Monday, February 16, 2009

ಶರಣರ ದರ್ಶನಗಳಿಗೆ ಶರಧಿ ದಾಟುವ ಭಾಗ್ಯ

*25 ಭಾಷೆಗಳಿಗೆ ವಚನಾನುವಾದ
*900 ಪುಟಗಳಲ್ಲಿ 2500 ವಚನ
*ಫ್ರೆಂಚ್‌, ಸ್ಪ್ಯಾನಿಷ್‌, ಚೈನೀಸ್‌ಗೆ
*ಮೂರು ವರ್ಷದಲ್ಲಿ ಶರಣದರ್ಶನ
ಅಚ್ಚ ಕನ್ನಡದ ಸೊಗಡು, ಗ್ರಾಮ್ಯ ಜೀವನಶೈಲಿಯನ್ನು ಹೊಸ ಶೈಲಿಯಲ್ಲಿ ಬರೆದು ಕನ್ನಡವನ್ನು ಶ್ರೀಮಂತಗೊಳಿಸಿದ ಶರಣರ ವಚನಗಳು ಇದೀಗ ನಾಡಿನ ಎಲ್ಲೆಯನ್ನೂ ದಾಟಿ, ದೇಶ-ವಿಶ್ವಭಾಷೆಗಳನ್ನು ಸಮೃದ್ಧಗೊಳಿಸಲಿವೆ.
ಬೆಂಗಳೂರಿನ ಬಸವಸಮಿತಿಯು ರಾಜ್ಯ ಸರ್ಕಾರದ ಸಹಾಯದಡಿ ಕೈಗೊಂಡ ಮಹತ್ವ ಪೂರ್ಣ ಯೋಜನೆ ಮುಕ್ತಾಯಗೊಂಡರೆ 25 ಭಾಷೆಗಳಲ್ಲಿ ವಚನದ ಸಾರಸತ್ವ ಪರಿಚಿತಗೊಳ್ಳಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಒಂದು ಕೋಟಿ ರೂ. ನೀಡಿದ್ದು, ಅನುವಾದ ಕಾರ್ಯ ಭರದಿಂದ ಸಾಗುತ್ತಿದೆ.
12 ಶತಮಾನದ ಕಾಯಕ ಜೀವಿಗಳ ಚಳವಳಿ ಕನ್ನಡ ಸಾಹಿತ್ಯಕ್ಕೆ, ಸಂಸ್ಕೃತಿಗೆ ಹೊಸತನ ತಂದುಕೊಟ್ಟಿತು. ಸಾಮಾಜಿಕ ಉತ್ಕ್ರಾಂತಿಗೂ ಕಾರಣವಾಯಿತು. ಅಂತಹ ವಚನಗಳು ಕನ್ನಡಿಗರ ಆಡುಮಾತಿನ ಲಯದಲ್ಲಿ ಸೇರಿಕೊಂಡು ಬಿಟ್ಟವು. ಆದರೆ ಸೋದರ ಭಾಷೆಗಳಿಗೆ, ವಿದೇಶಿ ಭಾಷೆಗಳಿಗೆ ಅವನ್ನು ಅನುವಾದ ಮಾಡುವ ಗೊಡವೆಗೆ ಯಾರೂ ಹೋಗಲಿಲ್ಲ. ಇಂಗ್ಲಿಷಿಗೆ ಕೆಲವು ವಚನಗಳು ಅನುವಾದಗೊಂಡರೂ ಅದರಲ್ಲಿ ಸಮಗ್ರ ವಚನಗಳಿರಲಿಲ್ಲ. ಆ ಕೊರತೆಯನ್ನು ತುಂಬುವ ಕೆಲಸವನ್ನು ಬಸವ ಸಮಿತಿ ಮಾಡಲಿದೆ.
ಈಗ ಸಂಗ್ರಹಿತಗೊಂಡಿರುವ 23 ಸಾವಿರ ವಚನಗಳ ಪೈಕಿ 2500 ವಚನಗಳನ್ನು ಆಯ್ದು ಎಲ್ಲಾ ಭಾಷೆಯಲ್ಲೂ ಪ್ರಕಟಿಸುವ ಮಹತ್ವಾಕಾಂಕ್ಷಿ ಯೋಜನೆಯಿದು. ಸಂವಿಧಾನ ಅಂಗೀಕರಿಸಿದ ದೇಶದ 22 ಭಾಷೆಗಳಿಗೆ(ಕನ್ನಡ ಸೇರಿ) ಹಾಗೂ ವಿದೇಶ 4 ಭಾಷೆಗಳಿಗೆ ಇವಿಷ್ಟು ವಚನಗಳನ್ನು ಹಂತಹಂತವಾಗಿ ಅನುವಾದಿಸಲಾಗುತ್ತದೆ.
900 ಪುಟಗಳಷ್ಟು ೃಹತ್‌ಗ್ರಂಥವಾಗಿ ಇದು ಹೊರಹೊಮ್ಮಲಿದ್ದು, ವಚನ ಸಾಹಿತ್ಯದ ಹಿನ್ನೆಲೆಯನ್ನು ಪರಿಚಯಿಸುವ 110 ಪುಟಗಳ ಪೂರ್ವ ಪೀಠಿಕೆ ಇರಲಿದೆ. ವಚನಕಾರರ ಕಾಲದೇಶ, ಹಿನ್ನೆಲೆ ಸಹಿತ ಮುದ್ರಣಗೊಳ್ಳಲಿದೆ.
ಇಂಗ್ಲಿಷ್‌, ಫ್ರೆಂಚ್‌, ಸ್ಪ್ಯಾನಿಷ್‌, ಚೈನೀಸ್‌ ಭಾಷೆಗಳಿಗೂ ವಚನಗಳು ಅನುವಾದಗೊಳ್ಳಲಿವೆ. ಧಾರ್ಮಿಕ ವಚನಗಳಿಗಿಂತ ಸಾಮಾಜಿಕ ವಚನಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಕನ್ನಡ ವಿ.ವಿ. ವಿಶ್ರಾಂತ ಕುಲಪತಿ, ಪ್ರಾಧಿಕಾರದ ಸಮಗ್ರ ವಚನ ಸಂಪುಟಗಳ ಪ್ರಧಾನ ಸಂಪಾದಕರಾಗಿದ್ದ ಡಾ ಎಂ. ಎಂ. ಕಲಬುರ್ಗಿ ಈ ಅನುವಾದ ಕೈಂಕರ್ಯಕ್ಕೂ ಪ್ರಧಾನ ಸಂಪಾದಕರಾಗಿದ್ದಾರೆ. ಡಾವೀರಣ್ಣ ರಾಜೂರ, ಡಾಜಯಶ್ರೀ ದಂಡೆ ಇವರ ಜತೆಗಿದ್ದಾರೆ. ಕಲಬುರ್ಗಿ, ದೇಜಗೌ, ಪ್ರಧಾನಗುರುದತ್ತ, ಲಿಂಗದೇವರು ಹಳೆಮನೆ, ಉದಯನಾರಾಯಣಸಿಂಗ್‌, ಅರವಿಂದ ಜತ್ತಿ ಅವರನ್ನೊಳಗೊಂಡ ಮಾರ್ಗದರ್ಶಕ ಸಮಿತಿ ಜತೆಗೆ ನಿಂತಿದೆ.
ಸದ್ಯ 8 ಭಾಷೆಗೆ:
ಮೂರು ವರ್ಷದ ಅವಧಿಯಲ್ಲಿ 25 ಭಾಷೆಗಳಿಗೆ ಅನುವಾದಗೊಳ್ಳಲಿದ್ದರೂ ಆರಂಭದಲ್ಲಿ 8 ಭಾಷೆಗಳಿಗೆ ಅನುವಾದಿಸುವ ಕಾರ್ಯ ಭರದಿಂದ ಸಾಗಿದೆ. ಇಂಗ್ಲಿಷ್‌, ಹಿಂದಿ, ಸಂಸ್ಕೃತ, ತಮಿಳು, ತೆಲುಗು, ಪಂಜಾಬಿ, ಬಂಗಾಲಿ, ಮರಾಠಿ ಭಾಷೆಗಳಿಗೆ ಅನುವಾದಿಸಲು ಉಭಯ ಭಾಷಾ ತಜ್ಞರ ಪ್ರಧಾನ ಸಂಪಾದಕತ್ವದಲ್ಲಿ ಸಮಿತಿ ರಚಿಸಲಾಗಿದೆ. ಅನುವಾದಕರಿಗಾಗಿ ಕಮ್ಮಟಗಳು ನಡೆದಿವೆ. ಇವರು ಡಿಸೆಂಬರ್‌ ಅಂತ್ಯದೊಳಗೆ ಅನುವಾದಿಸಿ ಕೊಡಲಿದ್ದು, ಆನಂತರ ಆಯಾ ಭಾಷೆಯ ತಜ್ಞರು ಅನುವಾದಗಳ ಗುಣಮಟ್ಟವನ್ನು ಪರೀಕ್ಷಿಸಲಿದ್ದಾರೆ. ಆನಂತರವೇ ಮುದ್ರಣಕ್ಕೆ ಹೋಗಲಿದೆ.
136 ಶರಣರು:
12 ನೇ ಶತಮಾನದಿಂದೀಚಿಗೆ ವಿವಿಧ ಸಂಪಾದನಾಕಾರರು ಸುಮಾರು 136 ವಚನಕಾರರು ರಚಿಸಿದ 23 ಸಾವಿರ ವಚನಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಇಲ್ಲಿಯವರೆಗೆ ದಾಖಲೆಗೊಂಡಿರುವ ಎಲ್ಲಾ ವಚನಕಾರರನ್ನು ಒಳಗೊಳ್ಳುವ ಸಮಗ್ರ ಸಂಪುಟ ಇದಾಗಲಿದೆ. 900 ವರ್ಷಗಳ ಹಿಂದೆಯೇ ಆಗಬೇಕಾಗಿದ್ದ ಕೆಲಸವನ್ನು ಈಗ ಕೈಗೆತ್ತಿಕೊಂಡಿರುವುದ ತಮಗೆ ಸಮಾಧಾನ ತಂದಿದೆ. ಇಂಗ್ಲಿಷ್‌ ಹಾಗೂ ಹಿಂದಿಗೆ ಅನುವಾದಗೊಂಡರೆ ಉಳಿದ ಭಾಷೆಗೆ ಅನುವಾದ ಸುಲಭವೆಂಬ ಕಾರಣಕ್ಕೆ ಆ ಎರಡು ಭಾಷೆಗಳ ಅನುವಾದಕ್ಕೆ ಆದ್ಯತೆ ನೀಡಲಾಗಿದೆ ಎನ್ನುತ್ತಾರೆ ಅರವಿಂದ ಜತ್ತಿ.

1 comment:

ದಿನೇಶ್ ಕುಮಾರ್ ಎಸ್.ಸಿ. said...

ಜಗದೀಶ್ ಅವರೇ,
ಐದೈದು ಪೋಸ್ಟ್ ಒಟ್ಟೊಟ್ಟಿಗೆ ಹಾಕಿದ್ದೀರಿ. ಎಲ್ಲವೂ ಅರ್ಥಪೂರ್ಣವಾಗಿವೆ.
ಆಚಾರ್ಯಗೆ ಚೆನ್ನಾಗಿ ಬೆಂಡೆತ್ತಿದ್ದೀರಿ. ಆದರೆ ಅದು ಬದಲಾಗುವ ಪ್ರಾಣಿ ಅಲ್ಲ ಅನಿಸುತ್ತದೆ.
ರಂಗನಾಥ್ ಭಾಷಣ ಯಾವ ಪತ್ರಿಕೆಯಲ್ಲೂ ಕಾಣಿಸಲಿಲ್ಲ. ಆದರೆ ಅವರು ಆಡಿರುವ ಮಾತು ವೇದಿಕೆಯಲ್ಲಿದ್ದವರಿಗೆ ಅರ್ಥವಾಗಿದ್ದರೆ ನಮ್ಮ ಪುಣ್ಯ.
ಶಾಸ್ತ್ರೀಯ ಭಾಷೆ ಸ್ಥಾನಮಾನ ಕನ್ನಡಕ್ಕಿನ್ನೂ ಸಿಕ್ಕೇ ಇಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸುಗಳು ಸಿದ್ಧವಿಲ್ಲ. ಇದೊಂದು ಥರ ಹುಸಿನಂಬಿಕೆಯ ಭ್ರಾಂತಿ. ಇಂಥ ಭ್ರಾಂತಿಗಳಿಂದಲೇ ಕನ್ನಡಿಗರ ಬದುಕು ಮೂರಾಬಟ್ಟೆಯಾಗಿರುವುದು.
ಕೊಳಗೇರಿ ಮಕ್ಕಳು ಏರ್ಪಡಿಸಿ ಕಾವ್ಯ ಸ್ಪರ್ಧೆ ಅದ್ಭುತ. ದುರದೃಷ್ಟ, ಇದಕ್ಕೂ ನಮ್ಮ ಪತ್ರಿಕೆಗಳಲ್ಲಿ ಪ್ರಚಾರ ದೊರೆಯಲಿಲ್ಲ.
ಶರಣರ ವಚನಗಳ ಭಾಷಾಂತರ ಯೋಜನೆ ಅಪೂರ್ವ. ಬಸವಸಮಿತಿ ಅತ್ಯುತ್ತಮ ಕೆಲಸ ಮಾಡಿದೆ. ನೀವು ಅದನ್ನು ಚೆನ್ನಾಗಿ ಗುರುತಿಸಿದ್ದೀರಿ.
ಒಟ್ಟೊಟ್ಟಿಗೆ ಪೋಸ್ಟ್ ಮಾಡುವ ಬದಲು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಿದರೆ ಚೆನ್ನಾಗಿರುತ್ತೆ ಅನಿಸುತ್ತೆ.