Monday, February 16, 2009

ಅಕ್ಷರ ವಂಚಿತರಿಂದ `ಅಕ್ಷರಸ್ಥ'ರಿಗೆ ಕಾವ್ಯಸ್ಪರ್ಧೆ

*ಬೆಂಗಳೂರಿನ ಸ್ಲಮ್‌ನಿವಾಸಿಗಳ ಸಾಹಸ
*ಸ್ಪರ್ಧೆಗೆ ಬಂದ ಕವನಗಳ ಸಂಖ್ಯೆ ಇನ್ನೂರು

ಅನಿವಾರ್ಯ ಕಾರಣದಿಂದಲೋ, ಹುಡುಗಾಟಿಕೆಯ ಉಮೇದಿನಿಂದಲೋ ಶಾಲೆ ಬಿಟ್ಟು, ಅಕ್ಷರವಂಚಿತರಾದ ಯುವಕ/ಯುವತಿಯ ಕೂಟವೊಂದು ಕಾಲೇಜು ಅಧ್ಯಾಪಕರಿಗೆ, ಪ್ರೌಢಶಾಲೆ ಶಿಕ್ಷಕರಿಗೆ ಕಾವ್ಯಸ್ಪರ್ಧೆ ಏರ್ಪಡಿಸಿ ದಾಖಲೆ ನಿರ್ಮಿಸಿದೆ.
ಕೊಳಗೇರಿಯಲ್ಲಿ ಜೀವನ ಸಾಗಿಸುತ್ತಾ ಹೊಟ್ಟೆ ಪಾಡಿಗೆ ಗಾರೆ ಕೆಲಸ, ಮೂಟೆ ಹೋರುವುದು, ಕಾರು ತೊಳೆಯುವುದು, ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವವರೇ ಸೇರಿಕೊಂಡು ಇಂತಹವೊಂದು ಸಾಹಸವನ್ನು ಮೆರೆದಿದ್ದಾರೆ. ಅಕ್ಷರವಂಚಿತರು ಸೇರಿಕೊಂಡು ರೂಪಿಸಿದ ಕಾವ್ಯಸ್ಪರ್ಧೆಗೆ ಬಂದ ಪ್ರವೇಶಗಳ ಸಂಖ್ಯೆ ಬರೋಬ್ಬರಿ ಇನ್ನೂರು.
ರಾಜ್ಯದ ಮೂಲೆಮೂಲೆಯ ವಿವಿಧ ಕಾಲೇಜುಗಳಲ್ಲಿ, ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರು, ಡಾಕ್ಟರೇಟ್‌ ಪಡೆದವರು, ಸಂಶೋಧನೆಯಲ್ಲಿ ತೊಡಗಿರುವವರು, ಕಾವ್ಯಕಸುಬು ಮಾಡುತ್ತಿರುವವರು ಸ್ಪರ್ಧೆಗೆ ತಮ್ಮ ರಚನೆಗಳನ್ನು ಕಳಿಸಿದ್ದಾರೆ. ಅಕ್ಷರವನ್ನೇ ಪ್ರೀತಿಸಲು ಮರೆತು, ಕಾಯಕವನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ಯುವಕ/ಯುವತಿಯರು `ಸ್ತ್ರೀಯರ ಕುರಿತು ಕವನ ಕಳಿಸಿ' ಎಂಬ ತಮ್ಮ ಕರೆ ಮನ್ನಿಸಿ ಹರಿದು ಬಂದ ಕವನಗಳ ಮಹಾಪೂರ ಕಂಡು ಬೆರಗಾಗಿದ್ದಾರೆ.
ಎಲ್ಲಾ ಕವನಗಳನ್ನು ಪೇರಿಸಿ ಕವಿಗಳಾದ ಎಲ್‌.ಎನ್‌. ಮುಕುಂದರಾಜ್‌ ಹಾಗೂ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಮೇಷ್ಟ್ರಾಗಿರುವ ಡೊಮಿನಿಕ್‌ ಅವರ ಮುಂದೆ ಹರಡಿ ಆಯ್ಕೆ ಮಾಡಿ ಕೊಡಿ ಎಂದು ಕೋರಿದ್ದಾರೆ. ಅವರಿಬ್ಬರು ಬಹುಮಾನಿತ ಕವಿಗಳನ್ನು ಆಯ್ಕೆ ಮಾಡಿದ್ದಾರೆ. ಅರಸೀಕೆರೆಯ ಮಮತಾ ಹಾಗೂ ಬಿಜಾಪುರದ ಗೀತಾ ಸನದಿ ಕ್ರಮವಾಗಿ ಮೊದಲೆರಡು ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಬೆಟ್ಟದ ನೆಲ್ಲಿಕಾಯಿ, ಸಮುದ್ರದ ಉಪ್ಪು:
ಇದೊಂಥರ ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎತ್ತಿಣಿಂದೆತ್ತ ಸಂಬಂಧವಯ್ಯಾ ಎಂಬ ಮಾದರಿಯದು. ಅಕ್ಷರದ ಅರಿವೇ ಇಲ್ಲದ ಸಮುದಾಯ ಒಂದು ಕಡೆ. ಅಕ್ಷರವನ್ನೇ ಹೊಟ್ಟೆ ಪಾಡಿಗೆ ನೆಚ್ಚಿಕೊಂಡ ಸಮುದಾಯ ಮತ್ತೊಂದು ಕಡೆ. ಇಬ್ಬರನ್ನೂ ಸೇರಿಸಿದ್ದು ಕಾವ್ಯ ಸ್ಪರ್ಧೆ.
ಅದನ್ನು ಆಗು ಮಾಡಿದ್ದು ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನ ಸಣ್ಣ ಸ್ಲಮ್ಮೊಂದರ ಕ್ರಿಯಾಶೀಲರು. ಇಸ್ಕಾನ್‌ ಎದುರಿಗೆ ಇರುವ ಈ ಸ್ಲಮ್‌ನಲ್ಲಿ ಹುಟ್ಟಿಕೊಂಡ ಚೇತನಧಾರೆ ಟ್ರಸ್ಟ್‌ ಹಾಗೂ ಜನಾಸ್ತ್ರ ಸಂಘಟನೆ ಕಾವ್ಯ ಸ್ಪರ್ಧೆಯ ಕನಸಿಗೆ ಬೀಜಾಂಕುರ ಮಾಡಿದ್ದು.
ಕಾವ್ಯಸ್ಪರ್ಧೆಯ ರೂವಾರಿಗಳಲ್ಲಿ ಆದಿತ್ಯ ಮಾತ್ರ ಪಿಯುಸಿವರೆಗೆ ಓದಿದ್ದು, ಕಪ್ಪು ಹಕ್ಕಿಯ ಹಾಡು ಎಂಬ ಕವನ ಸಂಕಲನ ತರುವ ಉತ್ಸಾಹದಲ್ಲಿದ್ದಾರೆ. ಉಳಿದವರೆಲ್ಲಾ ಐದನೇ ತರಗತಿ ಓದಿದವರಲ್ಲ.
ಕೆಲವರು ಟಯೋಟ ಫ್ಯಾಕ್ಟರಿಗೆ ಕಾರು ತೊಳಿಯಲು ಹೋಗುತ್ತಾರೆ. ಇನ್ನು ಕೆಲವರು ಮೂಟೆ ಹೊರಲು ಎಪಿ ಎಂಸಿ ಯಾರ್ಡ್‌ಗೆ ತೆರಳುತ್ತಾರೆ. ಮತ್ತೊಂದಿಷ್ಟು ಜನ ಗಾರೆ ಕೆಲಸ, ಸೆಂಟ್ರಿಂಗ್‌,ಮರಗೆಲಸ, ವೈಟ್‌ವಾಷಿಂಗ್‌ ಮಾಡುತ್ತಾರೆ. ಯುವತಿಯರು ಬೆಳಗಾನೆದ್ದು ಬ್ಯೂಟಿ ಪಾರ್ಲರ್‌ಗಳಲ್ಲಿ ಸಹಾಯಕಿಯರಾಗಿ ದುಡಿಯುತ್ತಾರೆ. ರಜೆಯೂ ಇಲ್ಲದೇ ಹೊಟ್ಟೆ ಪಾಡಿಗೆ ದುಡಿಯುವ ಇವರೆಲ್ಲಾ ಸೇರುವುದು ದುಡಿಮೆ ಹೊತ್ತು ಮುಗಿದ ಮೇಲೆಯೇ.
ಇದರ ಜತೆಗೆ ಕಾರ್ಡಿನಲ್ಲಿ ರಂಗೋಲಿ ಸ್ಪರ್ಧೆಯನ್ನೂ ನಡೆಸಿದ್ದು, ಇದಕ್ಕೆ ಬಂದ ಪ್ರವೇಶಗಳ ಸಂಖ್ಯೆ 150.
ಸ್ಲಮ್‌ ನಿವಾಸಿಗಳು ಯಾತಕ್ಕೂ ಬರುವುದಿಲ್ಲ, ಅವರಿಗೆ ತಿಳಿವಳಿಕೆ, ಸಂವೇದನೆಗಳೇ ಇರುವುದಿಲ್ಲ, ಪುಂಡರು ಎಂಬ ಭಾವನೆ ಹೊರಜಗತ್ತಿನವರಲ್ಲಿ ಸಾಮಾನ್ಯ. ಅದನ್ನು ಹೋಗಲಾಡಿಸಬೇಕೆಂಬ ತವಕದಿಂದ ಕಾವ್ಯಸ್ಪರ್ಧೆ ಮಾಡಿದೆವು. ಅದರಲ್ಲಿ ಯಶಸ್ವಿಯಾದೆವು ಎಂಬ ವಿಶ್ವಾಸ ಆದಿತ್ಯ ಅವರದ್ದು.

No comments: