Monday, December 29, 2008

ನಿರುದ್ಯೋಗ ಪರ್ವ

`ಬರಲಿ ಹೊಸ ವರುಷ, ತರಲಿ ಹೊಸ ಹರುಷ' ಎಂದು ಶುಭಾಶಯ ವಿನಿಮಯ ಮಾಡಿಕೊಳ್ಳುವ ಸಡಗರ 2009ನ್ನು ಎದುರುಗೊಳ್ಳುವ ಮುನ್ನಾದಿನಗಳಲ್ಲಿ ಇಲ್ಲ.
ವಿಶ್ವದರ್ಜೆಯ ಬಹುತೇಕ ಆರ್ಥಿಕ ತಜ್ಞರು 2009ನ್ನು `ನಿರುದ್ಯೋಗ ಪರ್ವ'ದ ಆರಂಭಿಕ ಕಾಲ ಎಂದೇ ವಿಶ್ಲೇಷಿಸಿದ್ದಾರೆ. ಸುಮಾರು 3 ವರ್ಷಗಳ ಹಿಂದೆ ಶುರುವಿಟ್ಟುಕೊಂಡ ಆರ್ಥಿಕ ಕುಸಿತದ ನಡಿಗೆ ಇದೀಗ ಕವಲುದಾರಿಯಲ್ಲಿ ಬಂದು ನಿಂತಿದೆ. 20 ವರ್ಷಗಳ ಹಿಂದಿನ ನಿರುದ್ಯೋಗಿಗಳ ಸಂಖ್ಯೆಯ ದಾಖಲೆಯನ್ನು 2009 ವರ್ಷ ಮುರಿಯಲಿದೆ ಎಂದೇ ಅಂದಾಜಿಸಲಾಗಿದೆ.
ಐಟಿ-ಬಿಟಿ ಯುಗ ಶುರುವಾದ ಮೇಲೆ ಕೌಶಲ್ಯ ಹೊಂದಿದವರಿಗೆ ಭಾರೀ ಬೇಡಿಕೆ ಬಂದೊದಗಿತ್ತು. ಯಾರು ತಿಂಗಳ ಲೆಕ್ಕದಲ್ಲಿ ಸಂಬಳವನ್ನು ಮಾತನಾಡುತ್ತಲೇ ಇರಲಿಲ್ಲ. ವರ್ಷಕ್ಕೆ 5 ಲಕ್ಷದಿಂದ ಹಿಡಿದು 12 ಲಕ್ಷವರೆಗೂ ಸಂಬಳ ಎಣಿಸುವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿತ್ತು. ಅದೇ ಹೊತ್ತಿನಲ್ಲಿ ವರ್ಷಕ್ಕೆ 24 ಸಾವಿರದಿಂದ 60 ಸಾವಿರದವರೆಗೆ ಸಂಬಳ ತೆಗೆದುಕೊಳ್ಳುವವರ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿತ್ತು.
ಟೆಕಿಗಳ ಒಂದು ದಿನದ ಸಂಬಳದ ಮೊತ್ತವನ್ನು ತಿಂಗಳ ಸಂಬಳವಾಗಿ ಪಡೆಯುವವರು ಇದ್ದು, ಸಮಾಜದಲ್ಲಿ ಭೀಕರವಾಗಿ ಆರ್ಥಿಕ ಅಂತರವೂ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರು, ಹೈದರಾಬಾದ್‌, ಮುಂಬೈ, ಕೊಲ್ಕತ್ತಾ, ದೆಹಲಿಯಂತಹ ನಗರಗಳಲ್ಲಿ ಈ ರೀತಿಯ ಸಂಬಳಾಂತರ ಸೃಷ್ಟಿಸಿದ ಸಾಂಸ್ಕೃತಿಕ ವಿಕೃತಿಗಳು ಬೇರೆಯವೇ ಆಗಿದ್ದವು. ಕಾಫಿಡೇ, ಮಾಲ್‌, ವೀಕೆಂಡ್‌ ಸಂಸ್ಕೃತಿಗಳು ಅಕರಾಳ ವಿಕರಾಳವಾಗಿ ಬೆಳೆದಿದ್ದವು. ದಿನದ ಒಂದು ಹೊತ್ತಿನ ಊಟಕ್ಕೆ 10 ರೂ. ಖರ್ಚು ಮಾಡುವ ಶಕ್ತಿಯಿಲ್ಲದವರು ದೊಡ್ಡ ಪ್ರಮಾಣದಲ್ಲಿ ಕೇಂದ್ರೀಕೃತವಾಗುತ್ತಿದ್ದರೆ, ಟಿಪ್ಸ್‌ ರೂಪದಲ್ಲಿ ನೂರು ರೂ. ಕೊಡುವ `ಉದಾರಿ'ಗಳು ಇದ್ದರು. 10 ರೂ. ವಸ್ತುವಿಗೆ 50 ರೂ. ನಿಗದಿ ಮಾಡುವ ಮಾಲ್‌ಗಳಲ್ಲಂತೂ ಭರ್ಜರಿ ಜನಜಂಗುಳಿಯೇ ಅಣಿ ನೆರೆಯುತ್ತಿತ್ತು.
ಆದರೆ ಆರ್ಥಿಕ ಬಿಕ್ಕಟ್ಟು ತಂದಿತ್ತ ಸಮಸ್ಯೆ ಇದೀಗ ಎಲ್ಲಾ ಕ್ಷೇತ್ರವನ್ನೂ ಆತಂಕಕ್ಕೆ ದೂಡಿದೆ. ಅಲ್ಪ ಸಂಬಳದಾರರು, ಭರ್ಜರಿ ಸಂಬಳದಾರರು ಉದ್ಯೋಗ ಕಳೆದುಕೊಳ್ಳುವ ಸರದಿಯಲ್ಲಿ `ಸೂಳ್ಪಡೆಯಲ್ಪುದು ಕಾಣಾ ಮಹಾಧಿರಂಗದೋಳ್‌( ಯುದ್ಧ ಭೂಮಿಯಲ್ಲಿ ಮುಂಚೂಣಿ ವಹಿಸುವವರ ಸರದಿ ಎಲ್ಲರಿಗೂ ಬರುತ್ತದೆ) ಎಂಬಂತೆ ನಿರುದ್ಯೋಗ ಪರ್ವದಲ್ಲಿ ಎಲ್ಲರೂ ಸಾಲುಗಟ್ಟಿ ನಿಂತಿದ್ದಾರೆ.
ಯಾರ ಸರದಿ ಯಾವಾಗ ಬರುತ್ತದೆ ಎಂಬುದು ಕರಾರುವಾಕ್ಕಾಗಿ ಗೊತ್ತಾಗದೇ ಇದ್ದರೂ ಎಲ್ಲರೂ ಆತಂಕದ ಸರದಿಯಲ್ಲಿ ಕಾಯುತ್ತಿರುವವರೇ. ಇಂದು ನಾಳೆಯೋ ಮುಂದೆ ಯಾವತ್ತೋ ಕೆಲಸ ಕಳೆದುಕೊಳ್ಳುವುದು ಅಥವಾ ಸಂಬಳ-ಸೌಲಭ್ಯದ ಕಡಿತವನ್ನು ಅನುಭವಿಸುವುದು ಅನಿವಾರ್ಯವೆಂಬುದು ದಿಟ. ಅಥವಾ ಸಂಬಳ ಕಡಿತದ ಜತೆಯಲ್ಲಿ ಹೆಚ್ಚು ಅವಧಿ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿದೆ.
ಎಲ್ಲಾ ಮಾಯ:
ಎಲ್ಲಾ ಮಾಯ ಇಲ್ಲಿ ನಾವು ಮಾಯ. ಬಂಡವಾಳ ಶಾಹಿ ಜಗತ್ತಿನ ಆಳದಲ್ಲಿರುವ ಸುನಾಮಿ ಸುಳಿ ಮೇಲೆದ್ದಿದ್ದು, ಮಾಯಕ ಲೋಕದ ವಿಭ್ರಮೆ ನಿಧಾನವಾಗಿ ಕರಗುತ್ತಿದೆ. ಅಂಟಾರ್ಟಿಕ ಖಂಡದಲ್ಲಿ ಹಿಮ ಕರಗಿ ನೀರಾಗುವಂತೆ ಉದ್ಯೋಗ ಅವಕಾಶಗಳು ದಿನೇ ದಿನೇ ಕರಗುತ್ತಿದ್ದು, ಸುನಾಮಿ ಅಲೆಗಳು ಸಮಾಜವನ್ನು ಅಪ್ಪಳಿಸುತ್ತಿವೆ. ಹೇಗೋ ಕೈತುಂಬಾ ಸಂಬಳ ಪಡೆಯುವ ಉದ್ಯೋಗ ಲಭಿಸಿತು ಎಂದು ಮದುವೆ, ಮನೆ, ವಾಹನ ಮಾಡಿಕೊಳ್ಳುವಷ್ಟರಲ್ಲಿ ಎಲ್ಲವೂ ಸಿನೆಮಾದಂತೆ ಭಾಸವಾಗುತ್ತಿದೆ.
ಐಷಾರಾಮಿ ಜೀವನ ನಡೆಸುತ್ತಿದ್ದವರು ರಸ್ತೆ ಬದಿಯ ಆಹಾರಕ್ಕೆ ತಮ್ಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾರೆ. ಇದೆಂತಾ ಸ್ಥಿತಿ ಎಂದು ಹಲುಬುವ ಪರಿಪಾಟಲು ಹರೆಯ ಉದ್ಯೋಗಿಗಳದಾಗಿದೆ.
ಉದ್ಯೋಗ ಕಡಿತ ಇಂದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಐಟಿ, ಬಿಪಿಓ, ಜವಳಿ, ಕೈಗಾರಿಕೆ, ರೇಷ್ಮೆ, ಪತ್ರಿಕೋದ್ಯಮ, ಬ್ಯಾಂಕ್‌ ಹೀಗೆ ಎಲ್ಲಾ ಕ್ಷೇತ್ರವನ್ನು ಆರ್ಥಿಕ ಸಂಕಷ್ಟದ ಮಾಯೆ ಆವರಿಸಿದೆ. ಎಲ್ಲೆಡೆ ಉದ್ಯೋಗ ಕಡಿತ ಅಥವಾ ಸಂಬಳ ಕಡಿತವೆಂಬುದು ಸಾಮಾನ್ಯವಾಗಿದೆ.
ನ್ಯೂಯಾರ್ಕ್‌ನಲ್ಲಿ ಮುಂದಿನ ಆರುತಿಂಗಳಲ್ಲಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಒಂದೂ ವರೆ ಲಕ್ಷವೆಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಪ್ರತಿಷ್ಠಿತ ಹಾಗೂ ಪ್ರಭಾವಿ ಪತ್ರಿಕೆ ನ್ಯೂಯಾರ್ಕ್‌ ಟೈಮ್ಸ್‌ ಮುಚ್ಚುವ ಭೀತಿ ಎದುರಿಸುತ್ತಿದ್ದರೆ, ಮತ್ತೊಂದು ಪತ್ರಿಕೆ ಡೈಲಿ ಟ್ರಿಬ್ಯುನ್‌ ಕೂಡ ಸಂಕಷ್ಟದಲ್ಲಿದೆ.
ಭಾರತದ ಮಟ್ಟಿಗೆ ಆರ್ಥಿಕ ಕುಸಿತ ದೊಡ್ಡ ಚಪ್ಪಡಿಯನ್ನೆ ಹೇರಲಿದೆ. ಭಾರತದ ಜವಳಿ ಉದ್ಯಮ ತೀವ್ರ ಕಂಗೆಟ್ಟಿದೆ. ವಾರ್ಷಿಕ 3500 ಕೋಟಿ ರಫ್ತು ಮಾಡುತ್ತಿದ್ದ ರೇಷ್ಮೆ ಕ್ಷೇತ್ರ ಶೇ.50 ರಷ್ಟು ಕುಸಿತ ಕಂಡಿದೆ. ಈ ವರ್ಷದ ರಫ್ತು 1700 ಕೋಟಿ ರೂ. ದಾಟುವುದಿಲ್ಲವೆಂದು ಅಂದಾಜಿಸಲಾಗಿದೆ. ಇದರಿಂದಾಗಿ ಜವಳಿ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದ್ದು, ಮುಂದಿನ ಆರುತಿಂಗಳ ಅವಧಿಯಲ್ಲಿ 5-6 ಲಕ್ಷ ಮಂದಿ ಈ ಕ್ಷೇತ್ರದಲ್ಲಿ ನೇರ ಅಥವಾ ಪರೋಕ್ಷವಾಗಿ ಉದ್ಯೋಗ ವಂಚಿತರಾಗಲಿದ್ದಾರೆ.
ಅಮೆರಿಕದಲ್ಲಿ ಔಟ್‌ಸೋರ್ಸಿಂಗ್‌ ನಿಲ್ಲಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಒಬಾಮ ಗೆಲ್ಲುವಾಗ ಕೆಲಸದ ಹೊರಗುತ್ತಿಗೆಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದ. ಇದರಿಂದಾಗಿ ಭಾರತದ ಬಿಪಿ ಓ ಕ್ಷೇತ್ರ ತಲ್ಲಣಿಸಿದೆ. ಮುಖ್ಯವಾಗಿ ಅಮೆರಿಕದ ಉದ್ಯಮ ಸಂಸ್ಥೆಗಳ ಹೊರಗುತ್ತಿಗೆಯನ್ನು ನಿರ್ವಹಿಸಲು ಬೆಂಗಳೂರು ಹಾಗೂ ಹೈದರಾಬಾದ್‌ನ ಬಿಪಿ ಓ ಮತ್ತು ಐಟಿ ಕಂಪನಿಗಳಲ್ಲಿ ವ್ಯಾಪಕ ಉದ್ಯೋಗ ಸೃಷ್ಟಿಯಾಗಿತ್ತು. ಸಾಲುಸಾಲಾಗಿ ಹೊರಗುತ್ತಿಗೆಗೆ ಕಡಿವಾಳ ಬೀಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆರುತಿಂಗಳಲ್ಲಿ 50 ಸಾವಿರ ಟೆಕಿಗಳು ಉದ್ಯೋಗ ವಂಚಿತರಾಗಲಿದ್ದಾರೆ. ಇದರಿಂದ ಆರ್ಥಿಕತೆ ಮೇಲೆ ತೀವ್ರತರದ ಅಡ್ಡ ಪರಿಣಾಮ ಬೀರಲಿದೆ.
ಆರ್ಥಿಕ ಸಂಕಷ್ಟದ ಕಾರಣದಿಂದ ಆಭರಣ ಉದ್ಯಮ ತತ್ತರಿಸಿದೆ. ಆಭರಣ ರಫ್ತಿನಲ್ಲಿ ಭಾರತದ ಪ್ರಮುಖ ಪಾಲಿದ್ದು, ವಿದೇಶಿ ರಾಷ್ಟ್ರಗಳು ಆಮದನ್ನು ನಿರ್ಬಂಧಿಸಿವೆ. ಇದರಿಂದಾಗಿ ಆಭರಣ ಉದ್ಯಮ ಸಂಸ್ಥೆಗಳು ಮುಚ್ಚುವ ಹಂತ ತಲುಪಿದ್ದು ಈ ಕ್ಷೇತ್ರದಲ್ಲಿ 1 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಎಲ್ಲಾ ಪತ್ರಿಕೆಗಳಲ್ಲೂ ಉದ್ಯೋಗ ಕಡಿತದ ಚರ್ಚೆ ನಡೆಯುತ್ತಿದೆ. ಇಂಗ್ಲಿಷ್‌ ಹಾಗೂ ಸ್ಥಳೀಯ ದೈನಿಕಗಳಿಗೆ ಇದರ ಬಾಧೆ ತಟ್ಟಲಿದೆ. 10-12 ಪರ್ಸೆಂಟ್‌ ಉದ್ಯೋಗಿಗಳು ಬೇರೆ ಉದ್ಯೋಗ ಅರಸಿಕೊಳ್ಳಬೇಕಾಗಿದೆ.
ಇದರ ಜತೆಯಲ್ಲಿ ಸಂಬಳ ಸಹಿತ ರಜೆ ನೀಡುವ ಪರಿಪಾಠವನ್ನು ಏರ್‌ಲೈನ್ಸ್‌ ಹಾಗೂ ಬಿಪಿ ಓ ಕಂಪನಿಗಳು ಆರಂಭಿಸಿವೆ. ಕೆಲಸವಿಲ್ಲದೇ ಸಂಬಳ ನೀಡುವುದೆಂದರೆ ಪೂರ್ತಿ ಸಂಬಳವನ್ನು ಯಾವ ಕಂಪನಿಗಳೂ ನೀಡಲಾರವು. ಅರ್ಧದಷ್ಟು ಸಂಬಳ ನೀಡಬಹುದು. ಜತೆಗೆ ಕೆಲಸವಿಲ್ಲದೇ ಯಾವ ಉದ್ಯೋಗಿಯೂ ಇರಲಾರ. ಅನಿವಾರ್ಯವಾಗಿ ಇದ್ದ ಕೆಲಸಕ್ಕೆ ರಾಜಿನಾಮೆ ಬೀಸಾಕಿ ಬೇರೆ ಕೆಲಸ ನೋಡಿಕೊಳ್ಳಬೇಕಾಗುತ್ತದೆ. ಒಂದರ್ಥದಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದ ಕೆಲಸವನ್ನು ಬಿಟ್ಟು ಅರೆ ಬರೆ ಸಂಬಳಕ್ಕೆ ಕೆಲಸ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.
ಇದರಿಂದಾಗಿ ಸರ್ಕಾರಿ ನೌಕರಿಗೆ ಭದ್ರವೆಂಬ ವಾತಾವರಣ ನಿರ್ಮಾಣ ಸೃಷ್ಟಿಯಾಗಲಿದೆ. ನಿರುದ್ಯೋಗ ತರಲಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬಿಕ್ಕಟ್ಟು ಬೇರೆ ರೀತಿಯದಾಗಿದ್ದು, ಇದರ ಬಗ್ಗೆ ಮತ್ತೊಂದು ಸುದೀರ್ಘ ಚರ್ಚೆಯೇ ನಡೆಯಬೇಕಿದೆ.

Saturday, December 20, 2008

ಬಸವರಾಜಮಾರ್ಗಕ್ಕೆ ಸಂದ ಗೌರವ

ಸೃಜನಶೀಲ ಸಾಹಿತಿಗಳನ್ನೇ ಅರಸಿಕೊಂಡು ಹೋಗುತ್ತಿದ್ದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸುಮಾರು 18 ವರ್ಷಗಳ ತರುವಾಯ ಕನ್ನಡ ಬೇರುಗಳನ್ನು ಭದ್ರ ಹಾಗೂ ಸಮೃದ್ಧಗೊಳಿಸಿದ ಹಿರಿಯ ವಿದ್ವಾಂಸರೊಬ್ಬರಿಗೆ ಒಲಿದಿದೆ.
ಗ್ರಂಥಸಂಪಾದನೆ ಹಾಗೂ ಸೃಜನಶೀಲ ಬರವಣಿಗೆ ಎರಡೂ ಕ್ಷೇತ್ರದಲ್ಲಿ ಇಳಿವಯಸ್ಸಿನಲ್ಲೂ ಅಹರ್ನಿಶಿ ದುಡಿಯುತ್ತಿರುವ, ಕನ್ನಡದ ಕೆಲಸಕ್ಕಾಗಿ ತಮ್ಮ ಜೀವನವನ್ನು ಮುಡುಪಿಟ್ಟಿರುವ ವಿದ್ವಾಂಸರೆಂದರೆ ಡಾ ಎಲ್‌. ಬಸವರಾಜು. ಅವರ ಆಯ್ಕೆಯು ಸಂಶೋಧನೆ, ಸಂಪಾದನೆ, ಪ್ರಾಚೀನ ಕೃತಿಗಳ ತಲಸ್ಪರ್ಶಿ ಶೋಧ, ಇವತ್ತಿನ ತಲೆಮಾರಿಗೆ ಕನ್ನಡ ಪರಂಪರೆಯನ್ನು ಪರಿಚಯಿಸುವ ಮಹತ್ಕಾರ್ಯಕ್ಕೆ ಸಂದ ಗೌರವವಾಗಿದೆ.
1992 ರಲ್ಲಿ ಸಿಂಪಿ ಲಿಂಗಣ್ಣ, 1995ರಲ್ಲಿ ಡಾಎಚ್‌.ಎಲ್‌. ನಾಗೇಗೌಡ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರಿಬ್ಬರೂ ಜಾನಪದ ಸಂಗ್ರಹ, ಸಂಶೋಧನೆಗಳಲ್ಲಿ ಅವಿರತವಾಗಿ ದುಡಿದವರು. ಇವರಿಬ್ಬರು ಜಾನಪದದ ಕಣಜವನ್ನು ತಮ್ಮ ಅಂತಃಶಕ್ತಿ ಹಾಗೂ ಕ್ಷೇತ್ರಕಾರ್ಯದಿಂದ ತುಂಬಿಸಿಕೊಟ್ಟವರು. ಡಾ.ಎಲ್‌. ಬಸವರಾಜು ಮಾದರಿಯಲ್ಲಿಯೇ ವಚನ ಸಾಹಿತ್ಯ ಸಂಗ್ರಹ ಹಾಗೂ ಸಂಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಆರ್‌.ಸಿ. ಹಿರೇಮಠ ಅವರು 1990ರಲ್ಲಿ ನಡೆದ 59 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಆರ್‌.ಸಿ. ಹಿರೇಮಠರ ತರುವಾಯ ಭಾಷೆ ಹಾಗೂ ಪ್ರಾಚೀನ ಸಾಹಿತ್ಯ ಕ್ಷೇತ್ರದಲ್ಲಿ ಅವಿರತ ಶ್ರಮಿಸಿದ ಹಿರಿಯ ಜೀವಿಗಳು ಅಧ್ಯಕ್ಷರಾದ ನಿದರ್ಶನವಿರಲಿಲ್ಲ. ಕಳೆದ ಬಾರಿ ಉಡುಪಿಯಲ್ಲಿ ನಡೆದ ಸಮ್ಮೇಳನ ಕನ್ನಡ ವಿಮರ್ಶಾ ಕ್ಷೇತ್ರಕ್ಕೆ ಗೌರವ ಸಲ್ಲಿಸಿದ್ದರೆ, ಈ ಬಾರಿಯ ಸಮ್ಮೇಳನ ಸಂಶೋಧನೆ ಹಾಗೂ ಸಂಪಾದನೆ ಕ್ಷೇತ್ರಕ್ಕೆ ಪ್ರಾಧಾನ್ಯ ನೀಡಿದೆ.
ಹಿರೇಮಠರು ಅಧ್ಯಕ್ಷರಾದ ನಂತರ ನಡೆದ 18 ಸಮ್ಮೇಳನಗಳ ಅಧ್ಯಕ್ಷರಾಗಿ ಆಯ್ಕೆಯಾದವರಲ್ಲಿ ಸಿಂಪಿ ಲಿಂಗಣ್ಣ, ನಾಗೇಗೌಡರನ್ನು ಹೊರತು ಪಡಿಸಿದರೆ (ಜಾನಪದ ಕ್ಷೇತ್ರ) ಕವಿ ಅಥವಾ ಕಾದಂಬರಿಕಾರರೇ ಹೆಚ್ಚಾಗಿದ್ದಾರೆ. ಕೆ.ಎಸ್‌.ನರಸಿಂಹಸ್ವಾಮಿ, ಜಿ.ಎಸ್‌. ಶಿವರುದ್ರಪ್ಪ, ಚದುರಂಗ, ಚೆನ್ನವೀರ ಕಣವಿ, ಕಯ್ಯಾರ ಕಿಞ್ಞಣ್ಣರೈ, ಭೈರಪ್ಪ, ಅನಂತಮೂರ್ತಿ, ಪಾಟೀಲ ಪುಟ್ಟಪ್ಪ, ಕಮಲಾ ಹಂಪನಾ, ಶಾಂತರಸ, ನಿಸಾರ್‌ ಅಹಮದ್‌ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಬಸವರಾಜು ಹೆಗ್ಗಳಿಕೆ: ಯಾವ ಪಂಥಕ್ಕೂ ಸೇರದ, ಆದರೆ ಸಾಮಾಜಿಕ ಸಂಗತಿಗಳ ಬಗ್ಗೆ ಜೀವಪರವಾದ ಕಾಳಜಿ ಹೊಂದಿದ, ಒಂದು ವಿಶ್ವವಿದ್ಯಾನಿಲಯ ಮಾಡಬಹುದಾದ ಕೆಲಸವನ್ನು ಏಕಾಂಗಿಯಾಗಿ ತತ್ಪರತೆಯಿಂದ ಮಾಡಿದ ಡಾ. ಬಸವರಾಜು ಅವರು ಅಧ್ಯಾಪಕರಿಗೆ ಆದರ್ಶವಾಗುವ ವ್ಯಕ್ತಿತ್ವ ಸಂಪಾದಿಸಿದವರು.
1919ರಲ್ಲಿ ಕೋಲಾರ ಜಿಲ್ಲೆ ಇಡಗೂರಿನಲ್ಲಿ ಜನಿಸಿದ ಬಸವರಾಜು ಅವರು, ಮೈಸೂರು ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದರು. ಮೂರು ದಶಕಗಳಿಗೂ ಹೆಚ್ಚುಕಾಲ ಮೈಸೂರು ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಕ್ಷರದಾಸೋಹ ಮಾಡಿದರು.
ಬರುವ ಸಂಬಳಕ್ಕೆ ಪಾಠ ಮಾಡುವುದಷ್ಟೇ ತಮ್ಮ ಕೆಲಸವೆಂದು ಸೀಮಿತರಾಗದ ಬಸವರಾಜು ಅವರು, ಅಧ್ಯಾಪಕರ ವ್ಯಕ್ತಿತ್ವಕ್ಕೆ ಹೊಸಭಾಷ್ಯ ಬರೆದವರು. ತಮ್ಮ ತೊಂಬತ್ತರ ಇಳಿವಯಸ್ಸಿನಲ್ಲೂ ನಿರಂತ ಅಧ್ಯಯನ, ಸಂಶೋಧನೆ, ತಾಳೆಗರಿಗಳ ಅವಲೋಕನ, ಪರಾಮರ್ಶೆಯನ್ನು ನಿಸ್ಪೃಹವಾಗಿ ಮಾಡಿಕೊಂಡು ಬಂದವರು. ಪ್ರಾಚೀನ ಕೃತಿಗಳ ಸಂಪಾದನೆಗೆ ಹೊಸ ಪರಿಭಾಷೆಯನ್ನು ಕಟ್ಟಿಕೊಟ್ಟ ಅವರು, ತಮ್ಮ ಪಾಂಡಿತ್ಯ, ಆಳವಾದ ಅಧ್ಯಯನ ಶೀಲತೆಯಿಂದ ಇತರರಿಗೆ ಮಾದರಿಯಾದವರು.
ವಚನ ಸಾಹಿತ್ಯ ಅಧ್ಯಯನದಲ್ಲಿ ಹೊಸ ಹಾದಿ ತೆರೆದು ಅದಕ್ಕೊಂದು ಮೌಲಿಕತೆಯನ್ನು ಕಲ್ಪಿಸಿಕೊಟ್ಟ ಬಸವರಾಜು ಅವರು ಕನ್ನಡದ ಶಾಸ್ತ್ರೀಯ ಕೃತಿಗಳನ್ನು ವೈಶಿಷ್ಟ್ಯಪೂರ್ಣವಾಗಿ ಸಂಪಾದಿಸಿಕೊಟ್ಟವರು.
ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯಗಳ ಸಂಪಾದನೆ ಜತೆಗೆ ಸರಳ ಪಂಪಭಾರತವನ್ನು ರಚಿಸಿ ಪ್ರಾಚೀನ ಗದ್ಯಕ್ಕೆ ಅರ್ವಾಚೀನ ವಿನ್ಯಾಸವನ್ನು ನೀಡಿದವರು. ಹಾಗೆಯೇ ದೇವನೂರು ಮಹಾದೇವರ ಮಹತ್ವದ ಕೃತಿ ಕುಸುಮಬಾಲೆ ಕಾದಂಬರಿಯನ್ನು ಲಯಾನುಸಾರ ಮರುವಿನ್ಯಾಸಗೊಳಿಸಿ ಕಾವ್ಯಕುಸುಮಬಾಲೆಯಾಗಿ ರೂಪಿಸಿದ್ದು ಇವರ ಅಧ್ಯಯನಶೀಲತೆ, ಪಾಂಡಿತ್ಯದ ಮೇರುತನಕ್ಕೆ ಸಾಕ್ಷಿಯಾಗುತ್ತದೆ.
ಕಬ್ಬಿಣದ ಕಡಲೆಯಂತಿರುವ ಕೇಶಿರಾಜನ ಶಬ್ದಮಣಿ ದರ್ಪಣವನ್ನು ಮೂವತ್ತಕ್ಕೂ ಹೆಚ್ಚು ಹಸ್ತಪ್ರತಿಗಳ ನೆರವಿನಿಂದ ಸಂಪಾದಿಸಿ, ವಿಸ್ತೃತ ವ್ಯಾಖ್ಯಾನದೊಂದಿಗೆ ಪ್ರಕಟಿಸಿದ್ದಾರೆ.
ಐವತ್ತು ಕೃತಿಗಳು ಇವರ ಅಮೂಲ್ಯ ಕೊಡುಗೆಯಾಗಿವೆ. ಠಾಣಾಂತರ, ಜಾಲಾರಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಾಚೀನ ಕನ್ನಡದ ವಿಸ್ತಾರ, ವೈಶಿಷ್ಟ್ಯದ ಆಳ ಹರಿವನ್ನು ತಮ್ಮ ಅಂಗೈಯಲ್ಲಿ ಹಿಡಿದಿರುವ ಶಕ್ತಿ ಹೊಂದಿದ ಬಸವರಾಜು ಅವರು ಸಮ್ಮೇಳನದ ಅಧ್ಯಕ್ಷರಾಗುವ ಮೂಲಕ ಕನ್ನಡದ ವಿದ್ವತ್‌ಪರಂಪರೆ ಮತ್ತೊಮ್ಮೆ ಗೌರವ ಪಡೆದಿದೆ.

Tuesday, December 2, 2008

ಉಗ್ರ ಉಪ­ಟಳ

ಮುಂಬೈ­ನಲ್ಲಿ `ಉಗ್ರ'ರು ನಡೆ­ಸಿದ ಪೈಶಾ­ಚಿಕ ಕೃತ್ಯ­ದಿಂದ ಇಡೀ ದೇಶ ದಂಗು ಬಡಿದು ಹೋಗಿದೆ. ಅಲ್ಲಲ್ಲಿ ಆಗಾಗ್ಗೆ ನಡೆ­ಯು­ತ್ತಿದ್ದ ಭಯೋ­ತ್ಪಾ­ದಕ ವಿಧ್ವಂ­ಸ­ಗಳ ಮಾದ­ರಿ­ಗಿಂತ ಭಿನ್ನ­ವಾಗಿ ವ್ಯವ­ಸ್ಥಿತ, ಯೋಜ­ನಾ­ಬ­ದ್ಧ­ವಾಗಿ ಉಗ್ರರು ನಡೆ­ಸಿದ ದಾಳಿ ದೇಶದ ಭದ್ರತಾ ವ್ಯವಸ್ಥೆ ಸಂಪೂರ್ಣ ಬಿಡಾ­ಸೆದ್ದು ಹೋಗಿ­ರುವ ಸ್ಪಷ್ಟ ಸೂಚ­ನೆ­ಯಾ­ಗಿದೆ.
ಕೇಂದ್ರ ಗುಪ್ತ­ಚರ, ಕರಾ­ವಳಿ ರಕ್ಷಣಾ ಪಡೆ, ಆಂತ­ರಿಕ ಭದ್ರತೆ ಹಾಗೂ ಶುದ್ಧಾಂ­ಗ­ವಾಗಿ ಕೇಂದ್ರ ಸರ್ಕಾ­ರದ ಆಡ­ಳಿತ ವೈಫ­ಲ್ಯ­ವನ್ನು ಇದು ಎತ್ತಿ ತೋರಿ­ಸು­ತ್ತದೆ. ಕೇಂದ್ರ ಹಾಗೂ ಮಹಾ­ರಾಷ್ಟ್ರ ರಾಜ್ಯ ಸರ್ಕಾ­ರದ ವಕ್ತಾ­ರರು ಈಗ ಹೇಳು­ತ್ತಿ­ರು­ವುದು `ದೇಶ­ದೊ­ಳಕ್ಕೆ ನುಸು­ಳಿದ 20 ಮಂದಿ ವಿದೇಶಿ ಉಗ್ರರು ಈ ಕೃತ್ಯ­ವೆ­ಸ­ಗಿ­ದ್ದಾರೆ' ಎಂದು. ಕೇವಲ ಅಷ್ಟೇ ಮಂದಿ ಇಡೀ ದೇಶ­ವನ್ನು ಮೂರು ದಿನ­ಗಳ ಕಾಲ ಉಸಿ­ರು­ಗ­ಟ್ಟಿಸಿ ನಿಲ್ಲಿ­ಸುವ ಶಕ್ತಿ ಹೊಂದಿ­ದ್ದರೆ, ದೇಶ­ದು­ದ್ದಕ್ಕೂ ತಲೆ ಮರೆ­ಸಿ­ಕೊಂ­ಡಿ­ರುವ ಪಾಕಿ­ಸ್ತಾನಿ, ಬಾಂಗ್ಲಾ­ದೇ­ಶಿ­ಯರು ಅಷ್ಟೂ ಮಂದಿ ಸೇರಿ­ದರೆ ವಾರ­ದೊ­ಳಗೆ ದೇಶದ ಸಾರ್ವ­ಭೌ­ಮ­ತ್ವನ್ನು ಕೆಡವಿ, ತಮ್ಮದೇ ಸರ್ಕಾರ ಸ್ಥಾಪಿ­ಸು­ವಷ್ಟು ಬಲ­ಶಾ­ಲಿ­ಯಾ­ಗಿ­ಲ್ಲ­ವೆಂದು ನಂಬು­ವು­ದಾ­ದರೂ ಹೇಗೆ?
ಸದಾ ತಮ್ಮ ಡ್ರೆಸ್‌ ಬಗ್ಗೆ ಕಾಳ­ಜಿ­ಯಿ­ಟ್ಟು­ಕೊಂ­ಡಿ­ರುವ ಘನ­ತೆ­ವೆತ್ತ ದೇಶದ ಗೃಹ ಸಚಿವ ಶಿವ­ರಾ­ಜ್‌­ಪಾ­ಟೀ­ಲ್‌­ರಿಗೆ ಕನಿಷ್ಠ ನೈತಿ­ಕತೆ ಇದ್ದಿ­ದ್ದರೆ ದೇಶದ ಜನರ ಡ್ರೆಸ್‌ ಅಲ್ಲಾ, ಅಮೂಲ್ಯ ಜೀವವೇ ಬಂದೂ­ಕಿನ ಮೊನೆ­ಯಲ್ಲಿ ನಿಂತಿ­ರುವ ಬಗ್ಗೆ ಕಾಳಜಿ ತೋರಿ­ಸ­ಬೇ­ಕಿತ್ತು. ಕನಿಷ್ಠ ತನ್ನ ಬಳಿ ಗೃಹ­ಖಾತೆ ನಿಭಾ­ಯಿ­ಸಲು ಆಗು­ವು­ದಿ­ಲ್ಲ­ವೆಂದು ರಾಜೀ­ನಾ­ಮೆ­ಯ­ನ್ನಾ­ದರೂ ಬಿಸಾಕಿ ವೃದ್ಧಾ­ಪ್ಯ­ದಲ್ಲಿ ದೇವರ ಮುಂದೆ ಭಜನೆ ಮಾಡುತ್ತಾ ಕೂರ­ಬ­ಹು­ದಿತ್ತು.
ಕ್ರಿಯಾ­ಶಕ್ತಿ, ಚಿಂತ­ನಾ­ಶ­ಕ್ತಿ­ಯಿ­ಲ್ಲದ, ಅವ­ಲಂ­ಬ­ನೆ­ಯಿ­ಲ್ಲದೇ ಸ್ವತಃ ನಡೆ­ಯಲೂ ಆಗದ, ಅಧಿ­ಕಾ­ರಕ್ಕೆ ಅಂಟಿ­ಕೂ­ರುವ ಜಾಢ್ಯ ಹಿಡಿದ ಮುದಿ ರಾಜ­ಕಾ­ರ­ಣಿ­ಗ­ಳಿಂ­ದಾಗಿ ದೇಶಕ್ಕೆ ಇಂತಹ ದುರ್ಗತಿ ಬಂದಿ­ರು­ವುದು. ಉಗ್ರರ ವಿರುದ್ಧ ಜೀವದ ಹಂಗು ತೊರೆದು ಹೋರಾ­ಡುವ, ದೇಶೀಯ ವಿದ್ರೋ­ಹಿ­ಗ­ಳನ್ನು ಮುಲಾ­ಜಿ­ಲ್ಲದೇ ಬಗ್ಗು ಬಡಿ­ಯುವ ಸೈನ್ಯ-ಪೊಲೀ­ಸರ ಆತ್ಮ­ಬಲ ಹೆಚ್ಚಿ­ಸುವ ಶಕ್ತಿ ಒಬ್ಬನೇ ಒಬ್ಬ ರಾಜ­ಕಾ­ರ­ಣಿಗೆ ಇಲ್ಲ. ಉರಿವ ಮನೆ­ಯಲ್ಲಿ ಗಳ ಎಣಿ­ಸುವ ಕುಯು­ಕ್ತಿ­ಯನ್ನು ಎಲ್ಲಾ ರಾಜ­ಕಾ­ರ­ಣಿ­ಗಳೂ ಮಾಡು­ತ್ತಿ­ದ್ದಾರೆ. ಭಯೋ­ತ್ಪಾ­ದ­ಕ­ರನ್ನು ದೇಶ­ದ್ರೋ­ಹಿ­ಗಳ ಪಟ್ಟಿಗೆ ಸೇರಿಸಿ, ಯಾವ ರಾಜ­ಕೀಯ, ಸೈದ್ಧಾಂ­ತಿಕ ಹಂಗಿ­ಲ್ಲದೇ ಗಲ್ಲಿ­ಗೇ­ರಿ­ಸುವ ಕಠಿಣ ನಿರ್ಧಾರ ತೆಗೆ­ದು­ಕೊ­ಳ್ಳು­ವ­ವ­ರೆಗೆ ಈ ದೇಶದ ಶಾಂತಿಗೆ ಉಳಿ­ಗಾ­ಲ­ವಿ­ಲ್ಲ­ವೆಂ­ಬುದು ಎಲ್ಲ­ರಿಗೂ ಸ್ಪಷ್ಟ­ವಾ­ಗ­ಬೇಕು. ನಮ್ಮ ಹಣ­ವನ್ನು ತೆರಿಗೆ ರೂಪ­ದಲ್ಲಿ ವಸೂಲು ಮಾಡಿ ತಾವು ಮಜಾ ಉಡಾ­ಯಿ­ಸುವ ರಾಜ­ಕಾ­ರ­ಣಿ­ಗಳು ಇನ್ನಾ­ದರೂ ಸ್ಪಷ್ಟ ನಿಲುವು ತೆಗೆ­ದು­ಕೊ­ಳ್ಳ­ದಿ­ದ್ದರೆ ಜನ ಬೀದಿ­ಬೀ­ದಿ­ಯಲ್ಲಿ ಛೀ ಥೂ ಎಂದು ಉಗಿ­ಯುವ ದಿನ ದೂರ­ವಿಲ್ಲ.
ಏನಾ­ಗಿದೆ ದೇಶಕ್ಕೆ?
ಕಾಶ್ಮೀರ, ಮಣಿ­ಪುರ, ತ್ರಿಪುರ, ಅಸ್ಸಾಂ, ನಾಗಾ­ಲ್ಯಾಂಡ್‌, ಪಂಜಾಬ್‌ ಹೀಗೆ ದೇಶ­ದು­ದ್ದಕ್ಕೂ ಎರಡು ದಶ­ಕ­ಗಳ ಹಿಂದೆ ನಡೆ­ಯು­ತ್ತಿದ್ದ ಸ್ವಾತಂತ್ರ್ಯ ಹೋರಾಟ ರೂಪದ ಹಿಂಸಾ­ತ್ಮಕ ಚಳ­ವಳಿ ಈಗ ಹದ್ದು­ಬ­ಸ್ತಿಗೆ ಬಂದಿದೆ. 1992 ರ ಈಚೆಗೆ ಬಾಬ್ರಿ ಮಸೀ­ದಿ­ಯನ್ನು ಕೆಡ­ವಿದ ಮೇಲೆ ಭಯೋ­ತ್ಪಾ­ದ­ನೆಯ ಮತ್ತೊಂದು ಮಜಲು ಶುರು­ವಾ­ಯಿತು. ಬಾಬ್ರಿ ಮಸೀ­ದಿ­ಯನ್ನು ಕೆಡವಿ ಹಿಂದೂ ಕೋಮು­ವಾ­ದಿ­ಗಳು ವಿೃಂ­ಭಿ­ಸಿದ ಡಿಸೆಂ­ಬರ್‌ 6 ರ ಕರಾ­ಳ­ದಿ­ನದ ಬೆಳ­ಕಿ­ನಲ್ಲಿ ಈ ಭಯೋ­ತ್ಪಾ­ದನೆ ವಿಧ್ವಂ­ಸ­ವನ್ನು ನೋಡದೇ ಹೋದರೆ ಕತ್ತ­ಲೆ­ಯಲ್ಲಿ ಬೀಗದ ಕೈಯನ್ನು ಕಳೆ­ದು­ಕೊಂಡು ಬೆಳ­ಕಿ­ನಲ್ಲಿ ಬೀಗದ ಕೈಯನ್ನು ಹುಡು­ಕಿ­ದಂ­ತಹ ವ್ಯರ್ಥ ಪ್ರಯ­ತ್ನ­ವಾ­ಗು­ತ್ತದೆ. ಇದನ್ನು ಆಳು­ವ­ವರು, ಸಮಾಜ ಚಿಂತ­ಕರು, ರಕ್ಷಣಾ ವಿಶ್ಲೇ­ಷ­ಕರು ಅರ್ಥ ಮಾಡಿ­ಕೊ­ಳ್ಳ­ಬೇಕು.
ಇತ್ತೀ­ಚೆಗೆ `ವಿಜಯ ಕರ್ನಾ­ಟಕ' ಪತ್ರಿ­ಕೆ­ಯಲ್ಲಿ ನಿವೃತ್ತ ಮುಖ್ಯ ನ್ಯಾಯ­ಮೂರ್ತಿ, ಹಾಲಿ ರಾಜ್ಯ­ಸಭಾ ಸದಸ್ಯ ಶ್ರೀಮಾನ್‌ ಎಂ. ರಾಮಾ­ಜೋ­ಯಿ­ಸ್‌­ರ­ವರು ಬರೆದ ಲೇಖ­ನ­ದಲ್ಲಿ `ದೇಶ­ದು­ದ್ದಕ್ಕೂ ನಡೆದ ಮುಸ್ಲಿಂ ಭಯೋ­ತ್ಪಾ­ದನಾ ಕೃತ್ಯ­ಗ­ಳಿಗೆ ಪ್ರತೀ­ಕಾ­ರ­ವಾಗಿ ಸಾಧ್ವಿ ಪ್ರಗ್ಯಾ ಸಿಂಗ್‌ ಠಾಕೂರ್‌ ಮತ್ತ­ವರ ಸಂಗಾ­ತಿ­ಗಳು ಭಯೋ­ತ್ಪಾ­ದನೆ ಕೃತ್ಯಕ್ಕೆ ಇಳಿ­ದರು. ಇದು ಪ್ರತಿ­ಸ್ಪಂ­ದ­ನಾ­ತ್ಮ­ಕ­ವಾಗಿ ಬೆಳೆ­ದು­ಬಂದ ಉದ್ಧೇ­ಶಿತ ಕೃತ್ಯವೇ ವಿನಃ ಹಿಂದೂ ಭಯೋ­ತ್ಪಾ­ದನೆ ಎಂದು ಕರೆ­ಯ­ಬಾ­ರದು. ಅವ­ರೆಲ್ಲಾ ಭಗ­ತ್‌­ಸಿಂಗ್‌, ಸುಖ­ದೇವ್‌, ರಾಜ­ಗು­ರು­ರಂ­ತ­ಹ­ವರ ಹೋರಾ­ಟದ ಪರಂ­ಪ­ರೆಗೆ ಸೇರಿ­ದ­ವರು' ಎಂದು ಬಣ್ಣಿ­ಸಿ­ದ್ದರು.
ಕ್ರಿಯೆ ಇಲ್ಲದೇ ಪ್ರತಿ­ಕ್ರಿಯೆ ಇರು­ವು­ದಿ­ಲ್ಲ­ವೆಂ­ಬುದು ವಿಜ್ಞಾ­ನದ ನಿಯಮ. ರಾಮಾ­ಜೋ­ಯಿಸ್‌ ಮಾತು­ಗ­ಳನ್ನೇ ಮುಂದು­ವ­ರೆ­ಸು­ವು­ದಾ­ದರೆ ಈಗ ನಡೆ­ಯು­ತ್ತಿ­ರುವ ಪಾತಕೀ ಕೃತ್ಯ­ಗ­ಳಿಗೂ ಒಂದು ಕ್ರಿಯಾ­ಸ್ವ­ರೂ­ಪದ ಮೂಲ ಇರ­ಲೇ­ಬೇ­ಕ­ಲ್ಲವೇ. ಅದನ್ನೇ ಬಾಬ್ರಿ ಮಸೀದಿ ಕೆಡ­ವಿದ ಕೃತ್ಯ ಎಂದು ಹೇಳ­ಬ­ಹುದು.
ಹಾಗಂತ ರಾಮ­ಜೋ­ಯಿ­ಸ್‌­ರ­ವರು ಸಮ­ರ್ಥಿ­ಸಿ­ಕೊಂ­ಡಂತೆ ದೇಶ­ದ­ಲ್ಲಿನ ಭಯೋ­ತ್ಪಾ­ದನೆ ಕೃತ್ಯ­ಗ­ಳನ್ನು ಸಮ­ರ್ಥಿ­ಸು­ವುದು ಹಿಂಸಾ­ವಿ­ನೋ­ದ­ವಾ­ಗು­ತ್ತದೆ. ಹಿಂಸೆ­ಯನ್ನು ಸಂಭ್ರ­ಮಿ­ಸು­ವುದು, ಅದನ್ನು ಪ್ರತ್ಯಕ್ಷ ಯಾ ಪರೋ­ಕ್ಷ­ವಾಗಿ ಸಮ­ರ್ಥಿ­ಸು­ವುದು ಎರಡೂ ಕೂಡ ಶಾಂತಿ ಪ್ರಿಯ­ರಿಗೆ ತಕ್ಕು­ದಲ್ಲ. ಭಯೋ­ತ್ಪಾ­ದನೆ ಯಾವುದೇ ಮೂಲ­ದಿಂದ ಬರಲಿ ಅದು ಖಂಡ­ನಾರ್ಹ, ಶಿಕ್ಷಾರ್ಹ. ಹಿಂದು­ಗಳು ಮಾಡಿ­ದಾ­ಕ್ಷಣ ಅದು ಒಪ್ಪಿತ, ಮುಸ್ಲಿ­ಮರು ಮಾಡಿ­ದಾ­ಕ್ಷಣ ಅದು ಖಂಡ­ನೀ­ಯ­ವೆಂ­ಬುದು ಶಾಂತಿ­ಪ್ರಿ­ಯ­ರಿಗೆ ಶೋಭೆ ತರುವ ಸಂಗ­ತಿ­ಯಲ್ಲ. ಹಾಗೆ ಹೇಳುತ್ತಾ ಹೋದರೆ 80 ರ ದಶ­ಕ­ದಲ್ಲಿ ಪಂಜಾ­ಬಿ­ನಲ್ಲಿ ಪ್ರತ್ಯೇಕ ಖಾಲಿ­ಸ್ತಾ­ನ್‌­ಗಾಗಿ ಬಿಂದ್ರ­ನ್‌­ವಾಲೆ, ಅಸ್ಸಾಂನ ಉಲ್ಫಾ ಉಗ್ರರು, ತ್ರಿಪುರ ವಿಮೋ­ಚನಾ ಹೋರಾ­ಟ­ಗಾ­ರರು ಹೀಗೆ ಎಲ್ಲ­ವನ್ನೂ ಸಮ­ರ್ಥಿ­ಸ­ಬೇ­ಕಾ­ಗು­ತ್ತದೆ. ಏಕೆಂ­ದರೆ ರಾಮಾ­ಜೋ­ಯಿಸ್‌ ಲೆಕ್ಕ­ದಲ್ಲಿ ಇವ­ರ್ಯಾರು ಸಾಬ­ರಲ್ಲ. ಅವ­ರೆ­ಲ್ಲರೂ `ಸೋಕಾಲ್ಡ್‌ ಹಿಂದು­ಗಳೇ' ಆಗು­ತ್ತಾರೆ.
ಮುಂ`ಭಯ':
ಮುಂಬೈ ಎಂದರೆ ಭಯ ಪಡುವ ಸ್ಥಿತಿ ಈಗಿ­ನ­ದಲ್ಲ. ಬಾಬ್ರಿ ಮಸೀದಿ ಧ್ವಂಸದ ನಂತರ ನಡೆದ ಮುಂಬೈ ಕೋಮು­ಗ­ಲಭೆ ಕುರಿತು ನ್ಯಾಯ­ಮೂರ್ತಿ ಶ್ರೀಕೃಷ್ಣ ಅವರು ಸಲ್ಲಿ­ಸಿದ `ಶ್ರೀಕೃಷ್ಣ ರಿಪೋರ್ಟ್‌' ಓದಿ­ದರೆ ಎದೆ ಝಲ್ಲ­ನೆ­ನಿ­ಸು­ತ್ತದೆ. ಆದರೆ ಇವ­ತ್ತಿಗೂ ಶ್ರೀ ಕೃಷ್ಣ ಕಮಿ­ಶನ್‌ ರಿಪೋ­ರ್ಟ್‌­ನಲ್ಲಿ ಆರೋ­ಪಿ­ತ­ರೆಂದು ಹೆಸರು ಪಡೆದ ಯಾರಿಗೂ ಶಿಕ್ಷೆ­ಯಾ­ಗಿಲ್ಲ. ಅವ­ರೆಲ್ಲಾ ಹಾಗೆ ಸರಾ­ಗ­ವಾಗಿ ಓಡಾ­ಡಿ­ಕೊಂ­ಡಿ­ದ್ದಾರೆ. ಇದಕ್ಕೆ ಯಾರು ಹೊಣೆ?
ಮುಂಬೈ­ನಲ್ಲಿ ನಡೆದ ವಿಧ್ವಂ­ಸಕ ದಾಳಿಯ ಚಿತ್ರ­ವನ್ನು ಟಿ.ವಿ.ಯಲ್ಲಿ ನೋಡು­ತ್ತಿ­ದ್ದರೆ ಮೈ ನಡು­ಗು­ತ್ತದೆ. ತಾಜ್‌, ಟ್ರೆಡೆಂಟ್‌, ಒಬೆ­ರಾಯ್‌ ಹಾಗೂ ನಾರಿ­ಮ­ನ್‌­ಹೌ­ಸ್‌ನ್ನು ಸುಮಾರು 3 ದಿನ­ಗಳ ಕಾಲ ತಮ್ಮ ಹಿಡಿ­ತ­ದ­ಲ್ಲಿ­ಟ್ಟು­ಕೊಂಡ ಉಗ್ರರು ಅಸಾ­ಮಾ­ನ್ಯ­ರೇ­ನಲ್ಲ. ಬೂಟಿನ ತುದಿ­ಯಿಂದ ಹೊಸ­ಕಿ­ಹಾ­ಕು­ವಷ್ಟು ಬೆರ­ಳೆ­ಣಿ­ಕೆಯ ಜನ ಅಲ್ಲಿ­ದ್ದರು. ಆದರೆ ಅವ­ರಿಗೆ ಬೆಂಬ­ಲಿಸಿ ನಿಂತ­ರಲ್ಲ. ಅವರ ಬಗ್ಗೆ ಸರ್ಕಾರ ಎಚ್ಚ­ರ­ವ­ಹಿ­ಸ­ಬೇ­ಕಾ­ಗಿದೆ.
ಈಗ ಬರು­ತ್ತಿ­ರುವ ವರ­ದಿ­ಗಳ ಪ್ರಕಾರ ಈ ಕೆಲವು ಹೋಟೆ­ಲ್‌­ಗ­ಳಲ್ಲಿ ಕೆಲವು ದಿನ­ಗ­ಳಿಗೆ ಮೊದಲೇ ಉಗ್ರರು ನೌಕ­ರಿಗೆ ಸೇರಿ­ದ್ದರು. ಅಲ್ಲಿಂ­ದಲೇ ಹೊಂಚು ಹಾಕಿ­ದ್ದರು. ಮೊದಲೇ ಆಗ­ಮಿಸಿ ಸಿದ್ಧತೆ ಮಾಡಿ­ಕೊಂಡ ಉಗ್ರರ ಅಪ್ಪಣೆ ಮೇರೆಗೆ ಗಡಿ­ಭಾ­ಗ­ದಿಂದ ಕೆಲ­ವರು ಒಳಗೆ ನುಸು­ಳಿ­ದರು. ಇಡೀ ದೇಶ­ವನ್ನೇ ನಡು­ಗಿ­ಸಿ­ದರು.
ಹಾಗಾ­ದರೆ ದೇಶ­ದೊ­ಳ­ಗಿನ ದ್ರೋಹಿ­ಗಳು ಈ ವಿದೇ­ಶಿ­ಯ­ರಿಗೆ ಸಪೋರ್ಟ್‌ ಮಾಡಿದ್ದು ಸುಳ್ಳಲ್ಲ. ಅಲ್ಲದೇ ದೇಶ­ದೊ­ಳಕ್ಕೆ ನುಸು­ಳುವ ವಿದೇ­ಶಿ­ಯ­ರನ್ನು ತಡೆ­ಯುವ ಶಕ್ತಿ ನಮ್ಮ ರಕ್ಷಣಾ ವ್ಯವ­ಸ್ಥೆಗೆ ಇಲ್ಲವೆ?
ದೇಶದ ರಕ್ಷಣಾ ವ್ಯವಸ್ಥೆ ಎಷ್ಟು ತಿರುಪೆ ಎದ್ದು ಹೋಗಿದೆ ಎಂಬು­ದಕ್ಕೆ ಇಲ್ಲಿದೆ ಉದಾ­ಹ­ರಣೆ. ನ.28 ರಂದು ಮಾಸ್ಕೋ­ದಿಂದ ದೆಹ­ಲಿಗೆ ಕರ್ನಾ­ಟಕ ಮೂಲದ ವ್ಯಕ್ತಿ­ಯೊ­ಬ್ಬರು ಬಂದಿ­ಳಿ­ದರು. ಆದರೆ ಮಾಸ್ಕೋ­ದಲ್ಲಿ ವಿಮಾನ ಬದ­ಲಾ­ಯಿ­ಸು­ವಾಗ ಅವರ ಲಗ್ಗೇಜ್‌ ತಪ್ಪಿ ಕರಾ­ಚಿಗೆ ಹೋಗಿತ್ತು. ಅದ­ಕ್ಕಾಗಿ ನ.28 ರ ಬೆಳಿಗ್ಗೆ ದೆಹ­ಲಿಯ ವಿಮಾನ ನಿಲ್ದಾ­ಣಕ್ಕೆ ಬರಲು ಸಿಬ್ಬಂದಿ ಸೂಚಿ­ಸಿ­ದ್ದರು. ಅದ­ರಂತೆ ಸದರಿ ವ್ಯಕ್ತಿ ವಿಮಾನ ನಿಲ್ದಾ­ಣಕ್ಕೆ ಹೋದರೆ ಒಳ ಪ್ರವೇ­ಶಿ­ಸಲು ಸಿಬ್ಬಂದಿ ಅಡ್ಡಿ ಪಡಿ­ಸಿ­ದರು. ತಲೆ ಮೇಲೆ­ಕೆ­ಳಗೆ ಮಾಡಿ­ದರೂ ಅವ­ರನ್ನು ಒಳಗೆ ಬಿಡಲೇ ಇಲ್ಲ. ಜತೆ­ಗಿ­ದ್ದ­ವ­ರೊ­ಬ್ಬರು ಭದ್ರತಾ ಸಿಬ್ಬಂದಿ ಕೈಗೆ 500 ರೂ.ಗಳ ಎರಡು ನೋಟು ಇಟ್ಟರು. ಕೂಡಲೇ ಅವರ ಕೆಲ­ಸ­ವಾ­ಯಿತು. ಲಂಚಕ್ಕೆ ಕೈಯೊ­ಡ್ಡಿದ ಸಿಬ್ಬಂದಿ ಕರ್ನಾ­ಟ­ಕದ ವ್ಯಕ್ತಿ­ಯನ್ನು ತಾವು ಹೋಗ­ಬೇ­ಕಾದ ಜಾಗಕ್ಕೆ ಬಿಟ್ಟು ಬಂದ. ಇಷ್ಟರ ಮಟ್ಟಿಗೆ ನಮ್ಮ ದೇಶದ ವ್ಯವಸ್ಥೆ `ಭದ್ರ'ವಾಗಿದೆ.
ಮುಂಬೈ­ನಲ್ಲೂ ಹೀಗೆ ಆಗಿ­ರ­ಲಿಕ್ಕೆ ಸಾಕು. ಆದರೆ ಸ್ವಾತಂ­ತ್ರ್ಯದ ಇಷ್ಟು ವರ್ಷ­ದಲ್ಲಿ ಈ ರೀತಿಯ ಘಟನೆ ನಡೆ­ದಿ­ರ­ಲಿಲ್ಲ. ಹೊರ­ಗಿ­ನಿಂದ ಬಂದ ಶತ್ರು­ಗಳು ನಮ್ಮ ದೇಶದ ಯಾವುದೇ ಒಂದು ಪ್ರದೇ­ಶ­ವನ್ನು ತಮ್ಮ ಹಿಡಿ­ತ­ದ­ಲ್ಲಿ­ಟ್ಟು­ಕೊಂಡ ನಿದ­ರ್ಶ­ನ­ವಿ­ರ­ಲಿಲ್ಲ. ದೇಶದ ಆಡ­ಳಿತ ಸಂಪೂರ್ಣ ವೈಫ­ಲ್ಯ­ವಾ­ಗಿ­ರುವ ದ್ಯೋತ­ಕ­ವಿದು.
ರಾಜ­ಕಾ­ರ­ಣಿ­ಗಳು ಭ್ರಷ್ಟ­ರಾಗಿ ನಾಲ್ಕೈದು ತಲೆ­ಮಾ­ರಿಗೆ ಆಗು­ವಷ್ಟು ಆಸ್ತಿ ಮಾಡಿ­ಕೊಂ­ಡಿ­ರು­ವಾಗ, ಸಹಜ ಮನು­ಷ್ಯರೇ ಆಗಿ­ರುವ ರಕ್ಷಣಾ ಸಿಬ್ಬಂದಿ ಭ್ರಷ್ಟ­ರಾ­ಗು­ವುದು ಅಸ­ಹ­ಜ­ವೇ­ನಲ್ಲ. ಇದನ್ನು ತಪ್ಪಿ­ಸುವ ಹೊಣೆ ಯಾರದು?
ಈಗ ದೇಶವೇ ಕಿತ್ತು­ಹೋ­ಗಿದೆ ಎಂದು ಬೀಗು­ತ್ತಿ­ರುವ ಬಿಜೆಪಿ ಅಧಿ­ಕಾ­ರಕ್ಕೆ ಬಂದರೆ ಆಗ ಮಾಡು­ವು­ದೇನು? ಸಂಸತ್‌ ಭವ­ನದ ಮೇಲೆ ದಾಳಿ ನಡೆ­ದಾಗ, ಅಕ್ಷ­ರ­ಧಾ­ಮದ ಮೇಲೆ ಉಗ್ರರು ದಾಳಿ ಎಸ­ಗಿ­ದಾಗ ಬಿಜೆಪಿ ಏನು ಮಾಡು­ತ್ತಿತ್ತು. ಯಾವುದೇ ವಿಷ­ಯ­ವನ್ನು ವೋಟಿನ ರಾಜ­ಕಾ­ರ­ಣಕ್ಕೆ ಅಸ್ತ್ರ ಮಾಡಿ­ಕೊ­ಳ್ಳು­ವು­ದ­ಕ್ಕಿಂತ ದೇಶದ ಭದ್ರತೆ, ಸಮ­ಗ್ರತೆ ದೃಷ್ಟಿ­ಯಿಂದ ನೋಡ­ಬೇಕು.
ಘಟನೆ ನಡೆದ ಕೂಡಲೇ ಮಹಾ­ರಾ­ಷ್ಟ್ರಕ್ಕೆ ತೆರಳಿ ಮೃತ ಯೋಧ­ರಿಗೆ 1 ಕೋಟಿ ರೂ. ಪರಿ­ಹಾರ ಘೋಷಿ­ಸಿದ ಗುಜ­ರಾತ್‌ ಮುಖ್ಯ­ಮಂತ್ರಿ ನರೇಂದ್ರ ಮೋದಿ ತಮ್ಮ ಅಧಿ­ಕಾ­ರ­ವ­ಧಿ­ಯಲ್ಲಿ ಮಾಡಿ­ದ್ದೇನು? ಗುಜ­ರಾ­ತೆಂ­ಬುದು ಶಿಲಾ­ಯು­ಗದ ಕಾಲದ ರಾಜ್ಯ­ವಾಗಿ ಪರಿ­ವ­ರ್ತಿ­ತ­ರಾ­ದಾಗ ಇದೇ ಮೋದಿ ಸಂಭ್ರ­ಮಿ­ಸಿ­ರ­ಲಿ­ಲ್ಲವೇ? ಗರ್ಭಿ­ಣಿಯ ಭ್ರೂಣ ಬಗೆದು ಬೆಂಕಿಗೆ ಹಾಕಿ ಸುಡು­ವಾಗ ಮೋದಿ­ಯ­ವರ ದೇಶ­ಪ್ರೇಮ ಎಲ್ಲಿ ಹೋಗಿತ್ತು?
ಎಲ್ಲಾ ಪಕ್ಷ­ಗಳು ರಾಜ­ಕೀಯ ಮಾಡು­ವುದು ಬಿಟ್ಟು ದೇಶದ ಹಿತ­ದೃ­ಷ್ಟಿ­ಯಿಂದ ಚಿಂತಿ­ಸ­ಬೇಕು. ಉಗ್ರರು, ದ್ರೋಹಿ­ಗಳು ಯಾರೇ ಇದ್ದರೂ ಅವ­ರನ್ನು ಮಟ್ಟ­ಹಾ­ಕ­ಬೇಕು. ಉಗ್ರರು ಎಂಬ ಪದ ಬಳ­ಸುವ ಬದಲು ದೇಶ­ದ್ರೋ­ಹಿ­ಗ­ಳೆಂದು ಹಣೆ ಪಟ್ಟಿ ಕಟ್ಟಿ ಗಲ್ಲಿ­ಗೇ­ರಿ­ಸಲು ಮುಂದಾ­ಗ­ಬೇಕು. ಸಿಬ್ಬಂ­ದಿ­ಗಳು ಭ್ರಷ್ಟ­ರಾ­ಗ­ದಂತೆ ನೋಡಿ­ಕೊ­ಳ್ಳ­ಬೇಕು. ಹಾಗಾ­ಗ­ಬೇ­ಕಾ­ದರೆ ತಾವು ಭ್ರಷ್ಟ­ರಾ­ಗದೇ ಸಜ್ಜ­ನಿಕೆ, ಪ್ರಾಮಾ­ಣಿ­ಕತೆ ತೋರ­ಬೇಕು. ಆಗ ಮಾತ್ರ ಬೋಧ­ನೆಗೆ ಅರ್ಥ­ವಿ­ರು­ತ್ತದೆ.
ಪೋಟಾ, ಟಾಡಾ­ದಂ­ತಹ ಜನ­ವಿ­ರೋಧಿ ಕಾಯ್ದೆ ತರು­ವು­ದ­ರಿಂದ ಉಗ್ರರ ಉಪ­ಟ­ಳ­ವನ್ನು ಮಟ್ಟ­ಹಾ­ಕಲು ಸಾಧ್ಯ­ವಿಲ್ಲ. ಉಗ್ರ­ತೆಗೆ ಕಾರ­ಣ­ವಾ­ಗುವ ಮನಃ­ಸ್ಥಿ­ತಿ­ಯನ್ನು ಬದ­ಲಾ­ಯಿ­ಸ­ಬೇಕು. ಎಲ್ಲಾ ರೀತಿಯ ಅಸ­ಮಾ­ನತೆ, ಧಾರ್ಮಿಕ ಹಿಂಸೆ, ಶೋಷಣೆ ತೊಲ­ಗಿ­ದಾಗ ಮಾತ್ರ ಶಾಂತಿ, ಸೌಹಾರ್ದ ನೆಲೆ­ಸಲು ಸಾಧ್ಯ. ಸಂಸ­ದೀಯ ಪ್ರಜಾ­ಪ್ರ­ಭು­ತ್ವ­ವೆಂ­ಬುದು `ಡೆಮ್ಮೋ- ಕ್ರಸಿ' ಯಾಗಿ­ರು­ವಾಗ ಇದನ್ನು ಹೇಗೆ ನಿರೀ­ಕ್ಷಿ­ಸಲು ಸಾಧ್ಯ? ಕೆಂಪು­ಕೋ­ಟೆಯ ಮೇಲೆ ಮನ­ಮೋ­ಹ­ನ­ಸಿಂಗ್‌ ಬದಲು ಅಡ್ವಾಣಿ ಬಾವುಟ ಹಾರಿ­ಸುವ ಬದ­ಲಾ­ವ­ಣೆ­ಯಿಂದ ಏನನ್ನೂ ನಿರೀ­ಕ್ಷಿ­ಸಲು ಸಾಧ್ಯ­ವಿಲ್ಲ. ರಾಜ­ಕೀಯ ಸ್ಥಿತ್ಯಂ­ತ­ರ­ವಾಗಿ ದ್ವೇಷ­ರ­ಹಿ­ತ­ವಾದ, ಸಮಾ­ನ­ವಾದ ವ್ಯವಸ್ಥೆ ಜಾರಿ­ಯಾ­ಗ­ಬೇಕು. ಮತ­ದಾ­ರ­ನನ್ನೇ ಕಡು­ನೀ­ಚ­ನ­ನ್ನಾ­ಗು­ವಷ್ಟು ಭ್ರಷ್ಟ­ನ­ನ್ನಾ­ಗಿ­ಸಿ­ರುವ ಈ ವ್ಯವಸ್ಥೆ ಎಂತಹ ಪರಿ­ವ­ರ್ತನೆ ತಂದೀತು? ಇದು ಯೋಚಿ­ಸುವ ಕಾಲ­ವಷ್ಟೇ!