Monday, December 29, 2008

ನಿರುದ್ಯೋಗ ಪರ್ವ

`ಬರಲಿ ಹೊಸ ವರುಷ, ತರಲಿ ಹೊಸ ಹರುಷ' ಎಂದು ಶುಭಾಶಯ ವಿನಿಮಯ ಮಾಡಿಕೊಳ್ಳುವ ಸಡಗರ 2009ನ್ನು ಎದುರುಗೊಳ್ಳುವ ಮುನ್ನಾದಿನಗಳಲ್ಲಿ ಇಲ್ಲ.
ವಿಶ್ವದರ್ಜೆಯ ಬಹುತೇಕ ಆರ್ಥಿಕ ತಜ್ಞರು 2009ನ್ನು `ನಿರುದ್ಯೋಗ ಪರ್ವ'ದ ಆರಂಭಿಕ ಕಾಲ ಎಂದೇ ವಿಶ್ಲೇಷಿಸಿದ್ದಾರೆ. ಸುಮಾರು 3 ವರ್ಷಗಳ ಹಿಂದೆ ಶುರುವಿಟ್ಟುಕೊಂಡ ಆರ್ಥಿಕ ಕುಸಿತದ ನಡಿಗೆ ಇದೀಗ ಕವಲುದಾರಿಯಲ್ಲಿ ಬಂದು ನಿಂತಿದೆ. 20 ವರ್ಷಗಳ ಹಿಂದಿನ ನಿರುದ್ಯೋಗಿಗಳ ಸಂಖ್ಯೆಯ ದಾಖಲೆಯನ್ನು 2009 ವರ್ಷ ಮುರಿಯಲಿದೆ ಎಂದೇ ಅಂದಾಜಿಸಲಾಗಿದೆ.
ಐಟಿ-ಬಿಟಿ ಯುಗ ಶುರುವಾದ ಮೇಲೆ ಕೌಶಲ್ಯ ಹೊಂದಿದವರಿಗೆ ಭಾರೀ ಬೇಡಿಕೆ ಬಂದೊದಗಿತ್ತು. ಯಾರು ತಿಂಗಳ ಲೆಕ್ಕದಲ್ಲಿ ಸಂಬಳವನ್ನು ಮಾತನಾಡುತ್ತಲೇ ಇರಲಿಲ್ಲ. ವರ್ಷಕ್ಕೆ 5 ಲಕ್ಷದಿಂದ ಹಿಡಿದು 12 ಲಕ್ಷವರೆಗೂ ಸಂಬಳ ಎಣಿಸುವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿತ್ತು. ಅದೇ ಹೊತ್ತಿನಲ್ಲಿ ವರ್ಷಕ್ಕೆ 24 ಸಾವಿರದಿಂದ 60 ಸಾವಿರದವರೆಗೆ ಸಂಬಳ ತೆಗೆದುಕೊಳ್ಳುವವರ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿತ್ತು.
ಟೆಕಿಗಳ ಒಂದು ದಿನದ ಸಂಬಳದ ಮೊತ್ತವನ್ನು ತಿಂಗಳ ಸಂಬಳವಾಗಿ ಪಡೆಯುವವರು ಇದ್ದು, ಸಮಾಜದಲ್ಲಿ ಭೀಕರವಾಗಿ ಆರ್ಥಿಕ ಅಂತರವೂ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರು, ಹೈದರಾಬಾದ್‌, ಮುಂಬೈ, ಕೊಲ್ಕತ್ತಾ, ದೆಹಲಿಯಂತಹ ನಗರಗಳಲ್ಲಿ ಈ ರೀತಿಯ ಸಂಬಳಾಂತರ ಸೃಷ್ಟಿಸಿದ ಸಾಂಸ್ಕೃತಿಕ ವಿಕೃತಿಗಳು ಬೇರೆಯವೇ ಆಗಿದ್ದವು. ಕಾಫಿಡೇ, ಮಾಲ್‌, ವೀಕೆಂಡ್‌ ಸಂಸ್ಕೃತಿಗಳು ಅಕರಾಳ ವಿಕರಾಳವಾಗಿ ಬೆಳೆದಿದ್ದವು. ದಿನದ ಒಂದು ಹೊತ್ತಿನ ಊಟಕ್ಕೆ 10 ರೂ. ಖರ್ಚು ಮಾಡುವ ಶಕ್ತಿಯಿಲ್ಲದವರು ದೊಡ್ಡ ಪ್ರಮಾಣದಲ್ಲಿ ಕೇಂದ್ರೀಕೃತವಾಗುತ್ತಿದ್ದರೆ, ಟಿಪ್ಸ್‌ ರೂಪದಲ್ಲಿ ನೂರು ರೂ. ಕೊಡುವ `ಉದಾರಿ'ಗಳು ಇದ್ದರು. 10 ರೂ. ವಸ್ತುವಿಗೆ 50 ರೂ. ನಿಗದಿ ಮಾಡುವ ಮಾಲ್‌ಗಳಲ್ಲಂತೂ ಭರ್ಜರಿ ಜನಜಂಗುಳಿಯೇ ಅಣಿ ನೆರೆಯುತ್ತಿತ್ತು.
ಆದರೆ ಆರ್ಥಿಕ ಬಿಕ್ಕಟ್ಟು ತಂದಿತ್ತ ಸಮಸ್ಯೆ ಇದೀಗ ಎಲ್ಲಾ ಕ್ಷೇತ್ರವನ್ನೂ ಆತಂಕಕ್ಕೆ ದೂಡಿದೆ. ಅಲ್ಪ ಸಂಬಳದಾರರು, ಭರ್ಜರಿ ಸಂಬಳದಾರರು ಉದ್ಯೋಗ ಕಳೆದುಕೊಳ್ಳುವ ಸರದಿಯಲ್ಲಿ `ಸೂಳ್ಪಡೆಯಲ್ಪುದು ಕಾಣಾ ಮಹಾಧಿರಂಗದೋಳ್‌( ಯುದ್ಧ ಭೂಮಿಯಲ್ಲಿ ಮುಂಚೂಣಿ ವಹಿಸುವವರ ಸರದಿ ಎಲ್ಲರಿಗೂ ಬರುತ್ತದೆ) ಎಂಬಂತೆ ನಿರುದ್ಯೋಗ ಪರ್ವದಲ್ಲಿ ಎಲ್ಲರೂ ಸಾಲುಗಟ್ಟಿ ನಿಂತಿದ್ದಾರೆ.
ಯಾರ ಸರದಿ ಯಾವಾಗ ಬರುತ್ತದೆ ಎಂಬುದು ಕರಾರುವಾಕ್ಕಾಗಿ ಗೊತ್ತಾಗದೇ ಇದ್ದರೂ ಎಲ್ಲರೂ ಆತಂಕದ ಸರದಿಯಲ್ಲಿ ಕಾಯುತ್ತಿರುವವರೇ. ಇಂದು ನಾಳೆಯೋ ಮುಂದೆ ಯಾವತ್ತೋ ಕೆಲಸ ಕಳೆದುಕೊಳ್ಳುವುದು ಅಥವಾ ಸಂಬಳ-ಸೌಲಭ್ಯದ ಕಡಿತವನ್ನು ಅನುಭವಿಸುವುದು ಅನಿವಾರ್ಯವೆಂಬುದು ದಿಟ. ಅಥವಾ ಸಂಬಳ ಕಡಿತದ ಜತೆಯಲ್ಲಿ ಹೆಚ್ಚು ಅವಧಿ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿದೆ.
ಎಲ್ಲಾ ಮಾಯ:
ಎಲ್ಲಾ ಮಾಯ ಇಲ್ಲಿ ನಾವು ಮಾಯ. ಬಂಡವಾಳ ಶಾಹಿ ಜಗತ್ತಿನ ಆಳದಲ್ಲಿರುವ ಸುನಾಮಿ ಸುಳಿ ಮೇಲೆದ್ದಿದ್ದು, ಮಾಯಕ ಲೋಕದ ವಿಭ್ರಮೆ ನಿಧಾನವಾಗಿ ಕರಗುತ್ತಿದೆ. ಅಂಟಾರ್ಟಿಕ ಖಂಡದಲ್ಲಿ ಹಿಮ ಕರಗಿ ನೀರಾಗುವಂತೆ ಉದ್ಯೋಗ ಅವಕಾಶಗಳು ದಿನೇ ದಿನೇ ಕರಗುತ್ತಿದ್ದು, ಸುನಾಮಿ ಅಲೆಗಳು ಸಮಾಜವನ್ನು ಅಪ್ಪಳಿಸುತ್ತಿವೆ. ಹೇಗೋ ಕೈತುಂಬಾ ಸಂಬಳ ಪಡೆಯುವ ಉದ್ಯೋಗ ಲಭಿಸಿತು ಎಂದು ಮದುವೆ, ಮನೆ, ವಾಹನ ಮಾಡಿಕೊಳ್ಳುವಷ್ಟರಲ್ಲಿ ಎಲ್ಲವೂ ಸಿನೆಮಾದಂತೆ ಭಾಸವಾಗುತ್ತಿದೆ.
ಐಷಾರಾಮಿ ಜೀವನ ನಡೆಸುತ್ತಿದ್ದವರು ರಸ್ತೆ ಬದಿಯ ಆಹಾರಕ್ಕೆ ತಮ್ಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾರೆ. ಇದೆಂತಾ ಸ್ಥಿತಿ ಎಂದು ಹಲುಬುವ ಪರಿಪಾಟಲು ಹರೆಯ ಉದ್ಯೋಗಿಗಳದಾಗಿದೆ.
ಉದ್ಯೋಗ ಕಡಿತ ಇಂದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಐಟಿ, ಬಿಪಿಓ, ಜವಳಿ, ಕೈಗಾರಿಕೆ, ರೇಷ್ಮೆ, ಪತ್ರಿಕೋದ್ಯಮ, ಬ್ಯಾಂಕ್‌ ಹೀಗೆ ಎಲ್ಲಾ ಕ್ಷೇತ್ರವನ್ನು ಆರ್ಥಿಕ ಸಂಕಷ್ಟದ ಮಾಯೆ ಆವರಿಸಿದೆ. ಎಲ್ಲೆಡೆ ಉದ್ಯೋಗ ಕಡಿತ ಅಥವಾ ಸಂಬಳ ಕಡಿತವೆಂಬುದು ಸಾಮಾನ್ಯವಾಗಿದೆ.
ನ್ಯೂಯಾರ್ಕ್‌ನಲ್ಲಿ ಮುಂದಿನ ಆರುತಿಂಗಳಲ್ಲಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಒಂದೂ ವರೆ ಲಕ್ಷವೆಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಪ್ರತಿಷ್ಠಿತ ಹಾಗೂ ಪ್ರಭಾವಿ ಪತ್ರಿಕೆ ನ್ಯೂಯಾರ್ಕ್‌ ಟೈಮ್ಸ್‌ ಮುಚ್ಚುವ ಭೀತಿ ಎದುರಿಸುತ್ತಿದ್ದರೆ, ಮತ್ತೊಂದು ಪತ್ರಿಕೆ ಡೈಲಿ ಟ್ರಿಬ್ಯುನ್‌ ಕೂಡ ಸಂಕಷ್ಟದಲ್ಲಿದೆ.
ಭಾರತದ ಮಟ್ಟಿಗೆ ಆರ್ಥಿಕ ಕುಸಿತ ದೊಡ್ಡ ಚಪ್ಪಡಿಯನ್ನೆ ಹೇರಲಿದೆ. ಭಾರತದ ಜವಳಿ ಉದ್ಯಮ ತೀವ್ರ ಕಂಗೆಟ್ಟಿದೆ. ವಾರ್ಷಿಕ 3500 ಕೋಟಿ ರಫ್ತು ಮಾಡುತ್ತಿದ್ದ ರೇಷ್ಮೆ ಕ್ಷೇತ್ರ ಶೇ.50 ರಷ್ಟು ಕುಸಿತ ಕಂಡಿದೆ. ಈ ವರ್ಷದ ರಫ್ತು 1700 ಕೋಟಿ ರೂ. ದಾಟುವುದಿಲ್ಲವೆಂದು ಅಂದಾಜಿಸಲಾಗಿದೆ. ಇದರಿಂದಾಗಿ ಜವಳಿ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದ್ದು, ಮುಂದಿನ ಆರುತಿಂಗಳ ಅವಧಿಯಲ್ಲಿ 5-6 ಲಕ್ಷ ಮಂದಿ ಈ ಕ್ಷೇತ್ರದಲ್ಲಿ ನೇರ ಅಥವಾ ಪರೋಕ್ಷವಾಗಿ ಉದ್ಯೋಗ ವಂಚಿತರಾಗಲಿದ್ದಾರೆ.
ಅಮೆರಿಕದಲ್ಲಿ ಔಟ್‌ಸೋರ್ಸಿಂಗ್‌ ನಿಲ್ಲಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಒಬಾಮ ಗೆಲ್ಲುವಾಗ ಕೆಲಸದ ಹೊರಗುತ್ತಿಗೆಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದ. ಇದರಿಂದಾಗಿ ಭಾರತದ ಬಿಪಿ ಓ ಕ್ಷೇತ್ರ ತಲ್ಲಣಿಸಿದೆ. ಮುಖ್ಯವಾಗಿ ಅಮೆರಿಕದ ಉದ್ಯಮ ಸಂಸ್ಥೆಗಳ ಹೊರಗುತ್ತಿಗೆಯನ್ನು ನಿರ್ವಹಿಸಲು ಬೆಂಗಳೂರು ಹಾಗೂ ಹೈದರಾಬಾದ್‌ನ ಬಿಪಿ ಓ ಮತ್ತು ಐಟಿ ಕಂಪನಿಗಳಲ್ಲಿ ವ್ಯಾಪಕ ಉದ್ಯೋಗ ಸೃಷ್ಟಿಯಾಗಿತ್ತು. ಸಾಲುಸಾಲಾಗಿ ಹೊರಗುತ್ತಿಗೆಗೆ ಕಡಿವಾಳ ಬೀಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆರುತಿಂಗಳಲ್ಲಿ 50 ಸಾವಿರ ಟೆಕಿಗಳು ಉದ್ಯೋಗ ವಂಚಿತರಾಗಲಿದ್ದಾರೆ. ಇದರಿಂದ ಆರ್ಥಿಕತೆ ಮೇಲೆ ತೀವ್ರತರದ ಅಡ್ಡ ಪರಿಣಾಮ ಬೀರಲಿದೆ.
ಆರ್ಥಿಕ ಸಂಕಷ್ಟದ ಕಾರಣದಿಂದ ಆಭರಣ ಉದ್ಯಮ ತತ್ತರಿಸಿದೆ. ಆಭರಣ ರಫ್ತಿನಲ್ಲಿ ಭಾರತದ ಪ್ರಮುಖ ಪಾಲಿದ್ದು, ವಿದೇಶಿ ರಾಷ್ಟ್ರಗಳು ಆಮದನ್ನು ನಿರ್ಬಂಧಿಸಿವೆ. ಇದರಿಂದಾಗಿ ಆಭರಣ ಉದ್ಯಮ ಸಂಸ್ಥೆಗಳು ಮುಚ್ಚುವ ಹಂತ ತಲುಪಿದ್ದು ಈ ಕ್ಷೇತ್ರದಲ್ಲಿ 1 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಎಲ್ಲಾ ಪತ್ರಿಕೆಗಳಲ್ಲೂ ಉದ್ಯೋಗ ಕಡಿತದ ಚರ್ಚೆ ನಡೆಯುತ್ತಿದೆ. ಇಂಗ್ಲಿಷ್‌ ಹಾಗೂ ಸ್ಥಳೀಯ ದೈನಿಕಗಳಿಗೆ ಇದರ ಬಾಧೆ ತಟ್ಟಲಿದೆ. 10-12 ಪರ್ಸೆಂಟ್‌ ಉದ್ಯೋಗಿಗಳು ಬೇರೆ ಉದ್ಯೋಗ ಅರಸಿಕೊಳ್ಳಬೇಕಾಗಿದೆ.
ಇದರ ಜತೆಯಲ್ಲಿ ಸಂಬಳ ಸಹಿತ ರಜೆ ನೀಡುವ ಪರಿಪಾಠವನ್ನು ಏರ್‌ಲೈನ್ಸ್‌ ಹಾಗೂ ಬಿಪಿ ಓ ಕಂಪನಿಗಳು ಆರಂಭಿಸಿವೆ. ಕೆಲಸವಿಲ್ಲದೇ ಸಂಬಳ ನೀಡುವುದೆಂದರೆ ಪೂರ್ತಿ ಸಂಬಳವನ್ನು ಯಾವ ಕಂಪನಿಗಳೂ ನೀಡಲಾರವು. ಅರ್ಧದಷ್ಟು ಸಂಬಳ ನೀಡಬಹುದು. ಜತೆಗೆ ಕೆಲಸವಿಲ್ಲದೇ ಯಾವ ಉದ್ಯೋಗಿಯೂ ಇರಲಾರ. ಅನಿವಾರ್ಯವಾಗಿ ಇದ್ದ ಕೆಲಸಕ್ಕೆ ರಾಜಿನಾಮೆ ಬೀಸಾಕಿ ಬೇರೆ ಕೆಲಸ ನೋಡಿಕೊಳ್ಳಬೇಕಾಗುತ್ತದೆ. ಒಂದರ್ಥದಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದ ಕೆಲಸವನ್ನು ಬಿಟ್ಟು ಅರೆ ಬರೆ ಸಂಬಳಕ್ಕೆ ಕೆಲಸ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.
ಇದರಿಂದಾಗಿ ಸರ್ಕಾರಿ ನೌಕರಿಗೆ ಭದ್ರವೆಂಬ ವಾತಾವರಣ ನಿರ್ಮಾಣ ಸೃಷ್ಟಿಯಾಗಲಿದೆ. ನಿರುದ್ಯೋಗ ತರಲಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬಿಕ್ಕಟ್ಟು ಬೇರೆ ರೀತಿಯದಾಗಿದ್ದು, ಇದರ ಬಗ್ಗೆ ಮತ್ತೊಂದು ಸುದೀರ್ಘ ಚರ್ಚೆಯೇ ನಡೆಯಬೇಕಿದೆ.

2 comments:

Unknown said...

ಭಯವಾಗುತ್ತೇ ವೈಗ.ಆದರೆ ಹೀಗೆ ಅವ್ಯಕ್ತ ಭಯದೊಂದಿಗೆ ಸಾಗುತ್ತೇ ಜೀವನ ಎಂಬ ಹುಂಬ ಧೈರ್ಯ.

ಆರ್.ಶರ್ಮಾ.ತಲವಾಟ

Unknown said...

Hi

En Guru

khapi aayta