Monday, November 10, 2008

ಸ್ತ್ರೀಮತವನುತ್ತರಿಸಲಾರದೆ . . .

`ಮನೆ ಮನೆಯಲಿ ದೀಪವುರಿಸಿ, ಹೊತ್ತುಹೊತ್ತಿಗೆ ಅನ್ನವುಣಿಸಿ ತಂದೆ ಮಗುವ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಎಂದರೆ ಅಷ್ಟೇ ಸಾಕೆ'- ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ.
ಇಷ್ಟೆಲ್ಲಾ ತಾಂತ್ರಿಕ ಕ್ರಾಂತಿ ನಡೆದು, ಸಮಾಜದ ಎಲ್ಲಾ ಸ್ತರದಲ್ಲೂ ಮಹಿಳೆ ಮುಂದೆ ಬಂದಿದ್ದರೂ ಇನ್ನೂ ಕೂಡ ಸಮಾಜದಲ್ಲಿ ಸ್ತ್ರೀಯರನ್ನು `ಸೆಕೆಂಡ್‌ ಸೆಕ್ಸ್‌' ಆಗಿಯೇ ಪರಿಗಣಿಸುವುದು ತಪ್ಪಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯವಾಗಿ ಮಹಿಳೆ ತೊಡಗಿಸಿಕೊಂಡಿದ್ದರೂ `ನೀನು ಅಸಮರ್ಥೆ' ಎಂದು ಉಚ್ಚರಿಸುವುದನ್ನು ಸಮಾಜ ನಿಲ್ಲಿಸಿಲ್ಲ. ಹೆಚ್ಚು ಮಾತಾಡಿದರೆ `ಬಜಾರಿ'(ನಿಜಾರ್ಥ ಬಜಾರಿ-ಮಾರ್ಕೆಟ್‌-ನಲ್ಲಿರುವವವಳು) ಎಂದು ಹೀಗಳೆಯುವುದು, ಸ್ವಲ್ಪ ಅಳುಕಿದರೆ `ಅಳುಮುಂಜಿ' ಎಂಬ ಬಿರುದು ದಯಪಾಲಿಸುವುದು ನಿರಂತರ. ವ್ಯಕ್ತಿತ್ವ ರೂಪಣೆಗೆ ಮುಂದಾಗಿ ಯಾವುದಕ್ಕೂ ಕಂಗೆಡದೆ ಮುನ್ನಡೆದರೆ ವೈಯಕ್ತಿಕ ತೇಜೋವಧೆ, ಅಕ್ರಮ ಸಂಬಂಧದ ಆರೋಪ, ಆ್ಯಸಿಡ್‌ ದಾಳಿ, ಆತ್ಯಂತಿಕವಾಗಿ ಕೊಲೆಯಂತಹ ದುಷ್ಕೃತ್ಯಗಳಿಗೆ ಆಕೆ ಬಲಿಯಾಗಬೇಕಾಗುತ್ತದೆ. ಇದು ಸಮಾಜದ ಸುಡುವಾಸ್ತವ.
ಒಟ್ಟಂದದಲ್ಲಿ ಮಹಿಳೆ ಪುರುಷನಿಗೆ ಸಮಾನಿಯೆಂದು ಒಪ್ಪುವುದು ಹೋಗಲಿ, ಭಾವಿಸಲು ಕೂಡ ಪುರುಷ ಕೇಂದ್ರೀತ ಸಮಾಜ ಸಿದ್ದವಿಲ್ಲ. ಅಪ್ಪನಿಗೆ ಮಗಳಾಗಿ, ಗಂಡನಿಗೆ ಹೆಂಡತಿಯಾಗಿ, ಮಗನಿಗೆ ತಾಯಾಗಿ, ಅಣ್ಣನಿಗೆ ತಂಗಿಯಾಗಿ, ಮೇಲಾಧಿಕಾರಿಯಾಗಿ ಅಡಿಯಾಧಿಕಾರಣಿಯಾಗಿಯೇ ಆಕೆ ಇರಬೇಕೆಂಬುದು ನಿಸರ್ಗ ನಿಯಮ ಅಥವಾ ಸೂರ್ಯನ ಸುತ್ತ ಭೂಮಿ ತಿರುಗುವಷ್ಟೇ ಸಹಜವೆಂದು ಪರಿಭಾವಿಸಲಾಗಿದೆ.
ಪರಂಪರೆಯ ಕೊಡುಗೆ?
ಅಪುತ್ರಸ್ಯ ಗತಿರ್ನಾಸ್ತಿ ಎಂಬಲ್ಲಿಂದ ಹಿಡಿದು, ಪಿತಾರಕ್ಷತಿ ಕೌಮಾರೆ, ಭರ್ತ್ಯಾ ರಕ್ಷತಿ ಯೌವನೇ, ರಕ್ಷಂತಿ ಸ್ಥವಿರೇ ಪುತ್ರಾ ನಃ ಸ್ತ್ರೀ ಸ್ವಾತಂತ್ರಮರ್ಹಸಿ ಎಂಬಲ್ಲಿಯವರೆಗೆ ಪುರಾಣದಲ್ಲಿ ಸ್ತ್ರೀಯರನ್ನು `ರಕ್ಷಿಸಿ'ಕೊಂಡು ಬರಲಾಗಿದೆ. ಗೃಹಿಣಿ ಗೃಹಮುಚ್ಯತೆ(ಗೃಹಂ ಉಚ್ಚತೆ) ಎಂದು ಹೇಳುತ್ತಲೇ ಗೃಹದೊಳಗೆ ಗೃಹಿಣಿಯನ್ನು ಮುಚ್ಚಿಡಲಾಗಿದೆ. ಮೇಲೆ ಇಟ್ಟರೆ ಕಾಗೆ ಕಚ್ಚುತ್ತೆ, ಕೆಳಗೆ ಇಟ್ಟರೆ ಇರುವೆ ಕಚ್ಚುತ್ತೆ ಎಂಬಂತೆ ಆಕೆಯನ್ನು `ಸುರಕ್ಷತೆ'ಯಿಂದ ನೋಡಿಕೊಂಡು ಆಕೆಗೆ ಸೂರ್ಯ ರಶ್ಮಿ ಬೀಳದಂತೆ ಕಾಪಿಡಲಾಗಿದೆ. ಅದರ ಮೂಲಕ ಹೊರಜಗತ್ತನ್ನು ನೋಡದಂತಹ `ಬಂಧನ'ದಲ್ಲಿ ಇಡಲಾಗಿದೆ.
ಆಧುನಿಕ ಮಹಿಳೆ ಉದ್ಯೋಗ, ದುಡಿತದಲ್ಲಿ ತೊಡಗಿದ್ದರೂ ಕೂಡ ಆಕೆಗೆ ಗೃಹಬಂಧನ ತಪ್ಪಿಲ್ಲ. ಹೊರಗೆ ಮೈಮುರಿ ಕೆಲಸ, ಮನೆಯಲ್ಲಿ ಬಂದರೆ ಅಡುಗೆ, ಬಟ್ಟೆಯ ರ್ವಾತ, ಜತೆಗೆ ಮಕ್ಕಳ ಉಪದ್ವ್ಯಾಪ ಹೀಗೆ ಜೀವನವೇ ರೋಸಿಹೋಗುವಷ್ಟು ಆಕೆಯನ್ನು ಹೆಡೆಮುರಿ ಕಟ್ಟಿ ದುಡಿಮೆಗೆ ಹಚ್ಚಲಾಗಿದೆ. ಆಫೀಸು, ಮನೆ, ಮಕ್ಕಳ ಓದು-ಆರೈಕೆ ಬಿಟ್ಟರೆ ಆಕೆಗೆ ಮತ್ತೊಂದು ಪ್ರಪಂಚವೇ ಇಲ್ಲದಂತೆ ಮಾಡಲಾಗಿರುವುದು ಆಧುನಿಕತೆಯ ಕೊಡುಗೆ. ದುಡಿಯುವ, ತಿಂಗಳಾರಂಭದಲ್ಲಿ ಸಂಬಳ ಎಣಿಸುವ, ಗಂಡಸರಂತೆ ಕಚೇರಿ ವ್ಯವಹಾರ ಮಾಡುವ `ಸ್ವಾತಂತ್ರ್ಯ'ವಿದ್ದರೂ ದುಡಿದ ದುಡ್ಡು ಗಂಡನ ನಿಯಂತ್ರಣದಲ್ಲಿರುತ್ತದೆ. ಮನೆಯ ಕೆಲಸದ ಜತೆಗೆ ದುಡಿಮೆಯ ಕೆಲಸದ ಹೊರೆಯೂ ಆಕೆಯನ್ನು ಬಳಲಿ ಬೆಂಡಾಗಿಸುತ್ತಿದೆ. ಒಂದಿದ್ದ ಜವಾಬ್ದಾರಿ ಎರಡಾಗಿರುವುದಷ್ಟೇ ಮಹಿಳೆಯ ಹೆಚ್ಚುಗಾರಿಕೆಯಾಗಿದೆ. ಜತೆಗೆ ಹೋಗುವಾಗ, ಬರುವಾಗ ದಾರಿಯಲ್ಲಿನ ಕಿರುಕುಳ, ಗಂಡನ ಅನುಮಾನ, ಅತ್ತೆ, ನಾದಿನಿಯರ ಕೊಂಕುನುಡಿಯನ್ನೂ ಕೇಳಬೇಕಾಗಿದೆ. ಕೆಲವು ಕಚೇರಿಗಳಲ್ಲಿ ಮೇಲಾಧಿಕಾರಿಗಳು, ಸಹೋದ್ಯೋಗಿಗಳ ಕಿರುಕುಳವೂ ಆಕೆಯನ್ನು ಬಾಧಿಸುತ್ತಿದೆ. ಕೈಗೆ ಒಂದಿಷ್ಟು ಹಣವು ಸಿಕ್ಕಿದರೂ ಕೂಡ ಇವೆಲ್ಲವೂ ಆಕೆಯ ಮೇಲೆ ಆಕ್ರಮಣ ಮಾಡುತ್ತಿದೆ.
ಪುರುಷಾಧಿಪತ್ಯದ ಠೇಂಕಾರದಲ್ಲಿ ಸಿಕ್ಕಿದ ಸ್ವಾತಂತ್ರ್ಯವೂ ನಿಯಂತ್ರಿತವಾಗಿದ್ದು, ದುಡಿಯುವ ಮಹಿಳೆಯರಲ್ಲಿ ಶೇ.50 ರಷ್ಟು ಮಂದಿ, ಮನೆ ನೋಡಿಕೊಳ್ಳುವುದಷ್ಟೇ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅಭಿಪ್ರಾಯಪಡುವ ಸ್ಥಿತಿಗೆ ತಲುಪಿದ್ದಾರೆ. ರಾತ್ರಿ ಪಾಳಿ ಮಾಡುವ ಮಹಿಳೆಯರದ್ದಂತೂ ಸಂಕಷ್ಟಗಳ ಸರಮಾಲೆ.
ಈ ಎಲ್ಲದರ ಮಧ್ಯೆಯೂ ದುಡಿಯುವ ಸ್ವಾತಂತ್ರ್ಯ, ಹೊರಗಡೆ ಸ್ವಚ್ಛಂಧವಾಗಿ ಓಡಾಡಲು ಸಿಕ್ಕ ಅವಕಾಶವನ್ನು ಸಂಭ್ರಮಿಸುವವರು ಇದ್ದಾರೆ. ಪರಿಸ್ಥಿತಿಯನ್ನು ತಮಗೆ ಬೇಕಾದಂತೆ ಬಗ್ಗಿಸಿಕೊಂಡು, ಸುತ್ತಲಿನ ವಾತಾವರಣವನ್ನು ಕಷ್ಟವೋ ಸುಖವೋ ಒಗ್ಗಿಸಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇಂತಹ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತ ಮಹಿಳೆಯರು ಅನುಸರಿಸಬೇಕಿದೆ. ಹಾಗಿದ್ದಾಗ ಮಾತ್ರ ಸ್ತ್ರೀಸ್ವಾತಂತ್ರ್ಯಕ್ಕೆ ಹೆಚ್ಚಿನ ಶಕ್ತಿ, ಬಲ ಬರುತ್ತದೆ. ಪುರುಷರಂತೆ ಮಹಿಳೆಯರೂ ಎಲ್ಲದರೂ ಸಮಾನರು ಎಂಬುದಕ್ಕೆ ಅರ್ಥವೂ ಬರುತ್ತದೆ.
ಪುರುಷ ಭಾಷೆ:
ಸ್ತ್ರೀ ಸ್ವಾತಂತ್ರ್ಯ ಎಂದು ಎಷ್ಟೇ ಗಟ್ಟಿ ಧ್ವನಿಯಲ್ಲಿ ಸಮಾಜ ಮಾತನಾಡಿದರೂ ನಮ್ಮ ಸಮಾಜದ ಪರಿಭಾಷೆಗಳು ಪುರುಷ ಕೇಂದ್ರಿತವಾಗಿವೆ. ಏಕೆಂದರೆ ಇತಿಹಾಸವೆಂದರೆ `ಹಿಸ್‌' ಸ್ಟೋರಿ ವಿನಃ `ಹರ್‌' ಸ್ಟೋರಿ ಆಗಿಯೇ ಇಲ್ಲ. ಆದಿಮ ಸಮಾಜದಲ್ಲಿ ಮಹಿಳೆಯೇ ಸಮಾಜದ ಯಜಮಾನ್ತಿ ಆಗಿದ್ದರೂ ನಮ್ಮ ನಿತ್ಯದ ಆಡುಭಾಷೆಯ ಪದಕೋಶಗಳಲ್ಲಿ ಮಹಿಳೆ ಕಾಣಿಸುವುದೇ ಇಲ್ಲ.
ಬೇಟೆಯಾಡಿ ತಿನ್ನುವ ಸಮಾಜದ ಉತ್ಪಾದನಾ ವ್ಯವಸ್ಥೆ ಕೃಷಿಗೆ ಹೊಂದಿಕೊಂಡು ಸಾವಿರಾರು ವರ್ಷಗಳೇ ಸವೆದು ಹೋಗಿವೆ. ಕೃಷಿ ಸಮಾಜ ಸ್ಥಾಪನೆಯಲ್ಲಿ ಪುರುಷರಷ್ಟೇ ನೇಗಿಲಿನ ನೊಗಕ್ಕೆ ಹೆಗಲುಕೊಟ್ಟವಳು ಮಹಿಳೆ. ಆದರೆ ಈಗಲೂ ಕನ್ನಡದಲ್ಲಿ `ರೈತ' ಎಂದು ಪುರುಷವಾಚಕ ಪದವನ್ನು ಬಳಸುತ್ತೇವೆಯೇ ವಿನಃ ರೈತಿ ಎಂಬ ಪದವೇ ಇಲ್ಲ. ರೈತ ಮಹಿಳೆ ಎನ್ನುತ್ತೇವೆ.
ದುಡಿವ ವರ್ಗದಲ್ಲಿ ಮಹಿಳೆಯರದೇ ಪ್ರಧಾನ ಪಾಲು. ಕಾರ್ಮಿಕ ಎಂಬ ಪದವಿದೆ ವಿನಃ ಕಾರ್ಮಿಕಿ ಎಂಬುದಿಲ್ಲ. ಮಹಿಳಾ ಕಾರ್ಮಿಕರು ಎಂದೇ ಸಂಬೋಧಿಸಲಾಗುತ್ತದೆ.
ನೇಕಾರಿಕೆ ವೃತ್ತಿಯಲ್ಲಂತೂ ಸಮಸ್ತವೂ ಮಹಿಳಾ ಕೇಂದ್ರಿತವೇ. ನೂಲು ಸುತ್ತುವುದು, ಬಣ್ಣ ಹಾಕುವುದು, ನೂಲುವುದು, ಕಸೂತಿ ಮಾಡುವುದು, ಕಟ್‌ ಮಾಡುವುದು, ಪ್ಯಾಕಿಂಗ್‌ ಹೀಗೆ ಎಲ್ಲದನ್ನೂ ಮಹಿಳೆಯರೇ ಮಾಡುತ್ತಾರೆ. ಪುರುಷರು ಮಾರ್ಕೆಟಿಂಗ್‌ ಮಾತ್ರ ಮಾಡುತ್ತಾರೆ. ಆದರೆ ನೇಕಾರ ಎಂಬ ಪದವಿದೆಯೇ ವಿನಃ ನೇಕಾರಿ ಎಂಬ ಪದವೇ ಇಲ್ಲ.
ಇಂಗ್ಲಿಷ್‌ನಲ್ಲಿ ಅಗ್ರಿಕಲ್ಚರಿಸ್ಟ್‌, ಲೇಬರ್‌ ಎಂಬ ಪದವನ್ನು ಬಳಸಲಾಗುತ್ತಿದೆಯೇ ವಿನಃ ಮಹಿಳಾ ವಾಚಕವಾಗಿ ನಿರ್ದಿಷ್ಟ ಪದ ಬಳಕೆಯಲ್ಲಿ ಇಲ್ಲ. ಭಾಷೆ ಕೂಡ ಮಹಿಳೆಯರನ್ನು ಅಷ್ಟು ಮೈಲಿಗೆಯಾಗಿ ನಡೆಸಿಕೊಂಡಿದೆ. ಇನ್ನೂ ಕೂಡ ನಡೆಸುತ್ತಲೇ ಇದೆ. ಪೊಲೀಸ್‌ ಎಂಬ ಪದಕ್ಕೆ ಪೇದೆ ಎಂಬ ಪರ್ಯಾಯ ಪದವಿದೆ. ಆದರೆ ಇದಕ್ಕೆ ಸಂವಾದಿ ಪದ ಮಹಿಳಾ ಪೇದೆ ಎಂದಷ್ಟೇ ಆಗಿದೆ.
ರಾಷ್ಟ್ರದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಎಂಬ ವಿಷಯದಲ್ಲೂ ಇದೇ ಚರ್ಚೆ ನಡೆದಿತ್ತು. ಪ್ರತಿಭಾ ಪಾಟೀಲ್‌ ಅವರು ರಾಷ್ಟ್ರಪತಿಗಳಾಗಿ ಆಯ್ಕೆಯಾದಾಗ ಅವರನ್ನು ಏನೆಂದು ಕರೆಯಬೇಕೆಂದು ಚರ್ಚೆ ನಡೆಯಿತು. ಕೊನೆಗೆ ರಾಷ್ಟ್ರಪತಿ ಎಂಬ ಪುರುಷ ವಾಚಕ ಪದವನ್ನೇ ಉಳಿಸಿಕೊಳ್ಳಲಾಯಿತು.
ಸ್ತ್ರೀವಾದಿಗಳು:
ಹಾದಿ ಬೀದಿಯಲ್ಲಿ, ವೇದಿಕೆ, ಸಮಾರಂಭಗಳಲ್ಲಿ ಉದ್ದುದ್ದ ಭಾಷಣ ಬಿಗಿಯುವ ಸ್ವಘೋಷಿತ ಸ್ತ್ರೀವಾದಿಗಳದು ಮತ್ತೊಂದು ಕತೆ. ಮನೆಯಲ್ಲಿ ಬೆಡ್‌ಕಾಫಿ ಕೊಡಲು, ಎಲ್ಲೋ ಇಟ್ಟ ಸಿಗರೇಟು ಹುಡುಕಿ ಕೊಡಲು, ಸ್ನಾನಕ್ಕೆ ನೀರು ಅಣಿ ಮಾಡಲು, ಕಚೇರಿಗೆ ಹೊರಟಾಗ ಗರಿಗರಿ ಇಸ್ತ್ರಿ ಮಾಡಿದ ಬಟ್ಟೆ ತಂದುಕೊಡಲು ಹೆಂಡತಿಯೇ ಬೇಕು. ಹೆಂಡತಿ ಉದ್ಯೋಗದಲ್ಲಿದ್ದು, ಬೆಳಿಗ್ಗೆಯೇ ಡ್ಯೂಟಿಗೆ ಹೋಗಬೇಕಾಗಿದ್ದರೂ ಕೂಡ ಅವರು ಯಾವ ಕೆಲಸವನ್ನೂ ಮಾಡುವುದಿಲ್ಲ. ಮಾತಿಗೆ ಮಾತ್ರ ಸ್ತ್ರೀವಾದಿಗಳಿವರು.
ಹಾಗೆ ನೋಡಿದರೆ ಗ್ರಾಮೀಣ ಪ್ರದೇಶದಲ್ಲಿ ಗಂಡಸರು ಸಾಕಷ್ಟು ಮನೆ ಕೆಲಸ ಮಾಡಿಕೊಡುತ್ತಾರೆ. ಹಸು ಕಟ್ಟುವುದು, ಹುಲ್ಲು ಹಾಕುವುದು, ಸೆಗಣಿ ಬಾಚುವುದು, ಹಾಲು ಕರೆಯುವುದು ಕನಿಷ್ಠ ಇಂತಹ ಕೆಲಸಗಳಲ್ಲಾದರೂ ಪುರುಷರ ಪಾಲಿರುತ್ತದೆ. ಆದರೆ ಮಾತಿನಲ್ಲಿ ಸ್ತ್ರೀವಾದಿ ಚಿಂತನೆಗಳನ್ನು ಪುಂಖಾನುಪುಂಖವಾಗಿ ಹೇಳುವ, ಪುಟಗಟ್ಟಲೇ ಬರೆಯುವ ಸ್ತ್ರೀವಾದಿ ಪುರುಷರು ರೂಢಿಯಲ್ಲಿ ಮಾತ್ರ ಪುರುಷಾಧಿಪತ್ಯದ ಸಾಕಾರಮೂರ್ತಿಗಳಾಗಿರುತ್ತಾರೆ.
ರಾಜಕೀಯ:
ರಾಜಕೀಯದಲ್ಲಿ ಸ್ತ್ರೀ ಪುರುಷರು ಸಮಾನರು ಎಂದು ಭಾವಿಸಲಾಗುತ್ತದೆ. ಆಚರಣೆಯಲ್ಲಿ ಮಾತ್ರ ಅದು ಶೂನ್ಯವಾಗಿರುತ್ತದೆ. ಶೇ.33 ರಷ್ಟು ಮೀಸಲಾತಿಗಾಗಿ ಮಹಿಳೆಯರು ಹಕ್ಕೊತ್ತಾಯ ಮಂಡಿಸುತ್ತಾ ದಶಕಗಳೇ ಕಳೆದುಹೋಗಿವೆ. ಇನ್ನೂ ಕೂಡ ಪುರುಷರು ಅದನ್ನು ಕೊಡಲು ಬಿಟ್ಟಿಲ್ಲ. ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ಯುಪಿ ಎ ನೇತೃತ್ವದ ಸರ್ಕಾರದ ಸೂತ್ರಧಾರಿ ಸೋನಿಯಾಗಾಂಧಿ ಎಂಬ ಮಹಿಳೆಯೇ ಆಗಿದ್ದರೂ, ಅತ್ಯುನ್ನತ ಸ್ಥಾನದಲ್ಲಿ ಪ್ರತಿಭಾಪಾಟೀಲ್‌ ಉಪಸ್ಥಿತರಿದ್ದರೂ ಈ ಕಾಯ್ದೆ ಜಾರಿಗೆ ಬಂದಿಲ್ಲ.
ದೇಶದ ಒಟ್ಟು ಚುನಾಯಿತ ಪ್ರತಿನಿಧಿಗಳ ಸಂಖ್ಯೆ 30 ಲಕ್ಷದಷ್ಟಿದ್ದು, ಆ ಪೈಕಿ 10 ಲಕ್ಷ ಮಹಿಳೆಯರಿದ್ದಾರೆ. ಆದರೆ ಸ್ತ್ರೀ ಸಬಲೀಕರಣ ಇನ್ನೂ ಸಾಧ್ಯವಾಗಿಲ್ಲ. ಆಕಾಶದ ಅರ್ಧ ನಕ್ಷತ್ರಗಳು ನಾವು, ಈ ಭೂಮಿಯಲಿ ಅರ್ಧ ಕೇಳುವೆವು ಎಂದು ಮಹಿಳೆಯರು ಘೋಷಣೆ ಹಾಕುತ್ತಲೇ ಬಂದಿದ್ದಾರೆ. ಆದರೆ ಪುರುಷರು ಒಂದು ಹಾದಿಯನ್ನೂ ಬಿಟ್ಟುಕೊಡುವುದಿಲ್ಲ ಎಂಬ ಹಠಕ್ಕೆ ಕೂತಿದ್ದಾರೆ.
ಇನ್ನು ಅಧಿಕಾರ ಸಿಕ್ಕಿರುವ ಕಡೆ( ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌ ಹಾಗೂ ಶಾಸಕಿ ಸ್ಥಾನದಲ್ಲಿ) ಕೂಡ ಅವರ ಗಂಡಂದಿರೇ ಅಧಿಕಾರ ಚಲಾಯಿಸುವ ಸೂತ್ರಧಾರಿಗಳಾಗಿರುತ್ತಾರೆ. ಹೆಸರಿಗೆ ಮಹಿಳೆ ಅಧ್ಯಕ್ಷರಾಗಿದ್ದರೂ ಆಂಟಿ ಚೇಂಬರ್‌ನಲ್ಲಿ ಅಧಿಕಾರ, ವ್ಯವಹಾರ ನಡೆಸುವವರು ಆಕೆಯ ಗಂಡಂದಿರೇ ಆಗಿರುತ್ತಾರೆ.
ಮಹಿಳೆಯರು ಅಧಿಕಾರ ನಡೆಸುವಷ್ಟು ಸಾಮರ್ಥ್ಯ ಹೊಂದಿದ್ದರೂ ಕೂಡ ಪುರುಷರು ಅದಕ್ಕೆ ಅವಕಾಶ ಕೊಡುವುದಿಲ್ಲ. ಅವರಲ್ಲಿ ಸಂಘಟನೆಯಾಗದೇ, ಅವರೇ ಅಧಿಕಾರ ಕೈಗೆತ್ತಿಕೊಳ್ಳದೇ ಅದು ಸಾಧ್ಯವಾಗದು. ಈ ನಿಟ್ಟಿನಲ್ಲಿ ಸರ್ಕಾರ, ಸ್ವಯಂ ಸೇವಾ ಸಂಘಟನೆಗಳು ಕಾರ್ಯಪ್ರವೃತ್ತವಾಗಬೇಕಾಗಿದೆ.

1 comment:

ಚಿತ್ರಾ ಸಂತೋಷ್ said...

ಸರ್...
ಕೆಲದಶಕಗಳ ಹಿಂದೆ ತಿರುಗಿ ನೋಡಿದರೆ..ಸಾಕಷ್ಟು ಬದಲಾವಣೆಯಾಗಿದೆ. ಆದರೆ 'ಸ್ತ್ರೀ ಸ್ವಾತಂತ್ರ್ಯ'ಎಂಬುದು ಕೆಲವೊಮ್ಮೆ ದುರುಪಯೋಗ ಆಗುವ ಉದಾಹರಣೆಗಳು ನಮ್ಮ ಮುಂದಿವೆ. ಸ್ವಾತಂತ್ರ್ಯ ಎಂದರೆ ಗಂಡ ಅಡುಗೆ ಮಾಡಬೆಕು, ಬೆಳಿಗೆದ್ದು ಟೀ ಮಾಡಬೇಕು ಅಂದುಕೊಳ್ಳುವರೂ ಇರುವಾಗ ಏನು ಮಾಡೋದು?. ಹಾಗಂತ ಗಂಡಸರ ಪರ ವಕಾಲತ್ತು ಮಾಡುತ್ತಿಲ್ಲ..ಇಲ್ಲಿ 50;50 ತಪ್ಪುಗಳು ಇವೆ...
-ಚಿತ್ರಾ