Wednesday, October 22, 2008

ಮತಾಂತರ- ಅವಾಂತರ


ನೂರು ದೇವರುಗಳನೆಲ್ಲಾ ನೂಕಾಚೆ ದೂರ,
ಭಾರತಾಂಬೆಯೇ ನಮಗಿಂದು ಪೂಜಿಸುವ ಬಾರ
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಶ್ರಮವಹಿಸಿ ದುಡಿಯಿರೈ ಸರ್ವ ಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು
ಸೇರಿರೈ ಮನುಜ ಮತಕೆ ವಿಶ್ವ ಪಥಕೆ
ಎಂದು ದಾರ್ಶನಿಕ ಕವಿ ಕುವೆಂಪು ಹೇಳಿ ದಶಕಗಳೇ ಮರೆಯಾಗಿ ಹೋದವು. ಆದರೆ ಮತ ವ್ಯಾಮೋಹ, ಧರ್ಮದ ದುರಭಿಮಾನ, ಅನ್ಯ ಧರ್ಮದ ದ್ವೇಷ ದಿನೇ ದಿನೇ ಮತ್ತಷ್ಟು ಉಲ್ಬಣಿಸುತ್ತಿದೆ. ಅದಕ್ಕೆ ಕಾರ್ಲ್‌ಮಾರ್ಕ್ಸ್‌ ಧರ್ಮವನ್ನು ಅಫೀಮು ಎಂದು ಕರೆದಿದ್ದರು.
ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಟಾಟೋಪ, ಹಿಂಸೆ, ಆರೋಪ ಪ್ರತ್ಯಾರೋಪಗಳನ್ನು ಗಮನಿಸಿದರೆ ಧರ್ಮವೆಂಬುದು ಎಷ್ಟರಮಟ್ಟಿಗೆ ವಿಚ್ಛಿದ್ರಕಾರಿಯೆಂಬುದು ಸ್ಪಷ್ಟವಾಗುತ್ತದೆ. ದೇವರನ್ನು ಹತ್ತಿರದಿಂದ ಕಾಣುವ, ದೇವರನ್ನು ಸುಗಮವಾಗಿ ತಲುಪುವ ಭಕ್ತಿ ಮಾರ್ಗವು ಯಾವಾಗ ಸಾಂಸ್ಥಿಕವಾಗಿ ಆಳುವವರು ಹಾಗೂ ಸ್ವಹಿತಾಸಕ್ತ ಗುಂಪುಗಳ ಕೈಯ ಅಸ್ತ್ರವಾಗುತ್ತದೋ ಆವಾಗ ಇಂತಹ ಅವಘಡಗಳು ಸಂಭವಿಸುತ್ತವೆ.
ಭಕ್ತಿಯ ಪರವಶತೆಯಲ್ಲಿ ಮಿಂದು ಹೋದ ನೂರಾರು ವಚನಕಾರರು, ಪುರಂದರದಾಸರು, ಕನಕದಾಸರು, ಶಿಶುನಾಳ ಷರೀಫರು, ತುಕಾರಾಂ, ಸರ್ವಜ್ಞ, ವೇಮನ, ಇಂದಿಗೂ ಇರುವ ನೂರಾರು ತತ್ವಪದಕಾರರು, ಸೂಫಿಸಂತರು ಯಾವುದೇ ಧರ್ಮದ ಗೋಡೆ ಕಟ್ಟಿಕೊಂಡವರಲ್ಲ. ತನ್ನದು ಶ್ರೇಷ್ಠ, ಇತರರದ್ದು ಕನಿಷ್ಠವೆಂಬ ಅಹಂಕಾರವನ್ನು ತೋರಿಸಿದವರಲ್ಲ. ಭಕ್ತಿಯಷ್ಟನ್ನೇ ಉಂಡುಟ್ಟು, ಅದನ್ನು ಇತರರಿಗೂ ಹಂಚಿ ಹೋದವರು. ಧರ್ಮಭೀರುಗಳೆಂದರೆ ನಿಜಕ್ಕೂ ಅವರೆ.
ವಚನಕಾರ ಅಲ್ಲಮಪ್ರಭು ಹೇಳುವಂತೆ `ಭಕ್ತಿಯೆಂಬುದು ತೋರುಂಬ ಲಾಭ'ವಾದಾಗ ಇಂತಹ ಅಡ್ಡ ಪರಿಣಾಮಗಳು, ಸಾಮಾಜಿಕ ಅಸ್ವಸ್ಥತೆ ಘಟಿಸುತ್ತದೆ. ಪರಸ್ಪರ ದ್ವೇಷಿಸುವ ವಾತಾವರಣ ಸೃಷ್ಟಿಸಲಾಗುತ್ತದೆ. ಈಗ ನಡೆಯುತ್ತಿರುವ ಮತಾಂತರ ವಿವಾದ, ಪರವಿರೋಧ ಚರ್ಚೆಗಳು, ಪರಸ್ಪರ ಟೀಕೆಗಳು ಇವೆಲ್ಲವೂ ಧರ್ಮದ ವಿಕಾರತೆಗೆ ಕೈಗನ್ನಡಿಯಾಗಿದೆ ವಿನಃ ನಿಜಾರ್ಥದಲ್ಲಿ ಧರ್ಮದ ಆಚರಣೆಯಲ್ಲ. ಯಾರಿಗೂ ಧರ್ಮ, ಭಕ್ತಿ ಬೇಕಿಲ್ಲ. ಉರಿವ ಮನೆಯಲ್ಲಿ ತನಗೆಷ್ಟು `ಗಳ' ಸಿಗುತ್ತದೆ. ಆ ಜಂತಿ ಬಳಸಿಕೊಂಡ ತನ್ನ ಮನೆ, ಪಕ್ಷ ಹಾಗೂ ಮುಂದಿನ ಚುನಾವಣೆಯಲ್ಲಿ ಓಟು ಗಳಿಸಬಹುದೆಂಬುದು ಎಲ್ಲರ ಲೆಕ್ಕಾಚಾರವಾಗಿದೆ.
ಮತಾಂತರ- ಅವಾಂತರ
ಚರ್ಚ್‌ ಹಾಗೂ ನ್ಯೂಲೈಫ್‌ಗಳಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬ ನೆವ ಮುಂದಿಟ್ಟುಕೊಂಡು ರಾಜ್ಯದ ಹತ್ತಾರು ಕಡೆ ಕ್ರೈಸ್ತರ ಮೇಲೆ ಬಜರಂಗಿಗಳು, ವಿಶ್ವಹಿಂದು ಪರಿಷತ್‌ ಹಾಗೂ ಬಿಜೆಪಿ ಬೆಂಬಲಿತ ಮಂದಿ ಸರಣಿ ದಾಳಿ ನಡೆಸಿದರು. ದಾವಣಗೆರೆಯಲ್ಲಿ ಶುರುವಾದ ಈ ಅಮಾನವೀಯ ದಾಳಿ ಮೇನಿಯಾದಂತೆ ಇಡೀ ರಾಜ್ಯವನ್ನು ವ್ಯಾಪಿಸಿತು. ಒರಿಸ್ಸಾದಲ್ಲಿ ನಡೆದ ಹಿಂಸಾಚಾರಕ್ಕೆ ಪ್ರತಿಸ್ಪಂದನೆಯಂತೆ ನಡೆದ ಇಲ್ಲಿನ ದಾಳಿಗೆ ಒರಿಸ್ಸಾದಂತೆ ಯಾವುದೇ ಪ್ರಚೋದನೆಯೂ ಇರಲಿಲ್ಲ.
ಒರಿಸ್ಸಾದಲ್ಲಿ ಸಂಘಪರಿವಾರಕ್ಕೆ ಸೇರಿದ ಸ್ವಾಮಿಯೊಬ್ಬರನ್ನು ಕೊಲೆಗೈದಿದ್ದು ಹಠಾತ್‌ ಕಾರಣವಾದರೆ ಅಲ್ಲಿನ ಪ್ರಕರಣಕ್ಕೆ ಅನೇಕ ವರ್ಷಗಳ ಇತಿಹಾಸವೇ ಇದೆ. ಬುಡಕಟ್ಟು ಸಮುದಾಯವನ್ನು ವಶೀಕರಣ ಮಾಡಿಕೊಳ್ಳಲು ನಕ್ಸಲೀಯ ಮಾವೋವಾದಿಗಳು, ಕ್ರೈಸ್ತ ಮತಾಂತರಿಗಳು ಹಾಗೂ ಸಂಘಪರಿವಾರದ ಮತಾಂತರಿಗಳು ನಿರಂತರವಾಗಿ ಯತ್ನ ನಡೆಸುತ್ತಿದ್ದಾರೆ.
ಜಾತೀಯ ಅವಮಾನ ಹಾಗೂ ಮೇಲ್ಜಾತಿಯ ಭೂಮಾಲೀಕರ ದಬ್ಬಾಳಿಕೆಯಿಂದ ನೊಂದ ಬುಡಕಟ್ಟು ಸಮುದಾಯ ಹಾಗೂ ಕೆಳಜಾತಿಗಳು ಈಗ ಎಲ್ಲರಿಗೂ ಬೇಕಾದವರಾಗಿದ್ದಾರೆ. ಭೂಮಾಲೀಕ ಪದ್ಧತಿ, ಕಠೋರ ಜಾತಿ ವ್ಯವಸ್ಥೆ ವಿರುದ್ಧ ಪ್ರಬಲ ಹೋರಾಟ ರೂಪಿಸುತ್ತಿರುವ ಮಾವೋವಾದಿಗಳು ಅಲ್ಲಿ ತಮ್ಮ ನೆಲೆ ಭದ್ರಪಡಿಸಿಕೊಂಡು ವ್ಯವಸ್ಥೆಯ ವಿರುದ್ಧ ಜನರನ್ನು ಸಂಘಟಿಸುತ್ತಿರುವುದು ಹೊಸತೇನಲ್ಲ. ಕಳೆದ 20 ವರ್ಷಗಳಿಂದಲೂ ಸಿಪಿಐ(ಪಾರ್ಟಿ ಯೂನಿಟಿ) ಹಾಗೂ ಪೀಪಲ್ಸ್‌ ವಾರ್‌ ಅಲ್ಲಿ ಬಲಿಷ್ಠ ನೆಲೆ ಹೊಂದಿದ್ದವು. ನಕ್ಸಲೀಯ ಸಂಘಟನೆಗಳು ಒಗ್ಗೂಡಿ ಸಿಪಿಐ ಮಾವೋವಾದಿ ಎಂದು ಬದಲಾದ ಮೇಲೆ ನಕ್ಸಲೀಯರು ಈ ಪ್ರದೇಶದಲ್ಲಿ ಭದ್ರ ನೆಲೆ ರೂಪಿಸಿಕೊಂಡಿದ್ದಾರೆ.
ಕಷ್ಟದಲ್ಲಿರುವವವರು, ಜಾತಿಯ ಶೋಷಣೆಗೆ ಒಳಗಾದವರು, ರೋಗಿಗಳಿಗೆ ಶುಶ್ರೂಷೆ ನೀಡುತ್ತಿರುವ ಕ್ರೈಸ್ತ ಮಿಷನರಿಗಳು ಅಲ್ಲಿ ಕೆಲಸ ಮಾಡುತ್ತಿವೆ. ಕ್ರೈಸ್ತರ ಸೇವಾಮನೋಭಾವ ಹಾಗೂ ದೇವರನ್ನು ಕಾಣಲು ಜಾತೀಯ ಬೇಧವಿಲ್ಲದೇ ಅವರ ಸಮಾನ ಗುಣವನ್ನು ಕಂಡು ಬುಡಕಟ್ಟು ಸಮುದಾಯ ಮತಾಂತರವಾಗಿರುವುದು ಸುಳ್ಳಲ್ಲ. ಆದರೆ ಆಮಿಷ ಅಥವಾ ಬಲವಂತದ ಮತಾಂತರವೆಂಬುದು ಅಲ್ಲಿ ನಡೆಯುತ್ತಿಲ್ಲ.
ಈ ಇಬ್ಬರ ಪ್ರಾಬಲ್ಯ ಕಂಡ ಸಂಘಪರಿವಾರದವರು ಅಲ್ಲಿ ನೆಲೆಯೂರಲು ಬಯಸಿದ್ದು ಸತ್ಯ. ಜಾತಿಪದ್ಧತಿ, ಭೂಮಾಲೀಕ ಪದ್ಧತಿಯನ್ನು ನೇರವಾಗಿ ಬೆಂಬಲಿಸುವ ಸಂಘಪರಿವಾರದವರು ಕ್ರೈಸ್ತರಾಗಿ ಪರಿವರ್ತಿತರಾದವರನ್ನು ಮತ್ತೆ ಹಿಂದೂಧರ್ಮಕ್ಕೆ ಕರೆತರುವ ಯತ್ನ ಮಾಡುವಲ್ಲಿ ವಿಫಲರಾಗಿರುವುದು ಅಕ್ಷರಶಃ ಸತ್ಯ. ಈ ಹಿನ್ನೆಲೆಯಲ್ಲಿ ಸಂಘರ್ಷ ಅಲ್ಲಿ ನಿರಂತರವಾಗಿ ನಡೆಯುತ್ತಿದೆ. ಪಾದ್ರಿ ಗ್ರಹಾಂ ಸ್ಟೈನ್‌ರನ್ನು ಅವರಿಬ್ಬರ ಹಸುಗೂಸುಗಳ ಸಮೇತ ಜೀವಂತ ದಹಿಸಿದ ಪೈಶಾಚಿಕ ಚಾರಿತ್ರ್ಯವನ್ನು ಸಂಘಪರಿವಾರ ಹೊಂದಿದೆ.
ತಮ್ಮ ಸಂಘಟನಾತ್ಮಕ ಚಟುವಟಿಕೆಗೆ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಸಂಘಪರಿವಾರದ ಸ್ವಾಮಿಯನ್ನು ತಾವೇ ಹತ್ಯೆ ಮಾಡಿರುವುದಾಗಿ ಮಾವೋವಾದಿಗಳು ಬಹಿರಂಗ ಹೇಳಿಕೆ ನೀಡಿದ್ದಾರೆ. ಹಾಗಿರುವಾಗ ಸ್ವಾಮಿಯನ್ನು ಕ್ರೈಸ್ತರೇ ಕೊಂದಿದ್ದಾರೆಂದು ಆಪಾದಿಸಿ ಕ್ರೈಸ್ತರ ಮೇಲೆ ನಿರಂತರ ಹಲ್ಲೆ ನಡೆಸಿ, ಸಾಮಾಜಿಕ ಕ್ಷೋಭೆಗೆ ಸಂಘಪರಿವಾರದವರು ಕಾರಣರಾದರು. ಅಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವುದು ಸಂಘಪರಿವಾರದವರಿಗೆ ಮತ್ತಷ್ಟು ಬಲತಂದುಕೊಟ್ಟಿತ್ತು.
ಸೌಹಾರ್ದ ಕರ್ನಾಟಕ:
ಒರಿಸ್ಸಾದ ಪ್ರಕರಣ, ಅಲ್ಲಿನ ಸಾಮಾಜಿಕ ಹಿನ್ನೆಲೆಯೇ ಬೇರೆ ರೀತಿಯದು. ಆದರೆ ಕರ್ನಾಟಕದ ಪರಿಸ್ಥಿತಿ ಹಾಗಿಲ್ಲ. ಇಲ್ಲಿನ ಕ್ರೆಸ್ತ ಮಿಷನರಿಗಳಿಗೆ ತನ್ನದೇ ಆದ ಇತಿಹಾಸವಿದೆ. ಕನ್ನಡದ ಅರಿವು ಮೂಡಿಸಿದ ಅನೇಕ ಮಿಷನರಿಗಳು ಇಂದಿಗೂ ಆದರ್ಶ ಪ್ರಾಯರಾಗಿದ್ದಾರೆ.
ಕನ್ನಡದ ಮೊದಲ ಪತ್ರಿಕೆ ಎನಿಸಿದ ಮಂಗಳೂರು ಸಮಾಚಾರ ಹಿಂದೆ ಮಿಷನರಿಗಳ ಪ್ರೇರಣೆಯಿದೆ. ಕನ್ನಡ-ಇಂಗ್ಲಿಷ್‌ ನಿಘಂಟು ನೀಡಿದ ರೆವರೆಂಡ್‌ ಕಿಟೆಲ್‌ರಿಂದ ಹಿಡಿದು ಇತ್ತೀಚೆಗೆ ಕನ್ನಡ ನಿಘಂಟು ನೀಡಿದ ಮಂಗಳೂರಿನವರೇ ಆದ ಪ್ರಶಾಂತ ಮಾಡ್ತಾರವರೆಗೆ ಉಜ್ವಲ ಕನ್ನಡ ಪ್ರೇಮದ ಪರಂಪರೆಯಿದೆ.
ಹಾಗೆಯೇ ಬಿ.ಎಲ್‌. ರೈಸ್‌ರಂತಹ ಮಹಾನುಭಾವರು ತನ್ನದೇ ಕೊಡುಗೆ ನೀಡಿದ್ದಾರೆ. ಬೆಂಗಳೂರಿನ ಕ್ರೈಸ್ಟ್‌ ಕಾಲೇಜು ಕನ್ನಡ ಯುವ ಲೇಖಕರ ಪ್ರೋತ್ಸಾಹಕ್ಕೆ, ಅತ್ಯುತ್ತಮ ಕನ್ನಡ ಪುಸ್ತಕ ಪ್ರಕಟಣೆಗೆ ನೀಡಿದ ಕೊಡುಗೆ ಕನ್ನಡದ್ದೇ ಆದ ಒಂದು ವಿಶ್ವವಿದ್ಯಾನಿಲಯ ನೀಡುವ ಕೊಡುಗೆಗೆ ಸಮನಾದುದು.
ಕ್ರೈಸ್ತರು ರಾಜ್ಯದ ನಾನಾಭಾಗಗಳಲ್ಲಿ ನಡೆಸುವ ಶಾಲೆಗಳಂತೂ ನಾಡಿನ ಶೈಕ್ಷಣಿಕ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿವೆ. ಇಂಗ್ಲಿಷ್‌ ಮೀಡಿಯಂ ಮಾತ್ರವಲ್ಲದೇ ಕನ್ನಡ ಮೀಡಿಯಂ ಶಾಲೆಗಳನ್ನು ಆರಂಭಿಸಿ ತನ್ನದೇ ಆದ ಪಾಲನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿವೆ. ಶೇ.2 ರಷ್ಟಿರುವ ಕ್ರೈಸ್ತರು ತಮ್ಮ ಮಕ್ಕಳಿಗೆ ಮಾತ್ರ ಶಾಲೆ ನಡೆಸಿದ್ದರೆ ಶಾಲೆಯಲ್ಲಿನ ಮಕ್ಕಳ ಸಂಖ್ಯೆ ಒಟ್ಟಾರೆ 50-100ನ್ನೂ ದಾಟುತ್ತಿರಲಿಲ್ಲ. ಮಂಗಳೂರು, ಬೆಂಗಳೂರು, ಉಡುಪಿ, ಶಿವಮೊಗ್ಗ, ಮೈಸೂರು ಹೀಗೆ ರಾಜ್ಯದ ನಾನಾದಿಕ್ಕುಗಳಲ್ಲಿ ಕ್ರೈಸ್ತರ ಶಾಲಾ ಕಾಲೇಜುಗಳಲ್ಲಿ ಕನಿಷ್ಟವೆಂದರೂ 2-3 ಸಾವಿರ ವಿದ್ಯಾರ್ಥಿಗಳ ಸಂಖ್ಯೆ ಇರುತ್ತದೆ. 40-50 ವರ್ಷಗಳಿಂದ ನಡೆಯುತ್ತಿರುವ ಶಾಲೆಯಲ್ಲಿ ಮತಾಂತರ ಮಾಡುವುದೇ ಆಗಿದ್ದರೆ ಇಂದು ಒಬ್ಬನೇ ಒಬ್ಬ ಮಧ್ಯವಯಸ್ಕ ಹಿಂದು ಕಾಣಸಿಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಕ್ರೈಸ್ತ ಶಾಲೆಗಳು ಜಾತ್ಯತೀತ ಮನೋಭಾವ ಹಾಗೂ ಧೋರಣೆಯಿಂದ ಕಾರ್ಯನಿರ್ವಹಿಸುತ್ತಿವೆ. ಎಲ್ಲಿಯೂ ಮತಾಂತರದ ಚಟುವಟಿಕೆಗಳಾಗಲಿ, ಹಿಂದೂ ಧರ್ಮದ ಅವಹೇಳನ ಮಾಡಿರುವುದಾಗಲಿ ಕಾಣಬರುವುದಿಲ್ಲ. ಆ ರೀತಿಯ ದೂರುಗಳು ದಾಖಲಾಗಿಲ್ಲ.
ಇನ್ನು ಆಸ್ಪತ್ರೆ ಸಂಗತಿಯಂತೂ ಹೇಳುವುದೇ ಬೇಡ. ಸಮಾಜ ನಿಕೃಷ್ಟವಾಗಿ ಕಾಣುವ, ತಮ್ಮವರೇ ತಮಗೆ ಬೇಡವಾಗಿರುವಾಗ ಅಂತಹವರನ್ನು ಆಸ್ಪತ್ರೆ, ಅನಾಥಾಲಯದಲ್ಲಿ ಇಟ್ಟುಕೊಂಡು ಶುಶ್ರೂಷೆ, ಆರೋಗ್ಯ ಚಿಕಿತ್ಸೆ ನೋಡಿಕೊಳ್ಳುವ ಸಾರ್ಥಕ ಕೆಲಸ ಮಾಡುತ್ತಿವೆ.
ಹಿಂದೂಗಳೆಲ್ಲಾ ಒಂದು ಎನ್ನುವ ಸಂಘಪರಿವಾರದವರು ಹಿಂದು ಸಮಾಜದ ದುರ್ಬಲರು, ಅನಾಥರು, ವೃದ್ಧರು, ವಿವಿಧ ರೋಗಿಗಳಿಂದ ಬಳಲುತ್ತಿರುವವರಿಗೆ ಯಾಕೆ ಚಿಕಿತ್ಸೆ ನೀಡಿಲ್ಲ. ರಾಜ್ಯದ ಬಹುತೇಕ ಕಡೆ ಕ್ರೈಸ್ತರು ನಡೆಸುತ್ತಿರುವ ಆಸ್ಪತ್ರೆಗಳು ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದು, ರೋಗಿಗಳನ್ನು ಕಾಪಾಡುತ್ತಿವೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದವರನ್ನೆಲ್ಲಾ ಮತಾಂತರ ಮಾಡಿದ್ದರೆ ಅವರೆಲ್ಲಾ ಇಲ್ಲವೆನ್ನುತ್ತಿದ್ದರೆ. ಕ್ರೈಸ್ತರಾದರೆ ಮಾತ್ರ ಚಿಕಿತ್ಸೆ ಎಂದು ಷರತ್ತು ಒಡ್ಡಿದ್ದರೆ ಕ್ರೈಸ್ತರ ಜನಸಂಖ್ಯೆ ಕನಿಷ್ಠವೆಂದರೂ ಶೇ.20 ರಷ್ಟು ದಾಟುತ್ತಿತ್ತು. ಮತಾಂತರ ನಡೆಯುತ್ತಿದೆ ಎಂದು ಸಂಘಪರಿವಾರ ಬೊಬ್ಬೆ ಹೊಡೆಯುತ್ತಿದ್ದರೂ ಕ್ರೈಸ್ತರ ಜನಸಂಖ್ಯೆ ಶೇಕಡಾವಾರು ಪ್ರಮಾಣದಲ್ಲಿ ಇಳಿಮುಖವಾಗಿದೆ. ಬ್ರಿಟಿಷರಿದ್ದಾಗ ಶೇ.2.67ರಷ್ಟಿದ್ದ ಕ್ರೈಸ್ತರ ಪ್ರಮಾಣ 2001ರ ಜನಗಣತಿ ಪ್ರಕಾರ ಶೇ.2.42 ಆಗಿದೆ. ಅಲ್ಲಿಗೆ 0.23ರಷ್ಟು ಇಳಿಮುಖವಾಗಿದೆ.
ದಾಳಿ ಹಿಂದೆ?
ಇಷ್ಟೆಲ್ಲಾ ಸತ್ಯಗಳು ಮುಖಕ್ಕೆ ಹೊಡೆಯುವಂತೆ ಇದ್ದರೂ ಕ್ರೈಸ್ತರ ಮೇಲೆ ಹಲ್ಲೆ ನಡೆಸುವ ಕಾರಣವಾದರೂ ಏನಿತ್ತು. ಮೇಲ್ನೋಟಕ್ಕೆ ಇದು ಒರಿಸ್ಸಾ ಹಲ್ಲೆಯ ಪ್ರತಿಧ್ವನಿ ಎಂದೆನಿಸಿದರು ಸತ್ಯ ಬೇರೆಯೇ ಇದೆ.
ಸಂಘಪರಿವಾರ ರಾಜಕೀಯ ಮುಖವೇ ಆಗಿರುವ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ ತನ್ನಿಂತಾನೇ ರಾಜ್ಯದ ಜನ ಆಡಳಿತ ಪಕ್ಷದ ವಿರುದ್ಧವಾದ ನೆಲೆ ಹೊಂದಿರುತ್ತಾರೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರದೇ ಇದ್ದಾಗ, ನಮ್ಮ ಮನೆಮುಂದಿನ ರಸ್ತೆ, ಚರಂಡಿ ಸ್ವಚ್ಛವಾಗದೇ ಇದ್ದಾಗ, ಕುಡಿಯಲು ನೀರು ಸಿಗದೇ ಇದ್ದಾಗ, ಕೈಗೆ ಬರುವ ಸಂಬಳದಲ್ಲಿ ಜೀವನ ನಡೆಸುವುದು ದುಸ್ತರವಾದಾಗ ಸಹಜವಾಗ ಜನ ಆಡಳಿತಾರೂಢ ಪಕ್ಷದ ವಿರುದ್ಧ ಸೆಟೆದು ನಿಲ್ಲುತ್ತಾರೆ. ಅದು ಕಾಂಗ್ರೆಸ್‌ ಇರಲಿ, ಬಿಜೆಪಿ ಇರಲಿ ಅಥವಾ ಕಮ್ಯನಿಸ್ಟರೇ ಇರಲಿ. ಜನರಿಗೆ ಆಳುವ ಪಕ್ಷದ ಸಿದ್ಧಾಂತ ಮುಖ್ಯವಾಗಿರುವುದಿಲ್ಲ. ತಾವು ತಿನ್ನುವ ಕೂಳಿಗೆ ಸಂತ್ರಸ್ತಪಡಬೇಕಾದಾಗ, ರಸ್ತೆಯಲ್ಲಿ ಓಡಾಡುವ ಸ್ಥಿತಿಯಿಲ್ಲದೇ ಇದ್ದಾಗ ಅಧಿಕಾರದಲ್ಲಿರುವ ಪಕ್ಷದ ಬಗ್ಗೆ ಅಸಮಾಧಾನ, ಸಿಟ್ಟು, ಆಕ್ರೋಶ ತೋರ್ಪಡಿಸುತ್ತಾರೆ.
ಅಧಿಕಾರಕ್ಕೇರಿದ ನೂರು ದಿನಗಳಲ್ಲಿ ಕೇವಲ ಬೊಗಳೆ ಬಿಡುತ್ತಾ ಸಾಗಿದ ಬಿಜೆಪಿ ಸರ್ಕಾರದ ಬಗ್ಗೆ ಸಣ್ಣ ಪ್ರಮಾಣದ ಅಸಮಾಧಾನದ ಹೊಗೆ ಏಳುತ್ತಿದೆ. ಗಣಿದೊರೆಗಳ ಕೈಯಲ್ಲಿ ಸರ್ಕಾರ ಕುಣಿಯುತ್ತಿರುವುದು ಜನರಲ್ಲಿ ಅಸಹನೆ ಹುಟ್ಟಿಸಿದೆ. ನೈತಿಕತೆ, ಸೈದ್ಧಾಂತಿಕತೆ ಮೀರಿ ಅನ್ಯ ಪಕ್ಷದವರನ್ನು ಕರೆತರುತ್ತಿರುವುದು ಅಸಹ್ಯ ಹುಟ್ಟಿಸಿದೆ. ಇದು ಬಿಜೆಪಿ ನಿಜಬಣ್ಣವನ್ನು ಬಯಲುಗೊಳಿಸಿದೆ. ಬಿಜೆಪಿ ನಾಯಕರ ಜನಪ್ರಿಯತೆ ಕಡಿಮೆಯಾಗಿ ಆಕ್ರೋಶ ಮಡುಗಟ್ಟತೊಡಗಿದೆ.
ಜನರ ಆಕ್ರೋಶದ ದಿಕ್ಕು, ಗಮನವನ್ನು ಬೇರೆಡೆಗೆ ಸೆಳೆಯಲು ಆಳುವವರ್ಗಗಳು ಈ ರೀತಿಯ ತಂತ್ರವನ್ನು ಹೂಡುವುದು ಇತಿಹಾಸದಲ್ಲಿ ಇದೇ ಮೊದಲಲ್ಲ. ವಿಶ್ವದ ಯಾವುದೇ ದೇಶದ ಚರಿತ್ರೆಯಲ್ಲಿ ಜನರ ಹೋರಾಟದ ದಿಕ್ಕು ತಪ್ಪಿಸಲು, ವ್ಯವಸ್ಥೆಯ ವಿರುದ್ಧದ ಅಸಹನೆಯ ಸಿಟ್ಟನ್ನು ಹಾದಿ ತಪ್ಪಿಸಲು ಇಂತಹ ಉಪಾಯಗಳನ್ನು ವ್ಯವಸ್ಥೆ ಹುಟ್ಟು ಹಾಕುತ್ತಾ ಬಂದಿದೆ.
ಕ್ರೈಸ್ತರ ಮೇಲೆ ಸಂಘಪರಿವಾರ ಕೃಪಾಪೋಷಿತ ಹಲ್ಲೆ ಇದೇ ರೀತಿಯದು. ಬಿಜೆಪಿ ಬಗೆಗಿನ ಅಸಮಾಧಾನವನ್ನು ಕ್ರೈಸ್ತರ ಮೇಲೆ ತಿರುಗಿಸುವಂತೆ ಮಾಡುದರ ಪ್ರಚೋದನೆ ಇದು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವದರಿಂದ ಸಂಘಪರಿವಾರದ ಕೃತ್ಯಗಳನ್ನು ಪೊಲೀಸರು ಕೈಕಟ್ಟಿ ಸುಮ್ಮನೇ ನೋಡುತ್ತಾ ನಿಂತರು. ಕೆಲವೆಡೆ ಪರೋಕ್ಷವಾಗಿ ಬೆಂಬಲಿಸಿದರು. ಹಲ್ಲೆ ನಡೆಯುತ್ತಿದ್ದಾಗಲೂ ಅದನ್ನು ತಡೆಯಲು ವ್ಯಾಪಕ ಬಂದೋಬಸ್ತ್‌ ಕ್ರಮ ಕೈಗೊಳ್ಳಲೇ ಇಲ್ಲ.
ಪ್ರೆಸ್ಸರ್‌ ಕುಕ್ಕರ್‌ ಸಿಡಿಯುವುದನ್ನು ತಪ್ಪಿಸಲು ಸೇಫ್ಟಿವಾಲ್‌ ಫಿಕ್ಸ್‌ಮಾಡಿರುತ್ತಾರೆ. ಆಳುವವರ್ಗಗಳು ಕ್ರೈಸ್ತರು, ಮುಸ್ಲಿಮರ ಮೇಲೆ ಹಲ್ಲೆಯಂತ ಸೇಫ್ಟಿವಾಲ್‌ಗಳನ್ನು ಬಳಸುತ್ತಾರೆಂಬುದಕ್ಕೆ ಇದು ಉತ್ತಮ ನಿದರ್ಶನ.
ನಾಚಿಕೆಗೇಡು:
ಸಂಘಪರಿವಾರ ಚರ್ಚ್‌ಗಳ ಮೇಲೆ ಮಾತ್ರ ಹಲ್ಲೆ ನಡೆಸಲಿಲ್ಲ. ಪ್ರಾರ್ಥನೆಗಾಗಿ ಬಂದಿದ್ದ ಗರ್ಭಿಣಿಯ ಮೇಲೆ ಹಲ್ಲೆ ನಡೆಸಿತು. ಮನೆಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ದಂಪತಿಗಳನ್ನು ಮಾರಾಮಾರಿ ಥಳಿಸಿತು. ಮಹಿಳೆಯರು, ಮಕ್ಕಳೆನ್ನದೇ ಎಲ್ಲರ ಮೇಲೂ ದಾಳಿ ಮಾಡಿತು. ಇಷ್ಟೆಲ್ಲಾ ಆದರೂ ಮಹತ್ವದ ಹೊಣೆಗಾರಿಕೆ ಹೊಂದಿದ್ದ ರಾಜ್ಯದ ಮುಖ್ಯಮಂತ್ರಿ( ಅವರೇ ಹೇಳಿಕೊಂಡಂತೆ 6 ಕೋಟಿ ಕನ್ನಡಿಗರ ಮುಖ್ಯಮಂತ್ರಿ) ಯಡಿಯೂರಪ್ಪ ಹಾಗೂ ಗೃಹಸಚಿವ ವಿ.ಎಸ್‌. ಆಚಾರ್ಯ, ಗಲಭೆ ನಿಯಂತ್ರಿಸುವ ಬದಲಿಗೆ, ಮತಾಂತರ ನಡೆಯುತ್ತಿರುವುದೇ ಹಲ್ಲೆಗೆ ಕಾರಣ ಎಂದು ಪ್ರಕರಣವನ್ನು ವಿಮರ್ಶೆ ಮಾಡಲು ತೊಡಗಿದರು. ಹಲ್ಲೆಗೆ ಕಾರಣ ಹುಡುಕತೊಡಗಿದರು.
ಇದಕ್ಕಿಂತ ನಾಚಿಕೆಗೇಡಿನ ಪ್ರಕರಣ ಇನ್ನೊಂದು ಇರಲಾರದು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಘಟನೆಗೆ ಕಾರಣ ಹುಡುಕುವುದಲ್ಲ. ಅನ್ಯಾಯ, ದೌರ್ಜನ್ಯ ನಡೆದಾಗ ಅದನ್ನು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು. ಘಟನೆಯ ವಿಶ್ಲೇಷಣೆಯನ್ನು ಮಾಡಲು ಸಮಾಜಶಾಸ್ತ್ರಜ್ಞರು, ಮನಃ ಶಾಸ್ತ್ರಜ್ಞರು ಇರುತ್ತಾರೆ. ಅಥವಾ ಪೊಲೀಸ್‌ ಇಲಾಖೆ ಇರುತ್ತದೆ. ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಮಾತನಾಡುವುದನ್ನು ಕೇಳಿದ್ದರೆ ಇವರಿಬ್ಬರು ಸಂಘಪರಿವಾರದ ದುಷ್ಕೃತ್ಯದ ಹಿಂದೆ ನಿಂತಿರುವುದು ಸ್ಪಷ್ಟವಾಗುತ್ತಿತ್ತು.
ಮತಾಂತರ:
ಹಾಗಂತ ದೇಶದಲ್ಲಿ ಮತಾಂತರ ಹೊಸದಲ್ಲ. ಮಾನವ ಚರಿತ್ರೆ ಆರಂಭವಾದ ಕಾಲದಿಂದಲೂ ಮತಾಂತರ ನಡೆದೇ ಇದೆ. ಬುಡಕಟ್ಟು ಸಮುದಾಯವನ್ನು ವೈದಿಕ ಧರ್ಮಕ್ಕೆ ಮತಾಂತರಿರುವ ಮೂಲಕ ಆರಂಭದಲ್ಲಿ ಆರ್ಯರು ವೈದಿಕ ಮತವನ್ನು ಪ್ರತಿಷ್ಠಾಪಿಸಿದರು.ವೈದಿಕ ಮತ ಅಂಧಾಚರಣೆಗಳ ವಿರುದ್ಧ ಹುಟ್ಟಿಕೊಂಡ ಬೌದ್ಧ ಹಾಗೂ ಜೈನ ಮತಗಳು ಮತಾಂತರವನ್ನು ನಿರ್ಬಿಡೆಯಿಂದ ಮಾಡಿದವು ಅಥವಾ ಜನರೇ ಮನಸೋತು ಮತಾಂತರಗೊಂಡರು. ಮತ್ತೆ ಬಂದ ವೈದಿಕ ಮತಾನುಯಾಯಿಗಳಾದ ಶಂಕರಚಾರ್ಯ, ಮಧ್ವಾಚಾರ್ಯರು ಬೌದ್ಧ, ಜೈನರನ್ನು ವಾಪಸ್‌ ಕರೆತಂದರು. ಭಾರತದಲ್ಲೇ ಜನಿಸಿದ ಬೌದ್ಧಮತ ಇಂದು ಕಣ್ಮರೆಯಾಗಲು ವೈದಿಕ ಮತಾನುಯಾಯಿಗಳೇ ಕಾರಣರಾದರು.
ಮತ್ತೆ ವೈದಿಕ ಮತ ವಿರೋಧಿಸಿ ಅಸ್ತಿತ್ವಕ್ಕೆ ಬಂದ ವೀರಶೈವ ಧರ್ಮ ಮತಾಂತರ ಮಾಡಿತು. ನೂರಾರು ಕೆಳಜಾತಿಗಳು ಲಿಂಗಾಯಿತರಾಗಿ ಪರಿವರ್ತಿತರಾದರು. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರ ತಲೆಮಾರಿನವರು ಹಿಂದೆಂದೋ ಹಿಂದೂ ಧರ್ಮದಿಂದ ವೀರಶೈವ ಧರ್ಮಕ್ಕೆ ಮತಾಂತರಗೊಂಡವರೆ.
ಒಂದು ವೇಳೆ ನೂರಾರು ವರ್ಷಗಳ ಈ ದೇಶವನ್ನು ಆಳಿದ ಮುಸ್ಲಿಂ ಹಾಗೂ ಕ್ರೈಸ್ತ ರಾಜರು ಮತಾಂತರವನ್ನು ಮಾಡಿದ್ದೇ ಆಗಿದ್ದರೆ ಭಾರತದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರು ಹಿಂದುಗಳಾಗಿ ಉಳಿಯುತ್ತಿರಲಿಲ್ಲ. ಮುಸ್ಲಿಮರ ಸಂಖ್ಯೆ ಶೇ.14 ಹಾಗೂ ಕ್ರೈಸ್ತರ ಸಂಖ್ಯೆ ಶೇ.2.4ರಷ್ಟು ಇರುತ್ತಿರಲಿಲ್ಲ. ಈ ಸತ್ಯ ಜನರಿಗೆ ಅರ್ಥವಾಗಬೇಕಾಗಿದೆ. ಮತಾಂತರ ನಡೆಯುತ್ತಿರುವುದು ಶುದ್ಧ ಸುಳ್ಳಾಗಿದೆ. ಅಸ್ತಿತ್ವವನ್ನು ಮರುಸ್ಥಾಪಿಸಿಕೊಳ್ಳಲು, ವ್ಯವಸ್ಥೆ ವಿರುದ್ಧದ ಆಕ್ರೋಶವನ್ನು ಶಮನಗೊಳಿಸಲು ಸಂಘಪರಿವಾರ ನಡೆಸಿದ ಹುನ್ನಾರ ಇದೆಂಬುದು ಸ್ಪಷ್ಟವಾಗಬೇಕಾಗಿದೆ.


4 comments:

ದಿನೇಶ್ ಕುಮಾರ್ ಎಸ್.ಸಿ. said...

ಬ್ಲಾಗ್ ಲೋಕಕ್ಕೆ ಸ್ವಾಗತ. ಮೊದಲ ಎರಡು ಲೇಖನಗಳೂ ಇಷ್ಟವಾದವು. ವಾರಕ್ಕೆರಡಾದರೂ ಪೋಸ್ಟ್ ಹಾಕುತ್ತಿರಿ.

Bageshree said...

ನಿಮ್ಮ ಕತೆಗಳನ್ನು ಬ್ಲಾಗ್ ನಲ್ಲಿ ಹಾಕುವುದಿಲ್ಲವಾ?

Anonymous said...

`ಉದಯವಾಣಿ'ಯಲ್ಲಿ ಬರೆದಿದ್ದನ್ನೇ ಬ್ಲಾಗ್ಗೂ ಹಾಕೋತ್ತಿದ್ದೀಯಲ್ಲಾ! ಹೊಸದಾಗಿ ಏನಾದರೂ ಕಿಸಿ. ಆಗ ನಿನ್ನ ಬ್ಲಾಗ್ನ ತಪ್ಪದೇ ಓದುತ್ತೇವೆ. ಇಲ್ಲ ಬ್ಲಾಗ್ ಮುಚ್ಚಿ ಹೊರಗಣನವನಾಗು!

ರಾಜಕೀರ್ತಿ

Rishikesh Bahadur Desai said...

ಪ್ರಿಯ ಜಗದೀಶ,
ತುಂಬಾ ಚೆನ್ನಾಗಿದೆ.
ಜೈ ಹಿಂದ್, ಜೈ ಕರ್ನಾಟಕ
ಹೃಷಿಕೇಶ