Sunday, April 19, 2009

ತಲ್ಲಣ ತಳಮಳ

ಆರ್ಥಿಕ ಬಿಕ್ಕಟ್ಟು ತಂದಿತ್ತ ಅಂಕಿ ಅಂಶಗಳ ಲೆಕ್ಕಾಚಾರವೇ ಬೇರೆ. ಅದು ಪರೋಕ್ಷವಾಗಿ ಉಂಟು ಮಾಡುತ್ತಿರುವ ಮಾನಸಿಕ, ಸಾಮಾಜಿಕ ಸಂಕ್ಷೋಭೆಯೇ ಬೇರೆ.
ಕೈತುಂಬಿ ಚೆಲ್ಲುವಷ್ಟು ಸಂಬಳ ಗಿಟ್ಟಿಸಿ, ಊಹೆಗೂ ನಿಲುಕದಂತಹ ಐಷಾರಾಮಿ ಜೀವನ ಮಾಡುತ್ತಿದ್ದವರ ಪಾಡು ಒಂದು ರೀತಿಯದು. ಹೊಟ್ಟೆ ತುಂಬುವ ಹಿಟ್ಟಿಗೂ ಪರದಾಡುತ್ತಾ ನಿತ್ಯದ ಅವಶ್ಯಕತೆಗೂ ಎಟುಕದ ಸಂಬಳ ಪಡೆಯುತ್ತಿದ್ದವರದ್ದು ಮತ್ತೊಂದು ಬಗೆಯ ಯಾತನೆ. ಆದರೆ ಎರಡರ ಪರಿಣಾಮವೊಂದೇ. ಸಾಮಾಜಿಕ, ಮಾನಸಿಕ ಆಘಾತ; ಹೆಚ್ಚುತ್ತಿರುವ ವಿಚ್ಛೇದನ; ಆತ್ಮಹತ್ಯೆಯ ಹೆಚ್ಚಳ; ಮನೋರೋಗಿಗಳ ಸಂಖ್ಯೆ ಅಧಿಕ; ಅಪರಾಧ ಪ್ರಕರಣಗಳ ಪುನರಾವೃತ್ತಿ; ಎಲ್ಲೆಲ್ಲೂ ಕಾಡುತ್ತಿರುವ ಅಭದ್ರತೆ.
ಆಘಾತ 1:
ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವೊಂದರಲ್ಲಿ ಹೆಸರಾಂತ ಹೋಟೆಲ್‌ನಲ್ಲಿ ಮಧ್ಯಾಹ್ನ ಹಾಗೂ ಸಂಜೆಯ ಹೊತ್ತು ಕಾಲಿಕ್ಕಲು ಜಾಗವಿರುತ್ತಿರಲಿಲ್ಲ. ಊಟ ಮಾಡಲು ಹೋದರೆ ಬಟ್ಟೆಗೆಲ್ಲಾ ಅನ್ನಸಾಂಬಾರು ಮೆತ್ತಿಕೊಳ್ಳುತ್ತಿತ್ತು. ಕೊರಳಿಗೆ ಐಡಿ ಕಾರ್ಡ್‌ನ ಟ್ಯಾಗ್‌ ನೇತು ಹಾಕಿಕೊಂಡ ಯುವಕ-ಯುವತಿಯ ಮೇಜುಬಾನಿ ಅಲ್ಲಿರುತ್ತಿತ್ತು. ಅವರೆಲ್ಲರೂ ಕಂಪನಿ ಕೊಡುವ ಕೂಪನ್‌ ಖಾಲಿ ಮಾಡಲು ಅತ್ತ ಚಿತ್ತೈಸುತ್ತಿದ್ದರು. ಆದರೆ ಈಗ್ಗೆ 2 ತಿಂಗಳಿಂದ ಹೋಟೆಲು ಬಣಬಣ. ಕೊರಳಿಗೆ ಟ್ಯಾಗ್‌ ಹಾಕಿಕೊಂಡು, ಕೂಪನ್‌ ಹಿಡಿದು ಬರುತ್ತಿದ್ದವರು ಪತ್ತೆಯಿಲ್ಲ. ಏಕೆಂದರೆ ಆ ಸುತ್ತಮುತ್ತಲಿದ್ದ ಬಹುತೇಕ ಬಿಪಿಓಗಳು ಅರ್ಧ ಬಾಗಿಲು ಹಾಕಿವೆ. ಇನ್ನೂ ಕೆಲವು ಉದ್ಯೋಗಸ್ಥರ ಕಡಿತ ಮಾಡಿವೆ. ಕೂಪನ್‌ ಕೂಡ ಕೊಡುತ್ತಿಲ್ಲ.
ಆಘಾತ2:
ತಿಂಗಳಿಗೆ ಒಂದು ಲಕ್ಷಕ್ಕೂ ಜಾಸ್ತಿ ಸಂಬಳ ಪಡೆಯುತ್ತಿದ್ದ ಅನೇಕ ಐಟಿ ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಸಂಬಳ ಬರುತ್ತಿದ್ದಾಗ 25-30 ಸಾವಿರ ಬಾಡಿಗೆ, ಸ್ಟಾರ್‌ ಹೋಟೆಲುಗಳಲ್ಲಿ ಊಟ, ಕಾಫಿ ಡೇನಲ್ಲಿ ಕಾಫಿ ಹೀಗೆ ಜೀವನ ಸಾಗುತ್ತಿತ್ತು. ಆದರೆ ಈಗ ಕೆಲಸವೂ ಇಲ್ಲ, ಸಂಬಳವೂ ಇಲ್ಲ. ಮಾನಸಿಕ ಹಾಗೂ ಕೌಟುಂಬಿಕ ಸಂಘರ್ಷ ಹೆಚ್ಚಾಗಿ ದಾಂಪತ್ಯ ವಿಚ್ಛೇದನೆಯ ಹೊಸ್ತಿಲಲ್ಲಿ ಬಂದು ನಿಂತಿದೆ. ಇದು ಅಸಂಖ್ಯಾತ ಯುವ ಜೋಡಿಗಳ ಸಮಸ್ಯೆ.
ಆಘಾತ 3:
ಉದ್ಯೋಗ ಕಳೆದುಕೊಂಡ ಅಥವಾ ಕಳೆದುಕೊಳ್ಳುವ ಭೀತಿಯಲ್ಲಿ ಮಾನಸಿಕ ಸಮಸ್ಯೆ ಉಲ್ಬಣ. ಒಂದು ಅಧ್ಯಯನದ ಪ್ರಕಾರ ಇಡೀ ವಿಶ್ವದಲ್ಲಿ ಮಾನಸಿಕ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಶೇ.20 ರಷ್ಟು ಜಾಸ್ತಿಯಾಗಿದ್ದರೆ, ಬೆಂಗಳೂರಿನಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ. ಮನಃಶ್ಯಾಸ್ತ್ರಜ್ಞರು, ಮಾನಸಿಕ ಚಿಕಿತ್ಸಕರಿಗೆ ಭಾರೀ ಬೇಡಿಕೆ. ಮನೋಕ್ಲೇಶ ನೀಗಿಸುವ ಔಷಧ ವಸ್ತುಗಳಿಗೆ ಗಮನಾರ್ಹ ಬೇಡಿಕೆ ಉಂಟಾಗಿದೆಯಂತೆ.
ಆಘಾತ 4:
ಒಂದು ಬಿಪಿಓ ಕಂಪನಿ. ಇಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಯೊಬ್ಬಳಿಗೆ ಸದಾ ಮೊಬೈಲ್‌ ನೋಡುವ ಕೆಲಸ. ಏಕೆಂದರೆ `ನಾಳೆಯಿಂದ ನೀವು ಕೆಲಸಕ್ಕೆ ಬರುವುದು ಬೇಡ'ವೆಂಬ ಸಂದೇಶ ಆಕೆಯ ಹಲವು ಸಹೋದ್ಯೋಗಿಗಳಿಗೆ ಬಂದಿದೆ. ತನಗೂ ಬರಬಹುದೆಂಬ ಆತಂಕ ಆಕೆಯದು. ಇನ್ನೂ ಕೆಲವರು ಕಚೇರಿಗೆ ಹೋದಾಗ ಪಂಚ್‌ ಕಾರ್ಡ್‌ ತೋರಿಸಿದರೆ ಕಚೇರಿಯ ಬಾಗಿಲೇ ತೆರೆದುಕೊಳ್ಳಲಿಲ್ಲವಂತೆ. ಸೆಕ್ಯುರಿಟಿ ಗಾರ್ಡ್‌ ಕೇಳಿದರೆ ನಿಮ್ಮನ್ನು ಕೆಲಸಕ್ಕೆ ತೆಗೆದು ನಿಮ್ಮ ಪಂಚ್‌ ಕಾರ್ಡ್‌ ರದ್ದಾಗಿದೆ ಎಂಬ ಉತ್ತರ. ಅಂತಹವರ ಮನಃಸ್ಥಿತಿ ಹೇಗಿರಬೇಡ.
ಆಘಾತ 5:
ಇದ್ದಕ್ಕಿದ್ದಂತೆ ಸಂಬಳ ಕಡಿತ, ಸೌಲಭ್ಯ ಕಡಿತ. ದುಡಿಮೆಯ ಸಮಯ ಹೆಚ್ಚಳ. ಇಲ್ಲದಿದ್ದರೆ ಅವರು ಕೆಲಸ ಮಾಡುತ್ತಿದ್ದ ವಿಭಾಗವೇ ರದ್ದು. ಯಾರನ್ನೂ ಕೇಳುವಂತೆಯೂ ಇಲ್ಲ, ಪರಿಸ್ಥಿತಿಯನ್ನು ಇನ್ನೊಬ್ಬರಿಗೆ ಹೇಳಿಕೊಳ್ಳುವಂತೆಯೂ ಇಲ್ಲ.
ಆಘಾತ 6: ಜವಳಿ ಮತ್ತು ಗಾರ್ಮೆಂಟ್ಸ್‌ ಉದ್ಯಮ ತತ್ತರಿಸುತ್ತಿದ್ದು 2-3 ಸಾವಿರ ರೂ. ಗೆ ದಿನವಿಡೀ ಕಿರುಕುಳ ಸಹಿಸಿ ಕೆಲಸ ಮಾಡುತ್ತಿದ್ದವರಿಗೆ ಆ ಕೆಲಸವೂ ಇಲ್ಲ. ಕೈಯಲ್ಲಿ ಕಾಸೂ ಇಲ್ಲ. ಒಂದು ಅಂದಾಜಿನಂತೆ 2009ರ ಮಾರ್ಚ್‌ ವೇಳೆಗೆ ಇಡೀ ಭಾರತದ ಜವಳಿ ಉದ್ಯಮದಲ್ಲಿ 6 ಲಕ್ಷ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಗಾರ್ಮೆಂಟ್ಸ್‌ ಉದ್ಯಮ ಬಲಿಷ್ಠವಾಗಿರುವ ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ ಲಕ್ಷ ದಾಟುತ್ತದೆ. ಮುಳುಗುವವನಿಗೆ ಸಿಕ್ಕಿದ್ದ ಹುಲ್ಲುಕಡ್ಡಿಯೂ ಕೈತಪ್ಪಿ ಹೋದ ಅನುಭವ.
* * * * *
ಆರ್ಥಿಕ ಬಿಕ್ಕಟ್ಟಿನ ಪರೋಕ್ಷ ಪರಿಣಾಮವಿದು. ಎಲ್ಲಿ ನೋಡಿದರಲ್ಲಿ ಉದ್ಯೋಗ ಕಡಿತದ ಭೀತಿ. ವಿಶ್ವಸಂಸ್ಥೆಯ ಇಂಟರ್‌ನ್ಯಾಷನಲ್‌ ಲೇಬರ್‌ ಆರ್ಗನೈಸೇಷನ್‌(ಐ ಎಲ್‌ಓ) ಬಿಡುಗಡೆ ಮಾಡಿದ ವರದಿ ಇದು. 2008ರಲ್ಲಿ ಶೇ.6.3 ರಷ್ಟಿದ್ದ ನಿರುದ್ಯೋಗ ಏರಿಕೆ ಪ್ರಮಾಣ 2009ರಲ್ಲಿ ಶೇ.7.1ರಷ್ಟಾಗಲಿದೆ. 2007ರಲ್ಲಿ ಈ ಪ್ರಮಾಣ ಶೇ.5.7ರಷ್ಟಿತ್ತು. ನಿರುದ್ಯೋಗಿಗಳ ಸಂಖ್ಯೆಗೆ 1.8 ಕೋಟಿ ಸೇರ್ಪಡೆಯಾಗಲಿದ್ದಾರೆಂಬ ಲೆಕ್ಕಾಚಾರ ಇದೀಗ 3 ಕೋಟಿ ಆಗಬಹುದೆಂದು ಈ ವರದಿ ಉಲ್ಲೇಖಿಸಿದೆ. ಉದ್ಯೋಗ ಕ್ಷೀಣತೆ ಪ್ರಮಾಣ 5 ಕೋಟಿಗೆ ತಲುಪಲಿದೆ ಎಂದು ವರದಿ ಆತಂಕಿಸಿದೆ.
ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ, ಬಿಪಿಓ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು, ಹಣಕಾಸು ಸಂಸ್ಥೆಗಳನ್ನು ಮಾತ್ರ ಈ ಲೆಕ್ಕಾಚಾರ ಒಳಗೊಂಡಿದೆ. ಕೃಷಿ ಸಂಸ್ಕರಣೆ, ಗಾರ್ಮೆಂಟ್ಸ್‌ ಮತ್ತಿತರ ಕ್ಷೇತ್ರಗಳನ್ನು ಇದು ಲೆಕ್ಕಕ್ಕಿಟ್ಟಿಲ್ಲ.
2008ರಲ್ಲಿ ಅಮೆರಿಕದಲ್ಲಿ 28 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದರೆ, ಕೇವಲ ಜನವರಿ ತಿಂಗಳಿನಲ್ಲಿ ಈ ಸಂಖ್ಯೆ 20 ಲಕ್ಷ ದಾಟಿದೆ. 1945ರ ನಂತರ ಮೊದಲ ಬಾರಿಗೆ ಈ ಪ್ರಮಾಣದ ನಿರುದ್ಯೋಗ ಅಮೆರಿಕದಲ್ಲಿ ಕಾಣಿಸಿಕೊಂಡಿದೆ. ಕಡಿಮೆ ಜನಸಂಖ್ಯೆಯಿರುವ ಅಮೆರಿಕೆಯ ಪರಿಸ್ಥಿತಿಯೇ ಹೀಗಾದರೆ ಕೇವಲ ಮಾನವಸಂಪನ್ಮೂಲವೇ ದೇಶದ ಶಕ್ತಿಯಾಗಿರುವ ಭಾರತ ಪ್ರಮಾಣ ಎಷ್ಟು ಭೀಕರವಾಗಿರಬೇಡ.
ಉದ್ಯೋಗ ಸೃಷ್ಟಿಯ ಸಾಧ್ಯತೆಯೇ ಇಲ್ಲವಾಗಿದೆ. ಸರ್ಕಾರಿ ಉದ್ಯೋಗಿಗಳ ನಿವೃತ್ತಿಯ ವಯಸ್ಸನ್ನು 58ರಿಂದ 60ಕ್ಕೆ ಏರಿಸಿದ್ದರಿಂದ ನಿವೃತ್ತಿಯಾಗುವವರ ಸೇವೆ 2 ವರ್ಷ ಮುಂದಕ್ಕೆ ಹೋಗಲಿದೆ. ಅಲ್ಲೂ ಉದ್ಯೋಗ ಸೃಷ್ಟಿಯಾಗುತ್ತಿಲ್ಲ.
ಬರಲಿರುವ ಭರ್ಜರಿ ಸಂಬಳ ನೆಚ್ಚಿಕೊಂಡು ಮನೆ, ನಿವೇಶನ, ಅಪಾರ್ಟ್‌ಮೆಂಟ್‌, ಕಾರು, ಬಂಗಲೆಗಳನ್ನು ಸಾಲ ಖರೀದಿ ಮಾಡಿದವರ ಆರ್ಥಿಕ ಪರಿಸ್ಥಿತಿ ಹೇಗಾಗಿರಬೇಡ. ಜತೆಗೆ ಪಡೆದ ಸಾಲವನ್ನು ತೀರಿಸುವುದು ಹೇಗೆ? ಸಾಲವನು ಕೊಂಬಾಗ ಹಾಲೋಗರುಂಬಂತೆ, ಸಾಲಿಗರು ಬಂದು ಒದೆವಾಗ ಇಬ್ಬದಿಯ ಕೀಲು ಮುರಿದಂತೆ ಸರ್ವಜ್ಞನೆಂಬ ಸ್ಥಿತಿ ಉಂಟಾಗಿದೆ. ಹಾಗಾಗಿಯೇ ಆತ್ಮಹತ್ಯೆಗಳು ಹೆಚ್ಚುತ್ತಿವೆ.
ಅಮೆರಿಕೆಯಲ್ಲಿ ಹೊರಗುತ್ತಿಗೆ ರದ್ದು ಮಾಡುವುದಾಗಿ ಅಲ್ಲಿನ ಅಧ್ಯಕ್ಷ ಒಬಾಮ ಹೇಳಿದ್ದಾರೆ. ಅದಾದರೆ ಬೆಂಗಳೂರು, ಹೈದರಾಬಾದ್‌ನಂತಹ ಪ್ರಮುಖ ನಗರಗಳ ಯುವ ಸಮುದಾಯ ತತ್ತರಿಸಲಿದೆ. ಅಮೆರಿಕೆಯ ಕೆಲಸವನ್ನೇ ನೆಚ್ಚಿಕೊಂಡು ಶುರುಮಾಡಿದ ಬಿಪಿ ಓಗಳು ಬಾಗಿಲು ಹಾಕಿದರೆ ಇನ್ನಷ್ಟು ಸಾಮಾಜಿಕ, ಆರ್ಥಿಕ ಬಿಕ್ಕಟ್ಟು ನಿರ್ಮಾಣಗೊಳ್ಳಲಿದೆ.
ಬದಲಾದ ಎಚ್‌ ಆರ್‌:
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಎಲ್ಲಾ ಐಟಿ, ಬಿಪಿಓ, ಉದ್ದಿಮೆಗಳಿಗೆ ಉದ್ಯೋಗಸ್ಥರ ನೇಮಕ ಮಾಡಲು ನೆರವಾಗುತ್ತಿದ್ದ ಮಾನವ ಸಂಪನ್ಮೂಲ ವಿಭಾಗದ ಕಾರ್ಯವೈಖರಿಯೇ ಬದಲಾಗಿದೆ. ಪ್ಲೇಸ್‌ಮೆಂಟ್‌ಗೆ ಸಹಕರಿಸುತ್ತಿದ್ದವರು ಇದೀಗ ಔಟ್‌ಪ್ಲೇಸ್‌ಮೆಂಟ್‌ ಎಂಬ ಹೊಸ ಪದ್ಧತಿ ಶುರು ಹಚ್ಚಿಕೊಂಡಿದ್ದಾರೆ.
ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳು ಸಂಸ್ಥೆಯ ಬಗ್ಗೆ ಕಹಿ ಅಥವಾ ದ್ವೇಷ ಭಾವನೆ ತಾಳದೇ ಇರುವಂತೆ ನೋಡಿಕೊಳ್ಳುವುದು. ಕೆಲಸದಿಂದ ನೂರಾರು ಮಂದಿಯನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೊಗೆದರೂ ಅದರ ಬ್ರಾಂಡ್‌ ನೇಮ್‌ ಹಾಳಾಗದಂತೆ ನೋಡಿಕೊಳ್ಳುವುದು ಎಚ್‌ಆರ್‌ಗಳ ನೂತನ ಕಾಯಕ.
ಕೆಲಸದಿಂದ ತೆಗೆಯುವ ಕಾರಣಗಳನ್ನು ಉದ್ಯೋಗಿಗಳಿಗೆ ಮನವರಿಕೆ ಮಾಡಿಕೊಡುವ ಕೌನ್ಸಿಲಿಂಗ್‌, ಮುಂದಿನ ಹಾದಿಯ ಬಗ್ಗೆ ಕೋಚಿಂಗ್‌, ಉದ್ಯೋಗ ಬದಲಿಸಲು ಬೇಕಾದ ಮಾರ್ಗದರ್ಶನ, ಮೆಡಿಟೇಶನ್‌ ಮಾಡುವುದರಿಂದ ಹತಾಶೆಯಿಂದ ಹೊರಬರುವುದು, ಹೆಚ್ಚಿನ ಓದಿಗೆ ಪುಕ್ಕಟೆ ಸಲಹೆ ನೀಡುವುದು, ಸ್ನೇಹಿತರ ನೆಟ್‌ವರ್ಕ್‌ ಗಳಿಸಿಕೊಳ್ಳಿ ಎಂದು ಬೋಧನೆ ಮಾಡುವುದು ಇಂತಹವು ಸೇರಿವೆಯಂತೆ. ಇಂತಹ ಕೆಲಸದಲ್ಲಿ ಕೆಲವು ಕಂಪನಿಗಳು ಥರೋ ಆಗಿದ್ದು, ಅವಕ್ಕೆ ಮಾತ್ರ ಈ ಜವಾಬ್ದಾರಿ ವಹಿಸಲಾಗುತ್ತದೆ. ಹೇಗಿದೆ ನೋಡಿ; ಉದ್ಯೋಗಕ್ಕೆ ತೆಗೆದುಕೊಳ್ಳುವುದಕ್ಕೂ ಉದ್ಯೋಗ ಕಳೆಯುವುದಕ್ಕೂ ಎರಡೂ ಎಚ್‌ಆರ್‌ ಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ.