Sunday, May 3, 2009

ಮತಸಮರ-ಪ್ರಗತಿಗೆ ಜ್ವರ

`ಹಸ್ತಕ್ಕೆ ಮತ ದೇಶಕ್ಕೆ ಹಿತ, ಬಿಜೆಪಿಯೊಂದೇ ಪರಿಹಾರ, ರೈತರ ಸರ್ಕಾರ ಜನತಾದಳ ಸಾಕಾರ'
ಐದು ವರ್ಷಕ್ಕೊಮ್ಮೆ ಕಿವಿಗಮರುತ್ತಿದ್ದ ಇಂತಹ ಸವಕಲು ಘೋಷಣೆಗಳು ಈಗ ಮೂರು-ಆರು ತಿಂಗಳಿಗೊಮ್ಮೆ ಕೇಳುತ್ತಿವೆ. ಘೋಷಣೆಗಳು-ಭರವಸೆಗಳು ಆಕರ್ಷಣೆ ಕಳೆದುಕೊಳ್ಳುತ್ತಿವೆ. ದಿನಾ ಸಾಯೋರಿಗೆ ಅಳೋರ್ಯಾರು ಎಂಬುದು ಚುನಾವಣೆ ಬಗ್ಗೆ ಜನರಾಡುತ್ತಿರುವ ಕ್ಲೀಶೆಯಾಗಿರುವ ಟೀಕೆ. ಹೋದೆಯಾ ಪಿಶಾಚಿ ಅಂದ್ರೆ ಬಂದೇ ಗವಾಕ್ಷಿಲಿ ಎಂಬಂತೆ ಮತ್ತೆ ಮತ್ತೆ ಬರುತ್ತಲೇ ಇದೆ.
ಚುನಾವಣೆ: ಇದು ಮುಗಿಯುವುದಲ್ಲ, ನಡೆಯುತ್ತಿರುವುದು, ನಡೆಯುತ್ತಲೇ ಇರುವುದು ಎಂಬುದು ಇತ್ತೀಚಿನ ವಿದ್ಯಮಾನ. 2008ರ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದ ನಂತರ ಈಗ ಎರಡನೇ ಬಾರಿ ಇಡೀ ರಾಜ್ಯದಲ್ಲಿ ಮತ ಸಮರ ನಡೆಯುತ್ತಿದೆ. ಈಗಿನ ಫಲಿತಾಂಶ ಆಧರಿಸಿ ಇನ್ನಾರು ತಿಂಗಳೊಳಗೆ ಮತ್ತೆ ಚುನಾವಣೆ ಬರಲಿದೆ. ಅದಕ್ಕೆ ಅಂಟಿಕೊಂಡೇ ಎರಡು ವರ್ಷದಿಂದ ಬಾಕಿಯುಳಿದಿರುವ ಬೆಂಗಳೂರು ಮಹಾನಗರ ಪಾಲಿಕೆಗೂ ಚುನಾವಣೆ ನಡೆಯಬೇಕಿದೆ.
ಹೀಗೆ ವರ್ಷದುದ್ದಕ್ಕೂ ಮತಕ್ಕಾಗಿ ರಾಜಕಾರಣಿಗಳು ಮುಗಿಬೀಳುವುದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಬೀಳುವುದಿಲ್ಲವೇ ಎಂಬುದು ನಾಗರಿಕರು ರಾಜಕಾರಣಿಗಳಿಗೆ ಕೇಳಬೇಕಾದ ಪ್ರಶ್ನೆ.
2004ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಆಗ ಯಾವ ಪಕ್ಷವೂ ಸ್ಪಷ್ಟ ಬಹುಮತ ಗಳಿಸಲಿಲ್ಲ. ಕಾಂಗ್ರೆಸ್‌-ಜೆಡಿ ಎಸ್‌, ಜೆಡಿ ಎಸ್‌-ಬಿಜೆಪಿ ಪಕ್ಷಗಳ `ಕೂಡಿಕೆ' ಸರ್ಕಾರಗಳನ್ನು ಜನ ನೋಡಿದರು. ಏನೆಲ್ಲಾ ಸರ್ಕಸ್‌ ಮಧ್ಯೆಯೂ ಐದು ವರ್ಷವನ್ನು ಪೂರ್ಣಗೊಳಿಸಲು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗಲೇ ಇಲ್ಲ. ವಿಧಾನಸಭೆ ವಿಸರ್ಜನೆಯಾಗಿ ಮತ್ತೆ ಚುನಾವಣೆ ಎದುರಾಯಿತು.
