Saturday, December 20, 2008

ಬಸವರಾಜಮಾರ್ಗಕ್ಕೆ ಸಂದ ಗೌರವ

ಸೃಜನಶೀಲ ಸಾಹಿತಿಗಳನ್ನೇ ಅರಸಿಕೊಂಡು ಹೋಗುತ್ತಿದ್ದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸುಮಾರು 18 ವರ್ಷಗಳ ತರುವಾಯ ಕನ್ನಡ ಬೇರುಗಳನ್ನು ಭದ್ರ ಹಾಗೂ ಸಮೃದ್ಧಗೊಳಿಸಿದ ಹಿರಿಯ ವಿದ್ವಾಂಸರೊಬ್ಬರಿಗೆ ಒಲಿದಿದೆ.
ಗ್ರಂಥಸಂಪಾದನೆ ಹಾಗೂ ಸೃಜನಶೀಲ ಬರವಣಿಗೆ ಎರಡೂ ಕ್ಷೇತ್ರದಲ್ಲಿ ಇಳಿವಯಸ್ಸಿನಲ್ಲೂ ಅಹರ್ನಿಶಿ ದುಡಿಯುತ್ತಿರುವ, ಕನ್ನಡದ ಕೆಲಸಕ್ಕಾಗಿ ತಮ್ಮ ಜೀವನವನ್ನು ಮುಡುಪಿಟ್ಟಿರುವ ವಿದ್ವಾಂಸರೆಂದರೆ ಡಾ ಎಲ್‌. ಬಸವರಾಜು. ಅವರ ಆಯ್ಕೆಯು ಸಂಶೋಧನೆ, ಸಂಪಾದನೆ, ಪ್ರಾಚೀನ ಕೃತಿಗಳ ತಲಸ್ಪರ್ಶಿ ಶೋಧ, ಇವತ್ತಿನ ತಲೆಮಾರಿಗೆ ಕನ್ನಡ ಪರಂಪರೆಯನ್ನು ಪರಿಚಯಿಸುವ ಮಹತ್ಕಾರ್ಯಕ್ಕೆ ಸಂದ ಗೌರವವಾಗಿದೆ.
1992 ರಲ್ಲಿ ಸಿಂಪಿ ಲಿಂಗಣ್ಣ, 1995ರಲ್ಲಿ ಡಾಎಚ್‌.ಎಲ್‌. ನಾಗೇಗೌಡ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರಿಬ್ಬರೂ ಜಾನಪದ ಸಂಗ್ರಹ, ಸಂಶೋಧನೆಗಳಲ್ಲಿ ಅವಿರತವಾಗಿ ದುಡಿದವರು. ಇವರಿಬ್ಬರು ಜಾನಪದದ ಕಣಜವನ್ನು ತಮ್ಮ ಅಂತಃಶಕ್ತಿ ಹಾಗೂ ಕ್ಷೇತ್ರಕಾರ್ಯದಿಂದ ತುಂಬಿಸಿಕೊಟ್ಟವರು. ಡಾ.ಎಲ್‌. ಬಸವರಾಜು ಮಾದರಿಯಲ್ಲಿಯೇ ವಚನ ಸಾಹಿತ್ಯ ಸಂಗ್ರಹ ಹಾಗೂ ಸಂಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಆರ್‌.ಸಿ. ಹಿರೇಮಠ ಅವರು 1990ರಲ್ಲಿ ನಡೆದ 59 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಆರ್‌.ಸಿ. ಹಿರೇಮಠರ ತರುವಾಯ ಭಾಷೆ ಹಾಗೂ ಪ್ರಾಚೀನ ಸಾಹಿತ್ಯ ಕ್ಷೇತ್ರದಲ್ಲಿ ಅವಿರತ ಶ್ರಮಿಸಿದ ಹಿರಿಯ ಜೀವಿಗಳು ಅಧ್ಯಕ್ಷರಾದ ನಿದರ್ಶನವಿರಲಿಲ್ಲ. ಕಳೆದ ಬಾರಿ ಉಡುಪಿಯಲ್ಲಿ ನಡೆದ ಸಮ್ಮೇಳನ ಕನ್ನಡ ವಿಮರ್ಶಾ ಕ್ಷೇತ್ರಕ್ಕೆ ಗೌರವ ಸಲ್ಲಿಸಿದ್ದರೆ, ಈ ಬಾರಿಯ ಸಮ್ಮೇಳನ ಸಂಶೋಧನೆ ಹಾಗೂ ಸಂಪಾದನೆ ಕ್ಷೇತ್ರಕ್ಕೆ ಪ್ರಾಧಾನ್ಯ ನೀಡಿದೆ.
ಹಿರೇಮಠರು ಅಧ್ಯಕ್ಷರಾದ ನಂತರ ನಡೆದ 18 ಸಮ್ಮೇಳನಗಳ ಅಧ್ಯಕ್ಷರಾಗಿ ಆಯ್ಕೆಯಾದವರಲ್ಲಿ ಸಿಂಪಿ ಲಿಂಗಣ್ಣ, ನಾಗೇಗೌಡರನ್ನು ಹೊರತು ಪಡಿಸಿದರೆ (ಜಾನಪದ ಕ್ಷೇತ್ರ) ಕವಿ ಅಥವಾ ಕಾದಂಬರಿಕಾರರೇ ಹೆಚ್ಚಾಗಿದ್ದಾರೆ. ಕೆ.ಎಸ್‌.ನರಸಿಂಹಸ್ವಾಮಿ, ಜಿ.ಎಸ್‌. ಶಿವರುದ್ರಪ್ಪ, ಚದುರಂಗ, ಚೆನ್ನವೀರ ಕಣವಿ, ಕಯ್ಯಾರ ಕಿಞ್ಞಣ್ಣರೈ, ಭೈರಪ್ಪ, ಅನಂತಮೂರ್ತಿ, ಪಾಟೀಲ ಪುಟ್ಟಪ್ಪ, ಕಮಲಾ ಹಂಪನಾ, ಶಾಂತರಸ, ನಿಸಾರ್‌ ಅಹಮದ್‌ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಬಸವರಾಜು ಹೆಗ್ಗಳಿಕೆ: ಯಾವ ಪಂಥಕ್ಕೂ ಸೇರದ, ಆದರೆ ಸಾಮಾಜಿಕ ಸಂಗತಿಗಳ ಬಗ್ಗೆ ಜೀವಪರವಾದ ಕಾಳಜಿ ಹೊಂದಿದ, ಒಂದು ವಿಶ್ವವಿದ್ಯಾನಿಲಯ ಮಾಡಬಹುದಾದ ಕೆಲಸವನ್ನು ಏಕಾಂಗಿಯಾಗಿ ತತ್ಪರತೆಯಿಂದ ಮಾಡಿದ ಡಾ. ಬಸವರಾಜು ಅವರು ಅಧ್ಯಾಪಕರಿಗೆ ಆದರ್ಶವಾಗುವ ವ್ಯಕ್ತಿತ್ವ ಸಂಪಾದಿಸಿದವರು.
1919ರಲ್ಲಿ ಕೋಲಾರ ಜಿಲ್ಲೆ ಇಡಗೂರಿನಲ್ಲಿ ಜನಿಸಿದ ಬಸವರಾಜು ಅವರು, ಮೈಸೂರು ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದರು. ಮೂರು ದಶಕಗಳಿಗೂ ಹೆಚ್ಚುಕಾಲ ಮೈಸೂರು ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಕ್ಷರದಾಸೋಹ ಮಾಡಿದರು.
ಬರುವ ಸಂಬಳಕ್ಕೆ ಪಾಠ ಮಾಡುವುದಷ್ಟೇ ತಮ್ಮ ಕೆಲಸವೆಂದು ಸೀಮಿತರಾಗದ ಬಸವರಾಜು ಅವರು, ಅಧ್ಯಾಪಕರ ವ್ಯಕ್ತಿತ್ವಕ್ಕೆ ಹೊಸಭಾಷ್ಯ ಬರೆದವರು. ತಮ್ಮ ತೊಂಬತ್ತರ ಇಳಿವಯಸ್ಸಿನಲ್ಲೂ ನಿರಂತ ಅಧ್ಯಯನ, ಸಂಶೋಧನೆ, ತಾಳೆಗರಿಗಳ ಅವಲೋಕನ, ಪರಾಮರ್ಶೆಯನ್ನು ನಿಸ್ಪೃಹವಾಗಿ ಮಾಡಿಕೊಂಡು ಬಂದವರು. ಪ್ರಾಚೀನ ಕೃತಿಗಳ ಸಂಪಾದನೆಗೆ ಹೊಸ ಪರಿಭಾಷೆಯನ್ನು ಕಟ್ಟಿಕೊಟ್ಟ ಅವರು, ತಮ್ಮ ಪಾಂಡಿತ್ಯ, ಆಳವಾದ ಅಧ್ಯಯನ ಶೀಲತೆಯಿಂದ ಇತರರಿಗೆ ಮಾದರಿಯಾದವರು.
ವಚನ ಸಾಹಿತ್ಯ ಅಧ್ಯಯನದಲ್ಲಿ ಹೊಸ ಹಾದಿ ತೆರೆದು ಅದಕ್ಕೊಂದು ಮೌಲಿಕತೆಯನ್ನು ಕಲ್ಪಿಸಿಕೊಟ್ಟ ಬಸವರಾಜು ಅವರು ಕನ್ನಡದ ಶಾಸ್ತ್ರೀಯ ಕೃತಿಗಳನ್ನು ವೈಶಿಷ್ಟ್ಯಪೂರ್ಣವಾಗಿ ಸಂಪಾದಿಸಿಕೊಟ್ಟವರು.
ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯಗಳ ಸಂಪಾದನೆ ಜತೆಗೆ ಸರಳ ಪಂಪಭಾರತವನ್ನು ರಚಿಸಿ ಪ್ರಾಚೀನ ಗದ್ಯಕ್ಕೆ ಅರ್ವಾಚೀನ ವಿನ್ಯಾಸವನ್ನು ನೀಡಿದವರು. ಹಾಗೆಯೇ ದೇವನೂರು ಮಹಾದೇವರ ಮಹತ್ವದ ಕೃತಿ ಕುಸುಮಬಾಲೆ ಕಾದಂಬರಿಯನ್ನು ಲಯಾನುಸಾರ ಮರುವಿನ್ಯಾಸಗೊಳಿಸಿ ಕಾವ್ಯಕುಸುಮಬಾಲೆಯಾಗಿ ರೂಪಿಸಿದ್ದು ಇವರ ಅಧ್ಯಯನಶೀಲತೆ, ಪಾಂಡಿತ್ಯದ ಮೇರುತನಕ್ಕೆ ಸಾಕ್ಷಿಯಾಗುತ್ತದೆ.
ಕಬ್ಬಿಣದ ಕಡಲೆಯಂತಿರುವ ಕೇಶಿರಾಜನ ಶಬ್ದಮಣಿ ದರ್ಪಣವನ್ನು ಮೂವತ್ತಕ್ಕೂ ಹೆಚ್ಚು ಹಸ್ತಪ್ರತಿಗಳ ನೆರವಿನಿಂದ ಸಂಪಾದಿಸಿ, ವಿಸ್ತೃತ ವ್ಯಾಖ್ಯಾನದೊಂದಿಗೆ ಪ್ರಕಟಿಸಿದ್ದಾರೆ.
ಐವತ್ತು ಕೃತಿಗಳು ಇವರ ಅಮೂಲ್ಯ ಕೊಡುಗೆಯಾಗಿವೆ. ಠಾಣಾಂತರ, ಜಾಲಾರಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಾಚೀನ ಕನ್ನಡದ ವಿಸ್ತಾರ, ವೈಶಿಷ್ಟ್ಯದ ಆಳ ಹರಿವನ್ನು ತಮ್ಮ ಅಂಗೈಯಲ್ಲಿ ಹಿಡಿದಿರುವ ಶಕ್ತಿ ಹೊಂದಿದ ಬಸವರಾಜು ಅವರು ಸಮ್ಮೇಳನದ ಅಧ್ಯಕ್ಷರಾಗುವ ಮೂಲಕ ಕನ್ನಡದ ವಿದ್ವತ್‌ಪರಂಪರೆ ಮತ್ತೊಮ್ಮೆ ಗೌರವ ಪಡೆದಿದೆ.

1 comment:

ಚಿತ್ರಾ ಸಂತೋಷ್ said...

ಉದಯವಾಣಿಯಲ್ಲೂ ಓದಿದ್ದೆ ನಿಮ್ ಲೇಖನಾನ.
=ತುಂಬುಪ್ರೀತಿ,
ಚಿತ್ರಾ