Monday, December 29, 2008
ನಿರುದ್ಯೋಗ ಪರ್ವ
ವಿಶ್ವದರ್ಜೆಯ ಬಹುತೇಕ ಆರ್ಥಿಕ ತಜ್ಞರು 2009ನ್ನು `ನಿರುದ್ಯೋಗ ಪರ್ವ'ದ ಆರಂಭಿಕ ಕಾಲ ಎಂದೇ ವಿಶ್ಲೇಷಿಸಿದ್ದಾರೆ. ಸುಮಾರು 3 ವರ್ಷಗಳ ಹಿಂದೆ ಶುರುವಿಟ್ಟುಕೊಂಡ ಆರ್ಥಿಕ ಕುಸಿತದ ನಡಿಗೆ ಇದೀಗ ಕವಲುದಾರಿಯಲ್ಲಿ ಬಂದು ನಿಂತಿದೆ. 20 ವರ್ಷಗಳ ಹಿಂದಿನ ನಿರುದ್ಯೋಗಿಗಳ ಸಂಖ್ಯೆಯ ದಾಖಲೆಯನ್ನು 2009 ವರ್ಷ ಮುರಿಯಲಿದೆ ಎಂದೇ ಅಂದಾಜಿಸಲಾಗಿದೆ.
ಐಟಿ-ಬಿಟಿ ಯುಗ ಶುರುವಾದ ಮೇಲೆ ಕೌಶಲ್ಯ ಹೊಂದಿದವರಿಗೆ ಭಾರೀ ಬೇಡಿಕೆ ಬಂದೊದಗಿತ್ತು. ಯಾರು ತಿಂಗಳ ಲೆಕ್ಕದಲ್ಲಿ ಸಂಬಳವನ್ನು ಮಾತನಾಡುತ್ತಲೇ ಇರಲಿಲ್ಲ. ವರ್ಷಕ್ಕೆ 5 ಲಕ್ಷದಿಂದ ಹಿಡಿದು 12 ಲಕ್ಷವರೆಗೂ ಸಂಬಳ ಎಣಿಸುವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿತ್ತು. ಅದೇ ಹೊತ್ತಿನಲ್ಲಿ ವರ್ಷಕ್ಕೆ 24 ಸಾವಿರದಿಂದ 60 ಸಾವಿರದವರೆಗೆ ಸಂಬಳ ತೆಗೆದುಕೊಳ್ಳುವವರ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿತ್ತು.
ಟೆಕಿಗಳ ಒಂದು ದಿನದ ಸಂಬಳದ ಮೊತ್ತವನ್ನು ತಿಂಗಳ ಸಂಬಳವಾಗಿ ಪಡೆಯುವವರು ಇದ್ದು, ಸಮಾಜದಲ್ಲಿ ಭೀಕರವಾಗಿ ಆರ್ಥಿಕ ಅಂತರವೂ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರು, ಹೈದರಾಬಾದ್, ಮುಂಬೈ, ಕೊಲ್ಕತ್ತಾ, ದೆಹಲಿಯಂತಹ ನಗರಗಳಲ್ಲಿ ಈ ರೀತಿಯ ಸಂಬಳಾಂತರ ಸೃಷ್ಟಿಸಿದ ಸಾಂಸ್ಕೃತಿಕ ವಿಕೃತಿಗಳು ಬೇರೆಯವೇ ಆಗಿದ್ದವು. ಕಾಫಿಡೇ, ಮಾಲ್, ವೀಕೆಂಡ್ ಸಂಸ್ಕೃತಿಗಳು ಅಕರಾಳ ವಿಕರಾಳವಾಗಿ ಬೆಳೆದಿದ್ದವು. ದಿನದ ಒಂದು ಹೊತ್ತಿನ ಊಟಕ್ಕೆ 10 ರೂ. ಖರ್ಚು ಮಾಡುವ ಶಕ್ತಿಯಿಲ್ಲದವರು ದೊಡ್ಡ ಪ್ರಮಾಣದಲ್ಲಿ ಕೇಂದ್ರೀಕೃತವಾಗುತ್ತಿದ್ದರೆ, ಟಿಪ್ಸ್ ರೂಪದಲ್ಲಿ ನೂರು ರೂ. ಕೊಡುವ `ಉದಾರಿ'ಗಳು ಇದ್ದರು. 10 ರೂ. ವಸ್ತುವಿಗೆ 50 ರೂ. ನಿಗದಿ ಮಾಡುವ ಮಾಲ್‌ಗಳಲ್ಲಂತೂ ಭರ್ಜರಿ ಜನಜಂಗುಳಿಯೇ ಅಣಿ ನೆರೆಯುತ್ತಿತ್ತು.
ಆದರೆ ಆರ್ಥಿಕ ಬಿಕ್ಕಟ್ಟು ತಂದಿತ್ತ ಸಮಸ್ಯೆ ಇದೀಗ ಎಲ್ಲಾ ಕ್ಷೇತ್ರವನ್ನೂ ಆತಂಕಕ್ಕೆ ದೂಡಿದೆ. ಅಲ್ಪ ಸಂಬಳದಾರರು, ಭರ್ಜರಿ ಸಂಬಳದಾರರು ಉದ್ಯೋಗ ಕಳೆದುಕೊಳ್ಳುವ ಸರದಿಯಲ್ಲಿ `ಸೂಳ್ಪಡೆಯಲ್ಪುದು ಕಾಣಾ ಮಹಾಧಿರಂಗದೋಳ್( ಯುದ್ಧ ಭೂಮಿಯಲ್ಲಿ ಮುಂಚೂಣಿ ವಹಿಸುವವರ ಸರದಿ ಎಲ್ಲರಿಗೂ ಬರುತ್ತದೆ) ಎಂಬಂತೆ ನಿರುದ್ಯೋಗ ಪರ್ವದಲ್ಲಿ ಎಲ್ಲರೂ ಸಾಲುಗಟ್ಟಿ ನಿಂತಿದ್ದಾರೆ.
ಯಾರ ಸರದಿ ಯಾವಾಗ ಬರುತ್ತದೆ ಎಂಬುದು ಕರಾರುವಾಕ್ಕಾಗಿ ಗೊತ್ತಾಗದೇ ಇದ್ದರೂ ಎಲ್ಲರೂ ಆತಂಕದ ಸರದಿಯಲ್ಲಿ ಕಾಯುತ್ತಿರುವವರೇ. ಇಂದು ನಾಳೆಯೋ ಮುಂದೆ ಯಾವತ್ತೋ ಕೆಲಸ ಕಳೆದುಕೊಳ್ಳುವುದು ಅಥವಾ ಸಂಬಳ-ಸೌಲಭ್ಯದ ಕಡಿತವನ್ನು ಅನುಭವಿಸುವುದು ಅನಿವಾರ್ಯವೆಂಬುದು ದಿಟ. ಅಥವಾ ಸಂಬಳ ಕಡಿತದ ಜತೆಯಲ್ಲಿ ಹೆಚ್ಚು ಅವಧಿ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿದೆ.
ಎಲ್ಲಾ ಮಾಯ:
ಎಲ್ಲಾ ಮಾಯ ಇಲ್ಲಿ ನಾವು ಮಾಯ. ಬಂಡವಾಳ ಶಾಹಿ ಜಗತ್ತಿನ ಆಳದಲ್ಲಿರುವ ಸುನಾಮಿ ಸುಳಿ ಮೇಲೆದ್ದಿದ್ದು, ಮಾಯಕ ಲೋಕದ ವಿಭ್ರಮೆ ನಿಧಾನವಾಗಿ ಕರಗುತ್ತಿದೆ. ಅಂಟಾರ್ಟಿಕ ಖಂಡದಲ್ಲಿ ಹಿಮ ಕರಗಿ ನೀರಾಗುವಂತೆ ಉದ್ಯೋಗ ಅವಕಾಶಗಳು ದಿನೇ ದಿನೇ ಕರಗುತ್ತಿದ್ದು, ಸುನಾಮಿ ಅಲೆಗಳು ಸಮಾಜವನ್ನು ಅಪ್ಪಳಿಸುತ್ತಿವೆ. ಹೇಗೋ ಕೈತುಂಬಾ ಸಂಬಳ ಪಡೆಯುವ ಉದ್ಯೋಗ ಲಭಿಸಿತು ಎಂದು ಮದುವೆ, ಮನೆ, ವಾಹನ ಮಾಡಿಕೊಳ್ಳುವಷ್ಟರಲ್ಲಿ ಎಲ್ಲವೂ ಸಿನೆಮಾದಂತೆ ಭಾಸವಾಗುತ್ತಿದೆ.
ಐಷಾರಾಮಿ ಜೀವನ ನಡೆಸುತ್ತಿದ್ದವರು ರಸ್ತೆ ಬದಿಯ ಆಹಾರಕ್ಕೆ ತಮ್ಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾರೆ. ಇದೆಂತಾ ಸ್ಥಿತಿ ಎಂದು ಹಲುಬುವ ಪರಿಪಾಟಲು ಹರೆಯ ಉದ್ಯೋಗಿಗಳದಾಗಿದೆ.
ಉದ್ಯೋಗ ಕಡಿತ ಇಂದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಐಟಿ, ಬಿಪಿಓ, ಜವಳಿ, ಕೈಗಾರಿಕೆ, ರೇಷ್ಮೆ, ಪತ್ರಿಕೋದ್ಯಮ, ಬ್ಯಾಂಕ್ ಹೀಗೆ ಎಲ್ಲಾ ಕ್ಷೇತ್ರವನ್ನು ಆರ್ಥಿಕ ಸಂಕಷ್ಟದ ಮಾಯೆ ಆವರಿಸಿದೆ. ಎಲ್ಲೆಡೆ ಉದ್ಯೋಗ ಕಡಿತ ಅಥವಾ ಸಂಬಳ ಕಡಿತವೆಂಬುದು ಸಾಮಾನ್ಯವಾಗಿದೆ.
ನ್ಯೂಯಾರ್ಕ್‌ನಲ್ಲಿ ಮುಂದಿನ ಆರುತಿಂಗಳಲ್ಲಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಒಂದೂ ವರೆ ಲಕ್ಷವೆಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಪ್ರತಿಷ್ಠಿತ ಹಾಗೂ ಪ್ರಭಾವಿ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಮುಚ್ಚುವ ಭೀತಿ ಎದುರಿಸುತ್ತಿದ್ದರೆ, ಮತ್ತೊಂದು ಪತ್ರಿಕೆ ಡೈಲಿ ಟ್ರಿಬ್ಯುನ್ ಕೂಡ ಸಂಕಷ್ಟದಲ್ಲಿದೆ.
ಭಾರತದ ಮಟ್ಟಿಗೆ ಆರ್ಥಿಕ ಕುಸಿತ ದೊಡ್ಡ ಚಪ್ಪಡಿಯನ್ನೆ ಹೇರಲಿದೆ. ಭಾರತದ ಜವಳಿ ಉದ್ಯಮ ತೀವ್ರ ಕಂಗೆಟ್ಟಿದೆ. ವಾರ್ಷಿಕ 3500 ಕೋಟಿ ರಫ್ತು ಮಾಡುತ್ತಿದ್ದ ರೇಷ್ಮೆ ಕ್ಷೇತ್ರ ಶೇ.50 ರಷ್ಟು ಕುಸಿತ ಕಂಡಿದೆ. ಈ ವರ್ಷದ ರಫ್ತು 1700 ಕೋಟಿ ರೂ. ದಾಟುವುದಿಲ್ಲವೆಂದು ಅಂದಾಜಿಸಲಾಗಿದೆ. ಇದರಿಂದಾಗಿ ಜವಳಿ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದ್ದು, ಮುಂದಿನ ಆರುತಿಂಗಳ ಅವಧಿಯಲ್ಲಿ 5-6 ಲಕ್ಷ ಮಂದಿ ಈ ಕ್ಷೇತ್ರದಲ್ಲಿ ನೇರ ಅಥವಾ ಪರೋಕ್ಷವಾಗಿ ಉದ್ಯೋಗ ವಂಚಿತರಾಗಲಿದ್ದಾರೆ.
ಅಮೆರಿಕದಲ್ಲಿ ಔಟ್‌ಸೋರ್ಸಿಂಗ್ ನಿಲ್ಲಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಒಬಾಮ ಗೆಲ್ಲುವಾಗ ಕೆಲಸದ ಹೊರಗುತ್ತಿಗೆಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದ. ಇದರಿಂದಾಗಿ ಭಾರತದ ಬಿಪಿ ಓ ಕ್ಷೇತ್ರ ತಲ್ಲಣಿಸಿದೆ. ಮುಖ್ಯವಾಗಿ ಅಮೆರಿಕದ ಉದ್ಯಮ ಸಂಸ್ಥೆಗಳ ಹೊರಗುತ್ತಿಗೆಯನ್ನು ನಿರ್ವಹಿಸಲು ಬೆಂಗಳೂರು ಹಾಗೂ ಹೈದರಾಬಾದ್‌ನ ಬಿಪಿ ಓ ಮತ್ತು ಐಟಿ ಕಂಪನಿಗಳಲ್ಲಿ ವ್ಯಾಪಕ ಉದ್ಯೋಗ ಸೃಷ್ಟಿಯಾಗಿತ್ತು. ಸಾಲುಸಾಲಾಗಿ ಹೊರಗುತ್ತಿಗೆಗೆ ಕಡಿವಾಳ ಬೀಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆರುತಿಂಗಳಲ್ಲಿ 50 ಸಾವಿರ ಟೆಕಿಗಳು ಉದ್ಯೋಗ ವಂಚಿತರಾಗಲಿದ್ದಾರೆ. ಇದರಿಂದ ಆರ್ಥಿಕತೆ ಮೇಲೆ ತೀವ್ರತರದ ಅಡ್ಡ ಪರಿಣಾಮ ಬೀರಲಿದೆ.
ಆರ್ಥಿಕ ಸಂಕಷ್ಟದ ಕಾರಣದಿಂದ ಆಭರಣ ಉದ್ಯಮ ತತ್ತರಿಸಿದೆ. ಆಭರಣ ರಫ್ತಿನಲ್ಲಿ ಭಾರತದ ಪ್ರಮುಖ ಪಾಲಿದ್ದು, ವಿದೇಶಿ ರಾಷ್ಟ್ರಗಳು ಆಮದನ್ನು ನಿರ್ಬಂಧಿಸಿವೆ. ಇದರಿಂದಾಗಿ ಆಭರಣ ಉದ್ಯಮ ಸಂಸ್ಥೆಗಳು ಮುಚ್ಚುವ ಹಂತ ತಲುಪಿದ್ದು ಈ ಕ್ಷೇತ್ರದಲ್ಲಿ 1 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಎಲ್ಲಾ ಪತ್ರಿಕೆಗಳಲ್ಲೂ ಉದ್ಯೋಗ ಕಡಿತದ ಚರ್ಚೆ ನಡೆಯುತ್ತಿದೆ. ಇಂಗ್ಲಿಷ್ ಹಾಗೂ ಸ್ಥಳೀಯ ದೈನಿಕಗಳಿಗೆ ಇದರ ಬಾಧೆ ತಟ್ಟಲಿದೆ. 10-12 ಪರ್ಸೆಂಟ್ ಉದ್ಯೋಗಿಗಳು ಬೇರೆ ಉದ್ಯೋಗ ಅರಸಿಕೊಳ್ಳಬೇಕಾಗಿದೆ.
ಇದರ ಜತೆಯಲ್ಲಿ ಸಂಬಳ ಸಹಿತ ರಜೆ ನೀಡುವ ಪರಿಪಾಠವನ್ನು ಏರ್‌ಲೈನ್ಸ್ ಹಾಗೂ ಬಿಪಿ ಓ ಕಂಪನಿಗಳು ಆರಂಭಿಸಿವೆ. ಕೆಲಸವಿಲ್ಲದೇ ಸಂಬಳ ನೀಡುವುದೆಂದರೆ ಪೂರ್ತಿ ಸಂಬಳವನ್ನು ಯಾವ ಕಂಪನಿಗಳೂ ನೀಡಲಾರವು. ಅರ್ಧದಷ್ಟು ಸಂಬಳ ನೀಡಬಹುದು. ಜತೆಗೆ ಕೆಲಸವಿಲ್ಲದೇ ಯಾವ ಉದ್ಯೋಗಿಯೂ ಇರಲಾರ. ಅನಿವಾರ್ಯವಾಗಿ ಇದ್ದ ಕೆಲಸಕ್ಕೆ ರಾಜಿನಾಮೆ ಬೀಸಾಕಿ ಬೇರೆ ಕೆಲಸ ನೋಡಿಕೊಳ್ಳಬೇಕಾಗುತ್ತದೆ. ಒಂದರ್ಥದಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದ ಕೆಲಸವನ್ನು ಬಿಟ್ಟು ಅರೆ ಬರೆ ಸಂಬಳಕ್ಕೆ ಕೆಲಸ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.
ಇದರಿಂದಾಗಿ ಸರ್ಕಾರಿ ನೌಕರಿಗೆ ಭದ್ರವೆಂಬ ವಾತಾವರಣ ನಿರ್ಮಾಣ ಸೃಷ್ಟಿಯಾಗಲಿದೆ. ನಿರುದ್ಯೋಗ ತರಲಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬಿಕ್ಕಟ್ಟು ಬೇರೆ ರೀತಿಯದಾಗಿದ್ದು, ಇದರ ಬಗ್ಗೆ ಮತ್ತೊಂದು ಸುದೀರ್ಘ ಚರ್ಚೆಯೇ ನಡೆಯಬೇಕಿದೆ.
Saturday, December 20, 2008
ಬಸವರಾಜಮಾರ್ಗಕ್ಕೆ ಸಂದ ಗೌರವ
ಗ್ರಂಥಸಂಪಾದನೆ ಹಾಗೂ ಸೃಜನಶೀಲ ಬರವಣಿಗೆ ಎರಡೂ ಕ್ಷೇತ್ರದಲ್ಲಿ ಇಳಿವಯಸ್ಸಿನಲ್ಲೂ ಅಹರ್ನಿಶಿ ದುಡಿಯುತ್ತಿರುವ, ಕನ್ನಡದ ಕೆಲಸಕ್ಕಾಗಿ ತಮ್ಮ ಜೀವನವನ್ನು ಮುಡುಪಿಟ್ಟಿರುವ ವಿದ್ವಾಂಸರೆಂದರೆ ಡಾ ಎಲ್. ಬಸವರಾಜು. ಅವರ ಆಯ್ಕೆಯು ಸಂಶೋಧನೆ, ಸಂಪಾದನೆ, ಪ್ರಾಚೀನ ಕೃತಿಗಳ ತಲಸ್ಪರ್ಶಿ ಶೋಧ, ಇವತ್ತಿನ ತಲೆಮಾರಿಗೆ ಕನ್ನಡ ಪರಂಪರೆಯನ್ನು ಪರಿಚಯಿಸುವ ಮಹತ್ಕಾರ್ಯಕ್ಕೆ ಸಂದ ಗೌರವವಾಗಿದೆ.
1992 ರಲ್ಲಿ ಸಿಂಪಿ ಲಿಂಗಣ್ಣ, 1995ರಲ್ಲಿ ಡಾಎಚ್.ಎಲ್. ನಾಗೇಗೌಡ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರಿಬ್ಬರೂ ಜಾನಪದ ಸಂಗ್ರಹ, ಸಂಶೋಧನೆಗಳಲ್ಲಿ ಅವಿರತವಾಗಿ ದುಡಿದವರು. ಇವರಿಬ್ಬರು ಜಾನಪದದ ಕಣಜವನ್ನು ತಮ್ಮ ಅಂತಃಶಕ್ತಿ ಹಾಗೂ ಕ್ಷೇತ್ರಕಾರ್ಯದಿಂದ ತುಂಬಿಸಿಕೊಟ್ಟವರು. ಡಾ.ಎಲ್. ಬಸವರಾಜು ಮಾದರಿಯಲ್ಲಿಯೇ ವಚನ ಸಾಹಿತ್ಯ ಸಂಗ್ರಹ ಹಾಗೂ ಸಂಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಆರ್.ಸಿ. ಹಿರೇಮಠ ಅವರು 1990ರಲ್ಲಿ ನಡೆದ 59 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಆರ್.ಸಿ. ಹಿರೇಮಠರ ತರುವಾಯ ಭಾಷೆ ಹಾಗೂ ಪ್ರಾಚೀನ ಸಾಹಿತ್ಯ ಕ್ಷೇತ್ರದಲ್ಲಿ ಅವಿರತ ಶ್ರಮಿಸಿದ ಹಿರಿಯ ಜೀವಿಗಳು ಅಧ್ಯಕ್ಷರಾದ ನಿದರ್ಶನವಿರಲಿಲ್ಲ. ಕಳೆದ ಬಾರಿ ಉಡುಪಿಯಲ್ಲಿ ನಡೆದ ಸಮ್ಮೇಳನ ಕನ್ನಡ ವಿಮರ್ಶಾ ಕ್ಷೇತ್ರಕ್ಕೆ ಗೌರವ ಸಲ್ಲಿಸಿದ್ದರೆ, ಈ ಬಾರಿಯ ಸಮ್ಮೇಳನ ಸಂಶೋಧನೆ ಹಾಗೂ ಸಂಪಾದನೆ ಕ್ಷೇತ್ರಕ್ಕೆ ಪ್ರಾಧಾನ್ಯ ನೀಡಿದೆ.
ಹಿರೇಮಠರು ಅಧ್ಯಕ್ಷರಾದ ನಂತರ ನಡೆದ 18 ಸಮ್ಮೇಳನಗಳ ಅಧ್ಯಕ್ಷರಾಗಿ ಆಯ್ಕೆಯಾದವರಲ್ಲಿ ಸಿಂಪಿ ಲಿಂಗಣ್ಣ, ನಾಗೇಗೌಡರನ್ನು ಹೊರತು ಪಡಿಸಿದರೆ (ಜಾನಪದ ಕ್ಷೇತ್ರ) ಕವಿ ಅಥವಾ ಕಾದಂಬರಿಕಾರರೇ ಹೆಚ್ಚಾಗಿದ್ದಾರೆ. ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ, ಚದುರಂಗ, ಚೆನ್ನವೀರ ಕಣವಿ, ಕಯ್ಯಾರ ಕಿಞ್ಞಣ್ಣರೈ, ಭೈರಪ್ಪ, ಅನಂತಮೂರ್ತಿ, ಪಾಟೀಲ ಪುಟ್ಟಪ್ಪ, ಕಮಲಾ ಹಂಪನಾ, ಶಾಂತರಸ, ನಿಸಾರ್ ಅಹಮದ್ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಬಸವರಾಜು ಹೆಗ್ಗಳಿಕೆ: ಯಾವ ಪಂಥಕ್ಕೂ ಸೇರದ, ಆದರೆ ಸಾಮಾಜಿಕ ಸಂಗತಿಗಳ ಬಗ್ಗೆ ಜೀವಪರವಾದ ಕಾಳಜಿ ಹೊಂದಿದ, ಒಂದು ವಿಶ್ವವಿದ್ಯಾನಿಲಯ ಮಾಡಬಹುದಾದ ಕೆಲಸವನ್ನು ಏಕಾಂಗಿಯಾಗಿ ತತ್ಪರತೆಯಿಂದ ಮಾಡಿದ ಡಾ. ಬಸವರಾಜು ಅವರು ಅಧ್ಯಾಪಕರಿಗೆ ಆದರ್ಶವಾಗುವ ವ್ಯಕ್ತಿತ್ವ ಸಂಪಾದಿಸಿದವರು.
1919ರಲ್ಲಿ ಕೋಲಾರ ಜಿಲ್ಲೆ ಇಡಗೂರಿನಲ್ಲಿ ಜನಿಸಿದ ಬಸವರಾಜು ಅವರು, ಮೈಸೂರು ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದರು. ಮೂರು ದಶಕಗಳಿಗೂ ಹೆಚ್ಚುಕಾಲ ಮೈಸೂರು ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಕ್ಷರದಾಸೋಹ ಮಾಡಿದರು.
ಬರುವ ಸಂಬಳಕ್ಕೆ ಪಾಠ ಮಾಡುವುದಷ್ಟೇ ತಮ್ಮ ಕೆಲಸವೆಂದು ಸೀಮಿತರಾಗದ ಬಸವರಾಜು ಅವರು, ಅಧ್ಯಾಪಕರ ವ್ಯಕ್ತಿತ್ವಕ್ಕೆ ಹೊಸಭಾಷ್ಯ ಬರೆದವರು. ತಮ್ಮ ತೊಂಬತ್ತರ ಇಳಿವಯಸ್ಸಿನಲ್ಲೂ ನಿರಂತ ಅಧ್ಯಯನ, ಸಂಶೋಧನೆ, ತಾಳೆಗರಿಗಳ ಅವಲೋಕನ, ಪರಾಮರ್ಶೆಯನ್ನು ನಿಸ್ಪೃಹವಾಗಿ ಮಾಡಿಕೊಂಡು ಬಂದವರು. ಪ್ರಾಚೀನ ಕೃತಿಗಳ ಸಂಪಾದನೆಗೆ ಹೊಸ ಪರಿಭಾಷೆಯನ್ನು ಕಟ್ಟಿಕೊಟ್ಟ ಅವರು, ತಮ್ಮ ಪಾಂಡಿತ್ಯ, ಆಳವಾದ ಅಧ್ಯಯನ ಶೀಲತೆಯಿಂದ ಇತರರಿಗೆ ಮಾದರಿಯಾದವರು.
ವಚನ ಸಾಹಿತ್ಯ ಅಧ್ಯಯನದಲ್ಲಿ ಹೊಸ ಹಾದಿ ತೆರೆದು ಅದಕ್ಕೊಂದು ಮೌಲಿಕತೆಯನ್ನು ಕಲ್ಪಿಸಿಕೊಟ್ಟ ಬಸವರಾಜು ಅವರು ಕನ್ನಡದ ಶಾಸ್ತ್ರೀಯ ಕೃತಿಗಳನ್ನು ವೈಶಿಷ್ಟ್ಯಪೂರ್ಣವಾಗಿ ಸಂಪಾದಿಸಿಕೊಟ್ಟವರು.
ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯಗಳ ಸಂಪಾದನೆ ಜತೆಗೆ ಸರಳ ಪಂಪಭಾರತವನ್ನು ರಚಿಸಿ ಪ್ರಾಚೀನ ಗದ್ಯಕ್ಕೆ ಅರ್ವಾಚೀನ ವಿನ್ಯಾಸವನ್ನು ನೀಡಿದವರು. ಹಾಗೆಯೇ ದೇವನೂರು ಮಹಾದೇವರ ಮಹತ್ವದ ಕೃತಿ ಕುಸುಮಬಾಲೆ ಕಾದಂಬರಿಯನ್ನು ಲಯಾನುಸಾರ ಮರುವಿನ್ಯಾಸಗೊಳಿಸಿ ಕಾವ್ಯಕುಸುಮಬಾಲೆಯಾಗಿ ರೂಪಿಸಿದ್ದು ಇವರ ಅಧ್ಯಯನಶೀಲತೆ, ಪಾಂಡಿತ್ಯದ ಮೇರುತನಕ್ಕೆ ಸಾಕ್ಷಿಯಾಗುತ್ತದೆ.
ಕಬ್ಬಿಣದ ಕಡಲೆಯಂತಿರುವ ಕೇಶಿರಾಜನ ಶಬ್ದಮಣಿ ದರ್ಪಣವನ್ನು ಮೂವತ್ತಕ್ಕೂ ಹೆಚ್ಚು ಹಸ್ತಪ್ರತಿಗಳ ನೆರವಿನಿಂದ ಸಂಪಾದಿಸಿ, ವಿಸ್ತೃತ ವ್ಯಾಖ್ಯಾನದೊಂದಿಗೆ ಪ್ರಕಟಿಸಿದ್ದಾರೆ.
ಐವತ್ತು ಕೃತಿಗಳು ಇವರ ಅಮೂಲ್ಯ ಕೊಡುಗೆಯಾಗಿವೆ. ಠಾಣಾಂತರ, ಜಾಲಾರಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಾಚೀನ ಕನ್ನಡದ ವಿಸ್ತಾರ, ವೈಶಿಷ್ಟ್ಯದ ಆಳ ಹರಿವನ್ನು ತಮ್ಮ ಅಂಗೈಯಲ್ಲಿ ಹಿಡಿದಿರುವ ಶಕ್ತಿ ಹೊಂದಿದ ಬಸವರಾಜು ಅವರು ಸಮ್ಮೇಳನದ ಅಧ್ಯಕ್ಷರಾಗುವ ಮೂಲಕ ಕನ್ನಡದ ವಿದ್ವತ್‌ಪರಂಪರೆ ಮತ್ತೊಮ್ಮೆ ಗೌರವ ಪಡೆದಿದೆ.
Tuesday, December 2, 2008
ಉಗ್ರ ಉಪಟಳ
ಕೇಂದ್ರ ಗುಪ್ತಚರ, ಕರಾವಳಿ ರಕ್ಷಣಾ ಪಡೆ, ಆಂತರಿಕ ಭದ್ರತೆ ಹಾಗೂ ಶುದ್ಧಾಂಗವಾಗಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವನ್ನು ಇದು ಎತ್ತಿ ತೋರಿಸುತ್ತದೆ. ಕೇಂದ್ರ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರದ ವಕ್ತಾರರು ಈಗ ಹೇಳುತ್ತಿರುವುದು `ದೇಶದೊಳಕ್ಕೆ ನುಸುಳಿದ 20 ಮಂದಿ ವಿದೇಶಿ ಉಗ್ರರು ಈ ಕೃತ್ಯವೆಸಗಿದ್ದಾರೆ' ಎಂದು. ಕೇವಲ ಅಷ್ಟೇ ಮಂದಿ ಇಡೀ ದೇಶವನ್ನು ಮೂರು ದಿನಗಳ ಕಾಲ ಉಸಿರುಗಟ್ಟಿಸಿ ನಿಲ್ಲಿಸುವ ಶಕ್ತಿ ಹೊಂದಿದ್ದರೆ, ದೇಶದುದ್ದಕ್ಕೂ ತಲೆ ಮರೆಸಿಕೊಂಡಿರುವ ಪಾಕಿಸ್ತಾನಿ, ಬಾಂಗ್ಲಾದೇಶಿಯರು ಅಷ್ಟೂ ಮಂದಿ ಸೇರಿದರೆ ವಾರದೊಳಗೆ ದೇಶದ ಸಾರ್ವಭೌಮತ್ವನ್ನು ಕೆಡವಿ, ತಮ್ಮದೇ ಸರ್ಕಾರ ಸ್ಥಾಪಿಸುವಷ್ಟು ಬಲಶಾಲಿಯಾಗಿಲ್ಲವೆಂದು ನಂಬುವುದಾದರೂ ಹೇಗೆ?
ಸದಾ ತಮ್ಮ ಡ್ರೆಸ್ ಬಗ್ಗೆ ಕಾಳಜಿಯಿಟ್ಟುಕೊಂಡಿರುವ ಘನತೆವೆತ್ತ ದೇಶದ ಗೃಹ ಸಚಿವ ಶಿವರಾಜ್ಪಾಟೀಲ್ರಿಗೆ ಕನಿಷ್ಠ ನೈತಿಕತೆ ಇದ್ದಿದ್ದರೆ ದೇಶದ ಜನರ ಡ್ರೆಸ್ ಅಲ್ಲಾ, ಅಮೂಲ್ಯ ಜೀವವೇ ಬಂದೂಕಿನ ಮೊನೆಯಲ್ಲಿ ನಿಂತಿರುವ ಬಗ್ಗೆ ಕಾಳಜಿ ತೋರಿಸಬೇಕಿತ್ತು. ಕನಿಷ್ಠ ತನ್ನ ಬಳಿ ಗೃಹಖಾತೆ ನಿಭಾಯಿಸಲು ಆಗುವುದಿಲ್ಲವೆಂದು ರಾಜೀನಾಮೆಯನ್ನಾದರೂ ಬಿಸಾಕಿ ವೃದ್ಧಾಪ್ಯದಲ್ಲಿ ದೇವರ ಮುಂದೆ ಭಜನೆ ಮಾಡುತ್ತಾ ಕೂರಬಹುದಿತ್ತು.
ಕ್ರಿಯಾಶಕ್ತಿ, ಚಿಂತನಾಶಕ್ತಿಯಿಲ್ಲದ, ಅವಲಂಬನೆಯಿಲ್ಲದೇ ಸ್ವತಃ ನಡೆಯಲೂ ಆಗದ, ಅಧಿಕಾರಕ್ಕೆ ಅಂಟಿಕೂರುವ ಜಾಢ್ಯ ಹಿಡಿದ ಮುದಿ ರಾಜಕಾರಣಿಗಳಿಂದಾಗಿ ದೇಶಕ್ಕೆ ಇಂತಹ ದುರ್ಗತಿ ಬಂದಿರುವುದು. ಉಗ್ರರ ವಿರುದ್ಧ ಜೀವದ ಹಂಗು ತೊರೆದು ಹೋರಾಡುವ, ದೇಶೀಯ ವಿದ್ರೋಹಿಗಳನ್ನು ಮುಲಾಜಿಲ್ಲದೇ ಬಗ್ಗು ಬಡಿಯುವ ಸೈನ್ಯ-ಪೊಲೀಸರ ಆತ್ಮಬಲ ಹೆಚ್ಚಿಸುವ ಶಕ್ತಿ ಒಬ್ಬನೇ ಒಬ್ಬ ರಾಜಕಾರಣಿಗೆ ಇಲ್ಲ. ಉರಿವ ಮನೆಯಲ್ಲಿ ಗಳ ಎಣಿಸುವ ಕುಯುಕ್ತಿಯನ್ನು ಎಲ್ಲಾ ರಾಜಕಾರಣಿಗಳೂ ಮಾಡುತ್ತಿದ್ದಾರೆ. ಭಯೋತ್ಪಾದಕರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸಿ, ಯಾವ ರಾಜಕೀಯ, ಸೈದ್ಧಾಂತಿಕ ಹಂಗಿಲ್ಲದೇ ಗಲ್ಲಿಗೇರಿಸುವ ಕಠಿಣ ನಿರ್ಧಾರ ತೆಗೆದುಕೊಳ್ಳುವವರೆಗೆ ಈ ದೇಶದ ಶಾಂತಿಗೆ ಉಳಿಗಾಲವಿಲ್ಲವೆಂಬುದು ಎಲ್ಲರಿಗೂ ಸ್ಪಷ್ಟವಾಗಬೇಕು. ನಮ್ಮ ಹಣವನ್ನು ತೆರಿಗೆ ರೂಪದಲ್ಲಿ ವಸೂಲು ಮಾಡಿ ತಾವು ಮಜಾ ಉಡಾಯಿಸುವ ರಾಜಕಾರಣಿಗಳು ಇನ್ನಾದರೂ ಸ್ಪಷ್ಟ ನಿಲುವು ತೆಗೆದುಕೊಳ್ಳದಿದ್ದರೆ ಜನ ಬೀದಿಬೀದಿಯಲ್ಲಿ ಛೀ ಥೂ ಎಂದು ಉಗಿಯುವ ದಿನ ದೂರವಿಲ್ಲ.
ಏನಾಗಿದೆ ದೇಶಕ್ಕೆ?
ಕಾಶ್ಮೀರ, ಮಣಿಪುರ, ತ್ರಿಪುರ, ಅಸ್ಸಾಂ, ನಾಗಾಲ್ಯಾಂಡ್, ಪಂಜಾಬ್ ಹೀಗೆ ದೇಶದುದ್ದಕ್ಕೂ ಎರಡು ದಶಕಗಳ ಹಿಂದೆ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟ ರೂಪದ ಹಿಂಸಾತ್ಮಕ ಚಳವಳಿ ಈಗ ಹದ್ದುಬಸ್ತಿಗೆ ಬಂದಿದೆ. 1992 ರ ಈಚೆಗೆ ಬಾಬ್ರಿ ಮಸೀದಿಯನ್ನು ಕೆಡವಿದ ಮೇಲೆ ಭಯೋತ್ಪಾದನೆಯ ಮತ್ತೊಂದು ಮಜಲು ಶುರುವಾಯಿತು. ಬಾಬ್ರಿ ಮಸೀದಿಯನ್ನು ಕೆಡವಿ ಹಿಂದೂ ಕೋಮುವಾದಿಗಳು ವಿೃಂಭಿಸಿದ ಡಿಸೆಂಬರ್ 6 ರ ಕರಾಳದಿನದ ಬೆಳಕಿನಲ್ಲಿ ಈ ಭಯೋತ್ಪಾದನೆ ವಿಧ್ವಂಸವನ್ನು ನೋಡದೇ ಹೋದರೆ ಕತ್ತಲೆಯಲ್ಲಿ ಬೀಗದ ಕೈಯನ್ನು ಕಳೆದುಕೊಂಡು ಬೆಳಕಿನಲ್ಲಿ ಬೀಗದ ಕೈಯನ್ನು ಹುಡುಕಿದಂತಹ ವ್ಯರ್ಥ ಪ್ರಯತ್ನವಾಗುತ್ತದೆ. ಇದನ್ನು ಆಳುವವರು, ಸಮಾಜ ಚಿಂತಕರು, ರಕ್ಷಣಾ ವಿಶ್ಲೇಷಕರು ಅರ್ಥ ಮಾಡಿಕೊಳ್ಳಬೇಕು.
ಇತ್ತೀಚೆಗೆ `ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಹಾಲಿ ರಾಜ್ಯಸಭಾ ಸದಸ್ಯ ಶ್ರೀಮಾನ್ ಎಂ. ರಾಮಾಜೋಯಿಸ್ರವರು ಬರೆದ ಲೇಖನದಲ್ಲಿ `ದೇಶದುದ್ದಕ್ಕೂ ನಡೆದ ಮುಸ್ಲಿಂ ಭಯೋತ್ಪಾದನಾ ಕೃತ್ಯಗಳಿಗೆ ಪ್ರತೀಕಾರವಾಗಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಮತ್ತವರ ಸಂಗಾತಿಗಳು ಭಯೋತ್ಪಾದನೆ ಕೃತ್ಯಕ್ಕೆ ಇಳಿದರು. ಇದು ಪ್ರತಿಸ್ಪಂದನಾತ್ಮಕವಾಗಿ ಬೆಳೆದುಬಂದ ಉದ್ಧೇಶಿತ ಕೃತ್ಯವೇ ವಿನಃ ಹಿಂದೂ ಭಯೋತ್ಪಾದನೆ ಎಂದು ಕರೆಯಬಾರದು. ಅವರೆಲ್ಲಾ ಭಗತ್ಸಿಂಗ್, ಸುಖದೇವ್, ರಾಜಗುರುರಂತಹವರ ಹೋರಾಟದ ಪರಂಪರೆಗೆ ಸೇರಿದವರು' ಎಂದು ಬಣ್ಣಿಸಿದ್ದರು.
ಕ್ರಿಯೆ ಇಲ್ಲದೇ ಪ್ರತಿಕ್ರಿಯೆ ಇರುವುದಿಲ್ಲವೆಂಬುದು ವಿಜ್ಞಾನದ ನಿಯಮ. ರಾಮಾಜೋಯಿಸ್ ಮಾತುಗಳನ್ನೇ ಮುಂದುವರೆಸುವುದಾದರೆ ಈಗ ನಡೆಯುತ್ತಿರುವ ಪಾತಕೀ ಕೃತ್ಯಗಳಿಗೂ ಒಂದು ಕ್ರಿಯಾಸ್ವರೂಪದ ಮೂಲ ಇರಲೇಬೇಕಲ್ಲವೇ. ಅದನ್ನೇ ಬಾಬ್ರಿ ಮಸೀದಿ ಕೆಡವಿದ ಕೃತ್ಯ ಎಂದು ಹೇಳಬಹುದು.
ಹಾಗಂತ ರಾಮಜೋಯಿಸ್ರವರು ಸಮರ್ಥಿಸಿಕೊಂಡಂತೆ ದೇಶದಲ್ಲಿನ ಭಯೋತ್ಪಾದನೆ ಕೃತ್ಯಗಳನ್ನು ಸಮರ್ಥಿಸುವುದು ಹಿಂಸಾವಿನೋದವಾಗುತ್ತದೆ. ಹಿಂಸೆಯನ್ನು ಸಂಭ್ರಮಿಸುವುದು, ಅದನ್ನು ಪ್ರತ್ಯಕ್ಷ ಯಾ ಪರೋಕ್ಷವಾಗಿ ಸಮರ್ಥಿಸುವುದು ಎರಡೂ ಕೂಡ ಶಾಂತಿ ಪ್ರಿಯರಿಗೆ ತಕ್ಕುದಲ್ಲ. ಭಯೋತ್ಪಾದನೆ ಯಾವುದೇ ಮೂಲದಿಂದ ಬರಲಿ ಅದು ಖಂಡನಾರ್ಹ, ಶಿಕ್ಷಾರ್ಹ. ಹಿಂದುಗಳು ಮಾಡಿದಾಕ್ಷಣ ಅದು ಒಪ್ಪಿತ, ಮುಸ್ಲಿಮರು ಮಾಡಿದಾಕ್ಷಣ ಅದು ಖಂಡನೀಯವೆಂಬುದು ಶಾಂತಿಪ್ರಿಯರಿಗೆ ಶೋಭೆ ತರುವ ಸಂಗತಿಯಲ್ಲ. ಹಾಗೆ ಹೇಳುತ್ತಾ ಹೋದರೆ 80 ರ ದಶಕದಲ್ಲಿ ಪಂಜಾಬಿನಲ್ಲಿ ಪ್ರತ್ಯೇಕ ಖಾಲಿಸ್ತಾನ್ಗಾಗಿ ಬಿಂದ್ರನ್ವಾಲೆ, ಅಸ್ಸಾಂನ ಉಲ್ಫಾ ಉಗ್ರರು, ತ್ರಿಪುರ ವಿಮೋಚನಾ ಹೋರಾಟಗಾರರು ಹೀಗೆ ಎಲ್ಲವನ್ನೂ ಸಮರ್ಥಿಸಬೇಕಾಗುತ್ತದೆ. ಏಕೆಂದರೆ ರಾಮಾಜೋಯಿಸ್ ಲೆಕ್ಕದಲ್ಲಿ ಇವರ್ಯಾರು ಸಾಬರಲ್ಲ. ಅವರೆಲ್ಲರೂ `ಸೋಕಾಲ್ಡ್ ಹಿಂದುಗಳೇ' ಆಗುತ್ತಾರೆ.
ಮುಂ`ಭಯ':
ಮುಂಬೈ ಎಂದರೆ ಭಯ ಪಡುವ ಸ್ಥಿತಿ ಈಗಿನದಲ್ಲ. ಬಾಬ್ರಿ ಮಸೀದಿ ಧ್ವಂಸದ ನಂತರ ನಡೆದ ಮುಂಬೈ ಕೋಮುಗಲಭೆ ಕುರಿತು ನ್ಯಾಯಮೂರ್ತಿ ಶ್ರೀಕೃಷ್ಣ ಅವರು ಸಲ್ಲಿಸಿದ `ಶ್ರೀಕೃಷ್ಣ ರಿಪೋರ್ಟ್' ಓದಿದರೆ ಎದೆ ಝಲ್ಲನೆನಿಸುತ್ತದೆ. ಆದರೆ ಇವತ್ತಿಗೂ ಶ್ರೀ ಕೃಷ್ಣ ಕಮಿಶನ್ ರಿಪೋರ್ಟ್ನಲ್ಲಿ ಆರೋಪಿತರೆಂದು ಹೆಸರು ಪಡೆದ ಯಾರಿಗೂ ಶಿಕ್ಷೆಯಾಗಿಲ್ಲ. ಅವರೆಲ್ಲಾ ಹಾಗೆ ಸರಾಗವಾಗಿ ಓಡಾಡಿಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ?
ಮುಂಬೈನಲ್ಲಿ ನಡೆದ ವಿಧ್ವಂಸಕ ದಾಳಿಯ ಚಿತ್ರವನ್ನು ಟಿ.ವಿ.ಯಲ್ಲಿ ನೋಡುತ್ತಿದ್ದರೆ ಮೈ ನಡುಗುತ್ತದೆ. ತಾಜ್, ಟ್ರೆಡೆಂಟ್, ಒಬೆರಾಯ್ ಹಾಗೂ ನಾರಿಮನ್ಹೌಸ್ನ್ನು ಸುಮಾರು 3 ದಿನಗಳ ಕಾಲ ತಮ್ಮ ಹಿಡಿತದಲ್ಲಿಟ್ಟುಕೊಂಡ ಉಗ್ರರು ಅಸಾಮಾನ್ಯರೇನಲ್ಲ. ಬೂಟಿನ ತುದಿಯಿಂದ ಹೊಸಕಿಹಾಕುವಷ್ಟು ಬೆರಳೆಣಿಕೆಯ ಜನ ಅಲ್ಲಿದ್ದರು. ಆದರೆ ಅವರಿಗೆ ಬೆಂಬಲಿಸಿ ನಿಂತರಲ್ಲ. ಅವರ ಬಗ್ಗೆ ಸರ್ಕಾರ ಎಚ್ಚರವಹಿಸಬೇಕಾಗಿದೆ.
ಈಗ ಬರುತ್ತಿರುವ ವರದಿಗಳ ಪ್ರಕಾರ ಈ ಕೆಲವು ಹೋಟೆಲ್ಗಳಲ್ಲಿ ಕೆಲವು ದಿನಗಳಿಗೆ ಮೊದಲೇ ಉಗ್ರರು ನೌಕರಿಗೆ ಸೇರಿದ್ದರು. ಅಲ್ಲಿಂದಲೇ ಹೊಂಚು ಹಾಕಿದ್ದರು. ಮೊದಲೇ ಆಗಮಿಸಿ ಸಿದ್ಧತೆ ಮಾಡಿಕೊಂಡ ಉಗ್ರರ ಅಪ್ಪಣೆ ಮೇರೆಗೆ ಗಡಿಭಾಗದಿಂದ ಕೆಲವರು ಒಳಗೆ ನುಸುಳಿದರು. ಇಡೀ ದೇಶವನ್ನೇ ನಡುಗಿಸಿದರು.
ಹಾಗಾದರೆ ದೇಶದೊಳಗಿನ ದ್ರೋಹಿಗಳು ಈ ವಿದೇಶಿಯರಿಗೆ ಸಪೋರ್ಟ್ ಮಾಡಿದ್ದು ಸುಳ್ಳಲ್ಲ. ಅಲ್ಲದೇ ದೇಶದೊಳಕ್ಕೆ ನುಸುಳುವ ವಿದೇಶಿಯರನ್ನು ತಡೆಯುವ ಶಕ್ತಿ ನಮ್ಮ ರಕ್ಷಣಾ ವ್ಯವಸ್ಥೆಗೆ ಇಲ್ಲವೆ?
ದೇಶದ ರಕ್ಷಣಾ ವ್ಯವಸ್ಥೆ ಎಷ್ಟು ತಿರುಪೆ ಎದ್ದು ಹೋಗಿದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ. ನ.28 ರಂದು ಮಾಸ್ಕೋದಿಂದ ದೆಹಲಿಗೆ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ಬಂದಿಳಿದರು. ಆದರೆ ಮಾಸ್ಕೋದಲ್ಲಿ ವಿಮಾನ ಬದಲಾಯಿಸುವಾಗ ಅವರ ಲಗ್ಗೇಜ್ ತಪ್ಪಿ ಕರಾಚಿಗೆ ಹೋಗಿತ್ತು. ಅದಕ್ಕಾಗಿ ನ.28 ರ ಬೆಳಿಗ್ಗೆ ದೆಹಲಿಯ ವಿಮಾನ ನಿಲ್ದಾಣಕ್ಕೆ ಬರಲು ಸಿಬ್ಬಂದಿ ಸೂಚಿಸಿದ್ದರು. ಅದರಂತೆ ಸದರಿ ವ್ಯಕ್ತಿ ವಿಮಾನ ನಿಲ್ದಾಣಕ್ಕೆ ಹೋದರೆ ಒಳ ಪ್ರವೇಶಿಸಲು ಸಿಬ್ಬಂದಿ ಅಡ್ಡಿ ಪಡಿಸಿದರು. ತಲೆ ಮೇಲೆಕೆಳಗೆ ಮಾಡಿದರೂ ಅವರನ್ನು ಒಳಗೆ ಬಿಡಲೇ ಇಲ್ಲ. ಜತೆಗಿದ್ದವರೊಬ್ಬರು ಭದ್ರತಾ ಸಿಬ್ಬಂದಿ ಕೈಗೆ 500 ರೂ.ಗಳ ಎರಡು ನೋಟು ಇಟ್ಟರು. ಕೂಡಲೇ ಅವರ ಕೆಲಸವಾಯಿತು. ಲಂಚಕ್ಕೆ ಕೈಯೊಡ್ಡಿದ ಸಿಬ್ಬಂದಿ ಕರ್ನಾಟಕದ ವ್ಯಕ್ತಿಯನ್ನು ತಾವು ಹೋಗಬೇಕಾದ ಜಾಗಕ್ಕೆ ಬಿಟ್ಟು ಬಂದ. ಇಷ್ಟರ ಮಟ್ಟಿಗೆ ನಮ್ಮ ದೇಶದ ವ್ಯವಸ್ಥೆ `ಭದ್ರ'ವಾಗಿದೆ.
ಮುಂಬೈನಲ್ಲೂ ಹೀಗೆ ಆಗಿರಲಿಕ್ಕೆ ಸಾಕು. ಆದರೆ ಸ್ವಾತಂತ್ರ್ಯದ ಇಷ್ಟು ವರ್ಷದಲ್ಲಿ ಈ ರೀತಿಯ ಘಟನೆ ನಡೆದಿರಲಿಲ್ಲ. ಹೊರಗಿನಿಂದ ಬಂದ ಶತ್ರುಗಳು ನಮ್ಮ ದೇಶದ ಯಾವುದೇ ಒಂದು ಪ್ರದೇಶವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ನಿದರ್ಶನವಿರಲಿಲ್ಲ. ದೇಶದ ಆಡಳಿತ ಸಂಪೂರ್ಣ ವೈಫಲ್ಯವಾಗಿರುವ ದ್ಯೋತಕವಿದು.
ರಾಜಕಾರಣಿಗಳು ಭ್ರಷ್ಟರಾಗಿ ನಾಲ್ಕೈದು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿರುವಾಗ, ಸಹಜ ಮನುಷ್ಯರೇ ಆಗಿರುವ ರಕ್ಷಣಾ ಸಿಬ್ಬಂದಿ ಭ್ರಷ್ಟರಾಗುವುದು ಅಸಹಜವೇನಲ್ಲ. ಇದನ್ನು ತಪ್ಪಿಸುವ ಹೊಣೆ ಯಾರದು?
ಈಗ ದೇಶವೇ ಕಿತ್ತುಹೋಗಿದೆ ಎಂದು ಬೀಗುತ್ತಿರುವ ಬಿಜೆಪಿ ಅಧಿಕಾರಕ್ಕೆ ಬಂದರೆ ಆಗ ಮಾಡುವುದೇನು? ಸಂಸತ್ ಭವನದ ಮೇಲೆ ದಾಳಿ ನಡೆದಾಗ, ಅಕ್ಷರಧಾಮದ ಮೇಲೆ ಉಗ್ರರು ದಾಳಿ ಎಸಗಿದಾಗ ಬಿಜೆಪಿ ಏನು ಮಾಡುತ್ತಿತ್ತು. ಯಾವುದೇ ವಿಷಯವನ್ನು ವೋಟಿನ ರಾಜಕಾರಣಕ್ಕೆ ಅಸ್ತ್ರ ಮಾಡಿಕೊಳ್ಳುವುದಕ್ಕಿಂತ ದೇಶದ ಭದ್ರತೆ, ಸಮಗ್ರತೆ ದೃಷ್ಟಿಯಿಂದ ನೋಡಬೇಕು.
ಘಟನೆ ನಡೆದ ಕೂಡಲೇ ಮಹಾರಾಷ್ಟ್ರಕ್ಕೆ ತೆರಳಿ ಮೃತ ಯೋಧರಿಗೆ 1 ಕೋಟಿ ರೂ. ಪರಿಹಾರ ಘೋಷಿಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕಾರವಧಿಯಲ್ಲಿ ಮಾಡಿದ್ದೇನು? ಗುಜರಾತೆಂಬುದು ಶಿಲಾಯುಗದ ಕಾಲದ ರಾಜ್ಯವಾಗಿ ಪರಿವರ್ತಿತರಾದಾಗ ಇದೇ ಮೋದಿ ಸಂಭ್ರಮಿಸಿರಲಿಲ್ಲವೇ? ಗರ್ಭಿಣಿಯ ಭ್ರೂಣ ಬಗೆದು ಬೆಂಕಿಗೆ ಹಾಕಿ ಸುಡುವಾಗ ಮೋದಿಯವರ ದೇಶಪ್ರೇಮ ಎಲ್ಲಿ ಹೋಗಿತ್ತು?
ಎಲ್ಲಾ ಪಕ್ಷಗಳು ರಾಜಕೀಯ ಮಾಡುವುದು ಬಿಟ್ಟು ದೇಶದ ಹಿತದೃಷ್ಟಿಯಿಂದ ಚಿಂತಿಸಬೇಕು. ಉಗ್ರರು, ದ್ರೋಹಿಗಳು ಯಾರೇ ಇದ್ದರೂ ಅವರನ್ನು ಮಟ್ಟಹಾಕಬೇಕು. ಉಗ್ರರು ಎಂಬ ಪದ ಬಳಸುವ ಬದಲು ದೇಶದ್ರೋಹಿಗಳೆಂದು ಹಣೆ ಪಟ್ಟಿ ಕಟ್ಟಿ ಗಲ್ಲಿಗೇರಿಸಲು ಮುಂದಾಗಬೇಕು. ಸಿಬ್ಬಂದಿಗಳು ಭ್ರಷ್ಟರಾಗದಂತೆ ನೋಡಿಕೊಳ್ಳಬೇಕು. ಹಾಗಾಗಬೇಕಾದರೆ ತಾವು ಭ್ರಷ್ಟರಾಗದೇ ಸಜ್ಜನಿಕೆ, ಪ್ರಾಮಾಣಿಕತೆ ತೋರಬೇಕು. ಆಗ ಮಾತ್ರ ಬೋಧನೆಗೆ ಅರ್ಥವಿರುತ್ತದೆ.
ಪೋಟಾ, ಟಾಡಾದಂತಹ ಜನವಿರೋಧಿ ಕಾಯ್ದೆ ತರುವುದರಿಂದ ಉಗ್ರರ ಉಪಟಳವನ್ನು ಮಟ್ಟಹಾಕಲು ಸಾಧ್ಯವಿಲ್ಲ. ಉಗ್ರತೆಗೆ ಕಾರಣವಾಗುವ ಮನಃಸ್ಥಿತಿಯನ್ನು ಬದಲಾಯಿಸಬೇಕು. ಎಲ್ಲಾ ರೀತಿಯ ಅಸಮಾನತೆ, ಧಾರ್ಮಿಕ ಹಿಂಸೆ, ಶೋಷಣೆ ತೊಲಗಿದಾಗ ಮಾತ್ರ ಶಾಂತಿ, ಸೌಹಾರ್ದ ನೆಲೆಸಲು ಸಾಧ್ಯ. ಸಂಸದೀಯ ಪ್ರಜಾಪ್ರಭುತ್ವವೆಂಬುದು `ಡೆಮ್ಮೋ- ಕ್ರಸಿ' ಯಾಗಿರುವಾಗ ಇದನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಕೆಂಪುಕೋಟೆಯ ಮೇಲೆ ಮನಮೋಹನಸಿಂಗ್ ಬದಲು ಅಡ್ವಾಣಿ ಬಾವುಟ ಹಾರಿಸುವ ಬದಲಾವಣೆಯಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ರಾಜಕೀಯ ಸ್ಥಿತ್ಯಂತರವಾಗಿ ದ್ವೇಷರಹಿತವಾದ, ಸಮಾನವಾದ ವ್ಯವಸ್ಥೆ ಜಾರಿಯಾಗಬೇಕು. ಮತದಾರನನ್ನೇ ಕಡುನೀಚನನ್ನಾಗುವಷ್ಟು ಭ್ರಷ್ಟನನ್ನಾಗಿಸಿರುವ ಈ ವ್ಯವಸ್ಥೆ ಎಂತಹ ಪರಿವರ್ತನೆ ತಂದೀತು? ಇದು ಯೋಚಿಸುವ ಕಾಲವಷ್ಟೇ!
Sunday, November 16, 2008
ಉಗ್ರತೆ-ವಿಕಾರತೆ
ದೇಶದ್ರೋಹಿಗಳಾದ ಮುಸ್ಲಿಮ್ ಉಗ್ರರು ಪ್ರಮುಖ ನಗರಗಳಲ್ಲಿ ಬಾಂಬ್‌ಸ್ಪೋಟಿಸುವ ಮೂಲಕ ವಿಧ್ವಂಸಕ ಕೃತ್ಯ ನಡೆಸುತ್ತಿದ್ದಾರೆ. ದೇಶದ ಸೌಹಾರ್ದತೆ, ಶಾಂತಿ, ನೆಮ್ಮದಿಗೆ ಭಂಗ ತರುತ್ತಿದ್ದಾರೆ. ಕೋಮುಗಲಭೆಗೆ ಕಾರಣರಾಗುತ್ತಿದ್ದಾರೆಂದು ಬಿಜೆಪಿ ಬೊಬ್ಬಿರಿಯುತ್ತಿತ್ತು. ಇವರನ್ನು ನಿಯಂತ್ರಿಸದ ಕೇಂದ್ರ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅಡ್ವಾಣಿ, ರಾಜನಾಥಸಿಂಗ್, ವೆಂಕಯ್ಯನಾಯ್ಡು ಎಲ್ಲರೂ ಹೇಳುತ್ತಿದ್ದರು. ಕರ್ನಾಟಕದ ವಿಧಾನಸಭೆ ಚುನಾವಣೆ ಹಾಗೂ ಈಗ ಆರು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಇದನ್ನೇ ಅಸ್ತ್ರವಾಗಿಸಲು ಬಿಜೆಪಿ ಹೊಂಚು ಹಾಕಿತ್ತು.
ಆದರೆ ಈಗ ಎಲ್ಲರ ಮುಖವಾಡವೂ ಬಯಲಾಗಿದೆ. ಮುಸ್ಲಿಂ ಉಗ್ರರಷ್ಟೇ ಆರೆಸ್ಸೆಸ್ ಪ್ರೇರಿತ ಉಗ್ರರೂ ಸಮಬಲದಲ್ಲಿ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಇತ್ತೀಚಿಗೆ ನಡೆದ ಬಂಧನ, ವಿಚಾರಣೆಗಳು ಬಹಿರಂಗಗೊಳಿಸಿವೆ.
ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ಮಸೀದಿ ಬಳಿ 2006ರಲ್ಲಿ ನಡೆದ ಸ್ಪೋಟದಲ್ಲಿ 38 ಜನ ಸಾವುಕಂಡಿದ್ದರು. ಅದರ ಜಾಡು ಹಿಡಿದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದಳದ ಸಿಬ್ಬಂದಿ ಮೊದಲು ಸಾಧ್ವಿ ಪ್ರಗ್ಯಾಳನ್ನು ಬಂಧಿಸಿದರು. ಅದರ ಬೆನ್ನಲ್ಲೆ ಕರ್ನಲ್ ಶ್ರೀಕಾಂತ್ ಪುರೋಹಿತ್ ಹಾಗೂ ಮಠಾಧೀಶ ಸುಧಾಕರ ದ್ವಿವೇದಿಯನ್ನು ಬಂಧಿಸಲಾಗಿದೆ. ಈ ಸಂಬಂಧ 25ಕ್ಕೂ ಹೆಚ್ಚು ಬಂಧನಗಳು ನಡೆದಿವೆ.
ಮಾಲೇಗಾಂವ್‌ನಲ್ಲಿ ಬಾಂಬ್‌ಸ್ಪೋಟಿಸಿ ಕೋಮುಗಲಭೆ ಹುಟ್ಟು ಹಾಕುವುದು ಇವರ ಆಶಯವಾಗಿತ್ತೆಂದು ಪ್ರಾಥಮಿಕ ತನಿಖೆ ಹೇಳಿದೆ. ಅಲ್ಲಿಗೆ ಮುಸ್ಲಿಮ್ ಉಗ್ರರು ಮಾಡುತ್ತಿದ್ದ ದೇಶದ್ರೋಹಿ ಕೃತ್ಯದಲ್ಲಿ ತಾನು ಭಾಗಿಯೆಂದು ಸಂಘಪರಿವಾರ ತೋರಿಸಿಕೊಟ್ಟಿದೆ. ಇದರ ಜತೆಗೆ ನಾಂದೇಡ್‌ನಲ್ಲಿ ಬಾಂಬ್ ತಯಾರಿಸುವಾಗ ಆರೆಸ್ಸೆಸ್ ಕಾರ್ಯಕರ್ತ ಸಾವನ್ನಪ್ಪಿದ್ದು ಬಯಲಾಗಿದೆ. ಹಾಗೆಯೇ ತಮಿಳುನಾಡಿನ ತಲಚೇರಿಯಲ್ಲಿ ಪ್ರದೀಪ, ದಿಲೀಪ ಎಂಬ ಆರೆಸ್ಸೆಸ್ ಕಾರ್ಯಕರ್ತರು ಕಳೆದವಾರವಷ್ಟೇ ಬಾಂಬ್ ತಯಾರಿಕೆಯಲ್ಲಿ ನಿರತರಾಗಿರುವಾಗ ಸಾವು ಕಂಡಿದ್ದಾರೆ.
ಮುಸ್ಲಿಮ್ ಉಗ್ರರು, ನಕ್ಸಲೀಯರು ಬಾಂಬ್ ತಯಾರಿಸಿ, ಸ್ಪೋಟಿಸುತ್ತಾರೆಂದು ಆಪಾದನೆಗಳ ಸುರಿಮಳೆಗೈಯುತ್ತಿದ್ದ ಬಿಜೆಪಿ ಈಗ ಯಾವ ರೀತಿ ಇದಕ್ಕೆ ಪ್ರತಿಕ್ರಿಯಿಸುತ್ತದೆ. ಇವರ್ಯಾರು ತಮಗೆ ಸಂಬಂಧಪಟ್ಟವರಲ್ಲ, ತಮ್ಮ ಸಂಘಟನೆಗೂ ಈ ಘಟನೆಗಳಿಗೂ ಸಂಬಂಧವಿಲ್ಲವೆಂದು ರಾಜನಾಥ್‌ಸಿಂಗ್ ಹೇಳಿದ್ದಾರೆ. ವಿವಿಧ ಸಂಘಪರಿವಾರದ ನಾಯಕರು ಇದನ್ನೇ ಪ್ರತಿಪಾದಿಸಿದ್ದಾರೆ.
ಆದರೆ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಎಬಿವಿಪಿ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾಕೆ. ಹಿಂದಿನ ಲೋಕಸಭೆ ಚುನಾವಣೆಯಲ್ಲಿ, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ರಾಜನಾಥ್‌ಸಿಂಗ್, ನರೇಂದ್ರಮೋದಿ ಜತೆ ವೇದಿಕೆಯಲ್ಲಿ ಕಾಣಿಸಿಕೊಂಡವಳು. ಮುಸ್ಲಿಮರ ಬಗ್ಗೆ ಭಾಷಣ ಬಿಗಿದು ಭರ್ಜರಿ ಚಪ್ಪಾಳೆ ಗಿಟ್ಟಿಸಿದವಳು. ಇದನ್ನೆಲ್ಲಾ ಸಿ ಎನ್ ಎನ್ ಐಬಿ ಎನ್ ಟಿ.ವಿ. ದಾಖಲೆ ಸಹಿತ ಪ್ರದರ್ಶಿಸಿದೆ.
ದೆಹಲಿಯ ಜಾಮಿಯಾ ಮಿಲಿಯಾ ವಿ.ವಿ.ಯ ವಿದ್ಯಾರ್ಥಿಗಳನ್ನು ಅನವಶ್ಯಕವಾಗಿ ಭಯೋತ್ಪಾದಕರೆಂದು ಬಣ್ಣಿಸಿ, ಅವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವ( ಅವರು ಮುಸ್ಲಿಮರೆಂಬ ಏಕೈಕ ಕಾರಣಕ್ಕೆ) ಬಿಜೆಪಿ ಪ್ರಗ್ಯಾ ಬಗ್ಗೆ ಏನು ಹೇಳುತ್ತದೆ. ತಲಚೇರಿ, ನಾಂದೇಡ್ ಪ್ರಕರಣಗಳ ಬಗ್ಗೆ ಯಾಕೆ ಮಾತನಾಡುವುದಿಲ್ಲ.
ಈ ಘಟನೆಯ ಹಿಂದೆ ಸಾವರ್ಕರ್ ಸೊಸೆ ಹಿಮಾಂಶು ಸಾವರ್ಕರ್ ಸ್ಥಾಪಿತ ಅಭಿನವ ಭಾರತ ಇರುವುದು ಪತ್ತೆಯಾಗಿದೆ. ಸೇನೆಯಲ್ಲಿದ್ದ ಕರ್ನಲ್ ಶ್ರೀಕಾಂತ್ ಪುರೋಹಿತ್, ಅಭಿನವ ಭಾರತದ ಸಭೆಗಳಲ್ಲಿ ಪಾಲ್ಗೊಂಡು ಬಜರಂಗದಳ, ಆರೆಸ್ಸೆಸ್ ಕಾರ್ಯಕರ್ತರಿಗೆ ಉಪನ್ಯಾಸ ನೀಡುತ್ತಿದ್ದನೆಂಬುದು ಬಯಲಾಗಿದೆ. ಆತನ ಲ್ಯಾಪ್‌ಟಾಪ್ ಕೂಡ ಪೊಲೀಸರ ವಶವಾಗಿದ್ದು, ಮಾಲೇಗಾಂವ್ ಸ್ಪೋಟದ ರೂವಾರಿ ಈತ ಎಂಬುದು ಈಗ ಮೇಲ್ನೋಟಕ್ಕೆ ಕಂಡು ಬಂದಿರುವ ಸತ್ಯ. ಗಡ್ಡಧಾರಿ ಮುಸ್ಲಿಮರು ಮಾತ್ರ ಭಯೋತ್ಪಾದಕರಲ್ಲ, ಕಾವಿ ಬಟ್ಟೆ ಧರಿಸಿ, ಸಂನ್ಯಾಸಿ ವೇಷ ಧರಿಸಿದ ಭಯೋತ್ಪಾದಕರು ಇದ್ದಾರೆಂಬುದನ್ನು ಇತ್ತೀಚಿನ ಪ್ರಕರಣಗಳು ಬಯಲು ಮಾಡಿವೆ. ಸಾಧ್ವಿ ಪ್ರಗ್ಯಾ ಹಾಗೂ ಮಠಾಧೀಶ ಸುಧಾಕರ ದ್ವಿವೇದಿಯರ ಬಂಧನ ಇದಕ್ಕೆ ಸಾಕ್ಷಿಯಾಗಿದೆ.
ಹಿಂದೂಧರ್ಮದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಶಾಂತಿಯುತ ಮಾರ್ಗಗಳಿಂದ ತಡೆಯಲಾಗದೆಂಬ ಹತಾಶೆಯಲ್ಲಿ ಇವರು ಭಯೋತ್ಪಾದನೆಗೆ ಇಳಿದಿದ್ದಾರೆಂದು ಕೆಲವರು ಸಮರ್ಥಿಸುತ್ತಿದ್ದಾರೆ. ಆದರೆ ಮುಸ್ಲಿಮ್ ಭಯೋತ್ಪಾದನೆಗೂ ಹೀಗೆ ಸಮರ್ಥನೆ ನೀಡಬಹುದು. ಬಾಬರಿ ಮಸೀದಿ, ಮುಂಬೈ ಸ್ಪೋಟ, ಗುಜರಾತ್ ಮಾರಣಹೋಮ ಹೀಗೆ ಸಾಲು ಸಾಲು ಹಿಂಸೆಯಿಂದ ನಲುಗಿದ ಮುಸ್ಲಿಮ್ ಯುವಕರು ಹತಾಶೆಯಿಂದ ಭಯೋತ್ಪಾದನೆಗೆ ಇಳಿದಿದ್ದಾರೆಂದು ಮತ್ತೊಂದು ವರ್ಗ ಪ್ರತಿಪಾದಿಸುತ್ತದೆ.
ದೇಶದ್ರೋಹ:
ಆದರೆ ಯಾವುದೇ ಭಯೋತ್ಪಾದನೆಯೂ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಅದೊಂದು ದೇಶದ್ರೋಹದ ಕೃತ್ಯ. ವ್ಯವಸ್ಥೆಯ ಹಿಂಸೆಯಿಲ್ಲದೇ ವ್ಯವಸ್ಥಿತವಾಗಿ ಹಿಂಸಾಕೃತ್ಯ ಆಯೋಜಿಸುವುದು, ನಡೆಸುವುದು ಅಪರಾಧ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ. ಸಂವಿಧಾನದ ಹಾಗೂ ಪ್ರಜಾತಂತ್ರದ ಆಶಯಕ್ಕೆ ಸಂಪೂರ್ಣ ವಿರೋಧ.
ಇದನ್ನು ಯಾರೇ ಮಾಡಿದರೂ ಒಕ್ಕೊರಲ ಖಂಡನೆ ಮೂಡಿ ಬರಬೇಕಾಗಿದೆ. ಮುಸ್ಲಿಮರು ಮಾಡಿದಾಗ ಒಂದು, ಹಿಂದುಗಳು ಮಾಡಿದಾಗ ಮತ್ತೊಂದೆಂಬ ಭಾವನೆಯೇ ಭಯೋತ್ಪಾದನೆ ಹಬ್ಬಲು, ಅದು ರಾಕ್ಷಸೀರೂಪದಲ್ಲಿ ಬೆಳೆಯಲು ಕಾರಣವಾಗುತ್ತದೆ. ಈಗ ದೇಶದಲ್ಲಿ ನಡೆದಿರುವುದು ಇದೆ.
ಅಹಮದಾಬಾದ್, ಬೆಂಗಳೂರು, ದೆಹಲಿ ಮತ್ತಿತರ ಕಡೆ ನಡೆಯವ ಭಯೋತ್ಪಾದನೆಯನ್ನು ಖಂಡಿಸುವವರು ಗುಜರಾತ್‌ನಲ್ಲಿ ನಡೆದ ನರಮೇಧ, ಇತ್ತೀಚಿಗೆ ಒರಿಸ್ಸಾದಲ್ಲಿ ನಡೆದ ಬರ್ಬರ ಹಿಂಸೆ, ಕರ್ನಾಟಕದಲ್ಲಿ ಕ್ರೈಸ್ತರ ಮೇಲಿನ ದಾಳಿಗಳಿಗೆ ಕಾರಣ ಹುಡುಕುತ್ತಾರೆ. ಅದು ಯಾಕೆ ಆಗಿದೆ ಎಂದು ವಿವರಣೆ ನೀಡಲು ಮುಂದಾಗುತ್ತಾರೆ. ಅದು ಖಂಡನೀಯವೆಂಬ ಘೋಷಣೆ ಕೇಳುವುದಕ್ಕಿಂತ ಆಂತರ್ಯದಲ್ಲಿ ಅದರ ಸಮರ್ಥನೆಯೇ ಗಟ್ಟಿಯಾಗಿ ಪ್ರತಿಧ್ವನಿಸುತ್ತಿರುತ್ತದೆ.
ರಾಜಕಾರಣಿಗಳು ಹೋಗಲಿ, ಭೈರಪ್ಪ, ಚಿದಾನಂದಮೂರ್ತಿ, ಸುಮತೀಂದ್ರನಾಡಿಗರಂತಹ ಸೂಕ್ಷ್ಮ ಮನಸ್ಸಿನ ಸಾಹಿತಿಗಳು ಹೀಗೆ ಮಾತಾಡುವುದು ನಾಚಿಕೆಗೇಡು. ಮುತ್ಸದ್ದಿ ಎಂದು ಕರೆಸಿಕೊಂಡ, ರಾಜಕಾರಣಿಗಳಿಗೆ ನೀತಿ ಸಂಹಿತೆ ಬೋಧಿಸುವ ರಾಮಾಜೋಯಿಸ್‌ರಂತಹವರು ಇದರ ಬೆನ್ನಿಗೆ ನಿಲ್ಲುವುದು ಅಸಹ್ಯ.
ಯಾಕೆ ಭಯೋತ್ಪಾದನೆ:
ಭಯೋತ್ಪಾದನೆ ಹಿಂದೆ ಎರಡು ಕಾರಣಗಳಿವೆ. ಒಂದು ಇದೊಂದು ಮನೋವಿಕಲ್ಪ. ಉಗ್ರತೆಯಲ್ಲಿ ವಿಕಾರತೆ. ಇನ್ನೊಬ್ಬರು ಹಿಂಸೆಯಿಂದ ಒದ್ದಾಡುತ್ತಾ ಸಾಯಲೂ ಆಗದೇ ಬದುಕಲೂ ಆಗದೇ ಇರುವ ಸ್ಥಿತಿಯನ್ನು ನೋಡಿ ಸಂಭ್ರಮಿಸುವುದು ಇಂತಹವರ ದುಶ್ಚಟ. ಇದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ. ಹಿಂಸಾಮೋಹಿಗಳು, ಹಿಂಸೆಯನ್ನು ವಿೃಂಭಿಸಿ, ಆನಂದಿಸುವ ವಿಕಾರಿಗಳು ಇವರು. ಈಗ ನಡೆಯುತ್ತಿರುವ ಎಲ್ಲಾ ರೀತಿಯ ಭಯೋತ್ಪಾದನೆಯ ಹಿಂದೆ ಇರುವುದು ಇದೆ.
ಇನ್ನೊಂದು ತಮ್ಮ ಅಧಿಕಾರ ಸ್ಥಾಪಿಸುವ ಭಯೋತ್ಪಾದನೆ. ಹಿಜ್ಬುಲ್ ಮುಜಾಹಿದ್ದೀನ್, ತಾಲಿಬಾನ್, ಆರೆಸ್ಸೆಸ್, ಬಜರಂಗದಳ, ಶಿವಸೇನೆಯ ಹಿಂಸಾ ಮಾರ್ಗಗಳು.
ಇಲ್ಲಿ ತಮ್ಮ ಅಧಿಕಾರ ಸ್ಥಾಪಿಸುವುದೇ ಭಯೋತ್ಪಾದನೆಗೆ ಕಾರಣ. ಹಿಂಸೆಯನ್ನು ಹುಟ್ಟಿಸುವ ಮೂಲಕ ಅಧಿಕಾರವನ್ನು ಹಡೆಯಬಹುದೆಂಬುದು ಇವರ ಭ್ರಮೆ. ಗುಜರಾತ್‌ನಲ್ಲಿ ನಡೆದ ಹಿಂಸೆಯ ಮೇಲೆಯೇ ಮೋದಿ ಅಧಿಕಾರ ಸ್ಥಾಪಿಸಿದರು. ಜನಾಂಗೀಯ ದ್ವೇಷದ ಅಮಲನ್ನು ಹುಟ್ಟಿಸಿ, ತಮ್ಮ ಶ್ರೇಷ್ಠತೆಯನ್ನು ಪ್ರಜ್ವಲಿಸಿ ಅಧಿಕಾರ ಸ್ಥಾಪನೆ ಇದರ ಗುರಿ. ಇತಿಹಾಸದಲ್ಲಿ ಹಿಟ್ಲರ್, ಮುಸಲೋನಿಯಂತ ಫ್ಯಾಸಿಸ್ಟರು ಮಾಡಿದ್ದು ಇದನ್ನೆ.
ನಕ್ಸಲೀಯರು ಹಿಂಸೆಯನ್ನು ಪ್ರತಿಪಾದಿಸುತ್ತಾರಾದರೂ ಅದು ಜನಾಂಗೀಯ, ಧರ್ಮದ ಹಿಂಸೆಯಲ್ಲ. ಅವರ ಹಿಂಸೆಗೆ ಒಂದು ಮಟ್ಟಿಗಿನ ತಾತ್ವಿಕತೆಯಿದೆ. ಪ್ರಭುತ್ವದ(ಸರ್ಕಾರ- ಭೂಮಾಲೀಕರು) ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರವಿದೆ. ಪ್ರಜಾಸತ್ತಾತ್ಮಕ, ಸರ್ವಸಮಾನತೆಯ, ಕ್ರಾಂತಿಕಾರಿ ಸಮಾಜ ಸ್ಥಾಪಿಸಲು ಮುಂದಾಗುವ ಹೋರಾಟಗಾರರನ್ನು ಸರ್ಕಾರ ಬಗ್ಗು ಬಡಿಯಲು ಮುಂದಾಗುತ್ತದೆ. ಇಂತಹ ಸರ್ಕಾರವನ್ನು ತೊಲಗಿಸಿ, ಜನರ ಸರ್ಕಾರ ಸ್ಥಾಪಿಸಲು ಸುದೀರ್ಘ ಪ್ರಜಾ ಸಮರ ಮಾಡಬೇಕು. ಆತ್ಮರಕ್ಷಣೆ ಹಾಗೂ ಜನಾಧಿಕಾರ ಸ್ಥಾಪನೆಗೆ ಅಗತ್ಯವಾದಷ್ಟು ಹಿಂಸೆ ಅಗತ್ಯ ಎಂದು ಇವರು ಹೇಳುತ್ತಾರೆ. ಬಡವರ, ದಲಿತರ, ಭೂಮಿ- ಅನ್ನವಿಲ್ಲದವರ ಪರವಾದ ಹೋರಾಟದಲ್ಲಿ ಹೊಸ ವ್ಯವಸ್ಥೆಯ ಸ್ಥಾಪನೆಯ ಅನಿವಾರ್ಯ ಹಿಂಸೆ ಎಂದು ಹೇಳುತ್ತಾರೆ. ಇವರ ಹಿಂಸೆಯ ಮಾರ್ಗವೂ ಒಪ್ಪತಕ್ಕದ್ದಾಗಲಿ, ಬೆಂಬಲಿಸ ತಕ್ಕದ್ದಾಗಲಿ ಅಲ್ಲ. ಈ ಹಿಂಸೆಯೂ ಕೂಡ ಅಧಿಕಾರ ಸ್ಥಾಪನೆಯ ಉದ್ದೇಶದಿಂದ ಹುಟ್ಟಿದ್ದೆ ಆಗಿದೆ. ಆದರೆ ಇವೆಲ್ಲವನ್ನೂ ಪ್ರತ್ಯೇಕಿಸಿ ನೋಡುವ ಅಗತ್ಯವಿದೆ. ಹಾಗೆಯೇ ಎಲ್ಲಾ ವಿಧದ ಹಿಂಸೆಯನ್ನು ಖಂಡಿಸಬೇಕಾದ ಪರಿಸ್ಥಿತಿಯೂ ಇದೆ.
ಒಟ್ಟಿನಲ್ಲಿ ಹಿಂಸೆಯೆಂಬ ಮನೋವಿಕಾರವನ್ನು ಬದಲಿಸಿ, ಶಾಂತಿ- ಸಹಬಾಳ್ವೆಯತ್ತ ಸಮಾಜವನ್ನು ಮುನ್ನಡೆಸುವುದು ಎಲ್ಲರ ಕರ್ತವ್ಯ. ಪರಸ್ಪರರ ಮೇಲೆ ಗೂಬೆ ಕೂರಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳನ್ನು ದೂರವಿಟ್ಟು, ಶಾಂತಿ ಸಹನೆ ಸಮಾಜ ಎಲ್ಲರ ಗುರಿಯಾಗಬೇಕಿದೆ. ಎಲ್ಲಾ ಬಗೆಯ ಹಿಂಸೆಯ ಬೆಂಬಲಿಸುವವರ ಮನಃಪರಿವರ್ತನೆಯಿಂದ ಮಾತ್ರ ಇದು ಸಾಧ್ಯ.
Friday, November 14, 2008
ಬೀದಿಗೆ ಬಿತ್ತು ಕೈ
ಕೈ ಕೈ ಜೈ ಜೈ ಎಂದು ಘೋಷಣೆ ಕೂಗಿಕೊಂಡು ತಮ್ಮ ಕೈಯನ್ನು ಮೇಲೆತ್ತಿಕೊಂಡು ಹೋಗುತ್ತಿದ್ದವರು ಒಬ್ಬೊಬ್ಬರಾಗಿ `ಹಸ್ತ'ವನ್ನು ಬೀದಿಗೆ ಬಿಸಾಕಿ ನಡೆಯುತ್ತಿದ್ದಾರೆ. ಕಾಂಗ್ರೆಸ್‌ನ ಒಳಜಗಳ, ನಾಯಕರ ಮಧ್ಯದ ಅಸಮಾಧಾನದಿಂದಾಗಿ ಮುರಿದ ಮನೆಯಾಗಿರುವ ಕಾಂಗ್ರೆಸ್‌ನಲ್ಲಿ ಅಳಿದುಳಿದಿರುವ ನಾಯಕರು ಮಹಾಚುನಾವಣೆ ನಂತರ ಬೀದಿಯಲ್ಲಿ ಜೈಜೈ ಹೇಳುತ್ತಾ ಹರ-ತಾಳ ನಡೆಸುವ ಸನ್ನಿವೇಶ ಸೃಷ್ಟಿಯಾಗಲಿದೆ.
ವಿವಿಧ ರಾಜ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖರ ತಾರಾತಿಗಡಿ ಹೇಳಿಕೆ, ಮಾತಿನ ವರಸೆ ನೋಡಿ, ಕೆಂಪುಕೋಟೆ ಮೇಲೆ ಧ್ವಜ ಹಾರಿಸುವ ಕನಸಿ ಸಂಭ್ರಮದಲ್ಲಿ ಅಡ್ವಾಣಿ ಉಲ್ಲಸಿತರಾಗುತ್ತಿದ್ದಾರೆ. ಬಡಿದಾಡಿ ಕಿತ್ತುಕೊಳ್ಳಬೇಕಾದ ಪ್ರಧಾನಿ ಪಟ್ಟ ಪ್ರಯಾಸವಿಲ್ಲದೇ ಅಡ್ವಾಣಿ ತಟ್ಟೆಗೆ ಬಂದು ಬೀಳಲಿದೆ. ಅಷ್ಟರಮಟ್ಟಿಗೆ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಆಂತರಿಕ ಕಚ್ಚಾಟ, ಸಮರ್ಥ ನಾಯಕತ್ವದ ಕೊರತೆ, ದೂರದರ್ಶಿತ್ವವಿಲ್ಲದ ಕಾರ್ಯಕ್ರಮಗಳು, ಅಡಾತಡಿ ನಿರ್ಧಾರಗಳು ಹೀಗೆ ಸಾಲುಸಾಲು ಇಳಿಮೆಟ್ಟಿಲುಗಳ ಮೇಲೆ ನಿಂತ ಕಾಂಗ್ರೆಸ್‌ನ್ನು ಸ್ವಯಂಕೃತ ಪಾಪಕೂಪಕ್ಕೆ ತಳ್ಳಲು ವಿಶ್ವದ ಆರ್ಥಿಕ ಕುಸಿತ ಭೂತದಂತೆ ಬಂದು ನಿಂತಿದೆ. ಚುನಾವಣೆ ಮನೆಯ ಗೇಟಿಗೆ ಬಂದು ನಿಂತಿರುವ ಹೊತ್ತಿನಲ್ಲಿ ಬಿಗಡಾಯಿಸಿರುವ ಆರ್ಥಿಕ ಮಹಾಕುಸಿತ ಕಾಂಗ್ರೆಸ್‌ನ ಅಧಿಕಾರದ ಗೋರಿಗೆ ಕೊನೆ ಹಿಡಿ ಮಣ್ಣು ಹಾಕಲಿದೆ.
ಮ್ಯಾಗಿಚಳಿ:
ಡಿಸೆಂಬರ್‌ನಲ್ಲಿ ಕೊರೆಯುವ ಚಳಿ ಆರಂಭವಾಗುವ ಮೊದಲೇ ಸೋನಿಯಾಗಾಂಧಿಯವರ ಆಪ್ತಬಳಗದಲ್ಲಿ ಅತ್ಯಾಪ್ತರಾದ ಕರ್ನಾಟಕದ ಮಾರ್ಗರೆಟ್ ಆಳ್ವ, ಅಪಸ್ವರದಲ್ಲಿ ಬಾಯಿ ತೆರೆವ ಮೂಲಕ ಕಾಂಗ್ರೆಸ್‌ನಲ್ಲಿ ಚಳಿಯ ನಡುಕ ಹುಟ್ಟಿಸಿದ್ದಾರೆ. ಅವರ ಮಾತು ಹೈಕಮಾಂಡ್ ವಿರುದ್ಧವಲ್ಲದಿದ್ದರೂ ಕಾಂಗ್ರೆಸ್‌ನ ಪರಂಪರಾನುಗತ ಹೈಕಮಾಂಡ್ ಸಂಸ್ಕೃತಿಗೆ ವ್ಯತಿರಿಕ್ತವಾಗಿದೆ. ತಮ್ಮ ಮೊಮ್ಮಗನಿಗೆ ಸೀಟು ಸಿಗಲಿಲ್ಲವೆಂಬ ಅಸಮಾಧಾನದಲ್ಲಿ ವಿಧಾನಸಭೆ ಚುನಾವಣೆ ವೇಳೆ ನಿಷ್ಕ್ರಿಯತೆ ತೋರಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಜಾಫರ್‌ಷರೀಫ್ `ಮಾರ್ಗರೆಟ್ ಆಳ್ವ ತಮ್ಮ ಅಸಮಾಧಾನವನ್ನು ಈ ರೀತಿ ಬಹಿರಂಗವಾಗಿ ವ್ಯಕ್ತಪಡಿಸಬಾರದಿತ್ತು. ಪಕ್ಷದ ವಲಯದಲ್ಲಿ ಅದನ್ನು ಚರ್ಚಿಸಬಹುದಿತ್ತೆಂದು' ಹೇಳಿರುವುದನ್ನ ಈ ಹಿನ್ನೆಲೆಯಲ್ಲಿ ನೋಡಬೇಕು.
ಸೋನಿಯಾರ `ಥಿಂಕ್‌ಟ್ಯಾಂಕ್' ಬಳಗದ ಸದಸ್ಯೆ ಮಾರ್ಗರೆಟ್ ಆಳ್ವ ಬಹಿರಂಗವಾಗಿ ಕಾಂಗ್ರೆಸ್ ವಿರುದ್ಧ ಮಾತಾಡುವ ಮೂಲಕ ಕಾಂಗ್ರೆಸ್‌ನಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಅದರಿಂದ ಮ್ಯಾಗಿ ಎಷ್ಟು ಕಳೆದುಕೊಂಡಿದ್ದಾರೆಂಬುದಕ್ಕಿಂತ ಕಾಂಗ್ರೆಸ್ ಎಷ್ಟು ಕಳೆದುಕೊಳ್ಳಲಿದೆ ಎಂಬುದು ಮುಖ್ಯ.
ಅವರ ಆಪಾದನೆ ಮುಖ್ಯವಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಮಾರಿಕೊಳ್ಳಲಾಗಿದೆ ಎಂಬುದಾಗಿತ್ತು. ಅವರು ಬಹಿರಂಗಪಡಿಸಿರುವುದು ರಹಸ್ಯವೇನಲ್ಲ. ರಾಜ್ಯದ ಹಿರಿ-ಕಿರಿಯ ನಾಯಕರು ಚುನಾವಣೆ ಫಲಿತಾಂಶದ ನಂತರ ಅಂತರಂಗ-ಬಹಿರಂಗವಾಗಿ ಈ ರೀತಿ ಅರ್ಥ ಬರುವ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಸೋತ ಹತಾಶೆಯ ಹಿನ್ನೆಲೆಯಲ್ಲಿ ಈ ರೀತಿಯ ಅಭಿಪ್ರಾಯಗಳಿಗೆ ಆಗ ಮನ್ನಣೆ ಬರಲಿಲ್ಲ.
ಆಗಲೇ ಹೈಕಮಾಂಡ್ ಎಚ್ಚೆತ್ತಿದ್ದರೆ ಈಗಿನಷ್ಟು ಪರಿಸ್ಥಿತಿ ಬಿಗಡಾಯಿಸುತ್ತಿರಲಿಲ್ಲ. ಸೋಲಿಗೆ ಕಾರಣರಾದ ಆಗಿನ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕನಂತಹ ಆಯಕಟ್ಟಿನ ಸ್ಥಾನ ನೀಡಿದ್ದು, ಸಿದ್ದರಾಮಯ್ಯ, ಎಸ್.ಎಂ. ಕೃಷ್ಣರಂತಹ ವರ್ಚಸ್ವಿ ನಾಯಕರನ್ನು ಕಡೆಗಣಿಸಿದ್ದು ಇವೆಲ್ಲವೂ ಆಕ್ರೋಶದ ಬೆಂಕಿಗೆ ತುಪ್ಪ ಸುರಿದ ಕ್ರಮವಾಗಿದ್ದವು. ಮೈಸೂರು ಹಾಗೂ ರಾಜ್ಯದ ಇತರ ಭಾಗದಲ್ಲಿ ಕನಿಷ್ಠ 15 ಸೀಟು ತರಲು ಕಾರಣರಾಗಿದ್ದ ಸಿದ್ದುಗೆ ಕೈಕೊಟ್ಟಿದ್ದು ಕಾಂಗ್ರೆಸ್ ಹೈಕಮಾಂಡ್ ಇಟ್ಟ ಮೊದಲ ತಪ್ಪು ಹೆಜ್ಜೆ.
ಇದರ ಜತೆಗೆ ವಿಧಾನಸಭೆ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರದಿಂದ ಸೋಲು ಕಂಡಿದ್ದ ಆರ್.ವಿ. ದೇಶಪಾಂಡೆಗೆ ಕೆಪಿಸಿಸಿ ಪಟ್ಟ ಕಟ್ಟಿದ್ದು ಮತ್ತೊಂದು ತಪ್ಪು ನಡೆ. ಹೇಳಿಕೇಳಿ ಯಾವುದೇ ಮತಬ್ಯಾಂಕ್‌ನ ಪ್ರಬಲ ಹಿನ್ನೆಲೆಯಿಲ್ಲದ ದೇಶಪಾಂಡೆಗೆ ಅಧಿಕಾರ ವಹಿಸಿಕೊಡುವ ಮೂಲಕವೇ, ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ನ ಅನಭಿಷಕ್ತ ರಾಣಿಯಂತಿದ್ದ ಮಾರ್ಗರೆಟ್ ಆಳ್ವರಿಗೆ ಕಾಂಗ್ರೆಸ್ ಹೈಕಮಾಂಡ್ ಇರುಸು ಮುರುಸು ಉಂಟು ಮಾಡಿತ್ತು. ಜತೆಗೆ ಬೆಂಗಳೂರಿನ ಸರ್ವಜ್ಞನಗರದಲ್ಲಿ ಆಳ್ವ ಪುತ್ರ ನಿವೇದಿತ್ ಆಳ್ವಗೆ ಟಿಕೆಟ್ ಕೊಡದೇ, ಕೆ.ಜೆ. ಜಾರ್ಜ್‌ಗೆ ಟಿಕೆಟ್ ನೀಡಿದ್ದು, ಮ್ಯಾಗಿ ಸಿಟ್ಟಿಗೆ ಕಾರಣವಾಗಿತ್ತು. ಇವರೆಡರ ಸಿಟ್ಟನ್ನು ಮ್ಯಾಗಿ ಒಮ್ಮಿಂದೊಮ್ಮೆಗೆ ಹೊರ ಹಾಕಿದ್ದೇ ಹೈಕಮಾಂಡ್‌ನ ಅವಕೃಪೆಗೆ ಕಾರಣವಾಗಬೇಕಾಯಿತು.
ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಮಾರಾಟ ಕಾಂಗ್ರೆಸ್‌ನಲ್ಲಿ ಮಾತ್ರ ನಡೆದಿಲ್ಲ. ಬಿಜೆಪಿಯಲ್ಲಿ ಕೂಡ ಅದೇ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಅನಂತಕುಮಾರ್, ಆರ್. ಅಶೋಕ್, ಯಡಿಯೂರಪ್ಪ ಎಲ್ಲರೂ ಸವ್ವಾಸೇರಿಗೆ ಬಿದ್ದವರಂತೆ ವ್ಯಾಪಾರ ಕುದುರಿಸಿದವರೆ. ವ್ಯಾಪಾರದ ಕಾರಣಕ್ಕೆ ದೆಹಲಿಯಲ್ಲಿ ನಡೆದ ಬಿಜೆಪಿ ಉನ್ನತ ಮಟ್ಟದ ಸಭೆಯಲ್ಲಿ ಯಡ್ಡಿ-ಅನಂತ್ ಮಧ್ಯೆ ತಾರಾಮಾರಿಯೇ ನಡೆದಿತ್ತು. ನೀನು-ತಾನು ಎಂಬ ಮಾತುಗಳನ್ನು ಆಡಿಕೊಂಡಿದ್ದರು. ಜೆಡಿ ಎಸ್‌ನ `ದ್ರೋಹ'ದ ಅಲೆಯಲ್ಲಿ ಕಮಲ ಅರಳಿತ್ತು. ಈಗ ಟಿಕೆಟ್ ಕಾಂಗ್ರೆಸ್‌ನಲ್ಲಿ ಟಿಕೆಟ್ ಮಾರಾಟವಾದ ಬಗ್ಗೆ ಗಟ್ಟಿಯಾಗಿ ಗಂಟಲು ಹರಿದುಕೊಳ್ಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಮಾನ್ ಡಿ.ವಿ. ಸದಾನಂದಗೌಡರು, ಬಿಜೆಪಿಯ ಬಿ ಫಾರಂನ್ನು ತಾವೇ ನಿರ್ಧರಿಸಿ ಕೊಟ್ಟಿದ್ದರೆ ಎಂದು ಅವರೇ ನಂಬುವ ದೇವರೆದುರು ಪ್ರಮಾಣ ಮಾಡಿ ಹೇಳಲು ತಯಾರಿದ್ದಾರೆಯೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಲಾರರು.
ಕಾಂಗ್ರೆಸ್‌ನವರು ತಮ್ಮ ಪಕ್ಷದವರಿಗೆ ಟಿಕೆಟ್ ಮಾರಿಕೊಂಡರು. ಆದರೆ ಬಿಜೆಪಿ ಬೇರೆ ಪಕ್ಷದ ಚಿಹ್ನೆಯಡಿ ಜನರೇ ಆರಿಸಿ ಕಳಿಸಿದ್ದ ಶಾಸಕರನ್ನೇ ಖರೀದಿ ಮಾಡುವ ಮೂಲಕ ಮಾಡಿದ್ದು ಇನ್ನೇನು? ಬಿಜೆಪಿಯವರು ಶಾಸಕರನ್ನು ದುಡ್ಡುಕೊಟ್ಟು, ಮಂತ್ರಿಗಿರಿ ಆಸೆ ತೋರಿಸಿ ಖರೀದಿಸಿರುವಾಗ ಕಾಂಗ್ರೆಸ್‌ನ್ನು ಟೀಕಿಸಲು ನೈತಿಕ ಹಕ್ಕು ಎಲ್ಲಿದೆ ಸದಾನಂದಗೌಡರೆ? ರಾಜಸ್ತಾನದಲ್ಲೂ ಬಿಜೆಪಿ ಟಿಕೆಟ್ ಮಾರಾಟವಾಗಿದೆ ಎಂಬ ಆಪಾದನೆ ಬಗ್ಗೆ ಗೌಡರು ಏನು ಹೇಳುತ್ತಾರೆ?
ಚಳಿ ಪರಿಣಾಮ:
ಮ್ಯಾಗಿ ಹುಟ್ಟಿಸಿದ ಚಳಿಗೆ ಕಾಂಗ್ರೆಸ್‌ನಲ್ಲಿ ಉಡುರು ಶುರುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಇದ್ದ ಸಂಸದ ಆರ್.ಎಲ್. ಜಾಲಪ್ಪ, ಆಳ್ವ ಹೇಳಿದ್ದು ಸತ್ಯವೆಂದು ಪ್ರಮಾಣೀಕರಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಅವರ ಮಗ ಜೆ. ನರಸಿಂಹಸ್ವಾಮಿಗೆ ಟಿಕೆಟ್ ನೀಡಿ, ಕಾಂಗ್ರೆಸ್ ಪಕ್ಷ ಗೆಲ್ಲಿಸಿತು ತಾನೆ? ಆನಂತರ ನರಸಿಂಹಸ್ವಾಮಿ `ಕೊಳಚೆ ನಿರ್ಮೂಲನಾ ಮಂಡಳಿ' ಆಸೆಗೆ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಿದ್ದು ಯಾಕೆ? ಜಾಲಪ್ಪ ಆ ಚುನಾವಣೆಯಲ್ಲಿ ತಮ್ಮ ಮಗನಿಗೆ ಬೆಂಬಲ ನೀಡದೇ ಇದ್ದರೆ ನರಸಿಂಹಸ್ವಾಮಿ ಆಯ್ಕೆಯಾಗುತ್ತಿದ್ದರೆ? ಈ ಪ್ರಶ್ನೆಯನ್ನು ಜಾಲಪ್ಪ ಕೇಳಿಕೊಳ್ಳಬೇಕಿದೆ.
ಆದರೆ ಜಾಲಪ್ಪ ಹೀಗೆ ಮ್ಯಾಗಿಯನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಗಾಯಕ್ಕೆ ಖಾರ ಸವರಿದ್ದಾರೆ. ಜತೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅದು ಕಾಂಗ್ರೆಸ್‌ಗೆ ನಿವೃತ್ತಿಯೋ ಅಥವಾ ಬೇರೆ ಪಕ್ಷದ ಜತೆ ಮಿಲಾಕತ್‌ಗೆ ದಾರಿಯೋ ಎಂಬುದನ್ನು ಕಾಲವೇ ಹೇಳಬೇಕಿದೆ. ಹಿಂದುಳಿದ ವರ್ಗದ ಪ್ರಮುಖ ನಾಯಕರಲ್ಲೊಬ್ಬರಾದ ಜಾಲಪ್ಪ ಕಾಂಗ್ರೆಸ್‌ನಿಂದ ನಿರ್ಗಮಿಸುತ್ತಿರುವುದು ಹೇಗೆ ಲೆಕ್ಕ ಹಾಕಿದರೂ ಪಕ್ಷಕ್ಕೆ ನಷ್ಟವೇ ಎಂಬುದರಲ್ಲಿ ಎರಡು ಮಾತಿಲ್ಲ.
ಇದರ ಜತೆಗೆ ಸಿದ್ಧರಾಮಯ್ಯ ಕೂಡ ತಮ್ಮ ಧ್ವನಿ ಸೇರಿಸಿದ್ದಾರೆ. ಮ್ಯಾಗಿ ಹೇಳಿರುವುದು ಸತ್ಯ. ಹೈಕಮಾಂಡ್ ಈ ಬಗ್ಗೆ ಚಿಂತಿಸಬೇಕೆಂದು ಸಲಹೆ ನೀಡಿದ್ದಾರೆ. ಜತೆಗೆ ಉಪಚುನಾವಣೆಯಲ್ಲಿ ಜೆಡಿ ಎಸ್ ಜತೆ ಕೈ ಜೋಡಿಸಿದ್ದೇ ಆದರೆ ತಾವು ಕೈಗೆ ಗುಡ್‌ಬೈ ಹೇಳುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲಿಗೆ ಅವರು ಒಂದು ಕಾಲು ಹೊರಗಿಟ್ಟಿರುವುದು ದಿಟ. ಮ್ಯಾಗಿಯ ನಡೆಯಿಂದ ಕಾಂಗ್ರೆಸ್‌ನ ಎರಡು ಕಂಬಗಳು ಅಲ್ಲಾಡುತ್ತಿವೆ.
ರಾಷ್ಟ್ರಮಟ್ಟದಲ್ಲೂ ಮ್ಯಾಗಿ ನಡೆ ಕಾಂಗ್ರೆಸ್‌ನ್ನ ಅದುರಿಸಿದೆ. ಬಿಹಾರ ಪ್ರತಿಪಕ್ಷ ನಾಯಕ ಆಲಂ ಖುರ್ಷಿದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಿರಿಯ ನಾಯಕ ಪಿ. ಶಿವಶಂಕರ್ ಕೂಡ ಮ್ಯಾಗಿಗೆ ಬೆಂಬಲವಾಗಿ ನಿಂತಿದ್ದಾರೆ. ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಮ್ಯಾಗಿ ನೀಡಿರುವ ಆಘಾತ ಕಾಂಗ್ರೆಸ್‌ನ ಮಟ್ಟಿಗೆ ಆತ್ಮಘಾತುಕವಾದುದು. ಹಾಗೆಯೇ ಆಯಾ ರಾಜ್ಯಗಳ ಚುನಾವಣೆಗೆ ಮುನ್ನೆಚ್ಚರಿಕೆಯೂ ಹೌದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಚಿಂತಿಸುವುದಕ್ಕೆ ಇದು ಸಕಾಲ.
ಬಿಜೆಪಿಗೆ ಅಸ್ತ್ರ:
ದೇಶದಲ್ಲಿ ನಡೆದ ಭಯೋತ್ಪಾದನಾ ವಿಧ್ವಂಸಕ ಕೃತ್ಯಗಳ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಬಿಜೆಪಿ ಮಾಲೇಗಾಂವ್ ಸ್ಪೋಟದ ಅಪಖ್ಯಾತಿಯಲ್ಲಿ ಮಂಕಾಗಿತ್ತು. ಭಯೋತ್ಪಾದನೆಯೆಂಬುದು ಕಾಂಗ್ರೆಸ್ ಹಾಗೂ ಎಡಪಕ್ಷಗಳ ಬೆಂಬಲಿತ ಮುಸ್ಲಿಮರ ಕೃತ್ಯವೆಂಬ ಅಸ್ತ್ರವನ್ನು ಬಳಸುತ್ತಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿತ್ತು.
ಈ ಪರಿಸ್ಥಿತಿಯಿಂದ ಬಚಾವಾಗಲು ಸಿಕ್ಕಿದ ಪ್ರಮುಖ ಅಸ್ತ್ರವೆಂದರೆ ಕಾಂಗ್ರೆಸ್‌ನ ಟಿಕೆಟ್ ಮಾರಾಟ. ಮಾರ್ಗರೆಟ್ ಆಳ್ವರ ಹೇಳಿಕೆಯಿಂದ ಸಂತುಷ್ಟಗೊಂಡವರು ಬಿಜೆಪಿ ಮುಖಂಡರು. ಈ ಸಂಭ್ರಮದಲ್ಲಿದ್ದ ಬಿಜೆಪಿ ಮಂದಿಗೆ ಇದೀಗ ರಾಜಸ್ತಾನದಲ್ಲಿ ಬಿಜೆಪಿ ಟಿಕೆಟ್ ಮಾರಾಟವಾಗಿದೆ ಎಂದು ಬಿಜೆಪಿ ಸಂಸದ ವಿಶ್ವೇಂದ್ರಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಹೇಳಿಕೇಳಿ ಅಲ್ಲಿನ ಮುಖ್ಯಮಂತ್ರಿ ವಸುಂಧರರಾಜೆ ಅವರ ಆಪ್ತರು. ಬಿಜೆಪಿಯಲ್ಲಿ ಬಾಂಬ್ ಸಿಡಿದಿದ್ದರಿಂದ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.
ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಟಿಕೆಟ್ ಮಾರಾಟದ ಸಂಗತಿಯನ್ನೇ ಪ್ರಧಾನ ಅಸ್ತ್ರವಾಗಿ ಬಳಸಿಕೊಳ್ಳಬೇಕೆಂದಿದ್ದ ಬಿಜೆಪಿ ಮುಖಂಡರು ಈಗ ತಲ್ಲಣಿಸಿದ್ದಾರೆ.
ಮ್ಯಾಗಿ ಮುಂದೆ?
ಬಾಯಿ ತೆರೆಯುವ ಮೂಲಕ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಕಳೆದುಕೊಂಡ ಮಾರ್ಗರೆಟ್ ಆಳ್ವ ಮುಂದಿನ ಹಾದಿಯೇನು? ಎಂಬುದು ನಿಗೂಢವಾಗಿದೆ. ಬಹುಜನ ಸಮಾಜ ಪಕ್ಷ ಸೇರಲಿದ್ದಾರೆಂದು ಹೇಳಲಾಗುತ್ತಿದೆಯಾದರೂ ಆ ಪಕ್ಷಕ್ಕೆ ಕರ್ನಾಟಕದಲ್ಲಿ ಭವಿಷ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನ ಅಲಂಕರಿಸಿ, ಪ್ರಭಾವಿ ಹುದ್ದೆ ಹೊಂದಿದ್ದ ಆಳ್ವ, ಬಿ ಎಸ್‌ಪಿಯ ಪ್ರಶ್ನಾತೀತ ನಾಯಕಿ ಮಾಯಾವತಿಯ ಮರ್ಜಿಗೆ ತಕ್ಕಂತೆ ನಡೆಯುವುದು ಕಷ್ಟ. ಹಾಗಾಗಿ ಅವರು ಅಲ್ಲಿಗೆ ಹೋಗಲಾರರು.
ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಗೆಲ್ಲಬೇಕೆಂಬ ಪಣತೊಟ್ಟಿರುವ ಬಿಜೆಪಿ ಯಾವ ರಾಜಕೀಯ ತಂತ್ರಗಾರಿಕೆ ಹೆಣೆಯಲಿದೆ ಎಂದು ನೋಡಬೇಕಿದೆ. ಉತ್ತರ ಕನ್ನಡದ ಸಂಸದ ಅನಂತಕುಮಾರ್ ಹೆಗಡೆ ಅಲ್ಲಿ ಎರಡು ಬಾರಿ ಗೆದ್ದವರು. ಬಿಜೆಪಿ ನಿಲುವಿಗೆ ಬೆಂಬಲವಾಗಿ ನಿಲ್ಲುತ್ತಿಲ್ಲವೆಂಬ ಕಾರಣಕ್ಕೆ ಅವರ ಬಗ್ಗೆ ಪಕ್ಷದಲ್ಲಿ ಅಸಮಾಧಾನವಿದೆ. ಹಲವು ಬಿಜೆಪಿ ಸಂಸದರು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರೂ ಅನಂತಕುಮಾರ್ ಹೆಗಡೆ ನಿಷ್ಕ್ರಿಯರು. ಬಿಜೆಪಿ ನಡೆಗಳ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದೂ ಇದೆ. ಇವರ ಬದಲಿಗೆ ಮಾರ್ಗರೆಟ್ ಆಳ್ವರನ್ನು ನಿಲ್ಲಿಸಿ, ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಹೆಚ್ಚು ಗಳಿಸಲು ಬಿಜೆಪಿ ಲೆಕ್ಕ ಹಾಕಿದರೂ ಸಂಶಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿಯ ನಡೆಯನ್ನು ನೋಡಿದ ಯಾರೂ ಇದನ್ನು ನಿರಾಕರಿಸಲಾರರು. ಸಾಂಗ್ಲಿಯಾನ, ಸುಭಾಷ್‌ಭರಣಿಯಂತವರೇ ಬಿಜೆಪಿ ಸೇರಿರುವಾಗಿ ಮಾರ್ಗರೆಟ್ ಆಳ್ವ ಸೇರುವುದು ಅಸಾಧ್ಯವೆಂದೇನೋ ಭಾವಿಸಬೇಕಾಗಿಲ್ಲ.
Monday, November 10, 2008
ಸ್ತ್ರೀಮತವನುತ್ತರಿಸಲಾರದೆ . . .
ಇಷ್ಟೆಲ್ಲಾ ತಾಂತ್ರಿಕ ಕ್ರಾಂತಿ ನಡೆದು, ಸಮಾಜದ ಎಲ್ಲಾ ಸ್ತರದಲ್ಲೂ ಮಹಿಳೆ ಮುಂದೆ ಬಂದಿದ್ದರೂ ಇನ್ನೂ ಕೂಡ ಸಮಾಜದಲ್ಲಿ ಸ್ತ್ರೀಯರನ್ನು `ಸೆಕೆಂಡ್ ಸೆಕ್ಸ್' ಆಗಿಯೇ ಪರಿಗಣಿಸುವುದು ತಪ್ಪಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯವಾಗಿ ಮಹಿಳೆ ತೊಡಗಿಸಿಕೊಂಡಿದ್ದರೂ `ನೀನು ಅಸಮರ್ಥೆ' ಎಂದು ಉಚ್ಚರಿಸುವುದನ್ನು ಸಮಾಜ ನಿಲ್ಲಿಸಿಲ್ಲ. ಹೆಚ್ಚು ಮಾತಾಡಿದರೆ `ಬಜಾರಿ'(ನಿಜಾರ್ಥ ಬಜಾರಿ-ಮಾರ್ಕೆಟ್-ನಲ್ಲಿರುವವವಳು) ಎಂದು ಹೀಗಳೆಯುವುದು, ಸ್ವಲ್ಪ ಅಳುಕಿದರೆ `ಅಳುಮುಂಜಿ' ಎಂಬ ಬಿರುದು ದಯಪಾಲಿಸುವುದು ನಿರಂತರ. ವ್ಯಕ್ತಿತ್ವ ರೂಪಣೆಗೆ ಮುಂದಾಗಿ ಯಾವುದಕ್ಕೂ ಕಂಗೆಡದೆ ಮುನ್ನಡೆದರೆ ವೈಯಕ್ತಿಕ ತೇಜೋವಧೆ, ಅಕ್ರಮ ಸಂಬಂಧದ ಆರೋಪ, ಆ್ಯಸಿಡ್ ದಾಳಿ, ಆತ್ಯಂತಿಕವಾಗಿ ಕೊಲೆಯಂತಹ ದುಷ್ಕೃತ್ಯಗಳಿಗೆ ಆಕೆ ಬಲಿಯಾಗಬೇಕಾಗುತ್ತದೆ. ಇದು ಸಮಾಜದ ಸುಡುವಾಸ್ತವ.
ಒಟ್ಟಂದದಲ್ಲಿ ಮಹಿಳೆ ಪುರುಷನಿಗೆ ಸಮಾನಿಯೆಂದು ಒಪ್ಪುವುದು ಹೋಗಲಿ, ಭಾವಿಸಲು ಕೂಡ ಪುರುಷ ಕೇಂದ್ರೀತ ಸಮಾಜ ಸಿದ್ದವಿಲ್ಲ. ಅಪ್ಪನಿಗೆ ಮಗಳಾಗಿ, ಗಂಡನಿಗೆ ಹೆಂಡತಿಯಾಗಿ, ಮಗನಿಗೆ ತಾಯಾಗಿ, ಅಣ್ಣನಿಗೆ ತಂಗಿಯಾಗಿ, ಮೇಲಾಧಿಕಾರಿಯಾಗಿ ಅಡಿಯಾಧಿಕಾರಣಿಯಾಗಿಯೇ ಆಕೆ ಇರಬೇಕೆಂಬುದು ನಿಸರ್ಗ ನಿಯಮ ಅಥವಾ ಸೂರ್ಯನ ಸುತ್ತ ಭೂಮಿ ತಿರುಗುವಷ್ಟೇ ಸಹಜವೆಂದು ಪರಿಭಾವಿಸಲಾಗಿದೆ.
ಪರಂಪರೆಯ ಕೊಡುಗೆ?
ಅಪುತ್ರಸ್ಯ ಗತಿರ್ನಾಸ್ತಿ ಎಂಬಲ್ಲಿಂದ ಹಿಡಿದು, ಪಿತಾರಕ್ಷತಿ ಕೌಮಾರೆ, ಭರ್ತ್ಯಾ ರಕ್ಷತಿ ಯೌವನೇ, ರಕ್ಷಂತಿ ಸ್ಥವಿರೇ ಪುತ್ರಾ ನಃ ಸ್ತ್ರೀ ಸ್ವಾತಂತ್ರಮರ್ಹಸಿ ಎಂಬಲ್ಲಿಯವರೆಗೆ ಪುರಾಣದಲ್ಲಿ ಸ್ತ್ರೀಯರನ್ನು `ರಕ್ಷಿಸಿ'ಕೊಂಡು ಬರಲಾಗಿದೆ. ಗೃಹಿಣಿ ಗೃಹಮುಚ್ಯತೆ(ಗೃಹಂ ಉಚ್ಚತೆ) ಎಂದು ಹೇಳುತ್ತಲೇ ಗೃಹದೊಳಗೆ ಗೃಹಿಣಿಯನ್ನು ಮುಚ್ಚಿಡಲಾಗಿದೆ. ಮೇಲೆ ಇಟ್ಟರೆ ಕಾಗೆ ಕಚ್ಚುತ್ತೆ, ಕೆಳಗೆ ಇಟ್ಟರೆ ಇರುವೆ ಕಚ್ಚುತ್ತೆ ಎಂಬಂತೆ ಆಕೆಯನ್ನು `ಸುರಕ್ಷತೆ'ಯಿಂದ ನೋಡಿಕೊಂಡು ಆಕೆಗೆ ಸೂರ್ಯ ರಶ್ಮಿ ಬೀಳದಂತೆ ಕಾಪಿಡಲಾಗಿದೆ. ಅದರ ಮೂಲಕ ಹೊರಜಗತ್ತನ್ನು ನೋಡದಂತಹ `ಬಂಧನ'ದಲ್ಲಿ ಇಡಲಾಗಿದೆ.
ಆಧುನಿಕ ಮಹಿಳೆ ಉದ್ಯೋಗ, ದುಡಿತದಲ್ಲಿ ತೊಡಗಿದ್ದರೂ ಕೂಡ ಆಕೆಗೆ ಗೃಹಬಂಧನ ತಪ್ಪಿಲ್ಲ. ಹೊರಗೆ ಮೈಮುರಿ ಕೆಲಸ, ಮನೆಯಲ್ಲಿ ಬಂದರೆ ಅಡುಗೆ, ಬಟ್ಟೆಯ ರ್ವಾತ, ಜತೆಗೆ ಮಕ್ಕಳ ಉಪದ್ವ್ಯಾಪ ಹೀಗೆ ಜೀವನವೇ ರೋಸಿಹೋಗುವಷ್ಟು ಆಕೆಯನ್ನು ಹೆಡೆಮುರಿ ಕಟ್ಟಿ ದುಡಿಮೆಗೆ ಹಚ್ಚಲಾಗಿದೆ. ಆಫೀಸು, ಮನೆ, ಮಕ್ಕಳ ಓದು-ಆರೈಕೆ ಬಿಟ್ಟರೆ ಆಕೆಗೆ ಮತ್ತೊಂದು ಪ್ರಪಂಚವೇ ಇಲ್ಲದಂತೆ ಮಾಡಲಾಗಿರುವುದು ಆಧುನಿಕತೆಯ ಕೊಡುಗೆ. ದುಡಿಯುವ, ತಿಂಗಳಾರಂಭದಲ್ಲಿ ಸಂಬಳ ಎಣಿಸುವ, ಗಂಡಸರಂತೆ ಕಚೇರಿ ವ್ಯವಹಾರ ಮಾಡುವ `ಸ್ವಾತಂತ್ರ್ಯ'ವಿದ್ದರೂ ದುಡಿದ ದುಡ್ಡು ಗಂಡನ ನಿಯಂತ್ರಣದಲ್ಲಿರುತ್ತದೆ. ಮನೆಯ ಕೆಲಸದ ಜತೆಗೆ ದುಡಿಮೆಯ ಕೆಲಸದ ಹೊರೆಯೂ ಆಕೆಯನ್ನು ಬಳಲಿ ಬೆಂಡಾಗಿಸುತ್ತಿದೆ. ಒಂದಿದ್ದ ಜವಾಬ್ದಾರಿ ಎರಡಾಗಿರುವುದಷ್ಟೇ ಮಹಿಳೆಯ ಹೆಚ್ಚುಗಾರಿಕೆಯಾಗಿದೆ. ಜತೆಗೆ ಹೋಗುವಾಗ, ಬರುವಾಗ ದಾರಿಯಲ್ಲಿನ ಕಿರುಕುಳ, ಗಂಡನ ಅನುಮಾನ, ಅತ್ತೆ, ನಾದಿನಿಯರ ಕೊಂಕುನುಡಿಯನ್ನೂ ಕೇಳಬೇಕಾಗಿದೆ. ಕೆಲವು ಕಚೇರಿಗಳಲ್ಲಿ ಮೇಲಾಧಿಕಾರಿಗಳು, ಸಹೋದ್ಯೋಗಿಗಳ ಕಿರುಕುಳವೂ ಆಕೆಯನ್ನು ಬಾಧಿಸುತ್ತಿದೆ. ಕೈಗೆ ಒಂದಿಷ್ಟು ಹಣವು ಸಿಕ್ಕಿದರೂ ಕೂಡ ಇವೆಲ್ಲವೂ ಆಕೆಯ ಮೇಲೆ ಆಕ್ರಮಣ ಮಾಡುತ್ತಿದೆ.
ಪುರುಷಾಧಿಪತ್ಯದ ಠೇಂಕಾರದಲ್ಲಿ ಸಿಕ್ಕಿದ ಸ್ವಾತಂತ್ರ್ಯವೂ ನಿಯಂತ್ರಿತವಾಗಿದ್ದು, ದುಡಿಯುವ ಮಹಿಳೆಯರಲ್ಲಿ ಶೇ.50 ರಷ್ಟು ಮಂದಿ, ಮನೆ ನೋಡಿಕೊಳ್ಳುವುದಷ್ಟೇ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅಭಿಪ್ರಾಯಪಡುವ ಸ್ಥಿತಿಗೆ ತಲುಪಿದ್ದಾರೆ. ರಾತ್ರಿ ಪಾಳಿ ಮಾಡುವ ಮಹಿಳೆಯರದ್ದಂತೂ ಸಂಕಷ್ಟಗಳ ಸರಮಾಲೆ.
ಈ ಎಲ್ಲದರ ಮಧ್ಯೆಯೂ ದುಡಿಯುವ ಸ್ವಾತಂತ್ರ್ಯ, ಹೊರಗಡೆ ಸ್ವಚ್ಛಂಧವಾಗಿ ಓಡಾಡಲು ಸಿಕ್ಕ ಅವಕಾಶವನ್ನು ಸಂಭ್ರಮಿಸುವವರು ಇದ್ದಾರೆ. ಪರಿಸ್ಥಿತಿಯನ್ನು ತಮಗೆ ಬೇಕಾದಂತೆ ಬಗ್ಗಿಸಿಕೊಂಡು, ಸುತ್ತಲಿನ ವಾತಾವರಣವನ್ನು ಕಷ್ಟವೋ ಸುಖವೋ ಒಗ್ಗಿಸಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇಂತಹ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತ ಮಹಿಳೆಯರು ಅನುಸರಿಸಬೇಕಿದೆ. ಹಾಗಿದ್ದಾಗ ಮಾತ್ರ ಸ್ತ್ರೀಸ್ವಾತಂತ್ರ್ಯಕ್ಕೆ ಹೆಚ್ಚಿನ ಶಕ್ತಿ, ಬಲ ಬರುತ್ತದೆ. ಪುರುಷರಂತೆ ಮಹಿಳೆಯರೂ ಎಲ್ಲದರೂ ಸಮಾನರು ಎಂಬುದಕ್ಕೆ ಅರ್ಥವೂ ಬರುತ್ತದೆ.
ಪುರುಷ ಭಾಷೆ:
ಸ್ತ್ರೀ ಸ್ವಾತಂತ್ರ್ಯ ಎಂದು ಎಷ್ಟೇ ಗಟ್ಟಿ ಧ್ವನಿಯಲ್ಲಿ ಸಮಾಜ ಮಾತನಾಡಿದರೂ ನಮ್ಮ ಸಮಾಜದ ಪರಿಭಾಷೆಗಳು ಪುರುಷ ಕೇಂದ್ರಿತವಾಗಿವೆ. ಏಕೆಂದರೆ ಇತಿಹಾಸವೆಂದರೆ `ಹಿಸ್' ಸ್ಟೋರಿ ವಿನಃ `ಹರ್' ಸ್ಟೋರಿ ಆಗಿಯೇ ಇಲ್ಲ. ಆದಿಮ ಸಮಾಜದಲ್ಲಿ ಮಹಿಳೆಯೇ ಸಮಾಜದ ಯಜಮಾನ್ತಿ ಆಗಿದ್ದರೂ ನಮ್ಮ ನಿತ್ಯದ ಆಡುಭಾಷೆಯ ಪದಕೋಶಗಳಲ್ಲಿ ಮಹಿಳೆ ಕಾಣಿಸುವುದೇ ಇಲ್ಲ.
ಬೇಟೆಯಾಡಿ ತಿನ್ನುವ ಸಮಾಜದ ಉತ್ಪಾದನಾ ವ್ಯವಸ್ಥೆ ಕೃಷಿಗೆ ಹೊಂದಿಕೊಂಡು ಸಾವಿರಾರು ವರ್ಷಗಳೇ ಸವೆದು ಹೋಗಿವೆ. ಕೃಷಿ ಸಮಾಜ ಸ್ಥಾಪನೆಯಲ್ಲಿ ಪುರುಷರಷ್ಟೇ ನೇಗಿಲಿನ ನೊಗಕ್ಕೆ ಹೆಗಲುಕೊಟ್ಟವಳು ಮಹಿಳೆ. ಆದರೆ ಈಗಲೂ ಕನ್ನಡದಲ್ಲಿ `ರೈತ' ಎಂದು ಪುರುಷವಾಚಕ ಪದವನ್ನು ಬಳಸುತ್ತೇವೆಯೇ ವಿನಃ ರೈತಿ ಎಂಬ ಪದವೇ ಇಲ್ಲ. ರೈತ ಮಹಿಳೆ ಎನ್ನುತ್ತೇವೆ.
ದುಡಿವ ವರ್ಗದಲ್ಲಿ ಮಹಿಳೆಯರದೇ ಪ್ರಧಾನ ಪಾಲು. ಕಾರ್ಮಿಕ ಎಂಬ ಪದವಿದೆ ವಿನಃ ಕಾರ್ಮಿಕಿ ಎಂಬುದಿಲ್ಲ. ಮಹಿಳಾ ಕಾರ್ಮಿಕರು ಎಂದೇ ಸಂಬೋಧಿಸಲಾಗುತ್ತದೆ.
ನೇಕಾರಿಕೆ ವೃತ್ತಿಯಲ್ಲಂತೂ ಸಮಸ್ತವೂ ಮಹಿಳಾ ಕೇಂದ್ರಿತವೇ. ನೂಲು ಸುತ್ತುವುದು, ಬಣ್ಣ ಹಾಕುವುದು, ನೂಲುವುದು, ಕಸೂತಿ ಮಾಡುವುದು, ಕಟ್ ಮಾಡುವುದು, ಪ್ಯಾಕಿಂಗ್ ಹೀಗೆ ಎಲ್ಲದನ್ನೂ ಮಹಿಳೆಯರೇ ಮಾಡುತ್ತಾರೆ. ಪುರುಷರು ಮಾರ್ಕೆಟಿಂಗ್ ಮಾತ್ರ ಮಾಡುತ್ತಾರೆ. ಆದರೆ ನೇಕಾರ ಎಂಬ ಪದವಿದೆಯೇ ವಿನಃ ನೇಕಾರಿ ಎಂಬ ಪದವೇ ಇಲ್ಲ.
ಇಂಗ್ಲಿಷ್‌ನಲ್ಲಿ ಅಗ್ರಿಕಲ್ಚರಿಸ್ಟ್, ಲೇಬರ್ ಎಂಬ ಪದವನ್ನು ಬಳಸಲಾಗುತ್ತಿದೆಯೇ ವಿನಃ ಮಹಿಳಾ ವಾಚಕವಾಗಿ ನಿರ್ದಿಷ್ಟ ಪದ ಬಳಕೆಯಲ್ಲಿ ಇಲ್ಲ. ಭಾಷೆ ಕೂಡ ಮಹಿಳೆಯರನ್ನು ಅಷ್ಟು ಮೈಲಿಗೆಯಾಗಿ ನಡೆಸಿಕೊಂಡಿದೆ. ಇನ್ನೂ ಕೂಡ ನಡೆಸುತ್ತಲೇ ಇದೆ. ಪೊಲೀಸ್ ಎಂಬ ಪದಕ್ಕೆ ಪೇದೆ ಎಂಬ ಪರ್ಯಾಯ ಪದವಿದೆ. ಆದರೆ ಇದಕ್ಕೆ ಸಂವಾದಿ ಪದ ಮಹಿಳಾ ಪೇದೆ ಎಂದಷ್ಟೇ ಆಗಿದೆ.
ರಾಷ್ಟ್ರದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಎಂಬ ವಿಷಯದಲ್ಲೂ ಇದೇ ಚರ್ಚೆ ನಡೆದಿತ್ತು. ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿಗಳಾಗಿ ಆಯ್ಕೆಯಾದಾಗ ಅವರನ್ನು ಏನೆಂದು ಕರೆಯಬೇಕೆಂದು ಚರ್ಚೆ ನಡೆಯಿತು. ಕೊನೆಗೆ ರಾಷ್ಟ್ರಪತಿ ಎಂಬ ಪುರುಷ ವಾಚಕ ಪದವನ್ನೇ ಉಳಿಸಿಕೊಳ್ಳಲಾಯಿತು.
ಸ್ತ್ರೀವಾದಿಗಳು:
ಹಾದಿ ಬೀದಿಯಲ್ಲಿ, ವೇದಿಕೆ, ಸಮಾರಂಭಗಳಲ್ಲಿ ಉದ್ದುದ್ದ ಭಾಷಣ ಬಿಗಿಯುವ ಸ್ವಘೋಷಿತ ಸ್ತ್ರೀವಾದಿಗಳದು ಮತ್ತೊಂದು ಕತೆ. ಮನೆಯಲ್ಲಿ ಬೆಡ್‌ಕಾಫಿ ಕೊಡಲು, ಎಲ್ಲೋ ಇಟ್ಟ ಸಿಗರೇಟು ಹುಡುಕಿ ಕೊಡಲು, ಸ್ನಾನಕ್ಕೆ ನೀರು ಅಣಿ ಮಾಡಲು, ಕಚೇರಿಗೆ ಹೊರಟಾಗ ಗರಿಗರಿ ಇಸ್ತ್ರಿ ಮಾಡಿದ ಬಟ್ಟೆ ತಂದುಕೊಡಲು ಹೆಂಡತಿಯೇ ಬೇಕು. ಹೆಂಡತಿ ಉದ್ಯೋಗದಲ್ಲಿದ್ದು, ಬೆಳಿಗ್ಗೆಯೇ ಡ್ಯೂಟಿಗೆ ಹೋಗಬೇಕಾಗಿದ್ದರೂ ಕೂಡ ಅವರು ಯಾವ ಕೆಲಸವನ್ನೂ ಮಾಡುವುದಿಲ್ಲ. ಮಾತಿಗೆ ಮಾತ್ರ ಸ್ತ್ರೀವಾದಿಗಳಿವರು.
ಹಾಗೆ ನೋಡಿದರೆ ಗ್ರಾಮೀಣ ಪ್ರದೇಶದಲ್ಲಿ ಗಂಡಸರು ಸಾಕಷ್ಟು ಮನೆ ಕೆಲಸ ಮಾಡಿಕೊಡುತ್ತಾರೆ. ಹಸು ಕಟ್ಟುವುದು, ಹುಲ್ಲು ಹಾಕುವುದು, ಸೆಗಣಿ ಬಾಚುವುದು, ಹಾಲು ಕರೆಯುವುದು ಕನಿಷ್ಠ ಇಂತಹ ಕೆಲಸಗಳಲ್ಲಾದರೂ ಪುರುಷರ ಪಾಲಿರುತ್ತದೆ. ಆದರೆ ಮಾತಿನಲ್ಲಿ ಸ್ತ್ರೀವಾದಿ ಚಿಂತನೆಗಳನ್ನು ಪುಂಖಾನುಪುಂಖವಾಗಿ ಹೇಳುವ, ಪುಟಗಟ್ಟಲೇ ಬರೆಯುವ ಸ್ತ್ರೀವಾದಿ ಪುರುಷರು ರೂಢಿಯಲ್ಲಿ ಮಾತ್ರ ಪುರುಷಾಧಿಪತ್ಯದ ಸಾಕಾರಮೂರ್ತಿಗಳಾಗಿರುತ್ತಾರೆ.
ರಾಜಕೀಯ:
ರಾಜಕೀಯದಲ್ಲಿ ಸ್ತ್ರೀ ಪುರುಷರು ಸಮಾನರು ಎಂದು ಭಾವಿಸಲಾಗುತ್ತದೆ. ಆಚರಣೆಯಲ್ಲಿ ಮಾತ್ರ ಅದು ಶೂನ್ಯವಾಗಿರುತ್ತದೆ. ಶೇ.33 ರಷ್ಟು ಮೀಸಲಾತಿಗಾಗಿ ಮಹಿಳೆಯರು ಹಕ್ಕೊತ್ತಾಯ ಮಂಡಿಸುತ್ತಾ ದಶಕಗಳೇ ಕಳೆದುಹೋಗಿವೆ. ಇನ್ನೂ ಕೂಡ ಪುರುಷರು ಅದನ್ನು ಕೊಡಲು ಬಿಟ್ಟಿಲ್ಲ. ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ಯುಪಿ ಎ ನೇತೃತ್ವದ ಸರ್ಕಾರದ ಸೂತ್ರಧಾರಿ ಸೋನಿಯಾಗಾಂಧಿ ಎಂಬ ಮಹಿಳೆಯೇ ಆಗಿದ್ದರೂ, ಅತ್ಯುನ್ನತ ಸ್ಥಾನದಲ್ಲಿ ಪ್ರತಿಭಾಪಾಟೀಲ್ ಉಪಸ್ಥಿತರಿದ್ದರೂ ಈ ಕಾಯ್ದೆ ಜಾರಿಗೆ ಬಂದಿಲ್ಲ.
ದೇಶದ ಒಟ್ಟು ಚುನಾಯಿತ ಪ್ರತಿನಿಧಿಗಳ ಸಂಖ್ಯೆ 30 ಲಕ್ಷದಷ್ಟಿದ್ದು, ಆ ಪೈಕಿ 10 ಲಕ್ಷ ಮಹಿಳೆಯರಿದ್ದಾರೆ. ಆದರೆ ಸ್ತ್ರೀ ಸಬಲೀಕರಣ ಇನ್ನೂ ಸಾಧ್ಯವಾಗಿಲ್ಲ. ಆಕಾಶದ ಅರ್ಧ ನಕ್ಷತ್ರಗಳು ನಾವು, ಈ ಭೂಮಿಯಲಿ ಅರ್ಧ ಕೇಳುವೆವು ಎಂದು ಮಹಿಳೆಯರು ಘೋಷಣೆ ಹಾಕುತ್ತಲೇ ಬಂದಿದ್ದಾರೆ. ಆದರೆ ಪುರುಷರು ಒಂದು ಹಾದಿಯನ್ನೂ ಬಿಟ್ಟುಕೊಡುವುದಿಲ್ಲ ಎಂಬ ಹಠಕ್ಕೆ ಕೂತಿದ್ದಾರೆ.
ಇನ್ನು ಅಧಿಕಾರ ಸಿಕ್ಕಿರುವ ಕಡೆ( ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಶಾಸಕಿ ಸ್ಥಾನದಲ್ಲಿ) ಕೂಡ ಅವರ ಗಂಡಂದಿರೇ ಅಧಿಕಾರ ಚಲಾಯಿಸುವ ಸೂತ್ರಧಾರಿಗಳಾಗಿರುತ್ತಾರೆ. ಹೆಸರಿಗೆ ಮಹಿಳೆ ಅಧ್ಯಕ್ಷರಾಗಿದ್ದರೂ ಆಂಟಿ ಚೇಂಬರ್‌ನಲ್ಲಿ ಅಧಿಕಾರ, ವ್ಯವಹಾರ ನಡೆಸುವವರು ಆಕೆಯ ಗಂಡಂದಿರೇ ಆಗಿರುತ್ತಾರೆ.
ಮಹಿಳೆಯರು ಅಧಿಕಾರ ನಡೆಸುವಷ್ಟು ಸಾಮರ್ಥ್ಯ ಹೊಂದಿದ್ದರೂ ಕೂಡ ಪುರುಷರು ಅದಕ್ಕೆ ಅವಕಾಶ ಕೊಡುವುದಿಲ್ಲ. ಅವರಲ್ಲಿ ಸಂಘಟನೆಯಾಗದೇ, ಅವರೇ ಅಧಿಕಾರ ಕೈಗೆತ್ತಿಕೊಳ್ಳದೇ ಅದು ಸಾಧ್ಯವಾಗದು. ಈ ನಿಟ್ಟಿನಲ್ಲಿ ಸರ್ಕಾರ, ಸ್ವಯಂ ಸೇವಾ ಸಂಘಟನೆಗಳು ಕಾರ್ಯಪ್ರವೃತ್ತವಾಗಬೇಕಾಗಿದೆ.
Sunday, November 9, 2008
ಬಾಲ್ಯವೂ ಮುಖ್ಯ : ಆದ್ರೆ ಎಚ್‌ಐವಿ ಸಖ್ಯ
ಈಕೆಯ ಹೆಸರು ಋತು. ವರ್ಷ ಹತ್ತು. ಮೆಜೆಸ್ಟಿಕ್‌ನಲ್ಲಿ ಈಕೆಯ ಅಮ್ಮ ಲೈಂಗಿಕ ಕಾರ್ಯಕರ್ತೆ. ಹೊಟ್ಟೆಪಾಡಿಗಾಗಿ ನೆಚ್ಚಿಕೊಂಡ ವೃತ್ತಿ. ಜತೆಗೆ ಬ್ರೌನ್‌ಶುಗರ್ ಚಟ. ತಾಯಿ ತಿನ್ನುತ್ತಿದ್ದ ಬಿಳಿಯ ಸಕ್ಕರೆ ತಿಂದು ರೂಢಿಯಾಗಿ ಮತ್ತಿನಲ್ಲೇ ಮುಳುಗಿದ್ದಾಕೆ. ವೃತ್ತಿ ಜೀವನದಲ್ಲಿ ಮುನ್ನೆಚ್ಚರಿಕೆ ವಹಿಸದೇ ಇದ್ದುದರಿಂದ ಅಂಟಿಕೊಂಡ ಎಚ್‌ಐವಿ, ಏಡ್ಸ್‌ಗೆ ತಿರುಗಿ ತಾಯಿ-ತಂದೆ ಮೃತಪಟ್ಟರು. ಅನಾಥಳಾದ ಋತುಗೆ ಆಶ್ರಯ ನೀಡಿದ್ದು ಱಅಕ್ಸೆಪ್ಟ್‌ನ ಮಕ್ಕಳ ಮನೆ. ಇಲ್ಲಿ ಸೇರಿದಾಗ ಚಿಕ್ಕವಯಸ್ಸಿನಲ್ಲೇ ಮಾದಕ ವ್ಯಸನಿಯಾಗಿದ್ದ ಋತು, ಮಂಕಾಗಿರುತ್ತಿದ್ದಳು. ತಾಯಿಯಿಂದ ಬಳುವಳಿಯಾಗಿ ಬಂದಿದ್ದ ಎಚ್‌ಐವಿ ಜತೆಗಿತ್ತು. ಮಕ್ಕಳ ಮನೆಗೆ ಸೇರಿ ಎರಡು ವರ್ಷವಾಗಿದ್ದು, ಇದೀಗ ಮಾದಕ ವ್ಯಸನ ಮುಕ್ತಳಾಗಿ ಶಾಲೆಗೂ ಹೋಗುತ್ತಿದ್ದಾಳೆ. ಎಚ್‌ಐವಿ ಕೂಡ ನಿಯಂತ್ರಣದಲ್ಲಿದೆ. ಆಕೆಯ ಮುಖದಲ್ಲಿ ನಗು ಅರಳಿದೆ.
ಬಾಲ್ಯ-2
ಹೆಸರು ಶ್ರವ್ಯ. ಏಳು ವರ್ಷ. ತಮಗೆ ಎಚ್‌ಐವಿ ಬಂದಿದೆ ಎಂದು ಗೊತ್ತಾದ ಕೂಡಲೇ ತಂದೆ-ತಾಯಿ ಇಬ್ಬರೂ ಜತೆಗೇ ನೇಣಿಗೆ ಕೊರಳೊಡ್ಡಿದರು. ತನ್ನಂತ ಹಸುಗೂಸನ್ನು ಬಿಟ್ಟು ಯಾಕೆ ಸಾವಿಗೆ ಶರಣಾದರು ಎಂಬ ಪ್ರಜ್ಞೆಯೂ ಇಲ್ಲದ ವಯಸ್ಸು ಶ್ರವ್ಯಳದು. ಹಗ್ಗಕ್ಕೆ ಕುಣಿಕೆ ಹಾಕಿಕೊಂಡ ತಂದೆ-ತಾಯಿಯರ ನೆನಪು ಆಕೆಯನ್ನು ಬಿಡಲೊಲ್ಲದು. ಸಲಹಲು ಯಾರೂ ಇಲ್ಲದ ಶ್ರವ್ಯಳಿಗೂ ಕೂಡ ಎಚ್‌ಐವಿಯನ್ನು ಉಡುಗೊರೆಯಾಗಿ ಕೊಟ್ಟು ಅವರಿಬ್ಬರು ಪರಲೋಕ ಸೇರಿದ್ದರು. ತಂದೆ ತಾಯಿಯ ಗುಂಗಿನಲ್ಲೇ ಎಚ್‌ಐವಿ ಜತೆಗೆ ಅಕ್ಸೆಪ್ಟ್‌ಗೆ ಸೇರ್ಪಡೆಗೊಂಡ ಶ್ರವ್ಯ ಇದೀಗ ಮನೆಯ ವಾತಾವರಣವನ್ನು ಅನುಭವಿಸುತ್ತಿದ್ದಾಳೆ. ತನ್ನಂತೆಯೇ ಎಚ್‌ಐವಿ ಬಾಧಿತ ಮಕ್ಕಳೊಂದಿಗೆ ಪಾಟಿ ಚೀಲ ಹೆಗಲಿಗೆ ಹಾಕಿಕೊಂಡ ಶಾಲೆಗೂ ಹೋಗುತ್ತಿದ್ದಾಳೆ. ಎಚ್‌ಐವಿ ಇರುವುದು ಆಕೆಗೂ ಗೊತ್ತಾಗಿದ್ದು, ಸುತ್ತಲ ವಾತಾವರಣ ಆಕೆಯಲ್ಲಿ ವಿಶ್ವಾಸ ಮೂಡಿಸಿದೆ.
ಬಾಲ್ಯ-3
ಹೆಸರು ಮುಸ್ತಾಫ. 2 ವರ್ಷ. ಆತನಿಗೆ ಯಾರಿಟ್ಟ ಹೆಸರೋ ಅದು ಗೊತ್ತಿಲ್ಲ. ದೂರದ ಮುಂಬೈನಿಂದ ಬೆಂಗಳೂರಿನ ಅಕ್ಸೆಪ್ಟ್ ಮಕ್ಕಳ ಮನೆ ಸೇರಿದೆ. ಭಾಷೆಯೇ ಗೊತ್ತಿಲ್ಲದ, ಗುರುತು ಪರಿಚಯಸ್ಥರೇ ಇಲ್ಲದ ನೆಲೆಯಲ್ಲಿ ಆಡಿಕೊಂಡು ಬೆಳೆಯುತ್ತಿದೆ. ಎಚ್‌ಐವಿ ಹೋಗಲಿ, ಜ್ವರವೆಂದರೆ ಏನೆಂಬ ಅರಿವು ಅದಕ್ಕಿಲ್ಲ. ಮಕ್ಕಳ ಮನೆಯಲ್ಲಿರುವ ನಿಸ್ಪೃಹ ಸೇವಾಕರ್ತರು, ವೈದ್ಯರ ಉಪಚಾರದಲ್ಲಿ ಅದು ಬೆಳೆಯುತ್ತಿದೆ.
* * *
ನವೆಂಬರ್ 14 ಮಕ್ಕಳ ದಿನಾಚರಣೆ. ಭಾರತದ ಮೊದಲ ಪ್ರಧಾನಿ ಚಾಚಾ ನೆಹರು ತಮ್ಮ ಹುಟ್ಟಿದ ದಿನವನ್ನು ತಮ್ಮ ಪ್ರೀತಿಯ ಮಕ್ಕಳ ದಿನಾಚರಣೆಯಾಗಿ ಘೋಷಿಸಿದ ದಿನ. ತಾನು ಕಟ್ಟಿದ ನಾಡಿನಲ್ಲಿ ಇಂತಹ ನತದೃಷ್ಟ, ಸಮಾಜದಲ್ಲಿ ಯಾರಿಗೂ ಬೇಡವಾಗಿ, ಒಂದರ್ಥದಲ್ಲಿ ಱಕಳಂಕಿತರಾಗಿ ಮಕ್ಕಳು ಬದುಕಬೇಕಾದ ಸ್ಥಿತಿ ಉಂಟಾಗುತ್ತದೆ ಎಂದು ಗೊತ್ತಿದ್ದರೆ ನೆಹರೂ ಹಾಗೆಂದು ಘೋಷಿಸುತ್ತಿರಲಿಲ್ಲವೇನೋ. ಸದಾ ಗುಲಾಬಿಯಂತೆ ಮಕ್ಕಳನ್ನು ಪ್ರೀತಿಸುತ್ತಿದ್ದ ನೆಹರು ಈಗ ಇಂತಹ ಮಕ್ಕಳನ್ನು ನೋಡಿದ್ದರೆ ಏನೆಂದು ಪ್ರತಿಕ್ರಿಯಿಸುತ್ತಿದ್ದರೋ ಗೊತ್ತಿಲ್ಲ.
ಬೆಂಗಳೂರಿನ ಹೊರವಲಯದಲ್ಲಿರುವ ದೊಡ್ಡಗುಬ್ಬಿ ಸಮೀಪ ಱಅಕ್ಸೆಪ್ಟ್ ಎಂಬ ಸಂಸ್ಥೆ ಮಕ್ಕಳ ಮನೆ ನಡೆಸುತ್ತಿದೆ. ಕೆಆರ್‌ಸಿ ರಸ್ತೆಯಲ್ಲಿರುವ ಇಲ್ಲಿ ನಿರ್ಗತಿಕರಾದ ಆದರೆ ಎಚ್‌ಐವಿಯಿಂದ ಸಮೃದ್ಧರಾದ 16 ಮಕ್ಕಳು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ತಮಗೆ ಯಾರೂ ಇಲ್ಲವೆಂಬ ನೋವನ್ನು ಮರೆತಿದ್ದಾರೆ. ಹೆತ್ತ ಮಕ್ಕಳನ್ನೇ ಕಡೆಗಣಿಸಿ, ಕೈಯಾರೆ ಕೊಲೆ ಮಾಡುವ ಈ ದಿನಗಳಲ್ಲಿ ಯಾರದೋ ಮಕ್ಕಳನ್ನು ಇಲ್ಲಿ ಪ್ರೀತಿಯಿಂದ ಸಲಹಲಾಗುತ್ತಿದೆ. ಜಾತಿ, ಧರ್ಮ, ಲಿಂಗಬೇಧವೆಂಬುದು ಇಲ್ಲಿ ಕಾಣೆಯಾಗಿದೆ. ಮನುಷ್ಯ ಪ್ರೀತಿಯ ಸಹಜ ಕಕ್ಕುಲಾತಿ ಇಲ್ಲಿ ಸಮುದ್ರದಷ್ಟು ವಿಶಾಲವಾಗಿ ಹರಡಿಕೊಂಡಿದೆ.
ಎಚ್‌ಐವಿ ಬಾಧಿತ ಮಕ್ಕಳು ಹಾಗೂ ವಯಸ್ಕರಿಗೆ ಚಿಕಿತ್ಸೆ ನೀಡಲು 9 ಸಮಾನ ಮನಸ್ಕ ಸಹೃದಯರು ಸೇರಿ ಆರಂಭಿಸಿದ ಅಕ್ಸೆಪ್ಟ್ ಸಂಸ್ಥೆ ಅನಾಥ ಮಕ್ಕಳ ಪಾಲಿನ ತಾಯಿ- ತಂದೆ- ಶಿಕ್ಷಕ- ವೈದ್ಯರ ಪಾತ್ರವನ್ನು ನಿರ್ವಹಿಸುತ್ತಿದೆ. ಅಕ್ಸೆಪ್ಟ್‌ನ ಅಧ್ಯಕ್ಷ ರಾಜು ಮ್ಯಾಥ್ಯೂ ಹೇಳುವುದು ಹೀಗೆ: ಇಲ್ಲಿರುವ ಮಕ್ಕಳು ಒಂದೊಂದು ವಯಸ್ಸಿನವರಿದ್ದಾರೆ. 2 ವರ್ಷದಿಂದ 15 ವರ್ಷದವರೆಗಿನ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಅವರನ್ನು ನೋಡಲು ಇಬ್ಬರು ಕೇರ್‌ಟೇಕರ್, ಶಿಕ್ಷಣ ಕಲಿಸಲು ಒಬ್ಬರು ಶಿಕ್ಷಕರು, ಇಬ್ಬರು ಆಪ್ತ ಸಮಾಲೋಚಕರು, ಇಬ್ಬರು ವೈದ್ಯರು ಇದ್ದಾರೆ. ಪ್ರತಿಯೊಬ್ಬರಿಗೂ ಉಳಿದುಕೊಳ್ಳಲು ವ್ಯವಸ್ಥೆ, ಊಟ, ಬಟ್ಟೆ ಉಚಿತವಾಗಿ ನೀಡಲಾಗುತ್ತಿದೆ. ಹತ್ತಿರದ ಶಾಲೆಯೊಂದರಲ್ಲಿ ಇವರೆಲ್ಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬೆಳೆಯುವ ಮನಸ್ಸು, ಬರುತ್ತಿರುವ ಹರೆಯ, ಎಚ್‌ಐವಿಯಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬಂದೊದಗುವ ಕಾಯಿಲೆ, ಪೋಷಕರಿಲ್ಲದುದರಿಂದ ಮೂಡುವ ಅನಾಥಭಾವ ಈ ಎಲ್ಲದಕ್ಕೆ ಆಪ್ತಸಮಾಲೋಚನೆ ನೀಡಬೇಕಾದ ಹೊಣೆಗಾರಿಕೆ. ಸಾಮಾನ್ಯ ಮಕ್ಕಳಂತಿಲ್ಲದ ಇವರನ್ನು ನೋಡಿಕೊಳ್ಳುವಲ್ಲಿ ತಾಳ್ಮೆ ಅಗತ್ಯ ಎನ್ನುತ್ತಾರೆ.
ದುಡಿಯುವ ದೈಹಿಕ ಸಾಮರ್ಥ್ಯ ಕಡಿಮೆ ಇರುವುದರಿಂದ ಇವರ ಭವಿಷ್ಯದ ಬಗ್ಗೆ ತಮಗೆ ಚಿಂತೆಯಾಗಿದೆ. ಹೇಗೋ ಓದಿಸಬಹುದು. ಮಾನಸಿಕ ಸದೃಢತೆ ಇಲ್ಲದೇ ಇರುವುದರಿಂದ ಓದಿನಲ್ಲಿ ಇವರು ಹೆಚ್ಚಿನದನ್ನು ಸಾಧಿಸಲಾರರು. ಹಾಗಾಗಿ ಇವರಿಗೆ ಸ್ವ ಉದ್ಯೋಗ ತರಬೇತಿ ನೀಡಲು ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ಮುಂದೆ ಬರಬೇಕಿದೆ. ತಂದೆತಾಯಂದಿರ ನೆಂಟರು ಇವರಿಗೆ ಸಹಾಯ ಹಸ್ತ ಚಾಚಬೇಕು, ಆದರೆ ಯಾರೂ ಮುಂದೆ ಬರುವುದಿಲ್ಲ ಎಂದು ಹೇಳುವ ರಾಜು ಮ್ಯಾಥ್ಯೂ, ಸಹೃದಯರು ದತ್ತು ತೆಗೆದುಕೊಳ್ಳಲು ಮುಂದೆ ಬರಬೇಕೆಂದು ಆಶಿಸುತ್ತಾರೆ. ಇಲ್ಲವಾದಲ್ಲಿ ಈ ಮಕ್ಕಳಿಗೆ ಬಟ್ಟೆ, ಊಟ, ಸ್ಕೂಲು ಬ್ಯಾಗು, ಪುಸ್ತಕ ಕೊಡಿಸಲಾದರೂ ಸಹಾಯ ಮಾಡಿದರೆ ಉಪಕಾರವಾಗುತ್ತದೆ ಎನ್ನುತ್ತಾರೆ.
ಇಲ್ಲಿ ಮಕ್ಕಳಿಗೆ ಮಾತ್ರವಲ್ಲದೇ ಎಚ್‌ಐವಿ ಬಾಧಿತ ವಯಸ್ಕರಿಗೂ ಚಿಕಿತ್ಸೆ ನೀಡುವ ಸೌಲಭ್ಯವಿದೆ. 35 ಮಂದಿ ವಯಸ್ಕರಿಗೆ ಉಳಿದುಕೊಂಡು ಚಿಕಿತ್ಸೆ ಪಡೆಯಲು ಸಾಧ್ಯವಿದೆ. ಎಚ್‌ಐವಿ ಬಾಧಿತರಿಗೆ ಸಾಮಾನ್ಯವಾಗಿ ತಗಲುವ ಟಿ.ಬಿ. ಕಾಯಿಲೆಯಿಂದ ತೊಂದರೆಗೊಳಗಾದವರಿಗೆ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.
ಎಚ್‌ಐವಿ ಬಾಧಿತ ಮಕ್ಕಳು:
ಕರ್ನಾಟಕದಲ್ಲಿ ದಾಖಲಾದ ಎಚ್‌ಐವಿ ಬಾಧಿತ ಮಕ್ಕಳ ಸಂಖ್ಯೆ 5,700. ಇವರಲ್ಲಿ 1663 ಮಕ್ಕಳು ಆ್ಯಂಟಿ ರೆಟ್ರೋ ವೈರಲ್ ಥೆರಪಿಗೆ ಒಳಗಾಗಿದ್ದಾರೆ. ಅಂದರೆ ಇವರಿಗೆ ಏಡ್ಸ್ ತಗುಲಿದೆ. ಸರ್ಕಾರಿ ಲೆಕ್ಕ ಇದಾಗಿದ್ದು ಇನ್ನೂ ಪತ್ತೆಯಾಗದವರ ಸಂಖ್ಯೆ ಹೆಚ್ಚಾಗಿಯೇ ಇರಬಹುದೆಂದು ಅಂದಾಜಿಲಾಗಿದೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ( ನ್ಯಾಕೋ) ಪ್ರಕಾರ ಭಾರತದಲ್ಲಿ 70 ಸಾವಿರ ಮಕ್ಕಳು ಎಚ್‌ಐವಿ ಬಾಧಿತರಾಗಿದ್ದಾರೆ. ಇವರಲ್ಲಿ 10 ಸಾವಿರ ಮಂದಿ ಎ ಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಎಚ್‌ಐವಿ ಬಾಧಿತರ ಸಂಖ್ಯೆ 5.1 ಮಿಲಿಯನ್ ಎಂದು ಲೆಕ್ಕ ಹಾಕಲಾಗಿದೆ. 2005 ರಲ್ಲಿ ಅಂದಾಜು ಮಾಡಿದಂತೆ ಶೇ.33 ರಷ್ಟು ಮಂದಿ ಏಡ್ಸ್ ಬಾಧಿತರು 15 ರಿಂದ 29 ವರ್ಷದ ಒಳಗಿನವರು. ದೇಶದ ಮೂರನೇ ಒಂದು ಭಾಗದಷ್ಟು ಅಂದರೆ 10-24 ವರ್ಷ ವಯಸ್ಸಿನವರು ಸುಲಭವಾಗಿ ಎಚ್‌ಐವಿ ಸೋಂಕು ತಗಲುವ ಸಾಧ್ಯತೆಯಿರುವವರಿದ್ದಾರೆಂದು ವಿಶ್ಲೇಷಿಸಲಾಗಿದೆ. ಲೈಂಗಿಕ ಕುತೂಹಲವುಳ್ಳ ಆದರೆ ಸುರಕ್ಷಿತ ಲೈಂಗಿಕತೆ ಬಗ್ಗೆ ಪರಿಜ್ಞಾನವಿಲ್ಲದ ವಯಸ್ಸಿನವರು ಸುಲಭವಾಗಿ ಎಚ್‌ಐವಿಗೆ ತುತ್ತಾಗಬಹುದಾಗಿದ್ದು, ಇವರಲ್ಲಿ ಅರಿವು ಮೂಡಿಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ. ಇದರ ಜತೆಗೆ ಆತಂಕ ಪಡುವ ಸಂಗತಿಯೆಂದರೆ ದೇಶದಲ್ಲಿ 3 ಲಕ್ಷ ಮಕ್ಕಳನ್ನು ವ್ಯಾವಹಾರಿಕವಾಗಿ ಲೈಂಗಿಕ ಕಾರ್ಯಕರ್ತನ್ನಾಗಿಸಲಾಗಿದೆ.
ಚಿಲ್ಡ್ರನ್ ಅಫೆಕ್ಟಡ್ ಬೈ ಎಚ್‌ಐವಿ ಆರ್ ಏಡ್ಸ್(ಕಾಹಾ) ಚಾರ್ಟರ್ ಎಂದು ಕರೆಯಲಾದ ಕಾರ್ಯಕ್ರಮದಲ್ಲಿ 53 ಮಕ್ಕಳು ಪಾಲ್ಗೊಂಡಿದ್ದರು. ನ್ಯಾಕೋದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ 14 ಶಿಫಾರಸ್ಸುಗಳನ್ನು ಮಾಡಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಮಕ್ಕಳ ಬೆಂಬಲಿಗ ಗುಂಪು ರಚನೆ, ಎಚ್‌ಐವಿ ಬಾಧಿತ ಮಕ್ಕಳಲ್ಲಿ ಅರಿವು ಮೂಡಿಸುವುದು, ಮನೋಸಾಮಾಜಿಕ ಬೆಂಬಲವನ್ನು ಕಲ್ಪಿಸುವುದು, ಮಕ್ಕಳ ಆಪ್ತಸಮಾಲೋಚಕರನ್ನು ತರಬೇತುಗೊಳಿಸುವುದು, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು, ಪೋಷಕರಿಗೆ ಸಮಾಜೋ ಆರ್ಥಿಕ ಬೆಂಬಲ ನೀಡುವುದು, ತಪ್ಪು ಕಲ್ಪನೆ ಹಾಗೂ ತಾರತಮ್ಯ ಭಾವನೆ ತೊಲಗಿಸುವುದು, ಎಚ್‌ಐವಿ ಮಕ್ಕಳ ಬೆಂಬಲಕ್ಕೆ ನಿಲ್ಲುವ ಸಂಸ್ಥೆಗಳನ್ನು ಬಲಗೊಳಿಸುವುದು, ಶಿಕ್ಷಣ ಹಾಗೂ ವಸತಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಆಗಬೇಕಿದೆ ಎಂದು ಶಿಫಾರಸ್ಸು ಹೇಳಿದೆ.
Monday, November 3, 2008
`ಶಾಸ್ತ್ರೀ'ಯ ಭಾಷೆ
`ಶಾಸ್ತ್ರೀ'ಯ ಭಾಷೆ
ಊರ ಗೌಡರ ಮಗಳು ಮೈನೆರೆದರೆ ಊರವರಿಗೆ ಏನು ಲಾಭ? ಹೆಚ್ಚೆಂದರೆ ಒಂದು ಹೋಳಿಗೆ ಊಟ ಸಿಗಬಹುದಷ್ಟೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಿದ್ದರ ಬಗ್ಗೆ ಇಷ್ಟು ನಿಕೃಷ್ಟವಾಗಿ ಹೇಳುವುದು ಅನೇಕರಿಗೆ ತಥ್ಯವಾಗದೇ ಇರಬಹುದು. ಆದರೆ ಶಾಸ್ತ್ರೀಯ ಭಾಷೆ ಘೋಷಣೆಯಾದ ಮೇಲೆ `ಪೋಸ್ಟ್ ಮಾರ್ಟಂ'ಗೆ ಹೊರಟರೆ ಇದು ಅಪಥ್ಯವಾಗಲಿಕ್ಕಿಲ್ಲ.
ಶಾಸ್ತ್ರೀಯ ಭಾಷೆಯೆಂದು ಘೋಷಣೆಯಾದ ಮಾತ್ರಕ್ಕೆ ಕನ್ನಡದಲ್ಲೇ ಕಲಿತ ಮಣ್ಣಿನ ಮಕ್ಕಳಿಗೆ ಏನು ಸಿಗುತ್ತದೆ? ಕನ್ನಡ ಬಿಟ್ಟರೆ ಬೇರಾವ ಭಾಷೆ ಬಾರದ ಕೋಟ್ಯಾಂತರ ಬಡ ಬೋರೇಗೌಡರ ಬದುಕಲ್ಲಿ ಏನು ಬದಲಾವಣೆಯಾಗುತ್ತದೆ. ಕನ್ನಡ ಎಂ.ಎ. ಮಾಡಿದವರು ಹೋಗಲಿ, ವಿವಿಧ ಮಾನವಿಕ( ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ್ತಿತ್ಯಾದಿ)ಗಳಲ್ಲಿ ಎಂ.ಎ. ಪಡೆದವರಿಗೆ ಎಲ್ಲಿ ಉದ್ಯೋಗವೇನಾದರೂ ಸಿಗುತ್ತದೆಯೇ? ಆಡಳಿತ ಭಾಷೆಯಾಗಿ ಕನ್ನಡವೊಂದೇ ಉಳಿಯುತ್ತದೆಯೇ? ಕೋರ್ಟ್‌ನಲ್ಲಿ ಕನ್ನಡ ಬಳಕೆಯಾಗುತ್ತದೆಯೇ?
ಯಕಃಶ್ಚಿತ್ ಈ ಶ್ರೀಸಾಮಾನ್ಯರ ಬದುಕಲ್ಲಿ ಏನು ಬದಲಾವಣೆಯಾಗುವುದಿಲ್ಲ. ತಮಿಳಿಗೆ ಕೊಟ್ಟಿದ್ದಾರೆ ನಮಗೂ ಕೊಡಬೇಕೆಂಬ ವಾದ ಬಿಟ್ಟರೆ ಮತ್ಯಾವ ಘನ ಉದ್ದೇಶ, ತಾರ್ಕಿಕ ವಾದಗಳನ್ನು ಈ ವಿಷಯದಲ್ಲಿ ಗಟ್ಟಿಧ್ವನಿಯಲ್ಲಿ ಮಾಡಲಾಗುವುದಿಲ್ಲ.
ಜಾಗತೀಕರಣದ ಬಿರುಗಾಳಿಯಲ್ಲಿ ಕನ್ನಡವೊಂದನ್ನೇ ಕಲಿತವನು ಎಲೆಯಂತೆ ಥರಗುಟ್ಟುತ್ತಿದ್ದಾನೆ. ವಿದ್ವಾಂಸರು, ಕನ್ನಡ ಹೋರಾಟಗಾರರು, ಆಷಾಢಭೂತಿ ಆಳುವವರು ಏನೇ ಮಾತನಾಡಲಿ. ಕನ್ನಡವೊಂದನ್ನೇ ಕಲಿತವನು `ತಾನು ಯಾಕಾದರೂ ಇಂಗ್ಲಿಷ್ ಕಲಿಯಲಿಲ್ಲ' ಎಂದು ಹಲುಬುವುದು ತಪ್ಪಲಿಲ್ಲ. ಅದು ನಿತ್ಯರೋಧನ.
ಇಂಗ್ಲಿಷು ಬ್ರಾಹ್ಮಣ ಕನ್ನಡ ಶೂದ್ರ:
ಪುರಾತನ ಕಾಲದಲ್ಲಿ ಸಂಸ್ಕೃತವೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಭಾಷೆಗಳನ್ನು ಅಪಭ್ರಂಶವೆಂದು ದಸ್ಯಗಳ(ಸೇವಕರ) ಭಾಷೆಯೆಂದು ಹೀಗಳೆಯಲಾಗುತ್ತಿತ್ತು. ಪ್ರಾಚೀನ ಸಂಸ್ಕೃತ ನಾಟಕಗಳಲ್ಲಿ ರಾಜ, ಮಂತ್ರಿ, ಕಥಾನಾಯಕ ಸಂಸ್ಕೃತದಲ್ಲಿ ಮಾತನಾಡಿದರೆ ದಸ್ಯುಗಳು ಮಾತ್ರ ಪ್ರಾಕೃತ ಅಥವಾ ಅಪಭ್ರಂಶ ಭಾಷೆಯಲ್ಲಿ ಮಾತನಾಡುವುದು ಲಿಖಿತವಾಗಿ ದಾಖಲಾಗಿದೆ.
ಈ ರೀತಿಯ ಮಡಿವಂತಿಕೆಯುಳ್ಳ ಸಂಸ್ಕೃತದ ಜಾಗದಲ್ಲಿ ಈಗ ಇಂಗ್ಲಿಷು ಬಂದು ಕುಳಿತಿದೆ. ಕನ್ನಡದಲ್ಲಿ ಓದಿದವರಿಗೆ ಕವಡೆ ಕಾಸಿನ ಬೆಲೆಯೂ ಇಲ್ಲವಾಗಿದೆ. ಸರ್ಕಾರಿ ಉಸ್ತುವಾರಿಯಲ್ಲಿ ನಡೆಯುತ್ತಿರುವ ಕನ್ನಡ ಶಾಲೆಗಳಿಗೆ ಸ್ಲಂಬಾಲರು, ಬಡ ಮಕ್ಕಳು, ಬಡ ಮತ್ತು ಮಧ್ಯಮ ವರ್ಗದ ಕೃಷಿಕರ ಮಕ್ಕಳು ಮಾತ್ರ ಹೋಗುತ್ತಿದ್ದಾರೆ. ಸರ್ಕಾರಿ ನೌಕರಿಯಲ್ಲಿರುವವರು, ಶ್ರೀಮಂತ ಕೃಷಿಕರು, ವ್ಯವಹಾರ ನಡೆಸುವವರ ಮಕ್ಕಳು ಇಂಗ್ಲಿಷು ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಕನ್ನಡ ಅವಜ್ಞೆಗೆ ತುತ್ತಾದ ಭಾಷೆಯಾಗಿರುವಾಗಲೇ ಅದಕ್ಕೆ `ವಿಶ್ವಮಾನ್ಯತೆ' ತಂದುಕೊಡುವ ಶಾಸ್ತ್ರೀಯ ಭಾಷೆಯ ಹಕ್ಕೊತ್ತಾಯ ಕೇಳಿಬಂದಿತು. ತಮ್ಮ ಮಕ್ಕಳನ್ನೆಲ್ಲಾ ಇಂಗ್ಲಿಷು ಶಾಲೆಯಲ್ಲಿ ಓದಿಸಿ, ಒಳ್ಳೆಯ ಉದ್ಯೋಗ ಕೊಡಿಸಿರುವ ಸಾಹಿತಿ, ಬುದ್ದಿ ಜೀವಿಗಳ ಮಕ್ಕಳು ಕನ್ನಡಕ್ಕಾಗಿ ಇಂದು ತಮ್ಮ ಉಪವಾಸ, ಮಾತಿನ ಖಡ್ಗ ಝಳಪಿಸುತ್ತಿದ್ದಾರೆ. ಕನ್ನಡದಲ್ಲಿ ಓದಿದವರಿಗೆ ಮಾತ್ರ ಉದ್ಯೋಗ, ಕನ್ನಡ ಬಲ್ಲವರಿಗೆ ಮಾತ್ರ ರಾಜ್ಯದಲ್ಲಿ ಪ್ರಮುಖ ಸ್ಥಾನ ಎಂಬ ಹಕ್ಕೊತ್ತಾಯ ಯಾರಿಂದಲೂ ಕೇಳಿ ಬರುತ್ತಿಲ್ಲ. ಪ್ರಾಥಮಿಕ ಶಾಲೆಯಿಂದಲೇ ಇಂಗ್ಲಿಷ್‌ನ್ನು ಒಂದು ಪಠ್ಯವಾಗಿ ಕಲಿಸಲು ಈ ಪ್ರಭೃತಿಗಳು ಬಿಡುತ್ತಿಲ್ಲ. ಎಲ್ಲಾ ಮಕ್ಕಳು ಇಂಗ್ಲಿಷು ಕಲಿತರೆ ನವ ಬ್ರಾಹ್ಮಣರ ಮಕ್ಕಳ ಉದ್ಯೋಗಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂಬ ಆತಂಕ ಇವರದು.
ಇಂಗ್ಲಿಷು ಬ್ರಾಹ್ಮಣ ಕನ್ನಡ ಶೂದ್ರ ಎಂಬುದು ಕೇವಲ ಕಲ್ಪನೆಯಲ್ಲ. ಸದ್ಯದ ಸುಡು ವಾಸ್ತವ. ಕನ್ನಡವೆಂಬುದು ಮೈಲಿಗೆಯಾಗಿ, ಯು.ಆರ್. ಅನಂತಮೂರ್ತಿ ಹೇಳುವಂತೆ ಕೇವಲ ಅಡುಗೆ ಮನೆ ಭಾಷೆಯಾಗಿ ಉಳಿಯಲಿರುವ ಸಂಕಟದಲ್ಲಿ ನಾವಿದ್ದೇವೆ. ಆ ಹೊತ್ತಿನಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಸಿಕ್ಕಿದೆ.
ಲಾಭವೇನು?
ತಮಿಳಿಗೆ ಸಿಕ್ಕಿತೆಂದು ನಾವೆಲ್ಲಾ ಒಕ್ಕೊರಲಿನಿಂದ ಕನ್ನಡಕ್ಕೂ ಶಾಸ್ತ್ರೀಯ ಭಾಷೆ ಸ್ಥಾನ ಮಾನ ಸಿಗಬೇಕೆಂದು ಹಕ್ಕೊತ್ತಾಯ ಮಂಡಿಸಿದೆವು. ಆಂಧ್ರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ, ಮುಂಬರಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕನ್ನಡಕ್ಕೂ ಒಂದು ಶಾಸ್ತ್ರೀಯ ಸ್ಥಾನ ಮಾನ ಘೋಷಿಸಿದೆ.
ಪ್ರಾಚೀನ ಸಾಹಿತ್ಯ ಹಾಗೂ ಭಾಷಾ ಚರಿತ್ರೆ ಬಗ್ಗೆ ಸಂಶೋಧನೆ ನಡೆಸುವ ವಿದ್ವಾಂಸರಿಗೆ 2 ರಾಷ್ಟ್ರಮಟ್ಟದ ಪ್ರಶಸ್ತಿ, ಅಧ್ಯಯನ ನಡೆಸಲು ಅನುದಾನ, ಕೇಂದ್ರೀಯ ವಿ.ವಿ.ಗಳಲ್ಲಿ ಕನ್ನಡ ಅಧ್ಯಯನ ಪೀಠ, ವಿದೇಶಿ ವಿ.ವಿ.ಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಅವಕಾಶ, ಒಂದಿಷ್ಟು ಫೆಲೋಶಿಪ್‌ಗೆ ಅವಕಾಶವಾಗಲಿದೆ. ಇದರ ಜತೆಗೆ ಕೇಂದ್ರದಿಂದ ಸರಿಸುಮಾರು 100 ಕೋಟಿ ರೂ. ಹೆಚ್ಚಿನ ಅನುದಾನ ಒದಗಿ ಬರಲಿದೆ. ಮೈಸೂರಿನಲ್ಲಿರುವ ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ಇದಕ್ಕಾಗಿ ಒಂದು ಸಮಿತಿ ರಚನೆಯಾಗಲಿದ್ದು, ಇದೆಲ್ಲದರ ಉಸ್ತುವಾರಿ ನೋಡಿಕೊಳ್ಳಲಿದೆ.
ಇವಿಷ್ಟು ಬಿಟ್ಟರೆ ಕನ್ನಡ ಉದ್ದಾರ ಅಷ್ಟರಲ್ಲೇ ಇದೆ. ಇದರಿಂದ ಸಾಮಾನ್ಯ ಕನ್ನಡಿಗರಿಗೆ ಏನು ಲಾಭ? ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಅಷ್ಟೆ. ನಮ್ಮ ನೆಲ, ಜಲ ವಿಷಯದ ಬಗ್ಗೆ ಯಾವತ್ತೂ ಚಕಾರವೆತ್ತದ ಜನ ಶಾಸ್ತ್ರೀಯ ಭಾಷೆಗಾಗಿ ಕೂಗಾಡಿ ಅರಚಿದರು. ಹೊಸ ರೈಲ್ವೆ ಮಾರ್ಗಗಳು, ಹೊಸ ರೈಲುಗಳು ಬಾರದೇ ಇದ್ದಾಗ ತೆಪ್ಪಗೆ ಕೂತಿದ್ದ ಮಂದಿ ಕೂಗಾಡಲಾರಂಭಿಸಿದರು. ನಮ್ಮ ರಾಷ್ಟ್ರೀಯ ಹೆದ್ದಾರಿಗಳು ಗುಂಡಿಗಳಾಗಿ ಕುಳಿತಿದ್ದರೂ ಯಾರೂ ಮಾತನಾಡಲಿಲ್ಲ. ಹಿಂದುಳಿದ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ 371 ವಿಧಿಗೆ ತಿದ್ದುಪಡಿ ತರಬೇಕೆಂಬ ಒತ್ತಾಯಕ್ಕೆ ಯಾರೂ ಧ್ವನಿ ಸೇರಿಸಲಿಲ್ಲ. ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಇದೇ ಯಡಿಯೂರಪ್ಪನವರ ಬಿಜೆಪಿಯ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಬಿಜೆಪಿ ಸಂಸದರಾಗಿದ್ದ ಡಾ ಎಂ.ಆರ್. ತಂಗಾ ಹಾಗೂ ಬಸವರಾಜಪಾಟೀಲ್ ಸೇಡಂ ಅವರು ಆಗಿನ ಗೃಹ ಸಚಿವ ಎಲ್. ಕೆ. ಅಡ್ವಾಣಿಯವರ ಮುಂದೆ 371 ವಿಧಿಗೆ ತಿದ್ದುಪಡಿ ತರಲು ಕೋರಿದ್ದರು. ಆಗ ಅಡ್ವಾಣಿ ನಿರಾಶಾದಾಯಕ ಉತ್ತರ ನೀಡಿದ್ದರು.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿರುವಾಗ ಇದೇ ಯಡಿಯೂರಪ್ಪ 371 ವಿಧಿಗಾಗಿ ದೆಹಲಿಗೆ ನಿಯೋಗ ಹೋಗುವುದಾಗಿ ಹೇಳುತ್ತಿದ್ದಾರೆ. ಕೇಂದ್ರದ ಮೇಲೆ ಗೂಬೆ ಕೂರಿಸಿ, ಮುಂದಿನ ಲೋಕಸಭಾ ಚುನಾವಣೆಗೆ ಮತಗಳ ಇಡುಗಂಟನ್ನು ಸಂಪಾದಿಸುವುದಷ್ಟೇ ಅವರ ಆಶಯ. ರಾಜ್ಯದ ಬಗ್ಗೆ ನಿಜವಾದ ಕಳಕಳಿ ಅವರಿಗಿಲ್ಲ.
ಶಾಸ್ತ್ರೀಯ ಭಾಷೆಯ ವಿಷಯದಲ್ಲಿ ಕೂಡ ಅವರ ಅಬ್ಬರ ಇದೇ ರೀತಿಯದು. ಭಾವನಾತ್ಮಕ ವಿಷಯಗಳತ್ತ ಜನರ ಗಮನವನ್ನ ಕೇಂದ್ರೀಕರಿಸಿ, ರಾಜಕೀಯ ಮಾಡಿಕೊಳ್ಳುವ ಹುನ್ನಾರವಿದು. ಶಾಸ್ತ್ರೀಯ ಭಾಷೆಗಾಗಿ ದೆಹಲಿ ಚಲೋ ಮಾಡಲು, ಗಾಂಧಿ ಸಮಾಧಿ ಎದುರು ಧರಣಿ ಕೂರಲು ಸಿದ್ಧರಿರುವ ಯಡಿಯೂರಪ್ಪ, ರೈಲ್ವೆ, ರಸ್ತೆಯಂತಹ ಸಾಮಾನ್ಯ ಬೇಡಿಕೆಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಕೇಂದ್ರದ ಮೇಲೆ ಸೇಡಿನ ಹೋರಾಟಕ್ಕಿಂತ ರಚನಾತ್ಮಕ ಹೋರಾಟವನ್ನು ಮಾಡುವುದು ತುರ್ತಾಗಿ ಆಗಬೇಕಾಗಿರುವ ಕೆಲಸ.
ಇತ್ತೀಚೆಗೆ ಮುಂಬೈನಲ್ಲಿ ಬಿಹಾರಿ ಯುವಕ ಹತ್ಯೆಯಾದಾಗ ಮುಖ್ಯಮಂತ್ರಿ ನಿತೀಶ್‌ಕುಮಾರ್, ಲಾಲು ಪ್ರಸಾದ್ ಯಾದವ್, ರಾಮವಿಲಾಸ್‌ಪಾಸ್ವಾನ್ ಹೀಗೆ ಎಲ್ಲಾ ಪಕ್ಷದ ನಾಯಕರು ಒಂದೇ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡರು. ರಾಜ್ಯದ ವಿಷಯ ಬಂದಾಗ ರಾಜಕೀಯ ತಲೆ ಹಾಕಬಾರದು. ರಾಜ್ಯದ ಏಳ್ಗೆ ಮುಖ್ಯವಾಗಬೇಕು. ಇದು ನಮ್ಮ ರಾಜಕಾರಣಿಗಳಿಗೆ ಅರ್ಥವಾಗುವುದು ಯಾವಾಗ?
ರಾಜ್ಯದ ಸ್ಥಿತಿ?
ಶಾಸ್ತ್ರೀಯ ಭಾಷೆಗಾಗಿ ದೆಹಲಿಗೆ ಹೋಗುವುದಾಗಿ ಘರ್ಜಿಸಿದ ಯಡಿಯೂರಪ್ಪನವರ ತವರು ರಾಜ್ಯದಲ್ಲಿ ಕನ್ನಡ ಏನಾಗಿದೆ. ಆಡಳಿತ ಭಾಷೆ ಕನ್ನಡ ಎಂಬ ವಿಷಯ ಕುರಿತು ಈವರೆಗೆ 300 ಸುತ್ತೋಲೆಗಳು ಬಂದಿವೆ. ಆದರೆ ಇನ್ನೂ ಕೂಡ ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವಾಗಿಲ್ಲ. ಪ್ರಮುಖ ಸರ್ಕಾರಿ ಆದೇಶಗಳು, ರಾಜ್ಯ ಗೆಜೆಟ್, ಹಿರಿಯ ಅಧಿಕಾರಿಗಳ ವ್ಯವಹಾರ ಎಲ್ಲವೂ ಇಂಗ್ಲಿಷ್‌ನಲ್ಲಿ ನಡೆಯುತ್ತವೆ. ಇದಕ್ಕೆ ಕಾರಣಗಳನ್ನು ಸಾವಿರ ಹೇಳಬಹುದು. ಆದರೆ ಕನ್ನಡ ಜಾರಿಯಾಗದೇ ಇರುವುದು ಸತ್ಯ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಎಂಬ ಸರೋಜಿನಿ ಮಹಿಷಿ ವರದಿ ಸಂಪೂರ್ಣ ಜಾರಿಯಾಗದೇ ಧೂಳು ಹಿಡಿಯುತ್ತಿದೆ. ಕೇಂದ್ರ ಸರ್ಕಾರ, ಖಾಸಗಿ ಉದ್ಯಮ ಸಂಸ್ಥೆಗಳ ವಿಷಯ ಹೋಗಲಿ. ಕರ್ನಾಟಕ ಲೋಕ ಸೇವಾ ಆಯೋಗದ ನೇಮಕಾತಿಯಲ್ಲೂ ಕೂಡ ಕನ್ನಡಿಗರಿಗೆ ಮಾತ್ರ ಉದ್ಯೋಗವೆಂಬ ಷರತ್ತು ಇಲ್ಲ. ದೇಶದ ಯಾವುದೇ ಅಂಗೀಕೃತ ವಿ.ವಿ.ಯಿಂದ ಪದವಿ ಪಡೆದವರು ಉಪನ್ಯಾಸಕ, ಪ್ರಥಮ ದರ್ಜೆ ಗುಮಾಸ್ತ, ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಬಹುದು. ಅಷ್ಟರಮಟ್ಟಿಗೆ ಕನ್ನಡಿಗರು ಉದಾರ ಹೃದಯಗಳಾಗಿದ್ದಾರೆ.
ಇನ್ನು ಕನ್ನಡ ಕಲಿಸುವ ಸರ್ಕಾರಿ ಶಾಲೆಗಳಲ್ಲಿ ಆಧುನಿಕತೆ ಎಂಬುದು ಹೇಳ ಹೆಸರಿಲ್ಲವಾಗಿದೆ. ನಮ್ಮ ಶಿಕ್ಷಣ ಪದ್ಧತಿ ಕೂಡ ಓಬಿರಾಯನ ಕಾಲದಲ್ಲಿಯೇ ಇದೆ. ಉದ್ಯೋಗ ಕಲ್ಪಿಸುವುದಕ್ಕೆ ಪೂರಕವಾದ ಶಿಕ್ಷಣ ಪದ್ಧತಿ ಜಾರಿಗೆ ತಂದಿಲ್ಲ. ಕನ್ನಡ ಮಾಧ್ಯಮದಲ್ಲಿ ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಪಡೆದವರಿಗೆ ಮಾತ್ರ ಸರ್ಕಾರದ ವತಿಯಿಂದ ಸನ್ಮಾನಿಸಲಾಗುತ್ತಿದೆ ವಿನಃ ಕನ್ನಡಿಗರಿಗೆ ಮೀಸಲು ಪರಿಪಾಠವೇ ಇಲ್ಲ. ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಶಾಲೆಯಲ್ಲಿ ಕಲಿತವರಿಗೆ ಶೇ.15 ರಷ್ಟು ಗ್ರೇಸ್ ಮಾರ್ಕ್ಸ್ ನೀಡುವ ಆದೇಶ ಜಾರಿಗೊಳಿಸಿದ್ದರು. ಆದರೀಗ ಅದನ್ನು ತೆಗೆದು ಹಾಕಲಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಶಾಸ್ತ್ರೀಯ ಭಾಷೆಯೆಂಬುದು ಶಾಸ್ತ್ರೀಗಳ ಭಾಷೆಯಾಗಲಿದೆಯೇ ಹೊರತು ಕನ್ನಡದ ಮಣ್ಣಿನ ಮಕ್ಕಳಿಗೆ ಪ್ರಯೋಜನವಾಗುವ ಸಂಗತಿಯಲ್ಲ. ಹಾಗಿದ್ದೂ ಶಾಸ್ತ್ರೀಯ ಭಾಷೆ ಸ್ಥಾನಮಾನ ಬೇಡವೆಂದಲ್ಲ. ಅದರ ಜತೆಗೆ ಕನ್ನಡ ಕಲಿತರೆ ಸ್ವಾಭಿಮಾನದ ಬಾಳ್ವೆ ಸಾಧ್ಯವೆಂಬ ವಾತಾವರಣ ನಿರ್ಮಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಯಡಿಯೂರಪ್ಪನವರು ಆ ನಿಟ್ಟಿನಲ್ಲಿ ಯೋಚಿಸಿ, ಕಾರ್ಯಪ್ರವೃತ್ತವಾಗಬೇಕಿದೆ.
Wednesday, October 22, 2008
ಮತಾಂತರ- ಅವಾಂತರ
ನೂರು ದೇವರುಗಳನೆಲ್ಲಾ ನೂಕಾಚೆ ದೂರ,
ಭಾರತಾಂಬೆಯೇ ನಮಗಿಂದು ಪೂಜಿಸುವ ಬಾರ
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಶ್ರಮವಹಿಸಿ ದುಡಿಯಿರೈ ಸರ್ವ ಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು
ಸೇರಿರೈ ಮನುಜ ಮತಕೆ ವಿಶ್ವ ಪಥಕೆ
ಎಂದು ದಾರ್ಶನಿಕ ಕವಿ ಕುವೆಂಪು ಹೇಳಿ ದಶಕಗಳೇ ಮರೆಯಾಗಿ ಹೋದವು. ಆದರೆ ಮತ ವ್ಯಾಮೋಹ, ಧರ್ಮದ ದುರಭಿಮಾನ, ಅನ್ಯ ಧರ್ಮದ ದ್ವೇಷ ದಿನೇ ದಿನೇ ಮತ್ತಷ್ಟು ಉಲ್ಬಣಿಸುತ್ತಿದೆ. ಅದಕ್ಕೆ ಕಾರ್ಲ್‌ಮಾರ್ಕ್ಸ್ ಧರ್ಮವನ್ನು ಅಫೀಮು ಎಂದು ಕರೆದಿದ್ದರು.
ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಟಾಟೋಪ, ಹಿಂಸೆ, ಆರೋಪ ಪ್ರತ್ಯಾರೋಪಗಳನ್ನು ಗಮನಿಸಿದರೆ ಧರ್ಮವೆಂಬುದು ಎಷ್ಟರಮಟ್ಟಿಗೆ ವಿಚ್ಛಿದ್ರಕಾರಿಯೆಂಬುದು ಸ್ಪಷ್ಟವಾಗುತ್ತದೆ. ದೇವರನ್ನು ಹತ್ತಿರದಿಂದ ಕಾಣುವ, ದೇವರನ್ನು ಸುಗಮವಾಗಿ ತಲುಪುವ ಭಕ್ತಿ ಮಾರ್ಗವು ಯಾವಾಗ ಸಾಂಸ್ಥಿಕವಾಗಿ ಆಳುವವರು ಹಾಗೂ ಸ್ವಹಿತಾಸಕ್ತ ಗುಂಪುಗಳ ಕೈಯ ಅಸ್ತ್ರವಾಗುತ್ತದೋ ಆವಾಗ ಇಂತಹ ಅವಘಡಗಳು ಸಂಭವಿಸುತ್ತವೆ.
ಭಕ್ತಿಯ ಪರವಶತೆಯಲ್ಲಿ ಮಿಂದು ಹೋದ ನೂರಾರು ವಚನಕಾರರು, ಪುರಂದರದಾಸರು, ಕನಕದಾಸರು, ಶಿಶುನಾಳ ಷರೀಫರು, ತುಕಾರಾಂ, ಸರ್ವಜ್ಞ, ವೇಮನ, ಇಂದಿಗೂ ಇರುವ ನೂರಾರು ತತ್ವಪದಕಾರರು, ಸೂಫಿಸಂತರು ಯಾವುದೇ ಧರ್ಮದ ಗೋಡೆ ಕಟ್ಟಿಕೊಂಡವರಲ್ಲ. ತನ್ನದು ಶ್ರೇಷ್ಠ, ಇತರರದ್ದು ಕನಿಷ್ಠವೆಂಬ ಅಹಂಕಾರವನ್ನು ತೋರಿಸಿದವರಲ್ಲ. ಭಕ್ತಿಯಷ್ಟನ್ನೇ ಉಂಡುಟ್ಟು, ಅದನ್ನು ಇತರರಿಗೂ ಹಂಚಿ ಹೋದವರು. ಧರ್ಮಭೀರುಗಳೆಂದರೆ ನಿಜಕ್ಕೂ ಅವರೆ.
ವಚನಕಾರ ಅಲ್ಲಮಪ್ರಭು ಹೇಳುವಂತೆ `ಭಕ್ತಿಯೆಂಬುದು ತೋರುಂಬ ಲಾಭ'ವಾದಾಗ ಇಂತಹ ಅಡ್ಡ ಪರಿಣಾಮಗಳು, ಸಾಮಾಜಿಕ ಅಸ್ವಸ್ಥತೆ ಘಟಿಸುತ್ತದೆ. ಪರಸ್ಪರ ದ್ವೇಷಿಸುವ ವಾತಾವರಣ ಸೃಷ್ಟಿಸಲಾಗುತ್ತದೆ. ಈಗ ನಡೆಯುತ್ತಿರುವ ಮತಾಂತರ ವಿವಾದ, ಪರವಿರೋಧ ಚರ್ಚೆಗಳು, ಪರಸ್ಪರ ಟೀಕೆಗಳು ಇವೆಲ್ಲವೂ ಧರ್ಮದ ವಿಕಾರತೆಗೆ ಕೈಗನ್ನಡಿಯಾಗಿದೆ ವಿನಃ ನಿಜಾರ್ಥದಲ್ಲಿ ಧರ್ಮದ ಆಚರಣೆಯಲ್ಲ. ಯಾರಿಗೂ ಧರ್ಮ, ಭಕ್ತಿ ಬೇಕಿಲ್ಲ. ಉರಿವ ಮನೆಯಲ್ಲಿ ತನಗೆಷ್ಟು `ಗಳ' ಸಿಗುತ್ತದೆ. ಆ ಜಂತಿ ಬಳಸಿಕೊಂಡ ತನ್ನ ಮನೆ, ಪಕ್ಷ ಹಾಗೂ ಮುಂದಿನ ಚುನಾವಣೆಯಲ್ಲಿ ಓಟು ಗಳಿಸಬಹುದೆಂಬುದು ಎಲ್ಲರ ಲೆಕ್ಕಾಚಾರವಾಗಿದೆ.
ಮತಾಂತರ- ಅವಾಂತರ
ಚರ್ಚ್ ಹಾಗೂ ನ್ಯೂಲೈಫ್‌ಗಳಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬ ನೆವ ಮುಂದಿಟ್ಟುಕೊಂಡು ರಾಜ್ಯದ ಹತ್ತಾರು ಕಡೆ ಕ್ರೈಸ್ತರ ಮೇಲೆ ಬಜರಂಗಿಗಳು, ವಿಶ್ವಹಿಂದು ಪರಿಷತ್ ಹಾಗೂ ಬಿಜೆಪಿ ಬೆಂಬಲಿತ ಮಂದಿ ಸರಣಿ ದಾಳಿ ನಡೆಸಿದರು. ದಾವಣಗೆರೆಯಲ್ಲಿ ಶುರುವಾದ ಈ ಅಮಾನವೀಯ ದಾಳಿ ಮೇನಿಯಾದಂತೆ ಇಡೀ ರಾಜ್ಯವನ್ನು ವ್ಯಾಪಿಸಿತು. ಒರಿಸ್ಸಾದಲ್ಲಿ ನಡೆದ ಹಿಂಸಾಚಾರಕ್ಕೆ ಪ್ರತಿಸ್ಪಂದನೆಯಂತೆ ನಡೆದ ಇಲ್ಲಿನ ದಾಳಿಗೆ ಒರಿಸ್ಸಾದಂತೆ ಯಾವುದೇ ಪ್ರಚೋದನೆಯೂ ಇರಲಿಲ್ಲ.
ಒರಿಸ್ಸಾದಲ್ಲಿ ಸಂಘಪರಿವಾರಕ್ಕೆ ಸೇರಿದ ಸ್ವಾಮಿಯೊಬ್ಬರನ್ನು ಕೊಲೆಗೈದಿದ್ದು ಹಠಾತ್ ಕಾರಣವಾದರೆ ಅಲ್ಲಿನ ಪ್ರಕರಣಕ್ಕೆ ಅನೇಕ ವರ್ಷಗಳ ಇತಿಹಾಸವೇ ಇದೆ. ಬುಡಕಟ್ಟು ಸಮುದಾಯವನ್ನು ವಶೀಕರಣ ಮಾಡಿಕೊಳ್ಳಲು ನಕ್ಸಲೀಯ ಮಾವೋವಾದಿಗಳು, ಕ್ರೈಸ್ತ ಮತಾಂತರಿಗಳು ಹಾಗೂ ಸಂಘಪರಿವಾರದ ಮತಾಂತರಿಗಳು ನಿರಂತರವಾಗಿ ಯತ್ನ ನಡೆಸುತ್ತಿದ್ದಾರೆ.
ಜಾತೀಯ ಅವಮಾನ ಹಾಗೂ ಮೇಲ್ಜಾತಿಯ ಭೂಮಾಲೀಕರ ದಬ್ಬಾಳಿಕೆಯಿಂದ ನೊಂದ ಬುಡಕಟ್ಟು ಸಮುದಾಯ ಹಾಗೂ ಕೆಳಜಾತಿಗಳು ಈಗ ಎಲ್ಲರಿಗೂ ಬೇಕಾದವರಾಗಿದ್ದಾರೆ. ಭೂಮಾಲೀಕ ಪದ್ಧತಿ, ಕಠೋರ ಜಾತಿ ವ್ಯವಸ್ಥೆ ವಿರುದ್ಧ ಪ್ರಬಲ ಹೋರಾಟ ರೂಪಿಸುತ್ತಿರುವ ಮಾವೋವಾದಿಗಳು ಅಲ್ಲಿ ತಮ್ಮ ನೆಲೆ ಭದ್ರಪಡಿಸಿಕೊಂಡು ವ್ಯವಸ್ಥೆಯ ವಿರುದ್ಧ ಜನರನ್ನು ಸಂಘಟಿಸುತ್ತಿರುವುದು ಹೊಸತೇನಲ್ಲ. ಕಳೆದ 20 ವರ್ಷಗಳಿಂದಲೂ ಸಿಪಿಐ(ಪಾರ್ಟಿ ಯೂನಿಟಿ) ಹಾಗೂ ಪೀಪಲ್ಸ್ ವಾರ್ ಅಲ್ಲಿ ಬಲಿಷ್ಠ ನೆಲೆ ಹೊಂದಿದ್ದವು. ನಕ್ಸಲೀಯ ಸಂಘಟನೆಗಳು ಒಗ್ಗೂಡಿ ಸಿಪಿಐ ಮಾವೋವಾದಿ ಎಂದು ಬದಲಾದ ಮೇಲೆ ನಕ್ಸಲೀಯರು ಈ ಪ್ರದೇಶದಲ್ಲಿ ಭದ್ರ ನೆಲೆ ರೂಪಿಸಿಕೊಂಡಿದ್ದಾರೆ.
ಕಷ್ಟದಲ್ಲಿರುವವವರು, ಜಾತಿಯ ಶೋಷಣೆಗೆ ಒಳಗಾದವರು, ರೋಗಿಗಳಿಗೆ ಶುಶ್ರೂಷೆ ನೀಡುತ್ತಿರುವ ಕ್ರೈಸ್ತ ಮಿಷನರಿಗಳು ಅಲ್ಲಿ ಕೆಲಸ ಮಾಡುತ್ತಿವೆ. ಕ್ರೈಸ್ತರ ಸೇವಾಮನೋಭಾವ ಹಾಗೂ ದೇವರನ್ನು ಕಾಣಲು ಜಾತೀಯ ಬೇಧವಿಲ್ಲದೇ ಅವರ ಸಮಾನ ಗುಣವನ್ನು ಕಂಡು ಬುಡಕಟ್ಟು ಸಮುದಾಯ ಮತಾಂತರವಾಗಿರುವುದು ಸುಳ್ಳಲ್ಲ. ಆದರೆ ಆಮಿಷ ಅಥವಾ ಬಲವಂತದ ಮತಾಂತರವೆಂಬುದು ಅಲ್ಲಿ ನಡೆಯುತ್ತಿಲ್ಲ.
ಈ ಇಬ್ಬರ ಪ್ರಾಬಲ್ಯ ಕಂಡ ಸಂಘಪರಿವಾರದವರು ಅಲ್ಲಿ ನೆಲೆಯೂರಲು ಬಯಸಿದ್ದು ಸತ್ಯ. ಜಾತಿಪದ್ಧತಿ, ಭೂಮಾಲೀಕ ಪದ್ಧತಿಯನ್ನು ನೇರವಾಗಿ ಬೆಂಬಲಿಸುವ ಸಂಘಪರಿವಾರದವರು ಕ್ರೈಸ್ತರಾಗಿ ಪರಿವರ್ತಿತರಾದವರನ್ನು ಮತ್ತೆ ಹಿಂದೂಧರ್ಮಕ್ಕೆ ಕರೆತರುವ ಯತ್ನ ಮಾಡುವಲ್ಲಿ ವಿಫಲರಾಗಿರುವುದು ಅಕ್ಷರಶಃ ಸತ್ಯ. ಈ ಹಿನ್ನೆಲೆಯಲ್ಲಿ ಸಂಘರ್ಷ ಅಲ್ಲಿ ನಿರಂತರವಾಗಿ ನಡೆಯುತ್ತಿದೆ. ಪಾದ್ರಿ ಗ್ರಹಾಂ ಸ್ಟೈನ್‌ರನ್ನು ಅವರಿಬ್ಬರ ಹಸುಗೂಸುಗಳ ಸಮೇತ ಜೀವಂತ ದಹಿಸಿದ ಪೈಶಾಚಿಕ ಚಾರಿತ್ರ್ಯವನ್ನು ಸಂಘಪರಿವಾರ ಹೊಂದಿದೆ.
ತಮ್ಮ ಸಂಘಟನಾತ್ಮಕ ಚಟುವಟಿಕೆಗೆ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಸಂಘಪರಿವಾರದ ಸ್ವಾಮಿಯನ್ನು ತಾವೇ ಹತ್ಯೆ ಮಾಡಿರುವುದಾಗಿ ಮಾವೋವಾದಿಗಳು ಬಹಿರಂಗ ಹೇಳಿಕೆ ನೀಡಿದ್ದಾರೆ. ಹಾಗಿರುವಾಗ ಸ್ವಾಮಿಯನ್ನು ಕ್ರೈಸ್ತರೇ ಕೊಂದಿದ್ದಾರೆಂದು ಆಪಾದಿಸಿ ಕ್ರೈಸ್ತರ ಮೇಲೆ ನಿರಂತರ ಹಲ್ಲೆ ನಡೆಸಿ, ಸಾಮಾಜಿಕ ಕ್ಷೋಭೆಗೆ ಸಂಘಪರಿವಾರದವರು ಕಾರಣರಾದರು. ಅಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವುದು ಸಂಘಪರಿವಾರದವರಿಗೆ ಮತ್ತಷ್ಟು ಬಲತಂದುಕೊಟ್ಟಿತ್ತು.
ಸೌಹಾರ್ದ ಕರ್ನಾಟಕ:
ಒರಿಸ್ಸಾದ ಪ್ರಕರಣ, ಅಲ್ಲಿನ ಸಾಮಾಜಿಕ ಹಿನ್ನೆಲೆಯೇ ಬೇರೆ ರೀತಿಯದು. ಆದರೆ ಕರ್ನಾಟಕದ ಪರಿಸ್ಥಿತಿ ಹಾಗಿಲ್ಲ. ಇಲ್ಲಿನ ಕ್ರೆಸ್ತ ಮಿಷನರಿಗಳಿಗೆ ತನ್ನದೇ ಆದ ಇತಿಹಾಸವಿದೆ. ಕನ್ನಡದ ಅರಿವು ಮೂಡಿಸಿದ ಅನೇಕ ಮಿಷನರಿಗಳು ಇಂದಿಗೂ ಆದರ್ಶ ಪ್ರಾಯರಾಗಿದ್ದಾರೆ.
ಕನ್ನಡದ ಮೊದಲ ಪತ್ರಿಕೆ ಎನಿಸಿದ ಮಂಗಳೂರು ಸಮಾಚಾರ ಹಿಂದೆ ಮಿಷನರಿಗಳ ಪ್ರೇರಣೆಯಿದೆ. ಕನ್ನಡ-ಇಂಗ್ಲಿಷ್ ನಿಘಂಟು ನೀಡಿದ ರೆವರೆಂಡ್ ಕಿಟೆಲ್‌ರಿಂದ ಹಿಡಿದು ಇತ್ತೀಚೆಗೆ ಕನ್ನಡ ನಿಘಂಟು ನೀಡಿದ ಮಂಗಳೂರಿನವರೇ ಆದ ಪ್ರಶಾಂತ ಮಾಡ್ತಾರವರೆಗೆ ಉಜ್ವಲ ಕನ್ನಡ ಪ್ರೇಮದ ಪರಂಪರೆಯಿದೆ.
ಹಾಗೆಯೇ ಬಿ.ಎಲ್. ರೈಸ್‌ರಂತಹ ಮಹಾನುಭಾವರು ತನ್ನದೇ ಕೊಡುಗೆ ನೀಡಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಯುವ ಲೇಖಕರ ಪ್ರೋತ್ಸಾಹಕ್ಕೆ, ಅತ್ಯುತ್ತಮ ಕನ್ನಡ ಪುಸ್ತಕ ಪ್ರಕಟಣೆಗೆ ನೀಡಿದ ಕೊಡುಗೆ ಕನ್ನಡದ್ದೇ ಆದ ಒಂದು ವಿಶ್ವವಿದ್ಯಾನಿಲಯ ನೀಡುವ ಕೊಡುಗೆಗೆ ಸಮನಾದುದು.
ಕ್ರೈಸ್ತರು ರಾಜ್ಯದ ನಾನಾಭಾಗಗಳಲ್ಲಿ ನಡೆಸುವ ಶಾಲೆಗಳಂತೂ ನಾಡಿನ ಶೈಕ್ಷಣಿಕ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿವೆ. ಇಂಗ್ಲಿಷ್ ಮೀಡಿಯಂ ಮಾತ್ರವಲ್ಲದೇ ಕನ್ನಡ ಮೀಡಿಯಂ ಶಾಲೆಗಳನ್ನು ಆರಂಭಿಸಿ ತನ್ನದೇ ಆದ ಪಾಲನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿವೆ. ಶೇ.2 ರಷ್ಟಿರುವ ಕ್ರೈಸ್ತರು ತಮ್ಮ ಮಕ್ಕಳಿಗೆ ಮಾತ್ರ ಶಾಲೆ ನಡೆಸಿದ್ದರೆ ಶಾಲೆಯಲ್ಲಿನ ಮಕ್ಕಳ ಸಂಖ್ಯೆ ಒಟ್ಟಾರೆ 50-100ನ್ನೂ ದಾಟುತ್ತಿರಲಿಲ್ಲ. ಮಂಗಳೂರು, ಬೆಂಗಳೂರು, ಉಡುಪಿ, ಶಿವಮೊಗ್ಗ, ಮೈಸೂರು ಹೀಗೆ ರಾಜ್ಯದ ನಾನಾದಿಕ್ಕುಗಳಲ್ಲಿ ಕ್ರೈಸ್ತರ ಶಾಲಾ ಕಾಲೇಜುಗಳಲ್ಲಿ ಕನಿಷ್ಟವೆಂದರೂ 2-3 ಸಾವಿರ ವಿದ್ಯಾರ್ಥಿಗಳ ಸಂಖ್ಯೆ ಇರುತ್ತದೆ. 40-50 ವರ್ಷಗಳಿಂದ ನಡೆಯುತ್ತಿರುವ ಶಾಲೆಯಲ್ಲಿ ಮತಾಂತರ ಮಾಡುವುದೇ ಆಗಿದ್ದರೆ ಇಂದು ಒಬ್ಬನೇ ಒಬ್ಬ ಮಧ್ಯವಯಸ್ಕ ಹಿಂದು ಕಾಣಸಿಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಕ್ರೈಸ್ತ ಶಾಲೆಗಳು ಜಾತ್ಯತೀತ ಮನೋಭಾವ ಹಾಗೂ ಧೋರಣೆಯಿಂದ ಕಾರ್ಯನಿರ್ವಹಿಸುತ್ತಿವೆ. ಎಲ್ಲಿಯೂ ಮತಾಂತರದ ಚಟುವಟಿಕೆಗಳಾಗಲಿ, ಹಿಂದೂ ಧರ್ಮದ ಅವಹೇಳನ ಮಾಡಿರುವುದಾಗಲಿ ಕಾಣಬರುವುದಿಲ್ಲ. ಆ ರೀತಿಯ ದೂರುಗಳು ದಾಖಲಾಗಿಲ್ಲ.
ಇನ್ನು ಆಸ್ಪತ್ರೆ ಸಂಗತಿಯಂತೂ ಹೇಳುವುದೇ ಬೇಡ. ಸಮಾಜ ನಿಕೃಷ್ಟವಾಗಿ ಕಾಣುವ, ತಮ್ಮವರೇ ತಮಗೆ ಬೇಡವಾಗಿರುವಾಗ ಅಂತಹವರನ್ನು ಆಸ್ಪತ್ರೆ, ಅನಾಥಾಲಯದಲ್ಲಿ ಇಟ್ಟುಕೊಂಡು ಶುಶ್ರೂಷೆ, ಆರೋಗ್ಯ ಚಿಕಿತ್ಸೆ ನೋಡಿಕೊಳ್ಳುವ ಸಾರ್ಥಕ ಕೆಲಸ ಮಾಡುತ್ತಿವೆ.
ಹಿಂದೂಗಳೆಲ್ಲಾ ಒಂದು ಎನ್ನುವ ಸಂಘಪರಿವಾರದವರು ಹಿಂದು ಸಮಾಜದ ದುರ್ಬಲರು, ಅನಾಥರು, ವೃದ್ಧರು, ವಿವಿಧ ರೋಗಿಗಳಿಂದ ಬಳಲುತ್ತಿರುವವರಿಗೆ ಯಾಕೆ ಚಿಕಿತ್ಸೆ ನೀಡಿಲ್ಲ. ರಾಜ್ಯದ ಬಹುತೇಕ ಕಡೆ ಕ್ರೈಸ್ತರು ನಡೆಸುತ್ತಿರುವ ಆಸ್ಪತ್ರೆಗಳು ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದು, ರೋಗಿಗಳನ್ನು ಕಾಪಾಡುತ್ತಿವೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದವರನ್ನೆಲ್ಲಾ ಮತಾಂತರ ಮಾಡಿದ್ದರೆ ಅವರೆಲ್ಲಾ ಇಲ್ಲವೆನ್ನುತ್ತಿದ್ದರೆ. ಕ್ರೈಸ್ತರಾದರೆ ಮಾತ್ರ ಚಿಕಿತ್ಸೆ ಎಂದು ಷರತ್ತು ಒಡ್ಡಿದ್ದರೆ ಕ್ರೈಸ್ತರ ಜನಸಂಖ್ಯೆ ಕನಿಷ್ಠವೆಂದರೂ ಶೇ.20 ರಷ್ಟು ದಾಟುತ್ತಿತ್ತು. ಮತಾಂತರ ನಡೆಯುತ್ತಿದೆ ಎಂದು ಸಂಘಪರಿವಾರ ಬೊಬ್ಬೆ ಹೊಡೆಯುತ್ತಿದ್ದರೂ ಕ್ರೈಸ್ತರ ಜನಸಂಖ್ಯೆ ಶೇಕಡಾವಾರು ಪ್ರಮಾಣದಲ್ಲಿ ಇಳಿಮುಖವಾಗಿದೆ. ಬ್ರಿಟಿಷರಿದ್ದಾಗ ಶೇ.2.67ರಷ್ಟಿದ್ದ ಕ್ರೈಸ್ತರ ಪ್ರಮಾಣ 2001ರ ಜನಗಣತಿ ಪ್ರಕಾರ ಶೇ.2.42 ಆಗಿದೆ. ಅಲ್ಲಿಗೆ 0.23ರಷ್ಟು ಇಳಿಮುಖವಾಗಿದೆ.
ದಾಳಿ ಹಿಂದೆ?
ಇಷ್ಟೆಲ್ಲಾ ಸತ್ಯಗಳು ಮುಖಕ್ಕೆ ಹೊಡೆಯುವಂತೆ ಇದ್ದರೂ ಕ್ರೈಸ್ತರ ಮೇಲೆ ಹಲ್ಲೆ ನಡೆಸುವ ಕಾರಣವಾದರೂ ಏನಿತ್ತು. ಮೇಲ್ನೋಟಕ್ಕೆ ಇದು ಒರಿಸ್ಸಾ ಹಲ್ಲೆಯ ಪ್ರತಿಧ್ವನಿ ಎಂದೆನಿಸಿದರು ಸತ್ಯ ಬೇರೆಯೇ ಇದೆ.
ಸಂಘಪರಿವಾರ ರಾಜಕೀಯ ಮುಖವೇ ಆಗಿರುವ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ ತನ್ನಿಂತಾನೇ ರಾಜ್ಯದ ಜನ ಆಡಳಿತ ಪಕ್ಷದ ವಿರುದ್ಧವಾದ ನೆಲೆ ಹೊಂದಿರುತ್ತಾರೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರದೇ ಇದ್ದಾಗ, ನಮ್ಮ ಮನೆಮುಂದಿನ ರಸ್ತೆ, ಚರಂಡಿ ಸ್ವಚ್ಛವಾಗದೇ ಇದ್ದಾಗ, ಕುಡಿಯಲು ನೀರು ಸಿಗದೇ ಇದ್ದಾಗ, ಕೈಗೆ ಬರುವ ಸಂಬಳದಲ್ಲಿ ಜೀವನ ನಡೆಸುವುದು ದುಸ್ತರವಾದಾಗ ಸಹಜವಾಗ ಜನ ಆಡಳಿತಾರೂಢ ಪಕ್ಷದ ವಿರುದ್ಧ ಸೆಟೆದು ನಿಲ್ಲುತ್ತಾರೆ. ಅದು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ಕಮ್ಯನಿಸ್ಟರೇ ಇರಲಿ. ಜನರಿಗೆ ಆಳುವ ಪಕ್ಷದ ಸಿದ್ಧಾಂತ ಮುಖ್ಯವಾಗಿರುವುದಿಲ್ಲ. ತಾವು ತಿನ್ನುವ ಕೂಳಿಗೆ ಸಂತ್ರಸ್ತಪಡಬೇಕಾದಾಗ, ರಸ್ತೆಯಲ್ಲಿ ಓಡಾಡುವ ಸ್ಥಿತಿಯಿಲ್ಲದೇ ಇದ್ದಾಗ ಅಧಿಕಾರದಲ್ಲಿರುವ ಪಕ್ಷದ ಬಗ್ಗೆ ಅಸಮಾಧಾನ, ಸಿಟ್ಟು, ಆಕ್ರೋಶ ತೋರ್ಪಡಿಸುತ್ತಾರೆ.
ಅಧಿಕಾರಕ್ಕೇರಿದ ನೂರು ದಿನಗಳಲ್ಲಿ ಕೇವಲ ಬೊಗಳೆ ಬಿಡುತ್ತಾ ಸಾಗಿದ ಬಿಜೆಪಿ ಸರ್ಕಾರದ ಬಗ್ಗೆ ಸಣ್ಣ ಪ್ರಮಾಣದ ಅಸಮಾಧಾನದ ಹೊಗೆ ಏಳುತ್ತಿದೆ. ಗಣಿದೊರೆಗಳ ಕೈಯಲ್ಲಿ ಸರ್ಕಾರ ಕುಣಿಯುತ್ತಿರುವುದು ಜನರಲ್ಲಿ ಅಸಹನೆ ಹುಟ್ಟಿಸಿದೆ. ನೈತಿಕತೆ, ಸೈದ್ಧಾಂತಿಕತೆ ಮೀರಿ ಅನ್ಯ ಪಕ್ಷದವರನ್ನು ಕರೆತರುತ್ತಿರುವುದು ಅಸಹ್ಯ ಹುಟ್ಟಿಸಿದೆ. ಇದು ಬಿಜೆಪಿ ನಿಜಬಣ್ಣವನ್ನು ಬಯಲುಗೊಳಿಸಿದೆ. ಬಿಜೆಪಿ ನಾಯಕರ ಜನಪ್ರಿಯತೆ ಕಡಿಮೆಯಾಗಿ ಆಕ್ರೋಶ ಮಡುಗಟ್ಟತೊಡಗಿದೆ.
ಜನರ ಆಕ್ರೋಶದ ದಿಕ್ಕು, ಗಮನವನ್ನು ಬೇರೆಡೆಗೆ ಸೆಳೆಯಲು ಆಳುವವರ್ಗಗಳು ಈ ರೀತಿಯ ತಂತ್ರವನ್ನು ಹೂಡುವುದು ಇತಿಹಾಸದಲ್ಲಿ ಇದೇ ಮೊದಲಲ್ಲ. ವಿಶ್ವದ ಯಾವುದೇ ದೇಶದ ಚರಿತ್ರೆಯಲ್ಲಿ ಜನರ ಹೋರಾಟದ ದಿಕ್ಕು ತಪ್ಪಿಸಲು, ವ್ಯವಸ್ಥೆಯ ವಿರುದ್ಧದ ಅಸಹನೆಯ ಸಿಟ್ಟನ್ನು ಹಾದಿ ತಪ್ಪಿಸಲು ಇಂತಹ ಉಪಾಯಗಳನ್ನು ವ್ಯವಸ್ಥೆ ಹುಟ್ಟು ಹಾಕುತ್ತಾ ಬಂದಿದೆ.
ಕ್ರೈಸ್ತರ ಮೇಲೆ ಸಂಘಪರಿವಾರ ಕೃಪಾಪೋಷಿತ ಹಲ್ಲೆ ಇದೇ ರೀತಿಯದು. ಬಿಜೆಪಿ ಬಗೆಗಿನ ಅಸಮಾಧಾನವನ್ನು ಕ್ರೈಸ್ತರ ಮೇಲೆ ತಿರುಗಿಸುವಂತೆ ಮಾಡುದರ ಪ್ರಚೋದನೆ ಇದು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವದರಿಂದ ಸಂಘಪರಿವಾರದ ಕೃತ್ಯಗಳನ್ನು ಪೊಲೀಸರು ಕೈಕಟ್ಟಿ ಸುಮ್ಮನೇ ನೋಡುತ್ತಾ ನಿಂತರು. ಕೆಲವೆಡೆ ಪರೋಕ್ಷವಾಗಿ ಬೆಂಬಲಿಸಿದರು. ಹಲ್ಲೆ ನಡೆಯುತ್ತಿದ್ದಾಗಲೂ ಅದನ್ನು ತಡೆಯಲು ವ್ಯಾಪಕ ಬಂದೋಬಸ್ತ್ ಕ್ರಮ ಕೈಗೊಳ್ಳಲೇ ಇಲ್ಲ.
ಪ್ರೆಸ್ಸರ್ ಕುಕ್ಕರ್ ಸಿಡಿಯುವುದನ್ನು ತಪ್ಪಿಸಲು ಸೇಫ್ಟಿವಾಲ್ ಫಿಕ್ಸ್‌ಮಾಡಿರುತ್ತಾರೆ. ಆಳುವವರ್ಗಗಳು ಕ್ರೈಸ್ತರು, ಮುಸ್ಲಿಮರ ಮೇಲೆ ಹಲ್ಲೆಯಂತ ಸೇಫ್ಟಿವಾಲ್‌ಗಳನ್ನು ಬಳಸುತ್ತಾರೆಂಬುದಕ್ಕೆ ಇದು ಉತ್ತಮ ನಿದರ್ಶನ.
ನಾಚಿಕೆಗೇಡು:
ಸಂಘಪರಿವಾರ ಚರ್ಚ್‌ಗಳ ಮೇಲೆ ಮಾತ್ರ ಹಲ್ಲೆ ನಡೆಸಲಿಲ್ಲ. ಪ್ರಾರ್ಥನೆಗಾಗಿ ಬಂದಿದ್ದ ಗರ್ಭಿಣಿಯ ಮೇಲೆ ಹಲ್ಲೆ ನಡೆಸಿತು. ಮನೆಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ದಂಪತಿಗಳನ್ನು ಮಾರಾಮಾರಿ ಥಳಿಸಿತು. ಮಹಿಳೆಯರು, ಮಕ್ಕಳೆನ್ನದೇ ಎಲ್ಲರ ಮೇಲೂ ದಾಳಿ ಮಾಡಿತು. ಇಷ್ಟೆಲ್ಲಾ ಆದರೂ ಮಹತ್ವದ ಹೊಣೆಗಾರಿಕೆ ಹೊಂದಿದ್ದ ರಾಜ್ಯದ ಮುಖ್ಯಮಂತ್ರಿ( ಅವರೇ ಹೇಳಿಕೊಂಡಂತೆ 6 ಕೋಟಿ ಕನ್ನಡಿಗರ ಮುಖ್ಯಮಂತ್ರಿ) ಯಡಿಯೂರಪ್ಪ ಹಾಗೂ ಗೃಹಸಚಿವ ವಿ.ಎಸ್. ಆಚಾರ್ಯ, ಗಲಭೆ ನಿಯಂತ್ರಿಸುವ ಬದಲಿಗೆ, ಮತಾಂತರ ನಡೆಯುತ್ತಿರುವುದೇ ಹಲ್ಲೆಗೆ ಕಾರಣ ಎಂದು ಪ್ರಕರಣವನ್ನು ವಿಮರ್ಶೆ ಮಾಡಲು ತೊಡಗಿದರು. ಹಲ್ಲೆಗೆ ಕಾರಣ ಹುಡುಕತೊಡಗಿದರು.
ಇದಕ್ಕಿಂತ ನಾಚಿಕೆಗೇಡಿನ ಪ್ರಕರಣ ಇನ್ನೊಂದು ಇರಲಾರದು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಘಟನೆಗೆ ಕಾರಣ ಹುಡುಕುವುದಲ್ಲ. ಅನ್ಯಾಯ, ದೌರ್ಜನ್ಯ ನಡೆದಾಗ ಅದನ್ನು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು. ಘಟನೆಯ ವಿಶ್ಲೇಷಣೆಯನ್ನು ಮಾಡಲು ಸಮಾಜಶಾಸ್ತ್ರಜ್ಞರು, ಮನಃ ಶಾಸ್ತ್ರಜ್ಞರು ಇರುತ್ತಾರೆ. ಅಥವಾ ಪೊಲೀಸ್ ಇಲಾಖೆ ಇರುತ್ತದೆ. ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಮಾತನಾಡುವುದನ್ನು ಕೇಳಿದ್ದರೆ ಇವರಿಬ್ಬರು ಸಂಘಪರಿವಾರದ ದುಷ್ಕೃತ್ಯದ ಹಿಂದೆ ನಿಂತಿರುವುದು ಸ್ಪಷ್ಟವಾಗುತ್ತಿತ್ತು.
ಮತಾಂತರ:
ಹಾಗಂತ ದೇಶದಲ್ಲಿ ಮತಾಂತರ ಹೊಸದಲ್ಲ. ಮಾನವ ಚರಿತ್ರೆ ಆರಂಭವಾದ ಕಾಲದಿಂದಲೂ ಮತಾಂತರ ನಡೆದೇ ಇದೆ. ಬುಡಕಟ್ಟು ಸಮುದಾಯವನ್ನು ವೈದಿಕ ಧರ್ಮಕ್ಕೆ ಮತಾಂತರಿರುವ ಮೂಲಕ ಆರಂಭದಲ್ಲಿ ಆರ್ಯರು ವೈದಿಕ ಮತವನ್ನು ಪ್ರತಿಷ್ಠಾಪಿಸಿದರು.ವೈದಿಕ ಮತ ಅಂಧಾಚರಣೆಗಳ ವಿರುದ್ಧ ಹುಟ್ಟಿಕೊಂಡ ಬೌದ್ಧ ಹಾಗೂ ಜೈನ ಮತಗಳು ಮತಾಂತರವನ್ನು ನಿರ್ಬಿಡೆಯಿಂದ ಮಾಡಿದವು ಅಥವಾ ಜನರೇ ಮನಸೋತು ಮತಾಂತರಗೊಂಡರು. ಮತ್ತೆ ಬಂದ ವೈದಿಕ ಮತಾನುಯಾಯಿಗಳಾದ ಶಂಕರಚಾರ್ಯ, ಮಧ್ವಾಚಾರ್ಯರು ಬೌದ್ಧ, ಜೈನರನ್ನು ವಾಪಸ್ ಕರೆತಂದರು. ಭಾರತದಲ್ಲೇ ಜನಿಸಿದ ಬೌದ್ಧಮತ ಇಂದು ಕಣ್ಮರೆಯಾಗಲು ವೈದಿಕ ಮತಾನುಯಾಯಿಗಳೇ ಕಾರಣರಾದರು.
ಮತ್ತೆ ವೈದಿಕ ಮತ ವಿರೋಧಿಸಿ ಅಸ್ತಿತ್ವಕ್ಕೆ ಬಂದ ವೀರಶೈವ ಧರ್ಮ ಮತಾಂತರ ಮಾಡಿತು. ನೂರಾರು ಕೆಳಜಾತಿಗಳು ಲಿಂಗಾಯಿತರಾಗಿ ಪರಿವರ್ತಿತರಾದರು. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರ ತಲೆಮಾರಿನವರು ಹಿಂದೆಂದೋ ಹಿಂದೂ ಧರ್ಮದಿಂದ ವೀರಶೈವ ಧರ್ಮಕ್ಕೆ ಮತಾಂತರಗೊಂಡವರೆ.
ಒಂದು ವೇಳೆ ನೂರಾರು ವರ್ಷಗಳ ಈ ದೇಶವನ್ನು ಆಳಿದ ಮುಸ್ಲಿಂ ಹಾಗೂ ಕ್ರೈಸ್ತ ರಾಜರು ಮತಾಂತರವನ್ನು ಮಾಡಿದ್ದೇ ಆಗಿದ್ದರೆ ಭಾರತದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರು ಹಿಂದುಗಳಾಗಿ ಉಳಿಯುತ್ತಿರಲಿಲ್ಲ. ಮುಸ್ಲಿಮರ ಸಂಖ್ಯೆ ಶೇ.14 ಹಾಗೂ ಕ್ರೈಸ್ತರ ಸಂಖ್ಯೆ ಶೇ.2.4ರಷ್ಟು ಇರುತ್ತಿರಲಿಲ್ಲ. ಈ ಸತ್ಯ ಜನರಿಗೆ ಅರ್ಥವಾಗಬೇಕಾಗಿದೆ. ಮತಾಂತರ ನಡೆಯುತ್ತಿರುವುದು ಶುದ್ಧ ಸುಳ್ಳಾಗಿದೆ. ಅಸ್ತಿತ್ವವನ್ನು ಮರುಸ್ಥಾಪಿಸಿಕೊಳ್ಳಲು, ವ್ಯವಸ್ಥೆ ವಿರುದ್ಧದ ಆಕ್ರೋಶವನ್ನು ಶಮನಗೊಳಿಸಲು ಸಂಘಪರಿವಾರ ನಡೆಸಿದ ಹುನ್ನಾರ ಇದೆಂಬುದು ಸ್ಪಷ್ಟವಾಗಬೇಕಾಗಿದೆ.
ಭಯ ಉತ್ಪಾದನೆ: ಆ ಮುಖ ಈ ಮುಖ
ಭಯ ಉತ್ಪಾದನೆ: ಆ ಮುಖ ಈ ಮುಖ
ನಿಮ್ಮ ಮನೆಯ
ಒಂದು ಕೋಣೆಯಲ್ಲಿ
ಬೆಂಕಿ ಬಿದ್ದಿದ್ದರೆ
ಮತ್ತೊಂದು ಕೋಣೆಯಲ್ಲಿ
ಸುಮ್ಮನೆ ಮಲಗಿ
ನೆಮ್ಮದಿಯಿಂದ ನಿದ್ದೆ ಹೋಗಬಲ್ಲಿರಾ?
ಭಯೋತ್ಪಾದನೆಯೆಂಬುದು ದೇಶದ ನರನಾಡಿಗಳನ್ನು ವ್ಯಾಪಿಸುತ್ತಿರುವ ಈ ವಿಕೃತ ಹೊತ್ತಿನಲ್ಲಿ ಈ ಪ್ರಶ್ನೆಗೆ ರಾಜಕಾರಣಿಗಳು ಮತ್ತು ಭಯೋತ್ಪಾದಕರ ಹೊರತಾಗಿ ಮತ್ತಾರೂ `ಹೋಗಬಲ್ಲೆವು' ಎಂದು ಯಾರೂ ಹೇಳಲಾರರು.
ಎಲ್ಲಿ ಯಾವಾಗ ಸ್ಪೋಟವಾಗುತ್ತದೋ ನಮ್ಮ ಕಾಲುಕೈಗಳು ಹೊಂದಿಸಲು ಸಿಗದಂತೆ ಚೂರುಪಾರಾಗಿ ಛಿದ್ರಗೊಂಡು ಹರಿದು ಹಾರಿಹೋಗಬಲ್ಲವೋ ಎಂಬ ಭಯದಲ್ಲಿಯೇ ಎಲ್ಲರೂ ದಿನದೂಡಬೇಕಾದ ಭೀತಿಯಲ್ಲಿ ನಾವಿದ್ದೇವೆ. ಇದನ್ನು ನಿಗ್ರಹಿಸಬಲ್ಲ ಶಕ್ತಿಯುಳ್ಳ ರಾಜಕಾರಣಿಗಳು ಆರೋಪ-ಪ್ರತ್ಯಾರೋಪ, ಸಮರ್ಥನೆ-ನಿರಾಕರಣೆ, ದೂಷಣೆ-ಸ್ಪಷ್ಟನೆಯಲ್ಲಿಯೇ ಇಡೀ ಕಾಲವನ್ನು ವ್ಯಯಿಸುತ್ತಿದ್ದಾರೆ. ಭಯೋತ್ಪಾದನೆಯೆಂಬುದು ನಮ್ಮೆಲ್ಲರ ಮೇಲೆ ನಿರಂತರ ಚಾಚಿರುವ ಕರಾಳ ನೆರಳು ಎಂದು ಯಾರಿಗೂ ಅನ್ನಿಸುತ್ತಲೇ ಇಲ್ಲ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾವ ಸಮುದಾಯದ ಓಟುಗಿಟ್ಟಿಸಲು `ಯಾವ ಮಾತು'ಗಳು ಎಷ್ಟರಮಟ್ಟಿಗೆ ಸಫಲವಾಗಬಹುದೆಂಬ ಅಕ್ಷರ ವ್ಯಭಿಚಾರದಲ್ಲಿಯೇ ಎಲ್ಲರೂ ತೊಡಗಿದ್ದಾರೆ. ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟರು, ಎಸ್ಪಿ ಹೀಗೆ ಯಾವುದೇ ಪಕ್ಷಗಳೂ ಇದರಿಂದ ಹೊರತಾಗಿಲ್ಲ. ಎಲ್ಲರೂ `ಮತಬ್ಯಾಂಕ್'ನತ್ತಲೇ ಕಣ್ಣಿಟ್ಟು, ಬಾಯ್ತೆರೆಯುತ್ತಿದ್ದಾರೆ.
`ಭಾರತವೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿಲ್ಲ. ಭಯೋತ್ಪಾದಕರು ಭಾರತದ ವಿರುದ್ಧ ಹೋರಾಡುತ್ತಿದ್ದಾರೆ. ರಾಜಕಾರಣಿಗಳು ಭಯೋತ್ಪಾದಕರ ವಿರುದ್ಧ ಹೋರಾಡುತ್ತಿಲ್ಲ. ಅವರು ಪರಸ್ಪರ ಕಚ್ಚಾಡುತ್ತಿದ್ದಾರೆ. ಅವರು ಜನರ ಭದ್ರತೆ ಬಗ್ಗೆ ಚಿಂತಾಕ್ರಾಂತರಾಗಿಲ್ಲ. ಅವರ ಚಿಂತೆಯೇನಿದ್ದರೂ ಜನರ ಓಟಿನ ಮೇಲೆ. ಭಯೋತ್ಪಾದನೆಯ ವಿರುದ್ಧ ಅವರ ಮಾತಿನ ಸಮರ ಏನಿದ್ದರೂ ಕೇವಲ ಮತಗಳಿಕೆಗಷ್ಟೇ ಸೀಮಿತ'( ಔಟ್‌ಲುಕ್‌ನಲ್ಲಿ ರಾಜೇಂದರ್ ಪುರಿ).
ಬದಲಾದ ಭಯೋತ್ಪಾದನೆ:
ಗುಜರಾತ್ ಗಲಭೆ ನಂತರ ಭಯೋತ್ಪಾದನೆಯ ವ್ಯಾಖ್ಯೆಗಳೇ ಬದಲಾಗಿವೆ. ಸಿಮಿ, ಇಂಡಿಯನ್ ಮುಜಾಹಿದಿನ್ ಸಂಘಟನೆಗಳ ಹೆಸರು ಬಾಂಬ್‌ಸ್ಪೋಟ ನಡೆದಾಗೆಲ್ಲಾ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಿದೆ. ಅದರೆ ಜತೆಗೆ ಸಂಘಪರಿವಾರ ಪ್ರೇಷಿತ ಕೆಲವು ಸಂಘಟನೆಗಳು ಆತ್ಮಹತ್ಯಾ ದಳದ ರಚನೆಗೆ ಮುಂದಾಗುತ್ತಾ ಕ್ರೈಸ್ತರ ಮೇಲಿನ ದಾಳಿಗೆ ತಾವೇ ಬಾಧ್ಯಸ್ಥರು ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿವೆ. ವಿಧ್ವಂಸಕ ಕೃತ್ಯಗಳ ಮೇಲಾಟದಲ್ಲಿ ಸತ್ಯವನ್ನು ಬಹಿರಂಗ ಪಡಿಸಬೇಕಾದ ಪೊಲೀಸರು ಯಾರ ಮೇಲೋ ಗೂಬೆ ಕೂರಿಸಿ, ತಮ್ಮ ಜವಾಬ್ದಾರಿಯನ್ನು ಮುಗಿಸಿಬಿಡುವ ಆತುರ ತೋರುತ್ತಿದ್ದಾರೆ.
2-3 ದಶಕಗಳ ಹಿಂದೆ ಭಯೋತ್ಪಾದನೆ ಎಂದರೆ ಅದು ತಮಿಳು ಉಗ್ರರೋ, ಅಸ್ಸಾಂನ ಉಲ್ಫಾ ಉಗ್ರರೋ, ಪಂಜಾಬಿನ ಖಾಲಿಸ್ತಾನ್ ಉಗ್ರರೋ, ನಾಗಾ ಬಂಡುಕೋರರೋ ಅಥವಾ ನಕ್ಸಲ್ ಉಗ್ರರ ಕೃತ್ಯವೆಂದೇ ಪರಿಭಾವಿಸುವ ಕಾಲವೊಂದಿತ್ತು. ಆದರೀಗ ಕಾಲ ಬದಲಾಗಿದೆ. ಇಂದು ದೇಶದುದ್ದಕ್ಕೂ ಎಲ್ಲೇ ಬಾಂಬ್‌ಸ್ಪೋಟ, ವಿಚ್ಛಿದ್ರಕಾರಿ ಘಟನೆ ನಡೆದಾಗ ಅದರ ಹಿಂದೆ ಮುಸ್ಲಿಂ ಬಣ್ಣವುಳ್ಳ ಸಂಘಟನೆಯೊಂದರ ಹೆಸರು ತಳುಕು ಹಾಕಿಕೊಂಡಿರುತ್ತದೆ. ಪೊಲೀಸ್ ವೈಫಲ್ಯವೆಂಬ ಆರೋಪ ತಪ್ಪಿಸಿಕೊಳ್ಳಲು ನಡೆಸಲಾಗುವ ಬಂಧನ ಎಂದಿನ ಸರಳೀಕೃತ ಮಾದರಿಯಲ್ಲಿಯೇ ನಡೆಯುತ್ತಿರುತ್ತದೆ. ಅದರಿಂದ ಮತ್ತೊಂದು ದುರಂತ ಘಟನೆ ಅಥವಾ ವಿಧ್ವಂಸಕ ಕೃತ್ಯ ನಿಲ್ಲುವುದಿಲ್ಲ. ದೇಶದ ಇನ್ನೊಂದು ಮೂಲೆಯಲ್ಲಿ ಅದೇ ಮಾದರಿಯ ಘಟನೆಗಳು ನಡೆದಾಗ ಮತ್ತೆ ಅದೇ ರೀತಿಯ ಬಂಧನಗಳು, ವರ್ಣರಂಜಿತ ಹೇಳಿಕೆಗಳು, ಆಕರ್ಷಕ ಫೋಟೋಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತವೆ. ವಿಸ್ಪೋಟಗಳಿಗೆ ನಿಲುಗಡೆ ಮಾತ್ರ ಕಾಣುವುದಿಲ್ಲ.
ಅಧಿಕಾರರೂಢ ಗೃಹಮಂತ್ರಿಗಳ ರಾಜೀನಾಮೆಗೆ ಪ್ರತಿಪಕ್ಷಗಳ ಮುಖಂಡರು ಆಗ್ರಹಿಸುತ್ತಾರೆ. ಗೃಹಮಂತ್ರಿಗಳು ಪೊಲೀಸ್, ಬೇಹುಗಾರಿಕೆ ಬಲಿಷ್ಠವಾಗಿರುವ ಬಗ್ಗೆ ಸಮರ್ಥನೆ ನೀಡುತ್ತಾರೆ. ಅದೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ವೈಫಲ್ಯ-ಸಾಫಲ್ಯಗಳ ಚರ್ಚೆಯಲ್ಲಿ ದಿನದೂಡುತ್ತಿರುವಾಗಲೇ ಮತ್ತೊಂದು ಬಾಂಬ್‌ಸ್ಪೋಟ ತಲ್ಲಣ ಮೂಡಿಸಿ, ಮತ್ತೊಂದಿಷ್ಟು ಅಮಾಯಕರನ್ನು ಬಲಿತೆಗೆದುಕೊಂಡು ರಕ್ತದೋಕುಳಿ ಹರಿಸಿರುತ್ತದೆ.
ಪೋಟಾ, ಟಾಡಾದಂತಹ ಕಠಿಣ ಕಾಯ್ದೆಗಳ ಅಗತ್ಯವನ್ನು ಪ್ರತಿಪಾದಿಸಲಾಗುತ್ತದೆ. ಇರುವ ಕಾಯ್ದೆಗಳೇ ಸಮರ್ಪಕ ಜಾರಿಯಾಗದೇ ಇರುವಾಗ ಹೊಸ ಕಾಯ್ದೆಗಳನ್ನು ತಂದು ಮುಗ್ಧರ ಬಂಧನಕ್ಕೆ, ಅಮಾಯಕರ ಮೇಲೆ ದೌರ್ಜನ್ಯಕ್ಕೆ ಅವಕಾಶ ಕೊಡುವಂತೆ ಒತ್ತಾಯಿಸಲಾಗುತ್ತದೆ. ಇರುವ ಕಾಯ್ದೆಗಳಲ್ಲಿಯೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವಾಗ ಹೊಸ ಕಾಯ್ದೆಗಳು ಯಾಕೆ ಬೇಕೆಂದು ಯಾರೂ ಪ್ರಶ್ನೆ ಕೇಳುವುದಿಲ್ಲ. ಕರ್ನಾಟಕ ತರಬೇಕೆಂದಿರುವ ಕೋಕಾ ಕಾಯ್ದೆ ವಿರೋಧಿಸುತ್ತಿರುವ ಕೇಂದ್ರದ ಕಾಂಗ್ರೆಸ್ ಸರ್ಕಾರ, ಮಹಾರಾಷ್ಟ್ರದಲ್ಲಿ ಅಂಥದೇ ಕಾಯ್ದೆ ತರಲು ಸಮ್ಮತಿ ಸೂಚಿಸುತ್ತದೆ. ಟಾಡಾ ಇದ್ದಾಗ ಆಗಿರುವ ಅನಾಹುತಗಳ ಅರಿವಿದ್ದರೂ ಬಿಜೆಪಿಯ ರಾಷ್ಟ್ರೀಯ ಮುಖಂಡರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಟಾಡಾ ಮರುಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ.
ಭಯೋತ್ಪಾದನೆಯ ಮೂಲ ಬೇರುಗಳನ್ನು ಕಿತ್ತೊಗೆಯದೇ ಅಲಂಕಾರಿಕ ಗಿಡಗಳ ರೆಂಬೆಕೊಂಬೆ ಕತ್ತರಿಸುವ ರೀತಿಯಲ್ಲಿ `ಕಟಿಂಗ್' ಮಾಡಿದರೆ ಏನು ಫಲ?
ಗುಡ್ಡ ಅಗೆದು...!
ಗುಡ್ಡ ಅಗೆದು ಇಲಿಯನ್ನೂ ಹಿಡಿಯಲಿಲ್ಲ ಎಂಬ ಕತೆ ಪೊಲೀಸರು, ಭಯೋತ್ಪಾದನಾ ನಿಗ್ರಹ ದಳಗಳದ್ದಾಗಿದೆ. `ಅಹಮದಾಬಾದ್ ಸರಣಿ ಬಾಂಬ್ ಸ್ಪೋಟದ ಮಾಸ್ಟರ್ ಮೈಂಡ್ ಬಂಧನ' ಎಂಬ ಸುದ್ದಿ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಬೆನ್ನಲ್ಲೇ ದೆಹಲಿಯಲ್ಲಿ ಸರಣಿ ಸ್ಪೋಟವಾಗಿರುತ್ತದೆ. ಅದರ ಮಗ್ಗುಲಲ್ಲೇ ಲೋಕಸಭೆ ಪ್ರತಿಪಕ್ಷ ನಾಯಕ ಎಲ್.ಕೆ. ಅಡ್ವಾಣಿ ಅವರು ನೀಡಿದ `ಗುಜರಾತ್‌ನಲ್ಲಿ ಬಂಧಿತ ಉಗ್ರರ ವಿಚಾರಣೆ ವೇಳೆ ದೆಹಲಿ ಸ್ಪೋಟದ ಸಂಚು ಬಯಲುಗೊಂಡಿರುವುದನ್ನು ನರೇಂದ್ರ ಮೋದಿಯವರು ಕೇಂದ್ರ ಗೃಹಸಚಿವರಿಗೆ ಸ್ಪಷ್ಟಪಡಿಸಿದ್ದರು. ಆದರೂ ಕೇಂದ್ರ ಅಪೇಕ್ಷಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ವೈಫಲ್ಯ ಪ್ರದರ್ಶಿಸಿತು' ಎಂಬ ಆಪಾದನೆಯೂ ಪ್ರಕಟಗೊಂಡಿರುತ್ತದೆ.
ಮುಂಬೈ, ದೆಹಲಿ, ಸೂರತ್, ಅಹಮದಾಬಾದ್ ಕೊನೆಗೆ ಬೆಂಗಳೂರಿನವರೆಗೂ ಬಾಂಬ್‌ಸ್ಪೋಟದ ವಿಧ್ವಂಸಕ ಕೃತ್ಯ ನಡೆಯುತ್ತಲೇ ಇದೆ. ಹೀಗೆ ನಡೆದಾಗಲೆಲ್ಲಾ ಪೊಲೀಸ್ ವೈಫಲ್ಯವೆಂಬ ಹುಯಿಲು ಪ್ರತಿಪಕ್ಷಗಳಿಂದ ಕೇಳಿ ಬರುತ್ತದೆ. ಕೇಂದ್ರ ಗೃಹಸಚಿವರ ರಾಜಿನಾಮೆ ಒತ್ತಾಯದ ಕೂಗು ಮೊಳಗುತ್ತದೆ. ಹಿಂದೆ ಇದೇ ಬಿಜೆಪಿ ನೇತೃತ್ವದ ಎನ್‌ಡಿ ಎ ಸರ್ಕಾರವಿದ್ದಾಗ ಗೋಧ್ರಾ ಹತ್ಯಾಕಾಂಡ, ಅದರ ಬೆನ್ನಲ್ಲೇ ಗುಜರಾತ್ ನರಮೇಧ, ಅಕ್ಷರಧಾಮದ ಮೇಲೆ ದಾಳಿ. ಇದರ ಬೆನ್ನಲ್ಲೇ ಸಂಸತ್‌ನ ಮೇಲೆ ದಾಳಿಯೂ ನಡೆದಿತ್ತು. ಆಗಲೂ ಆಡಳಿತ ಪಕ್ಷ ವಿಫಲವಾಗಿದೆಯೆಂಬ ಕೂಗೆದ್ದಿತ್ತು. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗಿತ್ತು. ಹಾಗಂತ ಭಯೋತ್ಪಾದನೆ ಮಟ್ಟ ಹಾಕುವ ಕೆಲಸ ಯಾವ ಪಕ್ಷಗಳಿಂದಲೂ ನಡೆದಿಲ್ಲ, ನಡೆಯುತ್ತಿಲ್ಲವೆಂಬುದು ಸುಡುವಾಸ್ತವ.
ಆತ್ಮಹತ್ಯೆ, ರಸ್ತೆ ಅಪಘಾತಗಳು ಮಾಮೂಲಾಗಿರುವಂತೆಯೇ ಭಾರತೀಯರಿಗೆ ಈಚೆಗೆ ಬಾಂಬ್‌ಸ್ಪೋಟವೂ ನಿತ್ಯದ ಸಂಗತಿಯಾಗಿದೆ. ಭಯೋತ್ಪಾದಕರ ಹೆಸರಿನಲ್ಲಿ ನಡೆಯುವ ಬಂಧನವೂ ಸಹಜವೆಂಬಂತಾಗಿಬಿಟ್ಟಿದೆ.
ಈ ಎಲ್ಲಾ ವಿದ್ಯಮಾನಗಳನ್ನು ಪರ್ಯಾಲೋಚಿಸಿದಾಗ ಎರಡು ಸಂಗತಿಗಳು ಮೇಲ್ನೋಟಕ್ಕೆ ಕಂಡು ಬರುತ್ತವೆ. ಪೊಲೀಸರು ನಿಷ್ಕ್ರಿಯರಾಗಿದ್ದಾರೆಂದು ಬೊಬ್ಬಿಡುವುದು ಹಾಗೂ ಅವರು ತಮ್ಮ ನಿಷ್ಕ್ರಿಯತೆಯ ಅಪವಾದವನ್ನು ಹೋಗಲಾಡಿಸಲು ಯಾರನ್ನಾದರೂ ಬಂಧಿಸಿ, ಸುಲಭವಾಗಿ ಉಗ್ರರ ಹಣೆಪಟ್ಟಿ ಕಟ್ಟಿಬಿಡುವುದು.
ಗುಡ್ಡ ಅಗೆದಾಗ ಕನಿಷ್ಠ ಇಲಿಯಾದರೂ ಸಿಗಬೇಕು. ಆದರೆ ಪೊಲೀಸರು ನಡೆಸುವ ಕಾರ್ಯಾಚರಣೆಗಳಲ್ಲಿ ಕನಿಷ್ಠ ಇಲಿಗಳೂ ಸಿಗುವುದಿಲ್ಲ. ಯಾಕೆಂದರೆ ಅವರು ಬಂಧಿಸುವ ವ್ಯಕ್ತಿಗಳು, ನಡೆದ ವಿಧ್ವಂಸಕ ಕೃತ್ಯಗಳಿಗೂ ತಾಳಮೇಳ ಸಂಬಂಧವೇ ಇರುವುದಿಲ್ಲ. ದೆಹಲಿ ಸ್ಪೋಟದ ಬೆನ್ನಲ್ಲೇ ರಾಜ್ಯದ ನಾನಾಕಡೆ `ಉಗ್ರ'ರನ್ನು ಬಂಧಿಸಲಾಗಿದೆ. ಬಿಜಾಪುರ, ಮಣಿಪಾಲ, ಮಂಗಳೂರು, ಚಿಕ್ಕಮಗಳೂರಿನ ಕೊಪ್ಪ ಹೀಗೆ ಎಲ್ಲಾ ಕಡೆ ದೆಹಲಿ, ಉತ್ತರಪ್ರದೇಶ, ಮುಂಬೈ ಹಾಗೂ ಕರ್ನಾಟಕ ಪೊಲೀಸರ ಕಾರ್ಯಾಚರಣೆಯಲ್ಲಿ ಸಾಕಷ್ಟು ಬಂಧನಗಳಾಗಿವೆ. ಹೀಗೆ ಮೇಲಿಂದ ಮೇಲೆ ಬಂಧನ, ಸಾಕಷ್ಟು ವಿಧ್ವಂಸಕ ವಸ್ತುಗಳ ವಶವಾಗುತ್ತಿದ್ದರೂ ಮತ್ತೆ ಸ್ಟೋಟಗಳು ಮರುಕಳಿಸುತ್ತಿವೆ.
ಹಾಗಾದರೆ ಬಂಧಿಸಲ್ಪಟ್ಟವರು ಯಾರೆಂಬುದು ಪ್ರಶ್ನೆಯಾಗಿದೆ. ಮಾಸ್ಟರ್ ಮೈಂಡ್‌ಗಳು, ಸಿಮಿ, ಮುಜಾಹಿದಿನ್ ರೂವಾರಿಗಳು ಪೊಲೀಸರ ವಶವಾಗುತ್ತಿದ್ದರೂ ಸ್ಪೋಟಗಳು ಯಾಕೆ ನಿಲ್ಲಿತ್ತಿಲ್ಲ? ಮೇಲ್ನೋಟಕ್ಕೆ ಪೊಲೀಸರು ನಿಜವಾದ ಆರೋಪಿಗಳನ್ನು ಬಂಧಿಸುತ್ತಿಲ್ಲವೆಂಬುದನ್ನು ಇದು ಹೇಳುತ್ತಿದೆಯೇ?
ಪೂರ್ವಗ್ರಹ?
ಒಂದು ಪೊಲೀಸ್ ಠಾಣೆ ಸರಹದ್ದಿನಲ್ಲಿ ಕಳುವು, ಅತ್ಯಾಚಾರ, ದರೋಡೆ, ಕೊಲೆ ನಡೆದರೆ ಇಂತಹವರೇ ನಡೆಸಿದ್ದಾರೆಂಬ ಶಂಕೆ ಪೊಲೀಸರಿಗೆ ಇರುತ್ತದೆ. ಚುನಾವಣೆ, ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ `ರೌಡಿ ಎಲಿಮೆಂಟ್ಸ್'ಗಳನ್ನು ಪೂರ್ವಭಾವಿಯಾಗಿ ಬಂಧಿಸಲಾಗುತ್ತದೆ. ಇದು ಪೊಲೀಸರ ಮಾಮೂಲು ಕ್ರಮ. ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲೂ ಇಂತಹದೇ ಪ್ರಕರಣಗಳು ಮರುಕಳಿಸುತ್ತಿವೆಯೇ ಎಂಬ ಅನುಮಾನವೂ ಕಾಡಲಾರಂಭಿಸಿದೆ.
ಸೆ.22 ರಂದು ದೆಹಲಿಯ ಜಾಮಿಯಾ ನಗರದಲ್ಲಿ ನಡೆದ `ಉಗ್ರರ ಹತ್ಯೆ- ಪೊಲೀಸ್ ಹೀರೋ ಮೋಹನ್ ಚಂದ್‌ಶರ್ಮ' ಪ್ರಕರಣದ ಪೋಸ್ಟ್ ಮಾರ್ಟಂ ವರದಿಗಳು ಇದನ್ನೇ ಬಹಿರಂಗ ಪಡಿಸಿವೆ.
ಈ ಹತ್ಯೆ ಪ್ರಕರಣದಲ್ಲಿ ಮೃತಪಟ್ಟ ಅತಿಫ್ ಅಮೀನ್ ಹಾಗೂ ಸಾಜಿದ್ ಕುಕೃತ್ಯಗಳಲ್ಲಿ ಭಾಗಿಯಾಗಿಲ್ಲ, ಅವರು ನಿರಪರಾಧಿಗಳು ಇರಬೇಕೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು `ದ ಟೆಲಿಗ್ರಾಫ್' ಪತ್ರಿಕೆಯ ಅಂಕಣಕಾರ ಮುಕುಲ್ ಕೇಶವನ್ ಅ.2 ರ ತಮ್ಮ ಬರಹದಲ್ಲಿ ವಿಶದವಾಗಿ ಹೇಳಿದ್ದಾರೆ. ವಿಶ್ವದ ಅತ್ಯಂತ ಹೆಮ್ಮೆಯ ಪ್ರಜಾತಾಂತ್ರಿಕ ಗಣರಾಜ್ಯವು ಬಹುಮತೀಯರ ಪ್ರಭುತ್ವವಾಗಿ ಬದಲಾಗುತ್ತಿರುವುದರ ಸಂಕೇತ ಇದಾಗಿದೆ ಎಂದು ಹೇಳಿದ್ದಾರೆ.
ಈ ಪ್ರಕರಣ ಕುರಿತು ಮಲೆಯಾಳಂ ಪತ್ರಿಕೆಯೊಂದರಲ್ಲಿ ವಿಶ್ಲೇಷಣೆ ಮಾಡಿರುವ ಸದಾನಂದ ಮೆನನ್ ಕೂಡ, ಈ ಘಟನೆ ನಂತರ ಬಂಧಿಸಲ್ಪಟ್ಟ ಮೂವರನ್ನು ಪಾಲೇಸ್ತೈನ್ ಉಗ್ರರ ಮಾದರಿಯಲ್ಲಿ ಮುಸುಕು ಹಾಕಿ ಮಾಧ್ಯಮಗಳ ಮುಂದೆ ಪ್ರದರ್ಶಿಸಿರುವುದರ ಉದ್ದಿಶ್ಯವನ್ನು ಪ್ರಶ್ನಿಸುತ್ತಾ, ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆಂಬುದನ್ನು ಒತ್ತಿ ಹೇಳಲು ಈ ರೀತಿ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಅಮರಸಿಂಗ್ ಈ ಜಾಮಿಯಾನಗರ ಪ್ರಕರಣದಲ್ಲಿ ಬಂಧಿತರಾಗಿರುವ ವ್ಯಕ್ತಿಗಳ ಕಾನೂನು ರೀತ್ಯ ಹೋರಾಟಕ್ಕೆ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಸಚಿವರಾದ ಕಪಿಲ್ ಸಿಬ್ಬಲ್, ದಿಗ್ವಿಜ್‌ಸಿಂಗ್, ಸಲ್ಮಾನ್‌ಖುರ್ಷಿದ್ ಕೂಡ ಆರಂಭದಲ್ಲಿ ಈ ಪ್ರಕರಣ ಕುರಿತು ಆಕ್ಷೇಪವೆತ್ತಿದ್ದರು.
ಯಾವುದು ಭಯೋತ್ಪಾದನೆ?
ನೆಮ್ಮದಿಯಿಂದ, ತಮ್ಮ ಪಾಡಿಗೆ ತಾವು ಬದುಕುತ್ತಿರುವ ಸಮಾಜ ಅಥವಾ ಸಮುದಾಯವನ್ನು ಭಯಕ್ಕೆ ದೂಡುವುದೆಲ್ಲವೂ ಭಯೋತ್ಪಾದನೆಯೇ. ಆದರೆ ಬಾಂಬ್‌ಸ್ಪೋಟದಂತಹ ವಿದ್ರೋಹದ ಚಟುವಟಿಕೆಗಳು ಮಾತ್ರ ಭಯೋತ್ಪಾದನೆ ಎಂಬ ವ್ಯಾಖ್ಯೆ ಪಡೆಯುತ್ತಿರುವುದು ಸಲ್ಲದ ಸಂಗತಿ.
ಗುಜರಾತ್‌ನಲ್ಲಿ ತಿಂಗಳುಗಟ್ಟಲೇ ನಡೆದ ಗಲಭೆ, ಕರ್ನಾಟಕದಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ನಡೆದ ದಾಳಿ ಎಲ್ಲವೂ ಭಯೋತ್ಪಾದಕ ಕೃತ್ಯಗಳೆಂದು ನಾವ್ಯಾಕೆ ಕರೆಯುವುದಿಲ್ಲ. ಬಾಂಬ್‌ಸ್ಪೋಟದ ಕೃತ್ಯಗಳೆಂತೆಯೇ ಇವು ಕೂಡ ಹಿಂಸೆಯ ವೈಭವೀಕರಣವಲ್ಲವೇ?
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಸಿಪಿ ಎಂ ಪಾಲಿಟ್‌ಬ್ಯುರೋ ಸದಸ್ಯೆ ೃಂದಾ ಕಾರಟ್, ಮಹಾರಾಷ್ಟ್ರ ನಾಂದೇಡ್, ಥಾನೆ, ತಮಿಳು ನಾಡಿನ ತೇನ್‌ಕಾಶಿಯಲ್ಲಿ ವಿಶ್ವಹಿಂದೂ ಪರಿಷತ್, ಆರೆಸ್ಸೆಸ್ ಹಾಗೂ ಬಿಜೆಪಿ ಮುಖಂಡರ ಮನೆಯಲ್ಲಿ ಬಾಂಬ್ ತಯಾರಿಕೆ ನಡೆಯುತ್ತಿದ್ದುದು, ಆಕಸ್ಮಿಕ ಸ್ಪೋಟ ಸಂಭವಿಸಿದ್ದರ ಬಗ್ಗೆ ಮಾತನಾಡಿದ್ದಾರೆ.
ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ 2006ರಲ್ಲಿ ನಾಂದೇಡ್‌ನಲ್ಲಿ ನಡೆದ ಬಾಂಬ್‌ಸ್ಪೋಟಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದಾಗ ಮಹಾರಾಷ್ಟ್ರದಾದ್ಯಂತ ಕೋಮುಗಲಭೆ ಹುಟ್ಟುಹಾಕಲು ಸಂಚು ಬಯಲಿಗೆ ಬಂದಿತ್ತೆಂದು ಇತ್ತೀಚಿನ ಔಟ್‌ಲುಕ್ ಸಂಚಿಕೆ ವಿಸ್ತೃತ ವರದಿ ನೀಡಿದೆ.
ಶಿವಸೇನೆ ಆತ್ಮಹತ್ಯಾದಳ ರಚಿಸಲು ಮುಂದಾಗಿದ್ದರೆ, ಶ್ರೀರಾಮಸೇನೆ ಕೂಡ ಆತ್ಮಹತ್ಯಾದಳ ರಚಿಸುವುದಾಗಿ ಘೋಷಿಸಿದೆ. ಭಯೋತ್ಪಾದನೆ ವಿರೋಧಿಸುವುದಾಗಿ ಹೇಳುತ್ತಿರುವ ಸಂಘಟನೆಗಳು ಆತ್ಮಹತ್ಯಾದಳಗಳನ್ನು ಸಂಘಟಿಸಿ, ವಿಸ್ಪೋಟಕ ಕೃತ್ಯಗಳಿಗೆ ಕೈಯಿಕ್ಕಿದರೆ ಪ್ರಜಾಪ್ರಭುತ್ವಕ್ಕೆ ಎಲ್ಲಿ ಬೆಲೆ ಬಂದೀತು?
ಭಯೋತ್ಪಾದನೆಯನ್ನು ಅದು ಮುಸ್ಲಿಮರೇ ಮಾಡಲಿ, ಹಿಂದುಗಳೇ ಮಾಡಲಿ, ಸಿಖ್ಖರೇ ಮಾಡಲಿ, ಅಸ್ಸಾಮಿಯರೇ ಮಾಡಲಿ, ತಮಿಳರೇ ಮಾಡಲಿ ಅದು ಅಕ್ಷಮ್ಯ. ಯಾರೂ ಯಾರಿಗೂ ಪ್ರತಿಸ್ಪರ್ಧಿಯಾಗಿ ಅದನ್ನು ಮಾಡಕೂಡದು.
ಅಹಿಂಸಾ ಪರಮೋ ಧರ್ಮ ಎಂದು ಪ್ರತಿಪಾದಿಸಿದ, ದಯವೇ ಧರ್ಮದ ಮೂಲವಯ್ಯಾ ದಯೆಯಿಲ್ಲದ ಧರ್ಮ ಅದಾವುದಯ್ಯ ಎಂದು ಪ್ರತಿಪಾದಿಸಿದ ಭಾರತೀಯರ ಸಂಸ್ಕೃತಿ ಹಾಗೆ ಉಳಿಯಬೇಕಾದರೆ ಎಲ್ಲರೂ ಹಿಂಸೆಯನ್ನು ಖಂಡಿಸಬೇಕು. ಹಿಂಸಾ ಪ್ರತಿಪಾದಕರ ವಿರುದ್ಧ ಒಂದಾಗಬೇಕು. ಬುದ್ದ, ಮಹಾವೀರ, ಗಾಂಧಿ ನೆಲೆಸಿದ ನಾಡಿನಲ್ಲಿ ಹಿಂಸೆಯ ತಾಂಡವನೃತ್ಯಕ್ಕೆ ಧ್ವನಿ ಸೇರಿಸಿದರೆ ಅನಾಗರಿಕ ಕಾಲಕ್ಕೆ, ಶಿಲಾಯುಗದ ಕಾಲಕ್ಕೆ ಮತ್ತೆ ಹೋಗುವುದರಲ್ಲಿ ಸಂಶಯವಿಲ್ಲ.
ಶಿಲಾಯುಗದ ಕಾಲದ ಜನ, ಒಳ್ಳೆಯ ಬೇಲಿಗಳು ಒಳ್ಳೆಯ ನೆರೆ ಹೊರೆಯವರನ್ನು ಸೃಷ್ಟಿಸುತ್ತವೆ ಎಂದು ನಂಬಿದ್ದರು ಎಂದು ರಾಬಟ್‌ಫ್ರಾಸ್ಟ್ ತನ್ನ ಪದ್ಯದಲ್ಲಿ ಹೇಳುತ್ತಾನೆ. ಅದು ಮತ್ತೆ ಮರುಕಳಿಸಬಾರದಲ್ಲವೇ?
`ಮಳೆ ಬಂದಾಗ ಓಡಿ ಹೋಗಿ ಮರದ ಕೆಳಗೆ ನಿಂತು ಆಸರೆ ಪಡೆಯುವವರು ಅದು ಯಾವ ಜಾತಿಯ ಮರ, ತನ್ನ ಬಗಲಲ್ಲಿ ನಿಂತವರು ಯಾವ ಜಾತಿ, ಯಾವಧರ್ಮದವರು ಎಂದು ನೋಡುವುದಿಲ್ಲ. ಭಾರತವೆಂಬ ಮರವನ್ನು ಆಶ್ರಯಿಸುವವರು ಕೂಡ ಹೀಗೆ ಮಳೆಯಿಂದ ಆಸರೆ ಪಡೆಯಲು ನಿಂತವರೆಂಬುದನ್ನು ಮರೆಯಬಾರದು.