Wednesday, October 22, 2008

ಭಯ ಉತ್ಪಾದನೆ: ಆ ಮುಖ ಈ ಮುಖ


ಭಯ ಉತ್ಪಾದನೆ: ಆ ಮುಖ ಈ ಮುಖ



ನಿಮ್ಮ ಮನೆಯ
ಒಂದು ಕೋಣೆಯಲ್ಲಿ
ಬೆಂಕಿ ಬಿದ್ದಿದ್ದರೆ
ಮತ್ತೊಂದು ಕೋಣೆಯಲ್ಲಿ
ಸುಮ್ಮನೆ ಮಲಗಿ
ನೆಮ್ಮದಿಯಿಂದ ನಿದ್ದೆ ಹೋಗಬಲ್ಲಿರಾ?

ಭಯೋತ್ಪಾದನೆಯೆಂಬುದು ದೇಶದ ನರನಾಡಿಗಳನ್ನು ವ್ಯಾಪಿಸುತ್ತಿರುವ ಈ ವಿಕೃತ ಹೊತ್ತಿನಲ್ಲಿ ಈ ಪ್ರಶ್ನೆಗೆ ರಾಜಕಾರಣಿಗಳು ಮತ್ತು ಭಯೋತ್ಪಾದಕರ ಹೊರತಾಗಿ ಮತ್ತಾರೂ `ಹೋಗಬಲ್ಲೆವು' ಎಂದು ಯಾರೂ ಹೇಳಲಾರರು.
ಎಲ್ಲಿ ಯಾವಾಗ ಸ್ಪೋಟವಾಗುತ್ತದೋ ನಮ್ಮ ಕಾಲುಕೈಗಳು ಹೊಂದಿಸಲು ಸಿಗದಂತೆ ಚೂರುಪಾರಾಗಿ ಛಿದ್ರಗೊಂಡು ಹರಿದು ಹಾರಿಹೋಗಬಲ್ಲವೋ ಎಂಬ ಭಯದಲ್ಲಿಯೇ ಎಲ್ಲರೂ ದಿನದೂಡಬೇಕಾದ ಭೀತಿಯಲ್ಲಿ ನಾವಿದ್ದೇವೆ. ಇದನ್ನು ನಿಗ್ರಹಿಸಬಲ್ಲ ಶಕ್ತಿಯುಳ್ಳ ರಾಜಕಾರಣಿಗಳು ಆರೋಪ-ಪ್ರತ್ಯಾರೋಪ, ಸಮರ್ಥನೆ-ನಿರಾಕರಣೆ, ದೂಷಣೆ-ಸ್ಪಷ್ಟನೆಯಲ್ಲಿಯೇ ಇಡೀ ಕಾಲವನ್ನು ವ್ಯಯಿಸುತ್ತಿದ್ದಾರೆ. ಭಯೋತ್ಪಾದನೆಯೆಂಬುದು ನಮ್ಮೆಲ್ಲರ ಮೇಲೆ ನಿರಂತರ ಚಾಚಿರುವ ಕರಾಳ ನೆರಳು ಎಂದು ಯಾರಿಗೂ ಅನ್ನಿಸುತ್ತಲೇ ಇಲ್ಲ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾವ ಸಮುದಾಯದ ಓಟುಗಿಟ್ಟಿಸಲು `ಯಾವ ಮಾತು'ಗಳು ಎಷ್ಟರಮಟ್ಟಿಗೆ ಸಫಲವಾಗಬಹುದೆಂಬ ಅಕ್ಷರ ವ್ಯಭಿಚಾರದಲ್ಲಿಯೇ ಎಲ್ಲರೂ ತೊಡಗಿದ್ದಾರೆ. ಕಾಂಗ್ರೆಸ್‌, ಬಿಜೆಪಿ, ಕಮ್ಯುನಿಸ್ಟರು, ಎಸ್ಪಿ ಹೀಗೆ ಯಾವುದೇ ಪಕ್ಷಗಳೂ ಇದರಿಂದ ಹೊರತಾಗಿಲ್ಲ. ಎಲ್ಲರೂ `ಮತಬ್ಯಾಂಕ್‌'ನತ್ತಲೇ ಕಣ್ಣಿಟ್ಟು, ಬಾಯ್ತೆರೆಯುತ್ತಿದ್ದಾರೆ.
`ಭಾರತವೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿಲ್ಲ. ಭಯೋತ್ಪಾದಕರು ಭಾರತದ ವಿರುದ್ಧ ಹೋರಾಡುತ್ತಿದ್ದಾರೆ. ರಾಜಕಾರಣಿಗಳು ಭಯೋತ್ಪಾದಕರ ವಿರುದ್ಧ ಹೋರಾಡುತ್ತಿಲ್ಲ. ಅವರು ಪರಸ್ಪರ ಕಚ್ಚಾಡುತ್ತಿದ್ದಾರೆ. ಅವರು ಜನರ ಭದ್ರತೆ ಬಗ್ಗೆ ಚಿಂತಾಕ್ರಾಂತರಾಗಿಲ್ಲ. ಅವರ ಚಿಂತೆಯೇನಿದ್ದರೂ ಜನರ ಓಟಿನ ಮೇಲೆ. ಭಯೋತ್ಪಾದನೆಯ ವಿರುದ್ಧ ಅವರ ಮಾತಿನ ಸಮರ ಏನಿದ್ದರೂ ಕೇವಲ ಮತಗಳಿಕೆಗಷ್ಟೇ ಸೀಮಿತ'( ಔಟ್‌ಲುಕ್‌ನಲ್ಲಿ ರಾಜೇಂದರ್‌ ಪುರಿ).
ಬದಲಾದ ಭಯೋತ್ಪಾದನೆ:
ಗುಜರಾತ್‌ ಗಲಭೆ ನಂತರ ಭಯೋತ್ಪಾದನೆಯ ವ್ಯಾಖ್ಯೆಗಳೇ ಬದಲಾಗಿವೆ. ಸಿಮಿ, ಇಂಡಿಯನ್‌ ಮುಜಾಹಿದಿನ್‌ ಸಂಘಟನೆಗಳ ಹೆಸರು ಬಾಂಬ್‌ಸ್ಪೋಟ ನಡೆದಾಗೆಲ್ಲಾ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಿದೆ. ಅದರೆ ಜತೆಗೆ ಸಂಘಪರಿವಾರ ಪ್ರೇಷಿತ ಕೆಲವು ಸಂಘಟನೆಗಳು ಆತ್ಮಹತ್ಯಾ ದಳದ ರಚನೆಗೆ ಮುಂದಾಗುತ್ತಾ ಕ್ರೈಸ್ತರ ಮೇಲಿನ ದಾಳಿಗೆ ತಾವೇ ಬಾಧ್ಯಸ್ಥರು ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿವೆ. ವಿಧ್ವಂಸಕ ಕೃತ್ಯಗಳ ಮೇಲಾಟದಲ್ಲಿ ಸತ್ಯವನ್ನು ಬಹಿರಂಗ ಪಡಿಸಬೇಕಾದ ಪೊಲೀಸರು ಯಾರ ಮೇಲೋ ಗೂಬೆ ಕೂರಿಸಿ, ತಮ್ಮ ಜವಾಬ್ದಾರಿಯನ್ನು ಮುಗಿಸಿಬಿಡುವ ಆತುರ ತೋರುತ್ತಿದ್ದಾರೆ.
2-3 ದಶಕಗಳ ಹಿಂದೆ ಭಯೋತ್ಪಾದನೆ ಎಂದರೆ ಅದು ತಮಿಳು ಉಗ್ರರೋ, ಅಸ್ಸಾಂನ ಉಲ್ಫಾ ಉಗ್ರರೋ, ಪಂಜಾಬಿನ ಖಾಲಿಸ್ತಾನ್‌ ಉಗ್ರರೋ, ನಾಗಾ ಬಂಡುಕೋರರೋ ಅಥವಾ ನಕ್ಸಲ್‌ ಉಗ್ರರ ಕೃತ್ಯವೆಂದೇ ಪರಿಭಾವಿಸುವ ಕಾಲವೊಂದಿತ್ತು. ಆದರೀಗ ಕಾಲ ಬದಲಾಗಿದೆ. ಇಂದು ದೇಶದುದ್ದಕ್ಕೂ ಎಲ್ಲೇ ಬಾಂಬ್‌ಸ್ಪೋಟ, ವಿಚ್ಛಿದ್ರಕಾರಿ ಘಟನೆ ನಡೆದಾಗ ಅದರ ಹಿಂದೆ ಮುಸ್ಲಿಂ ಬಣ್ಣವುಳ್ಳ ಸಂಘಟನೆಯೊಂದರ ಹೆಸರು ತಳುಕು ಹಾಕಿಕೊಂಡಿರುತ್ತದೆ. ಪೊಲೀಸ್‌ ವೈಫಲ್ಯವೆಂಬ ಆರೋಪ ತಪ್ಪಿಸಿಕೊಳ್ಳಲು ನಡೆಸಲಾಗುವ ಬಂಧನ ಎಂದಿನ ಸರಳೀಕೃತ ಮಾದರಿಯಲ್ಲಿಯೇ ನಡೆಯುತ್ತಿರುತ್ತದೆ. ಅದರಿಂದ ಮತ್ತೊಂದು ದುರಂತ ಘಟನೆ ಅಥವಾ ವಿಧ್ವಂಸಕ ಕೃತ್ಯ ನಿಲ್ಲುವುದಿಲ್ಲ. ದೇಶದ ಇನ್ನೊಂದು ಮೂಲೆಯಲ್ಲಿ ಅದೇ ಮಾದರಿಯ ಘಟನೆಗಳು ನಡೆದಾಗ ಮತ್ತೆ ಅದೇ ರೀತಿಯ ಬಂಧನಗಳು, ವರ್ಣರಂಜಿತ ಹೇಳಿಕೆಗಳು, ಆಕರ್ಷಕ ಫೋಟೋಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತವೆ. ವಿಸ್ಪೋಟಗಳಿಗೆ ನಿಲುಗಡೆ ಮಾತ್ರ ಕಾಣುವುದಿಲ್ಲ.
ಅಧಿಕಾರರೂಢ ಗೃಹಮಂತ್ರಿಗಳ ರಾಜೀನಾಮೆಗೆ ಪ್ರತಿಪಕ್ಷಗಳ ಮುಖಂಡರು ಆಗ್ರಹಿಸುತ್ತಾರೆ. ಗೃಹಮಂತ್ರಿಗಳು ಪೊಲೀಸ್‌, ಬೇಹುಗಾರಿಕೆ ಬಲಿಷ್ಠವಾಗಿರುವ ಬಗ್ಗೆ ಸಮರ್ಥನೆ ನೀಡುತ್ತಾರೆ. ಅದೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ವೈಫಲ್ಯ-ಸಾಫಲ್ಯಗಳ ಚರ್ಚೆಯಲ್ಲಿ ದಿನದೂಡುತ್ತಿರುವಾಗಲೇ ಮತ್ತೊಂದು ಬಾಂಬ್‌ಸ್ಪೋಟ ತಲ್ಲಣ ಮೂಡಿಸಿ, ಮತ್ತೊಂದಿಷ್ಟು ಅಮಾಯಕರನ್ನು ಬಲಿತೆಗೆದುಕೊಂಡು ರಕ್ತದೋಕುಳಿ ಹರಿಸಿರುತ್ತದೆ.
ಪೋಟಾ, ಟಾಡಾದಂತಹ ಕಠಿಣ ಕಾಯ್ದೆಗಳ ಅಗತ್ಯವನ್ನು ಪ್ರತಿಪಾದಿಸಲಾಗುತ್ತದೆ. ಇರುವ ಕಾಯ್ದೆಗಳೇ ಸಮರ್ಪಕ ಜಾರಿಯಾಗದೇ ಇರುವಾಗ ಹೊಸ ಕಾಯ್ದೆಗಳನ್ನು ತಂದು ಮುಗ್ಧರ ಬಂಧನಕ್ಕೆ, ಅಮಾಯಕರ ಮೇಲೆ ದೌರ್ಜನ್ಯಕ್ಕೆ ಅವಕಾಶ ಕೊಡುವಂತೆ ಒತ್ತಾಯಿಸಲಾಗುತ್ತದೆ. ಇರುವ ಕಾಯ್ದೆಗಳಲ್ಲಿಯೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವಾಗ ಹೊಸ ಕಾಯ್ದೆಗಳು ಯಾಕೆ ಬೇಕೆಂದು ಯಾರೂ ಪ್ರಶ್ನೆ ಕೇಳುವುದಿಲ್ಲ. ಕರ್ನಾಟಕ ತರಬೇಕೆಂದಿರುವ ಕೋಕಾ ಕಾಯ್ದೆ ವಿರೋಧಿಸುತ್ತಿರುವ ಕೇಂದ್ರದ ಕಾಂಗ್ರೆಸ್‌ ಸರ್ಕಾರ, ಮಹಾರಾಷ್ಟ್ರದಲ್ಲಿ ಅಂಥದೇ ಕಾಯ್ದೆ ತರಲು ಸಮ್ಮತಿ ಸೂಚಿಸುತ್ತದೆ. ಟಾಡಾ ಇದ್ದಾಗ ಆಗಿರುವ ಅನಾಹುತಗಳ ಅರಿವಿದ್ದರೂ ಬಿಜೆಪಿಯ ರಾಷ್ಟ್ರೀಯ ಮುಖಂಡರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಟಾಡಾ ಮರುಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ.
ಭಯೋತ್ಪಾದನೆಯ ಮೂಲ ಬೇರುಗಳನ್ನು ಕಿತ್ತೊಗೆಯದೇ ಅಲಂಕಾರಿಕ ಗಿಡಗಳ ರೆಂಬೆಕೊಂಬೆ ಕತ್ತರಿಸುವ ರೀತಿಯಲ್ಲಿ `ಕಟಿಂಗ್‌' ಮಾಡಿದರೆ ಏನು ಫಲ?
ಗುಡ್ಡ ಅಗೆದು...!
ಗುಡ್ಡ ಅಗೆದು ಇಲಿಯನ್ನೂ ಹಿಡಿಯಲಿಲ್ಲ ಎಂಬ ಕತೆ ಪೊಲೀಸರು, ಭಯೋತ್ಪಾದನಾ ನಿಗ್ರಹ ದಳಗಳದ್ದಾಗಿದೆ. `ಅಹಮದಾಬಾದ್‌ ಸರಣಿ ಬಾಂಬ್‌ ಸ್ಪೋಟದ ಮಾಸ್ಟರ್‌ ಮೈಂಡ್‌ ಬಂಧನ' ಎಂಬ ಸುದ್ದಿ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಬೆನ್ನಲ್ಲೇ ದೆಹಲಿಯಲ್ಲಿ ಸರಣಿ ಸ್ಪೋಟವಾಗಿರುತ್ತದೆ. ಅದರ ಮಗ್ಗುಲಲ್ಲೇ ಲೋಕಸಭೆ ಪ್ರತಿಪಕ್ಷ ನಾಯಕ ಎಲ್‌.ಕೆ. ಅಡ್ವಾಣಿ ಅವರು ನೀಡಿದ `ಗುಜರಾತ್‌ನಲ್ಲಿ ಬಂಧಿತ ಉಗ್ರರ ವಿಚಾರಣೆ ವೇಳೆ ದೆಹಲಿ ಸ್ಪೋಟದ ಸಂಚು ಬಯಲುಗೊಂಡಿರುವುದನ್ನು ನರೇಂದ್ರ ಮೋದಿಯವರು ಕೇಂದ್ರ ಗೃಹಸಚಿವರಿಗೆ ಸ್ಪಷ್ಟಪಡಿಸಿದ್ದರು. ಆದರೂ ಕೇಂದ್ರ ಅಪೇಕ್ಷಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ವೈಫಲ್ಯ ಪ್ರದರ್ಶಿಸಿತು' ಎಂಬ ಆಪಾದನೆಯೂ ಪ್ರಕಟಗೊಂಡಿರುತ್ತದೆ.
ಮುಂಬೈ, ದೆಹಲಿ, ಸೂರತ್‌, ಅಹಮದಾಬಾದ್‌ ಕೊನೆಗೆ ಬೆಂಗಳೂರಿನವರೆಗೂ ಬಾಂಬ್‌ಸ್ಪೋಟದ ವಿಧ್ವಂಸಕ ಕೃತ್ಯ ನಡೆಯುತ್ತಲೇ ಇದೆ. ಹೀಗೆ ನಡೆದಾಗಲೆಲ್ಲಾ ಪೊಲೀಸ್‌ ವೈಫಲ್ಯವೆಂಬ ಹುಯಿಲು ಪ್ರತಿಪಕ್ಷಗಳಿಂದ ಕೇಳಿ ಬರುತ್ತದೆ. ಕೇಂದ್ರ ಗೃಹಸಚಿವರ ರಾಜಿನಾಮೆ ಒತ್ತಾಯದ ಕೂಗು ಮೊಳಗುತ್ತದೆ. ಹಿಂದೆ ಇದೇ ಬಿಜೆಪಿ ನೇತೃತ್ವದ ಎನ್‌ಡಿ ಎ ಸರ್ಕಾರವಿದ್ದಾಗ ಗೋಧ್ರಾ ಹತ್ಯಾಕಾಂಡ, ಅದರ ಬೆನ್ನಲ್ಲೇ ಗುಜರಾತ್‌ ನರಮೇಧ, ಅಕ್ಷರಧಾಮದ ಮೇಲೆ ದಾಳಿ. ಇದರ ಬೆನ್ನಲ್ಲೇ ಸಂಸತ್‌ನ ಮೇಲೆ ದಾಳಿಯೂ ನಡೆದಿತ್ತು. ಆಗಲೂ ಆಡಳಿತ ಪಕ್ಷ ವಿಫಲವಾಗಿದೆಯೆಂಬ ಕೂಗೆದ್ದಿತ್ತು. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗಿತ್ತು. ಹಾಗಂತ ಭಯೋತ್ಪಾದನೆ ಮಟ್ಟ ಹಾಕುವ ಕೆಲಸ ಯಾವ ಪಕ್ಷಗಳಿಂದಲೂ ನಡೆದಿಲ್ಲ, ನಡೆಯುತ್ತಿಲ್ಲವೆಂಬುದು ಸುಡುವಾಸ್ತವ.
ಆತ್ಮಹತ್ಯೆ, ರಸ್ತೆ ಅಪಘಾತಗಳು ಮಾಮೂಲಾಗಿರುವಂತೆಯೇ ಭಾರತೀಯರಿಗೆ ಈಚೆಗೆ ಬಾಂಬ್‌ಸ್ಪೋಟವೂ ನಿತ್ಯದ ಸಂಗತಿಯಾಗಿದೆ. ಭಯೋತ್ಪಾದಕರ ಹೆಸರಿನಲ್ಲಿ ನಡೆಯುವ ಬಂಧನವೂ ಸಹಜವೆಂಬಂತಾಗಿಬಿಟ್ಟಿದೆ.
ಈ ಎಲ್ಲಾ ವಿದ್ಯಮಾನಗಳನ್ನು ಪರ್ಯಾಲೋಚಿಸಿದಾಗ ಎರಡು ಸಂಗತಿಗಳು ಮೇಲ್ನೋಟಕ್ಕೆ ಕಂಡು ಬರುತ್ತವೆ. ಪೊಲೀಸರು ನಿಷ್ಕ್ರಿಯರಾಗಿದ್ದಾರೆಂದು ಬೊಬ್ಬಿಡುವುದು ಹಾಗೂ ಅವರು ತಮ್ಮ ನಿಷ್ಕ್ರಿಯತೆಯ ಅಪವಾದವನ್ನು ಹೋಗಲಾಡಿಸಲು ಯಾರನ್ನಾದರೂ ಬಂಧಿಸಿ, ಸುಲಭವಾಗಿ ಉಗ್ರರ ಹಣೆಪಟ್ಟಿ ಕಟ್ಟಿಬಿಡುವುದು.
ಗುಡ್ಡ ಅಗೆದಾಗ ಕನಿಷ್ಠ ಇಲಿಯಾದರೂ ಸಿಗಬೇಕು. ಆದರೆ ಪೊಲೀಸರು ನಡೆಸುವ ಕಾರ್ಯಾಚರಣೆಗಳಲ್ಲಿ ಕನಿಷ್ಠ ಇಲಿಗಳೂ ಸಿಗುವುದಿಲ್ಲ. ಯಾಕೆಂದರೆ ಅವರು ಬಂಧಿಸುವ ವ್ಯಕ್ತಿಗಳು, ನಡೆದ ವಿಧ್ವಂಸಕ ಕೃತ್ಯಗಳಿಗೂ ತಾಳಮೇಳ ಸಂಬಂಧವೇ ಇರುವುದಿಲ್ಲ. ದೆಹಲಿ ಸ್ಪೋಟದ ಬೆನ್ನಲ್ಲೇ ರಾಜ್ಯದ ನಾನಾಕಡೆ `ಉಗ್ರ'ರನ್ನು ಬಂಧಿಸಲಾಗಿದೆ. ಬಿಜಾಪುರ, ಮಣಿಪಾಲ, ಮಂಗಳೂರು, ಚಿಕ್ಕಮಗಳೂರಿನ ಕೊಪ್ಪ ಹೀಗೆ ಎಲ್ಲಾ ಕಡೆ ದೆಹಲಿ, ಉತ್ತರಪ್ರದೇಶ, ಮುಂಬೈ ಹಾಗೂ ಕರ್ನಾಟಕ ಪೊಲೀಸರ ಕಾರ್ಯಾಚರಣೆಯಲ್ಲಿ ಸಾಕಷ್ಟು ಬಂಧನಗಳಾಗಿವೆ. ಹೀಗೆ ಮೇಲಿಂದ ಮೇಲೆ ಬಂಧನ, ಸಾಕಷ್ಟು ವಿಧ್ವಂಸಕ ವಸ್ತುಗಳ ವಶವಾಗುತ್ತಿದ್ದರೂ ಮತ್ತೆ ಸ್ಟೋಟಗಳು ಮರುಕಳಿಸುತ್ತಿವೆ.
ಹಾಗಾದರೆ ಬಂಧಿಸಲ್ಪಟ್ಟವರು ಯಾರೆಂಬುದು ಪ್ರಶ್ನೆಯಾಗಿದೆ. ಮಾಸ್ಟರ್‌ ಮೈಂಡ್‌ಗಳು, ಸಿಮಿ, ಮುಜಾಹಿದಿನ್‌ ರೂವಾರಿಗಳು ಪೊಲೀಸರ ವಶವಾಗುತ್ತಿದ್ದರೂ ಸ್ಪೋಟಗಳು ಯಾಕೆ ನಿಲ್ಲಿತ್ತಿಲ್ಲ? ಮೇಲ್ನೋಟಕ್ಕೆ ಪೊಲೀಸರು ನಿಜವಾದ ಆರೋಪಿಗಳನ್ನು ಬಂಧಿಸುತ್ತಿಲ್ಲವೆಂಬುದನ್ನು ಇದು ಹೇಳುತ್ತಿದೆಯೇ?
ಪೂರ್ವಗ್ರಹ?
ಒಂದು ಪೊಲೀಸ್‌ ಠಾಣೆ ಸರಹದ್ದಿನಲ್ಲಿ ಕಳುವು, ಅತ್ಯಾಚಾರ, ದರೋಡೆ, ಕೊಲೆ ನಡೆದರೆ ಇಂತಹವರೇ ನಡೆಸಿದ್ದಾರೆಂಬ ಶಂಕೆ ಪೊಲೀಸರಿಗೆ ಇರುತ್ತದೆ. ಚುನಾವಣೆ, ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ `ರೌಡಿ ಎಲಿಮೆಂಟ್ಸ್‌'ಗಳನ್ನು ಪೂರ್ವಭಾವಿಯಾಗಿ ಬಂಧಿಸಲಾಗುತ್ತದೆ. ಇದು ಪೊಲೀಸರ ಮಾಮೂಲು ಕ್ರಮ. ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲೂ ಇಂತಹದೇ ಪ್ರಕರಣಗಳು ಮರುಕಳಿಸುತ್ತಿವೆಯೇ ಎಂಬ ಅನುಮಾನವೂ ಕಾಡಲಾರಂಭಿಸಿದೆ.
ಸೆ.22 ರಂದು ದೆಹಲಿಯ ಜಾಮಿಯಾ ನಗರದಲ್ಲಿ ನಡೆದ `ಉಗ್ರರ ಹತ್ಯೆ- ಪೊಲೀಸ್‌ ಹೀರೋ ಮೋಹನ್‌ ಚಂದ್‌ಶರ್ಮ' ಪ್ರಕರಣದ ಪೋಸ್ಟ್‌ ಮಾರ್ಟಂ ವರದಿಗಳು ಇದನ್ನೇ ಬಹಿರಂಗ ಪಡಿಸಿವೆ.
ಈ ಹತ್ಯೆ ಪ್ರಕರಣದಲ್ಲಿ ಮೃತಪಟ್ಟ ಅತಿಫ್‌ ಅಮೀನ್‌ ಹಾಗೂ ಸಾಜಿದ್‌ ಕುಕೃತ್ಯಗಳಲ್ಲಿ ಭಾಗಿಯಾಗಿಲ್ಲ, ಅವರು ನಿರಪರಾಧಿಗಳು ಇರಬೇಕೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು `ದ ಟೆಲಿಗ್ರಾಫ್‌' ಪತ್ರಿಕೆಯ ಅಂಕಣಕಾರ ಮುಕುಲ್‌ ಕೇಶವನ್‌ ಅ.2 ರ ತಮ್ಮ ಬರಹದಲ್ಲಿ ವಿಶದವಾಗಿ ಹೇಳಿದ್ದಾರೆ. ವಿಶ್ವದ ಅತ್ಯಂತ ಹೆಮ್ಮೆಯ ಪ್ರಜಾತಾಂತ್ರಿಕ ಗಣರಾಜ್ಯವು ಬಹುಮತೀಯರ ಪ್ರಭುತ್ವವಾಗಿ ಬದಲಾಗುತ್ತಿರುವುದರ ಸಂಕೇತ ಇದಾಗಿದೆ ಎಂದು ಹೇಳಿದ್ದಾರೆ.
ಈ ಪ್ರಕರಣ ಕುರಿತು ಮಲೆಯಾಳಂ ಪತ್ರಿಕೆಯೊಂದರಲ್ಲಿ ವಿಶ್ಲೇಷಣೆ ಮಾಡಿರುವ ಸದಾನಂದ ಮೆನನ್‌ ಕೂಡ, ಈ ಘಟನೆ ನಂತರ ಬಂಧಿಸಲ್ಪಟ್ಟ ಮೂವರನ್ನು ಪಾಲೇಸ್ತೈನ್‌ ಉಗ್ರರ ಮಾದರಿಯಲ್ಲಿ ಮುಸುಕು ಹಾಕಿ ಮಾಧ್ಯಮಗಳ ಮುಂದೆ ಪ್ರದರ್ಶಿಸಿರುವುದರ ಉದ್ದಿಶ್ಯವನ್ನು ಪ್ರಶ್ನಿಸುತ್ತಾ, ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆಂಬುದನ್ನು ಒತ್ತಿ ಹೇಳಲು ಈ ರೀತಿ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಅಮರಸಿಂಗ್‌ ಈ ಜಾಮಿಯಾನಗರ ಪ್ರಕರಣದಲ್ಲಿ ಬಂಧಿತರಾಗಿರುವ ವ್ಯಕ್ತಿಗಳ ಕಾನೂನು ರೀತ್ಯ ಹೋರಾಟಕ್ಕೆ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್‌ ಸಚಿವರಾದ ಕಪಿಲ್‌ ಸಿಬ್ಬಲ್‌, ದಿಗ್ವಿಜ್‌ಸಿಂಗ್‌, ಸಲ್ಮಾನ್‌ಖುರ್ಷಿದ್‌ ಕೂಡ ಆರಂಭದಲ್ಲಿ ಈ ಪ್ರಕರಣ ಕುರಿತು ಆಕ್ಷೇಪವೆತ್ತಿದ್ದರು.
ಯಾವುದು ಭಯೋತ್ಪಾದನೆ?
ನೆಮ್ಮದಿಯಿಂದ, ತಮ್ಮ ಪಾಡಿಗೆ ತಾವು ಬದುಕುತ್ತಿರುವ ಸಮಾಜ ಅಥವಾ ಸಮುದಾಯವನ್ನು ಭಯಕ್ಕೆ ದೂಡುವುದೆಲ್ಲವೂ ಭಯೋತ್ಪಾದನೆಯೇ. ಆದರೆ ಬಾಂಬ್‌ಸ್ಪೋಟದಂತಹ ವಿದ್ರೋಹದ ಚಟುವಟಿಕೆಗಳು ಮಾತ್ರ ಭಯೋತ್ಪಾದನೆ ಎಂಬ ವ್ಯಾಖ್ಯೆ ಪಡೆಯುತ್ತಿರುವುದು ಸಲ್ಲದ ಸಂಗತಿ.
ಗುಜರಾತ್‌ನಲ್ಲಿ ತಿಂಗಳುಗಟ್ಟಲೇ ನಡೆದ ಗಲಭೆ, ಕರ್ನಾಟಕದಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ನಡೆದ ದಾಳಿ ಎಲ್ಲವೂ ಭಯೋತ್ಪಾದಕ ಕೃತ್ಯಗಳೆಂದು ನಾವ್ಯಾಕೆ ಕರೆಯುವುದಿಲ್ಲ. ಬಾಂಬ್‌ಸ್ಪೋಟದ ಕೃತ್ಯಗಳೆಂತೆಯೇ ಇವು ಕೂಡ ಹಿಂಸೆಯ ವೈಭವೀಕರಣವಲ್ಲವೇ?
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಸಿಪಿ ಎಂ ಪಾಲಿಟ್‌ಬ್ಯುರೋ ಸದಸ್ಯೆ ೃಂದಾ ಕಾರಟ್‌, ಮಹಾರಾಷ್ಟ್ರ ನಾಂದೇಡ್‌, ಥಾನೆ, ತಮಿಳು ನಾಡಿನ ತೇನ್‌ಕಾಶಿಯಲ್ಲಿ ವಿಶ್ವಹಿಂದೂ ಪರಿಷತ್‌, ಆರೆಸ್ಸೆಸ್‌ ಹಾಗೂ ಬಿಜೆಪಿ ಮುಖಂಡರ ಮನೆಯಲ್ಲಿ ಬಾಂಬ್‌ ತಯಾರಿಕೆ ನಡೆಯುತ್ತಿದ್ದುದು, ಆಕಸ್ಮಿಕ ಸ್ಪೋಟ ಸಂಭವಿಸಿದ್ದರ ಬಗ್ಗೆ ಮಾತನಾಡಿದ್ದಾರೆ.
ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ 2006ರಲ್ಲಿ ನಾಂದೇಡ್‌ನಲ್ಲಿ ನಡೆದ ಬಾಂಬ್‌ಸ್ಪೋಟಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದಾಗ ಮಹಾರಾಷ್ಟ್ರದಾದ್ಯಂತ ಕೋಮುಗಲಭೆ ಹುಟ್ಟುಹಾಕಲು ಸಂಚು ಬಯಲಿಗೆ ಬಂದಿತ್ತೆಂದು ಇತ್ತೀಚಿನ ಔಟ್‌ಲುಕ್‌ ಸಂಚಿಕೆ ವಿಸ್ತೃತ ವರದಿ ನೀಡಿದೆ.
ಶಿವಸೇನೆ ಆತ್ಮಹತ್ಯಾದಳ ರಚಿಸಲು ಮುಂದಾಗಿದ್ದರೆ, ಶ್ರೀರಾಮಸೇನೆ ಕೂಡ ಆತ್ಮಹತ್ಯಾದಳ ರಚಿಸುವುದಾಗಿ ಘೋಷಿಸಿದೆ. ಭಯೋತ್ಪಾದನೆ ವಿರೋಧಿಸುವುದಾಗಿ ಹೇಳುತ್ತಿರುವ ಸಂಘಟನೆಗಳು ಆತ್ಮಹತ್ಯಾದಳಗಳನ್ನು ಸಂಘಟಿಸಿ, ವಿಸ್ಪೋಟಕ ಕೃತ್ಯಗಳಿಗೆ ಕೈಯಿಕ್ಕಿದರೆ ಪ್ರಜಾಪ್ರಭುತ್ವಕ್ಕೆ ಎಲ್ಲಿ ಬೆಲೆ ಬಂದೀತು?
ಭಯೋತ್ಪಾದನೆಯನ್ನು ಅದು ಮುಸ್ಲಿಮರೇ ಮಾಡಲಿ, ಹಿಂದುಗಳೇ ಮಾಡಲಿ, ಸಿಖ್ಖರೇ ಮಾಡಲಿ, ಅಸ್ಸಾಮಿಯರೇ ಮಾಡಲಿ, ತಮಿಳರೇ ಮಾಡಲಿ ಅದು ಅಕ್ಷಮ್ಯ. ಯಾರೂ ಯಾರಿಗೂ ಪ್ರತಿಸ್ಪರ್ಧಿಯಾಗಿ ಅದನ್ನು ಮಾಡಕೂಡದು.
ಅಹಿಂಸಾ ಪರಮೋ ಧರ್ಮ ಎಂದು ಪ್ರತಿಪಾದಿಸಿದ, ದಯವೇ ಧರ್ಮದ ಮೂಲವಯ್ಯಾ ದಯೆಯಿಲ್ಲದ ಧರ್ಮ ಅದಾವುದಯ್ಯ ಎಂದು ಪ್ರತಿಪಾದಿಸಿದ ಭಾರತೀಯರ ಸಂಸ್ಕೃತಿ ಹಾಗೆ ಉಳಿಯಬೇಕಾದರೆ ಎಲ್ಲರೂ ಹಿಂಸೆಯನ್ನು ಖಂಡಿಸಬೇಕು. ಹಿಂಸಾ ಪ್ರತಿಪಾದಕರ ವಿರುದ್ಧ ಒಂದಾಗಬೇಕು. ಬುದ್ದ, ಮಹಾವೀರ, ಗಾಂಧಿ ನೆಲೆಸಿದ ನಾಡಿನಲ್ಲಿ ಹಿಂಸೆಯ ತಾಂಡವನೃತ್ಯಕ್ಕೆ ಧ್ವನಿ ಸೇರಿಸಿದರೆ ಅನಾಗರಿಕ ಕಾಲಕ್ಕೆ, ಶಿಲಾಯುಗದ ಕಾಲಕ್ಕೆ ಮತ್ತೆ ಹೋಗುವುದರಲ್ಲಿ ಸಂಶಯವಿಲ್ಲ.
ಶಿಲಾಯುಗದ ಕಾಲದ ಜನ, ಒಳ್ಳೆಯ ಬೇಲಿಗಳು ಒಳ್ಳೆಯ ನೆರೆ ಹೊರೆಯವರನ್ನು ಸೃಷ್ಟಿಸುತ್ತವೆ ಎಂದು ನಂಬಿದ್ದರು ಎಂದು ರಾಬಟ್‌ಫ್ರಾಸ್ಟ್‌ ತನ್ನ ಪದ್ಯದಲ್ಲಿ ಹೇಳುತ್ತಾನೆ. ಅದು ಮತ್ತೆ ಮರುಕಳಿಸಬಾರದಲ್ಲವೇ?
`ಮಳೆ ಬಂದಾಗ ಓಡಿ ಹೋಗಿ ಮರದ ಕೆಳಗೆ ನಿಂತು ಆಸರೆ ಪಡೆಯುವವರು ಅದು ಯಾವ ಜಾತಿಯ ಮರ, ತನ್ನ ಬಗಲಲ್ಲಿ ನಿಂತವರು ಯಾವ ಜಾತಿ, ಯಾವಧರ್ಮದವರು ಎಂದು ನೋಡುವುದಿಲ್ಲ. ಭಾರತವೆಂಬ ಮರವನ್ನು ಆಶ್ರಯಿಸುವವರು ಕೂಡ ಹೀಗೆ ಮಳೆಯಿಂದ ಆಸರೆ ಪಡೆಯಲು ನಿಂತವರೆಂಬುದನ್ನು ಮರೆಯಬಾರದು.

1 comment:

Shantharaju S Malavalli said...

tumba chennagide...nimma lekhana prastuta vyavasthege kannadiyanthiddu, satyavannu pratibindisuttide...