Sunday, May 3, 2009

ದುಡ್ಡೇ ದೊಡ್ಡಪ್ಪ :ಜನ ಸತ್ರಪ್ಪ

`ಎಲ್ಲರೂ ಸಮಾನರು, ಕೆಲವು ಹೆಚ್ಚು ಸಮಾನರು' ಎಂಬುದು ಚುನಾವಣೆ ವೇಳೆ ಎಲ್ಲರಿಗೂ ಅರ್ಥವಾಗುತ್ತಿದೆ. ಲೋಕಸಭೆಗೆ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಘೋಷಿಸುತ್ತಿರುವ ತಮ್ಮ ಆಸ್ತಿ ಮೌಲ್ಯದ ಪ್ರಮಾಣ ಗಮನಿಸಿದರೆ ಸಾಮಾನ್ಯರು ಬೆರಗಾಗುವಷ್ಟಿದೆ. ಚುನಾವಣೆಯಿಂದ ಚುನಾವಣೆಗೆ ಆಸ್ತಿ ಪ್ರಮಾಣ ಹಿಮಾಲಯದಂತೆ ನಿತ್ಯವೂ ಏರುತ್ತಿದೆ.
ಘೋಷಿತ ಆಸ್ತಿಯೆಲ್ಲವೂ ಕೇವಲ ಶೋಕೇಸ್‌. ರಾಜಕಾರಣಿಗಳ ಹೆಸರಿನಲ್ಲಿಲ್ಲದ ಆಸ್ತಿಗೆ ಲೆಕ್ಕವೇ ಇಲ್ಲ. ಸಂಸ್ಥೆ, ಮಕ್ಕಳು, ಮೊಮ್ಮಕ್ಕಳು, ಅಳಿಯ, ದೂರದ ಬಂಧು, ನಂಬಿಗಸ್ತ ಭಂಟರ ಹೆಸರಿನಲ್ಲಿ ಮಾಡಿರುವ ಆಸ್ತಿ ಲೆಕ್ಕಕ್ಕೆ ನಿಲುಕುವುದಿಲ್ಲ. ಅಷ್ಟರಮಟ್ಟಿಗೆ ಆಸ್ತಿ ಕ್ರೋಢೀಕರಣ ರಾಜಕಾರಣಿಗಳಿಂದ ನಡೆಯುತ್ತಿದೆ. ತಮ್ಮ ಮುಂದಿನ 10 ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿಯನ್ನು ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧ್ಯವಿದೆ.
ಸರ್ಕಾರಿ ಗುತ್ತಿಗೆ ಮಾಡಲು ಬೇರೆಯವರಿಂದ ಸಾಲ ಪಡೆದವರು, ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡವರು, ರಾಜಕೀಯ ಪಕ್ಷಗಳಲ್ಲಿ ಬಾವುಟ ಕಟ್ಟಲು ಸೇರಿಕೊಂಡವರು ಇಂದು ಏನೇನೋ ಆಗಿ ಹೋಗಿದ್ದಾರೆ. ಪ್ರಧಾನಿ, ಮುಖ್ಯಮಂತ್ರಿ, ಸಚಿವ, ಶಾಸಕ, ಸಂಸದ ಹೀಗೆ ಯಾವುದಾದರೊಂದು ಪ್ರಾತಿನಿಧ್ಯವನ್ನು ಒಂದು ಅವಧಿ ಅನುಭವಿಸಿದವರು ಕರೋಡಪತಿ ಆಗಿದ್ದಾರೆ. ಇದು ಹೇಗೆ ಸಾಧ್ಯವಾಯಿತು?
ಅವರಿಗೆ ಬರುವ ಸಂಬಳದಲ್ಲಿ ಪೈಸೆ ಪೈಸೆ ಉಳಿಸಿದರೂ ಐದು ವರ್ಷದ ಅವಧಿ ಮುಗಿಯುವಷ್ಟರಲ್ಲಿ ಅಮ್ಮಮ್ಮಾ ಅಂದರೂ 10 ಲಕ್ಷ ಉಳಿತಾಯ ಮಾಡಬಹುದು. ಆದರೆ ಶಾಸಕ/ ಸಂಸದರಾದವರ ಆಸ್ತಿ ಅವರೇ ಘೋಷಿಸಿದಂತೆ ಕೋಟಿಗೆ ಮೀರಿರುತ್ತದೆ. ತೋಟ, ಐಷಾರಾಮಿ ಕಾರು, ಭರ್ಜರಿ ಬಂಗಲೆ ಎಲ್ಲವೂ ಅವರ ಬಳಿ ಸಂಗ್ರಹಿತಗೊಂಡಿರುತ್ತದೆ. ಆದರೆ ಲೆಕ್ಕಕ್ಕೆ ಸಿಗದ ಆಸ್ತಿ ಮೌಲ್ಯ ಅದೆಷ್ಟು ಕೋಟಿಗಳೋ ಬಲ್ಲವರಾರು?
ಅತೀ ಶ್ರೀಮಂತರು:
ಚುನಾವಣೆಗೆ ಸಲ್ಲಿಸಲಾದ ನಾಮಪತ್ರ ಜತೆ ಸಲ್ಲಿಸಿ ಆಸ್ತಿ ವಿವರ ನೋಡಿದರೆ ರಾಜಕಾರಣಿಗಳ ಶ್ರೀಮಂತಿಕೆ ಗೊತ್ತಾಗುತ್ತದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ರಾಜಗೋಪಾಲ್‌ ಆಸ್ತಿ ಮೌಲ್ಯ 299 ಕೋಟಿ ರೂ. ಎರಡನೇ ಸ್ಥಾನದಲ್ಲಿ ದೆಹಲಿ ದಕ್ಷಿಣದಿಂದ ಸ್ಪರ್ಧಿಸಿರುವ ಬಿ ಎಸ್ಪಿ ಅಭ್ಯರ್ಥಿ ಕರಣಸಿಂಗ್‌ ಇದ್ದು ಇವರ ಆಸ್ತಿ 150 ಕೋಟಿ ರೂ. ವಾಯುವ್ಯ ಮುಂಬೈನ ಎಸ್‌ಪಿ ಅಭ್ಯರ್ಥಿ 124 ಕೋಟಿ ಒಡೆಯರಾಗಿದ್ದರೆ, ತಿರುಪತಿಯಲ್ಲಿ ಕಣಕ್ಕೆ ಇಳಿದಿರುವ ಚಿರಂಜೀವಿ 88 ಕೋಟಿ ಆಸ್ತಿ ಮಾಲೀಕರಾಗಿದ್ದಾರೆ.
ಆಂಧ್ರದ ಹಾಲಿ ಸಿ ಎಂ ರಾಜಶೇಖರ ರೆಡ್ಡಿ 77 ಕೋಟಿ ಆಸ್ತಿ ಹೊಂದಿದ್ದರೆ, ಮಾಜಿ ಸಿ ಎಂ ಚಂದ್ರಬಾಬು ನಾಯ್ಡು 69 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಇದು ಇಡೀ ದೇಶದ ಶ್ರೀಮಂತ ಅಭ್ಯರ್ಥಿಗಳ ಯಾದಿ.
ಕರ್ನಾಟಕ ಮಟ್ಟದಲ್ಲಿ ಅತಿ ಹೆಚ್ಚು ಆಸ್ತಿ ಘೋಷಿಸಿಕೊಂಡಿರುವುದು ಬೆಂಗಳೂರು ಉತ್ತರ ಕ್ಷೇತ್ರದ ಜೆಡಿ ಎಸ್‌ ಅಭ್ಯರ್ಥಿ ಸುರೇಂದ್ರಬಾಬು. ಇವರದ್ದು ಪಿತ್ರಾರ್ಜಿತ ಆಸ್ತಿಯಾಗಿದ್ದು 239 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಬೆಂಗಳೂರು ದಕ್ಷಿಣದ ಪಕ್ಷೇತರ ಅಭ್ಯರ್ಥಿ ಕ್ಯಾಪ್ಟನ್‌ ಗೋಪಿನಾಥ್‌ 69 ಕೋಟಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 44 ಕೋಟಿ, ಮಾಜಿ ಸಚಿವ ದಾವಣಗೆರೆ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ 34 ಕೋಟಿ ಆಸ್ತಿ ಮೌಲ್ಯ ಘೋಷಿಸಿಕೊಂಡಿದ್ದಾರೆ. ಸುರೇಂದ್ರಬಾಬು, ಕ್ಯಾಪ್ಟನ್‌ ಗೋಪಿನಾಥ್‌ ರಾಜಕಾರಣಕ್ಕೆ ಹೊಸಬರು. ಒಬ್ಬರು ರಿಯಲ್‌ ಎಸ್ಟೇಟ್‌ ಮತ್ತೊಬ್ಬರು ವಿಮಾನಯಾನದಿಂದ ಸಂಪಾದಿಸಿದ ಹಣವನ್ನು ತೋರಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ರಾಘವೇಂದ್ರ 6 ಕೋಟಿ ಆಸ್ತಿ ಹೊಂದಿರುವುದಾಗಿ ಹೇಳಿದ್ದಾರೆ.
ಕೈಸೋತ ಜನ:
3-4 ಲಕ್ಷ ಜನಸಂಖ್ಯೆಯ ಪ್ರತಿನಿಧಿಯಾಗಿ ಶಾಸನಸಭೆಗೆ ಆಯ್ಕೆಯಾಗುವ ಶಾಸಕ, 10-19 ಲಕ್ಷ ಮತದಾರರ ಪ್ರತಿನಿಧಿಯಾಗಿ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಆಸ್ತಿ ಗಳಿಕೆ ಕೋಟಿ ಕೋಟಿಗಳಿದ್ದರೆ `ಮತದಾರ ಪ್ರಭು' ನಿಜಕ್ಕೂ ಕುಚೇಲನಾಗಿದ್ದಾನೆ. ಆತನ ಬಳಿ ಅವಲಕ್ಕಿಯಾಗಲಿ, ಗಂಟಲೊಣಗಿಸಿ, ಹಸಿವು ಇಂಗಿಸುವ ಗಂಜಿಯಾಗಲಿ ಇಲ್ಲ. ಅಷ್ಟು ಬರ್ಬಾದ್‌ ಎದ್ದು ಹೋಗಿದ್ದಾನೆ ಮತದಾರ.
ದೇಶದ ಶೇ.62 ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಭವಿಷ್ಯದ ಯಾವ ಕನಸುಗಳೂ ಇಲ್ಲ. ಕೃಷಿಯಲ್ಲಿ ತೊಡಗಿರುವ ಶೇ.40 ರಷ್ಟು ರೈತರು ಕೃಷಿಯಿಂದ ದೂರ ಹೋಗಲು ಹವಣಿಸುತ್ತಿದ್ದಾರೆ. ಶೇ.49 ರಷ್ಟು ಗ್ರಾಮೀಣ ಕುಶಲಕರ್ಮಿಗಳು ತಮ್ಮ ಉದ್ಯೋಗ ಬಿಟ್ಟು ಹೊಟ್ಟೆ ಪಾಡಿಗೆ ಪೇಟೆಯತ್ತ ಮುಖಮಾಡಿದ್ದಾರೆ.
ಇನ್ನೂ ಕೂಡ ದೇಶದ ಶೇ.56 ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿ ಈ ಪ್ರಮಾಣ ಶೇ.8 ರಷ್ಟು ಹೆಚ್ಚಳವಾಗಿದೆ. ಶೇ.63 ಗರ್ಭಿಣಿಯರು ರಕ್ತಿಹೀನತೆಗೆ ತುತ್ತಾಗಿದ್ದು ಭವಿಷ್ಯದ ಪ್ರಜೆಗಳ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ. ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಶೇ.82.7 ರಷ್ಟಿದ್ದು ದಂಗು ಬಡಿಸುವ ರೀತಿಯಲ್ಲಿದೆ. 1998ರಲ್ಲಿ 70 ರಷ್ಟಿದ್ದ ಈ ಪ್ರಮಾಣ 2006 ರಲ್ಲಿ 82 ಕ್ಕೇರಿದೆ.
15-49ವರ್ಷ ವಯೋಮಿತಿಯ ಶೇ.60 ರಷ್ಟು ಮಹಿಳೆಯರು ಆರನೇ ತರಗತಿಯವರೆಗೆ ಹಾಗೂ ಹೀಗೂ ಓದಿದ್ದಾರೆ. ಇವರ ಪೈಕಿ ಶೇ.28 ರಷ್ಟು ಮಹಿಳೆಯರು ಮಾತ್ರ 10 ತರಗತಿಯವರೆಗೆ ಓದಿದ್ದಾರೆ. ಶೇ.34 ರಷ್ಟು ಮಹಿಳೆಯರು ಶಾಲೆ ಮೆಟ್ಟಿಲು ಹತ್ತಿಲ್ಲ. ಇವೆಲ್ಲವೂ ಸ್ವಾತಂತ್ರ್ಯ 60 ವರ್ಷಗಳಲ್ಲಾಗಿರುವ ಸಾಧನೆ.
1995 ರಿಂದ 2007ರ ಅವಧಿಯಲ್ಲಿ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1,66,304. 1991ರಲ್ಲಿ ಶೇ.26 ರಷ್ಟು ರೈತರು ಸಾಲಗಾರರಾಗಿದ್ದರೆ, 2003ರಲ್ಲಿ ಈ ಪ್ರಮಾಣ ಶೇ.48.6 ರಷ್ಟಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮಿಕ್ಷೆ ವಿವರಿಸಿದೆ. 2006-07ರಲ್ಲಿ ದೇಶದ 200 ಜಿಲ್ಲೆಗಳಲ್ಲಿ 2.11 ಕೋಟಿ ಕುಟುಂಬದವರು ತಮಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಒದಗಿಸಿದೆ ಎಂದು ಕೋರಿದ್ದಾರೆ.
ಇಡೀ ದೇಶದ ಶೇ.47 ರಷ್ಟು ಜನರು ದಿನಕ್ಕೆ ಕನಿಷ್ಠ 20 ರೂ. ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜೀವನನಿರ್ವಹಣಾ ವೆಚ್ಚ ದುಪ್ಪಟ್ಟಾಗಿದ್ದರೂ ಆದಾಯ ಮಧ್ಯಮ ವರ್ಗದವರ ಆದಾಯದ ಮಟ್ಟ ಏರಿಕೆಯಾಗಿಲ್ಲ.
ಯುಪಿ ಎ ಸರ್ಕಾರದ ಅವಧಿಯಲ್ಲಿ 400 ವಿಶೇಷ ಆರ್ಥಿಕ ವಲಯ ಮಂಜೂರು ಮಾಡಲಾಗಿದೆ. ತಮ್ಮ ಗಂಜಿಗೆ ಅಕ್ಕಿ, ಮುದ್ದೆಗೆ ರಾಗಿ, ರೊಟ್ಟಿಗೆ ಗೋಧಿ,ಜೋಳ ಬೆಳೆಯುತ್ತಿದ್ದ ಭೂಮಿಯನ್ನು ಕಳೆದುಕೊಂಡ ರೈತರು ನಗರದತ್ತ ಗುಳೆ ಹೊರಟಿದ್ದಾರೆ. ಸ್ವಾಭಿಮಾನಿ ಬದುಕು ನಡೆಸುತ್ತಿದ್ದ ರೈತರು, ಕುಶಲಕರ್ಮಿಗಳು ಹಳ್ಳಿ ತೊರೆದು ನಗರ ಪ್ರದೇಶಗಳಲ್ಲಿ ಕಟ್ಟಡನಿರ್ಮಾಣ, ಸೆಕ್ಯುರಿಟಿ ಗಾರ್ಡ್‌ನಂತಹ ಕೆಲಸಗಳಲ್ಲಿ ಅನಿವಾಯವಾಗಿ ತೊಡಗಿಕೊಂಡಿದ್ದಾರೆ. ಹಳ್ಳಿಗಳು ವೃದ್ಧಾಶ್ರಮಗಳಾಗಿ ಪರಿವರ್ತನೆಯಾಗಿವೆ.
ಯಾರ ಅಭಿವೃದ್ಧಿ:
ದೇಶದ ಕೃಷಿ ಬೆಳವಣಿಗೆ ದರ ಶೇ.4 ರಷ್ಟು ಆಗಬೇಕೆಂಬ ಗುರಿಯಿದ್ದರೂ ಆಗಿರುವು ಶೇ.1.85 ಮಾತ್ರ. ಆರ್ಥಿಕ ಬೆಳವಣಿಗೆ ದರ 9 ಆಗಬೇಕೆಂದಿದ್ದರೂ ಶೇ.7 ರ ಗಟಿ ದಾಟಿಲ್ಲ. ಮುಂದಿನ ದಿನಗಳಲ್ಲಿ ಅದು 5.6 ಕ್ಕೆ ಇಳಿಯಲಿದೆ.
ಸ್ವಾತಂತ್ರ್ಯ ಇಷ್ಟು ವರ್ಷಗಳಲ್ಲಿ ಯಾರ ಅಭಿವೃದ್ಧಿಯಾಗಿದೆ. ಶೇ.15 ರಷ್ಟು ಮಂದಿ ಮಾತ್ರ ಅಭಿವೃದ್ಧಿಯ ಫಲವುಂಡಿದ್ದು ಉಳಿದೆಲ್ಲಾ ಮಂದಿ ದೈನೇಸಿ ಸ್ಥಿತಿಯಲ್ಲಿದ್ದಾರೆ. ಪಿತ್ರಾರ್ಜಿತ ಆಸ್ತಿ ಹೊಂದಿದವರು ರಿಯಲ್‌ ಎಸ್ಟೇಟ್‌ನಿಂದಾಗಿ ದಿಢೀರ್‌ ಶ್ರೀಮಂತರಾಗಿದ್ದಾರೆ. ಬಂಡವಾಳಶಾಹಿಗಳು ಹಣ ಹೂಡಿ ಲಾಭ ಗಳಿಸಿದ್ದಾರೆ. ಆದರೆ ನಮ್ಮಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಹಣ ಹೂಡಿ, ಗೆದ್ದ ಮೇಲೆ ಭ್ರಷ್ಟಾಚಾರದಿಂದ ಹಣ ಗಳಿಸುವ ಹೊಸ ಬಂಡವಾಳ ಪದ್ಧತಿಯನ್ನು ಕಂಡು ಹಿಡಿದಿದ್ದಾರೆ. ಪ್ರತಿ ಚುನಾವಣೆಯಲ್ಲೂ ಮತದಾರ ಶಪಿಸುತ್ತಾ ಮತ ಹಾಕುತ್ತಿದ್ದಾನೆ. ಮತ ಪಡೆದು ಆಯ್ಕೆಯಾದವರು ನಿತ್ಯವೂ ತಮ್ಮ ಬೊಕ್ಕಸ ತುಂಬಿಸಿ ಕೊಳ್ಳುತ್ತಾ, ಆಸ್ತಿಯ ಅಗಲವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.
ಶಾಸಕರು, ಸಂಸದರೇ ಜನರ ನಿಜವಾದ ಪ್ರತಿನಿಧಿಗಳು. ಅವರು ಶ್ರೀಮಂತರಾದರೆ ಜನರೂ ಶ್ರೀಮಂತರಾದಾರು ಎಂದು ಭಾವಿಸಿದರೆ ತಪ್ಪಾಗಲಿಕ್ಕಿಲ್ಲವಲ್ಲವೇ?

ಮತಸಮರ-ಪ್ರಗತಿಗೆ ಜ್ವರ

`ಹಸ್ತಕ್ಕೆ ಮತ ದೇಶಕ್ಕೆ ಹಿತ, ಬಿಜೆಪಿಯೊಂದೇ ಪರಿಹಾರ, ರೈತರ ಸರ್ಕಾರ ಜನತಾದಳ ಸಾಕಾರ'
ಐದು ವರ್ಷಕ್ಕೊಮ್ಮೆ ಕಿವಿಗಮರುತ್ತಿದ್ದ ಇಂತಹ ಸವಕಲು ಘೋಷಣೆಗಳು ಈಗ ಮೂರು-ಆರು ತಿಂಗಳಿಗೊಮ್ಮೆ ಕೇಳುತ್ತಿವೆ. ಘೋಷಣೆಗಳು-ಭರವಸೆಗಳು ಆಕರ್ಷಣೆ ಕಳೆದುಕೊಳ್ಳುತ್ತಿವೆ. ದಿನಾ ಸಾಯೋರಿಗೆ ಅಳೋರ್ಯಾರು ಎಂಬುದು ಚುನಾವಣೆ ಬಗ್ಗೆ ಜನರಾಡುತ್ತಿರುವ ಕ್ಲೀಶೆಯಾಗಿರುವ ಟೀಕೆ. ಹೋದೆಯಾ ಪಿಶಾಚಿ ಅಂದ್ರೆ ಬಂದೇ ಗವಾಕ್ಷಿಲಿ ಎಂಬಂತೆ ಮತ್ತೆ ಮತ್ತೆ ಬರುತ್ತಲೇ ಇದೆ.
ಚುನಾವಣೆ: ಇದು ಮುಗಿಯುವುದಲ್ಲ, ನಡೆಯುತ್ತಿರುವುದು, ನಡೆಯುತ್ತಲೇ ಇರುವುದು ಎಂಬುದು ಇತ್ತೀಚಿನ ವಿದ್ಯಮಾನ. 2008ರ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದ ನಂತರ ಈಗ ಎರಡನೇ ಬಾರಿ ಇಡೀ ರಾಜ್ಯದಲ್ಲಿ ಮತ ಸಮರ ನಡೆಯುತ್ತಿದೆ. ಈಗಿನ ಫಲಿತಾಂಶ ಆಧರಿಸಿ ಇನ್ನಾರು ತಿಂಗಳೊಳಗೆ ಮತ್ತೆ ಚುನಾವಣೆ ಬರಲಿದೆ. ಅದಕ್ಕೆ ಅಂಟಿಕೊಂಡೇ ಎರಡು ವರ್ಷದಿಂದ ಬಾಕಿಯುಳಿದಿರುವ ಬೆಂಗಳೂರು ಮಹಾನಗರ ಪಾಲಿಕೆಗೂ ಚುನಾವಣೆ ನಡೆಯಬೇಕಿದೆ.
ಹೀಗೆ ವರ್ಷದುದ್ದಕ್ಕೂ ಮತಕ್ಕಾಗಿ ರಾಜಕಾರಣಿಗಳು ಮುಗಿಬೀಳುವುದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಬೀಳುವುದಿಲ್ಲವೇ ಎಂಬುದು ನಾಗರಿಕರು ರಾಜಕಾರಣಿಗಳಿಗೆ ಕೇಳಬೇಕಾದ ಪ್ರಶ್ನೆ.
2004ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಆಗ ಯಾವ ಪಕ್ಷವೂ ಸ್ಪಷ್ಟ ಬಹುಮತ ಗಳಿಸಲಿಲ್ಲ. ಕಾಂಗ್ರೆಸ್‌-ಜೆಡಿ ಎಸ್‌, ಜೆಡಿ ಎಸ್‌-ಬಿಜೆಪಿ ಪಕ್ಷಗಳ `ಕೂಡಿಕೆ' ಸರ್ಕಾರಗಳನ್ನು ಜನ ನೋಡಿದರು. ಏನೆಲ್ಲಾ ಸರ್ಕಸ್‌ ಮಧ್ಯೆಯೂ ಐದು ವರ್ಷವನ್ನು ಪೂರ್ಣಗೊಳಿಸಲು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗಲೇ ಇಲ್ಲ. ವಿಧಾನಸಭೆ ವಿಸರ್ಜನೆಯಾಗಿ ಮತ್ತೆ ಚುನಾವಣೆ ಎದುರಾಯಿತು.
ಮಾಯಗಾರರು ಜನರ ಮುಂದೆ ಮೋಡಿ ಮಾಡಿದರೂ ಮತದಾರ ಸ್ಪಷ್ಟ ಬಹುಮತ ಕೊಡಲಿಲ್ಲ. ಆದರೆ ಜನರ ನಿಜವಾದ ಆಯ್ಕೆ ಬಿಜೆಪಿಯಾಗಿತ್ತು. 110 ಸ್ಥಾನಗಳಿಸಿದ್ದ ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಮೂರು ಸ್ಥಾನ ಕಡಿಮೆಯಿತ್ತು. `ಸುಭದ್ರ' ಸರ್ಕಾರ ಸ್ಥಾಪನೆಯ ದೃಷ್ಟಿಯಿಂದ ಆಪರೇಶನ್‌ ಕಮಲ ಶುರುವಾಯಿತು. ದುಪುದುಪು ಅಂತ ಒಬ್ಬೊಬ್ಬ ಶಾಸಕರೇ ರಾಜೀನಾಮೆ ಕೊಟ್ಟು ಚುನಾವಣೆಗೆ ಅನುವು ಮಾಡಿಕೊಟ್ಟರು. ಕೆಲವರು ಮಂತ್ರಿ ಮಹೋದಯರಾದರು, ಮತ್ತೆ ಕೆಲವರು ನಿಗಮ ಮಂಡಳಿಗೆ ಬಂದು ಕೂತರು. ರಾಜೀನಾಮೆ ಕೊಟ್ಟು `ಜನರಾಯ್ಕೆ'ಯನ್ನು ತಾವೇ ತಿರಸ್ಕರಿಸಿದರೂ ಸರ್ಕಾರಿ ಸವಲತ್ತುಗಳು ಅನುಭವಿಸಿದರು.
ಯಡಿಯೂರಪ್ಪನವರ ಕುರ್ಚಿ ಭದ್ರವಾಗಿಲು ಬೇಕಿದ್ದ ಮೂರು ಶಾಸಕರ ಬದಲಿಗೆ ಏಳು ಮಂದಿ ರಾಜೀನಾಮೆ ಕೊಟ್ಟರು. ಅಭಿವೃದ್ಧಿಗೆ ಬೆಂಬಲಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದರು.
ಮಧುಗಿರಿಯಲ್ಲಿ ಗೌರಿಶಂಕರ್‌, ತುರುವೇಕೆರೆಯಲ್ಲಿ ಜಗ್ಗೇಶ್‌, ದೊಡ್ಡಬಳ್ಳಾಪುರದಲ್ಲಿ ಜೆ.ನರಸಿಂಹಸ್ವಾಮಿ, ಹುಕ್ಕೇರಿಯಲ್ಲಿ ಉಮೇಶ ಕತ್ತಿ, ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ, ಕಾರವಾರದಲ್ಲಿ ಆನಂದ ಆಸ್ನೋಟಿಕರ್‌, ದೇವದುರ್ಗದಲ್ಲಿ ಶಿವನಗೌಡ ನಾಯಕ್‌ ರಾಜೀನಾಮೆಯಿತ್ತು ಬಿಜೆಪಿಯಿಂದ ಮರು ಆಯ್ಕೆ ಬಯಸಿದ್ದರು. ಮದ್ದೂರಿನಲ್ಲಿ ಶಾಸಕ ಸಿದ್ದರಾಜು ಆಕಸ್ಮಿಕ ಮರಣದಿಂದ ಅಲ್ಲೂ ಚುನಾವಣೆ ನಡೆಯಿತು. ಈ ಎಂಟು ಸ್ಥಾನಗಳ ಪೈಕಿ ಬಿಜೆಪಿಯ ಐವರು ಹಾಗೂ ಜೆಡಿ ಎಸ್‌ನ ಮೂವರು ಗೆದ್ದರು. ಅಲ್ಲಿಗೆ ಸರ್ಕಾರ ಭದ್ರ, ಸುಭದ್ರವಾಯಿತು.
ಅಷ್ಟರಲ್ಲೇ ಮತ್ತೆ ಲೋಕಸಭೆ ಚುನಾವಣೆ ಎದುರಾಯಿತು. ರಾಜ್ಯದ 28 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ಮೇ 16 ರವರೆಗೂ ರಾಜಕಾರಣಿಗಳು, ಸರ್ಕಾರಿ ಯಂತ್ರಾಂಗ, ಸರ್ಕಾರಿ ನೌಕರರು ಇದರಲ್ಲಿ ತಲ್ಲೀನರಾಗಿದ್ದಾರೆ.
ಹಾಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ಬೆನ್ನಲ್ಲೇ ವಿಧಾನಸಭೆಗೆ ಮತ್ತೆ ಉಪ ಚುನಾವಣೆ ಬರಲಿದೆ. ಔರಾದ್‌ ಕಾಂಗ್ರೆಸ್‌ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ರಾಜೀನಾಮೆ ನೀಡ ಬೀದರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಚುನಾವಣೆ ದಿನಾಂಕಕ್ಕೆ 45 ದಿನಗಳ ಮೊದಲೇ ಇವರು ರಾಜೀನಾಮೆ ಸಲ್ಲಿಸಿದ್ದರಿಂದಾಗಿ ಲೋಕಸಭೆ ಚುನಾವಣೆ ಜತೆಗೆ ಅವರು ರಾಜೀನಾಮೆ ನೀಡಿದ ವಿಧಾನಸಭಾ ಕ್ಷೇತ್ರಕ್ಕೂ ಚುನಾವಣೆ ನಡೆಯುತ್ತಿದೆ. ಹಾಗಾಗಿ ಅದರಿಂದ ಹೆಚ್ಚಿನ ಹೊರೆಯಿಲ್ಲ.
ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಲು ಚನ್ನಪಟ್ಟಣದ ಕಾಂಗ್ರೆಸ್‌ ಶಾಸಕ ಸಿ.ಪಿ. ಯೋಗೀಶ್ವರ್‌ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಬೆಂಬಲಿಸಲು ಗೋವಿಂದರಾಜನಗರದ ಕಾಂಗ್ರೆಸ್‌ ಶಾಸಕ ವಿ.ಸೋಮಣ್ಣ ರಾಜೀನಾಮೆ ನೀಡಿದ್ದಾರೆ. ಇವರೆಡೂ ಕ್ಷೇತ್ರಕ್ಕೆ ಮತ್ತೆ ಉಪಚುನಾವಣೆ ನಡೆಯಲೇಬೇಕಿದೆ.
ಇದರ ಜತೆಗೆ ಬೆಂಗಳೂರು ಗ್ರಾಮಾಂತರದಲ್ಲಿ ರಾಮನಗರ ಶಾಸಕ ಎಚ್‌.ಡಿ. ಕುಮಾರಸ್ವಾಮಿ, ಬೆಂಗಳೂರು ಕೇಂದ್ರದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್‌ಅಹಮದ್‌ಖಾನ್‌, ಬೆಂಗಳೂರು ದಕ್ಷಿಣದಲ್ಲಿ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ, ಗುಲ್ಬರ್ಗಾದಲ್ಲಿ ಶಾಸಕ ಮಲ್ಲಿಕಾರ್ಜುನ ಖರ್ಗೆ, ಸಚಿವ ರೇವುನಾಯಕ್‌ ಬೆಳಮಗಿ, ಚಾಮರಾಜನಗರದಲ್ಲಿ ಕೊಳ್ಳೇಗಾಲ ಶಾಸಕ ಆರ್‌.ಧ್ರುವನಾರಾಯಣ್‌ ಸ್ಫರ್ಧೆಯಲ್ಲಿದ್ದಾರೆ.
ಇವರ ಪೈಕಿ ಯಾರೇ ಲೋಕಸಭೆಗೆ ಆರಿಸಿ ಹೋದರೂ ಆ ಕ್ಷೇತ್ರದಲ್ಲಿ ಮತ್ತೆ ಶಾಸಕರ ಆಯ್ಕೆಗಾಗಿ ಉಪ ಚುನಾವಣೆಯ ಭೂತ ಕಾಡಲಿದೆ. ಮತ್ತೆ ಹಳೇ ಸವಕಲು ಘೋಷಣೆಗಳು, ಹಣ-ಹೆಂಡದ ಹೊಳೆ, ಈಡೇರದ ಭರವಸೆಗಳ ಠೇಂಕಾರ ಕೇಳಿಸಲಿದೆ.
ಪರಸ್ಪರ ಆರೋಪ, ಪ್ರತ್ಯಾರೋಪ, ದೂಷಣೆ, ಕೈ ಕಡೀತಿನಿ, ಕಾಲು ಕಡಿತೀನಿ, ತಲೆ ಕತ್ತರಿಸುವಿಕೆಯ ಬೂಟಾಟಿಕೆಗಳ ಅಬ್ಬರವನ್ನು ಮುಗ್ಧ ಮತದಾರ ತಣ್ಣಗೆ ಕೇಳಿಸಿಕೊಳ್ಳಬೇಕಿದೆ. ಮತ್ತೆ ಅದೇ ಹಣವಂತರು, ರಿಯಲ್‌ ಎಸ್ಟೇಟ್‌ ಕುಳಗಳು ವಿಧಾನಸಭೆಗೆ ಆರಿಸಲಿದ್ದಾರೆ. ರಾಜಕೀಯ ಚದುರಂಗದಾಟದಲ್ಲಿ ಸಾಮಾನ್ಯ ಮತದಾರನಿಗೆ ಪೊಳ್ಳು ಘೋಷಣೆಗಳ ಹೊರತು ಮತ್ತೇನು ಸಿಗದು.
ಪ್ರಗತಿಗೆ ಜ್ವರ:
ಹೀಗೆ ಮೇಲಿಂದ ಮೇಲೆ ಚುನಾವಣೆಗಳು ಬರುತ್ತಿದ್ದರೆ ಅದರ ಪರಿಣಾಮ ರಾಜ್ಯದ ಅಭಿವೃದ್ಧಿಯ ಮೇಲೆ ಆಗುತ್ತದೆ. ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಸಚಿವ ಸಂಪುಟ ಸದಸ್ಯರು, ಹಿರಿ-ಕಿರಿ ಅಧಿಕಾರಿಗಳು ಚುನಾವಣೆಯಲ್ಲಿ ನಿರತರಾಗುವುದರಿಂದ ಯಾವ ಸರ್ಕಾರಿ ಕಡತಗಳು ಧೂಳಿಂದ ಮೇಲೇಳುವುದಿಲ್ಲ.
ಲೋಕಸಭೆ ಚುನಾವಣೆ ಘೋಷಣೆಯಾದ ಮಾರ್ಚ್‌ 2 ರಿಂದ ನೀತಿ ಸಂಹಿತೆ ಜಾರಿಯಿದ್ದು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಹೊಸದಾಗಿ ಅನುಷ್ಠಾನ ಮಾಡುವಂತಿಲ್ಲ. ಘೋಷಣೆ ದಿನಾಂಕಕ್ಕಿಂತ ಮೊದಲು ಮಂಜೂರಾದ ಕಾಮಗಾರಿಗಳನ್ನು ಮಾತ್ರ ಮಾಡಬಹುದಾಗಿದೆ ವಿನಃ ಹೊಸ ಕಾಮಗಾರಿಗಳಿಗೆ ಚಾಲೂ ನೀಡುವಂತಿಲ್ಲ.
ಜಾನಪದ ಜಾತ್ರೆ, ಸರ್ಕಾರದಿಂದ ನೀಡುವ ವಿವಿಧ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುವ ಅನುದಾನ, ಕಲಾವಿದರಿಗೆ ಬೇಕಾದ ಅನುಕೂಲ ಇವ್ಯಾವನ್ನು ಮಾಡುವಂತಿಲ್ಲ. ಎಲ್ಲದಕ್ಕೂ ನೀತಿ ಸಂಹಿತೆ ಅಡ್ಡಿ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಲಭ್ಯವಾಗುವ ಅನುದಾನವನ್ನು ಬಿಡುಗಡೆ ಮಾಡುವಂತಿಲ್ಲ.
ರಸ್ತೆ, ಬೀದಿದೀಪ, ಕುಡಿಯುವ ನೀರಿನಂತ ಮೂಲಭೂತ ಸೌಲಭ್ಯಗಳನ್ನು ಮರೆತು ಬಿಡೋಣ. ಆದರೆ ಹೃದ್ರೋಗ, ಕಿಡ್ನಿ ಕಾಯಿಲೆಯಂತ ಗಂಭೀರ ಸ್ವರೂಪದಲ್ಲಿ ತುರ್ತು ಚಿಕಿತ್ಸೆ ಬಯಸುವ ಬಡರೋಗಿಗಳು ಮುಖ್ಯಮಂತ್ರಿಯಿಂದ ಹಣ ಯಾಚಿಸುವಂತಿಲ್ಲ. ಎಲ್ಲವೂ ನೀತಿ ಸಂಹಿತೆಯ ವ್ಯಾಪ್ತಿಗೆ ಒಳಪಡುವುದರಿಂದ ಯಾವುದೇ ಸಹಾಯವೂ ಲಭ್ಯವಿಲ್ಲ.
ಅನಿವಾರ್ಯ ಸಂದರ್ಭದಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲೇಬೇಕಾದ ತುರ್ತಿರುವ ಸರ್ಕಾರಿ ನೌಕರರು ಪದೇ ಪದೇ ಬರುವ ಚುನಾವಣೆಯಿಂದ ಸಂತ್ರಸ್ತರಾಗಿದ್ದಾರೆ. ಸರ್ಕಾರದ ಮಟ್ಟದಲ್ಲಿ ಲಾಬಿ ಮಾಡುವ ಛಾತಿಯುಳ್ಳ ನೌಕರರದ್ದು ಒಂದು ಪಾಡು. ಹಣ, ರಾಜಕೀಯ ಪ್ರಭಾವ ಇಲ್ಲದ ನೌಕರರದ್ದು ಮತ್ತೊಂದು ಪಾಡು. ಪ್ರತಿವರ್ಷ ಏಪ್ರಿಲ್‌-ಮೇ ನಲ್ಲಿ ಸಾಮಾನ್ಯ ವರ್ಗಾವಣೆ ನಡೆಯುತ್ತದೆ. ಆದರೆ ಈ ಬಾರಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಯಾವುದೇ ವರ್ಗಾವಣೆ ಮಾಡುವಂತಿಲ್ಲ. ಮೇ 16 ಕ್ಕೆ ಚುನಾವಣೆ ಮುಗಿಯುತ್ತದಾದರೂ ಶೈಕ್ಷಣಿಕ ವರ್ಷ ಆರಂಭವಾಗುವುದರಿಂದ ಆಗಲೂ ವರ್ಗಾವಣೆ ಕನಸನ್ನು ನೌಕರರು ಮಡಿಚಿಡಬೇಕು. ವೃದ್ಧ ತಂದೆತಾಯಿ ಹೊಂದಿರುವವರು, ಸತಿ-ಪತಿ ಪ್ರಕರಣ, ಅನಾರೋಗ್ಯ ಮಕ್ಕಳನ್ನು ಹೊಂದಿರುವವರು, ವ್ಕ್ರೆಯಕ್ತಿಕವಾಗಿ ಕಾಯಿಲೆಯಿಂದ ಬಸವಳಿದ ಸರ್ಕಾರಿ ನೌಕರರು ವರ್ಗಾವಣೆಗೆ ಪರದಾಡಬೇಕಾಗಿದೆ.
ಲೋಕಸಭೆ ಚುನಾವಣೆಯಿರುವುದರಿಂದ ಇಡೀ ರಾಜ್ಯಕ್ಕೆ ನೀತಿ ಸಂಹಿತೆ ಅನ್ವಯವಾಗಿದೆ. ಆದರೆ ಉಪಚುನಾವಣೆ ಕೆಲವೇ ಕ್ಷೇತ್ರಗಳಿಗೆ ಸೀಮಿತವಾಗುವುದರಿಂದ ಆಗಲೂ ಆಯಾ ಪ್ರದೇಶಕ್ಕೆ ನೀತಿ ಸಂಹಿತೆ ಜಾರಿಯಾಗುತ್ತದೆ. ಇದು ಆಯಾ ಕ್ಷೇತ್ರದ ಅಭಿವೃದ್ಧಿಗೆ ಹೊಡೆತ ನೀಡುತ್ತದೆ.
ಚುನಾವಣೆಗೆ ಸರ್ಕಾರ ವೆಚ್ಚ ಮಾಡುವ ಹಣ ಕೂಡ ಸಾರ್ವಜನಿಕರು ತಮ್ಮ ಬೆವರು ಬಸಿದು ಕಟ್ಟುವ ತೆರಿಗೆ ಮೂಲದ್ದು. ಅದು ಯಾರದ್ದೋ ದುಡ್ಡಲ್ಲ. ಸಾರ್ವಜನಿಕರ ಪ್ರತಿಯೊಂದು ಪೈಸೆಯನ್ನು ಎಚ್ಚರದಿಂದ ಖರ್ಚು ಮಾಡಬೇಕಾದ ಹೊಣೆಗಾರಿಕೆ ಹೊಂದಿರುವ ಸರ್ಕಾರ ಈ ರೀತಿ ದುಂದು ಮಾಡುವುದುದು ಎಷ್ಟು ಸರಿ?
ಚುನಾವಣೆ ಬಂದರೆ ಆಗಲಾದರೂ ರಸ್ತೆ, ನೀರು, ಚರಂಡಿ, ವಿದ್ಯುದ್ದೀಪ, ಅಗತ್ಯ ಕಾಮಗಾರಿಗಳನ್ನು ಸ್ಥಳೀಯ ರಾಜಕಾರಣಿಗಳು ಮಾಡಿಸುತ್ತಾರೆಂಬ ಎಂಬ ಮತ್ತೊಂದು ವಾದವೂ ಇದೆ. ಮತ ಯಾಚಿಸಲು ಹೋದಾಗ ಮತದಾರ ಪ್ರಭುವಿನ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸುವುದಕ್ಕಿಂತ ಮೊದಲೇ ಅಭಿವೃದ್ಧಿ ಕಾಮಗಾರಿ ಮಾಡಿಸಿ, ನಂತರ ಮತ ಕೇಳಲು ಹೋಗುವ ಹುನ್ನಾರದಿಂದಲೂ ಚುನಾವಣೆ ಬಂದರೆ ಒಳ್ಳೆಯದೆಂಬ ಮಾತೂ ಇದೆ.
ಆದರೆ ಒಟ್ಟಾರೆ ಚುನಾವಣೆ ಯಾರ ಸ್ವಾರ್ಥಕ್ಕೆ, ಯಾರ ಅನುಕೂಲಕ್ಕೆ ಎಂಬ ಪ್ರಶ್ನೆ ಮತದಾರನದು. ಅಲ್ಲಿಂದ ಇಲ್ಲಿಗೆ ಮರಕೋತಿಯಾಟವಾಡುವ, ಅಭಿವೃದ್ಧಿ ಮುಖವಾಡದಡಿ ತಮ್ಮ ಹಿತಾಸಕ್ತಿಯನ್ನು ಪೂರೈಸಿಕೊಳ್ಳುವ ರಾಜಕಾರಣಿಗಳು ಆಡುವ ಆಟಕ್ಕೆ ಚುನಾವಣಾ ಆಯೋಗವಾದರೂ ಕಡಿವಾಣ ಹಾಕಬೇಕಾಗಿದೆ. ಒಂದು ಚಿಹ್ನೆ, ಪಕ್ಷದಡಿ ಗೆದ್ದ ಅಭ್ಯರ್ಥಿ ಒಂದು- ಎರಡು-ಆರು ತಿಂಗಳಲ್ಲಿ ರಾಜೀನಾಮೆ ನೀಡಿ, ಮತ್ತೊಂದು ಪಕ್ಷದಿಂದ ಸ್ಪರ್ಧಿಸುವುದು, ಚುನಾವಣೆ ವೆಚ್ಚವನ್ನು ಜನರ ಮೇಲೆ ಹೇರುವುದು ಪ್ರಜಾತಂತ್ರ ವಿರೋಧಿಯಲ್ಲವೇ ಎಂಬ ಚರ್ಚೆಯನ್ನು ಆರಂಭಿಸಲಂತೂ ಇದು ಸಕಾಲ.

ಕುರುಡು ಕಾಂಚಾಣ

`ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತು'
ಚುನಾವಣೆಯಲ್ಲಿ ಒಂದು ಮತಕ್ಕಾಗಿ ಕಾಲಿಗೆ ಬೀಳುವವರು ಗೆದ್ದ ನಂತರ ತಲೆಮಾರಿಗಾಗುವಷ್ಟು ಸಂಪತ್ತು ಸಂಗ್ರಹಿಸಿ, ಕಾಂಚಾಣದ ಸುಪ್ಪತ್ತಿಗೆಯಲ್ಲೇ ಮರೆತು ಬಿಡುತ್ತಾರೆ.
ವಿಧಾಯಕ ರಾಜಕಾರಣದಲ್ಲಿ ಅಮೂಲ್ಯ `ಮತ' ಗಳಿಸಲು ಕುರುಡು ಕಾಂಚಾಣ ದೆವ್ವಂಗುಣಿತ ಮಾಡಿದೆ. ಚುನಾವಣೆ ಮುಖೇನ `ವಿಧೇಯಕ'ರಾಗುವವರು ಹಣದ ಆಮಿಷಕ್ಕೆ ಮತವನ್ನು ಖರೀದಿಸುವುದರಿಂದ ಅವರು ರೂಪಿಸುವ ನಿಯಮ, ಶಾಸನಗಳೆಲ್ಲ ಹಣಾವಲಂಬಿಯೇ ಆಗುತ್ತದೆ.
`ಜ್ಯೋತಿಯ ಮಣಿ ದೀಪಗಳಲ್ಲಿ
ಕತ್ತಲು ಕಗ್ಗತ್ತಲು ಇಲ್ಲಿ
ಕೂಳನು ಹೆಮ್ಮೆಗೆ ಬಿಸುಡುವರಲ್ಲಿ
ಹೊಟ್ಟೆಗೆ ಇಲ್ಲದೆ ಕೊರಗುವರಿಲ್ಲಿ'
ಎಂಬ ಪರಿಸ್ಥಿತಿ ಅರವತ್ತು ವರ್ಷಗಳಲ್ಲಿ ಬದಲಾಗಲೇ ಇಲ್ಲ. ಹಣದ ಥೈಲಿ ಅಷ್ಟು ಭರ್ಜರಿಯಾಗಿ ನರ್ತನ ಮಾಡುತ್ತಿದ್ದರೆ, ಬಡವರು ಮತ್ತಷ್ಟು ಸೊರಗುತ್ತಿದ್ದಾರೆ.
ಮೊದಲ ಹಂತದಲ್ಲಿ ನಡೆದ 17 ಲೋಕಸಭಾ ಕ್ಷೇತ್ರಗಳ ಚುನಾವಣೆ ಹೊತ್ತಿಗೆ ಸುಮಾರು 23 ಕೋಟಿ ರೂ. ಮೌಲ್ಯದ ನಗದು, ಆಭರಣಗಳು ವಶವಾಗಿವೆ.
ಮತದಾರನಿಗೆ ಹಂಚಲು ತಂದಿದ್ದ ಒಂದು ಕೋಟಿ ಮೌಲ್ಯದ ಚಿನ್ನಾಭರಣ, 80 ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಈವರೆಗೆ ವಶಪಡಿಸಿಕೊಳ್ಳಲಾಗಿದೆ. ಅಧಿಕೃತ ಲೆಕ್ಕವಿದಾದರೂ ಪೊಲೀಸರ ಕರಾಮತ್ತನ್ನು ಬಲ್ಲವರು ಹೇಳುವಂತೆ ಇದು ಸರಿಸುಮಾರು ದುಪ್ಪಟ್ಟಾಗಿರುತ್ತದೆ.
ಐನೂರು, ಸಾವಿರದ ಮುಖಬೆಲೆ ಹೊಂದಿದ ಸುಮಾರು 17.31 ಕೋಟಿ ರೂ. ನಗದು, 2.10 ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳು ಪೊಲೀಸರ ವಶವಾಗಿವೆ. ವಶಕ್ಕೆ ಪಡೆಯಲಾದ ಮದ್ಯದ ಪ್ರಮಾಣ 1.63 ಕೋಟಿ ರೂ. ಬೆಲೆಯುಳ್ಳದ್ದು.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಒಂದೇ ಪ್ರಕರಣದಲ್ಲಿ 5 ಕೋಟಿ ಪೊಲೀಸರ ವಶವಾಗಿದ್ದರೆ, ಬೆಂಗಳೂರಿನಲ್ಲಿ 7.5 ಕೆ.ಜಿ. ಚಿನ್ನ ವಶವಾಗಿದೆ. ಬೀದರ್‌, ಕೋಲಾರ, ಬಾಗಲಕೋಟೆ ಹೀಗೆ ಮೊದಲ ಹಂತದ ಚುನಾವಣೆ ನಡೆದ ಎಲ್ಲಾ ಕ್ಷೇತ್ರಗಳು `ಲಕ್ಷ್ಮಿ' ಕಾಲು ಮುರಿದುಕೊಂಡು ಬಿದ್ದಿದ್ದಾಳೆ. ಎಲ್ಲೆಲ್ಲೂ ಹಣದ ಹೊಳೆಯೇ ಹರಿದಾಡಿದೆ. ಇದು ಯಾವ ಪಕ್ಷದ ಅಭ್ಯರ್ಥಿಗಳಿಗೆ ಸೇರಿದ್ದೆಂದು ಬಹಿರಂಗವಾಗದಿದ್ದರೂ ಸೇರಿಗೆ ಸವ್ವಾಸೇರು ಎಂಬಂತೆ ಎಲ್ಲರೂ ಹಣದ ಬೆನ್ನು ಬಿದ್ದಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅಭ್ಯರ್ಥಿಯೊಬ್ಬರು `ನೋ ವೋಟ್‌ ನೋ ಕ್ಯಾಶ್‌' ಎಂಬ ಮಾದರಿ ಅನುಸರಿಸಿದ್ದು ವರದಿಯಾಗಿದೆ. ಮೇ 16ರ ದಿನಾಂಕ ನಮೂದಿಸಿ ಕೊಟ್ಟ ಚೆಕ್‌, ಅಭ್ಯರ್ಥಿ ಗೆದ್ದರೆ ಮಾತ್ರ ಕ್ಯಾಶ್‌ ಆಗುತ್ತದೆ. ಸೋತರೆ ಬ್ಯಾಂಕ್‌ ಖಾತೆಯಲ್ಲಿ ಹಣವಿಲ್ಲದೇ ಚೆಕ್‌ ವಾಪಸ್ಸಾಗುತ್ತದೆ. 50 ಸಾವಿರ ರೂ. ಗಳಿಂದ ಒಂದು ಲಕ್ಷ ರೂ. ವರೆಗಿನ ಚೆಕ್‌ಗಳು ಪಾವತಿಯಾಗಿದೆ. ಹೇಗಿದೆ ರಾಜಕಾರಣಿಯ ಬುದ್ದಿವಂತಿಕೆ.
ಹಣದ ಆಮಿಷಕ್ಕೆ `ಮಾರಿಕೊಂಡವರು' ಈ ಚುನಾವಣೆಯಲ್ಲಿ ಬಾರೀ ಸಂಖ್ಯೆಯಲ್ಲಿದ್ದಾರೆ. ವಿಧಾನಸಭೆಯ ಉಪ ಚುನಾವಣೆಯಲ್ಲಿಯೇ ಇಂತಹದೊಂದು ಪ್ರಯೋಗವನ್ನು ರಾಜಕಾರಣಿಗಳು ಮಾಡಿದ್ದರು. ಉಪಚುನಾವಣೆಯಲ್ಲಿ ಕನಕಾಂಬರ, ವೀಳ್ಯದೆಲೆಯ ಸಾಂಕೇತಿಕವಾಗಿ ಬಳಕೆಯಾಗಿತ್ತು. ಕನಕಾಂಬರವೆಂದರೆ ಸಾವಿರದ ನೋಟು, ವೀಳ್ಯದೆಲೆಯೆಂದರೆ ಐನೂರರ ನೋಟೆಂಬುದು ಮತದಾರರಿಗೆ ಅರ್ಥವಾಗಿತ್ತು. ವೀಳ್ಯದೆಲೆಯೂ ಇಲ್ಲ, ಕನಕಾಂಬರವೂ ಇಲ್ಲ, ಯಾಕೆ ಓಟು ಹಾಕೋಣ ಎಂಬ ಪ್ರಶ್ನೆಯನ್ನು `ಮುಗ್ಧ' ಮತದಾರರು ಕೇಳುತ್ತಿದ್ದರು.
ಲೋಕಸಭೆಗೆ ಸ್ಪರ್ಧಿಸಲು ಪೂರ್ವ ಸಿದ್ದತೆ ಮಾಡಿಕೊಂಡಿದ್ದ ಅಭ್ಯರ್ಥಿಯೊಬ್ಬರು ತಮ್ಮ ತಂದೆಯನ್ನು ಆಯ್ಕೆ ಮಾಡಿದ ವಿಧಾನಸಭಾ ಕ್ಷೇತ್ರದಲ್ಲಿ ಸಂಕ್ರಾಂತಿ ಸಡಗರಕ್ಕೆ ಸೀರೆ ಹಂಚಿ ತಮಗೆ ಬರಬೇಕಾದ ಮತಕ್ಕೆ ಪೂರ್ವಭಾವಿ `ವ್ಯವಸ್ಥೆ' ಮಾಡಿಕೊಂಡಿದ್ದರು.
ಮಾರಿಕೊಂಡವರು
ಮತಕ್ಕಾಗಿ ಮಾರಿಕೊಂಡವರು ಐದು ವರ್ಷಗಳ ಕಾಲ ಮತ್ತೆಂದು ರಾಜಕಾರಣಿಗಳನ್ನು ಪ್ರಶ್ನಿಸುವಂತಿಲ್ಲ. ಯಾಕೆಂದರೆ ತಮ್ಮ ಹಕ್ಕನ್ನೂ ಅತ್ಯಲ್ಪ ಹಣಕ್ಕಾಗಿ `ಜಿಪಿಎ' ಬರೆದುಕೊಟ್ಟು ಬಿಟ್ಟಿರುತ್ತಾರೆ. ಪ್ರಶ್ನಿಸಿದರೆ ಹಣಕೊಟ್ಟಿಲ್ವಾ ಮತ್ತೇನು ಕೇಳೋದು ಎಂಬ ಜಬರ್ದಸ್ತು ಮಾಡಲು ರಾಜಕಾರಣಿಗಳು ಅಂಜುವುದಿಲ್ಲ, ಅಳುಕುವುದಿಲ್ಲ.
ಆಯ್ಕೆಯಾಗುವ ಅಭ್ಯರ್ಥಿಗಳು ಜಾಗತೀಕರಣ ಪರವಾದ ನಿಲುವು ತೆಗೆದುಕೊಳ್ಳಲಿ, ವಿಶೇಷ ಆರ್ಥಿಕ ವಲಯಗಳನ್ನು ಜಾರಿ ಮಾಡಲಿ, ಸಾರ್ವಜನಿಕ ವಲಯದ ಲಾಭಕರ ಉದ್ಯಮಗಳನ್ನು ಮಾರಿಕೊಳ್ಳಲಿ, ಬಡವರ ವಿರೋಧಿ ನಿಲುವು ಅನುಷ್ಠಾನಗೊಳಿಸಲಿ, ಅಭಿವೃದ್ಧಿ ಮಾಡದೇ ಇರಲಿ. ಅವರು ಪ್ರಶ್ನಾತೀತ. ಯಾಕೆಂದರೆ ಹಣಕೊಟ್ಟು ಮತ ಖರೀದಿಸಿದ್ದಾರೆ. ಖರೀದಿಗಾಗಿ ಖರ್ಚು ಮಾಡಿದ ಹಣವನ್ನು ಮತ್ತೆ ಸಂಪಾದಿಸುವ ದರ್ದು ಅವರಿಗೆ ಇರುತ್ತದೆ. ಮಾರಿಕೊಂಡವರು ಸುಮ್ಮನೇ ಮತ್ತೊಂದು ಚುನಾವಣೆಗೆ ಕಾಯುವುದಷ್ಟೇ ಕರ್ಮ.
ಸಿರಿಗರ
ಹಾವು ತಿಂದವರ ನುಡಿಸಬಹುದು, ಗರ ಬಡಿದವರ ನುಡಿಸಬಹುದು, ಸಿರಿಗರ ಬಡಿದವರ ನುಡಿಸಲು ಬಾರದು ನೋಡಯ್ಯಾ ಎಂಬ ಬಸವಣ್ಣನವರ ವಚನ ಹಣದ ದರ್ಪ-ಅಹಂಕಾರ ಕುರಿತು ಅರ್ಥಪೂರ್ಣ ಮಾತು. ಹಣದ ಹೊಳೆ ಹರಿಸಿ, ಮತವನ್ನು ಖರೀದಿಸುವವರು ಬಂಡವಾಳ ಹೂಡಿ ಬಂಡವಾಳ ತೆಗೆಯುವ ಉದ್ಯಮಿಯಂತೆ. ಸಿರಿಗರ ಬಡಿದವರನ್ನು ನುಡಿಸಲು ಬಾರದು. ವಿಧೇಯಕರನ್ನು ಆರಿಸುವ ಚುನಾವಣೆ ಬಂಡವಾಳಶಾಹಿಯ ಎಲ್ಲ ಲಕ್ಷಣವನ್ನು ಮೈಗೂಡಿಸಿಕೊಂಡಿದೆ. ಹೂಡುವವನು ಮುಂದಿನ ಐದು ವರ್ಷದ ಲೆಕ್ಕಾಚಾರ ಹಾಕಿಯೇ ಹೂಡುತ್ತಾನೆ. ಅದಕ್ಕಾಗಿ ಬೇಕಾದ ಹೂಡಿಕೆಯನ್ನು ಅಳೆದು ತೂಗಿ ಮಾಡುತ್ತಾನೆ.
ಹೀಗೆ ಬಂಡವಾಳ ಪದ್ಧತಿ ಚುನಾವಣೆಯಲ್ಲಿ ಅಳವಟ್ಟಿರುವುದರಿಂದಲೇ ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಚುನಾವಣೆ ಅವಧಿಯಲ್ಲಿ 23 ಕೋಟಿ ರೂ.ಗಳಷ್ಟು ಅಕ್ರಮ ಹಣ, ಬಂಗಾರ ಪೊಲೀಸರ ವಶವಾಗಿದೆ. ಶೋಕೇಸ್‌ನಲ್ಲಿಯೇ ಇಷ್ಟು ಕಂಡಿರಬೇಕಾದರೆ ಇನ್ನು ರಹಸ್ಯವಾಗಿ ಗೋಡನ್‌ನಲ್ಲಿ ಕೂಡಿಟ್ಟಿದ್ದು ಎಷ್ಟಿದ್ದೀತು? ಒಂದು ಲೋಕಸಭಾ ಕ್ಷೇತ್ರಕ್ಕೆ ಸರಾಸರಿ ಲೆಕ್ಕ ಹಾಕಿದರೆ ಒಂದು ಕಾಲು ಕೋಟಿ ಯಷ್ಟಾಗುತ್ತದೆ. ಚುನಾವಣೆ ಆಯೋಗ ಒಬ್ಬ ಅಭ್ಯರ್ಥಿಗೆ ನಿಗದಿ ಮಾಡಿರುವ ಖರ್ಚಿ ಬಾಬ್ತು ಕೇವಲ 25 ಲಕ್ಷ ರೂ. ಆದರೆ ಅಕ್ರಮವಾಗಿ ಸಂಗ್ರಹವಾಗಿರುವುದೇ ಒಂದೂಕಾಲು ಕೋಟಿ ದಾಟಿದೆ. ಅಬ್ಬಾ ಹಣವೇ ಏನು ನಿನ್ನ ಮಹಿಮೆಗಳ ಲೀಲೆ?
ಒಂದೇ ವೋಟು
ಚುನಾವಣೆ ಬಗ್ಗೆ ಸವಕಲಾದ ಮಾತೊಂದಿದೆ; ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೋಟ್ಯಾಧೀಶನಿಗೂ ಒಂದೇ ವೋಟು, ನಿರ್ಗತಿಕನಿಗೂ ಒಂದೇ ವೋಟು. ಪ್ರತಿ ಚುನಾವಣೆಯಲ್ಲಿ ಇಬ್ಬರೂ ಮತ ಚಲಾಯಿಸುತ್ತಾರೆ. ಪ್ರತಿ ಬಾರಿ ಫಲಿತಾಂಶ ಬಂದಾಗಲೂ ಕೋಟ್ಯಧೀಶ ಗೆಲ್ಲುತ್ತಾನೆ. ನಿರ್ಗತಿಕ ಸೋಲುತ್ತಾನೆ.
ಕುರುಡು ಕಾಂಚಾಣ ಮೊದಲ ಹಂತದಲ್ಲಿ ತನ್ನ ನರ್ತನ ಮುಗಿಸಿದೆ. ಥೈ ಥೈ ಕುಣಿದು ಮತವನ್ನು ವಶೀಕರಣ ಮಾಡಿದೆ. ಫಲಿತಾಂಶವೊಂದು ಬಾಕಿಯಿದೆ.
`ಹೆಂಗಾರ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತು
ಹೆಗಲಾಲಿ ಎತ್ತೋ'
ಹೌದು; ಕುರುಡು ಕಾಂಚಾಣದ ಮೈಮರೆಸುವ ಕುಣಿತದಲ್ಲಿ ಇಲ್ಲಿವರೆಗೆ ಅಭ್ಯರ್ಥಿ ಗೆದ್ದಿದ್ದಾನೆ. ಪ್ರಜಾಪ್ರಭುತ್ವ ಅಂಗಾತ ಬಿದ್ದಿದೆ. ಮತದಾರರ ಅದನ್ನು ಹೆಗಲಲ್ಲಿ ಹೊತ್ತುಕೊಂಡು ಐದು ವರ್ಷ ಓಡಾಡುತ್ತಿದ್ದಾನೆ. ಹದಿನೈದನೇ ಚುನಾವಣೆಯಲ್ಲಾದರೂ ಕುರುಡು ಕಾಂಚಾಣ ಅಂಗಾತ ಬಿದ್ದು, ಹೆಗಲಾಲಿ ಎತ್ತುವಂತಹ ಸ್ಥಿತಿಗೆ ತಲುಪಲಿ. ಪ್ರಜಾಪ್ರಭುತ್ವ ಎದ್ದು ನಿಂತು ಜನಾಧಿಕಾರ ಸ್ಥಾಪಿತವಾಗಲಿ. . .