ ಬರೆದು ಕನ್ನಡವನ್ನು ಶ್ರೀಮಂತಗೊಳಿಸಿದ ಶರಣರ ವಚನಗಳು ಇದೀಗ ನಾಡಿನ ಎಲ್ಲೆಯನ್ನೂ ದಾಟಿ, ದೇಶ-ವಿಶ್ವಭಾಷೆಗಳನ್ನು ಸಮೃದ್ಧಗೊಳಿಸಲಿವೆ.
ಬೆಂಗಳೂರಿನ ಬಸವಸಮಿತಿಯು ರಾಜ್ಯ ಸರ್ಕಾರದ ಸಹಾಯದಡಿ ಕೈಗೊಂಡ ಮಹತ್ವ ಪೂರ್ಣ ಯೋಜನೆ ಮುಕ್ತಾಯಗೊಂಡರೆ 25 ಭಾಷೆಗಳಲ್ಲಿ ವಚನದ ಸಾರಸತ್ವ ಪರಿಚಿತಗೊಳ್ಳಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಒಂದು ಕೋಟಿ ರೂ. ನೀಡಿದ್ದು, ಅನುವಾದ ಕಾರ್ಯ ಭರದಿಂದ ಸಾಗುತ್ತಿದೆ.
12 ಶತಮಾನದ ಕಾಯಕ ಜೀವಿಗಳ ಚಳವಳಿ ಕನ್ನಡ ಸಾಹಿತ್ಯಕ್ಕೆ, ಸಂಸ್ಕೃತಿಗೆ ಹೊಸತನ ತಂದುಕೊಟ್ಟಿತು. ಸಾಮಾಜಿಕ ಉತ್ಕ್ರಾಂತಿಗೂ ಕಾರಣವಾಯಿತು. ಅಂತಹ ವಚನಗಳು ಕನ್ನಡಿಗರ ಆಡುಮಾತಿನ ಲಯದಲ್ಲಿ ಸೇರಿಕೊಂಡು ಬಿಟ್ಟವು. ಆದರೆ ಸೋದರ ಭಾಷೆಗಳಿಗೆ, ವಿದೇಶಿ ಭಾಷೆಗಳಿಗೆ ಅವನ್ನು ಅನುವಾದ ಮಾಡುವ ಗೊಡವೆಗೆ ಯಾರೂ ಹೋಗಲಿಲ್ಲ. ಇಂಗ್ಲಿಷಿಗೆ ಕೆಲವು ವಚನಗಳು ಅನುವಾದಗೊಂಡರೂ ಅದರಲ್ಲಿ ಸಮಗ್ರ ವಚನಗಳಿರಲಿಲ್ಲ. ಆ ಕೊರತೆಯನ್ನು ತುಂಬುವ ಕೆಲಸವನ್ನು ಬಸವ ಸಮಿತಿ ಮಾಡಲಿದೆ.
ಈಗ ಸಂಗ್ರಹಿತಗೊಂಡಿರುವ 23 ಸಾವಿರ ವಚನಗಳ ಪೈಕಿ 2500 ವಚನಗಳನ್ನು ಆಯ್ದು ಎಲ್ಲಾ ಭಾಷೆಯಲ್ಲೂ ಪ್ರಕಟಿಸುವ ಮಹತ್ವಾಕಾಂಕ್ಷಿ ಯೋಜನೆಯಿದು. ಸಂವಿಧಾನ ಅಂಗೀಕರಿಸಿದ ದೇಶದ 22 ಭಾಷೆಗಳಿಗೆ(ಕನ್ನಡ ಸೇರಿ) ಹಾಗೂ ವಿದೇಶ 4 ಭಾಷೆಗಳಿಗೆ ಇವಿಷ್ಟು ವಚನಗಳನ್ನು ಹಂತಹಂತವಾಗಿ ಅನುವಾದಿಸಲಾಗುತ್ತದೆ.
900 ಪುಟಗಳಷ್ಟು ೃಹತ್‌ಗ್ರಂಥವಾಗಿ ಇದು ಹೊರಹೊಮ್ಮಲಿದ್ದು, ವಚನ ಸಾಹಿತ್ಯದ ಹಿನ್ನೆಲೆಯನ್ನು ಪರಿಚಯಿಸುವ 110 ಪುಟಗಳ ಪೂರ್ವ ಪೀಠಿಕೆ ಇರಲಿದೆ. ವಚನಕಾರರ ಕಾಲದೇಶ, ಹಿನ್ನೆಲೆ ಸಹಿತ ಮುದ್ರಣಗೊಳ್ಳಲಿದೆ.
ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಷ್, ಚೈನೀಸ್ ಭಾಷೆಗಳಿಗೂ ವಚನಗಳು ಅನುವಾದಗೊಳ್ಳಲಿವೆ. ಧಾರ್ಮಿಕ ವಚನಗಳಿಗಿಂತ ಸಾಮಾಜಿಕ ವಚನಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಕನ್ನಡ ವಿ.ವಿ. ವಿಶ್ರಾಂತ ಕುಲಪತಿ, ಪ್ರಾಧಿಕಾರದ ಸಮಗ್ರ ವಚನ ಸಂಪುಟಗಳ ಪ್ರಧಾನ ಸಂಪಾದಕರಾಗಿದ್ದ ಡಾ ಎಂ. ಎಂ. ಕಲಬುರ್ಗಿ ಈ ಅನುವಾದ ಕೈಂಕರ್ಯಕ್ಕೂ ಪ್ರಧಾನ ಸಂಪಾದಕರಾಗಿದ್ದಾರೆ. ಡಾವೀರಣ್ಣ ರಾಜೂರ, ಡಾಜಯಶ್ರೀ ದಂಡೆ ಇವರ ಜತೆಗಿದ್ದಾರೆ. ಕಲಬುರ್ಗಿ, ದೇಜಗೌ, ಪ್ರಧಾನಗುರುದತ್ತ, ಲಿಂಗದೇವರು ಹಳೆಮನೆ, ಉದಯನಾರಾಯಣಸಿಂಗ್, ಅರವಿಂದ ಜತ್ತಿ ಅವರನ್ನೊಳಗೊಂಡ ಮಾರ್ಗದರ್ಶಕ ಸಮಿತಿ ಜತೆಗೆ ನಿಂತಿದೆ.
ಸದ್ಯ 8 ಭಾಷೆಗೆ:
ಮೂರು ವರ್ಷದ ಅವಧಿಯಲ್ಲಿ 25 ಭಾಷೆಗಳಿಗೆ ಅನುವಾದಗೊಳ್ಳಲಿದ್ದರೂ ಆರಂಭದಲ್ಲಿ 8 ಭಾಷೆಗಳಿಗೆ ಅನುವಾದಿಸುವ ಕಾರ್ಯ ಭರದಿಂದ ಸಾಗಿದೆ. ಇಂಗ್ಲಿಷ್, ಹಿಂದಿ, ಸಂಸ್ಕೃತ, ತಮಿಳು, ತೆಲುಗು, ಪಂಜಾಬಿ, ಬಂಗಾಲಿ, ಮರಾಠಿ ಭಾಷೆಗಳಿಗೆ ಅನುವಾದಿಸಲು ಉಭಯ ಭಾಷಾ ತಜ್ಞರ ಪ್ರಧಾನ ಸಂಪಾದಕತ್ವದಲ್ಲಿ ಸಮಿತಿ ರಚಿಸಲಾಗಿದೆ. ಅನುವಾದಕರಿಗಾಗಿ ಕಮ್ಮಟಗಳು ನಡೆದಿವೆ. ಇವರು ಡಿಸೆಂಬರ್ ಅಂತ್ಯದೊಳಗೆ ಅನುವಾದಿಸಿ ಕೊಡಲಿದ್ದು, ಆನಂತರ ಆಯಾ ಭಾಷೆಯ ತಜ್ಞರು ಅನುವಾದಗಳ ಗುಣಮಟ್ಟವನ್ನು ಪರೀಕ್ಷಿಸಲಿದ್ದಾರೆ. ಆನಂತರವೇ ಮುದ್ರಣಕ್ಕೆ ಹೋಗಲಿದೆ.
136 ಶರಣರು:
12 ನೇ ಶತಮಾನದಿಂದೀಚಿಗೆ ವಿವಿಧ ಸಂಪಾದನಾಕಾರರು ಸುಮಾರು 136 ವಚನಕಾರರು ರಚಿಸಿದ 23 ಸಾವಿರ ವಚನಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಇಲ್ಲಿಯವರೆಗೆ ದಾಖಲೆಗೊಂಡಿರುವ ಎಲ್ಲಾ ವಚನಕಾರರನ್ನು ಒಳಗೊಳ್ಳುವ ಸಮಗ್ರ ಸಂಪುಟ ಇದಾಗಲಿದೆ. 900 ವರ್ಷಗಳ ಹಿಂದೆಯೇ ಆಗಬೇಕಾಗಿದ್ದ ಕೆಲಸವನ್ನು ಈಗ ಕೈಗೆತ್ತಿಕೊಂಡಿರುವುದ ತಮಗೆ ಸಮಾಧಾನ ತಂದಿದೆ. ಇಂಗ್ಲಿಷ್ ಹಾಗೂ ಹಿಂದಿಗೆ ಅನುವಾದಗೊಂಡರೆ ಉಳಿದ ಭಾಷೆಗೆ ಅನುವಾದ ಸುಲಭವೆಂಬ ಕಾರಣಕ್ಕೆ ಆ ಎರಡು ಭಾಷೆಗಳ ಅನುವಾದಕ್ಕೆ ಆದ್ಯತೆ ನೀಡಲಾಗಿದೆ ಎನ್ನುತ್ತಾರೆ ಅರವಿಂದ ಜತ್ತಿ.