ಮಾಯಗಾರರು ಜನರ ಮುಂದೆ ಮೋಡಿ ಮಾಡಿದರೂ ಮತದಾರ ಸ್ಪಷ್ಟ ಬಹುಮತ ಕೊಡಲಿಲ್ಲ. ಆದರೆ ಜನರ ನಿಜವಾದ ಆಯ್ಕೆ ಬಿಜೆಪಿಯಾಗಿತ್ತು. 110 ಸ್ಥಾನಗಳಿಸಿದ್ದ ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಮೂರು ಸ್ಥಾನ ಕಡಿಮೆಯಿತ್ತು. `ಸುಭದ್ರ' ಸರ್ಕಾರ ಸ್ಥಾಪನೆಯ ದೃಷ್ಟಿಯಿಂದ ಆಪರೇಶನ್‌ ಕಮಲ ಶುರುವಾಯಿತು. ದುಪುದುಪು ಅಂತ ಒಬ್ಬೊಬ್ಬ ಶಾಸಕರೇ ರಾಜೀನಾಮೆ ಕೊಟ್ಟು ಚುನಾವಣೆಗೆ ಅನುವು ಮಾಡಿಕೊಟ್ಟರು. ಕೆಲವರು ಮಂತ್ರಿ ಮಹೋದಯರಾದರು, ಮತ್ತೆ ಕೆಲವರು ನಿಗಮ ಮಂಡಳಿಗೆ ಬಂದು ಕೂತರು. ರಾಜೀನಾಮೆ ಕೊಟ್ಟು `ಜನರಾಯ್ಕೆ'ಯನ್ನು ತಾವೇ ತಿರಸ್ಕರಿಸಿದರೂ ಸರ್ಕಾರಿ ಸವಲತ್ತುಗಳು ಅನುಭವಿಸಿದರು.
ಯಡಿಯೂರಪ್ಪನವರ ಕುರ್ಚಿ ಭದ್ರವಾಗಿಲು ಬೇಕಿದ್ದ ಮೂರು ಶಾಸಕರ ಬದಲಿಗೆ ಏಳು ಮಂದಿ ರಾಜೀನಾಮೆ ಕೊಟ್ಟರು. ಅಭಿವೃದ್ಧಿಗೆ ಬೆಂಬಲಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದರು.
ಮಧುಗಿರಿಯಲ್ಲಿ ಗೌರಿಶಂಕರ್‌, ತುರುವೇಕೆರೆಯಲ್ಲಿ ಜಗ್ಗೇಶ್‌, ದೊಡ್ಡಬಳ್ಳಾಪುರದಲ್ಲಿ ಜೆ.ನರಸಿಂಹಸ್ವಾಮಿ, ಹುಕ್ಕೇರಿಯಲ್ಲಿ ಉಮೇಶ ಕತ್ತಿ, ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ, ಕಾರವಾರದಲ್ಲಿ ಆನಂದ ಆಸ್ನೋಟಿಕರ್‌, ದೇವದುರ್ಗದಲ್ಲಿ ಶಿವನಗೌಡ ನಾಯಕ್‌ ರಾಜೀನಾಮೆಯಿತ್ತು ಬಿಜೆಪಿಯಿಂದ ಮರು ಆಯ್ಕೆ ಬಯಸಿದ್ದರು. ಮದ್ದೂರಿನಲ್ಲಿ ಶಾಸಕ ಸಿದ್ದರಾಜು ಆಕಸ್ಮಿಕ ಮರಣದಿಂದ ಅಲ್ಲೂ ಚುನಾವಣೆ ನಡೆಯಿತು. ಈ ಎಂಟು ಸ್ಥಾನಗಳ ಪೈಕಿ ಬಿಜೆಪಿಯ ಐವರು ಹಾಗೂ ಜೆಡಿ ಎಸ್‌ನ ಮೂವರು ಗೆದ್ದರು. ಅಲ್ಲಿಗೆ ಸರ್ಕಾರ ಭದ್ರ, ಸುಭದ್ರವಾಯಿತು.
