ಯುದ್ಧಕಾಲದಲ್ಲಿ ಶಸ್ತ್ರ ಕೆಳಗಿಟ್ಟ ಸ್ಥಿತಿ ಈಗ ಬಿಜೆಪಿಯದು. ಆರು ದಶಕಗಳಿಂದ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರಕ್ಕೆ ವಿರೋಧವೆಂಬ ಎರಡು ದಿವ್ಯಾಸ್ತ್ರಗಳನ್ನು ಬಳಸಿಕೊಂಡು ಸಂಸದೀಯ ರಾಜಕಾರಣದ ಮೆಟ್ಟಿಲೇರುತ್ತಾ ದೆಹಲಿಯ ಕೆಂಪುಕೋಟೆ ಹಾಗೂ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅವಕಾಶ ಗಿಟ್ಟಿಸಿದ ಬಿಜೆಪಿ ಇದೀಗ ಅಸ್ತ್ರಗಳನ್ನೇ ಕಳೆದುಕೊಂಡ ಯೋಧನಂತೆ ಪರಿತಪಿಸಬೇಕಾಗಿದೆ.
ಚುನಾವಣೆಯಲ್ಲಿ ಗೆಲ್ಲಲು ಹಣ-ಹೆಂಡದಂತಹ ಆಮಿಷವನ್ನೇ ನೆಚ್ಚಿಕೊಳ್ಳಬೇಕಾದ ದುರ್ಗತಿ ಬಿಜೆಪಿಗೆ ಬಂದೊದಗಿದೆ. ಯಾವ ದೇಶಭಕ್ತಿ, ರಾಷ್ಟ್ರಪ್ರೇಮ, ಸೈದ್ಧಾಂತಿಕ ರಾಜಕಾರಣ ಎಂದೆಲ್ಲಾ ಮಾತನಾಡುತ್ತಿದ್ದ ಬಿಜೆಪಿ ಈಗ ಅವೆಲ್ಲವನ್ನು ಬಂಗಾಳಕೊಲ್ಲಿಗೆ ಎಸೆದು ಕುಟಿಲ ರಾಜಕಾರಣದ ಬೆನ್ನುಬಿದ್ದಿದೆ. ಬಿಜೆಪಿಯ ಹಿಂದಿದ್ದ `ದೇಶಭಕ್ತ'ರೂ ಕೂಡ ಮುಜುಗರ ಪಟ್ಟುಕೊಳ್ಳಬೇಕಾದ ವಾತಾವರಣ ನಿರ್ಮಾಣವಾಗಿದೆ.
ಕಳೆದ ವಿಧಾನಸಭೆ ಚುನಾವಣೆ ಸಮಯ ನೆನಪಿಸಿಕೊಳ್ಳಿ. ಅದಕ್ಕೂ ಮೊದಲು ಕುಮಾರಸ್ವಾಮಿಯವರು ಮಾತಿಗೆ ತಪ್ಪಿ, ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡದೇ ಇದ್ದಾಗ ಯಡಿಯೂರಪ್ಪರಾದಿಯಾಗಿ ಬಿಜೆಪಿ ಪ್ರಮುಖರು ಆಡಿದ ಮಾತುಗಳನ್ನು ಮೆಲುಕು ಹಾಕಿ.
ಜನತಾದಳ, ಕಾಂಗ್ರೆಸ್ಗಳು `ಅಪ್ಪ-ಮಕ್ಕಳ, ಅವ್ವ-ಮಕ್ಕಳ' ಪಕ್ಷಗಳಾಗಿವೆ. ದೇಶದ ಹಿತದೃಷ್ಟಿಗಿಂತ ಕುಟುಂಬದ ಆಸ್ತಿಯನ್ನು ಕ್ರೋಢೀಕರಿಸುವುದು, ತಮ್ಮ ಮಕ್ಕಳನ್ನು ರಾಜಕೀಯದಲ್ಲಿ ಮೇಲೆ ತರುವುದು ಮಾತ್ರ ಇವೆರೆಡು ಪಕ್ಷಗಳು ಮಾಡಿಕೊಂಡು ಬಂದಿವೆ. ಅಪ್ಪ-ಮಕ್ಕಳ ಪಕ್ಷದ ಸರ್ವನಾಶವೇ ತಮ್ಮ ಗುರಿ. ಕುಟುಂಬ ರಾಜಕಾರಣ ಇಲ್ಲಿಗೆ ಕೊನೆಯಾಗಬೇಕು. ಇನ್ನೆಂದೂ ರಾಜ್ಯದಲ್ಲಿ ಕುಟುಂಬ ರಾಜಕಾರಣ ದೈನೇಸಿ ಸ್ಥಿತಿಗೆ ರಾಜ್ಯ ಬರಬಾರದು. ಅಂತಹ ಉತ್ತಮ ಆಡಳಿತ ನೀಡುತ್ತೇವೆ ಎಂದು ಯಡಿಯೂರಪ್ಪ ಘರ್ಜಿಸಿದ್ದರು.
ಕೇವಲ 8 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೇ ಇದ್ದಾಗ ಬೆಂಗಳೂರಿನ ಮಹಾತ್ಮಗಾಂಧಿ ಪ್ರತಿಮೆ ಬಳಿ ಯಡಿಯೂರಪ್ಪ, ಅನಂತಕುಮಾರ್ ಘರ್ಜಿಸಿದ ಪರಿ ಇದೇ ಮಾದರಿಯಲ್ಲಿತ್ತು. ಮಾರನೇ ದಿನದ ಎಲ್ಲಾ ಪತ್ರಿಕೆಗಳು, ಟಿ.ವಿ. ಮಾಧ್ಯಮಗಳು ಅದನ್ನೇ ಬಿತ್ತರಿಸಿದ್ದವು. ಅವೆಲ್ಲವನ್ನೂ ಯಡಿಯೂರಪ್ಪ ಇದೀಗ ಮರೆತು ಬಿಟ್ಟಿದ್ದಾರೆ.
`ತಾವೆಂದು ಕುಟುಂಬ ರಾಜಕಾರಣವನ್ನು ವಿರೋಧಿಸಿರಲಿಲ್ಲ, ಆ ಬಗ್ಗೆ ನಾನ್ಯಾವತ್ತು ಟೀಕೆ ಮಾಡಿಲ್ಲ' ಎಂದು ಯಡಿಯೂರಪ್ಪ ಹೇಳಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ ಕೂಡ, ಬಿಜೆಪಿ ಅದರ ವಿರುದ್ಧ ಎಂದೂ ಹೋರಾಟ ಮಾಡಿಲ್ಲ. ಅಪ್ಪ-ಮಗ ರಾಜಕೀಯದಲ್ಲಿ ಇರಬಾರದೆಂದೇನೋ ಕಾನೂನಿಲ್ಲ ಎಂದು ಘೋಷಿಸಿದ್ದಾರೆ.
ನೆಹರೂ ಕುಟುಂಬ ರಾಜಕಾರಣವನ್ನು ಆದಿಯಿಂದಲೂ ಬಿಜೆಪಿ ವಿರೋಧಿಸಿಕೊಂಡು ಬಂದಿದ್ದು ಸುಳ್ಳೇ? ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಮುಖಂಡ ಎಲ್.ಕೆ. ಆಡ್ವಾಣಿ ಪ್ರತಿಪಾದಿಸಿದ್ದು, ಹೋರಾಡಿ ಕೊಂಡು ಬಂದಿದ್ದು ಎಲ್ಲವೂ ಸುಳ್ಳೇ? ತುರ್ತು ಪರಿಸ್ಥಿತಿಯ ನಂತರ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ಸೇತರ ಮೊದಲ ಸರ್ಕಾರದಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗುವಾಗ ಇದೇ ಜನಸಂಘ ಯಾವ ಧ್ಯೇಯದ ಮೇಲೆ ಅವರಿಗೆ ಬೆಂಬಲ ನೀಡಿತ್ತು. ನೆಹರೂ ಕುಟುಂಬದ ಸರ್ವಾಧಿಕಾರವನ್ನು ಕೊನೆಗಾಣಿಸಬೇಕೆಂಬ ಆಶೆಯಲ್ಲಿಯೇ ತಾನೆ? ಚರಿತ್ರೆಯ ಅರಿವಿಲ್ಲದವರು, ಸ್ವಾರ್ಥಕ್ಕಾಗಿ ರಾಜಕೀಯವನ್ನು ಹಾಯಿದೋಣಿ ಮಾಡಿಕೊಂಡವರು ಮಾತ್ರ ಹೀಗೆಲ್ಲಾ ಮಾತನಾಡಲು ಸಾಧ್ಯ.
ರಾಮಮನೋಹರ್ ಲೋಹಿಯಾ, ಮಧು ಲಿಮೆಯೆ, ಜಾರ್ಜ್ ಫರ್ನಾಂಡೀಸ್, ವಿ.ಪಿ.ಸಿಂಗ್ರಂತಹ ಸಮಾಜವಾದಿ ಮುಖಂಡರು ಇದನ್ನೇ ಪ್ರತಿಪಾದಿಸುತ್ತಾ ಕಾಂಗ್ರೆಸ್ನ್ನು ಹೀನಾಮಾನ ಬಯ್ಯುತ್ತಾ ಹೋರಾಟ ನಡೆಸಿಕೊಂಡು ಬಂದರು. ಅದೆಲ್ಲಾ ಒತ್ತಟ್ಟಿಗಿರಲಿ. ಬಿಜೆಪಿ ಕೂಡ ಕಳೆದ 50-60 ವರ್ಷಗಳಲ್ಲಿ ಕುಟುಂಬ ರಾಜಕಾರಣ ವಿರೋಧಿಸುವುದನ್ನೇ ಪ್ರಧಾನ ಅಸ್ತ್ರವಾಗಿಸಿಕೊಂಡು ಚುನಾವಣೆಯಲ್ಲಿ ಹೆಚ್ಚೆಚ್ಚು ಸೀಟು ಗಳಿಸುತ್ತಾ ಹೋಯಿತು.
ನೆಹರು, ಇಂದಿರಾ, ರಾಜೀವ, ಸೋನಿಯಾ, ರಾಹುಲ್ ಹೀಗೆ ಕಾಂಗ್ರೆಸ್ ಒಂದು ಕುಟುಂಬದ ಸ್ವತ್ತಾಗಿದೆ ಎಂಬ ಕಾರಣಕ್ಕೆ ಜನ ಅದರ ವಿರುದ್ಧ ನಿಂತರು. ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಪರಿವರ್ತಿತವಾದ ಮೇಲೂ ಒಂದೇ ಕುಟುಂಬದ(ರಾಜಮನೆತನದಂತೆ) ರಾಜಕಾರಣವನ್ನು ತೊಲಗಿಸಲು ನೂರಾರು ನಾಯಕರು ಹಗಲು ರಾತ್ರಿಯೆನ್ನದೇ ದುಡಿದಿದ್ದಾರೆ. ಅದೆಲ್ಲದರ ಫಲಿತವಾಗಿಯೇ ಬಿಜೆಪಿ ಇಂದು ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಗಿದೆ. ಈಗ ಅದೆನ್ನೆಲ್ಲಾ ನಾವು ಮಾಡಿಯೇ ಇಲ್ಲವೆಂದು ಯಡಿಯೂರಪ್ಪನವರು ಹೇಳುತ್ತಾರೆಂದು ಜನ ಏನೆಂದು ಕೊಳ್ಳಬೇಕು.
ಹಾಗೆಯೇ ಯಡಿಯೂರಪ್ಪನವರು ದೇವರಾಣೆಗೂ ತನ್ನ ಮಗ ಚುನಾವಣೆಗೆ ನಿಲ್ಲುವುದಿಲ್ಲವೆಂದು ಘಂಟಾಘೋಷವಾಗಿ ಹೇಳಿದ್ದರು. ಕಡೆಗೆ ಶಿವಮೊಗ್ಗದ ಹಿರಿಯ ಬಿಜೆಪಿ ಮುಖಂಡರನ್ನು ಕಡೆಗಣಿಸಿ ತಮ್ಮ ಮಗ ಬಿ.ವೈ. ರಾಘವೇಂದ್ರನಿಗೆ ಲೋಕಸಭೆಗೆ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದ್ದಾರೆ.
ಹಾಗಂತ ಅವರ ಮಗ ರಾಜಕೀಯಕ್ಕೆ ಬರಬಾರದು ಎಂಬುದು ಇಲ್ಲಿನ ವಾದವಲ್ಲ. ರಾಜಕಾರಣ ಪ್ರತಿಯೊಬ್ಬರ ಹಕ್ಕು. ಭಾರತೀಯ ಪ್ರಜೆಯಾಗಿ ರಾಘವೇಂದ್ರ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯುವುದು ಸ್ವತಃ ಯಡಿಯೂರಪ್ಪನವರಿಗೆ ಸಾಧ್ಯವಿಲ್ಲ. ಆದರೆ ತಮ್ಮ ಮಗ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ದೇವರ ಮೇಲೆ ಆಣೆ ಮಾಡಬೇಕಾಗಿರಲಿಲ್ಲ. ಅದು ಅವನ ಹಕ್ಕು, ಸ್ಪರ್ಧಿಸುತ್ತಾನೆಂದು ಅವರು ನೇರವಾಗಿ ಹೇಳಬಿಡಬಹುದಿತ್ತು. ನಾಟಕವಾಡಲು ಹೋಗಿ, ನಾಟಕಕ್ಕಾಗಿ ಹೆಣೆದ ಬಲೆಗೆ ತಾವೇ ಸಿಕ್ಕಿಬಿದ್ದಿರುವ ಸ್ಥಿತಿ ಯಡಿಯೂರಪ್ಪನವರದು.
ಸೂಕ್ತವಲ್ಲ:
ಯಾವುದೇ ಪಕ್ಷವೂ ಕುಟುಂಬ ರಾಜಕಾರಣವನ್ನು ಬೆಂಬಲಿಸುವುದು ಸೂಕ್ತವಲ್ಲ. ದೇವೇಗೌಡರು, ಸೋನಿಯಾಗಾಂಧಿ ಮಾಡುತ್ತಾರೆಂದು ಬಿಜೆಪಿಯವರು ಮಾಡುವುದು ದಳ-ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಏನು ವ್ಯತ್ಯಾಸವುಳಿದಂತಾಯಿತು?
ರಾಜಕಾರಣಿಯ ಮಗನೇ ಇರಲಿ, ಯಾವಾತನೇ ಇರಲಿ. ಚುನಾವಣೆಗೆ ಸ್ಪರ್ಧಿಸಲು ರಾಜಕೀಯ ಅನುಭವ, ಜನರ ಒಡನಾಟ ಮುಖ್ಯ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವ ರಾಘವೇಂದ್ರನಿಗೆ ಯಡಿಯೂರಪ್ಪನ ಮಗ ಎಂಬ ಹೆಗ್ಗಳಿಕೆಯ ಹೊರತಾಗಿ ಯಾವುದೇ ರಾಜಕೀಯ ಅರ್ಹತೆಯಿಲ್ಲ. ಹಾಗಂದರೆ ಮುಖ್ಯಮಂತ್ರಿಯಾಗಲು ಕುಮಾರಸ್ವಾಮಿಗೆ ಏನಿತ್ತು ಎಂಬ ಮಾರುಪ್ರಶ್ನೆ ಕೇಳಬಹುದು? ಅದಕ್ಕೆ ಯಡಿಯೂರಪ್ಪನವರೇ ಉತ್ತರಿಸಬೇಕಾಗುತ್ತದೆ!
ಯಡಿಯೂರಪ್ಪ ಉಪಮುಖ್ಯಮಂತ್ರಿಯಾದ ನಂತರ ಪ್ರವರ್ಧಮಾನಕ್ಕೆ ಬಂದವರು ರಾಘವೇಂದ್ರ. ಅಲ್ಲಿಯವರೆಗೆ ಶಿಕಾರಿಪುರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು(ಯಡಿಯೂರಪ್ಪ ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ 30 ವರ್ಷ ರಾಜಕೀಯ ಜೀವನ ಅನುಭವಿಸಿದಾಗ) ಅವರ ಆಪ್ತ ಗುರುಮೂರ್ತಿ ಹಾಗೂ ಪದ್ಮನಾಭಭಟ್. ರಾಘವೇಂದ್ರ ಬೆಂಗಳೂರಿನಲ್ಲಿದ್ದಿದ್ದು ಬಿಟ್ಟರೆ ಶಿವಮೊಗ್ಗ ರಾಜಕಾರಣದ ಗಂಧಗಾಳಿ ಗೊತ್ತಿರಲಿಲ್ಲ.
ತಮ್ಮ ಮಗನನ್ನು ರಾಜಕಾರಣಕ್ಕೆ ತರಬೇಕೆಂದು ನಿಶ್ಚಯಿಸಿದ ಯಡಿಯೂರಪ್ಪ ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಶಿಕಾರಿಪುರ ಪುರಸಭೆ ಚುನಾವಣೆಗೆ ನಿಲ್ಲಿಸಿದರು. ಅಲ್ಲಿ ಗೆದ್ದ ರಾಘವೇಂದ್ರ ಕೆಲ ದಿನ ಅಧ್ಯಕ್ಷರೂ ಆದರು. ಅದರ ಜತೆಗೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯೂ ಆಗಿ ಕಾರ್ಯನಿರ್ವಹಿಸತೊಡಗಿದರು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾದ ನಂತರ, ಅಂದರೆ ಅಧಿಕಾರ ಅನುಭವಿಸತೊಡಗಿದ ಮೇಲೆ ರಾಘವೇಂದ್ರ ಮೇಲೇರುತ್ತಾ ಬಂದರು. ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಮೂಗು ತೂರಿಸಲಾರಂಭಿಸಿದ ರಾಘು, ನಂತರ ಅಧಿಕಾರಿಗಳ ವರ್ಗಾವಣೆಯಂತಹ ಕೆಲಸವನ್ನೂ ಮಾಡತೊಡಗಿದರು. ಇದು ರಾಘು ಚರಿತ್ರೆ.
ಆದರೆ ಶಿವಮೊಗ್ಗದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಯಡಿಯೂರಪ್ಪನವರ ಜತೆಗೆ ಡಿ.ಎಚ್. ಶಂಕರಮೂರ್ತಿ, ಕೆ.ಎಸ್. ಈಶ್ವರಪ್ಪ, ಆಯನೂರು ಮಂಜುನಾಥ್, ಆರಗ ಜ್ಞಾನೇಂದ್ರ, ಪಿ.ವಿ. ಕೃಷ್ಣಭಟ್, ರಾಮಚಂದ್ರ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಬಿಗಿಮುಷ್ಟಿಯಲ್ಲಿದ್ದ ಶಿವಮೊಗ್ಗ ಜಿಲ್ಲೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಯಡಿಯೂರಪ್ಪ, ಕ್ರಮೇಣವಾಗಿ ಬಂಗಾರಪ್ಪನವರನ್ನೇ ಬದಿಗೊತ್ತುವಷ್ಟು ಸಾಮರ್ಥ್ಯ ಬೆಳೆಸಿಕೊಂಡರು. ಅದಕ್ಕೆ ಬಂಗಾರಪ್ಪ ಕೂಡ ಕಾರಣರಾದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದ ಬಂಗಾರಪ್ಪ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಲು ಕಾರಣರಾದರು. ಸೊರಬ, ಭದ್ರಾವತಿ ಹೊರತಾಗಿ ಉಳಿದ 5 ಕಡೆ ಬಿಜೆಪಿ ಶಾಸಕರನ್ನು ಗೆಲ್ಲಿಸಲು ಬಂಗಾರಪ್ಪ ಕಾರಣರಾದರು. ನಂತರ ಬಂಗಾರಪ್ಪ ಬಿಜೆಪಿ ತೊರೆದು, ಸಮಾಜವಾದಿ ಪಕ್ಷದಿಂದ ಸಂಸದರಾಗಿ, ನಂತರ ಅಲ್ಲೂ ಬಿಟ್ಟು ಈಗ ಕಾಂಗ್ರೆಸಿಗೆ ಬಂದು ಸೇರಿದ್ದಾರೆ.
ಸೋಲಿಲ್ಲದ ಸರದಾರನೆಂಬ ಕೀರ್ತಿಗೆ ಪಾತ್ರರಾಗಿದ್ದ ಬಂಗಾರಪ್ಪರಿಗೆ ಸೋಲಿನ ರುಚಿ ತೋರಿಸಿದವರು ಬಿಜೆಪಿ ಮುಖಂಡ ಆಯನೂರು ಮಂಜುನಾಥ. ಒಮ್ಮೆ ಲೋಕಸಭೆಗೆ ಆರಿಸಿಹೋದ ಆಯನೂರು ಪಕ್ಷದ ಆಂತರಿಕ ಜಗಳದ ಕಾರಣದಿಂದ ಬಿಜೆಪಿ ತೊರೆದು ಕಾಂಗ್ರೆಸ್ಗೆ ಹೋದರು. ಬಂಗಾರಪ್ಪ ಬಿಜೆಪಿಯಿಂದ ಸ್ಪರ್ಧಿಸಿದಾಗ ಆಯನೂರು ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದರು. ಬಂಗಾರಪ್ಪ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಾಗಲೂ ಆಯನೂರು ಕಾಂಗ್ರೆಸ್ ಅಭ್ಯರ್ಥಿ. ಬಂಗಾರಪ್ಪರನ್ನು ಸೋಲಿಸಲು ಆಯನೂರ್ಗೆ ಆಗಲಿಲ್ಲವಾದರೂ ಸಮಬಲದ ಸ್ಪರ್ಧೆಯೊಡ್ಡಿದ್ದರು. ಬಂಗಾರಪ್ಪ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದಾಗ ಬಿಜೆಪಿಯಿಂದ ಭಾನುಪ್ರಕಾಶ್ ಸ್ಪರ್ಧಿಸಿದ್ದರು. ಅವರು ಕೂಡ ಸಮರ್ಥ ಸ್ಪರ್ಧೆಯೊಡ್ಡಿದ್ದರು.
ಹೀಗೆ ಇಬ್ಬರು ಗರಡಿಯಾಳುಗಳು ಬಿಜೆಪಿಯಲ್ಲಿದ್ದರೂ ತಮ್ಮ ಮಗನನ್ನೇ ಕಣಕ್ಕೆ ಇಳಿಸಲು ಯಡಿಯೂರಪ್ಪ ಮುಂದಾಗಿದ್ದು ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎಬ್ಬಿಸಿದೆ. ಆರಂಭದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತಾದರೂ ನಂತರ ಯಡಿಯೂರಪ್ಪ ಅದನ್ನು ಶಮನ ಮಾಡಿದ್ದಾರೆ. ಬೇರೆ ಜಿಲ್ಲೆಯಲ್ಲಿ ಗೆಲ್ಲುವ ಅಭ್ಯರ್ಥಿ ಇಲ್ಲದೇ ಇರುವುದರಿಂದ ಅನ್ಯ ಪಕ್ಷದಿಂದ ಕರೆತಂದು ಮಣೆ ಹಾಕುತ್ತಿದ್ದೇವೆ ಎಂದು ಬಿಜೆಪಿ ನೇತಾರರು ಹೇಳುತ್ತಿದ್ದಾರಾದರೂ ಶಿವಮೊಗ್ಗ ಜಿಲ್ಲೆಯಲ್ಲಿ ಇದ್ದವರನ್ನು ಬಿಟ್ಟು ತಮ್ಮ ಮಗನಿಗೆ ಮಣೆ ಹಾಕಿದ್ದು ಯಾಕೆ ಎಂಬ ಪ್ರಶ್ನೆಗೆ ಬಿಜೆಪಿಯಲ್ಲಿ ಸದ್ಯವಂತೂ ಉತ್ತರವಿಲ್ಲ.
ವಿಸ್ತರಣೆ:
ಕುಟುಂಬ ರಾಜಕಾರಣ ಯಡಿಯೂರಪ್ಪನವರ ಮನೆಯಲ್ಲಿ ಮಾತ್ರ ಬೇರು ಬಿಟ್ಟಿಲ್ಲ. ಬಿಜೆಪಿಗೆ ವ್ಯಾಧಿಯಂತೆ ಅಂಟಿಕೊಂಡಿದೆ. ಇಡೀ ಬಳ್ಳಾರಿ ಜಿಲ್ಲೆಯೇ ಕುಟುಂಬ ರಾಜಕಾರಣದ ಬಿರುಬಿಸಿಲಿನಿಂದ ಕಂಗೆಟ್ಟಿದ್ದರೆ ಇದೀ ಮತ್ತೊಬ್ಬರು ಅದಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಜನಾರ್ದನರೆಡ್ಡಿ, ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ ಹೀಗೆ ಒಂದೇ ಕುಟುಂಬದ ಮೂವರು ಶಾಸಕರು, ಮಂತ್ರಿಗಳು ಬಳ್ಳಾರಿಯಲ್ಲಿದ್ದಾರೆ. ಇವರ ಕುಟುಂಬದ ಸೋದರನಂತಿರುವ ಶ್ರೀರಾಮುಲು ಸಚಿವರಾಗಿದ್ದರೆ, ಅವರ ಅಳಿಯ ಸುರೇಶಬಾಬು ಶಾಸಕರಾಗಿದ್ದಾರೆ. ಇದೀಗ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಶ್ರೀರಾಮುಲು ಸೋದರಿ ಜೆ. ಶಾಂತ ಕಣಕ್ಕಿಳಿದಿದ್ದಾರೆ. ಅಲ್ಲಿಗೆ ಇಡೀ ಒಂದು ಜಿಲ್ಲೆ ರೆಡ್ಡಿಗಳ ಒಕ್ಕಲಿಗೆ ಸೇರಿದಂತಾಗುತ್ತದೆ.
ಹಾವೇರಿಯಲ್ಲಿ ಸಚಿವ ಸಿ.ಎಂ. ಉದಾಸಿ ಪುತ್ರ ಶಿವಕುಮಾರ ಉದಾಸಿ, ಚಿಕ್ಕೋಡಿಯಲ್ಲಿ ಸಚಿವ ಉಮೇಶ ಕತ್ತಿ ಸೋದರ ರಮೇಶ ಕತ್ತಿ ಸ್ಪರ್ಧಿಸುತ್ತಿದ್ದಾರೆ. ಕುಟುಂಬ ರಾಜಕಾರಣವನ್ನು ಪ್ರಬಲವಾಗಿ ವಿರೋಧಿಸುತ್ತಾ ಬಂದಿದ್ದ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಅದನ್ನೇ ಮಾಡುತ್ತಾ ಬಂದಿದ್ದು, ಒಂದು ಪ್ರಮುಖ ಅಸ್ತ್ರ ಗೊಟಕ್ ಎಂದಿದೆ.
ಸಂಪಂಗಿ ಪ್ರಕರಣ:
ಬಿಜೆಪಿಯ ಇನ್ನೊಂದು ಅಸ್ತ್ರ ಭ್ರಷ್ಟಾಚಾರ ವಿರೋಧ. ಚುನಾವಣೆ ವೇಳೆ ಬಿಜೆಪಿ ಸಿದ್ಧಪಡಿಸಿದ್ದ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ವಿರೋಧ ಹಾಗೂ ನಿರ್ಮೂಲನೆ ತಮ್ಮ ಪ್ರಮುಖ ಧ್ಯೇಯವೆಂದು ಘೋಷಿಸಲಾಗಿತ್ತು.
ಬಿಜೆಪಿ ಅಧಿಕಾರಕ್ಕೇರಿ ಕೇವಲ ಐದು ತಿಂಗಳು ಕಳೆಯುವಷ್ಟರಲ್ಲಿ ಬಿಜೆಪಿ ಶಾಸಕ ಸಂಪಂಗಿ, ಶಾಸಕರ ಭವನದಲ್ಲಿ 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದರು. ಇದು ದೇಶದ ಇತಿಹಾಸದಲ್ಲೇ ಪ್ರಪ್ರಥಮ ಎನ್ನುವಂತಹ ಪ್ರಕರಣ. ಇಲ್ಲಿಯವರೆಗೆ ಯಾವುದೇ ಶಾಸಕ, ಸಂಸದ ತಮ್ಮ ಭವನದಲ್ಲೆ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿರಲಿಲ್ಲ. ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಪ್ರಕರಣ, ಮತ ಹಾಕಲು ಹಣ ಪಡೆದ ಪ್ರಕರಣ ದೊಡ್ಡ ಸುದ್ದಿಯಾಗಿತ್ತಾದರೂ ಅದಕ್ಕೆ ಸಾಕ್ಷ್ಯವಿರಲಿಲ್ಲ. ಆದರೆ ಸಂವಿಧಾನಬದ್ಧವಾದ, ನ್ಯಾಯಮೂರ್ತಿಗಳ ನೇತೃತ್ವದ ಲೋಕಾಯುಕ್ತವೇ ಶಾಸಕರನ್ನು ಬಲೆಗೆ ಕೆಡವಿದೆ. ಅಲ್ಲಿಗೆ ಭ್ರಷ್ಟಾಚಾರ ವಿರೋಧಿಸುವುದಾಗಿ ಹೇಳುತ್ತಾ ಬಂದಿದ್ದ ಬಿಜೆಪಿಯ ಬಣ್ಣ ನಡುಬೀದಿಯಲ್ಲಿ ಹರಾಜಿಗೆ ಬಿತ್ತು.
ಸರ್ಕಾರ ರಚನೆಯಾದ ಕೇವಲ ಒಂಭತ್ತು ತಿಂಗಳಲ್ಲೇ ಸಚಿವರು ಮಾಡುತ್ತಿರುವ ದುಡ್ಡು ಸ್ವತಃ ಬಿಜೆಪಿ ಕಾರ್ಯಕರ್ತರನ್ನೇ ದಂಗು ಬಡಿಸಿದೆ. ಸಹಕಾರ ಇಲಾಖೆಯ ಭ್ರಷ್ಟಾಚಾರವನ್ನು ಮಹಾಲೇಖಪಾಲರ ವರದಿ ಬಯಲಿಗೆಳೆದಿದೆ.
ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಝಳಪಿಸುತ್ತಿದ್ದ ಅಸ್ತ್ರಗಳು ಈಗ ಮಕಾಡೆ ಮಲಗಿವೆ. ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರವನ್ನು ವಿರೋಧಿಸಲು ಅದನ್ನು ಕಾಂಗ್ರೆಸ್ ಮತ್ತು ಜೆಡಿ ಎಸ್ಗೆ ಆಪಾದಿಸಲು ಈಗ ಬಿಜೆಪಿಗೆ ಜಂಘಾಬಲವಿಲ್ಲ. ಈಗೇನಿದ್ದರೂ ಹಣ, ಆಮಿಷ, ಜಾತಿಯಷ್ಟೇ ಉಳಿದಿರುವುದು.
Subscribe to:
Post Comments (Atom)
1 comment:
BJP ಯ party with a difference ಅನ್ನುವ ಹೆಗ್ಗಳಿಕೆ ಅಧಿಕಾರಕ್ಕೆ ಬರುವವರೆಗೆ ಮಾತ್ರ ಉಳಿದಿತ್ತು. ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಪಕ್ಷಾಂತರ ಗಳಿಂದ ಈಗ ಇವರಿಗೂ ಕಾಂಗ್ರೆಸ್, ಜೆಡಿಎಸ್ ಗೂ ಉಳಿದಿರುವ ಒಂದೇ ವ್ಯತ್ಯಾಸ ಅಂದರೆ ಬಿಜೆಪಿ ಹಿಂದೂ ಪಕ್ಷ, ಉಳಿದೆರಡು ಹಿಂದೂ ವಿರೋಧಿ ಪಕ್ಷಗಳು, ಅಷ್ಟೇ.
Post a Comment