Monday, February 16, 2009
ಕನ್ನಡಪ್ರಭದ ಬಾರುಕೋಲು
ಈ ಪ್ರಶ್ನೆಗಳಿಗೆ ಹಲವು ರೀತಿಯ ಅಭಿಪ್ರಾಯ ಬೇಧಗಳು ಇರಲು ಸಾಧ್ಯ. ಒಬ್ಬೊಬ್ಬರು ಒಂದೊಂದು ರೀತಿಯಾಗಿಯೂ ಹೇಳಬಹುದು. `ಆ್ಯಕ್ಟಿವಿಸಂ' ಎಂಬುದು ಅನೇಕ ಪತ್ರಕರ್ತರಿಗೆ ತಥ್ಯವಾಗದ ಸಂಗತಿ. ಅದರಿಂದ ದೂರವುಳಿದ ಗುಮಾಸ್ತಿಕೆ ಮಾಡುವವರೇ ಜಾಸ್ತಿ. ಕನ್ನಡ, ನೆಲ-ಜಲ, ಸೌಹಾರ್ದ, ಜಾತಿ ಕ್ರೌರ್ಯ ಮತ್ತಿತರ ಸಂಗತಿಗಳು ಉದ್ಭವವಾದಾಗಲಾದರೂ ಪತ್ರಕರ್ತರೊಳಗಿನ `ನಿಜ ಮನುಷ್ಯ' ಎದ್ದು ಪ್ರಖರಗೊಳ್ಳುತ್ತಾನಾ? `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ' ಎಂಬ ರಾಷ್ಟ್ರಕವಿ ಕುವೆಂಪುರವರ ವಾದವನ್ನು ಒಪ್ಪುತ್ತಾರಾ? ಎಂಬಿತ್ಯಾದಿ ಉಸಾಬರಿಯೇ ಬೇಡ ಎನ್ನುವ ಪತ್ರಕರ್ತರೇ ಹೆಚ್ಚು.
ಅಂತಹ ಹೊತ್ತಿನಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಕಾರ್ಯಶೀಲ ಪತ್ರಕರ್ತನ ನಿಜ ಹೊಣೆಯನ್ನು ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಅಪ್ರತ್ಯಕ್ಷವಾಗಿ ಪ್ರತಿಬಿಂಬಿಸಿರುತ್ತಾರೆ. ಅಂತಹದೊಂದು ಘಟನೆ ಇತ್ತೀಚೆಗೆ ನಡೆಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಮಾಧ್ಯಮದಲ್ಲಿ ಓದಿ ಪಿಯುಸಿ/ಎಸ್ಸೆಸ್ಸೆಲ್ಸಿಯಲ್ಲಿ ಅತೀಹೆಚ್ಚು ಅಂಕಪಡೆವರಿಗೆ 15-10 ಸಾವಿರ ರೂ. ನಗದು ಬಹುಮಾನ ನೀಡುವ ಸಮಾರಂಭವದು. ಬೆಂಗಳೂರಿನ ಶಿಕ್ಷಕರ ಸದನಲ್ಲಿ ಇದು ಏರ್ಪಾಟಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಕನ್ನಡಪ್ರಭ ಸಂಪಾದಕ ಎಚ್.ಆರ್. ರಂಗನಾಥ್ ಅಂದು ವೇದಿಕೆಯಲ್ಲಿದ್ದ ಸರ್ಕಾರಿ ವರಿಷ್ಠರಿಗೆ ಬಾರುಕೋಲು ಬೀಸಿದ್ದರು. ಚಾಟಿಯಂತ ಅವರ ಮೊನಚು ನಾಲಿಗೆ ಅಧಿಕಾರವಂತರಿಗೆ ದಿಗಿಲು ಹುಟ್ಟಿಸಿತ್ತು. ಸಚಿವರು, ಅಧಿಕಾರಿಗಳು ತಲೆ ಕೆಳಗೆ ಹಾಕಿ ಕುಳಿತಿದ್ದರು. ರಂಗನಾಥ ಮಾತನಾಡುವ ಧಾಟಿ ರೈತಸಂಘದ ಧುರೀಣ ಪ್ರೊ ಎಂ.ಡಿ. ನಂಜುಂಡಸ್ವಾಮಿಯವರ ಮಾತಿನ ಹರಿತ ನೆನಪಾಗುತ್ತಿತ್ತು. ವೇದಿಕೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ, ವಕ್ಫ್‌ಸಚಿವ ಮುಮ್ತಾಜ್ ಅಲಿಖಾನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್ ಇದ್ದರು.
ರಂಗನಾಥ್ ಮಾತನಾಡಿದ್ದು ಯಥಾವತ್ತು ಇಲ್ಲಿದೆ.
ಇದು ನಾಚಿಕೆಗೇಡಿನ ಸಮಾರಂಭ. ಖಂಡಿತಾ ಸಂಭ್ರಮ ಪಡುವ ಸಮಾರಂಭವಿದಲ್ಲ. ಕನ್ನಡ ಮಾಧ್ಯಮದಲ್ಲಿ ಅನಿವಾರ್ಯವಾಗಿ ಓದುತ್ತಿರುವವರು ಕರೆತಂದು 10 ಸಾವಿರ ಕೊಟ್ಟು ಸನ್ಮಾನಿಸುತ್ತಿದ್ದೀರಲ್ಲಾ ನಿಮಗೆ ನಾಚಿಕೆಯಾಗಬೇಕು. ಕನ್ನಡ ಅನುಷ್ಠಾನ ಮಾಡದ ಸರ್ಕಾರಗಳು ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಈ ರೀತಿಯ ಸಂಭ್ರಮ ಆಚರಣೆಗೆ ಒಡ್ಡಿಕೊಳ್ಳೊತ್ತದೆ ಎಂಬುದು ತಮ್ಮ ಅನಿಸಿಕೆ.
ಕನ್ನಡವನ್ನೇ ಓದೋಲ್ಲ ಎನ್ನುವವರಿಗೆ ಏನೂ ಮಾಡದ ಪರಿಸ್ಥಿತಿಯಲ್ಲಿರುವ ಸರ್ಕಾರ ಅನಿವಾರ್ಯವಾಗಿ ತಮ್ಮ ಪಾಡಿಗೆ ಕನ್ನಡದಲ್ಲಿ ಓದುತ್ತಿರುವವರಿಗೆ ಸನ್ಮಾನ ಮಾಡುತ್ತಿರುವುದಕ್ಕೆ ನಾಚಿಕೆಪಡಬೇಕು.
ಕನ್ನಡದ ಬಗ್ಗೆ ಮಾತನಾಡಿದರೆ, ಕನ್ನಡದ ಪರವಾಗಿ ಹೋರಾಟ ಮಾಡಿದರೆ, ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಬೀದಿಯಲ್ಲಿ ನಿಂತು ಘೋಷಿಸಿದರೆ `ರೌಡಿ'ಗಳು ಎಂದು ಕರೆಯುತ್ತೀರಿ. ಸರ್ಕಾರದವ್ರು ಗೂಂಡಾಕಾಯ್ದೆ ಬಳಸುತ್ತಾರೆ. ಹಾಗಾದರೆ ಇನ್ನೂ ಕನ್ನಡ ಅನುಷ್ಠಾನವಾಗದೇ ಇರುವ ಬಗ್ಗೆ ಕನ್ನಡಿಗರು ಸುಮ್ಮನೇ ಕೂರಬೇಕೇ?
ಕನ್ನಡದ ಪರವಾಗಿ ಸ್ವಲ್ಪ ಗಟ್ಟಿಧ್ವನಿಯಲ್ಲಿ ಕನ್ನಡಪ್ರಭ ಬರೆದಾಗ ಮಾರನೇ ದಿನ ಫೋನು ಬರುತ್ತದೆ. ರಂಗನಾಥ್, ತುಂಬಾ ಉದ್ವೇಗಗೊಂಡಿದ್ದೀರಿ, ಅಷ್ಟು ಉದ್ವೇಗ ಕನ್ನಡಪ್ರಭಕ್ಕೆ ಏಕೆ? ಎಂದು ಪ್ರಶ್ನೆ ಕೇಳುತ್ತಾರೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡ ಪ್ರಭ ಬರೆಯದೇ ವಾಷಿಂಗ್‌ಟನ್ ಪೋಸ್ಟ್ ಬರೆಯಲು ಸಾಧ್ಯವೇ? ಕನ್ನಡದ ಪತ್ರಿಕೆಗಳು ಈ ಬದ್ಧತೆ ತೋರಿಸಬೇಕಲ್ಲವೆ?
ಸರ್ಕಾರಗಳು, ರಾಜಕಾರಣಿಗಳು ಕನ್ನಡ ಪರವಾಗಿರುವಂತೆ ಪತ್ರಿಕೆಗಳು ಎಷ್ಟು ಬರೆದರೂ ಪ್ರಯೋಜನವಾಗಿಲ್ಲ. ವಿವಿಧ ರೀತಿಯ ಹೋರಾಟಗಾರರು ತರಹೇವಾರಿ ಹೋರಾಟ ಮಾಡಿದರೂ ಸರ್ಕಾರ ಏನೂ ಮಾಡಿಲ್ಲ. ಸಾಹಿತಿ, ಬುದ್ದಿಜೀವಿಗಳು ಹೇಳಿದ್ದಾಯ್ತು. ಆದರೂ ಇಲ್ಲಿಯವರೆಗಿನ ಯಾವುದೇ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ. ಈ ಸರ್ಕಾರ ಒಂದುಮಟ್ಟಿಗೆ ಮಠಾಧೀಶರು ಹೇಳಿದ್ದನ್ನೂ ಕೇಳುತ್ತಿದೆ. ವೇದಿಕೆಯಲ್ಲಿ ಸುತ್ತೂರು ಮಠಾಧೀಶರು ಈ ಬಗ್ಗೆ ಸರ್ಕಾರಕ್ಕೆ ತಿಳಿಹೇಳಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ದೂರದೂರದ ಜಿಲ್ಲೆಗಳಿಂದ ಬಂದಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸರ್ಕಾರಕ್ಕೆ ಸರಿಯಾಗಿ ಪಾಠ ಕಲಿಸಬೇಕು. ಇಡೀ ಜನ ಸರ್ಕಾರಕ್ಕೆ ತಿಳಿಹೇಳಬೇಕು.
ರಾಜಕಾರಣಿಗಳು ವೋಟುಬ್ಯಾಂಕ್ ರಾಜಕಾರಣ ಮಾಡುತ್ತಾರೆಂದು ನಾವು ಹೇಳುತ್ತೇವೆ. ಹಾಗಿದ್ದರೆ ಕರ್ನಾಟಕದಲ್ಲಿ ಇಲ್ಲಿಯವರೆಗೆ ಆಳಿದ ಸರ್ಕಾರಗಳು ಕನ್ನಡಿಗರ ವೋಟು ಬ್ಯಾಂಕ್ ಆಧಾರದ ಮೇಲೆ ತಾನೇ ಗೆದ್ದಿರುವುದು. ಕೆಲವೇ ಜನ ಕನ್ನಡೇತರರಿಗೆ ಹೆದರಿ ಕನ್ನಡ ಅನುಷ್ಠಾನ ಮಾಡದೇ ಇರುವುದು ಕನ್ನಡಿಗರಿಗೆ ಬಗೆವ ದ್ರೋಹ.
ಬೆಂಗಳೂರಿನಲ್ಲಿ ಕನ್ನಡ ಸತ್ತುಹೋಗಿ ಬಹಳ ದಿನಗಳಾಗಿವೆ. ಹಾಗಿದ್ದೂ ಕನ್ನಡ ಕಲಿಯದ ಅಧಿಕಾರಿಗಳನ್ನು ಇನ್ನೂ ಯಾಕೆ ಇಟ್ಟುಕೊಂಡಿದ್ದೀರಿ. ಕನ್ನಡವನ್ನೇ ಕಲಿಯದ ಅಧಿಕಾರಿಗಳು ಕನ್ನಡ ಉದ್ದಾರವನ್ನೇನು ಮಾಡಿಯಾರು? ಇಲ್ಲಿಯವರೆಗೆ ಆಳಿದ ಯಾವ ಸರ್ಕಾರಗಳು ಕನ್ನಡದ ಸರ್ಕಾರಗಳಲ್ಲ. ಏಕೆಂದರೆ ಅವು ಕನ್ನಡಿಗರಿಗಾಗಿ ಏನೂ ಮಾಡಿಲ್ಲ.
ನಾನು ಇಷ್ಟೆಲ್ಲಾ ಹೇಳಿದ್ದರಿಂದ ಮುಖ್ಯಮಂತ್ರಿ ಚಂದ್ರು ಅಂದುಕೊಳ್ಳುತ್ತಿದ್ದಾರೆ. ಈ ರಂಗನ್ನ ಯಾಕೆ ಕರೆದನಪ್ಪಾಂತ. ಆದರೆ ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸಿದಾಗಲೇ ಇದೇ ರೀತಿ ಮಾತನಾಡಬೇಕೆಂದುಕೊಂಡು ಬಂದಿದ್ದೆ. ಕನ್ನಡದ ವಿಷಯದಲ್ಲಿ ಈ ರೀತಿ ಮಾತನಾಡದೇ ಇನ್ನು ಹೇಗೆ ಮಾತನಾಡಬೇಕು?
ಒಬ್ಬರು ಮುಖ್ಯಮಂತ್ರಿಗಳು ತಮ್ಮ ಬಳಿಬಂದು ದೆಹಲಿಗೆ ಹೋದರೆ ಅಲ್ಲಿನ ಪತ್ರಕರ್ತರು `ಕೆನ್ ಯು ಸ್ಪೀಕ್ ಇನ್ ಇಂಗ್ಲಿಷ್' ಎಂದು ಕೇಳುತ್ತಾರೆ ಎಂದಿದ್ದರು. ಹಾಗನ್ನಿಸಿಕೊಂಡು ಸುಮ್ಮನೆ ಬಂದಿದ್ದೀರಲ್ಲಾ, ನಿಮ್ಮ ಮೂರ್ಖತನಕ್ಕಿಷ್ಟು ಎಂದು ಬೈದಿದ್ದಲ್ಲದೇ, `ರಷ್ಯದ, ಚೀನಾದ ಪ್ರಧಾನಿ ಬಂದರೆ ಇದೇ ಪ್ರಶ್ನೆ ಕೇಳುತ್ತೀರಾ'ಎಂದು ಮರುಪ್ರಶ್ನೆ ಹಾಕಬೇಕಿತ್ತು ಎಂದು ಸಲಹೆ ನೀಡಿದ್ದೆ. ಮತ್ತೊಂದು ಬಾರಿ ದೆಹಲಿಗೆ ಹೋದಾಗ ಅವರು ಹಾಗೆಯೇ ಕೇಳಿದ್ದರಂತೆ. ಕನ್ನಡ ಮಾತನಾಡುವುದನ್ನು ನಾವೇ ಕಲಿಯದಿದ್ದರೆ ಹೇಗೆ?
ಮುಂದೆ ಮಾತನಾಡುವವರು ಕನ್ನಡದ ಬಗ್ಗೆ ಹೀಗೆ ಮಾತನಾಡಲಿ ಎಂದು ಖಾರವಾಗಿಯೇ ಮಾತನಾಡಿದ್ದೇನೆ. ವೇದಿಕೆಯ ಮೇಲಿದ್ದವರಿಗೆ ನನ್ನ ಮಾತುಗಳಿಂದ ಮುಜುಗರವಾಗಿರಬಹುದು. ಆದರೂ ಪರವಾಗಿಲ್ಲ. ನನ್ನ ಮಾತಿನ ಧಾಟಿಯೇ ಇದು.
ರಂಗನಾಥ್ ಮಾತುಕೇಳಿ ಮುಖ್ಯಮಂತ್ರಿ ಚಂದ್ರು ಒಳಗೊಳಗೆ ಖುಷಿಗೊಂಡರೆ ಸಚಿವೆ ಶೋಭಾ ತುಂಬಾ ಮುಜುಗರಕ್ಕೀಡಾಗಿದ್ದರು. ಆನಂತರದ ಮಾತುಗಳಲ್ಲಿ ರಂಗನಾಥರವರ ಮಾತುಗಳನ್ನು ಅವರು ಸಮರ್ಥಿಸಿಕೊಂಡರು.
ಅಕ್ಷರ ವಂಚಿತರಿಂದ `ಅಕ್ಷರಸ್ಥ'ರಿಗೆ ಕಾವ್ಯಸ್ಪರ್ಧೆ
*ಬೆಂಗಳೂರಿನ ಸ್ಲಮ್‌ನಿವಾಸಿಗಳ ಸಾಹಸ
*ಸ್ಪರ್ಧೆಗೆ ಬಂದ ಕವನಗಳ ಸಂಖ್ಯೆ ಇನ್ನೂರು
ಅನಿವಾರ್ಯ ಕಾರಣದಿಂದಲೋ, ಹುಡುಗಾಟಿಕೆಯ ಉಮೇದಿನಿಂದಲೋ ಶಾಲೆ ಬಿಟ್ಟು, ಅಕ್ಷರವಂಚಿತರಾದ ಯುವಕ/ಯುವತಿಯ ಕೂಟವೊಂದು ಕಾಲೇಜು ಅಧ್ಯಾಪಕರಿಗೆ, ಪ್ರೌಢಶಾಲೆ ಶಿಕ್ಷಕರಿಗೆ ಕಾವ್ಯಸ್ಪರ್ಧೆ ಏರ್ಪಡಿಸಿ ದಾಖಲೆ ನಿರ್ಮಿಸಿದೆ.
ಕೊಳಗೇರಿಯಲ್ಲಿ ಜೀವನ ಸಾಗಿಸುತ್ತಾ ಹೊಟ್ಟೆ ಪಾಡಿಗೆ ಗಾರೆ ಕೆಲಸ, ಮೂಟೆ ಹೋರುವುದು, ಕಾರು ತೊಳೆಯುವುದು, ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವವರೇ ಸೇರಿಕೊಂಡು ಇಂತಹವೊಂದು ಸಾಹಸವನ್ನು ಮೆರೆದಿದ್ದಾರೆ. ಅಕ್ಷರವಂಚಿತರು ಸೇರಿಕೊಂಡು ರೂಪಿಸಿದ ಕಾವ್ಯಸ್ಪರ್ಧೆಗೆ ಬಂದ ಪ್ರವೇಶಗಳ ಸಂಖ್ಯೆ ಬರೋಬ್ಬರಿ ಇನ್ನೂರು.
ರಾಜ್ಯದ ಮೂಲೆಮೂಲೆಯ ವಿವಿಧ ಕಾಲೇಜುಗಳಲ್ಲಿ, ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರು, ಡಾಕ್ಟರೇಟ್ ಪಡೆದವರು, ಸಂಶೋಧನೆಯಲ್ಲಿ ತೊಡಗಿರುವವರು, ಕಾವ್ಯಕಸುಬು ಮಾಡುತ್ತಿರುವವರು ಸ್ಪರ್ಧೆಗೆ ತಮ್ಮ ರಚನೆಗಳನ್ನು ಕಳಿಸಿದ್ದಾರೆ. ಅಕ್ಷರವನ್ನೇ ಪ್ರೀತಿಸಲು ಮರೆತು, ಕಾಯಕವನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ಯುವಕ/ಯುವತಿಯರು `ಸ್ತ್ರೀಯರ ಕುರಿತು ಕವನ ಕಳಿಸಿ' ಎಂಬ ತಮ್ಮ ಕರೆ ಮನ್ನಿಸಿ ಹರಿದು ಬಂದ ಕವನಗಳ ಮಹಾಪೂರ ಕಂಡು ಬೆರಗಾಗಿದ್ದಾರೆ.
ಎಲ್ಲಾ ಕವನಗಳನ್ನು ಪೇರಿಸಿ ಕವಿಗಳಾದ ಎಲ್.ಎನ್. ಮುಕುಂದರಾಜ್ ಹಾಗೂ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಮೇಷ್ಟ್ರಾಗಿರುವ ಡೊಮಿನಿಕ್ ಅವರ ಮುಂದೆ ಹರಡಿ ಆಯ್ಕೆ ಮಾಡಿ ಕೊಡಿ ಎಂದು ಕೋರಿದ್ದಾರೆ. ಅವರಿಬ್ಬರು ಬಹುಮಾನಿತ ಕವಿಗಳನ್ನು ಆಯ್ಕೆ ಮಾಡಿದ್ದಾರೆ. ಅರಸೀಕೆರೆಯ ಮಮತಾ ಹಾಗೂ ಬಿಜಾಪುರದ ಗೀತಾ ಸನದಿ ಕ್ರಮವಾಗಿ ಮೊದಲೆರಡು ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಬೆಟ್ಟದ ನೆಲ್ಲಿಕಾಯಿ, ಸಮುದ್ರದ ಉಪ್ಪು:
ಇದೊಂಥರ ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎತ್ತಿಣಿಂದೆತ್ತ ಸಂಬಂಧವಯ್ಯಾ ಎಂಬ ಮಾದರಿಯದು. ಅಕ್ಷರದ ಅರಿವೇ ಇಲ್ಲದ ಸಮುದಾಯ ಒಂದು ಕಡೆ. ಅಕ್ಷರವನ್ನೇ ಹೊಟ್ಟೆ ಪಾಡಿಗೆ ನೆಚ್ಚಿಕೊಂಡ ಸಮುದಾಯ ಮತ್ತೊಂದು ಕಡೆ. ಇಬ್ಬರನ್ನೂ ಸೇರಿಸಿದ್ದು ಕಾವ್ಯ ಸ್ಪರ್ಧೆ.
ಅದನ್ನು ಆಗು ಮಾಡಿದ್ದು ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನ ಸಣ್ಣ ಸ್ಲಮ್ಮೊಂದರ ಕ್ರಿಯಾಶೀಲರು. ಇಸ್ಕಾನ್ ಎದುರಿಗೆ ಇರುವ ಈ ಸ್ಲಮ್‌ನಲ್ಲಿ ಹುಟ್ಟಿಕೊಂಡ ಚೇತನಧಾರೆ ಟ್ರಸ್ಟ್ ಹಾಗೂ ಜನಾಸ್ತ್ರ ಸಂಘಟನೆ ಕಾವ್ಯ ಸ್ಪರ್ಧೆಯ ಕನಸಿಗೆ ಬೀಜಾಂಕುರ ಮಾಡಿದ್ದು.
ಕಾವ್ಯಸ್ಪರ್ಧೆಯ ರೂವಾರಿಗಳಲ್ಲಿ ಆದಿತ್ಯ ಮಾತ್ರ ಪಿಯುಸಿವರೆಗೆ ಓದಿದ್ದು, ಕಪ್ಪು ಹಕ್ಕಿಯ ಹಾಡು ಎಂಬ ಕವನ ಸಂಕಲನ ತರುವ ಉತ್ಸಾಹದಲ್ಲಿದ್ದಾರೆ. ಉಳಿದವರೆಲ್ಲಾ ಐದನೇ ತರಗತಿ ಓದಿದವರಲ್ಲ.
ಕೆಲವರು ಟಯೋಟ ಫ್ಯಾಕ್ಟರಿಗೆ ಕಾರು ತೊಳಿಯಲು ಹೋಗುತ್ತಾರೆ. ಇನ್ನು ಕೆಲವರು ಮೂಟೆ ಹೊರಲು ಎಪಿ ಎಂಸಿ ಯಾರ್ಡ್‌ಗೆ ತೆರಳುತ್ತಾರೆ. ಮತ್ತೊಂದಿಷ್ಟು ಜನ ಗಾರೆ ಕೆಲಸ, ಸೆಂಟ್ರಿಂಗ್,ಮರಗೆಲಸ, ವೈಟ್‌ವಾಷಿಂಗ್ ಮಾಡುತ್ತಾರೆ. ಯುವತಿಯರು ಬೆಳಗಾನೆದ್ದು ಬ್ಯೂಟಿ ಪಾರ್ಲರ್‌ಗಳಲ್ಲಿ ಸಹಾಯಕಿಯರಾಗಿ ದುಡಿಯುತ್ತಾರೆ. ರಜೆಯೂ ಇಲ್ಲದೇ ಹೊಟ್ಟೆ ಪಾಡಿಗೆ ದುಡಿಯುವ ಇವರೆಲ್ಲಾ ಸೇರುವುದು ದುಡಿಮೆ ಹೊತ್ತು ಮುಗಿದ ಮೇಲೆಯೇ.
ಇದರ ಜತೆಗೆ ಕಾರ್ಡಿನಲ್ಲಿ ರಂಗೋಲಿ ಸ್ಪರ್ಧೆಯನ್ನೂ ನಡೆಸಿದ್ದು, ಇದಕ್ಕೆ ಬಂದ ಪ್ರವೇಶಗಳ ಸಂಖ್ಯೆ 150.
ಸ್ಲಮ್ ನಿವಾಸಿಗಳು ಯಾತಕ್ಕೂ ಬರುವುದಿಲ್ಲ, ಅವರಿಗೆ ತಿಳಿವಳಿಕೆ, ಸಂವೇದನೆಗಳೇ ಇರುವುದಿಲ್ಲ, ಪುಂಡರು ಎಂಬ ಭಾವನೆ ಹೊರಜಗತ್ತಿನವರಲ್ಲಿ ಸಾಮಾನ್ಯ. ಅದನ್ನು ಹೋಗಲಾಡಿಸಬೇಕೆಂಬ ತವಕದಿಂದ ಕಾವ್ಯಸ್ಪರ್ಧೆ ಮಾಡಿದೆವು. ಅದರಲ್ಲಿ ಯಶಸ್ವಿಯಾದೆವು ಎಂಬ ವಿಶ್ವಾಸ ಆದಿತ್ಯ ಅವರದ್ದು.
ಶಾಸ್ತ್ರೀಯ ಸ್ಥಾನ ಅನಿಶ್ಚಿತ: ಸರ್ಕಾರದ ಮೀನಾಮೇಷ
ಇನ್ನೂ ಸಲ್ಲಿಕೆಯಾಗದ ಇಂಪ್ಲೀಡಿಂಗ್
ಸಂಭ್ರಮದ ಮಧ್ಯೆ ವಾಸ್ತವ ಮರೆತ ಸರ್ಕಾರ
ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ಧತೆ
ಕನ್ನಡಕ್ಕೆ ಅಭಿಜಾತ ಸ್ಥಾನ(ಶಾಸ್ತ್ರೀಯ) ನೀಡಿದ್ದನ್ನು ಪ್ರಶ್ನಿಸಿ ತಮಿಳುನಾಡಿನ ಆರ್ ಗಾಂಧಿ ರಿಟ್ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದಿದ್ದರೂ, ರಾಜ್ಯ ಸರ್ಕಾರ ಇದರ ಬಗ್ಗೆ ಉದಾಸೀನ ಧೋರಣೆ ತಾಳಿರುವುದರಿಂದ ಕನ್ನಡ ಶಾಸ್ತ್ರೀಯ ಭಾಷೆಯಾಗಿ ಉಳಿಯುವುದು ಅನಿಶ್ಚಿತವಾಗಿದೆ.
ಈ ಬಗ್ಗೆ ಸರ್ಕಾರದ ಪ್ರಮುಖ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ಕಡೆಯಿಂದ ನಿರೀಕ್ಷಿತ ಮಟ್ಟದ ಪ್ರಕ್ರಿಯೆ ನಡೆದಿಲ್ಲದಿರುವುದನ್ನು ಸೂಚಿಸುತ್ತದೆ.
ಶಾಸ್ತ್ರೀಯ ಭಾಷೆ ಸ್ಥಾನ ಕೊಡಿಸುವಲ್ಲಿ ಪ್ರಮುಖ ರೂವಾರಿಯಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಡಾಅಗ್ರಹಾರ ಕೃಷ್ಣಮೂರ್ತಿ ಹೇಳಿದ್ದು ಹೀಗೆ: `ಕೇಂದ್ರ ಸರ್ಕಾರಕ್ಕಾಗಲಿ, ಶಿಫಾರಸ್ಸು ಸಮಿತಿಗಾಗಲಿ ಇದರಲ್ಲಿ ಆಸಕ್ತಿಯಿಲ್ಲ. ಅಷ್ಟಕ್ಕೂ ಅವರು ಯಾಕೆ ರಿಟ್ ಅರ್ಜಿ ಸಂಬಂಧ ತಲೆ ಕೆಡಿಸಿಕೊಳ್ಳುತ್ತಾರೆ. ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ಮಾತ್ರ ಇದರ ಬಗ್ಗೆ ಮುತುವರ್ಜಿ ವಹಿಸಬೇಕು. ಶಾಸ್ತ್ರೀಯ ಸ್ಥಾನ ಸಿಕ್ಕೇ ಹೋಯಿತೆಂಬ ಸಂಭ್ರಮದಲ್ಲಿರುವ ಸರ್ಕಾರಕ್ಕೆ ವಾಸ್ತವ ಸ್ಥಿತಿ ಗೊತ್ತಾಗುತ್ತಿಲ್ಲ'.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್ ಹೇಳಿದ್ದು ಹೀಗೆ: ರಿಟ್ ಅರ್ಜಿಗೆ ಪ್ರತಿವಾದಿಯಾಗಿಸಲು ಕೋರಿ ಮದ್ರಾಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದರಿಂದ ಆಗುವ ಅನುಕೂಲ-ಅನಾನುಕೂಲಗಳ ಬಗ್ಗೆ, ರಾಜ್ಯ ಸರ್ಕಾರವೇ ಪ್ರತಿವಾದಿಯಾಗಿ ಪಾಲ್ಗೊಂಡರೆ ಆಗಬಹುದಾದ ಸಮಸ್ಯೆಗಳ ಬಗ್ಗೆ ಆಲೋಚಿಸಲಾಗುತ್ತಿದೆ. ರಾಜ್ಯದ ಅಡ್ವೋಕೇಟ್ ಜನರಲ್ ಅವರಿಗೆ ಈ ಬಗ್ಗೆ ಜವಾಬ್ದಾರಿ ವಹಿಸಲಾಗಿದೆ. ಕಾನೂನು ತಜ್ಞರ ಜತೆ ಅವರು ಚರ್ಚಿಸಿ, ಮುಖ್ಯಮಂತ್ರಿಗಳ ಬಳಿ ಮಾತಾಡುವುದಾಗಿ ತಿಳಿಸಿದ್ದಾರೆ. ಇಂಪ್ಲೀಡಿಂಗ್ ಅವರಿಗೆ ಬಿಟ್ಟ ಸಂಗತಿ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದು ಹೀಗೆ: ಅಭಿವೃದ್ಧಿ ಪ್ರಾಧಿಕಾರದ ಕಡೆಯಿಂದ ಮದ್ರಾಸ್ ಉಚ್ಚನ್ಯಾಯಾಲಯಕ್ಕೆ ಪ್ರತಿವಾದಿಯಾಗಿಸಲು ಹಾಗೂ ಗಾಂಧಿಯವರ ರಿಟ್ ಅರ್ಜಿ ವಜಾ ಮಾಡಲು ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ. ಈ ಸಂಬಂಧ ಅಗತ್ಯವಿರುವ ಅಫಿಡವಿಟ್‌ಗೆ ತಾನು ಸಹಿ ಹಾಕಿದ್ದೇನೆ. ಅಡ್ವೋಕೇಟ್ ಜನರಲ್ ಉದಯಹೊಳ್ಳ ಅವರು ಕಾನೂನು ತಜ್ಞರ ಜತೆ ಚರ್ಚಿಸಿ, ನ್ಯಾಯವಾದಿಗಳನ್ನು ನೇಮಿಸಲಿದ್ದಾರೆ. ರಿಟ್ ಅರ್ಜಿ ವಜಾ ಮಾಡಿಸಲು ಬೇಕಾದ ಎಲ್ಲಾ ಪುರಾವೆಗಳನ್ನು ಪ್ರಾಧಿಕಾರ ಒದಗಿಸಲಿದೆ.
ಈ ಎಲ್ಲಾ ಹೇಳಿಕೆ, ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಶಾಸ್ತ್ರೀಯ ಸ್ಥಾನದ ಅಸ್ತಿತ್ವವನ್ನು ವಿವೇಚಿಸಬೇಕಿದೆ. ಕನ್ನಡಿಗರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರವು 31-10-08ರಂದು ಗೆಜೆಟ್ ಪ್ರಕಟಣೆ ಹೊರಡಿಸಿ ಕನ್ನಡ ಮತ್ತು ತೆಲುಗು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು. ಆದರೆ ಸದರಿ ಪ್ರಕಟಣೆಯಲ್ಲಿನ ಕೊನೆಯ ಒಕ್ಕಣಿಕೆ `ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿರುವ ರಿಟ್ ಅರ್ಜಿ(ಆಗಸ್ಟ್‌ನಲ್ಲಿ ಗಾಂಧಿ ಸಲ್ಲಿಸಿದ ರಿಟ್) ಪ್ರಕರಣದ ತೀರ್ಮಾನಕ್ಕೆ ಒಳಪಟ್ಟೇ ಗೆಜೆಟ್ ಪ್ರಕಟಣೆ ಹೊರಡಿಸಲಾಗಿದೆ' ಎಂದಿದ್ದು, ರಿಟ್ ಅರ್ಜಿ ವಜಾಗೊಳ್ಳದೇ ಶಾಸ್ತ್ರೀಯ ಸ್ಥಾನ ಮಾನ ದಕ್ಕುವುದೇ ಇಲ್ಲ.
ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಕೇಂದ್ರ ಸರ್ಕಾರವು ಗೆಜೆಟ್ ಪ್ರಕಟಣೆ ಹೊರಡಿಸಿರುವುದರ ಸಿಂಧುತ್ವ ಪ್ರಶ್ನಿಸಿ 27-11-08ರಂದು ಗಾಂಧಿ ಅವರು 40 ಅಡಕಗಳುಳ್ಳ ಮತ್ತೊಂದು ರಿಟ್ ಅರ್ಜಿ ಸಲ್ಲಿಸಿದ್ದರು. ಕೇಂದ್ರದ ಇಬ್ಬರು ಸಚಿವರು, ಶಿಫಾರಸ್ಸು ಸಮಿತಿಯ 9 ಮಂದಿ ಸದಸ್ಯರನ್ನು ಪ್ರತಿವಾದಿಯಾಗಿ ಉಲ್ಲೇಖಿಸಲಾಗಿತ್ತು. ಈ ರಿಟ್ ಸಲ್ಲಿಕೆಯಾಗಿ 2 ತಿಂಗಳು ಕಳೆದಿದ್ದರೂ `ಶಾಸ್ತ್ರೀಯ ಸ್ಥಾನ ಸಿಕ್ಕಿದ ಸಂಭ್ರಮ'ದಲ್ಲಿರುವ ರಾಜ್ಯ ಸರ್ಕಾರ ಈ ಬಗ್ಗೆ ಪ್ರತಿವಾದಿಯಾಗಿ ಪಾಲ್ಗೊಳ್ಳಲು ಮದ್ರಾಸ್ ನ್ಯಾಯಾಲಯಕ್ಕೆ ಯಾವುದೇ ಅರ್ಜಿ ಸಲ್ಲಿಸಿಲ್ಲ.
ಇಂಪ್ಲೀಡಿಂಗ್(ಪ್ರತಿವಾದಿಯಾಗಿಸಲು ಕೋರಿ) ಮಾಡಿಕೊಳ್ಳಲು ಕೋರಿ ಅರ್ಜಿ ಸಲ್ಲಿಸಬೇಕಾದ ಸರ್ಕಾರ ಮೀನಮೇಷ ಎಣಿಸುತ್ತಿರುವುದರಿಂದ ಶಾಸ್ತ್ರೀಯ ಸ್ಥಾನ ಉಳಿಯುವುದು ಅನುಮಾನವಾಗಿದೆ. ಈ ರಿಟ್ ಅರ್ಜಿ ಕೇಂದ್ರ ಸರ್ಕಾರಕ್ಕೆ ಯಾವುದೇ ಆಸ್ಥೆ ಇಲ್ಲ. ಪ್ರತಿವಾದಿಗಳಾಗಿರುವ ಕೇಂದ್ರ ಮಾನವ ಸಂಪನ್ಮೂಲ ಮತ್ತು ಗೃಹಸಚಿವರಿಗೆ ಇದು ಬೇಕಾಗಿಲ್ಲ. ಯಾರೂ ಕನ್ನಡದವರಿಲ್ಲದೇ ಇರುವುದರಿಂದ ಶಿಫಾರಸ್ಸು ಸಮಿತಿ ಸದಸ್ಯರಿಗೆ ಇದರ ಉಸಾಬರಿ ಬೇಕಿಲ್ಲ.
ಗಾಂಧಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಶಿಫಾರಸ್ಸು ಸಮಿತಿಯ ಸಿಂಧುತ್ವವನ್ನೆ ಪ್ರಶ್ನಿಸಲಾಗಿದೆಯಲ್ಲದೇ, ಒತ್ತಡ, ಬೆದರಿಕೆಗೆ ಮಣಿದು ಶಿಫಾರಸ್ಸು ಮಾಡಲಾಗಿದೆ ಎಂದು ನ್ಯಾಯಾಲಯ ಬಯಸುವ ಪುರಾವೆಗಳನ್ನು ಮಂಡಿಸಲಾಗಿದೆ. ಕರ್ನಾಟಕ ಪ್ರತಿವಾದಿಯಾಗಿ ಸೇರಿಕೊಂಡು ಸಮರ್ಥವಾಗಿ ವಾದ ಮಂಡಿಸುವುದರಿಂದಲೇ ಮಾತ್ರ ಇದನ್ನು ಉಳಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ತಜ್ಞರು.
ಶರಣರ ದರ್ಶನಗಳಿಗೆ ಶರಧಿ ದಾಟುವ ಭಾಗ್ಯ
*900 ಪುಟಗಳಲ್ಲಿ 2500 ವಚನ
*ಫ್ರೆಂಚ್, ಸ್ಪ್ಯಾನಿಷ್, ಚೈನೀಸ್‌ಗೆ
*ಮೂರು ವರ್ಷದಲ್ಲಿ ಶರಣದರ್ಶನ
ಅಚ್ಚ ಕನ್ನಡದ ಸೊಗಡು, ಗ್ರಾಮ್ಯ ಜೀವನಶೈಲಿಯನ್ನು ಹೊಸ ಶೈಲಿಯಲ್ಲಿ ಬರೆದು ಕನ್ನಡವನ್ನು ಶ್ರೀಮಂತಗೊಳಿಸಿದ ಶರಣರ ವಚನಗಳು ಇದೀಗ ನಾಡಿನ ಎಲ್ಲೆಯನ್ನೂ ದಾಟಿ, ದೇಶ-ವಿಶ್ವಭಾಷೆಗಳನ್ನು ಸಮೃದ್ಧಗೊಳಿಸಲಿವೆ.
ಬೆಂಗಳೂರಿನ ಬಸವಸಮಿತಿಯು ರಾಜ್ಯ ಸರ್ಕಾರದ ಸಹಾಯದಡಿ ಕೈಗೊಂಡ ಮಹತ್ವ ಪೂರ್ಣ ಯೋಜನೆ ಮುಕ್ತಾಯಗೊಂಡರೆ 25 ಭಾಷೆಗಳಲ್ಲಿ ವಚನದ ಸಾರಸತ್ವ ಪರಿಚಿತಗೊಳ್ಳಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಒಂದು ಕೋಟಿ ರೂ. ನೀಡಿದ್ದು, ಅನುವಾದ ಕಾರ್ಯ ಭರದಿಂದ ಸಾಗುತ್ತಿದೆ.
12 ಶತಮಾನದ ಕಾಯಕ ಜೀವಿಗಳ ಚಳವಳಿ ಕನ್ನಡ ಸಾಹಿತ್ಯಕ್ಕೆ, ಸಂಸ್ಕೃತಿಗೆ ಹೊಸತನ ತಂದುಕೊಟ್ಟಿತು. ಸಾಮಾಜಿಕ ಉತ್ಕ್ರಾಂತಿಗೂ ಕಾರಣವಾಯಿತು. ಅಂತಹ ವಚನಗಳು ಕನ್ನಡಿಗರ ಆಡುಮಾತಿನ ಲಯದಲ್ಲಿ ಸೇರಿಕೊಂಡು ಬಿಟ್ಟವು. ಆದರೆ ಸೋದರ ಭಾಷೆಗಳಿಗೆ, ವಿದೇಶಿ ಭಾಷೆಗಳಿಗೆ ಅವನ್ನು ಅನುವಾದ ಮಾಡುವ ಗೊಡವೆಗೆ ಯಾರೂ ಹೋಗಲಿಲ್ಲ. ಇಂಗ್ಲಿಷಿಗೆ ಕೆಲವು ವಚನಗಳು ಅನುವಾದಗೊಂಡರೂ ಅದರಲ್ಲಿ ಸಮಗ್ರ ವಚನಗಳಿರಲಿಲ್ಲ. ಆ ಕೊರತೆಯನ್ನು ತುಂಬುವ ಕೆಲಸವನ್ನು ಬಸವ ಸಮಿತಿ ಮಾಡಲಿದೆ.
ಈಗ ಸಂಗ್ರಹಿತಗೊಂಡಿರುವ 23 ಸಾವಿರ ವಚನಗಳ ಪೈಕಿ 2500 ವಚನಗಳನ್ನು ಆಯ್ದು ಎಲ್ಲಾ ಭಾಷೆಯಲ್ಲೂ ಪ್ರಕಟಿಸುವ ಮಹತ್ವಾಕಾಂಕ್ಷಿ ಯೋಜನೆಯಿದು. ಸಂವಿಧಾನ ಅಂಗೀಕರಿಸಿದ ದೇಶದ 22 ಭಾಷೆಗಳಿಗೆ(ಕನ್ನಡ ಸೇರಿ) ಹಾಗೂ ವಿದೇಶ 4 ಭಾಷೆಗಳಿಗೆ ಇವಿಷ್ಟು ವಚನಗಳನ್ನು ಹಂತಹಂತವಾಗಿ ಅನುವಾದಿಸಲಾಗುತ್ತದೆ.
900 ಪುಟಗಳಷ್ಟು ೃಹತ್‌ಗ್ರಂಥವಾಗಿ ಇದು ಹೊರಹೊಮ್ಮಲಿದ್ದು, ವಚನ ಸಾಹಿತ್ಯದ ಹಿನ್ನೆಲೆಯನ್ನು ಪರಿಚಯಿಸುವ 110 ಪುಟಗಳ ಪೂರ್ವ ಪೀಠಿಕೆ ಇರಲಿದೆ. ವಚನಕಾರರ ಕಾಲದೇಶ, ಹಿನ್ನೆಲೆ ಸಹಿತ ಮುದ್ರಣಗೊಳ್ಳಲಿದೆ.
ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಷ್, ಚೈನೀಸ್ ಭಾಷೆಗಳಿಗೂ ವಚನಗಳು ಅನುವಾದಗೊಳ್ಳಲಿವೆ. ಧಾರ್ಮಿಕ ವಚನಗಳಿಗಿಂತ ಸಾಮಾಜಿಕ ವಚನಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಕನ್ನಡ ವಿ.ವಿ. ವಿಶ್ರಾಂತ ಕುಲಪತಿ, ಪ್ರಾಧಿಕಾರದ ಸಮಗ್ರ ವಚನ ಸಂಪುಟಗಳ ಪ್ರಧಾನ ಸಂಪಾದಕರಾಗಿದ್ದ ಡಾ ಎಂ. ಎಂ. ಕಲಬುರ್ಗಿ ಈ ಅನುವಾದ ಕೈಂಕರ್ಯಕ್ಕೂ ಪ್ರಧಾನ ಸಂಪಾದಕರಾಗಿದ್ದಾರೆ. ಡಾವೀರಣ್ಣ ರಾಜೂರ, ಡಾಜಯಶ್ರೀ ದಂಡೆ ಇವರ ಜತೆಗಿದ್ದಾರೆ. ಕಲಬುರ್ಗಿ, ದೇಜಗೌ, ಪ್ರಧಾನಗುರುದತ್ತ, ಲಿಂಗದೇವರು ಹಳೆಮನೆ, ಉದಯನಾರಾಯಣಸಿಂಗ್, ಅರವಿಂದ ಜತ್ತಿ ಅವರನ್ನೊಳಗೊಂಡ ಮಾರ್ಗದರ್ಶಕ ಸಮಿತಿ ಜತೆಗೆ ನಿಂತಿದೆ.
ಸದ್ಯ 8 ಭಾಷೆಗೆ:
ಮೂರು ವರ್ಷದ ಅವಧಿಯಲ್ಲಿ 25 ಭಾಷೆಗಳಿಗೆ ಅನುವಾದಗೊಳ್ಳಲಿದ್ದರೂ ಆರಂಭದಲ್ಲಿ 8 ಭಾಷೆಗಳಿಗೆ ಅನುವಾದಿಸುವ ಕಾರ್ಯ ಭರದಿಂದ ಸಾಗಿದೆ. ಇಂಗ್ಲಿಷ್, ಹಿಂದಿ, ಸಂಸ್ಕೃತ, ತಮಿಳು, ತೆಲುಗು, ಪಂಜಾಬಿ, ಬಂಗಾಲಿ, ಮರಾಠಿ ಭಾಷೆಗಳಿಗೆ ಅನುವಾದಿಸಲು ಉಭಯ ಭಾಷಾ ತಜ್ಞರ ಪ್ರಧಾನ ಸಂಪಾದಕತ್ವದಲ್ಲಿ ಸಮಿತಿ ರಚಿಸಲಾಗಿದೆ. ಅನುವಾದಕರಿಗಾಗಿ ಕಮ್ಮಟಗಳು ನಡೆದಿವೆ. ಇವರು ಡಿಸೆಂಬರ್ ಅಂತ್ಯದೊಳಗೆ ಅನುವಾದಿಸಿ ಕೊಡಲಿದ್ದು, ಆನಂತರ ಆಯಾ ಭಾಷೆಯ ತಜ್ಞರು ಅನುವಾದಗಳ ಗುಣಮಟ್ಟವನ್ನು ಪರೀಕ್ಷಿಸಲಿದ್ದಾರೆ. ಆನಂತರವೇ ಮುದ್ರಣಕ್ಕೆ ಹೋಗಲಿದೆ.
136 ಶರಣರು:
12 ನೇ ಶತಮಾನದಿಂದೀಚಿಗೆ ವಿವಿಧ ಸಂಪಾದನಾಕಾರರು ಸುಮಾರು 136 ವಚನಕಾರರು ರಚಿಸಿದ 23 ಸಾವಿರ ವಚನಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಇಲ್ಲಿಯವರೆಗೆ ದಾಖಲೆಗೊಂಡಿರುವ ಎಲ್ಲಾ ವಚನಕಾರರನ್ನು ಒಳಗೊಳ್ಳುವ ಸಮಗ್ರ ಸಂಪುಟ ಇದಾಗಲಿದೆ. 900 ವರ್ಷಗಳ ಹಿಂದೆಯೇ ಆಗಬೇಕಾಗಿದ್ದ ಕೆಲಸವನ್ನು ಈಗ ಕೈಗೆತ್ತಿಕೊಂಡಿರುವುದ ತಮಗೆ ಸಮಾಧಾನ ತಂದಿದೆ. ಇಂಗ್ಲಿಷ್ ಹಾಗೂ ಹಿಂದಿಗೆ ಅನುವಾದಗೊಂಡರೆ ಉಳಿದ ಭಾಷೆಗೆ ಅನುವಾದ ಸುಲಭವೆಂಬ ಕಾರಣಕ್ಕೆ ಆ ಎರಡು ಭಾಷೆಗಳ ಅನುವಾದಕ್ಕೆ ಆದ್ಯತೆ ನೀಡಲಾಗಿದೆ ಎನ್ನುತ್ತಾರೆ ಅರವಿಂದ ಜತ್ತಿ.
Monday, December 29, 2008
ನಿರುದ್ಯೋಗ ಪರ್ವ
ವಿಶ್ವದರ್ಜೆಯ ಬಹುತೇಕ ಆರ್ಥಿಕ ತಜ್ಞರು 2009ನ್ನು `ನಿರುದ್ಯೋಗ ಪರ್ವ'ದ ಆರಂಭಿಕ ಕಾಲ ಎಂದೇ ವಿಶ್ಲೇಷಿಸಿದ್ದಾರೆ. ಸುಮಾರು 3 ವರ್ಷಗಳ ಹಿಂದೆ ಶುರುವಿಟ್ಟುಕೊಂಡ ಆರ್ಥಿಕ ಕುಸಿತದ ನಡಿಗೆ ಇದೀಗ ಕವಲುದಾರಿಯಲ್ಲಿ ಬಂದು ನಿಂತಿದೆ. 20 ವರ್ಷಗಳ ಹಿಂದಿನ ನಿರುದ್ಯೋಗಿಗಳ ಸಂಖ್ಯೆಯ ದಾಖಲೆಯನ್ನು 2009 ವರ್ಷ ಮುರಿಯಲಿದೆ ಎಂದೇ ಅಂದಾಜಿಸಲಾಗಿದೆ.
ಐಟಿ-ಬಿಟಿ ಯುಗ ಶುರುವಾದ ಮೇಲೆ ಕೌಶಲ್ಯ ಹೊಂದಿದವರಿಗೆ ಭಾರೀ ಬೇಡಿಕೆ ಬಂದೊದಗಿತ್ತು. ಯಾರು ತಿಂಗಳ ಲೆಕ್ಕದಲ್ಲಿ ಸಂಬಳವನ್ನು ಮಾತನಾಡುತ್ತಲೇ ಇರಲಿಲ್ಲ. ವರ್ಷಕ್ಕೆ 5 ಲಕ್ಷದಿಂದ ಹಿಡಿದು 12 ಲಕ್ಷವರೆಗೂ ಸಂಬಳ ಎಣಿಸುವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿತ್ತು. ಅದೇ ಹೊತ್ತಿನಲ್ಲಿ ವರ್ಷಕ್ಕೆ 24 ಸಾವಿರದಿಂದ 60 ಸಾವಿರದವರೆಗೆ ಸಂಬಳ ತೆಗೆದುಕೊಳ್ಳುವವರ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿತ್ತು.
ಟೆಕಿಗಳ ಒಂದು ದಿನದ ಸಂಬಳದ ಮೊತ್ತವನ್ನು ತಿಂಗಳ ಸಂಬಳವಾಗಿ ಪಡೆಯುವವರು ಇದ್ದು, ಸಮಾಜದಲ್ಲಿ ಭೀಕರವಾಗಿ ಆರ್ಥಿಕ ಅಂತರವೂ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರು, ಹೈದರಾಬಾದ್, ಮುಂಬೈ, ಕೊಲ್ಕತ್ತಾ, ದೆಹಲಿಯಂತಹ ನಗರಗಳಲ್ಲಿ ಈ ರೀತಿಯ ಸಂಬಳಾಂತರ ಸೃಷ್ಟಿಸಿದ ಸಾಂಸ್ಕೃತಿಕ ವಿಕೃತಿಗಳು ಬೇರೆಯವೇ ಆಗಿದ್ದವು. ಕಾಫಿಡೇ, ಮಾಲ್, ವೀಕೆಂಡ್ ಸಂಸ್ಕೃತಿಗಳು ಅಕರಾಳ ವಿಕರಾಳವಾಗಿ ಬೆಳೆದಿದ್ದವು. ದಿನದ ಒಂದು ಹೊತ್ತಿನ ಊಟಕ್ಕೆ 10 ರೂ. ಖರ್ಚು ಮಾಡುವ ಶಕ್ತಿಯಿಲ್ಲದವರು ದೊಡ್ಡ ಪ್ರಮಾಣದಲ್ಲಿ ಕೇಂದ್ರೀಕೃತವಾಗುತ್ತಿದ್ದರೆ, ಟಿಪ್ಸ್ ರೂಪದಲ್ಲಿ ನೂರು ರೂ. ಕೊಡುವ `ಉದಾರಿ'ಗಳು ಇದ್ದರು. 10 ರೂ. ವಸ್ತುವಿಗೆ 50 ರೂ. ನಿಗದಿ ಮಾಡುವ ಮಾಲ್‌ಗಳಲ್ಲಂತೂ ಭರ್ಜರಿ ಜನಜಂಗುಳಿಯೇ ಅಣಿ ನೆರೆಯುತ್ತಿತ್ತು.
ಆದರೆ ಆರ್ಥಿಕ ಬಿಕ್ಕಟ್ಟು ತಂದಿತ್ತ ಸಮಸ್ಯೆ ಇದೀಗ ಎಲ್ಲಾ ಕ್ಷೇತ್ರವನ್ನೂ ಆತಂಕಕ್ಕೆ ದೂಡಿದೆ. ಅಲ್ಪ ಸಂಬಳದಾರರು, ಭರ್ಜರಿ ಸಂಬಳದಾರರು ಉದ್ಯೋಗ ಕಳೆದುಕೊಳ್ಳುವ ಸರದಿಯಲ್ಲಿ `ಸೂಳ್ಪಡೆಯಲ್ಪುದು ಕಾಣಾ ಮಹಾಧಿರಂಗದೋಳ್( ಯುದ್ಧ ಭೂಮಿಯಲ್ಲಿ ಮುಂಚೂಣಿ ವಹಿಸುವವರ ಸರದಿ ಎಲ್ಲರಿಗೂ ಬರುತ್ತದೆ) ಎಂಬಂತೆ ನಿರುದ್ಯೋಗ ಪರ್ವದಲ್ಲಿ ಎಲ್ಲರೂ ಸಾಲುಗಟ್ಟಿ ನಿಂತಿದ್ದಾರೆ.
ಯಾರ ಸರದಿ ಯಾವಾಗ ಬರುತ್ತದೆ ಎಂಬುದು ಕರಾರುವಾಕ್ಕಾಗಿ ಗೊತ್ತಾಗದೇ ಇದ್ದರೂ ಎಲ್ಲರೂ ಆತಂಕದ ಸರದಿಯಲ್ಲಿ ಕಾಯುತ್ತಿರುವವರೇ. ಇಂದು ನಾಳೆಯೋ ಮುಂದೆ ಯಾವತ್ತೋ ಕೆಲಸ ಕಳೆದುಕೊಳ್ಳುವುದು ಅಥವಾ ಸಂಬಳ-ಸೌಲಭ್ಯದ ಕಡಿತವನ್ನು ಅನುಭವಿಸುವುದು ಅನಿವಾರ್ಯವೆಂಬುದು ದಿಟ. ಅಥವಾ ಸಂಬಳ ಕಡಿತದ ಜತೆಯಲ್ಲಿ ಹೆಚ್ಚು ಅವಧಿ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿದೆ.
ಎಲ್ಲಾ ಮಾಯ:
ಎಲ್ಲಾ ಮಾಯ ಇಲ್ಲಿ ನಾವು ಮಾಯ. ಬಂಡವಾಳ ಶಾಹಿ ಜಗತ್ತಿನ ಆಳದಲ್ಲಿರುವ ಸುನಾಮಿ ಸುಳಿ ಮೇಲೆದ್ದಿದ್ದು, ಮಾಯಕ ಲೋಕದ ವಿಭ್ರಮೆ ನಿಧಾನವಾಗಿ ಕರಗುತ್ತಿದೆ. ಅಂಟಾರ್ಟಿಕ ಖಂಡದಲ್ಲಿ ಹಿಮ ಕರಗಿ ನೀರಾಗುವಂತೆ ಉದ್ಯೋಗ ಅವಕಾಶಗಳು ದಿನೇ ದಿನೇ ಕರಗುತ್ತಿದ್ದು, ಸುನಾಮಿ ಅಲೆಗಳು ಸಮಾಜವನ್ನು ಅಪ್ಪಳಿಸುತ್ತಿವೆ. ಹೇಗೋ ಕೈತುಂಬಾ ಸಂಬಳ ಪಡೆಯುವ ಉದ್ಯೋಗ ಲಭಿಸಿತು ಎಂದು ಮದುವೆ, ಮನೆ, ವಾಹನ ಮಾಡಿಕೊಳ್ಳುವಷ್ಟರಲ್ಲಿ ಎಲ್ಲವೂ ಸಿನೆಮಾದಂತೆ ಭಾಸವಾಗುತ್ತಿದೆ.
ಐಷಾರಾಮಿ ಜೀವನ ನಡೆಸುತ್ತಿದ್ದವರು ರಸ್ತೆ ಬದಿಯ ಆಹಾರಕ್ಕೆ ತಮ್ಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾರೆ. ಇದೆಂತಾ ಸ್ಥಿತಿ ಎಂದು ಹಲುಬುವ ಪರಿಪಾಟಲು ಹರೆಯ ಉದ್ಯೋಗಿಗಳದಾಗಿದೆ.
ಉದ್ಯೋಗ ಕಡಿತ ಇಂದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಐಟಿ, ಬಿಪಿಓ, ಜವಳಿ, ಕೈಗಾರಿಕೆ, ರೇಷ್ಮೆ, ಪತ್ರಿಕೋದ್ಯಮ, ಬ್ಯಾಂಕ್ ಹೀಗೆ ಎಲ್ಲಾ ಕ್ಷೇತ್ರವನ್ನು ಆರ್ಥಿಕ ಸಂಕಷ್ಟದ ಮಾಯೆ ಆವರಿಸಿದೆ. ಎಲ್ಲೆಡೆ ಉದ್ಯೋಗ ಕಡಿತ ಅಥವಾ ಸಂಬಳ ಕಡಿತವೆಂಬುದು ಸಾಮಾನ್ಯವಾಗಿದೆ.
ನ್ಯೂಯಾರ್ಕ್‌ನಲ್ಲಿ ಮುಂದಿನ ಆರುತಿಂಗಳಲ್ಲಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಒಂದೂ ವರೆ ಲಕ್ಷವೆಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಪ್ರತಿಷ್ಠಿತ ಹಾಗೂ ಪ್ರಭಾವಿ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಮುಚ್ಚುವ ಭೀತಿ ಎದುರಿಸುತ್ತಿದ್ದರೆ, ಮತ್ತೊಂದು ಪತ್ರಿಕೆ ಡೈಲಿ ಟ್ರಿಬ್ಯುನ್ ಕೂಡ ಸಂಕಷ್ಟದಲ್ಲಿದೆ.
ಭಾರತದ ಮಟ್ಟಿಗೆ ಆರ್ಥಿಕ ಕುಸಿತ ದೊಡ್ಡ ಚಪ್ಪಡಿಯನ್ನೆ ಹೇರಲಿದೆ. ಭಾರತದ ಜವಳಿ ಉದ್ಯಮ ತೀವ್ರ ಕಂಗೆಟ್ಟಿದೆ. ವಾರ್ಷಿಕ 3500 ಕೋಟಿ ರಫ್ತು ಮಾಡುತ್ತಿದ್ದ ರೇಷ್ಮೆ ಕ್ಷೇತ್ರ ಶೇ.50 ರಷ್ಟು ಕುಸಿತ ಕಂಡಿದೆ. ಈ ವರ್ಷದ ರಫ್ತು 1700 ಕೋಟಿ ರೂ. ದಾಟುವುದಿಲ್ಲವೆಂದು ಅಂದಾಜಿಸಲಾಗಿದೆ. ಇದರಿಂದಾಗಿ ಜವಳಿ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದ್ದು, ಮುಂದಿನ ಆರುತಿಂಗಳ ಅವಧಿಯಲ್ಲಿ 5-6 ಲಕ್ಷ ಮಂದಿ ಈ ಕ್ಷೇತ್ರದಲ್ಲಿ ನೇರ ಅಥವಾ ಪರೋಕ್ಷವಾಗಿ ಉದ್ಯೋಗ ವಂಚಿತರಾಗಲಿದ್ದಾರೆ.
ಅಮೆರಿಕದಲ್ಲಿ ಔಟ್‌ಸೋರ್ಸಿಂಗ್ ನಿಲ್ಲಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಒಬಾಮ ಗೆಲ್ಲುವಾಗ ಕೆಲಸದ ಹೊರಗುತ್ತಿಗೆಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದ. ಇದರಿಂದಾಗಿ ಭಾರತದ ಬಿಪಿ ಓ ಕ್ಷೇತ್ರ ತಲ್ಲಣಿಸಿದೆ. ಮುಖ್ಯವಾಗಿ ಅಮೆರಿಕದ ಉದ್ಯಮ ಸಂಸ್ಥೆಗಳ ಹೊರಗುತ್ತಿಗೆಯನ್ನು ನಿರ್ವಹಿಸಲು ಬೆಂಗಳೂರು ಹಾಗೂ ಹೈದರಾಬಾದ್‌ನ ಬಿಪಿ ಓ ಮತ್ತು ಐಟಿ ಕಂಪನಿಗಳಲ್ಲಿ ವ್ಯಾಪಕ ಉದ್ಯೋಗ ಸೃಷ್ಟಿಯಾಗಿತ್ತು. ಸಾಲುಸಾಲಾಗಿ ಹೊರಗುತ್ತಿಗೆಗೆ ಕಡಿವಾಳ ಬೀಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆರುತಿಂಗಳಲ್ಲಿ 50 ಸಾವಿರ ಟೆಕಿಗಳು ಉದ್ಯೋಗ ವಂಚಿತರಾಗಲಿದ್ದಾರೆ. ಇದರಿಂದ ಆರ್ಥಿಕತೆ ಮೇಲೆ ತೀವ್ರತರದ ಅಡ್ಡ ಪರಿಣಾಮ ಬೀರಲಿದೆ.
ಆರ್ಥಿಕ ಸಂಕಷ್ಟದ ಕಾರಣದಿಂದ ಆಭರಣ ಉದ್ಯಮ ತತ್ತರಿಸಿದೆ. ಆಭರಣ ರಫ್ತಿನಲ್ಲಿ ಭಾರತದ ಪ್ರಮುಖ ಪಾಲಿದ್ದು, ವಿದೇಶಿ ರಾಷ್ಟ್ರಗಳು ಆಮದನ್ನು ನಿರ್ಬಂಧಿಸಿವೆ. ಇದರಿಂದಾಗಿ ಆಭರಣ ಉದ್ಯಮ ಸಂಸ್ಥೆಗಳು ಮುಚ್ಚುವ ಹಂತ ತಲುಪಿದ್ದು ಈ ಕ್ಷೇತ್ರದಲ್ಲಿ 1 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಎಲ್ಲಾ ಪತ್ರಿಕೆಗಳಲ್ಲೂ ಉದ್ಯೋಗ ಕಡಿತದ ಚರ್ಚೆ ನಡೆಯುತ್ತಿದೆ. ಇಂಗ್ಲಿಷ್ ಹಾಗೂ ಸ್ಥಳೀಯ ದೈನಿಕಗಳಿಗೆ ಇದರ ಬಾಧೆ ತಟ್ಟಲಿದೆ. 10-12 ಪರ್ಸೆಂಟ್ ಉದ್ಯೋಗಿಗಳು ಬೇರೆ ಉದ್ಯೋಗ ಅರಸಿಕೊಳ್ಳಬೇಕಾಗಿದೆ.
ಇದರ ಜತೆಯಲ್ಲಿ ಸಂಬಳ ಸಹಿತ ರಜೆ ನೀಡುವ ಪರಿಪಾಠವನ್ನು ಏರ್‌ಲೈನ್ಸ್ ಹಾಗೂ ಬಿಪಿ ಓ ಕಂಪನಿಗಳು ಆರಂಭಿಸಿವೆ. ಕೆಲಸವಿಲ್ಲದೇ ಸಂಬಳ ನೀಡುವುದೆಂದರೆ ಪೂರ್ತಿ ಸಂಬಳವನ್ನು ಯಾವ ಕಂಪನಿಗಳೂ ನೀಡಲಾರವು. ಅರ್ಧದಷ್ಟು ಸಂಬಳ ನೀಡಬಹುದು. ಜತೆಗೆ ಕೆಲಸವಿಲ್ಲದೇ ಯಾವ ಉದ್ಯೋಗಿಯೂ ಇರಲಾರ. ಅನಿವಾರ್ಯವಾಗಿ ಇದ್ದ ಕೆಲಸಕ್ಕೆ ರಾಜಿನಾಮೆ ಬೀಸಾಕಿ ಬೇರೆ ಕೆಲಸ ನೋಡಿಕೊಳ್ಳಬೇಕಾಗುತ್ತದೆ. ಒಂದರ್ಥದಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದ ಕೆಲಸವನ್ನು ಬಿಟ್ಟು ಅರೆ ಬರೆ ಸಂಬಳಕ್ಕೆ ಕೆಲಸ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.
ಇದರಿಂದಾಗಿ ಸರ್ಕಾರಿ ನೌಕರಿಗೆ ಭದ್ರವೆಂಬ ವಾತಾವರಣ ನಿರ್ಮಾಣ ಸೃಷ್ಟಿಯಾಗಲಿದೆ. ನಿರುದ್ಯೋಗ ತರಲಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬಿಕ್ಕಟ್ಟು ಬೇರೆ ರೀತಿಯದಾಗಿದ್ದು, ಇದರ ಬಗ್ಗೆ ಮತ್ತೊಂದು ಸುದೀರ್ಘ ಚರ್ಚೆಯೇ ನಡೆಯಬೇಕಿದೆ.
Saturday, December 20, 2008
ಬಸವರಾಜಮಾರ್ಗಕ್ಕೆ ಸಂದ ಗೌರವ
ಗ್ರಂಥಸಂಪಾದನೆ ಹಾಗೂ ಸೃಜನಶೀಲ ಬರವಣಿಗೆ ಎರಡೂ ಕ್ಷೇತ್ರದಲ್ಲಿ ಇಳಿವಯಸ್ಸಿನಲ್ಲೂ ಅಹರ್ನಿಶಿ ದುಡಿಯುತ್ತಿರುವ, ಕನ್ನಡದ ಕೆಲಸಕ್ಕಾಗಿ ತಮ್ಮ ಜೀವನವನ್ನು ಮುಡುಪಿಟ್ಟಿರುವ ವಿದ್ವಾಂಸರೆಂದರೆ ಡಾ ಎಲ್. ಬಸವರಾಜು. ಅವರ ಆಯ್ಕೆಯು ಸಂಶೋಧನೆ, ಸಂಪಾದನೆ, ಪ್ರಾಚೀನ ಕೃತಿಗಳ ತಲಸ್ಪರ್ಶಿ ಶೋಧ, ಇವತ್ತಿನ ತಲೆಮಾರಿಗೆ ಕನ್ನಡ ಪರಂಪರೆಯನ್ನು ಪರಿಚಯಿಸುವ ಮಹತ್ಕಾರ್ಯಕ್ಕೆ ಸಂದ ಗೌರವವಾಗಿದೆ.
1992 ರಲ್ಲಿ ಸಿಂಪಿ ಲಿಂಗಣ್ಣ, 1995ರಲ್ಲಿ ಡಾಎಚ್.ಎಲ್. ನಾಗೇಗೌಡ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರಿಬ್ಬರೂ ಜಾನಪದ ಸಂಗ್ರಹ, ಸಂಶೋಧನೆಗಳಲ್ಲಿ ಅವಿರತವಾಗಿ ದುಡಿದವರು. ಇವರಿಬ್ಬರು ಜಾನಪದದ ಕಣಜವನ್ನು ತಮ್ಮ ಅಂತಃಶಕ್ತಿ ಹಾಗೂ ಕ್ಷೇತ್ರಕಾರ್ಯದಿಂದ ತುಂಬಿಸಿಕೊಟ್ಟವರು. ಡಾ.ಎಲ್. ಬಸವರಾಜು ಮಾದರಿಯಲ್ಲಿಯೇ ವಚನ ಸಾಹಿತ್ಯ ಸಂಗ್ರಹ ಹಾಗೂ ಸಂಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಆರ್.ಸಿ. ಹಿರೇಮಠ ಅವರು 1990ರಲ್ಲಿ ನಡೆದ 59 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಆರ್.ಸಿ. ಹಿರೇಮಠರ ತರುವಾಯ ಭಾಷೆ ಹಾಗೂ ಪ್ರಾಚೀನ ಸಾಹಿತ್ಯ ಕ್ಷೇತ್ರದಲ್ಲಿ ಅವಿರತ ಶ್ರಮಿಸಿದ ಹಿರಿಯ ಜೀವಿಗಳು ಅಧ್ಯಕ್ಷರಾದ ನಿದರ್ಶನವಿರಲಿಲ್ಲ. ಕಳೆದ ಬಾರಿ ಉಡುಪಿಯಲ್ಲಿ ನಡೆದ ಸಮ್ಮೇಳನ ಕನ್ನಡ ವಿಮರ್ಶಾ ಕ್ಷೇತ್ರಕ್ಕೆ ಗೌರವ ಸಲ್ಲಿಸಿದ್ದರೆ, ಈ ಬಾರಿಯ ಸಮ್ಮೇಳನ ಸಂಶೋಧನೆ ಹಾಗೂ ಸಂಪಾದನೆ ಕ್ಷೇತ್ರಕ್ಕೆ ಪ್ರಾಧಾನ್ಯ ನೀಡಿದೆ.
ಹಿರೇಮಠರು ಅಧ್ಯಕ್ಷರಾದ ನಂತರ ನಡೆದ 18 ಸಮ್ಮೇಳನಗಳ ಅಧ್ಯಕ್ಷರಾಗಿ ಆಯ್ಕೆಯಾದವರಲ್ಲಿ ಸಿಂಪಿ ಲಿಂಗಣ್ಣ, ನಾಗೇಗೌಡರನ್ನು ಹೊರತು ಪಡಿಸಿದರೆ (ಜಾನಪದ ಕ್ಷೇತ್ರ) ಕವಿ ಅಥವಾ ಕಾದಂಬರಿಕಾರರೇ ಹೆಚ್ಚಾಗಿದ್ದಾರೆ. ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ, ಚದುರಂಗ, ಚೆನ್ನವೀರ ಕಣವಿ, ಕಯ್ಯಾರ ಕಿಞ್ಞಣ್ಣರೈ, ಭೈರಪ್ಪ, ಅನಂತಮೂರ್ತಿ, ಪಾಟೀಲ ಪುಟ್ಟಪ್ಪ, ಕಮಲಾ ಹಂಪನಾ, ಶಾಂತರಸ, ನಿಸಾರ್ ಅಹಮದ್ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಬಸವರಾಜು ಹೆಗ್ಗಳಿಕೆ: ಯಾವ ಪಂಥಕ್ಕೂ ಸೇರದ, ಆದರೆ ಸಾಮಾಜಿಕ ಸಂಗತಿಗಳ ಬಗ್ಗೆ ಜೀವಪರವಾದ ಕಾಳಜಿ ಹೊಂದಿದ, ಒಂದು ವಿಶ್ವವಿದ್ಯಾನಿಲಯ ಮಾಡಬಹುದಾದ ಕೆಲಸವನ್ನು ಏಕಾಂಗಿಯಾಗಿ ತತ್ಪರತೆಯಿಂದ ಮಾಡಿದ ಡಾ. ಬಸವರಾಜು ಅವರು ಅಧ್ಯಾಪಕರಿಗೆ ಆದರ್ಶವಾಗುವ ವ್ಯಕ್ತಿತ್ವ ಸಂಪಾದಿಸಿದವರು.
1919ರಲ್ಲಿ ಕೋಲಾರ ಜಿಲ್ಲೆ ಇಡಗೂರಿನಲ್ಲಿ ಜನಿಸಿದ ಬಸವರಾಜು ಅವರು, ಮೈಸೂರು ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದರು. ಮೂರು ದಶಕಗಳಿಗೂ ಹೆಚ್ಚುಕಾಲ ಮೈಸೂರು ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಕ್ಷರದಾಸೋಹ ಮಾಡಿದರು.
ಬರುವ ಸಂಬಳಕ್ಕೆ ಪಾಠ ಮಾಡುವುದಷ್ಟೇ ತಮ್ಮ ಕೆಲಸವೆಂದು ಸೀಮಿತರಾಗದ ಬಸವರಾಜು ಅವರು, ಅಧ್ಯಾಪಕರ ವ್ಯಕ್ತಿತ್ವಕ್ಕೆ ಹೊಸಭಾಷ್ಯ ಬರೆದವರು. ತಮ್ಮ ತೊಂಬತ್ತರ ಇಳಿವಯಸ್ಸಿನಲ್ಲೂ ನಿರಂತ ಅಧ್ಯಯನ, ಸಂಶೋಧನೆ, ತಾಳೆಗರಿಗಳ ಅವಲೋಕನ, ಪರಾಮರ್ಶೆಯನ್ನು ನಿಸ್ಪೃಹವಾಗಿ ಮಾಡಿಕೊಂಡು ಬಂದವರು. ಪ್ರಾಚೀನ ಕೃತಿಗಳ ಸಂಪಾದನೆಗೆ ಹೊಸ ಪರಿಭಾಷೆಯನ್ನು ಕಟ್ಟಿಕೊಟ್ಟ ಅವರು, ತಮ್ಮ ಪಾಂಡಿತ್ಯ, ಆಳವಾದ ಅಧ್ಯಯನ ಶೀಲತೆಯಿಂದ ಇತರರಿಗೆ ಮಾದರಿಯಾದವರು.
ವಚನ ಸಾಹಿತ್ಯ ಅಧ್ಯಯನದಲ್ಲಿ ಹೊಸ ಹಾದಿ ತೆರೆದು ಅದಕ್ಕೊಂದು ಮೌಲಿಕತೆಯನ್ನು ಕಲ್ಪಿಸಿಕೊಟ್ಟ ಬಸವರಾಜು ಅವರು ಕನ್ನಡದ ಶಾಸ್ತ್ರೀಯ ಕೃತಿಗಳನ್ನು ವೈಶಿಷ್ಟ್ಯಪೂರ್ಣವಾಗಿ ಸಂಪಾದಿಸಿಕೊಟ್ಟವರು.
ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯಗಳ ಸಂಪಾದನೆ ಜತೆಗೆ ಸರಳ ಪಂಪಭಾರತವನ್ನು ರಚಿಸಿ ಪ್ರಾಚೀನ ಗದ್ಯಕ್ಕೆ ಅರ್ವಾಚೀನ ವಿನ್ಯಾಸವನ್ನು ನೀಡಿದವರು. ಹಾಗೆಯೇ ದೇವನೂರು ಮಹಾದೇವರ ಮಹತ್ವದ ಕೃತಿ ಕುಸುಮಬಾಲೆ ಕಾದಂಬರಿಯನ್ನು ಲಯಾನುಸಾರ ಮರುವಿನ್ಯಾಸಗೊಳಿಸಿ ಕಾವ್ಯಕುಸುಮಬಾಲೆಯಾಗಿ ರೂಪಿಸಿದ್ದು ಇವರ ಅಧ್ಯಯನಶೀಲತೆ, ಪಾಂಡಿತ್ಯದ ಮೇರುತನಕ್ಕೆ ಸಾಕ್ಷಿಯಾಗುತ್ತದೆ.
ಕಬ್ಬಿಣದ ಕಡಲೆಯಂತಿರುವ ಕೇಶಿರಾಜನ ಶಬ್ದಮಣಿ ದರ್ಪಣವನ್ನು ಮೂವತ್ತಕ್ಕೂ ಹೆಚ್ಚು ಹಸ್ತಪ್ರತಿಗಳ ನೆರವಿನಿಂದ ಸಂಪಾದಿಸಿ, ವಿಸ್ತೃತ ವ್ಯಾಖ್ಯಾನದೊಂದಿಗೆ ಪ್ರಕಟಿಸಿದ್ದಾರೆ.
ಐವತ್ತು ಕೃತಿಗಳು ಇವರ ಅಮೂಲ್ಯ ಕೊಡುಗೆಯಾಗಿವೆ. ಠಾಣಾಂತರ, ಜಾಲಾರಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಾಚೀನ ಕನ್ನಡದ ವಿಸ್ತಾರ, ವೈಶಿಷ್ಟ್ಯದ ಆಳ ಹರಿವನ್ನು ತಮ್ಮ ಅಂಗೈಯಲ್ಲಿ ಹಿಡಿದಿರುವ ಶಕ್ತಿ ಹೊಂದಿದ ಬಸವರಾಜು ಅವರು ಸಮ್ಮೇಳನದ ಅಧ್ಯಕ್ಷರಾಗುವ ಮೂಲಕ ಕನ್ನಡದ ವಿದ್ವತ್‌ಪರಂಪರೆ ಮತ್ತೊಮ್ಮೆ ಗೌರವ ಪಡೆದಿದೆ.
Tuesday, December 2, 2008
ಉಗ್ರ ಉಪಟಳ
ಕೇಂದ್ರ ಗುಪ್ತಚರ, ಕರಾವಳಿ ರಕ್ಷಣಾ ಪಡೆ, ಆಂತರಿಕ ಭದ್ರತೆ ಹಾಗೂ ಶುದ್ಧಾಂಗವಾಗಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವನ್ನು ಇದು ಎತ್ತಿ ತೋರಿಸುತ್ತದೆ. ಕೇಂದ್ರ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರದ ವಕ್ತಾರರು ಈಗ ಹೇಳುತ್ತಿರುವುದು `ದೇಶದೊಳಕ್ಕೆ ನುಸುಳಿದ 20 ಮಂದಿ ವಿದೇಶಿ ಉಗ್ರರು ಈ ಕೃತ್ಯವೆಸಗಿದ್ದಾರೆ' ಎಂದು. ಕೇವಲ ಅಷ್ಟೇ ಮಂದಿ ಇಡೀ ದೇಶವನ್ನು ಮೂರು ದಿನಗಳ ಕಾಲ ಉಸಿರುಗಟ್ಟಿಸಿ ನಿಲ್ಲಿಸುವ ಶಕ್ತಿ ಹೊಂದಿದ್ದರೆ, ದೇಶದುದ್ದಕ್ಕೂ ತಲೆ ಮರೆಸಿಕೊಂಡಿರುವ ಪಾಕಿಸ್ತಾನಿ, ಬಾಂಗ್ಲಾದೇಶಿಯರು ಅಷ್ಟೂ ಮಂದಿ ಸೇರಿದರೆ ವಾರದೊಳಗೆ ದೇಶದ ಸಾರ್ವಭೌಮತ್ವನ್ನು ಕೆಡವಿ, ತಮ್ಮದೇ ಸರ್ಕಾರ ಸ್ಥಾಪಿಸುವಷ್ಟು ಬಲಶಾಲಿಯಾಗಿಲ್ಲವೆಂದು ನಂಬುವುದಾದರೂ ಹೇಗೆ?
ಸದಾ ತಮ್ಮ ಡ್ರೆಸ್ ಬಗ್ಗೆ ಕಾಳಜಿಯಿಟ್ಟುಕೊಂಡಿರುವ ಘನತೆವೆತ್ತ ದೇಶದ ಗೃಹ ಸಚಿವ ಶಿವರಾಜ್ಪಾಟೀಲ್ರಿಗೆ ಕನಿಷ್ಠ ನೈತಿಕತೆ ಇದ್ದಿದ್ದರೆ ದೇಶದ ಜನರ ಡ್ರೆಸ್ ಅಲ್ಲಾ, ಅಮೂಲ್ಯ ಜೀವವೇ ಬಂದೂಕಿನ ಮೊನೆಯಲ್ಲಿ ನಿಂತಿರುವ ಬಗ್ಗೆ ಕಾಳಜಿ ತೋರಿಸಬೇಕಿತ್ತು. ಕನಿಷ್ಠ ತನ್ನ ಬಳಿ ಗೃಹಖಾತೆ ನಿಭಾಯಿಸಲು ಆಗುವುದಿಲ್ಲವೆಂದು ರಾಜೀನಾಮೆಯನ್ನಾದರೂ ಬಿಸಾಕಿ ವೃದ್ಧಾಪ್ಯದಲ್ಲಿ ದೇವರ ಮುಂದೆ ಭಜನೆ ಮಾಡುತ್ತಾ ಕೂರಬಹುದಿತ್ತು.
ಕ್ರಿಯಾಶಕ್ತಿ, ಚಿಂತನಾಶಕ್ತಿಯಿಲ್ಲದ, ಅವಲಂಬನೆಯಿಲ್ಲದೇ ಸ್ವತಃ ನಡೆಯಲೂ ಆಗದ, ಅಧಿಕಾರಕ್ಕೆ ಅಂಟಿಕೂರುವ ಜಾಢ್ಯ ಹಿಡಿದ ಮುದಿ ರಾಜಕಾರಣಿಗಳಿಂದಾಗಿ ದೇಶಕ್ಕೆ ಇಂತಹ ದುರ್ಗತಿ ಬಂದಿರುವುದು. ಉಗ್ರರ ವಿರುದ್ಧ ಜೀವದ ಹಂಗು ತೊರೆದು ಹೋರಾಡುವ, ದೇಶೀಯ ವಿದ್ರೋಹಿಗಳನ್ನು ಮುಲಾಜಿಲ್ಲದೇ ಬಗ್ಗು ಬಡಿಯುವ ಸೈನ್ಯ-ಪೊಲೀಸರ ಆತ್ಮಬಲ ಹೆಚ್ಚಿಸುವ ಶಕ್ತಿ ಒಬ್ಬನೇ ಒಬ್ಬ ರಾಜಕಾರಣಿಗೆ ಇಲ್ಲ. ಉರಿವ ಮನೆಯಲ್ಲಿ ಗಳ ಎಣಿಸುವ ಕುಯುಕ್ತಿಯನ್ನು ಎಲ್ಲಾ ರಾಜಕಾರಣಿಗಳೂ ಮಾಡುತ್ತಿದ್ದಾರೆ. ಭಯೋತ್ಪಾದಕರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸಿ, ಯಾವ ರಾಜಕೀಯ, ಸೈದ್ಧಾಂತಿಕ ಹಂಗಿಲ್ಲದೇ ಗಲ್ಲಿಗೇರಿಸುವ ಕಠಿಣ ನಿರ್ಧಾರ ತೆಗೆದುಕೊಳ್ಳುವವರೆಗೆ ಈ ದೇಶದ ಶಾಂತಿಗೆ ಉಳಿಗಾಲವಿಲ್ಲವೆಂಬುದು ಎಲ್ಲರಿಗೂ ಸ್ಪಷ್ಟವಾಗಬೇಕು. ನಮ್ಮ ಹಣವನ್ನು ತೆರಿಗೆ ರೂಪದಲ್ಲಿ ವಸೂಲು ಮಾಡಿ ತಾವು ಮಜಾ ಉಡಾಯಿಸುವ ರಾಜಕಾರಣಿಗಳು ಇನ್ನಾದರೂ ಸ್ಪಷ್ಟ ನಿಲುವು ತೆಗೆದುಕೊಳ್ಳದಿದ್ದರೆ ಜನ ಬೀದಿಬೀದಿಯಲ್ಲಿ ಛೀ ಥೂ ಎಂದು ಉಗಿಯುವ ದಿನ ದೂರವಿಲ್ಲ.
ಏನಾಗಿದೆ ದೇಶಕ್ಕೆ?
ಕಾಶ್ಮೀರ, ಮಣಿಪುರ, ತ್ರಿಪುರ, ಅಸ್ಸಾಂ, ನಾಗಾಲ್ಯಾಂಡ್, ಪಂಜಾಬ್ ಹೀಗೆ ದೇಶದುದ್ದಕ್ಕೂ ಎರಡು ದಶಕಗಳ ಹಿಂದೆ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟ ರೂಪದ ಹಿಂಸಾತ್ಮಕ ಚಳವಳಿ ಈಗ ಹದ್ದುಬಸ್ತಿಗೆ ಬಂದಿದೆ. 1992 ರ ಈಚೆಗೆ ಬಾಬ್ರಿ ಮಸೀದಿಯನ್ನು ಕೆಡವಿದ ಮೇಲೆ ಭಯೋತ್ಪಾದನೆಯ ಮತ್ತೊಂದು ಮಜಲು ಶುರುವಾಯಿತು. ಬಾಬ್ರಿ ಮಸೀದಿಯನ್ನು ಕೆಡವಿ ಹಿಂದೂ ಕೋಮುವಾದಿಗಳು ವಿೃಂಭಿಸಿದ ಡಿಸೆಂಬರ್ 6 ರ ಕರಾಳದಿನದ ಬೆಳಕಿನಲ್ಲಿ ಈ ಭಯೋತ್ಪಾದನೆ ವಿಧ್ವಂಸವನ್ನು ನೋಡದೇ ಹೋದರೆ ಕತ್ತಲೆಯಲ್ಲಿ ಬೀಗದ ಕೈಯನ್ನು ಕಳೆದುಕೊಂಡು ಬೆಳಕಿನಲ್ಲಿ ಬೀಗದ ಕೈಯನ್ನು ಹುಡುಕಿದಂತಹ ವ್ಯರ್ಥ ಪ್ರಯತ್ನವಾಗುತ್ತದೆ. ಇದನ್ನು ಆಳುವವರು, ಸಮಾಜ ಚಿಂತಕರು, ರಕ್ಷಣಾ ವಿಶ್ಲೇಷಕರು ಅರ್ಥ ಮಾಡಿಕೊಳ್ಳಬೇಕು.
ಇತ್ತೀಚೆಗೆ `ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಹಾಲಿ ರಾಜ್ಯಸಭಾ ಸದಸ್ಯ ಶ್ರೀಮಾನ್ ಎಂ. ರಾಮಾಜೋಯಿಸ್ರವರು ಬರೆದ ಲೇಖನದಲ್ಲಿ `ದೇಶದುದ್ದಕ್ಕೂ ನಡೆದ ಮುಸ್ಲಿಂ ಭಯೋತ್ಪಾದನಾ ಕೃತ್ಯಗಳಿಗೆ ಪ್ರತೀಕಾರವಾಗಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಮತ್ತವರ ಸಂಗಾತಿಗಳು ಭಯೋತ್ಪಾದನೆ ಕೃತ್ಯಕ್ಕೆ ಇಳಿದರು. ಇದು ಪ್ರತಿಸ್ಪಂದನಾತ್ಮಕವಾಗಿ ಬೆಳೆದುಬಂದ ಉದ್ಧೇಶಿತ ಕೃತ್ಯವೇ ವಿನಃ ಹಿಂದೂ ಭಯೋತ್ಪಾದನೆ ಎಂದು ಕರೆಯಬಾರದು. ಅವರೆಲ್ಲಾ ಭಗತ್ಸಿಂಗ್, ಸುಖದೇವ್, ರಾಜಗುರುರಂತಹವರ ಹೋರಾಟದ ಪರಂಪರೆಗೆ ಸೇರಿದವರು' ಎಂದು ಬಣ್ಣಿಸಿದ್ದರು.
ಕ್ರಿಯೆ ಇಲ್ಲದೇ ಪ್ರತಿಕ್ರಿಯೆ ಇರುವುದಿಲ್ಲವೆಂಬುದು ವಿಜ್ಞಾನದ ನಿಯಮ. ರಾಮಾಜೋಯಿಸ್ ಮಾತುಗಳನ್ನೇ ಮುಂದುವರೆಸುವುದಾದರೆ ಈಗ ನಡೆಯುತ್ತಿರುವ ಪಾತಕೀ ಕೃತ್ಯಗಳಿಗೂ ಒಂದು ಕ್ರಿಯಾಸ್ವರೂಪದ ಮೂಲ ಇರಲೇಬೇಕಲ್ಲವೇ. ಅದನ್ನೇ ಬಾಬ್ರಿ ಮಸೀದಿ ಕೆಡವಿದ ಕೃತ್ಯ ಎಂದು ಹೇಳಬಹುದು.
ಹಾಗಂತ ರಾಮಜೋಯಿಸ್ರವರು ಸಮರ್ಥಿಸಿಕೊಂಡಂತೆ ದೇಶದಲ್ಲಿನ ಭಯೋತ್ಪಾದನೆ ಕೃತ್ಯಗಳನ್ನು ಸಮರ್ಥಿಸುವುದು ಹಿಂಸಾವಿನೋದವಾಗುತ್ತದೆ. ಹಿಂಸೆಯನ್ನು ಸಂಭ್ರಮಿಸುವುದು, ಅದನ್ನು ಪ್ರತ್ಯಕ್ಷ ಯಾ ಪರೋಕ್ಷವಾಗಿ ಸಮರ್ಥಿಸುವುದು ಎರಡೂ ಕೂಡ ಶಾಂತಿ ಪ್ರಿಯರಿಗೆ ತಕ್ಕುದಲ್ಲ. ಭಯೋತ್ಪಾದನೆ ಯಾವುದೇ ಮೂಲದಿಂದ ಬರಲಿ ಅದು ಖಂಡನಾರ್ಹ, ಶಿಕ್ಷಾರ್ಹ. ಹಿಂದುಗಳು ಮಾಡಿದಾಕ್ಷಣ ಅದು ಒಪ್ಪಿತ, ಮುಸ್ಲಿಮರು ಮಾಡಿದಾಕ್ಷಣ ಅದು ಖಂಡನೀಯವೆಂಬುದು ಶಾಂತಿಪ್ರಿಯರಿಗೆ ಶೋಭೆ ತರುವ ಸಂಗತಿಯಲ್ಲ. ಹಾಗೆ ಹೇಳುತ್ತಾ ಹೋದರೆ 80 ರ ದಶಕದಲ್ಲಿ ಪಂಜಾಬಿನಲ್ಲಿ ಪ್ರತ್ಯೇಕ ಖಾಲಿಸ್ತಾನ್ಗಾಗಿ ಬಿಂದ್ರನ್ವಾಲೆ, ಅಸ್ಸಾಂನ ಉಲ್ಫಾ ಉಗ್ರರು, ತ್ರಿಪುರ ವಿಮೋಚನಾ ಹೋರಾಟಗಾರರು ಹೀಗೆ ಎಲ್ಲವನ್ನೂ ಸಮರ್ಥಿಸಬೇಕಾಗುತ್ತದೆ. ಏಕೆಂದರೆ ರಾಮಾಜೋಯಿಸ್ ಲೆಕ್ಕದಲ್ಲಿ ಇವರ್ಯಾರು ಸಾಬರಲ್ಲ. ಅವರೆಲ್ಲರೂ `ಸೋಕಾಲ್ಡ್ ಹಿಂದುಗಳೇ' ಆಗುತ್ತಾರೆ.
ಮುಂ`ಭಯ':
ಮುಂಬೈ ಎಂದರೆ ಭಯ ಪಡುವ ಸ್ಥಿತಿ ಈಗಿನದಲ್ಲ. ಬಾಬ್ರಿ ಮಸೀದಿ ಧ್ವಂಸದ ನಂತರ ನಡೆದ ಮುಂಬೈ ಕೋಮುಗಲಭೆ ಕುರಿತು ನ್ಯಾಯಮೂರ್ತಿ ಶ್ರೀಕೃಷ್ಣ ಅವರು ಸಲ್ಲಿಸಿದ `ಶ್ರೀಕೃಷ್ಣ ರಿಪೋರ್ಟ್' ಓದಿದರೆ ಎದೆ ಝಲ್ಲನೆನಿಸುತ್ತದೆ. ಆದರೆ ಇವತ್ತಿಗೂ ಶ್ರೀ ಕೃಷ್ಣ ಕಮಿಶನ್ ರಿಪೋರ್ಟ್ನಲ್ಲಿ ಆರೋಪಿತರೆಂದು ಹೆಸರು ಪಡೆದ ಯಾರಿಗೂ ಶಿಕ್ಷೆಯಾಗಿಲ್ಲ. ಅವರೆಲ್ಲಾ ಹಾಗೆ ಸರಾಗವಾಗಿ ಓಡಾಡಿಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ?
ಮುಂಬೈನಲ್ಲಿ ನಡೆದ ವಿಧ್ವಂಸಕ ದಾಳಿಯ ಚಿತ್ರವನ್ನು ಟಿ.ವಿ.ಯಲ್ಲಿ ನೋಡುತ್ತಿದ್ದರೆ ಮೈ ನಡುಗುತ್ತದೆ. ತಾಜ್, ಟ್ರೆಡೆಂಟ್, ಒಬೆರಾಯ್ ಹಾಗೂ ನಾರಿಮನ್ಹೌಸ್ನ್ನು ಸುಮಾರು 3 ದಿನಗಳ ಕಾಲ ತಮ್ಮ ಹಿಡಿತದಲ್ಲಿಟ್ಟುಕೊಂಡ ಉಗ್ರರು ಅಸಾಮಾನ್ಯರೇನಲ್ಲ. ಬೂಟಿನ ತುದಿಯಿಂದ ಹೊಸಕಿಹಾಕುವಷ್ಟು ಬೆರಳೆಣಿಕೆಯ ಜನ ಅಲ್ಲಿದ್ದರು. ಆದರೆ ಅವರಿಗೆ ಬೆಂಬಲಿಸಿ ನಿಂತರಲ್ಲ. ಅವರ ಬಗ್ಗೆ ಸರ್ಕಾರ ಎಚ್ಚರವಹಿಸಬೇಕಾಗಿದೆ.
ಈಗ ಬರುತ್ತಿರುವ ವರದಿಗಳ ಪ್ರಕಾರ ಈ ಕೆಲವು ಹೋಟೆಲ್ಗಳಲ್ಲಿ ಕೆಲವು ದಿನಗಳಿಗೆ ಮೊದಲೇ ಉಗ್ರರು ನೌಕರಿಗೆ ಸೇರಿದ್ದರು. ಅಲ್ಲಿಂದಲೇ ಹೊಂಚು ಹಾಕಿದ್ದರು. ಮೊದಲೇ ಆಗಮಿಸಿ ಸಿದ್ಧತೆ ಮಾಡಿಕೊಂಡ ಉಗ್ರರ ಅಪ್ಪಣೆ ಮೇರೆಗೆ ಗಡಿಭಾಗದಿಂದ ಕೆಲವರು ಒಳಗೆ ನುಸುಳಿದರು. ಇಡೀ ದೇಶವನ್ನೇ ನಡುಗಿಸಿದರು.
ಹಾಗಾದರೆ ದೇಶದೊಳಗಿನ ದ್ರೋಹಿಗಳು ಈ ವಿದೇಶಿಯರಿಗೆ ಸಪೋರ್ಟ್ ಮಾಡಿದ್ದು ಸುಳ್ಳಲ್ಲ. ಅಲ್ಲದೇ ದೇಶದೊಳಕ್ಕೆ ನುಸುಳುವ ವಿದೇಶಿಯರನ್ನು ತಡೆಯುವ ಶಕ್ತಿ ನಮ್ಮ ರಕ್ಷಣಾ ವ್ಯವಸ್ಥೆಗೆ ಇಲ್ಲವೆ?
ದೇಶದ ರಕ್ಷಣಾ ವ್ಯವಸ್ಥೆ ಎಷ್ಟು ತಿರುಪೆ ಎದ್ದು ಹೋಗಿದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ. ನ.28 ರಂದು ಮಾಸ್ಕೋದಿಂದ ದೆಹಲಿಗೆ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ಬಂದಿಳಿದರು. ಆದರೆ ಮಾಸ್ಕೋದಲ್ಲಿ ವಿಮಾನ ಬದಲಾಯಿಸುವಾಗ ಅವರ ಲಗ್ಗೇಜ್ ತಪ್ಪಿ ಕರಾಚಿಗೆ ಹೋಗಿತ್ತು. ಅದಕ್ಕಾಗಿ ನ.28 ರ ಬೆಳಿಗ್ಗೆ ದೆಹಲಿಯ ವಿಮಾನ ನಿಲ್ದಾಣಕ್ಕೆ ಬರಲು ಸಿಬ್ಬಂದಿ ಸೂಚಿಸಿದ್ದರು. ಅದರಂತೆ ಸದರಿ ವ್ಯಕ್ತಿ ವಿಮಾನ ನಿಲ್ದಾಣಕ್ಕೆ ಹೋದರೆ ಒಳ ಪ್ರವೇಶಿಸಲು ಸಿಬ್ಬಂದಿ ಅಡ್ಡಿ ಪಡಿಸಿದರು. ತಲೆ ಮೇಲೆಕೆಳಗೆ ಮಾಡಿದರೂ ಅವರನ್ನು ಒಳಗೆ ಬಿಡಲೇ ಇಲ್ಲ. ಜತೆಗಿದ್ದವರೊಬ್ಬರು ಭದ್ರತಾ ಸಿಬ್ಬಂದಿ ಕೈಗೆ 500 ರೂ.ಗಳ ಎರಡು ನೋಟು ಇಟ್ಟರು. ಕೂಡಲೇ ಅವರ ಕೆಲಸವಾಯಿತು. ಲಂಚಕ್ಕೆ ಕೈಯೊಡ್ಡಿದ ಸಿಬ್ಬಂದಿ ಕರ್ನಾಟಕದ ವ್ಯಕ್ತಿಯನ್ನು ತಾವು ಹೋಗಬೇಕಾದ ಜಾಗಕ್ಕೆ ಬಿಟ್ಟು ಬಂದ. ಇಷ್ಟರ ಮಟ್ಟಿಗೆ ನಮ್ಮ ದೇಶದ ವ್ಯವಸ್ಥೆ `ಭದ್ರ'ವಾಗಿದೆ.
ಮುಂಬೈನಲ್ಲೂ ಹೀಗೆ ಆಗಿರಲಿಕ್ಕೆ ಸಾಕು. ಆದರೆ ಸ್ವಾತಂತ್ರ್ಯದ ಇಷ್ಟು ವರ್ಷದಲ್ಲಿ ಈ ರೀತಿಯ ಘಟನೆ ನಡೆದಿರಲಿಲ್ಲ. ಹೊರಗಿನಿಂದ ಬಂದ ಶತ್ರುಗಳು ನಮ್ಮ ದೇಶದ ಯಾವುದೇ ಒಂದು ಪ್ರದೇಶವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ನಿದರ್ಶನವಿರಲಿಲ್ಲ. ದೇಶದ ಆಡಳಿತ ಸಂಪೂರ್ಣ ವೈಫಲ್ಯವಾಗಿರುವ ದ್ಯೋತಕವಿದು.
ರಾಜಕಾರಣಿಗಳು ಭ್ರಷ್ಟರಾಗಿ ನಾಲ್ಕೈದು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿರುವಾಗ, ಸಹಜ ಮನುಷ್ಯರೇ ಆಗಿರುವ ರಕ್ಷಣಾ ಸಿಬ್ಬಂದಿ ಭ್ರಷ್ಟರಾಗುವುದು ಅಸಹಜವೇನಲ್ಲ. ಇದನ್ನು ತಪ್ಪಿಸುವ ಹೊಣೆ ಯಾರದು?
ಈಗ ದೇಶವೇ ಕಿತ್ತುಹೋಗಿದೆ ಎಂದು ಬೀಗುತ್ತಿರುವ ಬಿಜೆಪಿ ಅಧಿಕಾರಕ್ಕೆ ಬಂದರೆ ಆಗ ಮಾಡುವುದೇನು? ಸಂಸತ್ ಭವನದ ಮೇಲೆ ದಾಳಿ ನಡೆದಾಗ, ಅಕ್ಷರಧಾಮದ ಮೇಲೆ ಉಗ್ರರು ದಾಳಿ ಎಸಗಿದಾಗ ಬಿಜೆಪಿ ಏನು ಮಾಡುತ್ತಿತ್ತು. ಯಾವುದೇ ವಿಷಯವನ್ನು ವೋಟಿನ ರಾಜಕಾರಣಕ್ಕೆ ಅಸ್ತ್ರ ಮಾಡಿಕೊಳ್ಳುವುದಕ್ಕಿಂತ ದೇಶದ ಭದ್ರತೆ, ಸಮಗ್ರತೆ ದೃಷ್ಟಿಯಿಂದ ನೋಡಬೇಕು.
ಘಟನೆ ನಡೆದ ಕೂಡಲೇ ಮಹಾರಾಷ್ಟ್ರಕ್ಕೆ ತೆರಳಿ ಮೃತ ಯೋಧರಿಗೆ 1 ಕೋಟಿ ರೂ. ಪರಿಹಾರ ಘೋಷಿಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕಾರವಧಿಯಲ್ಲಿ ಮಾಡಿದ್ದೇನು? ಗುಜರಾತೆಂಬುದು ಶಿಲಾಯುಗದ ಕಾಲದ ರಾಜ್ಯವಾಗಿ ಪರಿವರ್ತಿತರಾದಾಗ ಇದೇ ಮೋದಿ ಸಂಭ್ರಮಿಸಿರಲಿಲ್ಲವೇ? ಗರ್ಭಿಣಿಯ ಭ್ರೂಣ ಬಗೆದು ಬೆಂಕಿಗೆ ಹಾಕಿ ಸುಡುವಾಗ ಮೋದಿಯವರ ದೇಶಪ್ರೇಮ ಎಲ್ಲಿ ಹೋಗಿತ್ತು?
ಎಲ್ಲಾ ಪಕ್ಷಗಳು ರಾಜಕೀಯ ಮಾಡುವುದು ಬಿಟ್ಟು ದೇಶದ ಹಿತದೃಷ್ಟಿಯಿಂದ ಚಿಂತಿಸಬೇಕು. ಉಗ್ರರು, ದ್ರೋಹಿಗಳು ಯಾರೇ ಇದ್ದರೂ ಅವರನ್ನು ಮಟ್ಟಹಾಕಬೇಕು. ಉಗ್ರರು ಎಂಬ ಪದ ಬಳಸುವ ಬದಲು ದೇಶದ್ರೋಹಿಗಳೆಂದು ಹಣೆ ಪಟ್ಟಿ ಕಟ್ಟಿ ಗಲ್ಲಿಗೇರಿಸಲು ಮುಂದಾಗಬೇಕು. ಸಿಬ್ಬಂದಿಗಳು ಭ್ರಷ್ಟರಾಗದಂತೆ ನೋಡಿಕೊಳ್ಳಬೇಕು. ಹಾಗಾಗಬೇಕಾದರೆ ತಾವು ಭ್ರಷ್ಟರಾಗದೇ ಸಜ್ಜನಿಕೆ, ಪ್ರಾಮಾಣಿಕತೆ ತೋರಬೇಕು. ಆಗ ಮಾತ್ರ ಬೋಧನೆಗೆ ಅರ್ಥವಿರುತ್ತದೆ.
ಪೋಟಾ, ಟಾಡಾದಂತಹ ಜನವಿರೋಧಿ ಕಾಯ್ದೆ ತರುವುದರಿಂದ ಉಗ್ರರ ಉಪಟಳವನ್ನು ಮಟ್ಟಹಾಕಲು ಸಾಧ್ಯವಿಲ್ಲ. ಉಗ್ರತೆಗೆ ಕಾರಣವಾಗುವ ಮನಃಸ್ಥಿತಿಯನ್ನು ಬದಲಾಯಿಸಬೇಕು. ಎಲ್ಲಾ ರೀತಿಯ ಅಸಮಾನತೆ, ಧಾರ್ಮಿಕ ಹಿಂಸೆ, ಶೋಷಣೆ ತೊಲಗಿದಾಗ ಮಾತ್ರ ಶಾಂತಿ, ಸೌಹಾರ್ದ ನೆಲೆಸಲು ಸಾಧ್ಯ. ಸಂಸದೀಯ ಪ್ರಜಾಪ್ರಭುತ್ವವೆಂಬುದು `ಡೆಮ್ಮೋ- ಕ್ರಸಿ' ಯಾಗಿರುವಾಗ ಇದನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಕೆಂಪುಕೋಟೆಯ ಮೇಲೆ ಮನಮೋಹನಸಿಂಗ್ ಬದಲು ಅಡ್ವಾಣಿ ಬಾವುಟ ಹಾರಿಸುವ ಬದಲಾವಣೆಯಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ರಾಜಕೀಯ ಸ್ಥಿತ್ಯಂತರವಾಗಿ ದ್ವೇಷರಹಿತವಾದ, ಸಮಾನವಾದ ವ್ಯವಸ್ಥೆ ಜಾರಿಯಾಗಬೇಕು. ಮತದಾರನನ್ನೇ ಕಡುನೀಚನನ್ನಾಗುವಷ್ಟು ಭ್ರಷ್ಟನನ್ನಾಗಿಸಿರುವ ಈ ವ್ಯವಸ್ಥೆ ಎಂತಹ ಪರಿವರ್ತನೆ ತಂದೀತು? ಇದು ಯೋಚಿಸುವ ಕಾಲವಷ್ಟೇ!