ಅಷ್ಟರಲ್ಲೇ ಮತ್ತೆ ಲೋಕಸಭೆ ಚುನಾವಣೆ ಎದುರಾಯಿತು. ರಾಜ್ಯದ 28 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ಮೇ 16 ರವರೆಗೂ ರಾಜಕಾರಣಿಗಳು, ಸರ್ಕಾರಿ ಯಂತ್ರಾಂಗ, ಸರ್ಕಾರಿ ನೌಕರರು ಇದರಲ್ಲಿ ತಲ್ಲೀನರಾಗಿದ್ದಾರೆ.
ಹಾಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ಬೆನ್ನಲ್ಲೇ ವಿಧಾನಸಭೆಗೆ ಮತ್ತೆ ಉಪ ಚುನಾವಣೆ ಬರಲಿದೆ. ಔರಾದ್‌ ಕಾಂಗ್ರೆಸ್‌ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ರಾಜೀನಾಮೆ ನೀಡ ಬೀದರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಚುನಾವಣೆ ದಿನಾಂಕಕ್ಕೆ 45 ದಿನಗಳ ಮೊದಲೇ ಇವರು ರಾಜೀನಾಮೆ ಸಲ್ಲಿಸಿದ್ದರಿಂದಾಗಿ ಲೋಕಸಭೆ ಚುನಾವಣೆ ಜತೆಗೆ ಅವರು ರಾಜೀನಾಮೆ ನೀಡಿದ ವಿಧಾನಸಭಾ ಕ್ಷೇತ್ರಕ್ಕೂ ಚುನಾವಣೆ ನಡೆಯುತ್ತಿದೆ. ಹಾಗಾಗಿ ಅದರಿಂದ ಹೆಚ್ಚಿನ ಹೊರೆಯಿಲ್ಲ.
ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಲು ಚನ್ನಪಟ್ಟಣದ ಕಾಂಗ್ರೆಸ್‌ ಶಾಸಕ ಸಿ.ಪಿ. ಯೋಗೀಶ್ವರ್‌ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಬೆಂಬಲಿಸಲು ಗೋವಿಂದರಾಜನಗರದ ಕಾಂಗ್ರೆಸ್‌ ಶಾಸಕ ವಿ.ಸೋಮಣ್ಣ ರಾಜೀನಾಮೆ ನೀಡಿದ್ದಾರೆ. ಇವರೆಡೂ ಕ್ಷೇತ್ರಕ್ಕೆ ಮತ್ತೆ ಉಪಚುನಾವಣೆ ನಡೆಯಲೇಬೇಕಿದೆ.
ಇದರ ಜತೆಗೆ ಬೆಂಗಳೂರು ಗ್ರಾಮಾಂತರದಲ್ಲಿ ರಾಮನಗರ ಶಾಸಕ ಎಚ್‌.ಡಿ. ಕುಮಾರಸ್ವಾಮಿ, ಬೆಂಗಳೂರು ಕೇಂದ್ರದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್‌ಅಹಮದ್‌ಖಾನ್‌, ಬೆಂಗಳೂರು ದಕ್ಷಿಣದಲ್ಲಿ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ, ಗುಲ್ಬರ್ಗಾದಲ್ಲಿ ಶಾಸಕ ಮಲ್ಲಿಕಾರ್ಜುನ ಖರ್ಗೆ, ಸಚಿವ ರೇವುನಾಯಕ್‌ ಬೆಳಮಗಿ, ಚಾಮರಾಜನಗರದಲ್ಲಿ ಕೊಳ್ಳೇಗಾಲ ಶಾಸಕ ಆರ್‌.ಧ್ರುವನಾರಾಯಣ್‌ ಸ್ಫರ್ಧೆಯಲ್ಲಿದ್ದಾರೆ.
ಇವರ ಪೈಕಿ ಯಾರೇ ಲೋಕಸಭೆಗೆ ಆರಿಸಿ ಹೋದರೂ ಆ ಕ್ಷೇತ್ರದಲ್ಲಿ ಮತ್ತೆ ಶಾಸಕರ ಆಯ್ಕೆಗಾಗಿ ಉಪ ಚುನಾವಣೆಯ ಭೂತ ಕಾಡಲಿದೆ. ಮತ್ತೆ ಹಳೇ ಸವಕಲು ಘೋಷಣೆಗಳು, ಹಣ-ಹೆಂಡದ ಹೊಳೆ, ಈಡೇರದ ಭರವಸೆಗಳ ಠೇಂಕಾರ ಕೇಳಿಸಲಿದೆ.
ಪರಸ್ಪರ ಆರೋಪ, ಪ್ರತ್ಯಾರೋಪ, ದೂಷಣೆ, ಕೈ ಕಡೀತಿನಿ, ಕಾಲು ಕಡಿತೀನಿ, ತಲೆ ಕತ್ತರಿಸುವಿಕೆಯ ಬೂಟಾಟಿಕೆಗಳ ಅಬ್ಬರವನ್ನು ಮುಗ್ಧ ಮತದಾರ ತಣ್ಣಗೆ ಕೇಳಿಸಿಕೊಳ್ಳಬೇಕಿದೆ. ಮತ್ತೆ ಅದೇ ಹಣವಂತರು, ರಿಯಲ್‌ ಎಸ್ಟೇಟ್‌ ಕುಳಗಳು ವಿಧಾನಸಭೆಗೆ ಆರಿಸಲಿದ್ದಾರೆ. ರಾಜಕೀಯ ಚದುರಂಗದಾಟದಲ್ಲಿ ಸಾಮಾನ್ಯ ಮತದಾರನಿಗೆ ಪೊಳ್ಳು ಘೋಷಣೆಗಳ ಹೊರತು ಮತ್ತೇನು ಸಿಗದು.
ಪ್ರಗತಿಗೆ ಜ್ವರ:
ಹೀಗೆ ಮೇಲಿಂದ ಮೇಲೆ ಚುನಾವಣೆಗಳು ಬರುತ್ತಿದ್ದರೆ ಅದರ ಪರಿಣಾಮ ರಾಜ್ಯದ ಅಭಿವೃದ್ಧಿಯ ಮೇಲೆ ಆಗುತ್ತದೆ. ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಸಚಿವ ಸಂಪುಟ ಸದಸ್ಯರು, ಹಿರಿ-ಕಿರಿ ಅಧಿಕಾರಿಗಳು ಚುನಾವಣೆಯಲ್ಲಿ ನಿರತರಾಗುವುದರಿಂದ ಯಾವ ಸರ್ಕಾರಿ ಕಡತಗಳು ಧೂಳಿಂದ ಮೇಲೇಳುವುದಿಲ್ಲ.
ಲೋಕಸಭೆ ಚುನಾವಣೆ ಘೋಷಣೆಯಾದ ಮಾರ್ಚ್‌ 2 ರಿಂದ ನೀತಿ ಸಂಹಿತೆ ಜಾರಿಯಿದ್ದು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಹೊಸದಾಗಿ ಅನುಷ್ಠಾನ ಮಾಡುವಂತಿಲ್ಲ. ಘೋಷಣೆ ದಿನಾಂಕಕ್ಕಿಂತ ಮೊದಲು ಮಂಜೂರಾದ ಕಾಮಗಾರಿಗಳನ್ನು ಮಾತ್ರ ಮಾಡಬಹುದಾಗಿದೆ ವಿನಃ ಹೊಸ ಕಾಮಗಾರಿಗಳಿಗೆ ಚಾಲೂ ನೀಡುವಂತಿಲ್ಲ.
ಜಾನಪದ ಜಾತ್ರೆ, ಸರ್ಕಾರದಿಂದ ನೀಡುವ ವಿವಿಧ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುವ ಅನುದಾನ, ಕಲಾವಿದರಿಗೆ ಬೇಕಾದ ಅನುಕೂಲ ಇವ್ಯಾವನ್ನು ಮಾಡುವಂತಿಲ್ಲ. ಎಲ್ಲದಕ್ಕೂ ನೀತಿ ಸಂಹಿತೆ ಅಡ್ಡಿ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಲಭ್ಯವಾಗುವ ಅನುದಾನವನ್ನು ಬಿಡುಗಡೆ ಮಾಡುವಂತಿಲ್ಲ.
ರಸ್ತೆ, ಬೀದಿದೀಪ, ಕುಡಿಯುವ ನೀರಿನಂತ ಮೂಲಭೂತ ಸೌಲಭ್ಯಗಳನ್ನು ಮರೆತು ಬಿಡೋಣ. ಆದರೆ ಹೃದ್ರೋಗ, ಕಿಡ್ನಿ ಕಾಯಿಲೆಯಂತ ಗಂಭೀರ ಸ್ವರೂಪದಲ್ಲಿ ತುರ್ತು ಚಿಕಿತ್ಸೆ ಬಯಸುವ ಬಡರೋಗಿಗಳು ಮುಖ್ಯಮಂತ್ರಿಯಿಂದ ಹಣ ಯಾಚಿಸುವಂತಿಲ್ಲ. ಎಲ್ಲವೂ ನೀತಿ ಸಂಹಿತೆಯ ವ್ಯಾಪ್ತಿಗೆ ಒಳಪಡುವುದರಿಂದ ಯಾವುದೇ ಸಹಾಯವೂ ಲಭ್ಯವಿಲ್ಲ.
ಅನಿವಾರ್ಯ ಸಂದರ್ಭದಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲೇಬೇಕಾದ ತುರ್ತಿರುವ ಸರ್ಕಾರಿ ನೌಕರರು ಪದೇ ಪದೇ ಬರುವ ಚುನಾವಣೆಯಿಂದ ಸಂತ್ರಸ್ತರಾಗಿದ್ದಾರೆ. ಸರ್ಕಾರದ ಮಟ್ಟದಲ್ಲಿ ಲಾಬಿ ಮಾಡುವ ಛಾತಿಯುಳ್ಳ ನೌಕರರದ್ದು ಒಂದು ಪಾಡು. ಹಣ, ರಾಜಕೀಯ ಪ್ರಭಾವ ಇಲ್ಲದ ನೌಕರರದ್ದು ಮತ್ತೊಂದು ಪಾಡು. ಪ್ರತಿವರ್ಷ ಏಪ್ರಿಲ್‌-ಮೇ ನಲ್ಲಿ ಸಾಮಾನ್ಯ ವರ್ಗಾವಣೆ ನಡೆಯುತ್ತದೆ. ಆದರೆ ಈ ಬಾರಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಯಾವುದೇ ವರ್ಗಾವಣೆ ಮಾಡುವಂತಿಲ್ಲ. ಮೇ 16 ಕ್ಕೆ ಚುನಾವಣೆ ಮುಗಿಯುತ್ತದಾದರೂ ಶೈಕ್ಷಣಿಕ ವರ್ಷ ಆರಂಭವಾಗುವುದರಿಂದ ಆಗಲೂ ವರ್ಗಾವಣೆ ಕನಸನ್ನು ನೌಕರರು ಮಡಿಚಿಡಬೇಕು. ವೃದ್ಧ ತಂದೆತಾಯಿ ಹೊಂದಿರುವವರು, ಸತಿ-ಪತಿ ಪ್ರಕರಣ, ಅನಾರೋಗ್ಯ ಮಕ್ಕಳನ್ನು ಹೊಂದಿರುವವರು, ವ್ಕ್ರೆಯಕ್ತಿಕವಾಗಿ ಕಾಯಿಲೆಯಿಂದ ಬಸವಳಿದ ಸರ್ಕಾರಿ ನೌಕರರು ವರ್ಗಾವಣೆಗೆ ಪರದಾಡಬೇಕಾಗಿದೆ.
ಲೋಕಸಭೆ ಚುನಾವಣೆಯಿರುವುದರಿಂದ ಇಡೀ ರಾಜ್ಯಕ್ಕೆ ನೀತಿ ಸಂಹಿತೆ ಅನ್ವಯವಾಗಿದೆ. ಆದರೆ ಉಪಚುನಾವಣೆ ಕೆಲವೇ ಕ್ಷೇತ್ರಗಳಿಗೆ ಸೀಮಿತವಾಗುವುದರಿಂದ ಆಗಲೂ ಆಯಾ ಪ್ರದೇಶಕ್ಕೆ ನೀತಿ ಸಂಹಿತೆ ಜಾರಿಯಾಗುತ್ತದೆ. ಇದು ಆಯಾ ಕ್ಷೇತ್ರದ ಅಭಿವೃದ್ಧಿಗೆ ಹೊಡೆತ ನೀಡುತ್ತದೆ.
ಚುನಾವಣೆಗೆ ಸರ್ಕಾರ ವೆಚ್ಚ ಮಾಡುವ ಹಣ ಕೂಡ ಸಾರ್ವಜನಿಕರು ತಮ್ಮ ಬೆವರು ಬಸಿದು ಕಟ್ಟುವ ತೆರಿಗೆ ಮೂಲದ್ದು. ಅದು ಯಾರದ್ದೋ ದುಡ್ಡಲ್ಲ. ಸಾರ್ವಜನಿಕರ ಪ್ರತಿಯೊಂದು ಪೈಸೆಯನ್ನು ಎಚ್ಚರದಿಂದ ಖರ್ಚು ಮಾಡಬೇಕಾದ ಹೊಣೆಗಾರಿಕೆ ಹೊಂದಿರುವ ಸರ್ಕಾರ ಈ ರೀತಿ ದುಂದು ಮಾಡುವುದುದು ಎಷ್ಟು ಸರಿ?
ಚುನಾವಣೆ ಬಂದರೆ ಆಗಲಾದರೂ ರಸ್ತೆ, ನೀರು, ಚರಂಡಿ, ವಿದ್ಯುದ್ದೀಪ, ಅಗತ್ಯ ಕಾಮಗಾರಿಗಳನ್ನು ಸ್ಥಳೀಯ ರಾಜಕಾರಣಿಗಳು ಮಾಡಿಸುತ್ತಾರೆಂಬ ಎಂಬ ಮತ್ತೊಂದು ವಾದವೂ ಇದೆ. ಮತ ಯಾಚಿಸಲು ಹೋದಾಗ ಮತದಾರ ಪ್ರಭುವಿನ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸುವುದಕ್ಕಿಂತ ಮೊದಲೇ ಅಭಿವೃದ್ಧಿ ಕಾಮಗಾರಿ ಮಾಡಿಸಿ, ನಂತರ ಮತ ಕೇಳಲು ಹೋಗುವ ಹುನ್ನಾರದಿಂದಲೂ ಚುನಾವಣೆ ಬಂದರೆ ಒಳ್ಳೆಯದೆಂಬ ಮಾತೂ ಇದೆ.
ಆದರೆ ಒಟ್ಟಾರೆ ಚುನಾವಣೆ ಯಾರ ಸ್ವಾರ್ಥಕ್ಕೆ, ಯಾರ ಅನುಕೂಲಕ್ಕೆ ಎಂಬ ಪ್ರಶ್ನೆ ಮತದಾರನದು. ಅಲ್ಲಿಂದ ಇಲ್ಲಿಗೆ ಮರಕೋತಿಯಾಟವಾಡುವ, ಅಭಿವೃದ್ಧಿ ಮುಖವಾಡದಡಿ ತಮ್ಮ ಹಿತಾಸಕ್ತಿಯನ್ನು ಪೂರೈಸಿಕೊಳ್ಳುವ ರಾಜಕಾರಣಿಗಳು ಆಡುವ ಆಟಕ್ಕೆ ಚುನಾವಣಾ ಆಯೋಗವಾದರೂ ಕಡಿವಾಣ ಹಾಕಬೇಕಾಗಿದೆ. ಒಂದು ಚಿಹ್ನೆ, ಪಕ್ಷದಡಿ ಗೆದ್ದ ಅಭ್ಯರ್ಥಿ ಒಂದು- ಎರಡು-ಆರು ತಿಂಗಳಲ್ಲಿ ರಾಜೀನಾಮೆ ನೀಡಿ, ಮತ್ತೊಂದು ಪಕ್ಷದಿಂದ ಸ್ಪರ್ಧಿಸುವುದು, ಚುನಾವಣೆ ವೆಚ್ಚವನ್ನು ಜನರ ಮೇಲೆ ಹೇರುವುದು ಪ್ರಜಾತಂತ್ರ ವಿರೋಧಿಯಲ್ಲವೇ ಎಂಬ ಚರ್ಚೆಯನ್ನು ಆರಂಭಿಸಲಂತೂ ಇದು ಸಕಾಲ.

No comments: