Sunday, May 3, 2009

ಕುರುಡು ಕಾಂಚಾಣ

`ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತು'
ಚುನಾವಣೆಯಲ್ಲಿ ಒಂದು ಮತಕ್ಕಾಗಿ ಕಾಲಿಗೆ ಬೀಳುವವರು ಗೆದ್ದ ನಂತರ ತಲೆಮಾರಿಗಾಗುವಷ್ಟು ಸಂಪತ್ತು ಸಂಗ್ರಹಿಸಿ, ಕಾಂಚಾಣದ ಸುಪ್ಪತ್ತಿಗೆಯಲ್ಲೇ ಮರೆತು ಬಿಡುತ್ತಾರೆ.
ವಿಧಾಯಕ ರಾಜಕಾರಣದಲ್ಲಿ ಅಮೂಲ್ಯ `ಮತ' ಗಳಿಸಲು ಕುರುಡು ಕಾಂಚಾಣ ದೆವ್ವಂಗುಣಿತ ಮಾಡಿದೆ. ಚುನಾವಣೆ ಮುಖೇನ `ವಿಧೇಯಕ'ರಾಗುವವರು ಹಣದ ಆಮಿಷಕ್ಕೆ ಮತವನ್ನು ಖರೀದಿಸುವುದರಿಂದ ಅವರು ರೂಪಿಸುವ ನಿಯಮ, ಶಾಸನಗಳೆಲ್ಲ ಹಣಾವಲಂಬಿಯೇ ಆಗುತ್ತದೆ.
`ಜ್ಯೋತಿಯ ಮಣಿ ದೀಪಗಳಲ್ಲಿ
ಕತ್ತಲು ಕಗ್ಗತ್ತಲು ಇಲ್ಲಿ
ಕೂಳನು ಹೆಮ್ಮೆಗೆ ಬಿಸುಡುವರಲ್ಲಿ
ಹೊಟ್ಟೆಗೆ ಇಲ್ಲದೆ ಕೊರಗುವರಿಲ್ಲಿ'
ಎಂಬ ಪರಿಸ್ಥಿತಿ ಅರವತ್ತು ವರ್ಷಗಳಲ್ಲಿ ಬದಲಾಗಲೇ ಇಲ್ಲ. ಹಣದ ಥೈಲಿ ಅಷ್ಟು ಭರ್ಜರಿಯಾಗಿ ನರ್ತನ ಮಾಡುತ್ತಿದ್ದರೆ, ಬಡವರು ಮತ್ತಷ್ಟು ಸೊರಗುತ್ತಿದ್ದಾರೆ.
ಮೊದಲ ಹಂತದಲ್ಲಿ ನಡೆದ 17 ಲೋಕಸಭಾ ಕ್ಷೇತ್ರಗಳ ಚುನಾವಣೆ ಹೊತ್ತಿಗೆ ಸುಮಾರು 23 ಕೋಟಿ ರೂ. ಮೌಲ್ಯದ ನಗದು, ಆಭರಣಗಳು ವಶವಾಗಿವೆ.
ಮತದಾರನಿಗೆ ಹಂಚಲು ತಂದಿದ್ದ ಒಂದು ಕೋಟಿ ಮೌಲ್ಯದ ಚಿನ್ನಾಭರಣ, 80 ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಈವರೆಗೆ ವಶಪಡಿಸಿಕೊಳ್ಳಲಾಗಿದೆ. ಅಧಿಕೃತ ಲೆಕ್ಕವಿದಾದರೂ ಪೊಲೀಸರ ಕರಾಮತ್ತನ್ನು ಬಲ್ಲವರು ಹೇಳುವಂತೆ ಇದು ಸರಿಸುಮಾರು ದುಪ್ಪಟ್ಟಾಗಿರುತ್ತದೆ.
ಐನೂರು, ಸಾವಿರದ ಮುಖಬೆಲೆ ಹೊಂದಿದ ಸುಮಾರು 17.31 ಕೋಟಿ ರೂ. ನಗದು, 2.10 ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳು ಪೊಲೀಸರ ವಶವಾಗಿವೆ. ವಶಕ್ಕೆ ಪಡೆಯಲಾದ ಮದ್ಯದ ಪ್ರಮಾಣ 1.63 ಕೋಟಿ ರೂ. ಬೆಲೆಯುಳ್ಳದ್ದು.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಒಂದೇ ಪ್ರಕರಣದಲ್ಲಿ 5 ಕೋಟಿ ಪೊಲೀಸರ ವಶವಾಗಿದ್ದರೆ, ಬೆಂಗಳೂರಿನಲ್ಲಿ 7.5 ಕೆ.ಜಿ. ಚಿನ್ನ ವಶವಾಗಿದೆ. ಬೀದರ್‌, ಕೋಲಾರ, ಬಾಗಲಕೋಟೆ ಹೀಗೆ ಮೊದಲ ಹಂತದ ಚುನಾವಣೆ ನಡೆದ ಎಲ್ಲಾ ಕ್ಷೇತ್ರಗಳು `ಲಕ್ಷ್ಮಿ' ಕಾಲು ಮುರಿದುಕೊಂಡು ಬಿದ್ದಿದ್ದಾಳೆ. ಎಲ್ಲೆಲ್ಲೂ ಹಣದ ಹೊಳೆಯೇ ಹರಿದಾಡಿದೆ. ಇದು ಯಾವ ಪಕ್ಷದ ಅಭ್ಯರ್ಥಿಗಳಿಗೆ ಸೇರಿದ್ದೆಂದು ಬಹಿರಂಗವಾಗದಿದ್ದರೂ ಸೇರಿಗೆ ಸವ್ವಾಸೇರು ಎಂಬಂತೆ ಎಲ್ಲರೂ ಹಣದ ಬೆನ್ನು ಬಿದ್ದಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅಭ್ಯರ್ಥಿಯೊಬ್ಬರು `ನೋ ವೋಟ್‌ ನೋ ಕ್ಯಾಶ್‌' ಎಂಬ ಮಾದರಿ ಅನುಸರಿಸಿದ್ದು ವರದಿಯಾಗಿದೆ. ಮೇ 16ರ ದಿನಾಂಕ ನಮೂದಿಸಿ ಕೊಟ್ಟ ಚೆಕ್‌, ಅಭ್ಯರ್ಥಿ ಗೆದ್ದರೆ ಮಾತ್ರ ಕ್ಯಾಶ್‌ ಆಗುತ್ತದೆ. ಸೋತರೆ ಬ್ಯಾಂಕ್‌ ಖಾತೆಯಲ್ಲಿ ಹಣವಿಲ್ಲದೇ ಚೆಕ್‌ ವಾಪಸ್ಸಾಗುತ್ತದೆ. 50 ಸಾವಿರ ರೂ. ಗಳಿಂದ ಒಂದು ಲಕ್ಷ ರೂ. ವರೆಗಿನ ಚೆಕ್‌ಗಳು ಪಾವತಿಯಾಗಿದೆ. ಹೇಗಿದೆ ರಾಜಕಾರಣಿಯ ಬುದ್ದಿವಂತಿಕೆ.
ಹಣದ ಆಮಿಷಕ್ಕೆ `ಮಾರಿಕೊಂಡವರು' ಈ ಚುನಾವಣೆಯಲ್ಲಿ ಬಾರೀ ಸಂಖ್ಯೆಯಲ್ಲಿದ್ದಾರೆ. ವಿಧಾನಸಭೆಯ ಉಪ ಚುನಾವಣೆಯಲ್ಲಿಯೇ ಇಂತಹದೊಂದು ಪ್ರಯೋಗವನ್ನು ರಾಜಕಾರಣಿಗಳು ಮಾಡಿದ್ದರು. ಉಪಚುನಾವಣೆಯಲ್ಲಿ ಕನಕಾಂಬರ, ವೀಳ್ಯದೆಲೆಯ ಸಾಂಕೇತಿಕವಾಗಿ ಬಳಕೆಯಾಗಿತ್ತು. ಕನಕಾಂಬರವೆಂದರೆ ಸಾವಿರದ ನೋಟು, ವೀಳ್ಯದೆಲೆಯೆಂದರೆ ಐನೂರರ ನೋಟೆಂಬುದು ಮತದಾರರಿಗೆ ಅರ್ಥವಾಗಿತ್ತು. ವೀಳ್ಯದೆಲೆಯೂ ಇಲ್ಲ, ಕನಕಾಂಬರವೂ ಇಲ್ಲ, ಯಾಕೆ ಓಟು ಹಾಕೋಣ ಎಂಬ ಪ್ರಶ್ನೆಯನ್ನು `ಮುಗ್ಧ' ಮತದಾರರು ಕೇಳುತ್ತಿದ್ದರು.
ಲೋಕಸಭೆಗೆ ಸ್ಪರ್ಧಿಸಲು ಪೂರ್ವ ಸಿದ್ದತೆ ಮಾಡಿಕೊಂಡಿದ್ದ ಅಭ್ಯರ್ಥಿಯೊಬ್ಬರು ತಮ್ಮ ತಂದೆಯನ್ನು ಆಯ್ಕೆ ಮಾಡಿದ ವಿಧಾನಸಭಾ ಕ್ಷೇತ್ರದಲ್ಲಿ ಸಂಕ್ರಾಂತಿ ಸಡಗರಕ್ಕೆ ಸೀರೆ ಹಂಚಿ ತಮಗೆ ಬರಬೇಕಾದ ಮತಕ್ಕೆ ಪೂರ್ವಭಾವಿ `ವ್ಯವಸ್ಥೆ' ಮಾಡಿಕೊಂಡಿದ್ದರು.
ಮಾರಿಕೊಂಡವರು
ಮತಕ್ಕಾಗಿ ಮಾರಿಕೊಂಡವರು ಐದು ವರ್ಷಗಳ ಕಾಲ ಮತ್ತೆಂದು ರಾಜಕಾರಣಿಗಳನ್ನು ಪ್ರಶ್ನಿಸುವಂತಿಲ್ಲ. ಯಾಕೆಂದರೆ ತಮ್ಮ ಹಕ್ಕನ್ನೂ ಅತ್ಯಲ್ಪ ಹಣಕ್ಕಾಗಿ `ಜಿಪಿಎ' ಬರೆದುಕೊಟ್ಟು ಬಿಟ್ಟಿರುತ್ತಾರೆ. ಪ್ರಶ್ನಿಸಿದರೆ ಹಣಕೊಟ್ಟಿಲ್ವಾ ಮತ್ತೇನು ಕೇಳೋದು ಎಂಬ ಜಬರ್ದಸ್ತು ಮಾಡಲು ರಾಜಕಾರಣಿಗಳು ಅಂಜುವುದಿಲ್ಲ, ಅಳುಕುವುದಿಲ್ಲ.
ಆಯ್ಕೆಯಾಗುವ ಅಭ್ಯರ್ಥಿಗಳು ಜಾಗತೀಕರಣ ಪರವಾದ ನಿಲುವು ತೆಗೆದುಕೊಳ್ಳಲಿ, ವಿಶೇಷ ಆರ್ಥಿಕ ವಲಯಗಳನ್ನು ಜಾರಿ ಮಾಡಲಿ, ಸಾರ್ವಜನಿಕ ವಲಯದ ಲಾಭಕರ ಉದ್ಯಮಗಳನ್ನು ಮಾರಿಕೊಳ್ಳಲಿ, ಬಡವರ ವಿರೋಧಿ ನಿಲುವು ಅನುಷ್ಠಾನಗೊಳಿಸಲಿ, ಅಭಿವೃದ್ಧಿ ಮಾಡದೇ ಇರಲಿ. ಅವರು ಪ್ರಶ್ನಾತೀತ. ಯಾಕೆಂದರೆ ಹಣಕೊಟ್ಟು ಮತ ಖರೀದಿಸಿದ್ದಾರೆ. ಖರೀದಿಗಾಗಿ ಖರ್ಚು ಮಾಡಿದ ಹಣವನ್ನು ಮತ್ತೆ ಸಂಪಾದಿಸುವ ದರ್ದು ಅವರಿಗೆ ಇರುತ್ತದೆ. ಮಾರಿಕೊಂಡವರು ಸುಮ್ಮನೇ ಮತ್ತೊಂದು ಚುನಾವಣೆಗೆ ಕಾಯುವುದಷ್ಟೇ ಕರ್ಮ.
ಸಿರಿಗರ
ಹಾವು ತಿಂದವರ ನುಡಿಸಬಹುದು, ಗರ ಬಡಿದವರ ನುಡಿಸಬಹುದು, ಸಿರಿಗರ ಬಡಿದವರ ನುಡಿಸಲು ಬಾರದು ನೋಡಯ್ಯಾ ಎಂಬ ಬಸವಣ್ಣನವರ ವಚನ ಹಣದ ದರ್ಪ-ಅಹಂಕಾರ ಕುರಿತು ಅರ್ಥಪೂರ್ಣ ಮಾತು. ಹಣದ ಹೊಳೆ ಹರಿಸಿ, ಮತವನ್ನು ಖರೀದಿಸುವವರು ಬಂಡವಾಳ ಹೂಡಿ ಬಂಡವಾಳ ತೆಗೆಯುವ ಉದ್ಯಮಿಯಂತೆ. ಸಿರಿಗರ ಬಡಿದವರನ್ನು ನುಡಿಸಲು ಬಾರದು. ವಿಧೇಯಕರನ್ನು ಆರಿಸುವ ಚುನಾವಣೆ ಬಂಡವಾಳಶಾಹಿಯ ಎಲ್ಲ ಲಕ್ಷಣವನ್ನು ಮೈಗೂಡಿಸಿಕೊಂಡಿದೆ. ಹೂಡುವವನು ಮುಂದಿನ ಐದು ವರ್ಷದ ಲೆಕ್ಕಾಚಾರ ಹಾಕಿಯೇ ಹೂಡುತ್ತಾನೆ. ಅದಕ್ಕಾಗಿ ಬೇಕಾದ ಹೂಡಿಕೆಯನ್ನು ಅಳೆದು ತೂಗಿ ಮಾಡುತ್ತಾನೆ.
ಹೀಗೆ ಬಂಡವಾಳ ಪದ್ಧತಿ ಚುನಾವಣೆಯಲ್ಲಿ ಅಳವಟ್ಟಿರುವುದರಿಂದಲೇ ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಚುನಾವಣೆ ಅವಧಿಯಲ್ಲಿ 23 ಕೋಟಿ ರೂ.ಗಳಷ್ಟು ಅಕ್ರಮ ಹಣ, ಬಂಗಾರ ಪೊಲೀಸರ ವಶವಾಗಿದೆ. ಶೋಕೇಸ್‌ನಲ್ಲಿಯೇ ಇಷ್ಟು ಕಂಡಿರಬೇಕಾದರೆ ಇನ್ನು ರಹಸ್ಯವಾಗಿ ಗೋಡನ್‌ನಲ್ಲಿ ಕೂಡಿಟ್ಟಿದ್ದು ಎಷ್ಟಿದ್ದೀತು? ಒಂದು ಲೋಕಸಭಾ ಕ್ಷೇತ್ರಕ್ಕೆ ಸರಾಸರಿ ಲೆಕ್ಕ ಹಾಕಿದರೆ ಒಂದು ಕಾಲು ಕೋಟಿ ಯಷ್ಟಾಗುತ್ತದೆ. ಚುನಾವಣೆ ಆಯೋಗ ಒಬ್ಬ ಅಭ್ಯರ್ಥಿಗೆ ನಿಗದಿ ಮಾಡಿರುವ ಖರ್ಚಿ ಬಾಬ್ತು ಕೇವಲ 25 ಲಕ್ಷ ರೂ. ಆದರೆ ಅಕ್ರಮವಾಗಿ ಸಂಗ್ರಹವಾಗಿರುವುದೇ ಒಂದೂಕಾಲು ಕೋಟಿ ದಾಟಿದೆ. ಅಬ್ಬಾ ಹಣವೇ ಏನು ನಿನ್ನ ಮಹಿಮೆಗಳ ಲೀಲೆ?
ಒಂದೇ ವೋಟು
ಚುನಾವಣೆ ಬಗ್ಗೆ ಸವಕಲಾದ ಮಾತೊಂದಿದೆ; ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೋಟ್ಯಾಧೀಶನಿಗೂ ಒಂದೇ ವೋಟು, ನಿರ್ಗತಿಕನಿಗೂ ಒಂದೇ ವೋಟು. ಪ್ರತಿ ಚುನಾವಣೆಯಲ್ಲಿ ಇಬ್ಬರೂ ಮತ ಚಲಾಯಿಸುತ್ತಾರೆ. ಪ್ರತಿ ಬಾರಿ ಫಲಿತಾಂಶ ಬಂದಾಗಲೂ ಕೋಟ್ಯಧೀಶ ಗೆಲ್ಲುತ್ತಾನೆ. ನಿರ್ಗತಿಕ ಸೋಲುತ್ತಾನೆ.
ಕುರುಡು ಕಾಂಚಾಣ ಮೊದಲ ಹಂತದಲ್ಲಿ ತನ್ನ ನರ್ತನ ಮುಗಿಸಿದೆ. ಥೈ ಥೈ ಕುಣಿದು ಮತವನ್ನು ವಶೀಕರಣ ಮಾಡಿದೆ. ಫಲಿತಾಂಶವೊಂದು ಬಾಕಿಯಿದೆ.
`ಹೆಂಗಾರ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತು
ಹೆಗಲಾಲಿ ಎತ್ತೋ'
ಹೌದು; ಕುರುಡು ಕಾಂಚಾಣದ ಮೈಮರೆಸುವ ಕುಣಿತದಲ್ಲಿ ಇಲ್ಲಿವರೆಗೆ ಅಭ್ಯರ್ಥಿ ಗೆದ್ದಿದ್ದಾನೆ. ಪ್ರಜಾಪ್ರಭುತ್ವ ಅಂಗಾತ ಬಿದ್ದಿದೆ. ಮತದಾರರ ಅದನ್ನು ಹೆಗಲಲ್ಲಿ ಹೊತ್ತುಕೊಂಡು ಐದು ವರ್ಷ ಓಡಾಡುತ್ತಿದ್ದಾನೆ. ಹದಿನೈದನೇ ಚುನಾವಣೆಯಲ್ಲಾದರೂ ಕುರುಡು ಕಾಂಚಾಣ ಅಂಗಾತ ಬಿದ್ದು, ಹೆಗಲಾಲಿ ಎತ್ತುವಂತಹ ಸ್ಥಿತಿಗೆ ತಲುಪಲಿ. ಪ್ರಜಾಪ್ರಭುತ್ವ ಎದ್ದು ನಿಂತು ಜನಾಧಿಕಾರ ಸ್ಥಾಪಿತವಾಗಲಿ. . .

No comments: