Saturday, March 21, 2009

ಬಿಜೆಪಿ ಶಸ್ತ್ರ­ಸ­ನ್ಯಾಸ

ಯುದ್ಧ­ಕಾ­ಲ­ದಲ್ಲಿ ಶಸ್ತ್ರ ಕೆಳ­ಗಿಟ್ಟ ಸ್ಥಿತಿ ಈಗ ಬಿಜೆ­ಪಿ­ಯದು. ಆರು ದಶ­ಕ­ಗ­ಳಿಂದ ಕುಟುಂಬ ರಾಜ­ಕಾ­ರಣ ಹಾಗೂ ಭ್ರಷ್ಟಾ­ಚಾ­ರಕ್ಕೆ ವಿರೋ­ಧ­ವೆಂಬ ಎರಡು ದಿವ್ಯಾ­ಸ್ತ್ರ­ಗ­ಳನ್ನು ಬಳ­ಸಿ­ಕೊಂಡು ಸಂಸ­ದೀಯ ರಾಜ­ಕಾ­ರ­ಣದ ಮೆಟ್ಟಿ­ಲೇ­ರುತ್ತಾ ದೆಹ­ಲಿಯ ಕೆಂಪು­ಕೋಟೆ ಹಾಗೂ ವಿಧಾ­ನ­ಸೌ­ಧದ ಮೂರನೇ ಮಹ­ಡಿ­ಯಲ್ಲಿ ಅವ­ಕಾಶ ಗಿಟ್ಟಿ­ಸಿದ ಬಿಜೆಪಿ ಇದೀಗ ಅಸ್ತ್ರ­ಗ­ಳನ್ನೇ ಕಳೆ­ದು­ಕೊಂಡ ಯೋಧ­ನಂತೆ ಪರಿ­ತ­ಪಿ­ಸ­ಬೇ­ಕಾ­ಗಿದೆ.
ಚುನಾ­ವ­ಣೆ­ಯಲ್ಲಿ ಗೆಲ್ಲಲು ಹಣ-ಹೆಂಡ­ದಂ­ತಹ ಆಮಿ­ಷ­ವನ್ನೇ ನೆಚ್ಚಿ­ಕೊ­ಳ್ಳ­ಬೇ­ಕಾದ ದುರ್ಗತಿ ಬಿಜೆ­ಪಿಗೆ ಬಂದೊ­ದ­ಗಿದೆ. ಯಾವ ದೇಶ­ಭಕ್ತಿ, ರಾಷ್ಟ್ರ­ಪ್ರೇಮ, ಸೈದ್ಧಾಂ­ತಿಕ ರಾಜ­ಕಾ­ರಣ ಎಂದೆಲ್ಲಾ ಮಾತ­ನಾ­ಡು­ತ್ತಿದ್ದ ಬಿಜೆಪಿ ಈಗ ಅವೆ­ಲ್ಲ­ವನ್ನು ಬಂಗಾ­ಳ­ಕೊ­ಲ್ಲಿಗೆ ಎಸೆದು ಕುಟಿಲ ರಾಜ­ಕಾ­ರ­ಣದ ಬೆನ್ನು­ಬಿ­ದ್ದಿದೆ. ಬಿಜೆ­ಪಿಯ ಹಿಂದಿದ್ದ `ದೇಶ­ಭಕ್ತ'ರೂ ಕೂಡ ಮುಜು­ಗರ ಪಟ್ಟು­ಕೊ­ಳ್ಳ­ಬೇ­ಕಾದ ವಾತಾ­ವ­ರಣ ನಿರ್ಮಾ­ಣ­ವಾ­ಗಿದೆ.
ಕಳೆದ ವಿಧಾ­ನ­ಸಭೆ ಚುನಾ­ವಣೆ ಸಮಯ ನೆನ­ಪಿ­ಸಿ­ಕೊಳ್ಳಿ. ಅದಕ್ಕೂ ಮೊದಲು ಕುಮಾ­ರ­ಸ್ವಾ­ಮಿ­ಯ­ವರು ಮಾತಿಗೆ ತಪ್ಪಿ, ಯಡಿ­ಯೂ­ರ­ಪ್ಪ­ನ­ವ­ರಿಗೆ ಅಧಿ­ಕಾರ ಬಿಟ್ಟು­ಕೊ­ಡದೇ ಇದ್ದಾಗ ಯಡಿ­ಯೂ­ರ­ಪ್ಪ­ರಾ­ದಿ­ಯಾಗಿ ಬಿಜೆಪಿ ಪ್ರಮು­ಖರು ಆಡಿದ ಮಾತು­ಗ­ಳನ್ನು ಮೆಲುಕು ಹಾಕಿ.
ಜನ­ತಾ­ದಳ, ಕಾಂಗ್ರೆ­ಸ್‌­ಗಳು `ಅಪ್ಪ-ಮಕ್ಕಳ, ಅವ್ವ-ಮಕ್ಕಳ' ಪಕ್ಷ­ಗ­ಳಾ­ಗಿವೆ. ದೇಶದ ಹಿತ­ದೃ­ಷ್ಟಿ­ಗಿಂತ ಕುಟುಂ­ಬದ ಆಸ್ತಿ­ಯನ್ನು ಕ್ರೋಢೀ­ಕ­ರಿ­ಸು­ವುದು, ತಮ್ಮ ಮಕ್ಕ­ಳನ್ನು ರಾಜ­ಕೀ­ಯ­ದಲ್ಲಿ ಮೇಲೆ ತರು­ವುದು ಮಾತ್ರ ಇವೆ­ರೆಡು ಪಕ್ಷ­ಗಳು ಮಾಡಿ­ಕೊಂಡು ಬಂದಿವೆ. ಅಪ್ಪ-ಮಕ್ಕಳ ಪಕ್ಷದ ಸರ್ವ­ನಾ­ಶವೇ ತಮ್ಮ ಗುರಿ. ಕುಟುಂಬ ರಾಜ­ಕಾ­ರಣ ಇಲ್ಲಿಗೆ ಕೊನೆ­ಯಾ­ಗ­ಬೇಕು. ಇನ್ನೆಂದೂ ರಾಜ್ಯ­ದಲ್ಲಿ ಕುಟುಂಬ ರಾಜ­ಕಾ­ರಣ ದೈನೇಸಿ ಸ್ಥಿತಿಗೆ ರಾಜ್ಯ ಬರ­ಬಾ­ರದು. ಅಂತಹ ಉತ್ತಮ ಆಡ­ಳಿತ ನೀಡು­ತ್ತೇವೆ ಎಂದು ಯಡಿ­ಯೂ­ರಪ್ಪ ಘರ್ಜಿ­ಸಿ­ದ್ದರು.
ಕೇವಲ 8 ದಿನ­ಗಳ ಕಾಲ ಮುಖ್ಯ­ಮಂ­ತ್ರಿ­ಯಾಗಿ ಯಡಿ­ಯೂ­ರ­ಪ್ಪ­ನ­ವರು ಬಹು­ಮತ ಸಾಬೀತು ಪಡಿ­ಸಲು ಸಾಧ್ಯ­ವಾ­ಗದೇ ಇದ್ದಾಗ ಬೆಂಗ­ಳೂ­ರಿನ ಮಹಾ­ತ್ಮ­ಗಾಂಧಿ ಪ್ರತಿಮೆ ಬಳಿ ಯಡಿ­ಯೂ­ರಪ್ಪ, ಅನಂ­ತ­ಕು­ಮಾರ್‌ ಘರ್ಜಿ­ಸಿದ ಪರಿ ಇದೇ ಮಾದ­ರಿ­ಯ­ಲ್ಲಿತ್ತು. ಮಾರನೇ ದಿನದ ಎಲ್ಲಾ ಪತ್ರಿ­ಕೆ­ಗಳು, ಟಿ.ವಿ. ಮಾಧ್ಯ­ಮ­ಗಳು ಅದನ್ನೇ ಬಿತ್ತ­ರಿ­ಸಿ­ದ್ದವು. ಅವೆ­ಲ್ಲ­ವನ್ನೂ ಯಡಿ­ಯೂ­ರಪ್ಪ ಇದೀಗ ಮರೆತು ಬಿಟ್ಟಿ­ದ್ದಾರೆ.
`ತಾವೆಂದು ಕುಟುಂಬ ರಾಜ­ಕಾ­ರ­ಣ­ವನ್ನು ವಿರೋ­ಧಿ­ಸಿ­ರ­ಲಿಲ್ಲ, ಆ ಬಗ್ಗೆ ನಾನ್ಯಾ­ವತ್ತು ಟೀಕೆ ಮಾಡಿಲ್ಲ' ಎಂದು ಯಡಿ­ಯೂ­ರಪ್ಪ ಹೇಳಿ­ದ್ದಾರೆ. ಸಚಿವೆ ಶೋಭಾ ಕರಂ­ದ್ಲಾಜೆ ಕೂಡ, ಬಿಜೆಪಿ ಅದರ ವಿರುದ್ಧ ಎಂದೂ ಹೋರಾಟ ಮಾಡಿಲ್ಲ. ಅಪ್ಪ-ಮಗ ರಾಜ­ಕೀ­ಯ­ದಲ್ಲಿ ಇರ­ಬಾ­ರ­ದೆಂ­ದೇನೋ ಕಾನೂ­ನಿಲ್ಲ ಎಂದು ಘೋಷಿ­ಸಿ­ದ್ದಾರೆ.
ನೆಹರೂ ಕುಟುಂಬ ರಾಜ­ಕಾ­ರ­ಣ­ವನ್ನು ಆದಿ­ಯಿಂ­ದಲೂ ಬಿಜೆಪಿ ವಿರೋ­ಧಿ­ಸಿ­ಕೊಂಡು ಬಂದಿದ್ದು ಸುಳ್ಳೇ? ಜನ­ಸಂ­ಘದ ಸಂಸ್ಥಾ­ಪಕ ಶ್ಯಾಮ­ಪ್ರ­ಸಾದ್‌ ಮುಖರ್ಜಿ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜ­ಪೇಯಿ, ಬಿಜೆಪಿ ಮುಖಂಡ ಎಲ್‌.ಕೆ. ಆಡ್ವಾಣಿ ಪ್ರತಿ­ಪಾ­ದಿ­ಸಿದ್ದು, ಹೋರಾಡಿ ಕೊಂಡು ಬಂದಿದ್ದು ಎಲ್ಲವೂ ಸುಳ್ಳೇ? ತುರ್ತು ಪರಿ­ಸ್ಥಿ­ತಿಯ ನಂತರ ಅಸ್ತಿ­ತ್ವಕ್ಕೆ ಬಂದ ಕಾಂಗ್ರೆ­ಸ್ಸೇ­ತರ ಮೊದಲ ಸರ್ಕಾ­ರ­ದಲ್ಲಿ ಮೊರಾರ್ಜಿ ದೇಸಾಯಿ ಪ್ರಧಾ­ನಿ­ಯಾ­ಗು­ವಾಗ ಇದೇ ಜನ­ಸಂಘ ಯಾವ ಧ್ಯೇಯದ ಮೇಲೆ ಅವ­ರಿಗೆ ಬೆಂಬಲ ನೀಡಿತ್ತು. ನೆಹರೂ ಕುಟುಂ­ಬದ ಸರ್ವಾ­ಧಿ­ಕಾ­ರ­ವನ್ನು ಕೊನೆ­ಗಾ­ಣಿ­ಸ­ಬೇ­ಕೆಂಬ ಆಶೆ­ಯ­ಲ್ಲಿಯೇ ತಾನೆ? ಚರಿ­ತ್ರೆಯ ಅರಿ­ವಿ­ಲ್ಲ­ದ­ವರು, ಸ್ವಾರ್ಥ­ಕ್ಕಾಗಿ ರಾಜ­ಕೀ­ಯ­ವನ್ನು ಹಾಯಿ­ದೋಣಿ ಮಾಡಿ­ಕೊಂ­ಡ­ವರು ಮಾತ್ರ ಹೀಗೆಲ್ಲಾ ಮಾತ­ನಾ­ಡಲು ಸಾಧ್ಯ.
ರಾಮ­ಮ­ನೋ­ಹರ್‌ ಲೋಹಿಯಾ, ಮಧು ಲಿಮೆಯೆ, ಜಾರ್ಜ್‌ ಫರ್ನಾಂ­ಡೀಸ್‌, ವಿ.ಪಿ.ಸಿಂಗ್‌­ರಂ­ತಹ ಸಮಾ­ಜ­ವಾದಿ ಮುಖಂ­ಡರು ಇದನ್ನೇ ಪ್ರತಿ­ಪಾ­ದಿ­ಸುತ್ತಾ ಕಾಂಗ್ರೆ­ಸ್‌ನ್ನು ಹೀನಾ­ಮಾನ ಬಯ್ಯುತ್ತಾ ಹೋರಾಟ ನಡೆ­ಸಿ­ಕೊಂಡು ಬಂದರು. ಅದೆಲ್ಲಾ ಒತ್ತ­ಟ್ಟಿ­ಗಿ­ರಲಿ. ಬಿಜೆಪಿ ಕೂಡ ಕಳೆದ 50-60 ವರ್ಷ­ಗ­ಳಲ್ಲಿ ಕುಟುಂಬ ರಾಜ­ಕಾ­ರಣ ವಿರೋ­ಧಿ­ಸು­ವು­ದನ್ನೇ ಪ್ರಧಾನ ಅಸ್ತ್ರ­ವಾ­ಗಿ­ಸಿ­ಕೊಂಡು ಚುನಾ­ವ­ಣೆ­ಯಲ್ಲಿ ಹೆಚ್ಚೆಚ್ಚು ಸೀಟು ಗಳಿ­ಸುತ್ತಾ ಹೋಯಿತು.
ನೆಹರು, ಇಂದಿರಾ, ರಾಜೀವ, ಸೋನಿಯಾ, ರಾಹುಲ್‌ ಹೀಗೆ ಕಾಂಗ್ರೆಸ್‌ ಒಂದು ಕುಟುಂ­ಬದ ಸ್ವತ್ತಾ­ಗಿದೆ ಎಂಬ ಕಾರ­ಣಕ್ಕೆ ಜನ ಅದರ ವಿರುದ್ಧ ನಿಂತರು. ಪ್ರಜಾ­ಪ್ರ­ಭುತ್ವ ರಾಷ್ಟ್ರ­ವಾಗಿ ಭಾರತ ಪರಿ­ವ­ರ್ತಿ­ತ­ವಾದ ಮೇಲೂ ಒಂದೇ ಕುಟುಂ­ಬದ(ರಾಜ­ಮ­ನೆ­ತ­ನ­ದಂತೆ) ರಾಜ­ಕಾ­ರ­ಣ­ವನ್ನು ತೊಲ­ಗಿ­ಸಲು ನೂರಾರು ನಾಯ­ಕರು ಹಗಲು ರಾತ್ರಿ­ಯೆ­ನ್ನದೇ ದುಡಿ­ದಿ­ದ್ದಾರೆ. ಅದೆ­ಲ್ಲ­ದರ ಫಲಿ­ತ­ವಾ­ಗಿಯೇ ಬಿಜೆಪಿ ಇಂದು ಅಧಿ­ಕಾ­ರದ ಗದ್ದುಗೆ ಹಿಡಿ­ಯಲು ಸಾಧ್ಯ­ವಾ­ಗಿದೆ. ಈಗ ಅದೆ­ನ್ನೆಲ್ಲಾ ನಾವು ಮಾಡಿಯೇ ಇಲ್ಲ­ವೆಂದು ಯಡಿ­ಯೂ­ರ­ಪ್ಪ­ನ­ವರು ಹೇಳು­ತ್ತಾ­ರೆಂದು ಜನ ಏನೆಂದು ಕೊಳ್ಳ­ಬೇಕು.
ಹಾಗೆಯೇ ಯಡಿ­ಯೂ­ರ­ಪ್ಪ­ನ­ವರು ದೇವ­ರಾ­ಣೆಗೂ ತನ್ನ ಮಗ ಚುನಾ­ವ­ಣೆಗೆ ನಿಲ್ಲು­ವು­ದಿ­ಲ್ಲ­ವೆಂದು ಘಂಟಾ­ಘೋ­ಷ­ವಾಗಿ ಹೇಳಿ­ದ್ದರು. ಕಡೆಗೆ ಶಿವ­ಮೊ­ಗ್ಗದ ಹಿರಿಯ ಬಿಜೆಪಿ ಮುಖಂ­ಡ­ರನ್ನು ಕಡೆ­ಗ­ಣಿಸಿ ತಮ್ಮ ಮಗ ಬಿ.ವೈ. ರಾಘ­ವೇಂ­ದ್ರ­ನಿಗೆ ಲೋಕ­ಸ­ಭೆಗೆ ಸ್ಪರ್ಧಿ­ಸಲು ಅನುವು ಮಾಡಿ­ಕೊ­ಟ್ಟಿ­ದ್ದಾರೆ.
ಹಾಗಂತ ಅವರ ಮಗ ರಾಜ­ಕೀ­ಯಕ್ಕೆ ಬರ­ಬಾ­ರದು ಎಂಬುದು ಇಲ್ಲಿನ ವಾದ­ವಲ್ಲ. ರಾಜ­ಕಾ­ರಣ ಪ್ರತಿ­ಯೊ­ಬ್ಬರ ಹಕ್ಕು. ಭಾರ­ತೀಯ ಪ್ರಜೆ­ಯಾಗಿ ರಾಘ­ವೇಂದ್ರ ಚುನಾ­ವ­ಣೆಗೆ ಸ್ಪರ್ಧಿ­ಸು­ವು­ದನ್ನು ತಡೆ­ಯು­ವುದು ಸ್ವತಃ ಯಡಿ­ಯೂ­ರ­ಪ್ಪ­ನ­ವ­ರಿಗೆ ಸಾಧ್ಯ­ವಿಲ್ಲ. ಆದರೆ ತಮ್ಮ ಮಗ ಚುನಾ­ವ­ಣೆಗೆ ಸ್ಪರ್ಧಿ­ಸು­ವು­ದಿ­ಲ್ಲ­ವೆಂದು ದೇವರ ಮೇಲೆ ಆಣೆ ಮಾಡ­ಬೇ­ಕಾ­ಗಿ­ರ­ಲಿಲ್ಲ. ಅದು ಅವನ ಹಕ್ಕು, ಸ್ಪರ್ಧಿ­ಸು­ತ್ತಾ­ನೆಂದು ಅವರು ನೇರ­ವಾಗಿ ಹೇಳ­ಬಿ­ಡ­ಬ­ಹು­ದಿತ್ತು. ನಾಟ­ಕ­ವಾ­ಡಲು ಹೋಗಿ, ನಾಟ­ಕ­ಕ್ಕಾಗಿ ಹೆಣೆದ ಬಲೆಗೆ ತಾವೇ ಸಿಕ್ಕಿ­ಬಿ­ದ್ದಿ­ರುವ ಸ್ಥಿತಿ ಯಡಿ­ಯೂ­ರ­ಪ್ಪ­ನ­ವ­ರದು.
ಸೂಕ್ತ­ವಲ್ಲ:
ಯಾವುದೇ ಪಕ್ಷವೂ ಕುಟುಂಬ ರಾಜ­ಕಾ­ರ­ಣ­ವನ್ನು ಬೆಂಬ­ಲಿ­ಸು­ವುದು ಸೂಕ್ತ­ವಲ್ಲ. ದೇವೇ­ಗೌ­ಡರು, ಸೋನಿ­ಯಾ­ಗಾಂಧಿ ಮಾಡು­ತ್ತಾ­ರೆಂದು ಬಿಜೆ­ಪಿ­ಯ­ವರು ಮಾಡು­ವುದು ದಳ-ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಏನು ವ್ಯತ್ಯಾ­ಸ­ವು­ಳಿ­ದಂ­ತಾ­ಯಿತು?
ರಾಜ­ಕಾ­ರ­ಣಿಯ ಮಗನೇ ಇರಲಿ, ಯಾವಾ­ತನೇ ಇರಲಿ. ಚುನಾ­ವ­ಣೆಗೆ ಸ್ಪರ್ಧಿ­ಸಲು ರಾಜ­ಕೀಯ ಅನು­ಭವ, ಜನರ ಒಡ­ನಾಟ ಮುಖ್ಯ. ಶಿವ­ಮೊಗ್ಗ ಲೋಕ­ಸಭಾ ಕ್ಷೇತ್ರ­ದಲ್ಲಿ ಸ್ಪರ್ಧಿ­ಸ­ಲಿ­ರುವ ರಾಘ­ವೇಂ­ದ್ರ­ನಿಗೆ ಯಡಿ­ಯೂ­ರ­ಪ್ಪನ ಮಗ ಎಂಬ ಹೆಗ್ಗ­ಳಿ­ಕೆಯ ಹೊರ­ತಾಗಿ ಯಾವುದೇ ರಾಜ­ಕೀಯ ಅರ್ಹ­ತೆ­ಯಿಲ್ಲ. ಹಾಗಂ­ದರೆ ಮುಖ್ಯ­ಮಂ­ತ್ರಿ­ಯಾ­ಗಲು ಕುಮಾ­ರ­ಸ್ವಾ­ಮಿಗೆ ಏನಿತ್ತು ಎಂಬ ಮಾರು­ಪ್ರಶ್ನೆ ಕೇಳ­ಬ­ಹುದು? ಅದಕ್ಕೆ ಯಡಿ­ಯೂ­ರ­ಪ್ಪ­ನ­ವರೇ ಉತ್ತ­ರಿ­ಸ­ಬೇ­ಕಾ­ಗು­ತ್ತದೆ!
ಯಡಿ­ಯೂ­ರಪ್ಪ ಉಪ­ಮು­ಖ್ಯ­ಮಂ­ತ್ರಿ­ಯಾದ ನಂತರ ಪ್ರವ­ರ್ಧ­ಮಾ­ನಕ್ಕೆ ಬಂದ­ವರು ರಾಘ­ವೇಂದ್ರ. ಅಲ್ಲಿ­ಯ­ವ­ರೆಗೆ ಶಿಕಾ­ರಿ­ಪು­ರದ ಉಸ್ತು­ವಾರಿ ನೋಡಿ­ಕೊ­ಳ್ಳು­ತ್ತಿ­ದ್ದ­ವರು(ಯಡಿ­ಯೂ­ರಪ್ಪ ಶಾಸ­ಕ­ರಾಗಿ, ವಿರೋಧ ಪಕ್ಷದ ನಾಯ­ಕ­ರಾಗಿ 30 ವರ್ಷ ರಾಜ­ಕೀಯ ಜೀವನ ಅನು­ಭ­ವಿ­ಸಿ­ದಾಗ) ಅವರ ಆಪ್ತ ಗುರು­ಮೂರ್ತಿ ಹಾಗೂ ಪದ್ಮ­ನಾ­ಭ­ಭಟ್‌. ರಾಘ­ವೇಂದ್ರ ಬೆಂಗ­ಳೂ­ರಿ­ನ­ಲ್ಲಿ­ದ್ದಿದ್ದು ಬಿಟ್ಟರೆ ಶಿವ­ಮೊಗ್ಗ ರಾಜ­ಕಾ­ರ­ಣದ ಗಂಧ­ಗಾಳಿ ಗೊತ್ತಿ­ರ­ಲಿಲ್ಲ.
ತಮ್ಮ ಮಗ­ನನ್ನು ರಾಜ­ಕಾ­ರ­ಣಕ್ಕೆ ತರ­ಬೇ­ಕೆಂದು ನಿಶ್ಚ­ಯಿ­ಸಿದ ಯಡಿ­ಯೂ­ರಪ್ಪ ಕಳೆದ ಸ್ಥಳೀಯ ಸಂಸ್ಥೆ­ಗಳ ಚುನಾ­ವಣೆ ಸಂದ­ರ್ಭ­ದಲ್ಲಿ ಶಿಕಾ­ರಿ­ಪುರ ಪುರ­ಸಭೆ ಚುನಾ­ವ­ಣೆಗೆ ನಿಲ್ಲಿ­ಸಿ­ದರು. ಅಲ್ಲಿ ಗೆದ್ದ ರಾಘ­ವೇಂದ್ರ ಕೆಲ ದಿನ ಅಧ್ಯ­ಕ್ಷರೂ ಆದರು. ಅದರ ಜತೆಗೆ ವಿವೇ­ಕಾ­ನಂದ ಶಿಕ್ಷಣ ಸಂಸ್ಥೆಯ ಕಾರ್ಯ­ದ­ರ್ಶಿಯೂ ಆಗಿ ಕಾರ್ಯ­ನಿ­ರ್ವ­ಹಿ­ಸ­ತೊ­ಡ­ಗಿ­ದರು. ಯಡಿ­ಯೂ­ರಪ್ಪ ಉಪ­ಮು­ಖ್ಯ­ಮಂ­ತ್ರಿ­ಯಾದ ನಂತರ, ಅಂದರೆ ಅಧಿ­ಕಾರ ಅನು­ಭ­ವಿ­ಸ­ತೊ­ಡ­ಗಿದ ಮೇಲೆ ರಾಘ­ವೇಂದ್ರ ಮೇಲೇ­ರುತ್ತಾ ಬಂದರು. ಶಿವ­ಮೊಗ್ಗ ಜಿಲ್ಲೆಯ ರಾಜ­ಕಾ­ರ­ಣ­ದಲ್ಲಿ ಮೂಗು ತೂರಿ­ಸ­ಲಾ­ರಂ­ಭಿ­ಸಿದ ರಾಘು, ನಂತರ ಅಧಿ­ಕಾ­ರಿ­ಗಳ ವರ್ಗಾ­ವ­ಣೆ­ಯಂ­ತಹ ಕೆಲ­ಸ­ವನ್ನೂ ಮಾಡ­ತೊ­ಡ­ಗಿ­ದರು. ಇದು ರಾಘು ಚರಿತ್ರೆ.
ಆದರೆ ಶಿವ­ಮೊ­ಗ್ಗ­ದಲ್ಲಿ ಬಿಜೆ­ಪಿ­ಯನ್ನು ಕಟ್ಟಿ ಬೆಳೆ­ಸಿ­ದ­ವ­ರಲ್ಲಿ ಯಡಿ­ಯೂ­ರ­ಪ್ಪ­ನ­ವರ ಜತೆಗೆ ಡಿ.ಎಚ್‌. ಶಂಕ­ರ­ಮೂರ್ತಿ, ಕೆ.ಎಸ್‌. ಈಶ್ವ­ರಪ್ಪ, ಆಯ­ನೂರು ಮಂಜು­ನಾಥ್‌, ಆರಗ ಜ್ಞಾನೇಂದ್ರ, ಪಿ.ವಿ. ಕೃಷ್ಣ­ಭಟ್‌, ರಾಮ­ಚಂದ್ರ ಹೀಗೆ ಪಟ್ಟಿ ಬೆಳೆ­ಯುತ್ತಾ ಹೋಗು­ತ್ತದೆ.
ಮಾಜಿ ಮುಖ್ಯ­ಮಂತ್ರಿ ಎಸ್‌. ಬಂಗಾ­ರ­ಪ್ಪ­ನ­ವರ ಬಿಗಿ­ಮು­ಷ್ಟಿ­ಯ­ಲ್ಲಿದ್ದ ಶಿವ­ಮೊಗ್ಗ ಜಿಲ್ಲೆ­ಯನ್ನು ತಮ್ಮ ತೆಕ್ಕೆಗೆ ತೆಗೆ­ದು­ಕೊಂಡ ಯಡಿ­ಯೂ­ರಪ್ಪ, ಕ್ರಮೇ­ಣ­ವಾಗಿ ಬಂಗಾ­ರ­ಪ್ಪ­ನ­ವ­ರನ್ನೇ ಬದಿ­ಗೊ­ತ್ತು­ವಷ್ಟು ಸಾಮರ್ಥ್ಯ ಬೆಳೆ­ಸಿ­ಕೊಂ­ಡರು. ಅದಕ್ಕೆ ಬಂಗಾ­ರಪ್ಪ ಕೂಡ ಕಾರ­ಣ­ರಾ­ದರು. 2004ರಲ್ಲಿ ನಡೆದ ಚುನಾ­ವ­ಣೆ­ಯಲ್ಲಿ ಬಿಜೆಪಿ ಸೇರಿದ್ದ ಬಂಗಾ­ರಪ್ಪ ಜಿಲ್ಲೆ­ಯಲ್ಲಿ ಬಿಜೆಪಿ ಬೆಳೆ­ಯಲು ಕಾರ­ಣ­ರಾ­ದರು. ಸೊರಬ, ಭದ್ರಾ­ವತಿ ಹೊರ­ತಾಗಿ ಉಳಿದ 5 ಕಡೆ ಬಿಜೆಪಿ ಶಾಸ­ಕ­ರನ್ನು ಗೆಲ್ಲಿ­ಸಲು ಬಂಗಾ­ರಪ್ಪ ಕಾರ­ಣ­ರಾ­ದರು. ನಂತರ ಬಂಗಾ­ರಪ್ಪ ಬಿಜೆಪಿ ತೊರೆದು, ಸಮಾ­ಜ­ವಾದಿ ಪಕ್ಷ­ದಿಂದ ಸಂಸ­ದ­ರಾಗಿ, ನಂತರ ಅಲ್ಲೂ ಬಿಟ್ಟು ಈಗ ಕಾಂಗ್ರೆ­ಸಿಗೆ ಬಂದು ಸೇರಿ­ದ್ದಾರೆ.
ಸೋಲಿ­ಲ್ಲದ ಸರ­ದಾ­ರ­ನೆಂಬ ಕೀರ್ತಿಗೆ ಪಾತ್ರ­ರಾ­ಗಿದ್ದ ಬಂಗಾ­ರ­ಪ್ಪ­ರಿಗೆ ಸೋಲಿನ ರುಚಿ ತೋರಿ­ಸಿ­ದ­ವರು ಬಿಜೆಪಿ ಮುಖಂಡ ಆಯ­ನೂರು ಮಂಜು­ನಾಥ. ಒಮ್ಮೆ ಲೋಕ­ಸ­ಭೆಗೆ ಆರಿ­ಸಿ­ಹೋದ ಆಯ­ನೂರು ಪಕ್ಷದ ಆಂತ­ರಿಕ ಜಗ­ಳದ ಕಾರ­ಣ­ದಿಂದ ಬಿಜೆಪಿ ತೊರೆದು ಕಾಂಗ್ರೆ­ಸ್‌ಗೆ ಹೋದರು. ಬಂಗಾ­ರಪ್ಪ ಬಿಜೆ­ಪಿ­ಯಿಂದ ಸ್ಪರ್ಧಿ­ಸಿ­ದಾಗ ಆಯ­ನೂರು ಕಾಂಗ್ರೆ­ಸ್‌­ನಿಂದ ಕಣ­ಕ್ಕಿ­ಳಿ­ದಿ­ದ್ದರು. ಬಂಗಾ­ರಪ್ಪ ಸಮಾ­ಜ­ವಾದಿ ಪಕ್ಷ­ದಿಂದ ಕಣ­ಕ್ಕಿ­ಳಿ­ದಾ­ಗಲೂ ಆಯ­ನೂರು ಕಾಂಗ್ರೆಸ್‌ ಅಭ್ಯರ್ಥಿ. ಬಂಗಾ­ರ­ಪ್ಪ­ರನ್ನು ಸೋಲಿ­ಸಲು ಆಯ­ನೂ­ರ್‌ಗೆ ಆಗ­ಲಿ­ಲ್ಲ­ವಾ­ದರೂ ಸಮ­ಬ­ಲದ ಸ್ಪರ್ಧೆ­ಯೊ­ಡ್ಡಿ­ದ್ದರು. ಬಂಗಾ­ರಪ್ಪ ಸಮಾ­ಜ­ವಾದಿ ಪಕ್ಷ­ದಿಂದ ಸ್ಪರ್ಧಿ­ಸಿ­ದ್ದಾಗ ಬಿಜೆ­ಪಿ­ಯಿಂದ ಭಾನು­ಪ್ರ­ಕಾಶ್‌ ಸ್ಪರ್ಧಿ­ಸಿ­ದ್ದರು. ಅವರು ಕೂಡ ಸಮರ್ಥ ಸ್ಪರ್ಧೆ­ಯೊ­ಡ್ಡಿ­ದ್ದರು.
ಹೀಗೆ ಇಬ್ಬರು ಗರ­ಡಿ­ಯಾ­ಳು­ಗಳು ಬಿಜೆ­ಪಿ­ಯ­ಲ್ಲಿ­ದ್ದರೂ ತಮ್ಮ ಮಗ­ನನ್ನೇ ಕಣಕ್ಕೆ ಇಳಿ­ಸಲು ಯಡಿ­ಯೂ­ರಪ್ಪ ಮುಂದಾ­ಗಿದ್ದು ಜಿಲ್ಲಾ ಬಿಜೆ­ಪಿ­ಯಲ್ಲಿ ಅಸ­ಮಾ­ಧಾ­ನದ ಹೊಗೆ ಎಬ್ಬಿ­ಸಿದೆ. ಆರಂ­ಭ­ದಲ್ಲಿ ತೀವ್ರ ವಿರೋಧ ವ್ಯಕ್ತ­ವಾ­ಗಿ­ತ್ತಾ­ದರೂ ನಂತರ ಯಡಿ­ಯೂ­ರಪ್ಪ ಅದನ್ನು ಶಮನ ಮಾಡಿ­ದ್ದಾರೆ. ಬೇರೆ ಜಿಲ್ಲೆ­ಯಲ್ಲಿ ಗೆಲ್ಲುವ ಅಭ್ಯರ್ಥಿ ಇಲ್ಲದೇ ಇರು­ವು­ದ­ರಿಂದ ಅನ್ಯ ಪಕ್ಷ­ದಿಂದ ಕರೆ­ತಂದು ಮಣೆ ಹಾಕು­ತ್ತಿ­ದ್ದೇವೆ ಎಂದು ಬಿಜೆಪಿ ನೇತಾ­ರರು ಹೇಳು­ತ್ತಿ­ದ್ದಾ­ರಾ­ದರೂ ಶಿವ­ಮೊಗ್ಗ ಜಿಲ್ಲೆ­ಯಲ್ಲಿ ಇದ್ದ­ವ­ರನ್ನು ಬಿಟ್ಟು ತಮ್ಮ ಮಗ­ನಿಗೆ ಮಣೆ ಹಾಕಿದ್ದು ಯಾಕೆ ಎಂಬ ಪ್ರಶ್ನೆಗೆ ಬಿಜೆ­ಪಿ­ಯಲ್ಲಿ ಸದ್ಯ­ವಂತೂ ಉತ್ತ­ರ­ವಿಲ್ಲ.
ವಿಸ್ತ­ರಣೆ:
ಕುಟುಂಬ ರಾಜ­ಕಾ­ರಣ ಯಡಿ­ಯೂ­ರ­ಪ್ಪ­ನ­ವರ ಮನೆ­ಯಲ್ಲಿ ಮಾತ್ರ ಬೇರು ಬಿಟ್ಟಿಲ್ಲ. ಬಿಜೆ­ಪಿಗೆ ವ್ಯಾಧಿ­ಯಂತೆ ಅಂಟಿ­ಕೊಂ­ಡಿದೆ. ಇಡೀ ಬಳ್ಳಾರಿ ಜಿಲ್ಲೆಯೇ ಕುಟುಂಬ ರಾಜ­ಕಾ­ರ­ಣದ ಬಿರು­ಬಿ­ಸಿ­ಲಿ­ನಿಂದ ಕಂಗೆ­ಟ್ಟಿ­ದ್ದರೆ ಇದೀ ಮತ್ತೊ­ಬ್ಬರು ಅದಕ್ಕೆ ಸೇರ್ಪ­ಡೆ­ಯಾ­ಗು­ತ್ತಿ­ದ್ದಾರೆ.
ಜನಾ­ರ್ದ­ನ­ರೆಡ್ಡಿ, ಕರು­ಣಾ­ಕ­ರ­ರೆಡ್ಡಿ, ಸೋಮ­ಶೇ­ಖರ ರೆಡ್ಡಿ ಹೀಗೆ ಒಂದೇ ಕುಟುಂ­ಬದ ಮೂವರು ಶಾಸ­ಕರು, ಮಂತ್ರಿ­ಗಳು ಬಳ್ಳಾ­ರಿ­ಯ­ಲ್ಲಿ­ದ್ದಾರೆ. ಇವರ ಕುಟುಂ­ಬದ ಸೋದ­ರ­ನಂ­ತಿ­ರುವ ಶ್ರೀರಾ­ಮುಲು ಸಚಿ­ವ­ರಾ­ಗಿ­ದ್ದರೆ, ಅವರ ಅಳಿಯ ಸುರೇ­ಶ­ಬಾಬು ಶಾಸ­ಕ­ರಾ­ಗಿ­ದ್ದಾರೆ. ಇದೀಗ ಬಳ್ಳಾರಿ ಲೋಕ­ಸಭಾ ಕ್ಷೇತ್ರ­ದಿಂದ ಶ್ರೀರಾ­ಮುಲು ಸೋದರಿ ಜೆ. ಶಾಂತ ಕಣ­ಕ್ಕಿ­ಳಿ­ದಿ­ದ್ದಾರೆ. ಅಲ್ಲಿಗೆ ಇಡೀ ಒಂದು ಜಿಲ್ಲೆ ರೆಡ್ಡಿ­ಗಳ ಒಕ್ಕ­ಲಿಗೆ ಸೇರಿ­ದಂ­ತಾ­ಗು­ತ್ತದೆ.
ಹಾವೇ­ರಿ­ಯಲ್ಲಿ ಸಚಿವ ಸಿ.ಎಂ. ಉದಾಸಿ ಪುತ್ರ ಶಿವ­ಕು­ಮಾರ ಉದಾಸಿ, ಚಿಕ್ಕೋ­ಡಿ­ಯಲ್ಲಿ ಸಚಿವ ಉಮೇಶ ಕತ್ತಿ ಸೋದರ ರಮೇಶ ಕತ್ತಿ ಸ್ಪರ್ಧಿ­ಸು­ತ್ತಿ­ದ್ದಾರೆ. ಕುಟುಂಬ ರಾಜ­ಕಾ­ರ­ಣ­ವನ್ನು ಪ್ರಬ­ಲ­ವಾಗಿ ವಿರೋ­ಧಿ­ಸುತ್ತಾ ಬಂದಿದ್ದ ಬಿಜೆಪಿ ಲೋಕ­ಸಭೆ ಚುನಾ­ವ­ಣೆ­ಯಲ್ಲಿ ಅದನ್ನೇ ಮಾಡುತ್ತಾ ಬಂದಿದ್ದು, ಒಂದು ಪ್ರಮುಖ ಅಸ್ತ್ರ ಗೊಟಕ್‌ ಎಂದಿದೆ.
ಸಂಪಂಗಿ ಪ್ರಕ­ರಣ:
ಬಿಜೆ­ಪಿಯ ಇನ್ನೊಂದು ಅಸ್ತ್ರ ಭ್ರಷ್ಟಾ­ಚಾರ ವಿರೋಧ. ಚುನಾ­ವಣೆ ವೇಳೆ ಬಿಜೆಪಿ ಸಿದ್ಧ­ಪ­ಡಿ­ಸಿದ್ದ ಪ್ರಣಾ­ಳಿ­ಕೆ­ಯಲ್ಲಿ ಭ್ರಷ್ಟಾ­ಚಾರ ವಿರೋಧ ಹಾಗೂ ನಿರ್ಮೂ­ಲನೆ ತಮ್ಮ ಪ್ರಮುಖ ಧ್ಯೇಯ­ವೆಂದು ಘೋಷಿ­ಸ­ಲಾ­ಗಿತ್ತು.
ಬಿಜೆಪಿ ಅಧಿ­ಕಾ­ರ­ಕ್ಕೇರಿ ಕೇವಲ ಐದು ತಿಂಗಳು ಕಳೆ­ಯು­ವ­ಷ್ಟ­ರಲ್ಲಿ ಬಿಜೆಪಿ ಶಾಸಕ ಸಂಪಂಗಿ, ಶಾಸ­ಕರ ಭವ­ನ­ದಲ್ಲಿ 5 ಲಕ್ಷ ರೂ. ಲಂಚ ಸ್ವೀಕ­ರಿ­ಸು­ವಾಗ ಲೋಕಾ­ಯು­ಕ್ತ­ರಿಗೆ ಸಿಕ್ಕಿ­ಬಿ­ದ್ದರು. ಇದು ದೇಶದ ಇತಿ­ಹಾ­ಸ­ದಲ್ಲೇ ಪ್ರಪ್ರ­ಥಮ ಎನ್ನು­ವಂ­ತಹ ಪ್ರಕ­ರಣ. ಇಲ್ಲಿ­ಯ­ವ­ರೆಗೆ ಯಾವುದೇ ಶಾಸಕ, ಸಂಸದ ತಮ್ಮ ಭವ­ನ­ದಲ್ಲೆ ಲಂಚ ಸ್ವೀಕ­ರಿ­ಸು­ವಾಗ ರೆಡ್‌ ಹ್ಯಾಂಡೆಡ್‌ ಆಗಿ ಸಿಕ್ಕಿ­ಬಿ­ದ್ದಿ­ರ­ಲಿಲ್ಲ. ಲೋಕ­ಸ­ಭೆ­ಯಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕ­ರಿ­ಸಿದ ಪ್ರಕ­ರಣ, ಮತ ಹಾಕಲು ಹಣ ಪಡೆದ ಪ್ರಕ­ರಣ ದೊಡ್ಡ ಸುದ್ದಿ­ಯಾ­ಗಿ­ತ್ತಾ­ದರೂ ಅದಕ್ಕೆ ಸಾಕ್ಷ್ಯ­ವಿ­ರ­ಲಿಲ್ಲ. ಆದರೆ ಸಂವಿ­ಧಾ­ನ­ಬ­ದ್ಧ­ವಾದ, ನ್ಯಾಯ­ಮೂ­ರ್ತಿ­ಗಳ ನೇತೃ­ತ್ವದ ಲೋಕಾ­ಯು­ಕ್ತವೇ ಶಾಸ­ಕ­ರನ್ನು ಬಲೆಗೆ ಕೆಡ­ವಿದೆ. ಅಲ್ಲಿಗೆ ಭ್ರಷ್ಟಾ­ಚಾರ ವಿರೋ­ಧಿ­ಸು­ವು­ದಾಗಿ ಹೇಳುತ್ತಾ ಬಂದಿದ್ದ ಬಿಜೆ­ಪಿಯ ಬಣ್ಣ ನಡು­ಬೀ­ದಿ­ಯಲ್ಲಿ ಹರಾ­ಜಿಗೆ ಬಿತ್ತು.
ಸರ್ಕಾರ ರಚ­ನೆ­ಯಾದ ಕೇವಲ ಒಂಭತ್ತು ತಿಂಗ­ಳಲ್ಲೇ ಸಚಿ­ವರು ಮಾಡು­ತ್ತಿ­ರುವ ದುಡ್ಡು ಸ್ವತಃ ಬಿಜೆಪಿ ಕಾರ್ಯ­ಕ­ರ್ತ­ರನ್ನೇ ದಂಗು ಬಡಿ­ಸಿದೆ. ಸಹ­ಕಾರ ಇಲಾ­ಖೆಯ ಭ್ರಷ್ಟಾ­ಚಾ­ರ­ವನ್ನು ಮಹಾ­ಲೇ­ಖ­ಪಾ­ಲರ ವರದಿ ಬಯ­ಲಿ­ಗೆ­ಳೆ­ದಿದೆ.
ಈ ಹಿಂದಿನ ಚುನಾ­ವ­ಣೆ­ಗ­ಳಲ್ಲಿ ಬಿಜೆಪಿ ಝಳ­ಪಿ­ಸು­ತ್ತಿದ್ದ ಅಸ್ತ್ರ­ಗಳು ಈಗ ಮಕಾಡೆ ಮಲ­ಗಿವೆ. ಕುಟುಂಬ ರಾಜ­ಕಾ­ರಣ ಹಾಗೂ ಭ್ರಷ್ಟಾ­ಚಾ­ರ­ವನ್ನು ವಿರೋ­ಧಿ­ಸಲು ಅದನ್ನು ಕಾಂಗ್ರೆಸ್‌ ಮತ್ತು ಜೆಡಿ ಎಸ್‌ಗೆ ಆಪಾ­ದಿ­ಸಲು ಈಗ ಬಿಜೆ­ಪಿಗೆ ಜಂಘಾ­ಬ­ಲ­ವಿಲ್ಲ. ಈಗೇ­ನಿ­ದ್ದರೂ ಹಣ, ಆಮಿಷ, ಜಾತಿ­ಯಷ್ಟೇ ಉಳಿ­ದಿ­ರು­ವುದು.

1 comment:

citizen said...

BJP ಯ party with a difference ಅನ್ನುವ ಹೆಗ್ಗಳಿಕೆ ಅಧಿಕಾರಕ್ಕೆ ಬರುವವರೆಗೆ ಮಾತ್ರ ಉಳಿದಿತ್ತು. ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಪಕ್ಷಾಂತರ ಗಳಿಂದ ಈಗ ಇವರಿಗೂ ಕಾಂಗ್ರೆಸ್, ಜೆಡಿಎಸ್ ಗೂ ಉಳಿದಿರುವ ಒಂದೇ ವ್ಯತ್ಯಾಸ ಅಂದರೆ ಬಿಜೆಪಿ ಹಿಂದೂ ಪಕ್ಷ, ಉಳಿದೆರಡು ಹಿಂದೂ ವಿರೋಧಿ ಪಕ್ಷಗಳು, ಅಷ್ಟೇ.