Wednesday, March 18, 2009

ಕನ್ನಡದ ಮೊದಲ ಕೇಳು ಕಾದಂಬರಿ `ಸಂಧ್ಯಾರಾಗ'

* ಅನಕೃ ಪ್ರತಿಷ್ಠಾನದ ಸಾರ್ಥಕ ಪ್ರಯತ್ನ
* ಎಂಪಿ-3 ರೂಪದಲ್ಲಿ ಕಾದಂಬರಿ ಲಭ್ಯ
* ಡಾಬಿ.ವಿ. ರಾಜಾರಾಂ ನಿರ್ದೇಶನ
ಓದು ಕಾದಂಬರಿ, ದೃಶ್ಯಕ್ಕೆ ಅಳವಡಿಸಲ್ಪಟ್ಟ ನೋಡು ಕಾದಂಬರಿ ಕೇಳಿದ್ದೀರಿ. ಆದರೆ ಇದು ಕೇಳುವ ಕಾದಂಬರಿ. ಕನ್ನಡದಲ್ಲಿ ಇಂತಹದೊಂದು ಮೊದಲ ಪ್ರಯೋಗ ಮಾಡಿದ್ದು ಅನಕೃ ಪ್ರತಿಷ್ಠಾನ.
ಕಾದಂಬರಿ ಸಾರ್ವಭೌಮರೆಂದೇ ಖ್ಯಾತರಾದ ಅ.ನ. ಕೃಷ್ಣರಾಯರ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲೊಂದಾದ `ಸಂಧ್ಯಾರಾಗ' ಕೇಳು ಕಾದಂಬರಿಯಾಗಿ ರೂಪಿತವಾಗಿದೆ. ಸಂಗೀತಕಾರನೊಬ್ಬನ ಏಳುಬೀಳು, ಸಂಕಷ್ಟ ಸಲ್ಲಾಪಗಳನ್ನೊಳಗೊಂಡ ಜೀವನ ದರ್ಶನ ಹೊಂದಿರುವ ಈ ಕಾದಂಬರಿ ಸಿನಿಮಾವಾಗಿ ಕೂಡ ಯಶಸ್ವಿಯಾಗಿತ್ತು.
ಅನಕೃ ಶತಮಾನೋತ್ಸವ ಸಂದರ್ಭದಲ್ಲಿ ಪ್ರತಿಷ್ಠಾನವು ಇಂತಹದೊಂದು ಸಾರ್ಥಕ ಪ್ರಯತ್ನಕ್ಕೆ ಕೈಹಾಕಿತು. ಮಾರುಕಟ್ಟೆಯಲ್ಲಿ ಅಲಭ್ಯವಾಗಿದ್ದ ಎಲ್ಲಾ ಕೃತಿಗಳನ್ನು ಮುದ್ರಿಸಿದ ಪ್ರತಿಷ್ಠಾನ, ಜನಪ್ರಿಯ ಕಾದಂಬರಿಯನ್ನು ಸಿ.ಡಿ. ರೂಪಕ್ಕೆ ಅಳವಡಿಸಲು ಮುಂದಾಯಿತು.
ಆಧುನಿಕ ಜಗತ್ತಿನಲ್ಲಿ ಎಲ್ಲರೂ ಕೇಳುವುದಕ್ಕೆ ಆದ್ಯತೆ ನೀಡುವಾಗ, ಕಾದಂಬರಿಯನ್ನು ಕೇಳಿಸುವ ಪ್ರಯತ್ನ ಇದಾಗಿತ್ತು.
ಹೇಗಿದೆ ಇದು?:
ಸುಮಾರು 2 ಗಂಟೆಗಳು ಕುಳಿತು ಆಲಿಸಬಹುದಾದ ಕಾದಂಬರಿ ಇದಾಗಿದೆ. ಕಾದಂಬರಿಯಲ್ಲಿ ಸುಮಾರು 20 ಪಾತ್ರಗಳಿದ್ದು ಅವೆಲ್ಲವೂ ಪಾತ್ರರೂಪದಲ್ಲಿ ಮಾತನಾಡುತ್ತವೆ. ಆಯಾ ಪಾತ್ರಕ್ಕೆ ತಕ್ಕನಾದ ಭಾವಾಭಿವ್ಯಕ್ತಿ ಇಲ್ಲಿದ್ದು, ಕೇಳುಗರಿಗೆ ಆಪ್ತವಾಗುವ ಶೈಲಿಯನ್ನು ಇದು ಹೊಂದಿದೆ.
ಕಾದಂಬರಿಯ ಏಕತಾನ ಓದಿಗೆ ಬದಲಾಗಿ, ಬಹುಪಾತ್ರಗಳು ತಾವಾಗೇ ಮಾತನಾಡುವ ವಿನ್ಯಾಸ ಇಲ್ಲಿ ನಿರೂಪಿತವಾಗಿದೆ. ಆಯಾ ಪಾತ್ರಗಳಿಗೆ ವಿವಿಧ ಕಲಾವಿದರು, ಸಾಹಿತಿಗಳು, ನಿರೂಪಕರು ಕಂಠದಾನ ಮಾಡಿದ್ದಾರೆ. ಕಾದಂಬರಿಯೊಳಗೆ ಮೈಗೂಡಿರುವ ನಾಟಕೀಯತೆ ಇಲ್ಲಿ ವಾಸ್ತವವಾಗಿದ್ದು, ಓದುವ `ಕಷ್ಟ'ವನ್ನು ತಪ್ಪಿಸುತ್ತದೆ.
ಕೇಳು ಕಾದಂಬರಿಯ ಇನ್ನೊಂದು ವಿಶಿಷ್ಟತೆಯೆಂದರೆ ಸಂಧ್ಯಾರಾಗ ಕಾದಂಬರಿಯಲ್ಲಿ ಲಿಖಿತ ರೂಪದಲ್ಲಿ ಹಾಡುಗಳು ಇಲ್ಲಿ ಗೇಯರೂಪ ಪಡೆದಿವೆ. ಹೆಸರಾಂತ ಶಾಸ್ತ್ರೀಯ ಕಲಾವಿದರು ತಮ್ಮ ಸುಮಧುರ ಕಂಠದ ಮೂಲಕ ಇಲ್ಲಿನ ಹಾಡುಗಳಿಗೆ ಗಾಯನ ರೂಪ ನೀಡಿದ್ದಾರೆ. ಹೀಗಾಗಿ ಕೇಳು ಕಾದಂಬರಿಗೆ ಏಕಕಾಲಕ್ಕೆ ನಾಟಕೀಯ ಹಾಗೂ ಸಂಗೀತಾತ್ಮಕ ಗುಣವೂ ಬಂದೊದಗಿದೆ.
ಅನಕೃ ಜೀವನ ಚರಿತ್ರೆಯನ್ನು ಬರೆದ ಸಾಹಿತಿ ಬಿ.ಎಸ್‌. ಕೇಶವರಾವ್‌, ಅಪರ್ಣಾ, ಪ್ರದೀಪ ಕುಮಾರ್‌ ಸೇರಿ ಸುಮಾರು 20 ಮಂದಿ ಕಂಠದಾನ ಮಾಡಿದ್ದಾರೆ. ಸದ್ಯ ನಾಟಕ ಅಕಾಡೆಮಿ ಅಧ್ಯಕ್ಷರಾಗಿರುವ, ರಂಗಕರ್ಮಿ ಡಾಬಿ.ವಿ. ರಾಜಾರಾಂ, ಕಂಠದಾನ ಮಾಡುವ ಜತೆಗೆ ಇದನ್ನು ನಿರ್ದೇಶಿಸಿದ್ದಾರೆ.
ಎಂಪಿ 3 ರೂಪದಲ್ಲಿ ಈ ಕೇಳು ಕಾದಂಬರಿ ಮಾರಾಟಕ್ಕೆ ಲಭ್ಯವಿದೆ. ಜೆ.ಪಿ. ನಗರದ ರಂಗಶಂಕರದಲ್ಲಿರುವ ಪುಸ್ತಕದಂಗಡಿ ಹಾಗೂ ಅನಕೃ ಪ್ರತಿಷ್ಠಾನ, ನಂ.57, ಐಟಿಐ ಲೇ ಔಟ್‌, ವಿದ್ಯಾಪೀಠ, ಬನಶಂಕರಿ 3 ನೇ ಹಂತ, ಬೆಂಗಳೂರು-85 ಇಲ್ಲಿ ಸಂಪರ್ಕಿಸಬಹುದು. ಮಾಹಿತಿಗೆ ದೂ:080-26692694ಗೆ ಕರೆ ಮಾಡಬಹುದು.

No comments: