Monday, February 16, 2009

ಆಚಾತುರ್ಯ ಆಚಾರ್ಯ

ರಾಜ್ಯದ ಗೃಹಸಚಿವ ಹೆಸರಿಗಷ್ಟೇ ಆಚಾರ್ಯರು. ಮಾಡುವುದು ಪೂರ್ತಿ ಅವಿವೇಕದ ಕೆಲಸ. ಅವರ ಪೂರ್ತಿ ಹೆಸರು ವೇದವ್ಯಾಸ ಶ್ರೀನಿವಾಸ ಆಚಾರ್ಯ. ಗೃಹಸಚಿವ ಪದವಿ ಅಲಂಕರಿಸಿದ ಮೇಲೆ ತಮ್ಮ ಯಡವಟ್ಟು ಮಾತುಗಳು, ತಿಕ್ಕಲುತನದ ವರ್ತನೆಗಳಿಂದ `ಮುತ್ಸದ್ದಿ' ಎಂಬ ಪದಕ್ಕೆ ಕಳಂಕ ತಂದವರು.
ಯಡಿಯೂರಪ್ಪ ಸರ್ಕಾರದಲ್ಲಿ ಎರಡನೇ ಪರಮೋಚ್ಚ ಅಧಿಕಾರ ಅನುಭವಿಸುತ್ತಿರುವವರು ಸನ್ಮಾನ್ಯ ವಿ.ಎಸ್‌. ಆಚಾರ್ಯ. ಆದರೆ ಅಧಿಕಾರ ಚಲಾವಣೆಯಲ್ಲಿ ಅಷ್ಟೇ ಬುರ್ನಾಸು. ಕೇವಲ ವಿವಾದಸ್ಪದ ಮಾತುಗಾರಿಕೆಗಷ್ಟೇ ಅವರ ಅಧಿಕಾರ ಸೀಮಿತ. ನಿಜಾಧಿಕಾರ ನಡೆಸುತ್ತಿರುವವರು ಮುಖ್ಯಮಂತ್ರಿ ಪುತ್ರ ವಿಜಯೇಂದ್ರ. ಹಾಗಾಗಿಯೇ ಆಚಾರ್ಯ ಅಚಾತುರ್ಯದ ವರ್ತನೆ ಹೊರಗೆಡಹುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪದೇಪದೇ ಇಕ್ಕಟ್ಟಿಗೆ ಸಿಲುಕಿಸುತ್ತಾರೆ.
ತಮ್ಮದೇ ಕ್ಷೇತ್ರದ ಶಾಸಕ ರಘುಪತಿಭಟ್‌ರ ಪತ್ನಿ ಆತ್ಮ`ಹತ್ಯೆ' ಪ್ರಕರಣದಲ್ಲಿ ಅವರ ನಡೆದುಕೊಂಡ ರೀತಿ ಜವಾಬ್ದಾರಿಯುತ ಹುದ್ದೆಗೆ ಮಾಡಿದ ಅಪಮಾನ. ಅಧಿಕಾರದ ಹೊಸದರಲ್ಲಿ ಹಾಗೆ ಮಾತನಾಡಿದರು ಎಂದು ಜನತೆ ಕ್ಷಮಿಸಿದರು. ಮತಾಂತರ, ಚರ್ಚ್‌ಗಳ ಮೇಲೆ ದಾಳಿ, ಪಬ್‌ಮೇಲೆ ದಾಳಿ, ರೈತರ ಕಗ್ಗೊಲೆ ಹೀಗೆ ರಾಜ್ಯದಲ್ಲಿ ಸರಣಿ ಕೃತ್ಯಗಳು ಮೇಲಿಂದ ಮೇಲೆ ನಡೆಯತೊಡಗಿದಾಗ ಆಚಾರ್ಯರ ನಿಜಬಣ್ಣ ಬಯಲಾಯಿತು. ಅವರ `ಶಕ್ತಿ'ಯ ಮೇಲೆ ಸಂಶಯ ಮೂಡತೊಡಗಿತು.
ಮೂರುವರೆ ದಶಕಗಳ ಕಾಲ ವಿಧಾನಪರಿಷತ್‌ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ ಸದನದಲ್ಲಿ ನಡೆಸಿದ ವಾದವಿವಾದಗಳು ಅವರ ಗಂಟಲಿಂದ ಬಂದಿದ್ದವೇ ಎಂದು ಅನುಮಾನ ಪಡುವಷ್ಟು ಆಚಾರ್ಯರು ಎಡಬಿಡಂಗಿಯಾಗಿ ಮಾತಾಡತೊಡಗಿದ್ದರು. ಅವೆಲ್ಲವನ್ನೂ ಜನ ಕ್ಷಮಿಸಿದರು. ಅರವತ್ತರ ಅರಳುಮರುಳು ಎಂದು ಸುಮ್ಮನಾದರು. ಗುಬಾಡ್‌ ಗೃಹಸಚಿವ ಎಂದು ಬೈದು ಸಮಾಧಾನಪಟ್ಟುಕೊಂಡರು.
ಆದರೆ. . .
ಮಾಧ್ಯಮಗಳ ನಿಯಂತ್ರಣಕ್ಕೆ `ಓಂಬುಡ್ಸ್‌ಮನ್‌' ಅರ್ಥಾತ್‌ ಮಾಧ್ಯಮಾಧಿಕಾರಿ ನೇಮಕ ಕುರಿತು ಅವರು ಹರಿಯಬಿಟ್ಟ ಮಾತುಗಳು ಆಚಾರ್ಯರ ಎಳಸುತನವನ್ನು ಪ್ರದರ್ಶಿಸಿಬಿಟ್ಟಿತು. ಜತೆಗೆ ಸಂಘಪರಿವಾರದ ಫ್ಯಾಸಿಸಂ ಧೋರಣೆಗೆ ಕನ್ನಡಿಯನ್ನೂ ಹಿಡಿಯಿತು.
ಮೇಲ್ನೋಟಕ್ಕೆ ಎಳಸುತನದ ಮಾತುಗಾರಿಕೆ ಇದು ಎಂದೆನಿಸಿದರೂ ಅದರ ಆಳದಲ್ಲಿರುವುದು ಫ್ಯಾಸಿಸಂನ ಧೋರಣೆಯೇ. ಸರ್ವಾಧಿಕಾರದ ಮೊದಲ ಶತ್ರು ಎಂದರೆ ವಾಕ್‌ಸ್ವಾತಂತ್ರ್ಯ. ಇತಿಹಾಸದಲ್ಲಿ ಹಿಟ್ಲರ್‌, ಮುಸಲೋನಿ, ತಾಲಿಬಾನ್‌, ಪರ್ವೇಜ್‌ ಮುಷ್‌ರಫ್‌, ಇಂದಿರಾಗಾಂಧಿ ಎಲ್ಲರೂ ಮಾಡಿದ್ದು ಇದನ್ನೆ. ಮೊದಲು ಮಾಧ್ಯಮಗಳನ್ನು ಹದ್ದುಬಸ್ತಿನಲ್ಲಿಟ್ಟರೆ ತಮ್ಮ ನೆಲದಲ್ಲಿ ನಡೆಯವುದು ಹೊರಜಗತ್ತಿಗೆ ತಿಳಿಯುವುದಿಲ್ಲವೆಂಬ ಹುಂಬತನದಲ್ಲಿ ಎಲ್ಲಾ ಸರ್ವಾಧಿಕಾರಿಗಳು ವರ್ತಿಸುತ್ತಾರೆ. ಹಾಗೆಂದು ಅವರು ನಂಬಿರುತ್ತಾರೆ. ಹಾಗಂತ ಹಿಟ್ಲರ್‌ನಿಂದ ಇಂದಿರಾಗಾಂಧಿಯವರೆಗೆ ಎಲ್ಲಾ ಸರ್ವಾಧಿಕಾರಿಗಳು ಧೂರ್ತತನವನ್ನು ಮಾಡಿದ್ದಾರೆ. ಮೇಲ್ನೋಟಕ್ಕೆ ದಡ್ಡತನದ ವರ್ತನೆಯಂತೆ ಕಾಣಿಸುತ್ತಲೇ ಎಲ್ಲವನ್ನೂ ನಿಯಂತ್ರಿಸುವ, ನಿರ್ಬಂಧಿಸುವ ಕಠೋರ ಕಾನೂನನ್ನು ಜಾರಿಗೊಳಿಸುವ ಹುನ್ನಾರ ಇದರ ಹಿಂದಿರುತ್ತದೆ.
ಸ್ವಭಾವತಃ ಹಾಗೂ ಸೈದ್ಧಾಂತಿಕವಾಗಿ ಫ್ಯಾಸಿಸಂನ್ನು ಬೆಂಬಲಿಸುವ ಬಿಜೆಪಿ ಮತ್ತದರ ಪರಿವಾರದ ಸಂಘಟನೆಗಳು ತಮ್ಮ ಚರಿತ್ರೆಯುದ್ದಕ್ಕೂ ಸರ್ವಾಧಿಕಾರಿ ವರ್ತನೆಯನ್ನು ಪ್ರೋತ್ಸಾಹಿಸುತ್ತಲೇ ಬಂದಿವೆ. ಸಂಘಪರಿವಾರದ ಸಂವಿಧಾನವೆಂದೇ ಖ್ಯಾತವಾದ ಗೋಳ್ವಾಲ್ಕರ್‌ರ ಬಂಚ್‌ ಆಫ್‌ ಥಾಟ್ಸ್‌(ಚಿಂತನಗಂಗಾ)ನ ಮೂಲ ಆಶಯವೇ ಅದು. ಕಚ್ಚಿ ವಿಷಕಾರುವ ಹಾವನ್ನು ಕಂಡರೆ ಹಾಗೆಯೇ ಬಿಡು. ಆದರೆ ಕಮ್ಯುನಿಸ್ಟರು, ಮುಸ್ಲಿಂರು, ಕ್ರೈಸ್ತರನ್ನು ಕಂಡರೆ ಕೊಲ್ಲು ಎಂಬರ್ಥ ಮಾತುಗಳನ್ನು ಚಿಂತನಗಂಗಾ ಅನೂಚಾನವಾಗಿ ವಿವರಿಸುತ್ತದೆ. ಹಿಂದೂ ಮತಾಂಧರ ಅಧಿಕಾರವನ್ನು ಸ್ಥಾಪಿಸಿ, ಉಳಿದೆಲ್ಲಾ ಸಮುದಾಯಗಳನ್ನು ತುಳಿಯುವ ಸಂಚನ್ನು ಸಂಘಪರಿವಾರ ಹೊಂದಿದೆ. ಕೇಂದ್ರದಲ್ಲಿ ಒಮ್ಮೆ ಪೂರ್ಣ ಪ್ರಮಾಣದ ಅಧಿಕಾರವನ್ನು ಬಿಜೆಪಿ ಹಿಡಿದರೆ ಇವೆಲ್ಲಾ ಸತ್ಯವಾಗಲಿವೆ.
ತಮಗೆ ಸಹ್ಯವೆನಿಸದ್ದನ್ನು ನಾಶಗೊಳಿಸುವ, ತಮ್ಮ ಸಿದ್ಧಾಂತ ಒಪ್ಪದೇ ಇದ್ದವರನ್ನು ಹಲ್ಲೆ ನಡೆಸಿ ನಿರ್ಮೂಲನೆ ಮಾಡುವ, ತಮ್ಮದನ್ನೇ ಇನ್ನೊಬ್ಬರ ಮೇಲೆ ಹೇರುವ ಅಪ್ರಜಾಪ್ರಭುತ್ವವಾದಿ ವರ್ತನೆ ಸಂಘಪರಿವಾರದ್ದು. ಬಾಬರಿ ಮಸೀದಿ ಕೆಡವಿದ ಹಿಂದೆ, ಗುಜರಾತಿನ ನರಮೇಧ, ಜನಾಂಗೀಯ ದ್ವೇಷ, ಒರಿಸ್ಸಾದಲ್ಲಿ ಇಬ್ಬರು ಹಸುಮಕ್ಕಳ ಸಹಿತ ಪಾದ್ರಿ ಗ್ರಹಾಂಸ್ಟೈನ್‌ ಕೊಲೆ, ಹರ್ಯಾಣದ ಜಜ್ಜಾರ್‌ನಲ್ಲಿ ಸತ್ತ ದನದ ಮಾಂಸ ತಿಂದರೆಂಬ ಆರೋಪ ಹೊರಿಸಿ 7 ಜನ ದಲಿತರ ಚರ್ಮ ಸುಲಿತು ಕೊಲೆಗೈದದ್ದು, ಆದಿ ಉಡುಪಿಯಲ್ಲಿ ಗೋ ಸಾಗಿಸಿದರೆಂದು ಇಬ್ಬರು ಮುಸ್ಲಿಮರನ್ನು ಬೆತ್ತಲು ಗೊಳಿಸಿದ್ದು, ಇತ್ತೀಚೆಗೆ ಒರಿಸ್ಸಾದಲ್ಲಿ ಕ್ರೈಸ್ತ ಸಂನ್ಯಾಸಿನಿಯ ಮೇಲೆ ಸಾಮೂಹಿಕ ಅತ್ಯಾಚಾರ, ಜತೆಗೆ ನಡೆದ ಬರ್ಬರ ದಾಳಿ, ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ನಡೆದ ಸರಣಿ ದಾಳಿ, ಪಬ್‌ನಲ್ಲಿ ಯುವತಿಯರಿಗೆ ಹಿಗ್ಗಾಮುಗ್ಗಾ ಹೊಡೆದಿದ್ದು, ಕೇರಳದ ಶಾಸಕ ಪುತ್ರಿ ಮುಸ್ಲಿಮ್‌ ಸ್ನೇಹಿತನ ಜತೆಗೆ ಹೋಗುತ್ತಿದ್ದಳೆಂದು ಹಿಂಸಿಸಿದ್ದು. . . ಹೀಗೆ ಉದ್ದಕ್ಕೆ ಹೇಳುತ್ತಾ ಹೋಗಬಹುದು.
ಗೃಹಸಚಿವ ವಿ.ಎಸ್‌. ಆಚಾರ್ಯರು ಮಾಧ್ಯಮಾಧಿಕಾರಿ ನೇಮಿಸಬೇಕೆಂಬ ಹೇಳಿಕೆಯನ್ನು ಈ ಎಲ್ಲದನ್ನೂ ಹಿಂದಿಟ್ಟುಕೊಂಡು ನೋಡಬೇಕು. ಸಂಘಪರಿವಾರದ ಎಲ್ಲಾ ದುಷ್ಕೃತ್ಯಗಳು ಇಡೀ ಭಾರತಕ್ಕೆ, ಜಗತ್ತಿಗೆ ಗೊತ್ತಾಗಿದ್ದು ಮಾಧ್ಯಮಗಳ ಮೂಲಕವೇ. ಮಾಧ್ಯಮಗಳ ಧ್ವನಿಯಿಲ್ಲದಿದ್ದರೆ ಇವ್ಯಾವ ಅನಾಹುತಗಳು ವಿಶ್ವಕ್ಕೆ ಗೊತ್ತಾಗುತ್ತಿರಲಿಲ್ಲ. ಬಿಜೆಪಿ ಸರ್ಕಾರ ಸರ್ವಜನಾದರಣೀಯವಾಗಿ, ಜನರಿಗೆ ನೆಮ್ಮದಿ ಕೊಡುತ್ತಾ ಅಧಿಕಾರ ನಡೆಸುತ್ತಿದೆ ಎಂದು ಎಲ್ಲರೂ ನಂಬುತ್ತಿದ್ದರು.
ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೋಕಾಲ್ಡ್‌ ಸಂಘಪರಿವಾರದ ಸಂಘಟನೆಗಳು ನಡೆಸುತ್ತಿರುವ ದುಷ್ಟತನಗಳು ಇಡೀ ಜಗತ್ತಿಗೆ ಗೊತ್ತಾಗಿ, ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಿವೆ. ಮಾಧ್ಯಮಗಳ ಗಂಟಲನ್ನೇ ಕಟ್ಟಿ ಬಿಟ್ಟರೆ ಧ್ವನಿಯೇ ಹೊರಡದಂತಾಗಿ ಎಲ್ಲವೂ ಗಪ್‌ಚುಪ್‌ ಆಗುತ್ತವೆ. ಆಗ ಸರ್ಕಾರ, ಸಂಘಪರಿವಾರ ಆಡಿದ್ದೇ ಆಟವಾಗಿ ಬಿಡುತ್ತದೆ ಎಂಬ ಲೆಕ್ಕಾಚಾರ ಆಚಾರ್ಯರದ್ದು.
ಪಬ್‌ದಾಳಿ ಮಹಿಳೆಯರ ಬಗ್ಗೆ ಸಂಘಪರಿವಾರ ಧೋರಣೆಯನ್ನು ಬಹಿರಂಗಪಡಿಸಿದೆ. ಈ ಘಟನೆ ಕುರಿತು ಮಾಧ್ಯಮಗಳು ಅತಿರಂಜಿತವಾದ ವರದಿಯನ್ನು ಪ್ರಕಟಿಸಿದ್ದೂ ಸುಳ್ಳಲ್ಲ. ಒಟ್ಟಾರೆ ಸುದ್ದಿ ಶ್ರೀರಾಮಸೇನೆಯ ವಿರುದ್ಧವೆನಿಸಿದರೂ ಅದರ ಆಂತ್ಯಿಕ ಪರಿಣಾಮ ಪ್ರಮೋದ ಮುತಾಲಿಕ್‌ಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟು ಬಿಟ್ಟಿತು. ಒಂದೇ ರಾತ್ರಿಯಲ್ಲಿ ಮುತಾಲಿಕ್‌ ಹೀರೋ ಆಗಿಬಿಟ್ಟ. ನರೇಂದ್ರ ಮೋದಿಗೆ ಸಿಕ್ಕಷ್ಟೇ ಪ್ರಚಾರ ಮುತಾಲಿಕ್‌ಗೂ ಸಿಕ್ಕಿಬಿಟ್ಟಿತು.
ಮಾಧ್ಯಮಗಳು ಅನಗತ್ಯವೆನ್ನುವಷ್ಟು ವೈಭವೀಕರಣವನ್ನು ಮುತಾಲಿಕ್‌ಗೆ ಕೊಟ್ಟುಬಿಟ್ಟವು. ಅದು ತಪ್ಪಬೇಕು. ನೆಗೆಟಿವ್‌ ಸುದ್ದಿ ಮಾಡುತ್ತಲೇ ಪಾಸಿಟಿವ್‌ ಇಮೇಜ್‌ ಕ್ರಿಯೇಟ್‌ ಮಾಡುವುದು ಮಾಧ್ಯಮಗಳ ದೌರ್ಬಲ್ಯ ಕೂಡ. ಆದರೆ ಮಂಗಳೂರಿನಲ್ಲಿ ನಡೆದ ಯುವತಿಯರ ಮೇಲಿನ ಹಿಂಸಾಚಾರ, ಸಂಘಪರಿವಾರದ ನಿಜಬಣ್ಣ ಹಾಗೂ ಇಲ್ಲಿಯವರೆಗೆ ಬಿಜೆಪಿ ಬೆಂಬಲಕ್ಕಿದ್ದ ಸಮಾಜದ ದೊಡ್ಡ ಹಾಗೂ ಪ್ರಭಾವಿ ಸಮೂಹವಾದ ಮಧ್ಯಮವರ್ಗಕ್ಕೂ ಹೇಗೆ ಬಿಜೆಪಿ ವಿರುದ್ಧವಾದುದು ಎಂಬುದು ಇದರಿಂದ ಸ್ವತಃ ಮಧ್ಯಮವರ್ಗದವರಿಗೂ ಗೊತ್ತಾಯ್ತು.
ಮಾಧ್ಯಮದವರಿಗೆ ಸ್ವಯಂ ನಿಯಂತ್ರಣ ಬೇಕೆಂಬುದರ ಬಗ್ಗೆ ಯಾರದ್ದೂ ವಿರೋಧವಿಲ್ಲ. ಸದ್ಯದ ವಿದ್ಯುನ್ಮಾನ ಮಾಧ್ಯಮಗಳ ಸುದ್ದಿಯ ಆತುರಗಾರಿಕೆಯಲ್ಲಿ ಅನೇಕ ಅಪಾಯಗಳು ಸಂಭವಿಸುತ್ತಿವೆ. ಅದರ ನಿಯಂತ್ರಣಕ್ಕೆ ಪ್ರೆಸ್‌ಕೌನ್ಸಿಲ್‌ ಇದೆ. ಪತ್ರಕರ್ತರದ್ದೇ ಆದ ಸಂಘಟನೆಗಳಿವೆ. ಅದನ್ನು ಆಂತರಿಕವಾಗಿ ರೂಪಿಸಿಕೊಳ್ಳಬೇಕಾದ ದರ್ದು ಮಾಧ್ಯಮಗಳಿಗಿದೆ.
ಹಾಗಂತ ವಿ.ಎಸ್‌. ಆಚಾರ್ಯ, ಪ್ರಮೋದಮುತಾಲಿಕ್‌ ಈ ರೀತಿ ಮಾತನಾಡಿದರೆ ಅದನ್ನು ಬೇರೆಯದೇ ಆದ ಆಯಾಮ, ಅನುಮಾನಗಳಿಂದ ನೋಡಬೇಕಾಗುತ್ತದೆ. ಸಂಘಪರಿವಾರದ ಆಶಯಗಳನ್ನು ಕಾರ್ಯರೂಪಕ್ಕೆ ಇಳಿಸುವ ಹಿಡೆನ್‌ ಅಜೆಂಡ್‌ ಇದರ ಹಿಂದಿರುತ್ತದೆ. ಹಾಗಾಗಿಯೇ ಆಚಾರ್ಯರ ಓಂಬುಡ್ಸ್‌ಮನ್‌ ಖಂಡಿತಾ ಬೇಡ. ಇವತ್ತು ಅದಕ್ಕೆ ಒಪ್ಪಿಗೆ ಸೂಚಿಸಿದ ತಕ್ಷಣವೇ ನಾಳೆ ಮಾಧ್ಯಮದವರು ಸರ್ಕಾರಕ್ಕೆ ತೋರಿಸಿಯೇ ಸುದ್ದಿಯನ್ನು ಬಿತ್ತರ ಮಾಡಬೇಕು. ಜನರ ಓಡಾಡುವುದಕ್ಕೂ ಸರ್ಕಾರದ ಪರ್ಮಿಶನ್‌ ತೆಗೆದುಕೊಳ್ಳಬೇಕು. ನ್ಯಾಯಾಲಯ ತೀರ್ಪು ಕೊಡುವುದಕ್ಕೂ ಸರ್ಕಾರದ ಒಪ್ಪಿಗೆ ಪಡೆಯಬೇಕು. ಕೊನೆಗೆ ಮತಗಟ್ಟೆಗೆ ಹೋಗಲು ನಮ್ಮ ಒಪ್ಪಿಗೆ ಬೇಕೆಂಬ ನಿಲುವಿಗೆ ಸರ್ಕಾರ, ಸಂಘಪರಿವಾರ ಬಂದು ನಿಲ್ಲುತ್ತದೆ.
ಏಕೆಂದರೆ ಪಬ್‌ಗೆ ಹೋಗಬಾರದು, ಪ್ರೇಮಿಗಳ ದಿನಾಚರಣೆ ಆಚರಿಸಬಾರದು, ಮುಸ್ಲಿಮ್‌ ಹುಡುಗರ ಜತೆ ಓಡಾಡಬಾರದು, ಕ್ರೈಸ್ತ ಶಿಕ್ಷಣಸಂಸ್ಥೆಗಳು ಪ್ರತಿಭಟನೆ ಮಾಡಬಾರದು ಎಂದು ಫರ್ಮಾನು ಹೊರಡಿಸಿರುವ ಸಂಘಪರಿವಾರ/ಸರ್ಕಾರ ಇವೆಲ್ಲವನ್ನೂ ಮಾಡುವುದಿಲ್ಲವೆಂದು ಹೇಗೆ ನಂಬುವುದು? ಓಂಬುಡ್ಸ್‌ಮನ್‌ನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು.

1 comment:

ಚಿತ್ರಾ ಸಂತೋಷ್ said...

'ಅಚಾತುರ್ಯ ಆಚಾರ್ಯ' ನಿಜವಾದುದನ್ನೇ ಹೇಳಿದ್ದೀರಿ. ಮುಖ್ಯಮಂತ್ರಿಯ ನಂತರ ಉನ್ನತ ಹುದ್ದೆಯಲ್ಲಿರುವ 'ಗೃಹಸಚಿವರು' ಹೇಗಿರಬೇಕನ್ನವುದೋ ಆಚಾರ್ಯರಿಗೆ ಗೊತ್ತಿಲ್ಲ. ಆದರೂ ಮುಖ್ಯಮಂತ್ರಿಗಳ ಬಾಯಲ್ಲಿ ಮೊನ್ನೆ ಆಚಾರ್ಯರು 'ಕರ್ನಾಟಕ ಕಂಡ ಅತ್ಯುತ್ತಮ ಗೃಹಸಚಿವ'ರಾಗಿದ್ದಾರೆ..ಇದಕ್ಕೆ ಏನನ್ನಬೇಕೋ? ಸಾಗಲಿ..ನಿಮ್ಮ ಬರಹಪಯಣ...
-ಚಿತ್ರಾ