Tuesday, March 3, 2009

ಸಂಸ್ಕೃತಿ ವಿರೂಪ

`ಸಂಸ್ಕೃತಿ ವಿರೂಪ-ಇದು ಬಿಜೆಪಿಯ ಸ್ವರೂಪ' ಹೀಗೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ಹಾಗೂ ಸಂಘಪರಿವಾರ ಕೃಪಾಪೋಷಿತ ಸಂಘಟನೆಗಳು ನಡೆಸುತ್ತಿರುವ ದುಂಡಾವರ್ತನೆ, ಅಂದಾದುಂದಿ ಹೇಳಿಕೆ ಗಮನಿಸಿದರೆ ಈ ಮಾತು ಅಕ್ಷರಶಃ ಸತ್ಯ.
ಒಂದು ಜನಾಂಗ, ಸಮುದಾಯ ಅಥವಾ ಒಟ್ಟಾಗಿ ವಾಸಿಸುವ ಒಂದು ಗುಂಪಿನ ಆಚರಣೆ, ಭಾಷೆ, ನಡಾವಳಿ, ಊಟೋಪಚಾರ, ವಿವಿಧ ವರ್ತನೆಗಳ ಬಗ್ಗೆ ಆ ಸಮುದಾಯ ಕಟ್ಟಿಕೊಂಡು ಬಂದ ಭಾವನಾತ್ಮಕ ಅಥವಾ ವೈಚಾರಿಕ ನಂಬಿಕೆ ಹಾಗೂ ರೂಢಿಗತ ಪದ್ಧತಿಗಳು ಹೀಗೆ ಎಲ್ಲವನ್ನೂ ಸೇರಿಸಿ ಸಂಸ್ಕೃತಿ ಎನ್ನಬಹುದು. ಆದರೆ ಬಿಜೆಪಿ ಹಾಗೂ ಅದರ ಬೆನ್ನೆಲುಬಾಗಿರುವ ಸಂಘಪರಿವಾರಿಗಳು ಪ್ರತಿಪಾದಿಸುವ `ಸಂಸ್ಕೃತಿ'ಯ ನಿರ್ವಚನವೇ ಬೇರೆ ರೀತಿಯದ್ದು. ಅವರು ಸಂಸ್ಕೃತಿಗೆ ಫೋಟೋ ಫ್ರೇಮ್‌ ಹಾಕಿಸಿ ಇಟ್ಟಿರುತ್ತಾರೆ. ಒಳಗಿನ ಫೋಟೋ ಗೆದ್ದಲು ಹಿಡಿದು ಕಾಣದಂತಾಗಿದ್ದರೂ, ಹೊರಗಡೆ ಎಲ್ಲರೂ ಆಸ್ವಾದಿಸಬಲ್ಲ ಸೌಂದರ್ಯ ಹೊಂದಿರುವ ಸ್ಫುರದ್ರೂಪವಿದ್ದರೂ ಅವರಿಗದು ಸಂಸ್ಕೃತಿ ಎಂದು ಭಾಸವಾಗುವುದೇ ಇಲ್ಲ. ಗೆದ್ದಲು ಹಿಡಿದ ಫೋಟೋವೇ ಅವರಿಗೆ ಸಂಸ್ಕೃತಿಯ ಸ್ವರೂಪ/ವಿರೂಪವಾಗುತ್ತದೆ.
ಈ ದೇಶದಲ್ಲಿ ಸಸ್ಯಾಹಾರಿಗಳು ಹಾಗೂ ಮಾಂಸಹಾರಿಗಳು ಇಬ್ಬರೂ ಇದ್ದಾರೆ. ಲೆಕ್ಕಾಚಾರ ಪ್ರಕಾರ ಹೇಳಬೇಕೆಂದರೆ `ಘೋಷಿತ' ಸಸ್ಯಾಹಾರಿಗಳ ಸಂಖ್ಯೆ ಅಮ್ಮಮ್ಮಾ ಎಂದರೂ ಈ ದೇಶದ ಜನಸಂಖ್ಯೆಯ ಶೇ.15 ರಷ್ಟು ಇರಬಹುದು. ಅಂದರೆ ನೂರಾಹತ್ತು ಕೋಟಿಯಲ್ಲಿ ಕೇವಲ 15 ಕೋಟಿ ಜನರು ಮಾತ್ರ ಸಸ್ಯಾಹಾರಿಗಳು. ಹಾಗಿದ್ದೂ ಸಸ್ಯಾಹಾರವೇ ಶ್ರೇಷ್ಠ, ಮಾಂಸಹಾರ ಕನಿಷ್ಠವೆಂಬ ತಥಾಕಥಿತ ಆದರೆ ಉದ್ದೇಶಿತ ಮೌಲ್ಯವೊಂದನ್ನು ಬಿತ್ತಿಬೆಳೆಸಲಾಗುತ್ತಿದೆ. ಅದನ್ನೇ ಸಂಸ್ಕೃತಿಯ ಲಕ್ಷಣವೆಂದು ಪರಿಭಾವಿಸಲಾಗುತ್ತಿದೆ. ದೇವರಿಗೆ ಕೋಣ, ಕುರಿ ಬಲಿ ಕೊಡುವುದು ಅಪರಾಧವೆಂದು ಭಾವಿಸಲಾಗುತ್ತಿದೆ. ಹಿಂಸೆ ಸಮರ್ಥನೆ/ವಿರೋಧ ಒತ್ತಟ್ಟಿಗಿರಲಿ. ಆದರೆ ಸಾವಿರಾರು ವರ್ಷಗಳ ಆಹಾರಪದ್ಧತಿಯೊಂದನ್ನೇ ನಿರಾಕರಿಸುವ ವೈದಿಕ ಶಾಹಿ ಹುನ್ನಾರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು ಸಂಸ್ಕೃತಿಯ ಹೆಸರಿನಲ್ಲೇ ಎಂಬುದನ್ನು ಗಮನಿಸಬೇಕು.
ರಾಮ ಮಾತ್ರ ಇರಬೇಕು ಬಾಬರ್‌ ಸ್ಥಾಪಿಸಿದ ಮಸೀದಿ ಇರಬಾರದೆಂಬ ಅಯೋಧ್ಯೆ ದುರ್ಘಟನೆ, ಗುಜ್ಜಾರ್‌ನಲ್ಲಿ ಸತ್ತ ದನದ ಮಾಂಸತಿಂದರೆಂದಬ 9 ಜನ ದಲಿತರ ಚರ್ಮ ಸುಲಿದು ಸಾಯಿಸಿದ ಬರ್ಬರ ಕೃತ್ಯ, ಒರಿಸ್ಸಾದಲ್ಲಿ ಏನೂ ಅರಿಯದ 2 ಮುಗ್ದ ಕಂದಮ್ಮಗಳ ಜತೆ ಪಾದ್ರಿ ಗ್ರಹಾಂಸ್ಟೈನ್‌ ಜೀವಂತ ದಹನ, ಗುಜರಾತ್‌ನಲ್ಲಿ ಮೋದಿ ನಡೆಸಿದ ಜನಾಂಗೀಯ ಹತ್ಯೆ, ಕಂಬಾಲಪಲ್ಲಿಯಲ್ಲಿ 7 ಜನ ದಲಿತರನ್ನು ಜೀವಸಹಿತ ಸುಟ್ಟಿದ್ದು, ಕರ್ನಾಟಕದಲ್ಲಿ ಕ್ರೈಸ್ತ ಚರ್ಚುಗಳ ಮೇಲೆ ದಾಳಿ, ದೇಶದ ಅನುಪಮ ಸೌಹಾರ್ದ ಕೇಂದ್ರ ಬಾಬಾಬುಡನ್‌ಗಿರಿಯಲ್ಲಿ ವೈದಿಕ ವಿರೋಧಿ ದತ್ತಾತ್ರೇಯನನ್ನು ವಶಪಡಿಸಿಕೊಳ್ಳಲು ನಡೆಸಿರುವ ಹುನ್ನಾರ. . . ಹೀಗೆ ಪಟ್ಟಿ ಮಾಡುತ್ತಾ ಹೋದರೆ `ಅಸಂಸ್ಕೃತಿ'ಯೊಂದನ್ನು ಸಂಸ್ಕೃತಿಯೆಂದು ಪ್ರತಿಪಾದಿಸಿ, ಅದನ್ನೇ ಹೇರುವ ಧಾರ್ಷ್ಟ್ಯವನ್ನು ಪರಿವಾರ ಮಾಡುತ್ತಾ ಬಂದಿದೆ.
ಇಂಡಿಯಾವು ಏಳೆಂಟು ಧರ್ಮಗಳ, ಧರ್ಮಗಳ ಕತ್ತರಿಗೇ ನಿಲುಕದ ಸುಮಾರು 5 ಸಾವಿರದಷ್ಟು ಜಾತಿಗಳ, ಧರ್ಮ/ಜಾತಿಗಳ ಕಟ್ಟುಪಾಡಿಗೆ ಇನ್ನೂ ಒಳಗಾಗದ ನೂರಾರು ಬುಡುಕಟ್ಟುಗಳ ಸಂಸ್ಕೃತಿಯನ್ನು ಒಳಗೊಂಡ ದೇಶ. ತನ್ನದೇ ಆದ ಸಂಸ್ಕೃತಿ, ಭಾಷೆ, ಜೀವನ, ಆಹಾರಪದ್ಧತಿಯನ್ನು ಈ ಎಲ್ಲಾ ಸಮುದಾಯಗಳು ಅನೂಚಾನವಾಗಿ ಆಚರಿಸಿಕೊಂಡು ಬರುತ್ತಿವೆ. ಪರಸ್ಪರರ ಮಧ್ಯೆ ಕೊಡುಕೊಳ್ಳುವಿಕೆ ನಡೆದರೂ ತನ್ನದೇ ಆದ ಅಸ್ಮಿತೆಯನ್ನು ಇನ್ನೂ ಉಳಿಸಿಕೊಂಡಿರುವುದು ಅವುಗಳ ವೈಶಿಷ್ಟ್ಯ. ಕ್ರೈಸ್ತ ಹಾಗೂ ಮುಸ್ಲಿಮ್‌ ಮಹಿಳೆಯರು ತಾಳಿ, ಕಾಲುಂಗುರ, ಹೂವು ಮುಡಿಯುವುದು ಇಂಡಿಯಾದಲ್ಲಲ್ಲದೇ ಬೇರೆಲ್ಲೂ ಸಿಗದು. ಬ್ರಾಹ್ಮಣರ ಮನೆಗಳಲ್ಲಿ ಎಲೆ ಅಡಿಕೆ ತಟ್ಟೆಗೆ `ತಬಕು' ಎನ್ನುತ್ತಾರೆ. ಈ ಪದ ಮೂಲತಃ ಉರ್ದುವಿನದಾಗಿದ್ದು, ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯಲ್ಲಿ ಹೇಗೆ ಬಳಕೆಗೆ ಬಂದಿತೆಂಬುದು ಇನ್ನೂ ಶೋಧನೆಯಾಗಬೇಕಾದ ಸಂಗತಿ.
ಕನ್ನಡ ಜಾತಿ:
ಮೂಡಿಗೆರೆ ತಾಲೂಕಿನ ಎಸ್ಟೇಟ್‌ ಒಂದರಲ್ಲಿ ಅಧ್ಯಯನ ನಡೆಸಲು ಹೋದಾಗ 1/2 ನೇ ತರಗತಿ ಓದುವ ವಿದ್ಯಾರ್ಥಿನಿಗೆ ನೀನು ಯಾವ ಜಾತಿ ಎಂದು ಕುತೂಹಲಕ್ಕೆ ಕೇಳಿದೆ. ಆಗ ಆಕೆ ಹೇಳಿದ್ದು ನಾನು `ಕನ್ನಡ ಜಾತಿ' ಅಂತ. ಇದ್ಯಾವುದಪ್ಪ ಕನ್ನಡ ಜಾತಿ ಎಂದು ಪ್ರಶ್ನಿಸಿದಾಗ ಆಕೆ ನೀಡಿದ ಉತ್ತರ ವಿಶೇಷವಾಗಿತ್ತು. `ತುಳು, ತೆಲುಗು, ತಮಿಳು, ಕೊಂಕಣಿ, ಸಾಬರು ಹೀಗೆ ಬೇರೆ ಬೇರೆ ಜಾತಿಗಳವರು ಇದ್ದಾರೆ. ನಾವು ಸ್ವಲ್ಪ ಜನ ಮಾತ್ರ ಕನ್ನಡ ಜಾತಿಯವರು ಇದ್ದೇವೆ' ಎಂದು ವಯೋಸಹಜವಾಗಿ ಆಕೆ ಪೆದ್ದುಪೆದ್ದಾಗಿ ಹೇಳಿದಳು.
ಕನ್ನಡ ಜಾತಿ ಎಂಬ ಪದ ಎಷ್ಟು ಚೆನ್ನಾಗಿದೆಯಲ್ಲಾ ಎಂದು ಆಗ ಅನಿಸಿತ್ತು.
ಇಷ್ಟೆಲ್ಲಾ ವೈವಿಧ್ಯತೆ ಇರುವ ಇಂಡಿಯಾದಲ್ಲಿ ಏಕ ಸಂಸ್ಕೃತಿಯನ್ನು ಹೇರುವ ಪಟ್ಟಭದ್ರ ಯತ್ನ ನಿರಂತರವಾಗಿ ನಡೆಯುತ್ತಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಮೇಲೆ ನಡೆಯುತ್ತಿರುವ ಅವಘಡಗಳು ಇದನ್ನು ಪುಷ್ಟೀಕರಿಸುತ್ತವೆ. ಚರ್ಚ್‌ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಪ್ರತಿಭಟನೆಗಳು ಮೊದಲಾದವು. ಕ್ರೈಸ್ತರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಬಂದ್‌ ಕರೆಗೆ ಸ್ಪಂದಿಸಿ ಶಾಲೆಗೆ ರಜೆ ನೀಡಿದವು. ಆಗಷ್ಟೇ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಲಾ ಮಾನ್ಯತೆಯನ್ನು ರದ್ದು ಪಡಿಸುವುದಾಗಿ ಗುಟುರು ಹಾಕಿದರು. ಶಾಲೆಗಳಿಗೆ ನೋಟೀಸ್‌ ಜಾರಿ ಮಾಡಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಹಕ್ಕು ಸಾಂವಿಧಾನಿಕವಾಗಿ ಬಂದಿದ್ದು, ಅದನ್ನು ಪ್ರಶ್ನಿಸುವ ಮೂಲಕ ತಮ್ಮ ಸಿದ್ಧಾಂತ ಒಪ್ಪದ ಜನರ ಮೇಲೆ ಕಾನೂನುನ್ನು ಹೇರಲು ಕಾಗೇರಿ ಮುಂದಾದರು. ಅದೇ ಸಂಘಪರಿವಾರದ ಸಂಘಟನೆಗಳು ಅಥವಾ ಉನ್ನತ ಶಿಕ್ಷಣ ಇಲಾಖೆ ಭಯೋತ್ಪಾದನೆ ವಿರೋಧದ ಹೆಸರಿನಲ್ಲಿ ಶಾಲೆ ರಜೆ ಕೊಡಿಸಿದಾಗ ಈ ಪ್ರಶ್ನೆ ಎದ್ದೇಳಲೇ ಇಲ್ಲ.
ಕಾಗೇರಿಗೆ ನಿಜವಾಗಿಯೂ ಕಾಳಜಿಯಿದ್ದರೆ ಶಾಲಾ ಬಂದ್‌ಗೆ ಬೆಂಬಲ ಸೂಚಿಸುವ ಎಲ್ಲಾ ಸಂಸ್ಥೆಗಳ ವಿರುದ್ಧವೂ ಈ ನೋಟೀಸ್‌ ಜಾರಿ ಮಾಡಬಹುದಿತ್ತು. ಮಂಗಳೂರು-ಉಡುಪಿಯಲ್ಲಿ ವಾರಕ್ಕೊಮ್ಮೆ ಶಾಲಾ ಬಂದ್‌ ನಡೆಸುವುದು ಸಾಮಾನ್ಯವಾಗಿ ಹೋಗಿದ್ದು, ಆಗೆಲ್ಲಾ ಕಾಗೇರಿ ಮಾತನಾಡುವುದಿಲ್ಲ.
ಇದೇ ಮಾದರಿಯಲ್ಲಿ ಮುಜರಾಯಿ ಇಲಾಖೆ ಕೃಷ್ಣಯ್ಯ ಶೆಟ್ಟಿ ವರ್ತನೆಯೂ ಇದೆ. ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಲಾಡು ಹಂಚುವುದು, ಗಂಗಾಜಲ ಹಂಚುವುದು ಏನನ್ನು ಸೂಚಿಸುತ್ತದೆ. ಹಾಗಾದರೆ ಮಾರಿಹಬ್ಬದಲ್ಲಿ ಕುರಿ ಹಂಚುವುದು, ಹೆಂಡ ಹಂಚುವುದು, ಈದ್‌ ಮಿಲಾದ್‌, ಬಕ್ರೀದ್‌ನಲ್ಲಿ ಬಿರ್ಯಾನಿ ವಿತರಿಸಲು ಅವರು ಮುಂದಾಗುತ್ತಾರೆಯೇ? ಸಂವಿಧಾನ ರೀತ್ಯ ಜಾತ್ಯತೀತ, ಸಮಾನತೆ ಪ್ರತಿಪಾದಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರು ಒಂದು ಜನಾಂಗ ಸಂಪ್ರದಾಯವನ್ನು ಸರ್ಕಾರ/ ಸಾರ್ವಜನಿಕರ ದುಡ್ಡಲ್ಲಿ ಜಾರಿಗೊಳಿಸುವುದು ಸಂಸ್ಕೃತಿಯೊಂದನ್ನು ಹೇರುವ ಪದ್ಧತಿಯಲ್ಲವೇ?
ಯಡಿಯೂರಪ್ಪನವರು ಮಂಡಿಸಿದ ಬಜೆಟ್‌ನಲ್ಲಿ ಕೇಳಿದ/ ಕೇಳದ ಮಠಗಳಿಗೆಲ್ಲಾ ಅನುದಾನವನ್ನು ಹರಿಯಿಸಿದ್ದಾರೆ. ಮಠಗಳು ಕೋಟಿಗಟ್ಟಲೆ ಆಸ್ತಿ ಹೊಂದಿ, ಭಕ್ತರ ಧಾರಾಳ ನೆರವಿನಿಂದ ನಡೆಯುತ್ತಿರುವ ಸಂಸ್ಥೆಗಳು. ಅವರಿಗೆ ಸರ್ಕಾರ ಹಣ ಕೊಡಬೇಕಿಲ್ಲ. ತಮಗೆ ಬೇಕಾದ ಹಣ ಸಂಪಾದಿಸುವ ಶಕ್ತಿ ಅವಕ್ಕಿದೆ. ಹಾಗೆ ಕೊಡಲು ಸರ್ಕಾರದ ಅನುದಾನ ಯಡಿಯೂರಪ್ಪನವರ ಸ್ವಂತ ಆಸ್ತಿಯೂ ಅಲ್ಲ. ನಮ್ಮೆಲ್ಲರ ತೆರಿಗೆ ಹಣದಿಂದ ಕ್ರೋಢೀಕರಣವಾದ ಹಣವದು. ಜಾತಿವಾರು ಮಠಗಳಿಗೆ ಹಣವನ್ನು ನೀಡುತ್ತಾ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿರುವುದು ಸಂವಿಧಾನ ವಿರೋಧಿ. ಪ್ರಜಾಪ್ರಭುತ್ವ ವಿರೋಧಿ. ಬಡವರಿಗೆ, ಕೂಲಿಕಾರ್ಮಿಕರಿಗೆ, ಕೃಷಿಕರಿಗೆ, ಮಹಿಳೆಯರಿಗೆ ನೀಡಬೇಕಾದ ಪಾಲಿನಲ್ಲಿ ಮಠವನ್ನು ಸಾಕುತ್ತಿರುವುದು ಸರ್ವಥಾ ಖಂಡನೀಯ.
ಸಚಿವರೆಲ್ಲರ ದುಂಡಾ ಮಾತುಗಾರಿಕೆ ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದೆ. ಬೆಂಗಳೂರಿನಲ್ಲಿ ನ್ಯಾಷನಲ್‌ ಗ್ಯಾಲರಿ ಫಾರ್‌ ಮಾಡ್ರನ್‌ ಆರ್ಟ್ಸ್‌ ಉದ್ಘಾಟನೆ ಸಂದರ್ಭದಲ್ಲಿ ವೈದ್ಯ ಶಿಕ್ಷಣ ಸಚಿವ ರಾಮಚಂದ್ರಗೌಡರ ವರ್ತನೆಯಂತೂ ಸಂಸ್ಕೃತಿ ವಿರೂಪವೇ ಆಗಿದೆ.
ಆಧುನಿಕ ಕಲೆ ಹೆಸರಿನಲ್ಲಿ ನಮ್ಮ ಸಂಪ್ರದಾಯ, ಪ್ರಾಚೀನ ಪರಂಪರೆಗೆ ಅವಮಾನ ಮಾಡಲಾಗುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಸಂಸ್ಕೃತಿ/ ಕಲೆಯನ್ನು ವಿರೂಪಗೊಳಿಸುತ್ತಿದ್ದಾರೆಂದು ಸಚಿವರು ಹೇಳಿದರು. ಕಲೆಯ ಬಗ್ಗೆ ಏನೂ ಗೊತ್ತಿಲ್ಲ, ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಕಲಾವಿದರು ಆಕ್ಷೇಪಿಸಿದರು. ಗೌರವಾನ್ವಿತ ಸ್ಥಾನದಲ್ಲಿರುವ ಸಚಿವ ರಾಮಚಂದ್ರಗೌಡ ಇದನ್ನು ನಿರ್ಲಕ್ಷಿಸುವ ಬದಲು, ಐ ಆ್ಯಮ್‌ ಗೌರ್ನಮೆಂಟ್‌ ಸ್ಪೀಕಿಂಗ್‌, ಫುಲ್‌ ಹಿಮ್‌ ಔಟ್‌ ಎಂದು ಆದೇಶಿಸಿದರು. ಸಿಕ್ಕಿದ್ದೇ ಅವಕಾಶವೆಂದು ಪೊಲೀಸರು ಕಲಾವಿದರನ್ನು ಹೊರಗೆ ದಬ್ಬಿದರು. ಹಾಗಂತ ಅದೇನು ರಾಜ್ಯ ಸರ್ಕಾರದ ಕಾರ್ಯಕ್ರಮವಲ್ಲ, ಕೇಂದ್ರ ಸರ್ಕಾರದ ಕಾರ್ಯಕ್ರಮ, ಕೇಂದ್ರ ಸಚಿವರು ಉಪಸ್ಥಿತರಿದ್ದರು. ತಾನೇ ಸರ್ಕಾರ ಎನ್ನುವ ಅಧಿಕಾರವನ್ನು ಗೌಡರಿಗೆ ಕೊಟ್ಟಿದ್ದು ಯಾರು? ಹಾಗಂತ ಅವರೇನು ಜನರಿಂದ ಚುನಾಯಿತರಾದ ಶಾಸಕರೂ ಅಲ್ಲ. ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿ. ಅದಕ್ಕೆ ಪಶ್ಚಾತ್ತಾಪ ಪಡುವ ಬದಲಿಗೆ ಸಚಿವರು ಅದನ್ನು ಸಮರ್ಥಿಸಿಕೊಂಡಿದ್ದಾರಲ್ಲದೇ, ತಾನೂ ಮಾಡ್ರನ್‌ ಆರ್ಟಿಸ್ಟ್‌, ಕಲಾತ್ಮಕ ಚಿತ್ರವೊಂದನ್ನು ತೆಗೆದಿದ್ದು, 5 ಪ್ರಶಸ್ತಿಗಳು ಬಂದಿವೆ ಎಂದು ಹೇಳಿಕೊಂಡಿದ್ದಾರೆ. ಗೌಡರ ವರ್ತನೆ ಸಂಘಪರಿವಾರದ ದಬ್ಬಾಳಿಕೆ, ಹೇರುವಿಕೆಯ ದ್ಯೋತಕವಾಗಿದೆ.
ಗೌಡರು ಮಾತನಾಡಿರುವುದಕ್ಕೂ ಮಂಗಳೂರಿನಲ್ಲಿ ಪಬ್‌ ಮೇಲೆ ದಾಳಿ ನಡೆಸಿ, ಯುವತಿಯರ ಮೇಲೆ ದೌರ್ಜನ್ಯ ನಡೆಸಿದ ಶ್ರೀರಾಮಸೇನೆಯ ವರ್ತನೆಗೂ ಯಾವುದೇ ವ್ಯತ್ಯಾಸವಿಲ್ಲ. ಕಲೆ, ಸಂಸ್ಕೃತಿಯನ್ನು ಇವರು ನೋಡುವ ಪರಿಯೇ ಇಂತದ್ದು. ಪಬ್‌ಗೆ ಹೋಗಬಾರದು, ಪ್ರೇಮಿಗಳ ದಿನಾಚರಣೆ ಮಾಡಬಾರದು, ಸ್ಕರ್ಟ್‌, ಚೂಡಿದಾರ್‌ ಹಾಕಬಾರದು ಎಂಬ ಆದೇಶ ಹೊರಡಿಸುವ ಪ್ರಮೋದ ಮುತಾಲಿಕ್‌ನಂತಹ ಮೂರ್ಖನಿಗೂ, ಸಚಿವರ ರಾಮಚಂದ್ರಗೌಡರಿಗೆ ಏನಾದರೂ ವ್ಯತ್ಯಾಸವಿದೆ ಎಂದು ನಾವು ಅಂದುಕೊಂಡರೇ ನಾವೇ ಮೂರ್ಖರು.
ಇದರ ಜತೆಗೆ ಸಾರಿಗೆ ಸಚಿವ ಆರ್‌. ಅಶೋಕ್‌ ಶಿವಮೊಗ್ಗದಲ್ಲಿ ಮಾತನಾಡುತ್ತಾ ಸರ್ಕಾರಿ ಬಸ್‌ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳದ ಚಾಲಕ/ ನಿರ್ವಾಹಕರಿಗೆ ಒದೆಯಿರಿ ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಹಾಗೆ ಹೇಳಿಲ್ಲವೆಂದು ಸ್ಪಷ್ಟನೆ ಕೂಡ ನೀಡಿದ್ದಾರೆ. ಮೊದಲೊಂದು ಹೇಳಿ ಆಮೇಲೆ ಮಾಧ್ಯಮದವರು ತಪ್ಪು ಮಾಡಿದ್ದಾರೆಂದು ಜಾರಿ ಕೊಳ್ಳುವುದು ರೂಢಿಯಾಗಿ ಬಿಟ್ಟಿದೆ. ಸಚಿವರೊಬ್ಬರೇ ಈ ರೀತಿ ಕರೆ ನೀಡಿದರೆ ಇನ್ನು ಸಾರ್ವಜನಿಕರು ಏನು ಮಾಡಿಯಾರು? ದುಡಿಮೆಯಲ್ಲೇ ಹೈರಾಣಾಗಿ ಹೋಗಿರುವ ಚಾಲಕರು/ ನಿರ್ವಾಹಕರನ್ನು ಕಾಪಾಡುವುದು ಯಾರು?
ಇಷ್ಟು ಸಾಲದೆಂಬಂತೆ ವಕ್ಫ್‌ ಸಚಿವ ಮುಮ್ತಾಜ್‌ ಆಲಿಖಾನ್‌, ಸಚಿವ ಶ್ರೀರಾಮುಲು ಅವರನ್ನು ಪ್ರವಾದಿ ಎಂದು ಕರೆದಿದ್ದಾರೆ. ಪ್ರವಾದಿಗೂ, ಗಣಿ ಹಣದ ಅಹಂಕಾರದಿಂದ ಮೆರೆಯುತ್ತಿರುವ ರಾಮುಲುಗೂ ಎಲ್ಲಿಯ ಹೋಲಿಕೆ.
ಯಡಿಯೂರಪ್ಪನವರ ಸಚಿವ ಸಂಪುಟದ ಒಬ್ಬೊಬ್ಬರದೂ ಒಂದೊಂದು ಯಡವಟ್ಟು. ಅಲ್ಪನಿಗೆ ಅಧಿಕಾರ ಸಿಕ್ಕಿದರೆ ಅರ್ಧ ರಾತ್ರಿಲಿ ಕೊಡೆ ಹಿಡಿಸಿಕೊಂಡಿದ್ದನಂತೆ ಎಂಬಂತಾಗಿದೆ. ಆಡಿದ್ದೇ ಮಾತು, ನಡೆದದ್ದೇ ದಾರಿ ಎಂಬಂತಾಗಿದೆ ಸರ್ಕಾರದ ವರ್ತನೆ. ಸಚಿವರು ಹೀಗೆ ಹುಚ್ಚಾಪಟ್ಟೆ ಆಡುತ್ತಾ, ತಮ್ಮದೇ ಆದ ಸಿದ್ಧಾಂತವನ್ನು ಹೇರತೊಡಗಿದರೆ ಜನರೇ ಮೂಗುದಾರವನ್ನು ಜಗ್ಗುವ ದಿನ ದೂರವಿಲ್ಲ. ಯಡಿಯೂರಪ್ಪನವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಕಿವಿಹಿಂಡಿ ಬುದ್ದಿ ಹೇಳದೇ ಇದ್ದರೆ ಜನರೇ ಯಡಿಯೂರಪ್ಪನವರ ಕಿವಿಹಿಂಡುವ ದಿನ ಬರುತ್ತದೆ.

4 comments:

ಚಿತ್ರಾ ಸಂತೋಷ್ said...

ಕಿವಿ ಹಿಂಡೋದು ಎಲ್ಲಾ ಪರಿಹಾರ ಅಲ್ಲ, ಸಚಿವರಿಗೆಲ್ಲ ಮಾನಸಿಕ ಆರೋಗ್ಯ ಪರೀಕ್ಷೆ ಮಾಡಿಸಬೇಕು ಅಂತ ಖರ್ಗೆ ಸಲಹೆ ನೀಡಿದ್ದಾರೆ ಸರ್!!
-ಚಿತ್ರಾ

Unknown said...

ಏನ್ ಸಾರ್, ತಾವು ತಂದೆ ಮಕ್ಕಳ ಪಕ್ಷ ಅಥವಾ ಧರಮ್ ಸಿಂಗ್/ಖರ್ಗೆಯವರ ಆಸ್ಥಾನ ವಿದ್ವಾಂಸರಾಗಿದ್ದರೇನೋ ಸ್ವಾಮೀ? ಅವರ ಮಂತ್ರಿಗಳು ತಪ್ಪು ಮಾಡಿಯೇ ಇಲ್ಲವೇನೋ?

ಹಿಂದಿನ ಪೋಸ್ಟಿನಲ್ಲಿ ಆಚಾರ್ಯರ ಬಗ್ಗೆ ಮೈ ಪರಚಿಕೊಂಡಿದ್ದೀರಾ. ಪ್ರಾಯಶ: ತಮ್ಮ ಗುರುಗಳಾದ ಖರ್ಗೆಯವರ ಕಾಲದಲ್ಲಿ ವೀರಪ್ಪನ್ ಡಾ|ರಾಜ್ ಅಪಹರಣ ಮಾಡಿದ್ದು, ರಾಮನಗರದ ಕೋಮು ಗಲಭೆಯಲ್ಲಿ ಡಜನ್ನುಗಟ್ಟಳೆ ಜನರು ಸತ್ತದ್ದು ಪ್ರಾಯಶ: ತಮಗೆ ಮರೆತು ಹೋದಂತಿದೆ.

ಮಂಗಳೂರಿನ ಚರ್ಚ್ ಗಲಾಟೆ, ಪಬ್ಬಿನ ಗಬ್ಬು ಕಾಂಗ್ರೆಸ್ಸಿನ ಮೊಯ್ಲಿ-ಪೂಜಾರಿ ಬಣಗಳು ಮೇಡಮ್ ಮುಂದೆ ಎಂ.ಪಿ. ಇಲೆಕ್ಷನಲ್ಲಿ ಟಿಕೆಟಿಗೋಸ್ಕರ ಪ್ರಾಯೋಜಿಸಿದ್ದೆಂಬುದನ್ನು ಮಂಗಳೂರಿನ ಮಕ್ಕಳೂ ಹೇಳುತ್ತಾರೆ. ಮಹೇಂದ್ರ ಕುಮಾರ್, ಮುತಾಲಿಕ್ನಂತವರು ಸಾವಿರ ರೂಪಾಯಿ ಬಿಸಾಕಿದರೆ ಏನೂ ಮಾಡಲು ಸಿದ್ದ.

ಅದೆಲ್ಲಾ ಇರಲಿ - ಪಬ್ಬು ಗಲಾಟೆಯಲ್ಲಿ, ಕೇರಳ ಎಂ.ಎಲ್.ಎ. ಮಗಳ ಅಪಹರಣದಲ್ಲಿ ಘಟನೆ ನಡೆದ ಕೆಲ ಘಂಟೆಯಲ್ಲೇ ಪೊಲೀಸರು ಅಪರಾಧಿಗಳನ್ನು ಬಂಧಿಸಿದರೂ ಅದನ್ನು ಬಿಜೆಪಿ ತಲೆಗೆ ಕಟ್ಟುತ್ತೀರಲ್ಲ ಸ್ವಾಮೀ? ತಿಂಗಳುಗಟ್ಟೆಳೆ ಕಾಡಿನಲ್ಲಿ ರಾಜ್ ಇದ್ದಾಗ ತಮ್ಮ ಗುರುಗಳು ಏನು ಮಾಡುತ್ತಿದ್ದರೆಂದು ನೆನಪು ಮಾಡಿಕೊಳ್ಳಿ! ಅಥವಾ ಛಾಪಾ ಕಾಗದ ಹಗರಣದ ರೂವಾರಿ ಯಾರು, ತೆಲಗಿ ರಾಜನಂತೆ ಮರೆಯಲು ಪೊಲೀಸ್ ಎಸ್ಕಾರ್‍ಟ್ ಕೊಟ್ಟವರು ಯಾರು ಎಂದು ಜನರಿಗೆ ತಿಳಿದಿದೆ.

ಚಿಂತಿಲ್ಲಾ ಸಾರ್, ಹೀಗೇ ಅನಾಮಧೇಯರಾಗಿ ಬರೆಯಿರಿ. ನಿಮ್ಮಂತವರು ಅಧಿಕಾರ ಇಲ್ಲದಾಗ ನೀರಿಂದ ಹೊರ ಬಿದ್ದ ಮೀನಿನಂತೆ ಒದ್ದಾಡುವುದನ್ನು ನೋಡುವುದೇ ಚೆಂದ!

citizen said...

ಹೆಂಡ ಹಂಚಲು ಚರ್ಚ್ ( ಪ್ರಸಾದ- ವೈನ್ ) ಗಳಿವೆ, ಈದ್, ರಂಜಾನ್ ಗಳಿಗೆ ಕುರಿ, (ದನ) ಹಂಚಲು ವಕ್ಫ್ ಇಲಾಖೆ ಅಂತ ಇದೆ. ಮುಜರಾಯಿ ಇಲಾಖೆಯ ಹಣ ಹಿಂದೂ ಭಕ್ತರ ಕಾಣಿಕೆಯ ಹಣ, ಅದನ್ನೂ ತಲಾಖ್ ಪಡೆದ ಮುಸ್ಲಿಮ ಹೆಂಗಸರಿಗೆ ಕೊಡುತ್ತಿರುವ ಸರಕಾರ ನಿಮ್ಮ ಸಲಹೆಯಂತೆ ಹೆಂಡ, ಕುರಿ ಕೊಟ್ಟರೂ ಆಶ್ಚರ್ಯವಿಲ್ಲ.( ಲಾಡು ಹಂಚಿದ್ದು ದೊಡ್ಡ ಹಗರಣ, ಇದರ ಬಗ್ಗೆ ನಾನೆ ಬರೆಯುತ್ತಿದ್ದೇನೆ, ' ಹಗರಣ ಬ್ಲಾಗ್ ನೋಡಿ ). ನಿಮ್ಮ ಮಾಂಸಾಹಾರದ ಹಕ್ಕಿಗೆ ಯಾರೂ ಅಡ್ಡ ಬಂದಿಲ್ಲವಲ್ಲ, ವಿದೇಶೀಯರೇ ಸಸ್ಯಾಹಾರದತ್ತ
ಆಕರ್ಶಿತರಾಗಿರುವ ಈ ಯುಗದಲ್ಲಿ ವೈದಿಕವಾದ್ದನ್ನೆಲ್ಲಾ ವಿರೊಧಿಸುವ ಆತುರದಲ್ಲಿ ಅಪ್ರಬುದ್ದ ವಾದಗಳನ್ನು ಮಾದುತ್ತಿದ್ದೀರಿ. ನಮ್ಮ ಮಾಂಸಾಹಾರಿಗಳೆ ವಾರಗಳಲ್ಲಿ ಮೂರು ದಿನ,ಹಬ್ಬಗಳಲ್ಲಿ , ಆಷಾಡದಲ್ಲಿ ಮಾಂಸಾಹಾರ ಬಿಡುತ್ತಾರಲ್ಲ ಯಾಕಿರಬಹುದು ಯೋಚಿಸಿ! ಪ್ರಾಣಿಗಳ ಬದುಕಿನ ಹಕ್ಕನ್ನು ಕಸಿಯುವ ಮಾಂಸಾಹಾರವನ್ನು ಸಮರ್ಥಿಸುವ ನಿಮ್ಮ ವಾದಕ್ಕೆ ಬರ್ನಾರ್ಡ್ ಶಾ ಕೊಟ್ಟ ಉತ್ತರ ಓದಿ.

citizen said...

" ದೇವರಿಗೆ ಕೋಣ, ಕುರಿ ಬಲಿ ಕೊಡುವುದು ಅಪರಾಧವೆಂದು ಭಾವಿಸಲಾಗುತ್ತಿದೆ" ಎನ್ನುವ ನಿಮ್ಮ ಹೇಳಿಕೆಯಲ್ಲಿ ಈ ದೇಶದ ಕಾನೂನಿನ ಬಗೆಗಿನ ಅಜ್ಞಾನವಲ್ಲದೆ(ನಮ್ಮ ದೇಶದಲ್ಲಿ ಪ್ರಾಣಿವಧೆ ಶಿಕ್ಶಾರ್ಹ ಅಪರಾಧ- ಇದು ಅಂತರ್ರಾಷ್ಟ್ರೀಯ Convention on cruelty against animals ನ ಪ್ರಭಾವದಿಂದಾದ ಶಾಸನವೇ ಹೊರತು ವೈದಿಕ ರ 'ಹುನ್ನಾರ'ವಲ್ಲ - Congress ಪಕ್ಷವೇ ಈ ಕಾನೂನನ್ನು ತರಬೇಕಾಯಿತು ) ಅಂತರ್ರಾಷ್ಟ್ರೀಯ ಕಾನೂನಿನ ಬಗೆಗಿನ ಅಜ್ಞಾನವೂ ಸೇರಿಕೊಂಡಿದೆ. ಇಂತಹ ನಿಷೇಧವಿಲ್ಲದ ದೇಶಗಳೆಂದರೆ ನಿಮಗೆ ಪ್ರಿಯವಾದ ಅರಬ್ ದೇಶಗಳು ಮಾತ್ರ. ಅಲ್ಲಿ ಈದ್ ನಂದು ಸಾವಿರಾರು ಕುರಿಗಳ ರಕ್ತದ ಕೋದಿ ಹರಿಸುವ ಕ್ರಮವಿದೆ. ನಿಮ್ಮ ವಾದ ಮುಸ್ಲಿಮರಿಗೆ ಮಾತ್ರ ಪ್ರಿಯವಾಗಿದೆ.